ಬೆಂಗಳೂರು: ಆರ್ಥಿಕ ಸಮೀಕ್ಷೆ, ಜಾತಿ ಗಣತಿ ನೆಪದಲ್ಲಿ ಹಿಂದುಳಿದ ವರ್ಗಗಳಿಗೆ ಮೋಸ ಮಾಡುವ ಪ್ರಯತ್ನವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸುನೀಲ್ಕುಮಾರ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, 10 ವರ್ಷಗಳ ಹಿಂದೆ ಈ ವರದಿ ಕೊಡಲಾಗಿದೆ. ಇದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರದ ಸಚಿವರೇ ವಿರೋಧ ಸೂಚಿಸುತ್ತಿದ್ದು, ಸಾರ್ವಜನಿಕವಾಗಿ ಅನುಮಾನಗಳಿಗೆ ಕಾರಣವಾಗಿದೆ ಎಂದು ನುಡಿದರು. ಹಿಂದುಳಿದ ವರ್ಗಗಳನ್ನು ಪರೋಕ್ಷವಾಗಿ ಕತ್ತಲಲ್ಲಿ ಇಡುವ ಪ್ರಯತ್ನವನ್ನೂ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಈ ಕುರಿತು ಸಾರ್ವಜನಿಕ ಚರ್ಚೆ ನಡೆಸಿ ಎಂದು ಅವರು ಆಗ್ರಹಿಸಿದರು. ತಜ್ಞರಿಂದ ಸಾಧಕ, ಬಾಧಕಗಳ ಕುರಿತು ಚರ್ಚೆ ಮಾಡಲು ವೇದಿಕೆ ಸೃಷ್ಟಿಸಿ ಎಂದೂ ಅವರು ಒತ್ತಾಯಿಸಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ವರದಿ ಮೂಲಪ್ರತಿ ಕಳವಾಗಿದೆಯೇ? ಹಾಗಿದ್ದರೆ ಯಾವ ಪ್ರತಿಯನ್ನು ಇಟ್ಟುಕೊಂಡು ಈ ವಾದವಿವಾದ ನಡೆದಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ವಿಸ್ತøತ ಮಾಹಿತಿ ಕೊಡಬೇಕು ಎಂದೂ ಅವರು ಆಗ್ರಹಿಸಿದರು.
ಒಂದೆಡೆ ವರದಿ ಸರಿಯಿಲ್ಲ ಎಂದು ಡಿಸಿಎಂ ಹೇಳುತ್ತಾರೆ. ವರದಿ ಸ್ವೀಕಾರಕ್ಕೆ ಸಿದ್ಧ ಎಂದು ಸಿಎಂ ಹೇಳುತ್ತಾರೆ. ವರದಿ ಕಳೆದುಹೋಗಿದೆ ಎಂದು ಆಯೋಗದ ಅಧ್ಯಕ್ಷರು ಹೇಳುವುದಾದರೆ ಯಾವುದನ್ನು ನಂಬಬೇಕು ಎಂದು ಕೇಳಿದರು. ವರದಿ ಬಗ್ಗೆ ಊಹಾಪೋಹ ಆಗುತ್ತಿದೆ. ಅದರ ಸಾರ್ವಜನಿಕ ಚರ್ಚೆ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸರಕಾರದ ನಿಲುವು ಸ್ಪಷ್ಟವಾಗಲಿ. ಈ ಸರಕಾರದಲ್ಲಿ ಮುಖ್ಯಮಂತ್ರಿಗಳು ಒಂದು ನಿಲುವು ತಳೆದರೆ, ಉಪ ಮುಖ್ಯಮಂತ್ರಿಗಳು ಇನ್ನೊಂದು ನಿಲುವು ತಿಳಿಸುತ್ತಾರೆ. ಕರ್ನಾಟಕದ ಜನತೆ ಏನೆಂದು ಯೋಚಿಸಬೇಕು? ಸರಕಾರವು