ಅವರೊಂದು ವ್ಯಕ್ತಿಯಲ್ಲ, ವ್ಯಕ್ತಿತ್ವವೂ ಅಲ್ಲ, ಅಹುದು ಅವರೊಂದು ಪರಂಪರೆ. ನಾಲ್ಕು ಸಾಲು, ನಲವತ್ತು ಪದಗಳಲ್ಲಿ ಕಟ್ಟಿಕೊಡಲಾಗದ ಇತಿಹಾಸ ಅವರು. ಭಟ್ಟಾರಕ ಸಂಕುಲದ ಅಕಳಂಕ ಜ್ಯೋತಿ ಕುರಿತು ತಿಲದಷ್ಟು ತಿಳಿಸಲು ಕೂತದ್ದೆನೋ ಸರಿ, ಆದರೆ ಎದೆಯೊಳಗಿನ ಪದಗಳು ಉಸಿರು ಬಿಗಿ ಹಿಡಿದು ಕುಳಿತಿವೆ. ಕಟ್ಟಿಕೊಂಡ ದುಃಖ ಹೊರ ಚೆಲ್ಲಿದರೆ ಎಂಬ ಆತಂಕವಿರಲೂ ಸಾಕು. ಬೆಳಗೊಳದ ಬಾಗಿಲಲಿ ತುಳುನಾಡಿನ ತರುಣ ನಿಂತಾಗ ಇಪ್ಪತ್ತು ವಸಂತಗಳ ಕಂಡಾಗಿತ್ತು. ಅಂದು ಮಹಾವೀರ ತೀರ್ಥಂಕರರ ಜನುಮೋತ್ಸವ. ಎದುರಿಗೆ ಗಿರಿಯಷ್ಟು ಜವಾಬ್ದಾರಿ, ಮನದಲ್ಲಿ ಅಪರಿಮಿತ ಜಿನ ಭಕ್ತಿ. ಬಹುಷಃ ಆ ಶಕ್ತಿ ಅದೇ ಹನ್ನೊಂದು ವರುಷಗಳಲಿ ಕಂಡ ಸಹಸ್ರಮಾನದ ಮಸ್ತಕಾಭಿಷೇಕದಂತಹ ಬೃಹತ್ ಸತ್ಕಾರ್ಯವನ್ನು ಅನೂಚಾನವಾಗಿ ನೆರವೇರಿಸಿತ್ತು. ಅಷ್ಟೊಂದು ಹೇಳತೀರದ ಜವಾಬ್ದಾರಿಗಳ ಎಡೆಯಲ್ಲಿ ಕನ್ನಡದ ಔನತ್ಯಕ್ಕೆ ಜೊತೆಯಾದದ್ದು ಅವರ ಹಿರಿತನಕ್ಕೆ ಸಾಕ್ಷಿ. ಅದೂ ಒಮ್ಮೆಯಲ್ಲ, ಎರಡು ಬಾರಿಯಲ್ಲ. ಅವಕಾಶ ಸಿಕ್ಕಾಗೆಲ್ಲ ಕನ್ನಡ ಎಂದಾಗೆಲ್ಲ ಗುರುವರ್ಯರ ಚಿತ್ತ ಸದಾ ಮುಂದು. ಅವರ ವರ್ಣಿಸಲು ಕುಳಿತರೆ ಕೀರ್ತಿ ಎಂಬ ಪದವೂ ಕ್ಷೀಣವಾಗುತ್ತದೆ. ನಾಲ್ಕು ದಿಕ್ಕುಗಳ ಮೀರಿ ಅವರು ಜ್ಞಾನವನ್ನು, ಅಕ್ಷರದ ದಾಸೋಹವನ್ನು ಅವಿರತವಾಗಿ ಹರವಿ ನಿಂತಾಗ ಅವರೇ ಒಂದು ಸಾಕ್ಷಾತ್ ಪರಂಪರೆಯಾಗಿ ಬಿಡುತ್ತಾರೆ. ಸಾರ್ಥಕ ಬದುಕಿನ ಸಂಕಲ್ಪವನ್ನು ಮುಗಿಸಿ ಅವರು ಜಿನನೂರಿಗೆ ತೆರಳಿದ್ದಾರೆ. ಅವರು ಪರಮಾರ್ಥಿಕ ಮೋಕ್ಷಕ್ಕೆ ಸಾಗಿದರೂ ಅನಂತ ಭಕ್ತಸಂಕುಲ ಶೋಕದಲ್ಲಿ ಮುಳುಗಿದೆ. ಸ್ವಸ್ತಿಶ್ರೀ ಭಟ್ಟಾರಕರ ಪಾದಗಳಿಗೆ ಈ ಪದಮಾಲೆ.
ಅದು ಎಪ್ಪತ್ತರ ದಶಕದ ಉತ್ತರಾರ್ಧ, ತೀರ್ಥಂಕರ ಮಹಾವೀರರ ಜನುಮ ಜಯಂತಿ. ಇಪ್ಪತ್ತೊಂದರ ತರುಣನ ಹೆಗಲ ಮೇಲೆ ಐತಿಹಾಸಿಕ ಕ್ಷೇತ್ರದ ಜವಾಬ್ದಾರಿ ಬಂದಿತು. ದುಃಖದ ಸಂಗತಿ ಎಂದರೆ ಪೂಜ್ಯರು ಅಗಲಿದಾಗ ಇನ್ನೊಂದು ಮಹಾವೀರ ಜಯಂತಿಗೆ ಬೆರಳೆಣಿಕೆಯ ದಿನಗಳಷ್ಟೇ ಉಳಿದಿದ್ದವು. ಸುಮಾರು ಐವತ್ತು ವರ್ಷಗಳನ್ನು ಮೀರಿದ ಅವರ ಅವಧಿಯಲ್ಲಿ ನಾಲ್ಕು ಮಹಾಮಸ್ತಕಾಭಿಷೇಕಗಳನ್ನು ಯಶಸ್ವಿಯಾಗಿ ನಡೆಸಿದ್ದರು.
ಅದಕ್ಕೂ ಮೊದಲು ಸಂಕ್ಷಿಪ್ತ ಪರಿಚಯ ಹೇಳುವುದಾದರೆ ಮೇ 3, 1949 ರಂದು ಕಾರ್ಕಳದ ವರಂಗದಲ್ಲಿ ಜನನ. ಪೂರ್ವಾಶ್ರಮದ ಹೆಸರು ರತ್ನವರ್ಮ. ತಂದೆ ಚಂದ್ರರಾಜ ಇಂದ್ರ, ತಾಯಿ ಶ್ರೀಕಾಂತಮ್ಮ. ಐದನೇ ತರಗತಿ ಓದಿದ್ದು. ದೀಕ್ಷೆ ಪಡೆದಿದ್ದು 1969 ರ ಡಿಸೆಂಬರ್ 12 ರಂದು. ಮುಂದೆ ಜಗತ್ತು ಕಂಡ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬರು ಚಂದ್ರಗುಪ್ತ ಮೌರ್ಯ ದೀಕ್ಷೆ ಪಡೆದ ನಾಡಾದ ಬೆಳಗೊಳದ ಜವಾಬ್ದಾರಿ ಹೊತ್ತರು. ಉಸ್ತುವಾರಿ ಹೊತ್ತ ಹನ್ನೊಂದು ವರ್ಷಗಳಷ್ಟೇ ಕಳೆದಿದ್ದವು. ಆಗ ಎದುರಾಗಿದ್ದು ಸಹಸ್ರಮಾನದ 1980 ರ ಮಹಾಮಸ್ತಕಾಭಿಷೇಕ. ಅಲ್ಲೂ ಯಶಸ್ಸು, 1993 ರಲ್ಲಿ ಎರಡನೆಯ ಮಹಾಮಸ್ತಕಾಭಿಷೇಕ ಅಲ್ಲಿಯೂ ಪ್ರಾಕೃತದ ಉದ್ಘೋಷ. ಇನ್ನು 2006 ರಲ್ಲಿ ಭಾರತದ ರಾಷ್ಟ್ರಪತಿಗಳು ದಿವಂಗತ ಎಪಿಜೆ ಅಬ್ದುಲ್ ಕಲಾಂ ಅವರಿಂದ ದೀಪ ಬೆಳಗಿಸಿದ ಮೂರನೇಯ ಮಹಾಮಸ್ತಕಾಭಿಷೇಕ. ಇನ್ನು 2018 ರ ಫೆಬ್ರವರಿಯಲ್ಲಿ ನಡೆದ ಮಹಾಮಸ್ತಕಾಭಿಷೇಕ. ಓರ್ವ ಬಾಹುಬಲಿ, ಎರಡು ಸಾವಿರ ವರ್ಷಗಳ ಇತಿಹಾಸ, ಒಂಬೈನೂರು ವರ್ಷಗಳ ಪರಂಪರೆ, ಹತ್ತೊಂಬತ್ತು ಭಟ್ಟಾರಕರು ಸಹಸ್ರಾರು ವಸಂತಗಳ ಉಜ್ವಲವಾಗಿ ಬೆಳಗಿದ ಬೆಳಗೊಳ.
ಅದು 2015 ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯ. ಹಾವೇರಿಯಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಕಡೆಯ ಕ್ಷಣದಲ್ಲಿ ತಪ್ಪಿ ಹೋಗುವಂತೆ ಆಯಿತು. ಪರಿಷತ್ತಿನ ಅಂದಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಇಡೀ ಕಾರ್ಯಕ್ರಮವನ್ನು ಹೇಗೆ ಮುಂದುಡುವುದು ಎಂದು ಯೋಚಿಸಿ ಸೀದಾ ಬಂದಿದ್ದು ಸೀದಾ ಶ್ರೀಗಳ ಬಳಿಗೆ. ಮುಂದೆ ನಡೆದದ್ದು ಇತಿಹಾಸ. ನಂಬಿ ಬಂದವರ ಕೈ ಬಿಡದ ಭಟ್ಟಾರಕರು ನಲ್ಲೂರು ಪ್ರಸಾದರ ಮೂಲಕ ಅಗತ್ಯ ಕಾರ್ಯಗಳನ್ನು ನಡೆಸಿಕೊಟ್ಟರು. ನಂಬಲೂ ಅಸಾಧ್ಯವಾಗುವಂತೆ ಒಂದು ನಗರವನ್ನೇ ನಿರ್ಮಿಸಿ ಅದರಲ್ಲಿ ಸಂಪೂರ್ಣ ಸಮ್ಮೇಳನ ಅದ್ದೂರಿಯಾಗಿ ನಡೆಯಿತು. ಅಕ್ಷರ ದಾಸೋಹ ಮತ್ತು ಅನ್ನ ದಾಸೋಹ ಹೇಗೆ ನಡೆಯಿತು ಎಂದರೆ ಇಂದಿಗೂ ಅದನ್ನು ಮೆಲುಕು ಹಾಕುವವರಿದ್ದಾರೆ. ಕಾರ್ಯಕ್ರಮ ಏನೋ ಆಯಿತು, ಲೆಕ್ಕ ಹಾಕಿದರೆ ವೆಚ್ಚ ಒಂದು ಕೋಟಿಯನ್ನು ದಾಟಿದೆ. ಸರ್ಕಾರ ಇದೊಂದು ತಮ್ಮ ಕಾರ್ಯಕ್ರಮ, ನಾವು ಅಷ್ಟು ಹಣ ಸಂದಾಯ ಮಾಡುತ್ತೇವೆ ಎಂದು ಬಂದಾಗ ಚಾರುಕೀರ್ತಿ ಶ್ರೀಗಳು ಅದನ್ನು ನಿರಾಕರಿಸಿದರಲ್ಲದೆ ಅನ್ನ ನೀಡುವ ಕಾರ್ಯ ನಮ್ಮ ಪುಣ್ಯ. ಅದಕ್ಕೆ ನಾವು ಎಂದೂ ಹಣ ಪಡೆಯುವುದಿಲ್ಲ ಎಂದು ಹೇಳಿ ಕಳಿಸಿದರು.
