ಬೆಂಗಳೂರು: ನಾರಾಯಣ ನಾರಾಯಣ ಎಂದು ಮೂರು ಲೋಕಗಳನ್ನು ಸುತ್ತಿ ಮಾಹಿತಿಯನ್ನು ಶೇಖರಿಸಿ, ಹಂಚಿಕೊಳ್ಳುತ್ತಿದ್ದವರು ದೇವ ಋಷಿ ನಾರದರು. ನಾರದರನ್ನು ಮುನಿ, ಮಹರ್ಷಿ ಎಂದೂ ಸಂಬೋಧಿಸಲಾಗುತ್ತದೆ. ಉತ್ತಮ ಸಂವಾಹಕರಾಗಿ, ಹಾಸ್ಯ ಪ್ರಜ್ಞೆಯುಳ್ಳವರಾಗಿ, ಮಹಾ ತಪಸ್ವಿಯಾಗಿ, ಭಕ್ತಿಯ ಅನ್ವರ್ಥವಾಗಿಯೂ ಇವರನ್ನು ಕಾಣಲಾಗುತ್ತದೆ. ಸಂಚಾರಿಯಾಗಿ, ಕಥೆಗಾರರಾಗಿ, ಸಂಗೀತಜ್ಞರಾಗಿ ಹಾಗೆಯೇ ಜ್ಞಾನ ಪ್ರಭೆಯ ಪ್ರವಹಕರಾಗಿಯೂ ನಾರದ ಮುನಿಯನ್ನು ಗೌರವಿಸಲಾಗುತ್ತದೆ. ಪುರಾಣಗಳ ಪ್ರಕಾರ ಇವರು ಬ್ರಹ್ಮನ ಮಾನಸ ಪುತ್ರ. ಹಿಂದೂ ಧರ್ಮದ ಹಲವು ಪುರಾಣಗಳಲ್ಲಿ ಇವರ ಉಲ್ಲೇಖವಿದೆ ಮಾತ್ರವಲ್ಲ ವಿಷ್ಣುವಿನ ಪರಮ ಭಕ್ತರಾಗಿಯೂ ನಾರದರನ್ನು ಸ್ಮರಿಸಲಾಗುತ್ತದೆ. ಭಕ್ತಿ ಪಂಥದ ಉಗಮಕ್ಕೂ ನಾರದರೇ ಕಾರಣೀಭೂತರು ಮತ್ತು ಪ್ರೇರಣೆಯೂ ಹೌದು. ಕೀರ್ತನೆ, ಸ್ಮರಣೆ, ಪ್ರಾರ್ಥನೆಯ ಮೂಲಕ ವೀಣೆ ಹಿಡಿದು ದೇವನಾಮವನ್ನು ಸ್ಮರಿಸಿ ಮಾತಿಗೆ ಇಳಿಯುತ್ತಿದ್ದ ನಾರದರು ತ್ರಿಕಾಲ ಜ್ಞಾನಿಯೂ ಆಗಿದ್ದರು.
ನಾರದರ ಸಂವಹನ ಜ್ಞಾನ, ಮಾಹಿತಿ ಶೇಖರ, ಅದನ್ನು ಸೃಜಿಸುವ ರೀತಿ ಮತ್ತು ಒಳಿತಿಗೆ ಕಾರಣವಾಗುವ ಇವರ ಕ್ರಿಯಾಶೀಲತೆ ಸ್ಮರಣೀಯ. ಕೆಲ ಸಾಂದರ್ಭಿಕ ಕೆಡಕುಗಳಿಗೆ ಉತ್ತರ ಹುಡುಕುವ ಮತ್ತು ಒಳಿತನ್ನು ಮಾಡುವ ಇವರ ಪ್ರಯತ್ನ ಪುರಾಣಗಳಿಂದ ವ್ಯಕ್ತವಾಗುತ್ತದೆ. ಹಲವು ಭಾರತೀಯ ಪುರಾಣಗಳಲ್ಲಿ, ಭಾರತೀಯ ದರ್ಶನಗಳಲ್ಲಿ ಪುನರ್ಜನ್ಮದ ಉಲ್ಲೇಖ ಬರುತ್ತದೆ. ಬೌದ್ಧ ಜಾತಕಗಳಲ್ಲೂ ಬುದ್ಧನ ಜನ್ಮದ ಹಿಂದೆಯೂ ಪಂಚ ಮಹಾಬೌದ್ಧರು ಇದ್ದರು ಎಂಬ ಉಲ್ಲೇಖವೂ, ಜಾತಕ ಕಥೆಗಳಲ್ಲಿ ಬುದ್ಧನು ಆ ಹಿಂದೆಯೇ ಹಲವು ಅವತಾರಗಳನ್ನು ಎತ್ತಿದ್ದ ಎಂಬ ಕಥೆಗಳು ಇವೆ. ರಾಮಪಂಡಿತ, ನಂದೀಯನೆಂಬ ಜಿಂಕೆ, ಮಹಾಕಪಿ ಜಾತಕಗಳು ಆತನ ಹಿಂದಿನ ಜನ್ಮದ ವ್ಯಾಖ್ಯಾನವನ್ನು ನೀಡುತ್ತದೆ. ವಿಷ್ಣು ದೇವ ಕೂಡಾ ಅವತಾರಿ ಪುರುಷ, ಆತನ ಉಲ್ಲೇಖವು ಮಹಾಭಾರತದಲ್ಲಿ ಬಂದಿದೆ. ಶ್ರೀಕೃಷ್ಣನು ತನ್ನ ಹುಟ್ಟಿನ ರಹಸ್ಯವನ್ನು ದಶಾವತಾರದ ಮೂಲಕ ತೋರಿಸಿದ ಕಥೆಯೂ ಇದಕ್ಕೆ ಪುಷ್ಠಿ ನೀಡುತ್ತದೆ. ಹಾಗೆಯೇ ವಿಷ್ಣು ಭಕ್ತ ನಾರದರ ಕಥೆಯೂ ಹೀಗೆ ಇದೆ. ಹಿಂದಿನ ಜನ್ಮದಲ್ಲಿ ನಂದನೆಂಬ ಸೇವಕನಾಗಿದ್ದ ನಾರದರು, ವಿಷ್ಣುವಿನಲ್ಲಿ ಅನನ್ಯ ಭಕ್ತಿಯನ್ನು ಇರಿಸಿದ್ದರು ಮತ್ತು ಕಾಲನ ಮಹಿಮೆಯ ಕಾರಣ ಸ್ಥಿತಿಕಾರಕ ವಿಷ್ಣುವಿನ ತಪಸ್ಸಿನಲ್ಲಿ ಕಾಲಕಳೆದ ಪರಿಣಾಮ ವಿಷ್ಣು ಭಕ್ತನಾಗಿಯೇ ಅವತರಿಸಿದರು ಎಂಬ ಉಲ್ಲೇಖ ಬರುತ್ತದೆ. ಅರಿಷಡ್ವೈರಿಗಳನ್ನು ಹಿಮ್ಮೆಟ್ಟಿಸಿದ್ದ ನಾರದರು ಭಕ್ತಿಯ ಸಾಕಾರಮೂರ್ತಿ ಎಂದರೆ ತಪ್ಪಾಗಲಾರದು.
ಪ್ರತಿ ವರ್ಷ ನಾರದ ಜಯಂತಿ ದಿನ ವಿಶ್ವ ಸಂವಾದ ಕೇಂದ್ರವು ಕನ್ನಡ ಪತ್ರಕರ್ತರನ್ನು ಗೌರವಿಸುವ ಪರಿಪಾಠವನ್ನಿರಿಸಿದೆ. ಒಂದು ಲೆಕ್ಕಾಚಾರದಲ್ಲಿ ನಾರದರು ಆ ಕಾಲದ ಪತ್ರಕರ್ತರೆ ಸರಿ! ಕರಾರುವಾಕ್ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ನಾರದ ಮಹರ್ಷಿಗಳು ಸಂಭಾವ್ಯ ಸಂಘರ್ಷಗಳನ್ನು ಇಲ್ಲವಾಗಿಸಿ ಸಮತುಲಿತ ಶಾಂತಿ ಸಮಾಧಾನಕ್ಕೆ ಕಾರಣವಾಗುತ್ತಿದ್ದರು ಮಾತ್ರವಲ್ಲ ಸಂಧಾನ, ಮೈತ್ರಿಯ ಮೂಲಕ ಶಾಂತಿಯನ್ನು ಸ್ಥಾಪಿಸಲು ಕಾರಣವಾಗುತ್ತಿದ್ದರು. ಸಮಾಜದ ಅಂಕುಡೊಂಕುಗಳನ್ನು ಹೇಗೆ ಪತ್ರಕರ್ತ ಸರಿ ಮಾಡುತ್ತಾನೋ ಹಾಗೆ ಮುನಿ ನಾರದರು ಅಂದಿನ ವ್ಯವಸ್ಥೆಯ ಸುಸ್ಥಿತಿಗೆ ಕಾರಣರಾಗಿದ್ದರು. ನಾರದ ಮುನಿಯ ಕರ್ತವ್ಯ ಪರತೆಯಿಂದ ಭಕ್ತಿಯು ಸೃಜಿಸಿ ಉತ್ತಮತೆ ರೂಪುಗೊಳ್ಳುತ್ತಿತ್ತು. ರಾಕ್ಷಸಿ ಪ್ರವೃತ್ತಿಯು ಇಲ್ಲವಾಗಿ ಎಲ್ಲಡೆಯೂ ದೈವತ್ವದ ಪ್ರತಿಫಲನವಾಗುತ್ತಿತ್ತು. ಇಷ್ಟು