ಭಾರತೀಯ ನೌಕಾಪಡೆಯು ಡಿ.4 ರಂದು ಮಹಾರಾಷ್ಟ್ರದ ಸಿಂಧುದುರ್ಗದಲ್ಲಿ ನೌಕಾಪಡೆ ದಿನಾಚರಣೆಯನ್ನು ಆಚರಿಸಿದೆ. ಇದೇ ಸಂದರ್ಭ ತನ್ನ ಕಾರ್ಯ ಸನ್ನದ್ಧತೆಯನ್ನು ಪ್ರದರ್ಶಿಸಿದೆ. ನೌಕಾದಿನವು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಜರುಗಿತು ಮಾತ್ರವಲ್ಲ ಈ ದಿನಾಚರಣೆಗೆ ಹೊಸ ಅರ್ಥ ಬಂದಿತ್ತು. ಇದೇ ಸಂದರ್ಭ ಸಿಂಧುದುರ್ಗ ಕೋಟೆಯ ನಿರ್ಮಾತೃ ಮತ್ತು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಶಸ್ತ್ರ ನೌಕಾಸೇನೆಗೆ ಭೂಮಿಕೆ ಹಾಕಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಆನಾವರಣಗೊಳಿಸಲಾಯಿತು. ದಕ್ಷಿಣ ಭಾರತದಲ್ಲಿ ಚೋಳರು, ಪಲ್ಲವರ ಸಾಮುದ್ರಿಕ ಪಾರಮ್ಯವನ್ನು ಬಿಟ್ಟರೆ ಶತಮಾನಗಳ ನಂತರ ಅತ್ಯುತ್ತಮ ನೌಕಾಸೇನೆಯನ್ನು ಕಟ್ಟಿ ಬೆಳೆಸಿ ಪೋರ್ಚುಗೀಸರು ಸಹಿತ ಮೊಘಲರಿಗೆ ತಕ್ಕ ಉತ್ತರ ನೀಡಿದ ಗರಿಮೆ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ. ಭಾರತೀಯ ನೌಕಾಪಡೆಯ ಜಲಂತರ್ಗಾಮಿ ನೌಕೆಗಳಾದ INS ವಿಕ್ರಮಾದಿತ್ಯ ಸಹಿತ ವಿವಿಧ ಯುದ್ಧ ನೌಕೆಗಳು, ಯುದ್ಧ ವಿಮಾನಗಳು ನೌಕಾಪಡೆ ದಿನಾಚರಣೆಯಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡಿದವು.
ಈ ಸಂದರ್ಭ ಮಾತನಾಡಿದ ಪ್ರಧಾನಿ, ಸಿಂಧುದುರ್ಗ ಕೋಟೆಯು ನಮ್ಮೆಲ್ಲರ ಹೆಮ್ಮೆಯ ಸಂಕೇತವಾಗಿದೆ. ನೌಕಾಪಡೆ ದಿನಾಚರಣೆಯು ಭವ್ಯ ನೌಕಾ ಇತಿಹಾಸವನ್ನು ಸ್ಮರಿಸುವಂತೆ ಮಾಡಿದೆ. ಭಾರತೀಯ ನೌಕಾಪಡೆಯು ವಿವಿಧ ರ್ಯಾಂಕ್ ಗಳನ್ನು ಭಾರತೀಯ ಸಂಸ್ಕೃತಿಗೆ ಪೂರಕವಾಗಿ ಬದಲಾಯಿಸುವ ಘೋಷಣೆಯನ್ನು ಹೆಮ್ಮೆಯಿಂದ ಮಾಡುತ್ತೇನೆ ಎಂದರು. ಭಾರತೀಯ ನೌಕಾಪಡೆಯು ಪ್ರಥಮ ಬಾರಿಗೆ ಮಹಿಳಾ ಕಮಾಂಡಿಗ್ ಅಧಿಕಾರಿಯನ್ನು ನೇಮಿಸಿರುವುದು ಸಂತಸದ ವಿಚಾರವಾಗಿದೆ ಎಂದರು.
