ಮಂಜೇಶ್ವರ ಗೋವಿಂದ ಪೈ ಕನ್ನಡನಾಡು ಕಂಡ ಹೆಸರಾಂತ ಕವಿ, ಸಾಹಿತಿ, ಸಂಶೋಧಕ ಮಾತ್ರವಲ್ಲ ಬಹುಭಾಷಾ ಕೋವಿದರಾಗಿದ್ದವರು. ಇವರಿಗೆ ಪಂಡಿತವಕ್ಕಿ ಎಂಬ ಬಿರುದೂ ಇದೆ. ಇಂದು ಕೇರಳ ರಾಜ್ಯದ ಭಾಗವಾಗಿರುವ ಕಾಸರಗೋಡು ಜಿಲ್ಲೆ ಭಾಷಾಧಾರಿತ ಪ್ರಾಂತ್ಯ ವಿಂಗಡನೆಗೂ ಮೊದಲು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿತ್ತು. ಮಂಜೇಶ್ವರ ಎಂಬುದು ಅಂದು ಕನ್ನಡನಾಡಿನ ಭಾಗವಾಗಿದ್ದ ಸುಂದರ ಕಡಲತಡಿಯ ಪ್ರದೇಶ. ಮಂಗಳೂರಿನಿಂದ ಸುಮಾರು 30 ಕಿ.ಮೀ ದಕ್ಷಿಣದಲ್ಲಿರುವ ಈ ಮಂಜೇಶ್ವರ ಗೋವಿಂದ ಪೈ ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ ಕರ್ಮಭೂಮಿಯೂ ಇದೆ. ದೇಶದೆಲ್ಲೆಡೆಯೂ ಕನ್ನಡದ ಕಂಪನ್ನು ಹರಿಸಿ, ಸಾಹಿತ್ಯದ ಸುಗಂಧವನ್ನು ಪಸರಿಸಿದ ಕೇಂದ್ರವನ್ನು ಇಂದು ಗಿಳಿವಿಂಡು ಎಂದೂ ಕರೆಯಲಾಗುತ್ತದೆ.
1883 ಮಾರ್ಚ್ 23 ರಂದು ಜನಿಸಿದ ಗೋವಿಂದ ಪೈ- ಕವಿ, ಸಾಹಿತಿ ಸಂಶೋಧಕರಾಗಿ ಬೆಳೆದ ನಿಂತ ಪರಿ ಎಂತಹವರನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿಬಿಡುತ್ತದೆ. ಕೊಂಕಣಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರ ತಂದೆಯ ಹೆಸರು ಮಂಗಳೂರು ಸಾಹುಕಾರ ತಿಮ್ಮಪ್ಪ ಪೈ ಮತ್ತು ತಾಯಿಯ ಹೆಸರು ದೇವಕಿ ಅಮ್ಮ ಎಂಬುದಾಗಿತ್ತು. ಮಂಜೇಶ್ವರದಲ್ಲಿ ಗೋವಿಂದ ಪೈಗಳ ಸೋದರ ಮಾವನ ಮನೆ ಇತ್ತು. ಅಲ್ಲಿಯೇ ಗೋವಿಂದ ಪೈಗಳ ಜನನ, ಬಾಲ್ಯ ಮತ್ತು ನಂತರದ ದಿನಗಳ ಸಾಹಿತಿಕ ಕೃತಿ ರಚನೆಯ ಕಾರ್ಯಗಳು ನಿರಂತರವಾಗಿ ಮುನ್ನಡೆಯುತ್ತವೆ. ಬಾಲ್ಯದ ಶಿಕ್ಷಣವನ್ನು ಮಂಗಳೂರಿನ ಕೆನರಾ ಶಾಲೆಯಲ್ಲಿ ಮುಗಿಸಿದ ಇವರು ನಂತರ ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಅಂದಿನ ಮದ್ರಾಸಿಗೆ ತೆರಳುತ್ತಾರೆ, ಆದರೆ ತನ್ನ ತಂದೆಯವರ ಹಠಾತ್ ನಿಧನದ ಕಾರಣ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ ಗೋವಿಂದ ಪೈ ಊರಿಗೆ ಮರಳುತ್ತಾರೆ. ಇವರ ಪ್ರಪ್ರಥಮ ಕೃತಿಯ ಹೆಸರು ಶ್ರೀಕೃಷ್ಣ ಚರಿತ (1909), ಅಂದಿನ ಸಾಹಿತ್ಯ ವಲಯದಲ್ಲಿ ಬಹಳ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಕೃತಿಯು ಗೋವಿಂದ ಪೈಯವರನ್ನು ಮತ್ತಷ್ಟೂ ಬರೆಯುವಂತೆ ಪ್ರೇರೇಪಿಸುತ್ತದೆ. ಇವರ ಖಂಡಕಾವ್ಯಗಳಾದ ಗೋಲ್ಗೋಥಾ, ಬುದ್ಧನ ಕೊನೆಯ ಕ್ಷಣಗಳನ್ನು ಆಧರಿಸಿ ಬರೆದ ವೈಶಾಖಿ, ಪ್ರಭಾಸ ಮತ್ತು ಮಹಾತ್ಮಾ ಗಾಂಧಿಯ ಕೊನೆಯ ಕ್ಷಣಗಳನ್ನು ನೆನಪಿಸುವ ದೆಹಲಿ ಕೃತಿಗಳು ದೊಡ್ಡ ಯಶಸ್ಸನ್ನು ಗಳಿಸುತ್ತವೆ. ಖಂಡಕಾವ್ಯಗಳ ಹೊರತಾಗಿ ಗೋವಿಂದ ಪೈಗಳು ನಾಟಕಗಳನ್ನು ಬರೆದಿದ್ದರು ಹೆಬ್ಬೆರಳು, ಗೊಮ್ಮಟ ಜಿನಸ್ತುತಿ ಮತ್ತು ಮಕ್ಕಳಿಗಾಗಿ ಇವರು ಬರೆದ ಗಿಳಿವಿಂಡು ಪದ್ಯ ಗುಚ್ಛಗಳು ಇಂದಿಗೂ ಶೈಕ್ಷಣಿಕ ಕಲಿಕೆಯ ಭಾಗವಾಗಿದೆ. ಗೋವಿಂದ ಪೈ ಬಹುಭಾಷಾ ಪಂಡಿತರಾಗಿದ್ದರು ಎಂಬುದಕ್ಕೆ ಅವರಲ್ಲಿದ್ದ ಪುಸ್ತಕ ಸಂಗ್ರಹವೇ ಸಾಕ್ಷಿಯಾಗಿತ್ತು. ಸಂಶೋಧನಾತ್ಮಕ ಗ್ರಂಥಗಳ ರಚನೆಯ ಸಂದರ್ಭ ಇವರು ಬರೆದಿದ್ದ ಟಿಪ್ಪಣಿಗಳು ಮೂಲ ಆಕರ ಗ್ರಂಥಗಳನ್ನು ವಿವಿಧ ಭಾಷಾ ಮಾಧ್ಯಮಗಳನ್ನು ಹೆಸರಿಸುತ್ತವೆ. ಇಂದು ಇವರ ಮೂಲ ಕೃತಿಗಳ ಭಂಡಾರ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಸುಭದ್ರವಾಗಿದೆ. ಮಾತೃಭಾಷೆ ಕೊಂಕಣಿ, ನೆಲದ ಭಾಷೆ ತುಳು ಸಹಿತ ನಾಡ ಭಾಷೆ ಕನ್ನಡದ ಬಗ್ಗೆ ಅಪಾರ ಒಲವಿದ್ದ ಇವರಿಗೆ ಸಂಸ್ಕೃತ, ತೆಲುಗು, ಮಲಯಾಳಂ, ತಮಿಳು, ಮರಾಠಿ, ಬೆಂಗಾಲಿ, ಪರ್ಶಿಯನ್, ಪಾಲಿ, ಉರ್ದು, ಗ್ರೀಕ್, ಜಪಾನಿ ಭಾಷೆ ಸಹಿತ ಇಂಗ್ಲಿಷ್ ಭಾಷೆಯಲ್ಲೂ ಪ್ರಾವೀಣ್ಯವಿತ್ತು. ಬುದ್ಧನ ಬಗ್ಗೆಗಿನ ವೈಶಾಖಿ ಖಂಡಕಾವ್ಯದ ರಚನೆ ಮತ್ತು ಆತನ ಜನ್ಮ ದಿನ ಸಂಶೋಧನಾತ್ಮಕ ಪ್ರಬಂಧ ರಚನೆಯ ಸಂದರ್ಭ ಶ್ರೀಲಂಕಾದ ಬೌದ್ಧ ಬಿಕ್ಷು ಒಬ್ಬರ ಜೊತೆ ನಿರಂತರ ಪತ್ರ ಸಂವಾದ ಮಾಡಿದ್ದರು ಎಂಬುದು ಮಾಹಿತಿಯೂ ಲಭ್ಯವಾಗುತ್ತದೆ. ಈ ಬೌದ್ಧ ಭಿಕ್ಷು ಅನಗಾರಿಕ ಧರ್ಮಪಾಲರೇ(1864-1933) ಆಗಿರಬಹುದು ಎಂಬ ಸಂದೇಹವೂ ಇದೆ. ಅಂದು ಶ್ರೀಲಂಕಾ ಸಹಿತ ಭಾರತ ಉಪಖಂಡದ ಬೌದ್ಧ ಉಳಿಕೆಗಳ ಸಂರಕ್ಷಣೆ ಸಹಿತ ಧಮ್ಮದ ಮರುಸ್ಥಾಪನೆಯಲ್ಲಿ ಪ್ರಧಾನ ಭೂಮಿಕೆ ಹಾಕಿದ ಮಹಾಮಹಿಮರಲ್ಲಿ ಬಿಕ್ಕು ಅನಗಾರಿಕಾ ಧರ್ಮಪಾಲ ಪ್ರಥಮವಾಗಿ ನಿಲ್ಲುತ್ತಾರೆ. ಇಷ್ಟು ಮಾತ್ರವಲ್ಲದೆ ಸ್ವಾಮಿ ವಿವೇಕಾನಂದ ಅವರ ಜೊತೆ ಚಿಕಾಗೋ ನಗರಕ್ಕೆ ತೆರಳಿ ಪೂರ್ವಾತ್ಯ ಧರ್ಮ ಪರಂಪರೆಯ ಬಗ್ಗೆ ವಿಸ್ತರವಾಗಿ ಮಾತನಾಡಿದ ಕೀರ್ತಿಯೂ ಧರ್ಮಪಾಲರದ್ದಾಗಿದೆ. ಇವರಿಬ್ಬರ ಜೊತೆ ಝೆನ್ ಬೌದ್ಧ ಧರ್ಮದ ಬಗ್ಗೆ ಜಪಾನಿನ ಸೊಯೆನ್ ಶುಕು ಕೂಡಾ ಚಿಕಾಗೋ ತೆರಳಿದ್ದರು ಎಂಬುದು ವಿಶೇಷವಾಗಿದೆ.
ಗೋವಿಂದ ಪೈ ಕೃತಿ, ಸಾಹಿತ್ಯ ರಚನೆಯಲ್ಲಿ ಹೇಗೆ ಸುಪ್ರಸಿದ್ಧರೋ ಹಾಗೆಯೇ ಸಂಶೋಧನೆಯಲ್ಲೂ ಅವರದ್ದು ಎತ್ತಿದ ಕೈ. ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ರಾಜರ ಆಳ್ವಿಕೆಯ ಬಗ್ಗೆ ಬೆಳಕು ಚೆಲ್ಲುವ ಇವರ ಪ್ರಬಂಧಗಳು ಇಂದಿಗೂ ಸಂಶೋಧನಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯೂ ಹೌದು. ತುಳುನಾಡು ಪ್ರಾಂತ್ಯವನ್ನು ಬಹಳ ಹಿಂದೆ ಶಾಂತಿಕ ಎಂದು ಕರೆಯಲಾಗುತ್ತಿತ್ತು. ಅಶೋಕ ಚಕ್ರವರ್ತಿಯ ಕಾಲಘಟ್ಟದಲ್ಲಿ ಆತನ ಆಡಳಿತೆಯ ಪ್ರಭಾವ ತುಳುನಾಡಿನ ಮೇಲೂ ಆಗಿತ್ತು ಎಂಬುದನ್ನೂ ಅವರು ಉಲ್ಲೇಖಿಸುತ್ತಾರೆ. ಕದಿರೆಯ ಮಂಜುನಾಥನ ದೇಗುಲದ ಮರುನಿರ್ಮಾಣಕ್ಕೆ 10 ನೇ ಶತಮಾನದಲ್ಲಿ ಕುಂದವರ್ಮ ರಾಜ ನೀಡಿದ ದೇಣಿಗೆ, ಆತನ ಕೊಡುಗೆಗಳು ಸಹಿತ ದಕ್ಷಿಣದಲ್ಲಿ ಶೈವ ಮತ್ತು ಬೌದ್ಧ ಸಿದ್ಧರ ಆಗಮನದ ಬಗ್ಗೆಯೂ ಆಸಕ್ತಿದಾಯಕ ವಿಚಾರಗಳನ್ನು ಅವರು ತಮ್ಮ ಕೃತಿಗಳಲ್ಲಿ ಉಲ್ಲೇಖಿಸುತ್ತಾರೆ. ಬೌದ್ಧ ಮತ್ತು ಶೈವ ಸಿದ್ಧರ ಸಮಾಗಮವೇ ನಾಥ ಪರಂಪರೆಯ ಹುಟ್ಟಿಗೆ ಕಾರಣ ಎನ್ನುವಂತಹ ಧಾರ್ಮಿಕ ಸಮ್ಮಿಳಿತೆಯ ಸಂಶೋಧನಾತ್ಮಕ ಸಾಹಿತ್ಯದ ಗಂಧ ಇಂದಿಗೂ ಯುವ ಸಂಶೋಧನಾಸಕ್ತರಿಗೆ ಅಡಿಪಾಯವಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಇವರು ಬರೆದ ಚಿತ್ರಭಾನು ಕೃತಿ ಅಂದಿನ ಹೋರಾಟಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಗೋವಿಂದ ಪೈ ಕೇವಲ ಸಾಹಿತ್ಯ ಕೃಷಿ, ಸಂಶೋಧನೆಗಳಿಗೆ ಸೀಮಿತವಾಗಿರದೆ ಪತ್ರಿಕೋದ್ಯಮದಲ್ಲಿ ಬಹಳ ಎತ್ತರಕ್ಕೆ ಏರಿದ್ದರು. ಇವರ ನವಭಾರತ ಪತ್ರಿಕೆಯು ಮಂಗಳೂರಿನಿಂದ ಪ್ರಕಟವಾಗುತ್ತಿತ್ತು. 1949 ರಲ್ಲಿ ಅಂದರೇ ದೇಶಕ್ಕೆ ಸ್ವಾತಂತ್ರ್ಯ ಬಂದ ಎರಡು ವರ್ಷಗಳ ನಂತರದಲ್ಲಿ ಗೋವಿಂದ ಪೈ ಅವರಿಗೆ ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಪ್ರಶಸ್ತಿ ಒಲಿದು ಬಂದಿತ್ತು. ಬಾಂಬೆಯಲ್ಲಿ 1951 ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಇವರು ವಹಿಸಿದ್ದರು. ತಮ್ಮ ಹುಟ್ಟೂರಾದ ಮಂಜೇಶ್ವರದಲ್ಲಿ ಇವರ ಸ್ಮರಣೆಯಲ್ಲಿ ಕಾಲೇಜನ್ನು ಕೂಡಾ ಸ್ಥಾಪಿಸಲಾಗಿದೆ. ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಈ ಪದವಿ ಕಾಲೇಜಿನಲ್ಲಿ ಕಂಪ್ಯೂಟರ್ ವಿಜ್ಞಾನ ಸಹಿತ ಟೂರಿಸಂ ಕೋರ್ಸ್ ಗಳಿವೆ. ಕೇರಳ ಮತ್ತು ಕರ್ನಾಟಕ ಸರಕಾರಗಳ ಸಹಭಾಗಿತ್ವ ಯೋಜನೆಯಡಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಮಂಜೇಶ್ವರದಲ್ಲಿ ನಿರ್ಮಾಣ ಕಂಡ ಗಿಳಿವಿಂಡು ಸಮುಚ್ಚಯದಲ್ಲಿ ಗೋವಿಂದ ಪೈ ಸಾಹಿತ್ಯ ಕೃಷಿಯನ್ನು ಮಾಡಿದ ಮನೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಇದರ ಹೊರತಾಗಿ ಭವನಿಕಾ ರಂಗಮಂದಿರ, ಪಾರ್ತಿಸುಬ್ಬ ಯಕ್ಷಗಾನ ಮಂದಿರ, ಗ್ರಂಥಾಲಯ, ಅತಿಥಿ ಗೃಹಗಳು ಸಹಿತ ಪುರಾತನ ಹಸ್ತಪ್ರತಿಗಳಿವೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಅಪಾರ ಆಸಕ್ತಿ, ಹೆಮ್ಮೆ ಹೊಂದಿದ್ದ ಗೋವಿಂದ ಪೈ, ದೇಶಭಕ್ತಿ, ಏಕತೆಯ ಬಗ್ಗೆಯೂ ಹಲವು ಸ್ಪೂರ್ತಿದಾಯಕ ಲೇಖನಗಳು ಮತ್ತು ಕವಿತೆಗಳನ್ನು ರಚಿಸಿದ್ದಾರೆ. ಮಹಾತ್ಮಾ ಗಾಂಧಿಯ ಅಸಹಕಾರ ಚಳುವಳಿ, ಅಹಿಂಸೆಯ ಮೂಲಕ ಸ್ವರಾಜ್ಯ ಪ್ರಾಪ್ತಿಯ ಬಗ್ಗೆ ಒಲವುಳ್ಳವರಲ್ಲಿ ಪೈಗಳು ಓರ್ವರಾಗಿದ್ದರು. ಇಲ್ಲೊಂದು ಅಪರೂಪದ ಹಾಗೆಯೇ ಆಸಕ್ತಿದಾಯಕ ವಿಚಾರವು ವರ್ತಮಾನದ ಧಾವಂತದಲ್ಲಿ ಮರೆತುಹೋಗಿದೆ. ಅದೊಂದು ಪೈಗಳ ಊರುಗೋಲಿನ ಕಥೆ! ಹೀಗಿಂತ ಕಥೆಗಳೇ ಮಂಜೇಶ್ವರ ಗೋವಿಂದ ಪೈಗಳ ಬಗ್ಗೆ ತಿಳಿದುಕೊಂಡಷ್ಟು ಮತ್ತೂ ತಿಳಿಯಬೇಕು ಅವರ ಇನ್ನಷ್ಟೂ ಕೃತಿಗಳನ್ನು ಮಗದೊಮ್ಮೆ ಓದಬೇಕು ಎಂದು ಪ್ರೇರೇಪಿಸುತ್ತವೆ. ಮಹಾತ್ಮನ ಧ್ಯೇಯ ನಿಷ್ಠೆ ದೇಶದ ಸ್ವಾತಂತ್ರ್ಯದಲ್ಲಿ ಅವರ ಮುಂಚೂಣಿ ಪಾತ್ರಗಳ ಬಗ್ಗೆ ಒಲವಿದ್ದ ಗೋವಿಂದ ಪೈ ಒಂದೊಮ್ಮೆ ಗುಜರಾತಿನ ನವಸಾರಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿಗೆ ತೆರಳಿ ಗಾಂಧಿವಾದ ಸಹಿತ ಮರಾಠಿ ಮತ್ತು ಗುಜರಾತಿ ಭಾಷೆಯನ್ನು ಅರಿಯುವುದು ಪೈಗಳ ಗುರಿಯಾಗಿರುತ್ತದೆ. ಇದೇ ಸಂದರ್ಭ ಮಹಾತ್ಮಾ ಗಾಂಧಿಯವರ ಒಡನಾಟದಲ್ಲಿದ್ದ ದತ್ತಾತ್ರೇಯ ಬಾಲಕೃಷ್ಣ ಕೇಲ್ಕರ್ ಪೈಗಳಿಗೆ ಪರಿಚಿತರಾಗಿ ಸ್ನೇಹಿತರಾಗುತ್ತಾರೆ. ಸ್ವದೇಶಿ ಚಳುವಳಿ ಮತ್ತು ಹಿಂದಿ ಭಾಷೆಯ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುತ್ತಿದ್ದ ಅವರ ಸಂಪರ್ಕದ ಮೂಲಕ ಗಾಂಧೀಜಿಯ ಬಗ್ಗೆ ಹಲವು ವಿಚಾರಗಳನ್ನು ತಿಳಿದ ಪೈ ತನ್ನ ಮಡದಿಯ ಅಸೌಖ್ಯದ ಕಾರಣ ಊರಿಗೆ ಮರಳುತ್ತಾರೆ. 