ಮಾತ್ರವಲ್ಲದೆ ಮಾಹಿತಿಯ ಪ್ರತಿಫಲನವಾಗುತ್ತಿತ್ತು. ಮಾಡೋ ಕೆಲಸದಲ್ಲಿ ಭಕ್ತಿ ಶ್ರದ್ಧೆಯ ಸ್ಪುರಣಕ್ಕೆ ಕಾರಣವಾಗಿ ಉತ್ತಮತೆ ಅನುರಣಿಸುತ್ತಿತ್ತು. ಹಾಗೆಯೇ ಇಂತಹ ಮಹಾನ್ ಸಂವಾಹಕನ ಜಯಂತಿಯಂದು ಉತ್ತಮ ಪತ್ರಕರ್ತ ಎಂದು ಗುರುತಿಸಿಕೊಂಡ ವ್ಯಕ್ತಿಗಳಿಗೆ ವಿಶ್ವ ಸಂವಾದ ಕೇಂದ್ರವು ಪ್ರತಿ ವರ್ಷದಂತೆ ಈ ಬಾರಿಯೂ ಆದರಿಸುತ್ತಿದೆ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುತ್ತಿರುವ ಪತ್ರಕರ್ತರನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ವಿಶ್ವ ಸಂವಾದ ಕೇಂದ್ರ ಕಳೆದ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ವಿ ಎಸ್ ಕೆ ಕೊಡಮಾಡುವ ಈ ವರ್ಷದ ಮಾಧ್ಯಮ ಪ್ರಶಸ್ತಿಗಳು ಪ್ರಕಟವಾಗಿವೆ. ಜೂನ್ 25 ರಂದು ಪ್ರಶಸ್ತಿ ಪ್ರದಾನ ಸಮಾರಂಭ, ಬೆಂಗಳೂರಿನ ಬಿ ಎಂ ಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ಡಾ. ನಿರಂಜನ ವಾನಳ್ಳಿ ಹಾಗೂ ಶ್ರೀ ನಾ. ತಿಪ್ಪೇಸ್ವಾಮಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಪ್ರಶಸ್ತಿಗೆ ಭಾಜನರಾದ ಪತ್ರಕರ್ತರ ಪಟ್ಟಿ ಇಂತಿದೆ :
ಶ್ರೀ ರವಿಪ್ರಕಾಶ್ ಎಸ್, ಪ್ರಜಾವಾಣಿ, ಬೆಂಗಳೂರು
ಶ್ರೀ ಜಯಪ್ರಕಾಶ್ ಶೆಟ್ಟಿ, ಸುವರ್ಣ ನ್ಯೂಸ್, ಬೆಂಗಳೂರು
ಶ್ರೀ ಎಂ ಶ್ರೀನಿವಾಸನ್, ಅಜೇಯ, ಶಿವಮೊಗ್ಗ
ಶ್ರೀ ಹೆಬ್ರಿ ಬಾಲಕೃಷ್ಣ ಮಲ್ಯ, ಹೊಸದಿಗಂತ, ಮಂಗಳೂರು
ಶ್ರೀ ಕಾ. ರಮಾನಂದ ಆಚಾರ್ಯ, ವಿಕ್ರಮ ವಾರಪತ್ರಿಕೆ, ಬೆಂಗಳೂರು
ಶ್ರೀ ಎಂ ಎಸ್ ರಾಘವೇಂದ್ರ, ಮೀಡಿಯಾ ಮಾಸ್ಟರ್ಸ್, ಬೆಂಗಳೂರು
ಹೆಚ್ಚಿನ ಮಾಹಿತಿಗಾಗಿ: 8197306857, 9945242996
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.