ಈ ಸಂದರ್ಭ ಉಪಸ್ಥಿತರಿದ್ದ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಭಾರತೀಯ ನೌಕಾಪಡೆಯ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ದೃಷ್ಠಿ ನೆಟ್ಟಿದೆ. 2047 ರ ಈ ಸಂಕಲ್ಪವನ್ನು ಸಾದೃಶಗೊಳಿಸುವುದು ನಮ್ಮ ಆದ್ಯತೆಯಾಗಿದೆ ಎಂದರು. ಡಿ.4,1971 ರಲ್ಲಿ ನಮ್ಮ ಮಿಸೈಲ್ ಬೋಟುಗಳು ಕರಾಚಿ ಬಂದರನ್ನು ಧ್ವಸಂಗೊಳಿಸಿದ್ದವು, ರಾಷ್ಟ್ರೀಯತೆ ಮತ್ತು ದೇಶದ ರಕ್ಷಣೆಯ ವಿಚಾರ ಬಂದಾಗ ನೌಕಾಪಡೆಯು ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದರು. 1971 ರ ಭಾರತ-ಪಾಕ್ ಯುದ್ಧದ ವೇಳೆ ಅಪರೇಶನ್ ಟ್ರಿಡೆಂಟ್ ಗೆಲುವು ಕೂಡಾ ಇದೇ ಡಿ.4 ಆಗಿತ್ತು ಎಂಬುದು ವಿಶೇಷವಾಗಿದೆ.
ಈ ಸಂದರ್ಭ ನೌಕಾಪಡೆ ದಿನಾಚರಣೆ ನಡೆದ ಸಿಂಧುದುರ್ಗ ಕೋಟೆಯ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯುವ ಅವಕಾಶ ಪ್ರಾಪ್ತವಾಗಿದೆ. ಸಿಂಧುದುರ್ಗ ಕೋಟೆಯು ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿದೆ. ಮಾಳ್ವದ ಸಮುದ್ರ ಕಿನಾರೆಯಲ್ಲಿ ಇರುವ ಈ ಕೋಟೆಯು ಮುಂಬೈಯಿಂದ ದಕ್ಷಿಣಕ್ಕೆ ಸುಮಾರು 450 ಕಿ.ಮೀ ದೂರದಲ್ಲಿದೆ. ಈ ಕೋಟೆಗೆ ಛತ್ರಪತಿ ಸಿವಾಜಿ ಮಹಾರಾಜರು 25 ನ. 1664 ರಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು. ಬ್ರಿಟಿಷರ, ಡಚ್ಚರ, ಪೋರ್ಚುಗೀಸರ ಸಾಮುದ್ರಿಕ ಪಾರಮ್ಯವನ್ನು ತಡೆಯುವ ಉದ್ದೇಶದಿಂದ ಈ ಕೋಟೆಯ ನಿರ್ಮಾಣವಾಗಿತ್ತು ಎಂಬುದು ಗಮನಿಸತಕ್ಕ ವಿಚಾರವಾಗಿದೆ. ಖುರ್ತೆ ಎಂಬ ಸಣ್ಣ ದ್ವೀಪದ ಮೇಲೆ ಈ ಕೋಟೆಯು ಸ್ಥಿತವಾಗಿದೆ. ದ್ವೀಪದ ಮೇಲಿದ್ದ ಬೃಹತ್ ಶಿಲೆಯ ಮೇಲೆ ಗಣಪತಿ, ಶಿವ, ಮತ್ತು ಸೂರ್ಯ ಮತ್ತು ಶಿವಲಿಂಗನ ಚಿತ್ರಣವಿದೆ. ಹಲವು ಮಂದಿ ನುರಿತ ಕಾರ್ಮಿಕರ ಶ್ರಮದ ಫಲವಾಗಿ ಮೂರು ವರ್ಷಗಳ ಅಂತರದಲ್ಲಿ ಈ ಬೃಹತ್ ಕೋಟೆ ನಿರ್ಮಾಣವಾಗಿತ್ತು. ಒಟ್ಟು 48 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಕೋಟೆಯ ಗೋಡೆಗಳು 12 ಅಡಿ ಅಗಲವಿದೆ. ಮುಂಬೈಯಿಂದ ಗೋವಾ ತನಕವಿರುವ ಒಟ್ಟು 84 ಕೋಟೆಗಳಲ್ಲಿ ಸಿಂಧುದುರ್ಗ ಕೋಟೆಯು ಉತ್ತಮ ಸಂರಕ್ಷಿತ ಕೋಟೆ ಎಂದೇ ಹೇಳಬಹುದಾಗಿದೆ. ಈ ಕೋಟೆಯು ಪ್ರಸ್ತುತ ASI ಅಧೀನದಲ್ಲಿದೆ. ಈ ಕೋಟೆಯ ನಿರ್ಮಾಣದಲ್ಲಿ ಒಟ್ಟು 3000 ಮಂದಿ ಕಾರ್ಮಿಕರು, 500 ಮಂದಿ ಮೇಸ್ತ್ರಿಗಳು, 200 ಮಂದಿ ಅಕ್ಕಸಾಲಿಗರು ಪಾಲ್ಗೊಂಡಿದ್ದರು. ಕೋಟೆ ನಿರ್ಮಾಣದಲ್ಲಿ ಒಂದಷ್ಟು ಮಂದಿ ಪೋರ್ಚುಗೀಸ ಕಾರ್ಮಿಕರು ಇದ್ದರು ಎಂದು ಹೇಳಲಾಗುತ್ತದೆ. ಕೋಟೆ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳನ್ನು ಒಂದಕ್ಕೊಂದು ಕೊಂಡಿಯಂತೆ ಜೋಡಿಸಲಾಗಿದ್ದು ಗಟ್ಟಿಯಾದ ಅಡಿಪಾಯವನ್ನು ಹಾಕಲಾಗಿದೆ, ಅಗತ್ಯ ಬಿದ್ದಲ್ಲಿ ಕಡೆಗಳಲ್ಲಿ ಸೀಸವನ್ನು ಉಪಯೋಗಿಸಲಾಗಿದೆ. ದಕ್ಕನ್ ಪ್ರಸ್ತಭೂಮಿಯಿಂದ ಅಂದು ಕೋಟೆ ನಿರ್ಮಾಣಕ್ಕೆ ಅಗತ್ಯವಾದ ಸುಣ್ಣ ಕಲ್ಲುಗಳನ್ನು ತರಿಸಲಾಗಿತ್ತು. 1765 ರಲ್ಲಿ ಬ್ರಿಟಿಷ್ ವಶಕ್ಕೆ ಒಳಪಟ್ಟ ಕೋಟೆಯ ಹೆಸರನ್ನು ಫೊರ್ಟ್ ಅಗಸ್ಟಸ್ ಎಂದೂ ಬದಲಿಸಲಾಗಿತ್ತು. ಈ ಕೋಟೆಯು ಪಣಜಿಯಿಂದ 120 ಕಿ.ಮೀ ದೂರದಲ್ಲಿದೆ.
ಪದ್ಮದುರ್ಗ ಛತ್ರಪತಿ ಶಿವಾಜಿ ಮಹಾರಾಜರು ನಿರ್ಮಿಸಿದ ಮಗದೊಂದು ಪ್ರಧಾನ ಕೋಟೆಗಳಲ್ಲಿ ಒಂದು. ಅರಬಿ ಕಡಲಿನ ಮೇಲೆ ಹತೋಟಿ ಸಾಧಿಸುವುದು ಮಾತ್ರವಲ್ಲದೆ ಪೋರ್ಚುಗೀಸರ ಮತ್ತು ಮೊಘಲರ ಸಾಮುದ್ರಿಕ ಶಕ್ತಿಯನ್ನು ಕುಂದಿಸಿ, ಹಿಂದವೀ ಸಾಮ್ರಾಜ್ಯದ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಕಾರಣವಾದ ಪ್ರಧಾನ ಕೋಟೆಯೇ ಪದ್ಮದುರ್ಗ. ಇದು ಸಮುದ್ರದ ಮಧ್ಯಭಾಗದಲ್ಲಿದೆ. ಇದನ್ನು ಕಾಸ ಕೋಟೆ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಇತಿಹಾಸಕ್ತರನ್ನು ಆಕರ್ಷಿಸುವ ಅದರಲ್ಲೂ ಕೋಟೆ ಅಥವಾ ದುರ್ಗದ ಮೇಲೆ ವಿಶೇಷ ಆಸಕ್ತರಿಗೆ ಮತ್ತಷ್ಟೂ ಕೌತುಕ ಮತ್ತು ಅಚ್ಚರಿಯ ವಿಚಾರಗಳನ್ನು ಮುಂದಿಡುತ್ತದೆ ಈ ಪದ್ಮದುರ್ಗ ಕೋಟೆ.
