ಗಡಿ ರಸ್ತೆ ಪ್ರಾಧಿಕಾರ (BRO) ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಹುದೊಡ್ಡ ಶಕ್ತಿ. ದೇಶದ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿರುವ ಈ ಸಂಸ್ಥೆ ಭಾರತದ ಹೆಮ್ಮೆ ಮತ್ತು ಗೌರವವನ್ನು ದಶಕಗಳಿಂದ ಹೆಚ್ಚಿಸಿದೆ. ಭಾರತೀಯ ಗಡಿಗಳಲ್ಲಿ ಗುಣಮಟ್ಟದ ರಸ್ತೆ, ಸೇತುವೆಗಳು, ಹೆಲಿಪ್ಯಾಡ್ ಗಳ ನಿರ್ಮಾಣದ ಮೂಲಕ ದೇಶದ ಸೈನಿಕ ಶಕ್ತಿಗೆ BRO ಸಹಾಯಕವಾದರೆ, ಗಡಿ ಗ್ರಾಮದ ನಾಗರಿಕರಿಗೆ ಸೂಕ್ತ ರೀತಿಯಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಎಲ್ಲರ ಮೆಚ್ಚುಗೆಗೂ ಪಾತ್ರವಾದ ಸಂಸ್ಥೆಯಾಗಿದೆ. 1960 ರಲ್ಲಿ ಸ್ಥಾಪನೆಯಾದ ಬಾರ್ಡರ್ ರೋಡ್ ಆರ್ಗನೈಸೇಶನ್ ಇಂದು ದೇಶದ ಸೈನಿಕ ಶಕ್ತಿಯ ಬೆನ್ನೆಲುಬು ಎಂದರೆ ತಪ್ಪಾಗಲಿಕ್ಕಿಲ್ಲ. ಶ್ರಮೇಣ ಸರ್ವಂ ಸಾಧ್ಯಂ ಎನ್ನುವ ಉಕ್ತಿಯಂತೆ ಕಠಿಣಾತಿ ಕಠಿಣ ಪ್ರದೇಶಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಕೊಡಮಾಡಿ ದೇಶ ರಕ್ಷಣೆಯಲ್ಲೂ ಪ್ರಮುಖ ಪಾಲುದಾರಿಕೆಯನ್ನು ನೀಡುತ್ತಿದೆ BRO ಎಂಬ ಸಂಸ್ಥೆ. ಉತ್ತರದಲ್ಲಿ ಚೀನಾ, ವಾಯುವ್ಯದಲ್ಲಿ ಪಾಕಿಸ್ಥಾನ ಸಹಿತ ಈಶಾನ್ಯದಲ್ಲಿ ಬಾಂಗ್ಲಾ, ಮಯನ್ಮಾರ್ ಗಳಿಂದ ದೇಶದ ಗಡಿ ರಕ್ಷಣೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಪೂರೈಕೆ ಮಾಡಿ ರಾಷ್ಟ್ರ ರಕ್ಷಣೆಯ ಕಾರ್ಯವನ್ನು ಸುಲಭಗೊಳಿಸುತ್ತಿರುವುದು ಇದೇ ಗಡಿ ರಸ್ತೆ ಪ್ರಾಧಿಕಾರ. ಇತ್ತೀಚೆಗಷ್ಟೇ BRO ನಿರ್ದೇಶಕರಾಗಿರುವ ಜನರಲ್ ರಾಜೀವ್ ಚೌಧರಿ ಭಾರತವು ಮುಂದಿನ ಎರಡರಿಂದ ನಾಲ್ಕು ವರ್ಷದೊಳಗೆ ಗಡಿ ಮೂಲ ಸೌಕರ್ಯ ಪೂರೈಕೆಯಲ್ಲಿ ಚೀನಾವನ್ನು ಮೀರಿಸಲಿದೆ ಎಂದಿದ್ದಾರೆ. ಇದು ಬಹಳ ಹೆಮ್ಮೆ ಪಡಬೇಕಾದ ವಿಚಾರವಾಗಿದೆ.
