ಬೆಳ್ತಂಗಡಿ : ರಾಜ್ಯದಲ್ಲಿ ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ಜನರನ್ನು ಕತ್ತಲೆಯಲ್ಲಿರಿಸಿರುವ ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಹಾಗೂ ಅಸಮರ್ಪಕ ವಿದ್ಯುತ್ ಸರಬರಾಜು ಖಂಡಿಸಿ ಬೆಳ್ತಂಗಡಿ ಮಂಡಲ ಬಿಜೆಪಿ ವತಿಯಿಂದ ಮೆಸ್ಕಾಂ ಕಚೇರಿಗೆ ಜಾಥಾ ನಡೆಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಬೆಳ್ತಂಗಡಿ ನಗರದಲ್ಲಿರುವ ಬಿಜೆಪಿ ಕಚೇರಿ ಬಳಿಯಿಂದ ಜಾಥಾ ಹೊರಟ ಬಿಜೆಪಿ ಕಾರ್ಯಕರ್ತರು ಸಂತೆಕಟ್ಟೆಯಲ್ಲಿರುವ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ರಂಜನ್ ಜಿ. ಗೌಡ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರ್ಚಿ ಭಾಗ್ಯ ಉಳಿಸಿಕೊಳ್ಳವ ಉದೇಶದಿಂದ ಜನತೆಗೆ ಕತ್ತಲು ಭಾಗ್ಯ ನೀಡಿದ್ದಾರೆ. ಅವರೊಂದಿಗೆ ಮೆಸ್ಕಾಂ ಇಲಾಖೆಯೂ ಸೇರಿಕೊಂಡಿದೆ. ಬೆಳ್ತಂಗಡಿಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲೂ ಕತ್ತಲೆ ಭಾಗ್ಯ ಮಾಡಿ ರಾಜಕೀಯವನ್ನು ಮಾಡಿದೆ. ಗಣಪತಿಯ ವಿಸರ್ಜನೆಯ ಸಂದರ್ಭ ವಿದ್ಯುತ್ ನಿಲುಗಡೆ ಮಾಡಿರುವುದು ಸರಿಯಲ್ಲ. ಈ ರೀತಿಯ ರಾಜಕೀಯ ಸಲ್ಲ ಎಂದ ಅವರು, ಈಗಾಗಲೇ ಸರಕಾರ ರಾಜ್ಯವನ್ನು ಕತ್ತಲೆಯಲ್ಲಿಟ್ಟು ರೈತರ ಬಾಳಿನಲ್ಲಿ ಆಟವಾಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆ, ನೇತ್ರಾವತಿ ತಿರುವು ಮಾಡುವುದರಿಂದ ಜಿಲ್ಲೆಯ ರೈತರು ನೀರಿಲ್ಲದೆ ಬದುಕುವ ಸ್ಥಿತಿ ಬರಬಹುದು. ಸರಕಾರವನ್ನು ಎಚ್ಚರಿಸಬೇಕಾದರೆ ಜಿಲ್ಲೆಯ ಶಾಸಕರುಗಳು ರಾಜೀನಾಮೆ ನೀಡಿ ಜನರೊಂದಿಗೆ ಸೇರಿಕೊಳ್ಳಲಿ. ಇನ್ನಾದರೂ ಕುರ್ಚಿಯ ಆಸೆ ಬಿಟ್ಟು ನಿದ್ದೆಯಿಂದ ಎಚ್ಚೆತ್ತು ರಾಜ್ಯದ ಜತೆಯನ್ನು ಕತ್ತಲೆ ಭಾಗ್ಯದಿಂದ ಹೊರತರಲಿ ಎಂದರು.
ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಜನಪ್ರತಿನಿಧಿಗಳು ತಮ್ಮ ಕರ್ತವ್ಯ ಮರೆತರೆ ಜನರ ಸ್ಥಿತಿ ಅಧೋಗತಿಯತ್ತ ಸಾಗಬಹುದು. ಕತ್ತಲೆ ಭಾಗ್ಯ ಈಗೀನ ಸರಕಾರದ ಆಡಳಿತದಲ್ಲಿ ಮಾತ್ರ ಇಂತಹ ಪರಿಸ್ಥಿತಿ ಬಂದೊಂದಗಿದ್ದು. ಈಗಾಗಲೇ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಇನ್ನು ಬೇಸಿಗೆಯಲ್ಲಿ ವಿದ್ಯುತ್ ಇರಬಹುದೇ ಎಂಬ ಅನುಮಾನ ಕಾಡುತ್ತಿದೆ. ಹಿಂದಿನ ಸರಕಾರಗಳು ಖರೀದಿ ಮಾಡಿ ವಿದ್ಯುತ್ ನೀಡುತ್ತಿದ್ದರು. ಮೂಲಭೂತ ಸೌಕರ್ಯವನ್ನೇ ಕೊಡಲಾಗದ ಸರಕಾರ ಆಡಳಿತ ನಡೆಸುತ್ತಿದೆ ಎಂದ ಅವರು ಸಿಎಂ ಅವರು ಕುರ್ಚಿಗೆ ಅಂಟಿಕೊಂಡಿದ್ದರೆ ಇಂಧನ ಸಚಿವರು ದೇವರೇ ಗತಿ ಎನ್ನುತ್ತಿದ್ದಾರೆ. ನಮ್ಮ ತಾಲೂಕಿನ ಶಾಸಕರು ಇನ್ನು ಎಚ್ಚೆತ್ತು ಕೊಂಡಿಲ್ಲ. ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇನ್ನಾದರೂ ಇದರ ಬಗ್ಗೆ ಮಾತನಾಡಲಿ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕತ್ತಲೆ ಭಾಗ್ಯದಿಂದ ರೈತರು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ಇನ್ನಾದರೂ ಸರಕಾರ ಸಂಪುಟ ಪುನರ್ ರಚನೆ ಮಾಡುವ ಬದಲು ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸಲಿ ಎಂದರು.
ಬೆಳ್ತಂಗಡಿ ಮಂಡಲ ಅಧ್ಯಕ್ಷ ಬಾಲಕೃಷ್ಣ ವಿ. ಶೆಟ್ಟಿ, ಕಾರ್ಯದರ್ಶಿಗಳಾದ ಸೀತಾರಾಮ ಬಿ.ಎಸ್., ಜಯಂತ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಶಾರದ ರೈ, ತಾಪಂ ಅಧ್ಯಕ್ಷೆ ಜಯಂತಿ ಪಾಲೇದು, ಉಪಾಧ್ಯಕ್ಷ ವಿಷ್ಣು ಮರಾಠೆ, ಜಿಪಂ ಸದಸ್ಯರಾದ ಕೊರಗಪ್ಪ ನಾಯ್ಕ್, ಸಿ.ಕೆ. ಚಂದ್ರಕಲಾ, ಧನಲಕ್ಷ್ಮೀ, ತಾಪಂ ಸದಸ್ಯರಾದ ಕೇಶವ ಎಂ., ಸುಧೀರ್ ಸುವರ್ಣ, ಮಮತಾ ಶೆಟ್ಟಿ, ಮಂಜುನಾಥ ಸಾಲ್ಯಾನ್, ಗೀತಾ ರಾಮಣ್ಣ ಗೌಡ, ಸಂತೋಷ್, ಸರೋಜಿನಿ ಮುಖಂಡರುಗಳಾದ ಪದ್ಮನಾಭ ಅರ್ಕಜೆ, ಸದಾನಂದ ಉಂಗಿಲಬೈಲು, ರಾಘವ ಕಲ್ಮಂಜ, ಲಿಂಗಪ್ಪ ನಾಯ್ಕ್, ಭಾಸ್ಕರ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಟನಾಕಾರರು ಮೆಸ್ಕಾಂ ಕಚೇರಿಗೆ ಬೀಗ ಜಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರಭಾಕರ ಉಪ್ಪಡ್ಕ ಪ್ರಾಸ್ತಾವಿಸಿ, ಸ್ವಾಗತಿಸಿದರು. ನಾರಾಯಣ ಆಚಾರ್ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.