ದುರ್ಗ ದುರ್ಗತಿ ನಾಶಿನಿ ಎಂಬ ಉಕ್ತಿಯಿದೆ. ಇಲ್ಲಿ ದುರ್ಗ ಎಂಬ ಪದಕ್ಕೆ ಕೋಟೆ ಎಂಬ ಅರ್ಥವೂ ಇದೆ. ಅಂದರೆ ಬಲಿಷ್ಠ ಕೋಟೆಯು ಸಂಕಷ್ಟ ಇಲ್ಲವಾಗಿಸುತ್ತದೆ ಎಂಬ ನಂಬಿಕೆಯನ್ನು ಇಲ್ಲಿ ಉಲ್ಲೇಖಿಸಬಹುದು. 17 ನೇ ಶತಮಾನದಲ್ಲಿ ಸಿದ್ದಿಗಳ ಪ್ರಭಲ ಕೋಟೆ ಮತ್ತವರ ವಸಾಹತು ಕೇಂದ್ರವಾಗಿದ್ದ ಜಂಜೀರ ಕೋಟೆಗೆ ಸರಿಸಾಟಿ ಎನ್ನುವಂತೆ ಪದ್ಮದುರ್ಗ ಕೋಟೆಯನ್ನು ನಿರ್ಮಿಸಲಾಗಿತ್ತು. 1676 ರಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು ಎನ್ನುತ್ತದೆ ಚರಿತ್ರೆ. ರಾಯಗಢ ಜಿಲ್ಲೆಯಿಂದ ಈ ಕೋಟೆಯನ್ನು ಸಂಪರ್ಕಿಸಬಹುದಾಗಿದೆ. 2012 ರಲ್ಲಿ ASI ಭಾರತೀಯ ಪ್ರಾಚ್ಯವಸ್ತು ಇಲಾಖೆ ಈ ಕೋಟೆಯಲ್ಲಿ ಉತ್ಖನನ ನಡೆಸಿದ ವೇಳೆ 250 ಹೆಚ್ಚಿನ ಐತಿಹಾಸಿಕ ಫಿರಂಗಿ ಗುಂಡುಗಳು ಪತ್ತೆಯಾಗಿದ್ದವು. ಇವು ಈ ಕೋಟೆಯ ಐತಿಹಾಸಿಕ ಮಹತ್ವವನ್ನೂ ಹೆಚ್ಚಿಸಿವೆ. ಮಾತ್ರವಲ್ಲ ಇಲ್ಲಿದ್ದ ಕೆನಾನ್ ಬಾಲ್ಸ್ ಎಂಬ ಫಿರಂಗಿ ಗುಂಡುಗಳನ್ನು ಸಂರಕ್ಷಿಸಲಾಗಿದೆ. ಸುಮಾರು 16 ರಿಂದ 18 ನೇ ಶತಮಾನದ ತನಕ ಈ ಕೋಟೆಯು ಮರಾಠರ ಸುಪರ್ದಿಯಲ್ಲಿತ್ತು. ಈ ಕೋಟೆಯು ಶಿವಾಜಿ ಮಹಾರಾಜರ ಸುಪರ್ದಿಯಲ್ಲಿ 1676 ರಲ್ಲಿ ನಿರ್ಮಾಣ ಹೊಂದಿತು. ಜಂಜೀರಾ ಕೋಟೆಯಿಂದ ಸುಮಾರು 4 ಕಿ.ಮೀ ದೂರದಲ್ಲಿರುವ ಈ ಕೋಟೆ ನೋಡಲೂ ಕೂಡಾ ಆಕರ್ಷಕವಾಗಿದೆ. ಜಂಜೀರಾ ಕೋಟೆಯಷ್ಟು ದೊಡ್ಡದಿಲ್ಲದಿದ್ದರೂ ಈ ಕೋಟೆಯನ್ನು ದೋಣಿಯಲ್ಲಿ ಸಂಪರ್ಕಿಸಬಹುದಾಗಿದೆ. ವಾರಾಂತ್ಯಗಳಲ್ಲಿ ಇತಿಹಾಸದ ಸುವರ್ಣ ಮಜಲುಗಳನ್ನು ನೋಡಿ ಆನಂದಿಸಬಹುದಾಗಿದೆ ಮಾತ್ರವಲ್ಲ ಹೆಮ್ಮೆ ಪಡಬಹುದಾಗಿದೆ. ಈ ಕೋಟೆ ವೀಕ್ಷಣೆಗೆ ಕಸ್ಟಮ್ಸ್ ಯಾ ನೌಕಾಪಡೆಯ ಅನುಮತಿಯ ಅಗತ್ಯವಿದೆ. ಮುರೋಡ್ ಯಾ ಕೋಳಿವಾಡದಿಂದ ಈ ಕೋಟೆಗೆ ಬೋಟ್ ಸಂಪರ್ಕವಿದೆ. ಪದ್ಮದುರ್ಗ ಕೋಟೆಯನ್ನು ಸಿದ್ದಿಗಳ ಸುಪರ್ದಿಯಲ್ಲಿದ್ದ ಜಂಜೀರಾ ಕೋಟೆಯಿಂದಲೂ ವೀಕ್ಷಿಸಬಹುದಾಗಿದೆ
ದಂಡಿ ಸಮುದ್ರ ತೀರದಿಂದ ಈ ಕೋಟೆಗೆ ಅತಿ ಸಮೀಪದ ಭೂ ಸಂಪರ್ಕವಿತ್ತು. ಶಿವಾಜಿಯ ಸೇನಾಪಡೆಗಳು ಈ ಕೋಟೆಯನ್ನು ನಿರ್ಮಿಸಲು ದಂಡಿ ಮೂಲಕವೇ ಅಗತ್ಯವಾದ ಕಲ್ಲು ಮತ್ತು ಸುಣ್ಣ ಸಹಿತ ಮಣ್ಣನ್ನು ಪೂರೈಸಿತ್ತು ಎಂದು ಹೇಳಬಹುದಾಗಿದೆ.