ದೇಶದ ಉತ್ತರದಲ್ಲಿ ಬೃಹತ್ ಹಿಮಾಲಯ ಬೆಟ್ಟ ಸಾಲುಗಳಿದ್ದು, ಈ ಗಡಿಗಳು ಸಮತಟ್ಟಾದ ಪ್ರದೇಶಗಳೇನೂ ಅಲ್ಲ, ಬದಲಾಗಿ ದುರ್ಗಮ, ಕಣಿವೆ, ಗುಡ್ಡ, ಬೆಟ್ಟ ಹೊಂದಿರುವ ಪ್ರದೇಶಗಳು. ಇಂತಹ ಪ್ರದೇಶಗಳಲ್ಲಿ ದೇಶ ರಕ್ಷಣೆಯ ಕಾರ್ಯ ಸುಲಭವೇನಲ್ಲ. ಕಠಿಣವಾದ, ಸೈನಿಕರಿಗೆ ಸವಾಲಾಗಿರುವ ಇಂತಹ ಪ್ರದೇಶಗಳಿಗೆ ತೆರಳುವ, ಅಲ್ಲಿ ಉಳಿಯುವ, ಹಲವು ತಿಂಗಳುಗಳ ಕಾಲ ಅಲ್ಲಿದ್ದು ದೇಶದ ಗಡಿ ರಕ್ಷಣೆಯ ಕಾಯಕವೇ ಸಾಹಸದ್ದು. ಇಂತಹ ಸಂದರ್ಭ ಸರಕು, ಸರಂಜಾಮುಗಳನ್ನು ಕ್ಲುಪ್ತ ಸಮಯಕ್ಕೆ ಪೂರೈಸುವಂತೆ ಮಾಡಲು ಭಾರತೀಯ ಸೇನೆಗೆ ನೆರವಾಗುತ್ತಿರುವುದು BRO. LAC ಮತ್ತು LOC ಗಡಿ ಪ್ರದೇಶಗಳಲ್ಲಿ ಅಗತ್ಯವಾದ ರಸ್ತೆ, ಸೇತುವೆ, ಸುರಂಗ ಮಾರ್ಗ, ವಿಮಾನ ನಿಲ್ದಾಣ, ಹೆಲಿಪ್ಯಾಡ್ ಮೊದಲಾದವನ್ನು ನಿರ್ಮಿಸಿದ ಕೀರ್ತಿ BRO ದ್ದಾಗಿದೆ. ಆಧುನಿಕ ಕಾಲಘಟ್ಟಕ್ಕೆ ಅನುಕೂಲವಾಗುವಂತೆ ಹಲವು ರಸ್ತೆಗಳ ಮೇಲ್ದರ್ಜೆಗೇರಿಸಿ, ಎಲ್ಲಾ ಹವಾಮಾನಗಳಲ್ಲೂ ಬಳಕೆಗೆ ಯೋಗ್ಯವಾದ ರಸ್ತೆ, ಸುರಂಗ ಮಾರ್ಗಗಳು ಇದೇ ಸಂಸ್ಥೆಯ ಮೂಲಕ ನಿರ್ಮಾಣವಾಗಿವೆ. ಹಲವು ದಶಕಗಳಿಂದ ಭಾರತೀಯ ಸೇನೆಯ ಶಕ್ತಿಯಾಗಿರುವ ಗಡಿ ರಸ್ತೆ ಪ್ರಾಧಿಕಾರವು ಕಳೆದ ಹತ್ತು ವರ್ಷಗಳಲ್ಲಿ ಕೈಗೊಂಡ ಮುಖ್ಯವಾದ ಯೋಜನೆಗಳನ್ನು ನಾವು ನೋಡಬೇಕಿದೆ.
ಇದೇ ಸೆಪ್ಟೆಂಬರ್ 12 ರಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಜಮ್ಮುವಿನ ಸಾಂಬಾದಲ್ಲಿ ಒಟ್ಟು 3000 ಕೋಟಿ. ರೂ ಮೊತ್ತದ 90 ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದರು. ಈ ಯೋಜನೆಗಳೆಲ್ಲವೂ BRO ಮೂಲಕ ಪೂರ್ಣಗೊಂಡ ಯೋಜನೆಗಳಾಗಿವೆ. ಇದರಲ್ಲಿ ಬಹಳ ಮುಖ್ಯವಾದ್ದು ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಿರ್ಮಾಣ ಹೊಂದಿದ ನೆಚಿಪು ಸುರಂಗ ಮಾರ್ಗ. ಇದರ ಹೊರತಾಗಿ ಇಲ್ಲಿನ ಹೆಲಿಪ್ಯಾಡ್, ಏರ್ ಫೀಲ್ಡ್ ಗಳು ಮತ್ತು ಹಲವು ರಸ್ತೆಗಳು ಮೇಲ್ದರ್ಜೆಗೇರಿವೆ. ಇದಲ್ಲದೆ ಪೂರ್ವ ಲಡಾಕಿನ ನ್ಯೋಮಾ ವಿಮಾಣ ನಿಲ್ದಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ನ್ಯೋಮಾ ALG ಯು ಸಮುದ್ರ ಮಟ್ಟಕ್ಕಿಂತ 13,400 ಅಡಿ ಎತ್ತರದಲ್ಲಿದ್ದು, ಪ್ರಸ್ತುತ ಇರುವ ಏರ್ ಸ್ಟ್ರಿಪ್ ಅನ್ನು 2.7 ಕಿ.ಮೀ ಉದ್ದದ ರನ್ ಆಗಿ ಪರಿರ್ವತಿಸಲಾಗುತ್ತದೆ, ಈ ಯೋಜನೆಯು 2025 ರ ವೇಳೆಗೆ ಪೂರ್ಣಗೊಳ್ಳಲಿದೆ. ಈ ಯೋಜನೆಗೆ 230 ಕೋಟಿ ರೂ. ಮೀಸಲಿಡಲಾಗಿದೆ. ನ್ಯೋಮಾವು ಭಾರತೀಯ ಸೈನಿಕರನ್ನು ಲಡಾಕಿನ ವಿವಿಧ ಗಡಿ ಪ್ರದೇಶಗಳಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಜಮ್ಮುವಿನಲ್ಲಿ 423 ಮೀ. ಉದ್ದದ ದೇವಕ್ ಸೇತುವೆಯ ಉದ್ಘಾಟನೆಯೂ ನಡೆದಿದೆ. ಇತ್ತೀಚೆಗೆ ಉದ್ಘಾಟನೆಗೊಂಡ ಒಟ್ಟು 90 ಮೂಲಸೌಕರ್ಯ ಯೋಜನೆಗಳು 11 ರಾಜ್ಯಗಳಲ್ಲಿ ವಿಸ್ತರಿಸಲ್ಪಟ್ಟಿದೆ. ಇದರಲ್ಲಿ 36 ಯೋಜನೆಗಳು ಅರುಣಾಚಲ ಪ್ರದೇಶದಲ್ಲಿ, 26 ಲಡಾಕಿನಲ್ಲಿ, 11 ಜಮ್ಮು ಮತ್ತು ಕಾಶ್ಮೀರದ್ದಾಗಿದೆ. ಹವಾಮಾನದ ಅನನುಕೂಲದ ಕಾರಣ ರಕ್ಷಣಾ ಪಡೆಗಳು ಸಮಯಕ್ಕೆ ಸರಿಯಾಗಿ ನಿರ್ದಿಷ್ಟ ಸ್ಥಳಕ್ಕೆ ತಲುಪುವ ಸಲುವಾಗಿ ಆಲ್ ವೆದರ್ ಅಂದರೆ ಎಲ್ಲ ಹವಾಮಾನಗಳಿಗೂ ಸೂಕ್ತವಾದ ಸುರಂಗ ಮಾರ್ಗವನ್ನು ಇದೇ BRO ನಿರ್ಮಿಸಿದೆ ಮತ್ತು ನಿರ್ಮಿಸುತ್ತಿದೆ. ತವಾಂಗ್ ಪ್ರಾಂತ್ಯದಲ್ಲಿರುವ ಸೇಲಾ ಎಂಬ ಸುರಂಗ ಮಾರ್ಗ ಇದರಲ್ಲಿ ಪ್ರಮುಖವಾದುದು. ಇದರ ಜೊತೆಯಲ್ಲಿ ಪಶ್ಚಿಮ ಬಂಗಾಳದ ಬಾಗ್ದೋಗ್ರಾ ಮತ್ತು ಬಾರಕಪೋರದಲ್ಲಿ ನಿರ್ಮಾಣ ಹೊಂದಲಿರುವ ಏರ್ ಫೀಲ್ಡ್ ಗಳು ದೇಶ ರಕ್ಷಣೆ ಮತ್ತು ಯುದ್ಧ ಪ್ರತಿರೋಧದ ಸಂದರ್ಭ ಪ್ರಮುಖ ಪಾತ್ರ ವಹಿಸಲಿವೆ. ಈ ಯೋಜನೆಗಳಿಗೆ ಒಟ್ಟು 500 ಕೋಟಿ. ರೂ. ವಿನಿಯೋಗಿಸಲಾಗುತ್ತಿದೆ.
ಎಂಜಿನಿಯರಿಂಗ್ ಕೌಶಲ್ಯಕ್ಕೆ ಕಳಶಪ್ರಾಯವೆನ್ನುವಂತಹ ಅಟಲ್ ಟನಲ್, ಅಟಲ್ ಸೇತು, ಕ. ಚೆವಾಂಗ್ ರಿಂಚೆನ್ ಸೇತು ನಿರ್ಮಾಣದಲ್ಲೂ BRO ಪಾತ್ರ ಮಹತ್ವದ್ದು. 2021-22 ಸಾಲಿನಲ್ಲಿ ಗಡಿ ರಸ್ತೆ ಪ್ರಾಧಿಕಾರವು ಒಂದೇ ವರ್ಷದಲ್ಲೇ ಅತ್ಯಧಿಕ ಅಂದರೆ 102 ಯೋಜನೆಗಳನ್ನು ಪೂರ್ಣಗೊಳಿಸಿತ್ತು. ಇದರಲ್ಲಿ 87 ಸೇತುವೆಗಳು, 15 ರಸ್ತೆಗಳು ಸಂಪರ್ಕ ರಸ್ತೆಗಳು ಇದ್ದವು. ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವನ್ನು ನಿರ್ಮಿಸಿದ ಕೀರ್ತಿಯು BRO ಗಿದೆ. ಪೂರ್ವ ಲಡಾಕಿನ ರೋಹ್ಟಂಗನಲ್ಲಿರುವ ಅಟಲ್ ಟನಲ್ ಇದಾಗಿದ್ದು ಒಟ್ಟು 10000 ಅಡಿ ಉದ್ದ ಹೊಂದಿದೆ. ಒಟ್ಟು 60 ಸಾವಿರ ಕಿ.ಮೀ ರಸ್ತೆ ನಿರ್ಮಿಸಿರುವ ಗಡಿ ರಸ್ತೆ ಪ್ರಾಧಿಕಾರ 840 ಸೇತುವೆಗಳು, 4 ಸುರಂಗ ಮಾರ್ಗಗಳು, 19 ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. 2022-23 ಸಾಲಿಗೆ BRO ಹೂಡಿಕೆಯು 40% ಹೆಚ್ಚಾಗಿದ್ದು ಮಾತ್ರವಲ್ಲ 3500 ಕೋಟಿ ರೂ. ಬೃಹತ್ ಮೊತ್ತವನ್ನು ವಿವಿಧ ಯೋಜನೆಗಳಿಗೆ ಮೀಸಲಿಡಲಾಗಿದೆ. 9.02 ಕಿ.