ಸುಬ್ರಹ್ಮಣ್ಯ : ಗುತ್ತಿಗಾರು ಗ್ರಾಮದಲ್ಲಿ ಕಳೆದ ವರ್ಷದಂತೆ ಈ ಬಾರಿ ವಿದ್ಯುತ್ ಲೋವೋಲ್ಟೇಜ್ ಉಂಟಾಗದು , ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮೆಸ್ಕಾಂ ಜೆಇ ಬೋರಯ್ಯ ಗುತ್ತಿಗಾರು ಗ್ರಾಮಸಭೆಯಲ್ಲಿ ತಿಳಿಸಿದ್ದಾರೆ.
ಗುತ್ತಿಗಾರು ಗ್ರಾಮಸಭೆ ಗುರುವಾರ ಪಂಚಾಯತ್ ಬಳಿಯ ಸಭಾಭವನದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಮೆಸ್ಕಾಂ ಕುರಿತ ಪ್ರಶ್ನೆಗೆ ಉತ್ತರಿಸಿದ ಜೆಇ ಬೋರಯ್ಯ, ಗುತ್ತಿಗಾರಿನ ವಿದ್ಯುತ್ ಲೋವೋಲ್ಟೇಜ್ ಸಮಸ್ಯೆಗೆ ಕಳೆದ ಬಾರಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ. ಈ ಬಾರಿ ಸುಬ್ರಹ್ಮಣ್ಯದ ಸಬ್ಸ್ಟೇಶನ್ ಉದ್ಘಾಟನೆ ಬಳಿಕ ಸಮಸ್ಯೆಗೆ ಪರಿಹಾರ ದೊರಕಲಿದೆ.ಅದರ ಜೊತೆಗೆ ಸಬ್ಸ್ಟೇಶನ್ ಕಾಮಗಾರಿ ಕೂಡಾ ಆರಂಭವಾಗಲಿದೆ, ಆದರೆ 2 ವರ್ಷಗಳ ಕಾಲ ಬೇಕಾಗಬಹುದು. ಅದುವರೆಗೆ ವಿದ್ಯುತ್ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಅಂತ್ಯೋದಯ ಕಾರ್ಡಿನ ಫಲಾನುಭವಿಗಳಿಗೆ ಸಿಎಫ್ಎಲ್ ನೀಡುವ ಯೋಜನೆ ಇದೆ ಎಂದು ಇದೇ ವೇಳೆ ಇಲಾಖೆಯ ಮಾಹಿತಿ ಅವರು ನೀಡಿದರು.
ಸಭೆಯಲ್ಲಿ ಸರ್ವೆ ಇಲಾಖೆ ಬಂದ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಆ ಇಲಾಖೆಯ ಯಾವುದೇ ಅಧಿಕಾರಿಗಳು ಇರಲಿಲ್ಲ,ಕೊನೆಗೆ ಮಾತನಾಡಿದ ತಾಪಂ ಸದಸ್ಯ ಮುಳಿಯ ಕೇಶವ ಭಟ್, ಸಭೆಗೆ ಬಾರದ ಸರ್ವೆ ಇಲಾಖಾ ಅಧಿಕಾರಿಗೆ ಗೈರು ಹಾಜರಾದ ಬಗ್ಗೆ ಕಾರಣ ಕೇಳಿ, ಮುಂದೆ ಸಭೆಗೆ ಕಡ್ಡಾಯವಾಗಿ ಆಗಮಿಸುವಂತೆ ಸೂಚನೆ ನೀಡಲು ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಸೂಚಿಸಿದರು.
ನಾಲ್ಕೂರು ಗ್ರಾಮದ ಗ್ರಾಮಕರಣಿಕರ ಕಚೇರಿಗೆ ಕೆಲವು ಸಮಯಗಳ ಹಿಂದೆಯೇ ಗ್ರಾಮಸ್ಥರ ಸೇರಿ ಕಟ್ಟಡ, ನಿವೇಶನ ವ್ಯವಸ್ಥೆ ಮಾಡಿದ್ದಾರೆ, ಆದರೆ ಇದುವರೆಗೆ ಈ ನಿವೇಶನದ ದಾಖಲೆಗಳು ಆಗಿಲ್ಲ,ಹಲವು ಬಾರಿ ಹೇಳಿದರೂ ಆಗಿಲ್ಲ,ಹೀಗಾಗಿ ಈಗಲೇ ಯಾವಾಗ ದಾಖಲೆ ಸಿದ್ದವಾಗುತ್ತದೆ ಎಂದು ಸ್ಪಷ್ಟಪಡಿಸಬೇಕು ಎಂದು ಗ್ರಾಮಕರಣಿಕರಾದ ವಾರಿಜ ಅವರಿಗೆ ಸದಸ್ಯೆ ವಿಜಯಕುಮಾರ್ ಚಾರ್ಮತ ಹೇಳಿದರು. ಆದರೆ ಯಾವಾಗ ಮಾಡಿಕೊಡಲಾಗುತ್ತದೆ ಎಂದು ಉತ್ತರಿಸಲು ಗ್ರಾಮಕರಣಿಕರು ತಡಕಾಡಿದರು. ಇದೇ ವೇಳೆ ಮಾಹಿತಿ ನೀಡಿದ ಗ್ರಾಮಕರಣಕರು,ಗುತ್ತಿಗಾರು ಗ್ರಾಮದಲ್ಲಿ 118 94ಸಿ ಅರ್ಜಿಗಳು ಬಂದಿದ್ದು ಅದರಲ್ಲಿ 18 ಅರ್ಜಿಗಳು ವಿಲೇವಾರಿ ಆಗಿದೆ. ಇವುಗಳಲ್ಲಿ 16 ಹಕ್ಕುಪತ್ರ ವಿತರಿಸಲಾಗಿದೆ.ನಾಲ್ಕೂರು ಗ್ರಾಮದಲ್ಲಿ 91 ಅರ್ಜಿಗಳು ಬಂದಿದ್ದು ಅರದಲ್ಲಿ 12 ಅರ್ಜಿ ವಿಲೇವಾರಿ ಆಗಿದ್ದು 8 ಹಕ್ಕುಪತ್ರ ವಿತರಣೆಯಾಗಿದೆ. ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲಾಗುತ್ತದೆ ಎಂದರು.