ಸ್ಪಷ್ಟ ನಿಲುವನ್ನು ತಿಳಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಸರಕಾರಿ ದಾಖಲೆ ಕಳ್ಳತನ ಆಗಿದ್ದರೆ ಸರಕಾರ ಕಳ್ಳತನ ಮಾಡಿದೆಯೇ? ಆಯೋಗ ಕಳ್ಳತನ ಮಾಡಿದೆಯೇ? ಅಥವಾ ಗೃಹ ಇಲಾಖೆಯವರು ಕಳ್ಳತನ ಮಾಡಿದ್ದಾರಾ ಎಂದು ಸರಕಾರ ಸ್ಪಷ್ಟಪಡಿಸಬೇಕು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕೇವಲ ಲೋಕಸಭಾ ಚುನಾವಣೆ ದೃಷ್ಟಿಯಿಂದ, ಮತಗಳ ದೃಷ್ಟಿಕೋನದಿಂದ ಪರಿಶಿಷ್ಟ ಜಾತಿ, ಪಂಗಡದವನ್ನು ಕತ್ತಲೆಯಲ್ಲಿ ಇಡುವ ಪ್ರಯತ್ನ ಹೇಳಿಕೆಗಳಿಂದ ಆಗಬಾರದು ಎಂದು ಅವರು ತಿಳಿಸಿದರು.
ಬೆಳಗಾವಿ ಅಧಿವೇಶನಕ್ಕೆ ಮೊದಲು ಸರಕಾರ ಸ್ಪಷ್ಟ ನಿಲುವನ್ನು ತಿಳಿಸಲಿ. ಸಾರ್ವಜನಿಕ ಚರ್ಚೆಗೆ ಸರಕಾರವೇ ಒಂದು ವೇದಿಕೆಯಲ್ಲಿ ನಿರ್ಮಿಸಲಿ ಎಂದೂ ಅವರು ಒತ್ತಾಯ ಮಾಡಿದರು.
ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಅಸಮರ್ಥ ನಿರ್ವಹಣೆ ಕಾರಣಕ್ಕೆ ಕಲ್ಲಿದ್ದಲು ಕಳ್ಳತನ ನಡೆದಿದೆ. ಇನ್ನೊಂದೆಡೆ ಲೋಡ್ ಶೆಡ್ಡಿಂಗ್ ಆಗುತ್ತಿದೆ. ವಿದ್ಯುತ್ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್ ಕೊಡುತ್ತಿಲ್ಲ. ಮಂತ್ರಿಗಳು 7 ಗಂಟೆ ವಿದ್ಯುತ್ತನ್ನು ಬೇಸಿಗೆ ಕಾಲದಲ್ಲಿ ಕೊಡುವುದಾಗಿ ಹೇಳುತ್ತಾರೆ. ಈಗ ಮಳೆಗಾಲ- ಚಳಿಗಾಲದಲ್ಲೇ ವಿದ್ಯುತ್ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್ ಕೊಡುವಲ್ಲಿ ಸರಕಾರ ವಿಫಲವಾಗಿದೆ ಎಂದು ತಿಳಿಸಿದರು.
ರೈತರ ವಿದ್ಯುತ್ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್, ಗ್ರಾಹಕರು ಮತ್ತು ಮನೆಗಳಿಗೆ ನಿರಂತರ ವಿದ್ಯುತ್ ಕೊಟ್ಟರೆ ಅದು ಸರಕಾರದ ಸಾಧನೆ ಎಂದು ಭಾವಿಸುವೆ. ಕಲ್ಲಿದ್ದಲು ಕೃತಕ ಕೊರತೆ ಸೃಷ್ಟಿಸಲಾಗುತ್ತಿದೆ. ಪವರ್ ಕಟ್ ಈಗಲೇ ಆರಂಭವಾಗಿದೆ. ಇನ್ನೊಂದೆಡೆ ಕಳ್ಳತನಕ್ಕೂ ನಾಂದಿ ಹಾಡುತ್ತಿದೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.