ಮೀ ದೀರ್ಘದ ಅಟಲ್ ಸುರಂಗ ಮಾರ್ಗವು ಅತಿ ಉದ್ದದ ಸುರಂಗ ಮಾರ್ಗವೆಂಬ ಗರಿಮೆಯನ್ನು ಹೊಂದಿದ್ದು, ಹಿಮಾಚಲಪ್ರದೇಶದ ಮನಾಲಿಯನ್ನು ಲಾಹೋಲ್ ಸ್ಪಿಟಿಯೊಂದಿಗೆ ಸಂರ್ಪಕಿಸುತ್ತದೆ. ನಿರಂತರ ಹಿಮಾಪಾತದ ಕಾರಣ ಈ ಕಣಿವೆ ಪ್ರದೇಶವು ಆರು ತಿಂಗಳ ಕಾಲ ಬೇರ್ಪಡುತ್ತಿತ್ತು. ಹೊಸ ಸುರಂಗ ಮಾರ್ಗದಿಂದ ವರ್ಷವಿಡೀ ಈ ಪ್ರದೇಶಕ್ಕೆ ಸಂಪರ್ಕ ಸಾಧ್ಯವಾಗಿದೆ. ನೂತನ ರಸ್ತೆಯ ಮೂಲಕ ಮನಾಲಿಯಿಂದ ಲೇಹ್ ಪ್ರಯಾಣದ 46 ಕಿ.ಮೀ ಕಡಿಮೆಯಾಗಿದ್ದು ಮಾತ್ರವಲ್ಲದೆ 4 ಗಂಟೆ ಉಳಿತಾಯವಾಗುತ್ತಿದೆ.
ಜೋಜಿಲಾ ಪಾಸ್, ಲಡಾಕಿನ ಭೂಭಾಗದ ವಿಶ್ವದ ಅತಿ ಎತ್ತರದ ರಸ್ತೆಗಳನ್ನು ನಿರ್ಮಿಸಿದ ಕೀರ್ತಿ ಇದೇ BRO ಸಲ್ಲಬೇಕು. ಇಂದು ಹಲವು ಮಂದಿ ಯುವಕರು ಇದೇ ಸಾಹಸಿಕ ರಸ್ತೆಯ ಮೂಲಕ ಬೈಕ್ ರ್ಯಾಲಿಗಳನ್ನು ನಡೆಸುತ್ತಾರೆ. 2021 ರಲ್ಲಿ BRO ಮೂಲಕ ಯಶಸ್ವಿಯಾದ ಅತಿ ಎತ್ತರದ ಉಂಲಿಂಗ್ಲಾ ರಸ್ತೆ ನಿರ್ಮಾಣಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯು ಪ್ರಾಪ್ತಿಯಾಗಿದೆ. ಯುದ್ಧದ ಸಂದರ್ಭ, ಪ್ರಾಕೃತಿಕ ವಿಕೋಪಗಳ ಸಂದರ್ಭ BRO ಪಾತ್ರ ಮಹತ್ತರವಾದುದು. ಭಾರತ ಮಾತ್ರವಲ್ಲದೆ ನೆರೆಯ ದೇಶಗಳಾದ ಅಪಘಾನಿಸ್ಥಾನ ಮತ್ತು ಮಯನ್ಮಾರ್ ಗಳಲ್ಲೂ ಈ ಸಂಸ್ಥೆಯ ಮೂಲಕ ಮಹತ್ವದ ಹೆದ್ದಾರಿ ರಸ್ತೆ ನಿರ್ಮಾಣವಾಗಿದೆ. ಅಪಘಾನಿಸ್ಥಾನದ ದಕ್ಷಣದಲ್ಲಿರುವ ದೇರಲಮ್-ಝರಜಂ ಗಳ ಮಧ್ಯೆ ಹೆದ್ದಾರಿ ನಿರ್ಮಾಣದ ಕಾರ್ಯವೂ ಆಗಿತ್ತು ಮಾತ್ರವಲ್ಲ ಇಂದು ಇದೇ ರಸ್ತೆಯು ಇಂದು ಭಾರತಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ರವಾನೆಗೆ ಸಹಕಾರಿಯಾಗಿದೆ. ಈ ರಸ್ತೆ ಮೂಲಕ ನೇರವಾಗಿ ಇರಾನಿನ ಚಬಹಾರ್ ಬಂದರಿಗೆ ಪೆಟ್ರೋಲಿಯಂ ಉತ್ಪನ್ನಗಳು ರಷ್ಯಾ ಅಪಘಾನಿಸ್ಥಾನವಾಗಿ ತಲುಪುತ್ತವೆ. ಅತಿ ಎತ್ತರದ ಯುದ್ಧ ಭೂಮಿ ಎಂದು