ಸಿಂಧುದುರ್ಗ ಕೋಟೆಯು ಕೇವಲ ಸಾಗರ ರಕ್ಷಣೆಯ ಕೋಟೆಯಾಗಿರದೆ ಇಲ್ಲಿ ಶಿವಾಜಿಯ ನೌಕಾಪಡೆಯ ಬೃಹತ್ ಹಡಗುಗಳು ನಿರ್ಮಾಣ ಕೇಂದ್ರವೂ ಆಗಿತ್ತು ಎಂದು ಹೇಳಲಾಗುತ್ತದೆ. ಈ ಕೋಟೆಯಲ್ಲಿ ಒಟ್ಟು ಆರು ಪ್ರಮುಖ ಬುರುಜುಗಳಿವೆ.
ಕೊಲಬಾ ಶಿವಾಜಿಯ ಮರಾಠ ಸೈನ್ಯ ನಿರ್ಮಿಸಿದ ಮಗದೊಂದು ಕೋಟೆ, ಮುಂಬೈಯಿಂದ ಸುಮಾರು 35 ಕಿ.ಮೀ ದೂರವಿರುವ ಈ ಕೋಟೆಯು ಕೊಂಕಣ ಮಹಾರಾಷ್ಟ್ರದ ಪ್ರಧಾನ ಕೋಟೆಯಾಗಿದೆ. ಇದು ಶಿವಾಜಿಯ ಪ್ರಧಾನ ನೌಕಾ ನೆಲೆಯಾಗಿತ್ತು. ಇಂದು ಈ ಕೋಟೆ ASI ಅಧೀನದಲ್ಲಿದ್ದು ಸಂರಕ್ಷಿತ ಕೇಂದ್ರವಾಗಿದೆ. ಬ್ರಿಟಿಷರು ಮತ್ತು ಮೊಘಲರ ವಿರುದ್ಧದ ಹೋರಾಟದಲ್ಲಿ ಈ ಕೋಟೆ ಪ್ರಧಾನ ಪಾತ್ರ ವಹಿಸಿತ್ತು. ಈ ಕೋಟೆಯೊಳಗೆ ಸಿದ್ದಿ ವಿನಾಯಕ ದೇವರ ದೇವಸ್ಥಾನವೂ ಇರುವುದು ವಿಶೇಷವಾಗಿದೆ. ಶಿವಾಜಿ ನಿರ್ಮಿಸಿದ ಮತ್ತು ಮರಾಠರ ಅಧಿಪತ್ಯದಲ್ಲಿದ್ದ ಒಟ್ಟು 84 ಕೋಟೆಗಳಲ್ಲಿ ಸಿಂಧುದುರ್ಗಕ್ಕೆ ವಿಶೇಷ ಸ್ಥಾನವಿದೆ. 1664 ರ ಮಾರ್ಗಶಿರ್ಷ್ಯ ಶುಕ್ಲ ಪಕ್ಷ ದ್ವಿತಿಯದಂದು ಆರಂಭಗೊಂಡ ಕೋಟೆಯ ನಿರ್ಮಾಣ 1667 ರಲ್ಲಿ ಪೂರ್ಣಗೊಂಡಿತ್ತು. ಕೋಟೆ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳನ್ನು ಮತ್ತು ಧನವನ್ನು ಸೂರತ್ ನಿಂದ ಪೂರೈಸಲಾಯಿತು. ಖುದ್ದು ಶಿವಾಜಿ ಮಹಾರಾಜರ ಮುಂದಾಳುತ್ವದಲ್ಲಿ ಕೋಟೆ ನಿರ್ಮಾಣಗೊಳ್ಳುತ್ತಿದ್ದ ವೇಳೆ ಇದರ ರಕ್ಷಣೆಗೆ 2000 ಮಾಳವ ಸೈನಿಕರನ್ನು ನಿಯೋಜಿಸಲಾಗಿತ್ತು ಎಂದು ಹೇಳಲಾಗುತ್ತದೆ. ಶಿವಾಜಿ ನಿರ್ಮಿಸಿದ ಇತರ ಕೋಟೆಗಳೆಂದರೆ ರಾಜಕೋಟ್, ಖಂಡೇರಿ, ಸುವರ್ಣದುರ್ಗ, ಸಾಧಕೊಕೋಟೆ. ನುರಿತ ಮತ್ತು ಬುದ್ಧಿವಂತ ಮೇಸ್ತ್ರಿಗಳು ಕೋಟೆಯ ದ್ವಾರದಲ್ಲಿ ಶಿವಾಜಿ ಮಹಾರಾಜರ ನೆನಪಿಗಾಗಿ ಶಿವ ಛತ್ರಪತಿಯ ಕೈಯ ಅಚ್ಚನ್ನು ಮೂಡಿಸಿದರು ಎನ್ನಲಾಗಿದೆ. ಕೋಟೆಯ ಮಹದ್ವಾರವು ಗೋವಿನ ಮುಖವನ್ನು ಹೋಲುತ್ತದೆ.
ಭಾರತೀಯ ಇತಿಹಾಸದ ಪ್ರಮುಖ ತಾಣಗಳಲ್ಲಿ ನೌಕಾಪಡೆ ದಿನಾಚರಣೆಯನ್ನು ಮಾಡುವುದು ಮತ್ತು ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದು ಹಾಕುವುದು ಸಮಂಜಸವಾದ ನಿರ್ಧಾರವಾಗಿದೆ. ಈಗಾಗಲೇ ಭಾರತೀಯ ನೌಕಾಪಡೆಯ ಲಾಂಛನದಲ್ಲಿದ್ದ ವಸಾಹತುಶಾಹಿ ಸಂಕೇತಗಳನ್ನು ಅಳಿಸಿ ಹಾಕಿ ಸ್ವದೇಶಿ ಸಂಕೇತಗಳನ್ನು ಬಳಸಲಾಗಿದೆ. ಕಳೆದ ವರ್ಷ ಶಿವಾಜಿ ಮಹಾರಾಜರ ನೌಕಾಸೇನೆಯ ಲಾಂಛನವನ್ನು ಭಾರತೀಯ ನೌಕಾಪಡೆಯ ನೂತನ ಲಾಂಛನವಾಗಿ ಸ್ವೀಕರಿಸಲಾಗಿತ್ತು. ನೆಲ್ಸನ್ ರಿಂಗ್ ಬದಲಾವಣೆ ಸಹಿತ ನೌಕಾಪಡೆಯ ವಿವಿಧ ಹುದ್ದೆಗಳ ಹೆಸರನ್ನು ಭಾರತೀಯ ಸಂಸ್ಕೃತಿ ಮತ್ತು ಕ್ಷಾತ್ರ ಪರಂಪರೆಗೆ ತಕ್ಕಂತೆ ಬದಲಿಸುವ ಉದ್ದೇಶ ಪ್ರಶಂಸಾರ್ಹವಾಗಿದೆ.
ಸ್ವದೇಶಿ ವಾಹನಗಳ ನಿರ್ಮಾಣ, ಆಧುನಿಕ ರೀತಿಯಲ್ಲಿ ನೌಕಾಪಡೆಯ ಉತ್ತೇಜನ, ಹಲವು ಜಲಾಂತರ್ಗಾಮಿ ನೌಕೆಗಳ ಸೇರ್ಪಡೆಯ ಮೂಲಕ ದೇಶದ ಕಡಲು ಮತ್ತು ತಟವನ್ನು ರಕ್ಷಿಸುವ ಭಾರತೀಯ ನೌಕಾಪಡೆಯು ಸರ್ವದಾ ಶಕ್ತಿಶಾಲಿ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.