ಬೆಳ್ತಂಗಡಿ : ಆಳುವ ಸರಕಾರಗಳು ಆದಿವಾಸಿಗಳ ಮೇಲೆ ನಿರಂತರ ದೌರ್ಜನ್ಯ ನಡೆಸುತ್ತಾ ಬಂದಿದ್ದು ಇದೀಗ ಕೆಂದ್ರ ಸರಕಾರ ಜಾರಿಗೆ ತರುತ್ತಿರುವ ಕಸ್ತೂರಿ ರಂಗನ್ ವರದಿಯ ಅನುಷ್ಠಾನದಿಂದಾಗಿ ದೇಶದ ಆರು ರಾಜ್ಯಗಳ ಲಕ್ಷಾಂತರ ಮಂದಿ ಆದಿವಾಸಿಗಳು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ. ಇದರ ವಿರುದ್ದ ಆದಿವಾಸಿ ಸಮುದಾಯ ದ್ವನಿಯೆತ್ತಬೇಕಾಗಿದೆ ಎಂದು ತ್ರಿಪುರದ ಸಂಸದ ಸಿಪಿಐಎಂ ಮುಖಂಡ ಜಿತೇಂದ್ರ ಚೌಧರಿ ಹೇಳಿದರು.
ಅವರು ಸೋಮವಾರ ಬೆಳ್ತಂಗಡಿಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸುಂದರ ಮಲೆಕುಡಿಯ ಅವರಿಗೆ ನ್ಯಾಯ ಒದಗಿಸಬೇಕು ಹಾಗೂ ಕೊಲೆಗುಡುಕ ಗೋಪಾಲಗೌಡ ಅವರ ವಿರುದ್ದ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಒತ್ತಾಯಿಸಿ ಮಂಗಳವಾರದಿಂದ ನಡೆಯಲಿರುವ ಅನಿರ್ಧಿಷ್ಟಾವಧಿ ಮುಷ್ಕರದ ಪ್ರಚಾರಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸುತ್ತಿರುವ ಕಾನೂನುಗಳು ಆದಿವಾಸಿಗಳ ವಿರುದ್ದವಾಗಿದೆ. ನರೇಂದ್ರ ಮೋದಿಯವರು ಜನರ ಭಾವನೆಗಳಿಗೆ ಸ್ಪಂದಿಸುವಲ್ಲಿ ಪೂರ್ಣ ವಿಫಲವಾಗಿದೆ. ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಚಿಂತಿಸಲು ಸಮಯವಿಲ್ಲವಾಗಿದೆ. ಬೃಹತ್ ಬಂಡವಾಳ ಶಾಹಿಗಳ ಹಿತ ಕಾಯುವುದೇ ಅವರ ಗುರಿಯಾಗಿದೆ ಎಂದು ಆರೋಪಿಸಿದರು.
ನೆರಿಯ ಗ್ರಾಮದಲ್ಲಿ ಆದಿವಾಸಿ ಸುಂದರ ಮಲೆಕುಡಿಯ ಅವರ ಮೇಲೆ ನಡೆದಿರುವ ಧಾಳಿ ಅತ್ಯಂತ ಅಮಾನವೀಯವಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಸರಕಾರ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು ಇಲ್ಲವಾದಲ್ಲಿ ಸರಕಾರದ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಲಿದೆ. ಕೂಡಲೇ ಗೋಪಾಲಗೌಡರ ಅವರ ಬಳಿ ಇರುವ ಅಕ್ರಮಿತ ಜಮೀನನ್ನು ವಶಪಡಿಸಿಕೊಳ್ಳಬೇಕು.
ಶೋಷಣೆಗೆ ಒಳಗಾದ ಆದಿವಾಸಿ ಕುಟುಂಬದ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ ಎಂದ ಅವರು ಈ ನೆಲದ ಮೂಲ ನಿವಾಸಿಗಳಾದ ಆದಿವಾಸಿಳು ಇಂದಿಗೂ ಬದುಕುವ ಹಕ್ಕಿಗಾಗಿ ಪರದಾಡಬೇಕಾದ ಸ್ಥಿತಿ ದೇಶದಲ್ಲಿದೆ. ಇದು ನಮ್ಮ ದುರಂತವಾಗಿದೆ ಎಂದರು. ಆದಿವಾಸಿಗಳ ಪರವಾಗಿ ರಚನೆಯಾಗಿರುವ ಕಾನೂನುಗಳು ಇನ್ನೂ ಅವರಿಗೆ ತಲುಪಿಲ. ಅದನ್ನು ಅನಿಷ್ಠಾನಕ್ಕೆ ತರುವಲ್ಲಿ ನಮ್ಮನ್ನು ಆಳುವ ಸರಕಾರಗಳು ಹೊಣೆಗೇಡಿತನ ಪ್ರದರ್ಶಿಸುತ್ತಿದೆ ಎಂದು ಅವರು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಪಕ್ಷದ ಮುಖಂಡರುಗಳಾದ ಬಿ.ಎಂ ಭಟ್, ಶಿವಕುಮಾರ್, ಹರಿದಾಸ್, ಶೇಖರ ಲಾಯಿಲ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕರುಗಳಾದ ಎಸ್ ವೈ ಗುರುಶಾಂತ್, ವಿಠಲ ಮಲೆಕುಡಿಯ, ಸಂಘಟನೆಯ ಮುಖಂಡರುಗಳಾದ ವಸಂತ ನಡ, ಮತ್ತಿತರರು ಉಪಸ್ಥಿತರಿದ್ದರು. ಬಹಿರಂಗ ಸಭೆಯ ಬಳಿಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ತಾಲೂಕು ಸಮಾವೇಶ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಬಳಿಕ ಸಂಸದರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಂದರ ಮಲೆಕುಡಿಯ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.