
ನವದೆಹಲಿ: ನವೆಂಬರ್ 12 ರಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದೆ. ವರದಿಗಳ ಪ್ರಕಾರ ರಕ್ಷಣಾ ಕಾರ್ಯ ಅಂತಿಮ ಹಂತದಲ್ಲಿ ಇದ್ದು, ಶೀಘ್ರವೇ ಕಾರ್ಮಿಕರು ಹೊರಬರುವ ನಿರೀಕ್ಷೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ರಕ್ಷಣಾ ಕಾರ್ಯದ ವಿವರಗಳನ್ನು ಪಡೆದುಕೊಂಡಿದ್ದಾರೆ.
ಉತ್ತರಾಖಂಡ ಸರ್ಕಾರದ ಪ್ರಕಾರ, ಪ್ರಧಾನಿ ಮೋದಿ ಕಾರ್ಮಿಕರ ಸ್ಥಿತಿ ಬಗ್ಗೆ ವಿಚಾರಿಸಿದರು ಮತ್ತು ಸಿಎಂ ಧಾಮಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು ಎಂದಿದೆ.
‘ರಕ್ಷಣಾ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಸ್ಥಿತಿ ಮತ್ತು ಅವರಿಗೆ ಒದಗಿಸಲಾದ ಆಹಾರ ಮತ್ತು ದಿನನಿತ್ಯದ ವಸ್ತುಗಳ ಬಗ್ಗೆಯೂ ಪ್ರಧಾನಿ ವಿಚಾರಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾದ ಸಿಬ್ಬಂದಿಯ ಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ’ ಎಂದು ಉತ್ತರಾಖಂಡದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಕಾರ್ಮಿಕರು ಸುರಂಗದಿಂದ ಹೊರಗೆ ಬಂದಾಗ ಅವರ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಆರೈಕೆಗೆ ವಿಶೇಷ ಗಮನ ನೀಡಬೇಕು ಎಂದು ಪ್ರಧಾನಿ ಮೋದಿ ಮುಖ್ಯಮಂತ್ರಿಗೆ ವಿಶೇಷ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕಾರ್ಮಿಕರು ಸುರಂಗದೊಳಗೆ ಸುರಕ್ಷಿತವಾಗಿದ್ದು, ಅವರಿಗೆ ಆಹಾರ, ನೀರು ಪೂರೈಕೆ ಮಾಡಲಾಗುತ್ತಿದೆ. ಆಮ್ಲಜನಕ ಸಾಕಷ್ಟು ಇರುವುದನ್ನು ಖಚಿತಪಡಿಸಲಾಗಿದೆ. ಅವರು ಹೊರಗೆ ಬಂದ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


