ಕಲಿತ ವಿದ್ಯೆಯ ಲಾಭವಾಗಬೇಕಾದಲ್ಲಿ ಊರು ಬಿಡಲೇಬೇಕೆಂಬುದು ಅಘೋಷಿತ ನಿಯಮ. ಆದರೆ ಕಲಿತ ವಿದ್ಯಯನ್ನು ಬಳಸಿ ಸ್ವಂತ ಸ್ಥಾನದಲ್ಲಿದೇ ವಿಶಿಷ್ಟ ಕಾರ್ಯ ಮಾಡುವವರ ಸಂಖ್ಯೆ ವಿರಳ. ಅಂತಹ ವಿರಳರ ಪಟ್ಟಿಯಲ್ಲಿ ನಿರಂಜನಗೌಡ ಖಾನಗೌಡರ ಕೂಡ ಸೇರುತ್ತಾರೆ.
ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಹೆಳವ ತರ್ಲಗಟ್ಟ ಗ್ರಾಮದ ನಿರಂಜನ ತನ್ನ ಸ್ನಾತಕ ಶಿಕ್ಷಣದ ನಂತರ ತನ್ನ ಆಸಕ್ತಿಯ ವಿಷಯವಾದ ಖಗೋಳಶಾಸ್ತ್ರದಲ್ಲಿ ಹೈದರಾಬಾದಿನ ಒಸ್ಮಾನಿಯಾ ವಿಶ್ವಾವಿದ್ಯಾಲಯದಲ್ಲಿ ಖಗೋಳಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಮರಳಿ ತನ್ನ ಗ್ರಾಮಕ್ಕೆ ವಾಪಸ್ಸಾದ. ಪರಿವಾರದ ಮೂಲ ಕಸಬು ಕೃಷಿ. ಮಲೆನಾಡಿನ ಕಾಡಿನಂಚಿಗೆ ಹೊಂದಿಕೊಂಡುರುವ 60 ಎಕರೆ ತೋಟ, ಬೆಟ್ಟ ಹಾಗೂ ಹೊಲ. ಈ ಸುಂದರ ಪ್ರದೇಶದಲ್ಲಿ ಮೂಲ ಕೃಷಿ ಕಾರ್ಯವನ್ನು ಮಾಡುತ್ತಲೇ ತನ್ನ ಆಸಕ್ತಿಯ , ಖುಷಿಯ ವಿಷಯವಾದ ಖಗೋಳ ಶಾಸ್ತ್ರದ ಒಂದು ಕನಸನ್ನು ಸಾಕಾರಗೊಳಿಸಲು ಕಾರ್ಯಪ್ರವೃತ್ತನಾದನು. ಆಗ ಹೊರಹೊಮ್ಮಿದ್ದೇ ’Interstellar Astro Farm’. ಬಹುಶಃ ಭಾರತದಲ್ಲೇ ವಿರಳ ಮತ್ತು ಕರ್ನಾಟಕದ ಮೊದಲ ಆಸ್ಟ್ರೋಫಾರ್ಮ್ ಇದಾಗಿದೆ ಎನ್ನಬಹುದು. ಇದು ನಮ್ಮ ಭಾಗದಲ್ಲಿ ಎನ್ನಬಹುದಾದ ವಿಶಿಷ್ಟವಾದ ಪ್ರವಾಸೋದ್ಯಮದ ಸ್ಟಾರ್ಟಪ್.
ಸ್ವಚ್ಚಂದ ಆಗಸವನ್ನು ನೋಡುತ್ತ ಅಲ್ಲಿರುವ ನಕ್ಷತ್ರಪುಂಜಗಳು, ಗ್ಯಾಲೆಕ್ಸಿ, ಚಂದ್ರ, ಇತರ ಗ್ರಹಗಳನ್ನು ತೋರಿಸುವ ಚಟುವಟಿಕೆಯೇ ಈ ಆಸ್ಟ್ರೋಫಾರ್ಮಿನ ವೈಶಿಷ್ಟ್ಯ. ಸುಂದರವಾದ ಪರಿಸರದಲ್ಲಿ ಪರಿಸರಸ್ನೇಹಿಯಾದ ಸಿಂಪಲ್ ನಿರ್ಮಾಣದಲ್ಲಿ ಈ ಫಾರ್ಮ ನಿಜವಾಗಿಯೂ ಮನುಷ್ಯನಿಗೆ ಬೇಕಾದ ಪ್ರಶಾಂತತೆ ಹಾಗೂ ಆಗಸದಾಚೆಯ ಬಗ್ಗೆಯ ಆತನ ಕೌತುಕವನ್ನು ತಣಿಸುತ್ತದೆ.