ಕರೆಯಲ್ಪಟ್ಟಿರುವ ಸಿಯಾಚಿನ್ ಪ್ರದೇಶದಲ್ಲೂ ಅತಿ ಅಗತ್ಯವಾದ ರಸ್ತೆ ಮತ್ತು ಸೇತುವೆ ಸಹಿತ ಏರ್ ಫೀಲ್ಡ್ ಗಳನ್ನು ಕೂಡಾ BRO ನಿರ್ಮಿಸಿದೆ. ಹಿಮಾಂಕ ಯೋಜನೆಯಡಿ ನಿರ್ಮಿಸಲ್ಪಟ್ಟ ಕ್ಲಾಸರ್-ಸಸೊಮಾ ರಸ್ತೆಯು ನುಬ್ರಾ ಕಣಿವೆಯ ಮೂಲಕ ಸಿಯಾಚಿನ್ ಗೆ ಸಮೀಪವರ್ತಿ ರಸ್ತೆಯಾಗಿ ಕಾರ್ಯನಿರ್ವಹಿಸುತ್ತದೆ. ಕರಾರುವಾಕ್ ಯೋಜನೆಗಳ ರೂಪುರೇಶೆ, ಸಮಯಕ್ಕೆ ಸರಕುಗಳ ರವಾನೆ, ನಾವೀನ್ಯತೆ ಸಹಿತ ಅಗ್ರಶ್ರೇಣೆಯ ಪ್ರಬಂಧಕರು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯು ಗಡಿ ರಸ್ತೆ ಪ್ರಾಧಿಕಾರದ ಕಾರ್ಯಗಳನ್ನು ಅಗ್ರ ಶ್ರೇಯಾಂಕಕ್ಕೆ ತಂದು ನಿಲ್ಲಿಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿ ರಸ್ತೆ ಪ್ರಾಧಿಕಾರ(BRO) ಮೂಲಕ ನಿರ್ಮಾಣ ಹೊಂದಿದ 90 ಮೂಲಸೌಕರ್ಯ ಯೋಜನೆಗಳ ಬಗ್ಗೆ ಇತ್ತೀಚೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಒಟ್ಟು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ವಿಸ್ತರಿಸಲ್ಪಟ್ಟ ಈ ಯೋಜನೆಗಳಿಗೆ ಒಟ್ಟು 2,900 ಕೋಟಿ ರೂ. ವಿನಿಯೋಗಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮಾಜಿಕ ಜಾಲತಾಣದ ಲಿಂಕ್ ಹಂಚಿಕೊಂಡ ಪ್ರಧಾನಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. BRO ಮೂಲಕ ಈ ತನಕ ಒಟ್ಟು 55 ಸಾವಿರ ಕಿ.ಮೀ ರಸ್ತೆ ನಿರ್ಮಾಣಗೊಂಡಿದೆ. 2015 ಕ್ಕೂ ಮುಂಚೆ 50000 ಕಿ.