ಬೈಂದೂರು: ದೇಶ ಕಾಯುವ ಸೈನಿಕರಿಗೆ ಪತ್ರ ಬರೆದು ದೀಪಾವಳಿ ಹಬ್ಬದ ಶುಭಾಶಯವನ್ನು ಕೋರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಬೈಂದೂರಿನ ಸಾವಿರಾರು ವಿದ್ಯಾರ್ಥಿಗಳು. ಸಮೃದ್ಧ ಬೈಂದೂರು ತಂಡ ಅವರನ್ನು ಪತ್ರ ಬರೆಯುವಂತೆ ಪ್ರೋತ್ಸಾಹಿಸಿತ್ತು.
ಬೈಂದೂರು ಕ್ಷೇತ್ರದ ವಿವಿಧ ಶಾಲೆಗಳ ಸುಮಾರು 1000 ಮಕ್ಕಳು ಸೈನಿಕರ ದೇಶ ಸೇವೆ, ಪರಾಕ್ರಮವನ್ನು ಕೊಂಡಾಡುತ್ತಾ ಅವರಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಬೈಂದೂರಿನ ವಿವಿಧ ಶಾಲೆಗಳ 8,9, 10 ನೇ ತರಗತಿಯ ಶಾಲಾ ಮಕ್ಕಳು ಸೈನಿಕರಿಗೆ ಪತ್ರ ಬರೆಯುವ ಕೈಂಕರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಈ ಮೂಲಕ ಸಮೃದ್ಧ ಬೈಂದೂರು ಸಂಘಟನೆ ಆಯೋಜಿಸಿದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಮ್ಮ ದೇಶ ಮತ್ತು ನಮ್ಮೆಲ್ಲರನ್ನೂ ಸುರಕ್ಷಿತವಾಗಿಡಲು ಹಗಲಿರುಳು ಶ್ರಮಿಸುತ್ತಿರುವ ಭಾರತೀಯ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಲು ಮತ್ತು ಅವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಸಮೃದ್ಧ ಬೈಂದೂರು ಸಂಘಟನೆ ಹಮ್ಮಿಕೊಂಡಿತ್ತು. ಪ್ರತಿ ವರ್ಷ ದೀಪಾವಳಿ ಸಂದರ್ಭ ಸೈನಿಕರ ಜೊತೆಯಲ್ಲಿ ದೀಪಾವಳಿ ಹಬ್ಬವನ್ನು ಆಚರಿಸುವ ಪ್ರಧಾನಿಯವರು ಎಲ್ಲರಿಗೂ ಪ್ರೇರಣೆ ಮತ್ತ ಮಾದರಿಯಾಗಿದ್ದಾರೆ.
ಎಳೆಯ ಮಕ್ಕಳಲ್ಲಿ ದೇಶ ಪ್ರೇಮ ಸಹಿತ ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ಅಭಿಮಾನ ಮತ್ತು ಹೆಮ್ಮೆ ಮೂಡಿಸುವ ಕಾರ್ಯವನ್ನು ಈ ಸಂಘಟನೆ ಇತ್ತೀಚೆಗೆ ಹಮ್ಮಿಕೊಂಡಿತ್ತು. ಮಕ್ಕಳು ಬರೆದ ಸಾವಿರಾರು ಪತ್ರಗಳು ಬೆಂಗಳೂರಿನ ಸೈನಿಕ ಕಚೇರಿಗೆ ತಲುಪಿದೆ. ಪೋಸ್ಟ್ ಕಾರ್ಡ್ ಮೂಲಕ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆಯಲ್ಪಟ್ಟ ಪೋಸ್ಟ್ ಕಾರ್ಡ್ ಪತ್ರಗಳು ನವೆಂಬರ್ 11 ರೊಳಗೆ ಸೈನಿಕ ಕಚೇರಿಗೆ ತಲುಪವಂತೆ ಕಳುಹಿಸಲಾಗಿದೆ. ಉತ್ತಮ ಪತ್ರಕ್ಕೆ ಸಮೃದ್ಧ ಬೈಂದೂರು ತಂಡವು ಬಹುಮಾನ ಘೋಷಿಸಿದೆ. ಸೈನಿಕರಿಗೆ ಪತ್ರ ಬರೆದ ಸಂತಸವನ್ನು ಹಲವು ಮಕ್ಕಳು ಹಂಚಿಕೊಂಡಿದ್ದಾರೆ.
ಶಾಸಕ ಗುರುರಾಜ್ ಗಂಟಿಹೊಳೆಯವರ ಸಮೃದ್ಧ ಬೈಂದೂರು ಪರಿಕಲ್ಪನೆಯ ಮಕ್ಕಳಲ್ಲಿ ದೇಶಪ್ರೇಮದ ಭಾವನೆಯನ್ನು ಮೂಡಿಸುವ ಈ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ಸಾಹದಿಂದ ಪತ್ರ ಬರೆದ ವಿದ್ಯಾರ್ಥಿಗಳು ಸೈನಿಕರಿಗೆ ಶುಭಾಶಯ ಕೋರುವ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ಸಮೃದ್ಧ ಬೈಂದೂರು ತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.