ಆಸಕ್ತರು ಸಂಜೆಗೆ ಆಗಮಿಸಿದರೆ ಒಂಡಿಷ್ಟು ಆಟೋಟ, ತಿಂಡಿ ತಿನಸಿನ ನಂತರ ಕತ್ತಲಾಗುತ್ತಿದ್ದಂತೆ ಖಗೋಳಶಾಸ್ತ್ರದ ಲೋಕಕ್ಕೆ ಪ್ರವೇಶ. ಇಲ್ಲಿನ ಎತ್ತರದ ಪ್ರದೇಶದಲ್ಲಿರುವ ಸ್ಥಾನದಲ್ಲಿ ಅಜಾನುಬಾಹು ಗಾತ್ರದ ಟೆಲಿಸ್ಕೋಪಗಳು ಬಂದು ನಿಲ್ಲುತ್ತವೆ. ಎಲ್ಲವೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ಉಪಕರಣಗಳು. ಒಂದಿಷ್ಟು ಪ್ರಾಥಮಿಕ ಮಾಹಿತಿಗಳ ಹಂಚಿಕೆಯ ನಂತರ ಹೊರಾಂಗಣ ಭೋಜನ ಕಾರ್ಯಕ್ರಮ. ಇದಾದ ನಂತರ ಬೆಳಗಿನವರೆಗೂ ಆಗಸದ ಕೌತುಕಗಳ ವೀಕ್ಷಣೆ. ಮಧ್ಯೆ ಚಾ, ಕಾಫಿ ಇರಲಿದೆ.
ಹೀಗೆ ರಾತ್ರಿ ಕಳೆದು ನಸುಕಿನಲ್ಲಿ ಒಂದಿಷ್ಟು ವಿಶ್ರಾಂತಿಯ ನಂತರ ಉಪಹಾರ ಸ್ವೀಕರಿಸಿ ನೆನಪುಗಳೊಂದಿಗೆ ನಾವು ನಮ್ಮ ಊರುಗಳಿಗೆ ಮರಳಬಹುದು. ನವೆಂಬರ್ ತಿಂಗಳಿಂದ ಮೇ ಅಂತ್ಯದವರೆಗೆ ಉತ್ತಮ ಸೀಸನ್. ನಂತರವೂ ಕೂಡ ಇಲ್ಲಿನ ಪರಿಸರ ಸವಿಯಲು ಉತ್ತಮ ಸ್ಥಾನವೇ ಇದು.
ಆಸಕ್ತಿಯನ್ನೇ ಉದ್ಯೋಗವಾಗಿಸಿಕೊಂಡಿರುವ ನಿರಂಜನ್ ನಗುತ್ತ ಹೇಳತಾರೆ ’ನಾವು ನಿಜವಾದ ನಕ್ಷತ್ರ ತೋರಸೋರು..ಅಂತ. ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ನಿರಂಜನ ಅವರ ಕನಸಿನ ಆಸ್ಟ್ರೋ ಫಾರ್ಮ್ ಕೇವಲ ಒಂದು ಉದ್ಯೋಗ ಅಂತ ನೋಡದೇ, ಪ್ರವಾಸಿತಾಣ ಅಂತ ನೋಡದೇ ಅದೊಂದು ಪ್ರತ್ಯಕ್ಷ ಶಿಕ್ಷಣದ ಕೇಂದ್ರ ಅಂತ ನೋಡಬೇಕೆಂಬುದು ನಿರಂಜನ ಅವರ ಅಭಿಪ್ರಾಯ.
ಇದು ಎಲ್ಲ ವಯಸ್ಸಿನವರಿಗೂ ನಲಿಯುತ್ತ ಕಲಿಯುವ ಅವಕಾಶ ನೀಡುವ ಪ್ರವಾಸಿ ಕೇಂದ್ರ. ಸುತ್ತಲಿನ ಪರಿಸರಕ್ಕೆ ಒಂದಿಷ್ಟು ಹಾನಿ ಮಾಡದೇ ಮೂಲ ಕೃಷಿಯನ್ನು ಉಳಿಸಿಕೊಂಡು ತನ್ನ ಖುಷಿಗೂ ಸ್ಥಾನ ಮಾಡಿಕೊಂಡು ಜನ್ಮಭೂಮಿಯನ್ನೇ ಕರ್ಮಭೂಮಿಯನ್ನಾಗಿಸಿಕೊಂಡಿರುವ ನಿರಂಜನ ಖಾನಗೌಡ್ರ ಇಂದಿನ ಯುವಕರಿಗೆ ಪ್ರೇರಣೆ.
ಲೇಖನ : ಅಮೃತ ಜೋಶಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.