ಮೀ ರಸ್ತೆ ನಿರ್ಮಾಣಗೊಂಡಿತ್ತು. BRO ಮೂಲಕ ದೇಶದ ವಿವಿದೆಡೆಗಳಲ್ಲಿ ಚಾಲ್ತಿಯಲ್ಲಿರುವ ಒಟ್ಟು 18 ಯೋಜನೆ ಅಥವಾ [ಪ್ರಾಜೆಕ್ಟ್ ಗಳಿಗೆ 18 ಪ್ರತ್ಯೇಕ ಹೆಸರುಗಳಿವೆ…. ಅರುಣಕ್, ಬ್ರಹ್ಮಾಂಕ್, ಚೇತಕ್, ದೀಪಕ್, ದಂತಕ್, ಪುಷ್ಪಕ್, ಹಿಮಾಂಕ್, ಶಿವಾಲಿಕ್, ಸ್ವಸ್ತಿಕ್, ಉದಯಕ್, ವರ್ತಕ್, ವಿಜಯಕ್ …. ಇತ್ಯಾದಿ. ಈ ಹೆಸರುಗಳು ಪ್ರಾಂತ್ಯಗಳಿಗೆ ಅನುಸಾರವಾಗಿ ಇಡಲಾಗಿದೆ. ಉದಾಹರಣೆಗೆ ಕಾಶ್ಮೀರದ ಜೋಜಿಲಾ ಸುರಂಗ ಮಾರ್ಗವಾದದು ಬೀಕನ್ ಎಂಬ ಯೋಜನೆ ಹೆಸರಿನಲ್ಲಿ. ಭಾರತ ಮಾತ್ರವಲ್ಲದೆ BRO ಯೋಜನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರುವಾಸಿಯಾಗಿವೆ. ಅಪಘಾನಿಸ್ಥಾನ ಮತ್ತು ಮಯನ್ಮಾರಿನ ಹಲವೆಡೆಗಳಲ್ಲಿ BRO ಮೂಲಕ ಪೂರ್ಣಗೊಂಡ ಯೋಜನೆಗಳು ಅಲ್ಲಿನ ಜನಸಾಮಾನ್ಯರು ಸಹಿತ ಭಾರತಕ್ಕೂ ಅನುಕೂಲವಾಗಿದೆ. ಅಪಘಾನಿಸ್ಥಾನದಲ್ಲಿ ನಿರ್ಮಾಣಗೊಂಡ ರಸ್ತೆ ಸಂಪರ್ಕದಿಂದ ಭಾರತದ ಸರಕುಗಳು ರಷ್ಯಾದಿಂದ ಸುಲಭವಾಗಿ ಅಪಘಾನಿಸ್ಥಾನ ನಂತರ ಇರಾನಿನ ಚಬಹಾರ್ ಬಂದರು ತಲುಪುತ್ತದೆ. ಹೀಗೆ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನ ಸುಗಮತೆಯಲ್ಲೂ BRO ಪಾತ್ರ ಪ್ರಮುಖವಾಗಿದೆ. ಹೀಗೆ ದೇಶದ ಸೈನಿಕ ಶಕ್ತಿಗೆ ಬೆನ್ನೆಲುವಾಗಿ, ಗಡಿ ಗ್ರಾಮವಾಸಿಗಳ ಜೀವನಕ್ಕೆ ಆಸರೆಯಾಗಿ, ಸೂಕ್ತ ಸಮಯಕ್ಕೆ ಸರಕುಗಳನ್ನು ನಿರ್ದಿಷ್ಟ ಸ್ಥಳಗಳಿಗೆ ಪೂರೈಸಲು, ದೇಶದ ಕಾಯುವ ಸೈನಿಕರ ಪಯಣ ಮತ್ತು ಗಡಿ ಪ್ರದೇಶದಲ್ಲಿ ನಿಯೋಜನೆಗೆ, ಇದರ ಜೊತೆಜೊತೆಯಲ್ಲಿ ರಕ್ಷಣಾ ಪಡೆಗಳ ಶಸ್ತ್ರಾಸ್ತ್ರ ರವಾನೆಗೂ ಅನುಕೂಲವಾದ ಸಂಪರ್ಕ ಸೇತುವನ್ನು ನಿರ್ಮಿಸಿ ದೇಶ ರಕ್ಷಣಾ ವ್ಯವಸ್ಥೆಯ ನಾವೀನ್ಯತೆಗೂ ಕಾರಣವಾಗಿರುವ ಬಿ.ಆರ್.ಒ ಕೀರ್ತಿ ಇನ್ನಷ್ಟೂ ಎತ್ತರಕ್ಕೆ ಏರಲಿ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.