1920 ರ ಸುಮಾರಿಗೆ ಕೇಲ್ಕರ್ ಮಂಜೇಶ್ವರಕ್ಕೆ ಹಿಂದಿ ಭಾಷಾ ಪ್ರಚಾರದ ಸಲುವಾಗಿ ತಲುಪಿದಾಗ ತಮ್ಮ ಮಿತ್ರ ಗೋವಿಂದ ಪೈ ಅವರನ್ನು ಕೂಡಾ ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ, ಮಾತುಕತೆ ನಡೆಸುತ್ತಾರೆ. ಅದರಲ್ಲಿ ಸಾಹಿತ್ಯ, ರಾಷ್ಟ್ರೀಯತೆಯೂ ಸೇರಿರುತ್ತದೆ. ಪುನಃ ತೆರಳುವ ಸಂದರ್ಭ ಕೇಲ್ಕರ್ ಅವರಿಗೆ ಪೈಗಳು ಒಂದು ನಡೆಗೋಲನ್ನು ಉಡುಗೊರೆಯಾಗಿ ನೀಡುತ್ತಾರೆ. ನೈಸರ್ಗಿಕ ಮರದ ಕೋಲಿನಲ್ಲಿ ಸಹಜವಾಗಿ ಅಲ್ಲಲ್ಲಿ ಕಪ್ಪು ಬಣ್ಣದ ಪಟ್ಟಿಗಳಿದ್ದು ಊರುಗೋಲು ಭಾರವು ಇರದೆ ಹಿಡಿಯಲು ಸೊಗಸಾಗಿರುತ್ತದೆ. 1930 ರಲ್ಲಿ ಮಹಾತ್ಮಾ ಗಾಂಧಿ ತಮ್ಮ ಚಾರಿತ್ರಿಕ ದಂಡಿಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಒಟ್ಟು 240 ಕಿ.ಮೀ ದೂರದ ಯಾತ್ರೆಯಾಗಿರುತ್ತದೆ ಅದು. ಇದೇ ಸಂದರ್ಭ ಗಾಂಧಿಯ ಆಪ್ತರಾಗಿದ್ದ ಕಾಕ ಕೇಲ್ಕರ್ ಪೈಗಳು ನೀಡಿದ್ದ ಊರುಗೋಲನ್ನು ಮಹಾತ್ಮ ಗಾಂಧಿಗೆ ನೀಡುತ್ತಾರೆ! ಮಾತ್ರವಲ್ಲ ಇದೇ ಕೋಲು ನಂತರ ಮಹಾತ್ಮ ಗಾಂಧೀಜಿಯ ಜೀವನದುದ್ದಕ್ಕೂ ಬಳಸಲ್ಪಡುತ್ತದೆ. ಮಂಜೇಶ್ವರದ ಗೋವಿಂದ ಪೈ ನೀಡಿದ್ದ ಊರುಗೋಲು ಮಹಾತ್ಮ ಗಾಂಧಿಯ ಯಾತ್ರೆಯಲ್ಲಿ ಬಳಸಲ್ಪಟ್ಟಿದೆ ಎಂದರೆ ಅದಕ್ಕೆ ಒಂದು ಕಾರಣ ಮಂಜೇಶ್ವರವೂ ಆಗಿದೆ ಎಂಬುದು ಅಚ್ಚರಿ ಮತ್ತು ಹೆಮ್ಮೆ ವಿಚಾರವೂ ಹೌದು. ಮಹಾತ್ಮಾ ಗಾಂಧಿಯ ಬಗ್ಗೆ ಅಪಾರ ಅಭಿಮಾನ ಹೆಮ್ಮೆಯಿದ್ದ ಮಂಜೇಶ್ವರ ಗೋವಿಂದ ಪೈಗಳಿಗೆ ಮಹಾತ್ಮನ ನಿಧನವು ಬರಸಿಡಿಲಿನಂತೆ ಎರಗಿತ್ತು. ಇದು ಮಹಾತ್ಮನ ಕೊನೆ ಕ್ಷಣಗಳನ್ನು ಬಣ್ಣಿಸುವ ದೆಹಲಿ ಎಂಬ ಖಂಡಕಾವ್ಯದ ಹುಟ್ಟಿಗೂ ಕಾರಣವಾಯಿತು.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.