ಸರಿ ಸುಮಾರು ನಲವತ್ತಕ್ಕೂ ಹೆಚ್ಚು ಬಸದಿಗಳ ಜೀರ್ಣೋದ್ಧಾರ ಮಾಡಿದ ಕೀರ್ತಿ ಅವರದು. ಇಂದಿಗೂ ಅಲ್ಲಿ ಪೂಜೆ ನಡೆಯುತ್ತಿದೆ. ಅಲ್ಲದೇ ಹಲವಾರು ಗ್ರಾಮಗಳನ್ನು ದತ್ತು ಪಡೆದು ಎಲ್ಲಾ ತರಹದ ಮೂಲಭೂತ ಸೌಕರ್ಯಗಳನ್ನು ದೊರಕಿಸಿ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 1988 ರಲ್ಲಿ ಇಂಗ್ಲೆಂಡಿನ ಲೀಸೆಸ್ಟನರ್ ನಲ್ಲಿ ಜೈನ ಬಸದಿಯ ಜೀರ್ಣೋದ್ಧಾರ ಮಾಡಿದರು.
ಜೈನ ಪದ್ಧತಿಗಳಲ್ಲಿ ದೈವಾಭಿಷೇಕಕ್ಕೆ ಅಗ್ರ ಸ್ಥಾನ. ಅಂತಹ ವಾಡಿಕೆಯಲ್ಲಿ ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಯುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಬಾಹುಬಲಿ ಮೂರುತಿಗೆ ನಡೆಯುವ ಅಭಿಷೇಕದ ಕಳಶಗಳ ಹರಾಜು ನಡೆಯುತ್ತದೆ. ಸಹಸ್ರಮಾನದ ಮಹಾಮಸ್ತಕಾಭಿಷೇಕದ ನೆನಪಿಗಾಗಿ ನೇತ್ರ ತಪಾಸಣಾ ಶಿಬಿರ ನಡೆಸಿದ್ದು ಅಲ್ಲದೇ, ಸಂಚಾರಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ ಅಲ್ಲದೇ ವೈದ್ಯಕೀಯ ಲ್ಯಾಬ್ ಗಳನ್ನು ಆರಂಭಿಸಿದ್ದರು. ಮಹಾಮಸ್ತಕಾಭಿಷೇಕದ ನಿಧಿಯಿಂದ ಮಕ್ಕಳ ಆಸ್ಪತ್ರೆ ತೆರೆದು ಹಲವು ಕುಟುಂಬಗಳ ದೇವರೇ ಆಗಿದ್ದಾರೆ. ಈಗ 2018 ರ ಮಹಾಮಸ್ತಕಾಭಿಷೇಕದ ದತ್ತಿಯಿಂದ ಇನ್ನೊಂದು ಆಧುನಿಕ ಮತ್ತು ಹೆಚ್ಚಿನ ಸವಲತ್ತುಗಳ ಆಸ್ಪತ್ರೆ ತೆರೆಯುವ ಆಲೋಚನೆ ನಡೆಯುತ್ತಿದೆ.
ತಮ್ಮ ಅವಧಿಯಲ್ಲಿ ಹದಿನಾರಕ್ಕೂ ಹೆಚ್ಚು ವಿದೇಶ ಪ್ರವಾಸಗಳು ಮಾಡಿದ ಅವರು ಧಾರ್ಮಿಕತೆಯನ್ನು ಸನ್ಮಾರ್ಗದಲ್ಲಿ ಹೇಗೆ ಪಸರಿಸಿದ್ದರು ಎಂದರೆ 2006 ರ ಮಹಾಮಸ್ತಕಾಭಿಷೇಕಕ್ಕೆ ಪ್ರಪಂಚದ ಆರು ಖಂಡಗಳಿಂದ ಹೂವು, ಕುಂಕುಮಗಳನ್ನು ಸಂಗ್ರಹಿಸಿ ಬಳಸಿದ್ದರು. ತನ್ಮೂಲಕ ಭಾರತೀಯ ಪರಂಪರೆಯನ್ನು ಉಪಖಂಡದ ಎಲ್ಲೆ ಮೀರಿ ಕೊಂಡೊಯ್ದ ಹಿರಿತನ ಅವರದು.
ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕೇಂದ್ರ ಇರುವುದು ಬೆಳಗೊಳದಲ್ಲಿ. ದೇಶದ ಪ್ರಥಮ ಪ್ರಾಕೃತ ವಿಶ್ವ ವಿದ್ಯಾಲಯ ಇರುವುದು ಶ್ರವಣ ಬೆಳಗೊಳದಲ್ಲಿ. ಅವರದೇ ಕನಸಿನ ಈ ವಿಶ್ವವಿದ್ಯಾಲಯಕ್ಕೆ ಶ್ರೀ ಮಠದ ಮೂವತ್ತೆರಡು ಎಕರೆಗಳನ್ನು ದತ್ತಿಯಾಗಿ ನೀಡಿದ್ದರು. ಜೈನ ಧರ್ಮದ ಪವಿತ್ರ ಗ್ರಂಥಗಳಲ್ಲಿ ಸೇರುವ ಧವಳ ಗ್ರಂಥಗಳ ಪ್ರಾಕೃತದಿಂದ ಕನ್ನಡನುವಾದ ಮಾಡಿದ್ದು ಪೂಜ್ಯರ ಅನುಗ್ರಹದಿಂದ ಎಂಬುದು ವಿಶೇಷ. ತಪಸ್ಸಿನಂತೆ ಕುಳಿತು ಅವುಗಳನ್ನು ಕನ್ನಡದಲ್ಲೂ ಪಸರಿಸಿ ತಾವು ಶ್ರೇಯವನ್ನು ಪಡೆಯದೇ ಉಳಿದರು.
ಮೊದಲೇ ಹೇಳಿದಂತೆ ಅವರೆಂದೂ ಪ್ರಚಾರ ಬಯಸಲೇ ಇಲ್ಲ. ಮಾಧ್ಯಮಗಳಿಂದ ಅಷ್ಟೇ ಏಕೆ? ದೂರವಾಣಿ ಕೂಡ ಇಲ್ಲ. ಸಾರ್ವಜನಿಕವಾಗಿ ಕಾಣಿಸಿದ್ದು ತೀರಾ ಕಡಿಮೆಯೇ. ಈಗ ಅನ್ನದ, ಅಕ್ಷರದ, ಆರೋಗ್ಯದ ಮತ್ತು ಬೆಳಗೊಳದ ಒಡೆಯ ಅನಂತ ಆರಾಧಕರನ್ನು ಅಗಲಿ ಜಿನೈಕ್ಯರಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ಬರುವ ಪೀಳಿಗೆ ಸಾಗಲಿ. ಅವರೊಂದು ಸಾರ್ಥಕ ಜಿನಬಿಂಬ. ಬರಿ ಬೆಳಗೊಳವಲ್ಲ, ಬರಿ ಜೈನರಲ್ಲ ನಾಳಿನ ಪೀಳಿಗೆ ಕೂಡ ಇಂದ್ರಗಿರಿಯೊಡೆಯನ ಕುರಿತು ಅರಿಯುವಾಗ ಭಟ್ಟಾರಕರ ತಿಳಿದೇ ಸಾಗಲಿದೆ. ಅದ್ವಿತೀಯ ಸಾಧಕರ ಇರುವು ಅನುರೂಪವಾದ ಧನಾತ್ಮಕ ತೇಜಸ್ಸನ್ನು ಅವಗಾಹನೆಗೆ ಬಿಡುತ್ತದೆ. ಅಂತಹ ದಿವ್ಯ ತೇಜಸ್ಸು ಅವರ ಪ್ರತಿ ಚಿತ್ರದಲ್ಲೂ ಕಾಣಸಿಗುತ್ತದೆ. ಈಗ ಅವರ ನೆನಪುಗಳು, ಆಶೀರ್ವಾದ ಮತ್ತು ಸತ್ಕಾರ್ಯಗಳು ಆರಾಧಕರ ಸದಾಕಾಲ ಕಾಯಲಿ. ನಶ್ವರತೆಯ ಬದುಕಿನಲ್ಲಿ ಅಜರಾಮರವಾಗಿ ಸಾಗಿ ಹೋದ ಭಟ್ಟಾರಕರು ಶತಮಾನದ ಬೆಳಕೇ ಸರಿ. ಅಹಿಂಸೋ ಪರಮೋಧರ್ಮಃ.
✍️ ಸಚ್ಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.