ಗುತ್ತಿಗಾರು ಕಮಿಲ ಬಳ್ಪ ರಸ್ತೆಯಲ್ಲಿ ದೇವಶ್ಯ ಕೆಂಬಾರೆ ಎಂಬಲ್ಲಿ ರಸ್ತೆಗೆ ತಡೆಗೋಡೆ ಇಲ್ಲದೆ ಹಲವಾರು ವಾಹನಗಳು ಅಪಘಾತವಾಗಿದೆ, ಹೀಗಾಗಿ ತಕ್ಷಣವೇ ತಡೆಗೋಡೆ ನಿರ್ಮಾಣವಾಗಬೇಕು ಎಂದು ಗ್ರಾಮಸ್ಥ ರೋಹಿತಾಕ್ಷ ಒತ್ತಾಯ ಮಾಡಿದರು.ಇದಕ್ಕೆ ಮುಂದಿನ ದಿನಗಳಲ್ಲಿ ಅನುದಾನ ಮೀಸಲಿಡುವುದಾಗಿ ಭರವಸೆ ನೀಡಿದರು.
ಗುತ್ತಿಗಾರು ಪೇಟೆಯಲ್ಲಿ ಅನಧಿಕೃತ ಅಂಗಡಿಗಳು ತಲೆಎತ್ತುತ್ತಿದ್ದು ಇವುಗಳ ನಿಯಂತ್ರಣವಾಗಬೇಕು, ಅಧಿಕೃತವಾದಲ್ಲಿ ಪಂಚಾಯತ್ಗೂ ಆದಾಯ ಬರಲಿದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ಈಶ್ವರ ಎನ್ಎಲ್ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಅಚ್ಚುತ, ಈ ಬಗ್ಗೆ ಈಗಾಗಲೇ ತಹಶೀಲ್ದಾರ್ರಿಂಲೂ ನೋಟೀಸ್ ಬಂದಿದ್ದು, ಅನಧಿಕೃತ ಅಂಗಡಿ ಹಾಗೂ ಕಟ್ಟಡಗಳ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಬಳ್ಪ ರಕ್ಷಿತಾರಣ್ಯದಲ್ಲಿ ಮೀನಿನತ್ಯಾಜ್ಯ ಎಸೆಯುವುದು ಕಂಡುಬಂದಿದೆ, ಈ ತ್ಯಾಜ್ಯ ಹೊಳೆಯಲ್ಲಿ ಹರಿದು ಜನತೆಗೆ ರೋಗ ರುಜಿನ ಬರುವ ಭಯ ಇದೆ, ಹೀಗಾಗಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥ ಸದಾನಂದ ಮಲ್ಕಜೆ ಹೇಳಿದರು.ಇದಕ್ಕಾಗಿ ಒಂದೇ ಕಡೆ ಎಸೆಯುವ ಬಗ್ಗೆ ಗುಂಡಿ ತೆಗೆಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಆಡಳಿತ ಭರವಸೆ ನೀಡಿತು.
ಗುತ್ತಿಗಾರು ಪೇಟೆಯಲ್ಲಿ ರಚನೆಯಾದ ವಿಕಲಚೇತನರ ಶೌಚಾಲಯಲಕ್ಕೆ ಎರಡು ಬಾರಿ ಅನುದಾನ ನೀಡಿರುವುದರ ಬಗ್ಗೆ ಪ್ರಶ್ನಿಸಿದ ಹಾಲೆಮಜಲು ಆದರ್ಶ ಯೂತ್ ಕ್ಲಬ್ ಗೌರವಾಧ್ಯಕ್ಷ ಲೋಕೇಶ್ ಪೀರನಮನೆ , ಈ ಬಗ್ಗೆ ಸಮರ್ಪಕ ಉತ್ತರ ಬೇಕುಎಂದರು, ಬಳಿಕ ಕಾರ್ಯದರ್ಶಿ ಸೀತಾರಾಮ ಈ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಶೌಚಾಲಯ ಕಾಮಗಾರಿಯ ಬಗ್ಗೆ ಚರ್ಚೆ ನಡೆಯಿತು, ಅನಗತ್ಯವಾದ ಯೋಜನೆಗಳ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ನಂತರ ಖರ್ಚು ವೆಚ್ಚಗಳ ಅನುಮೋದನೆಯಾಯಿತು. ಬಳಿಕ ವಿವಿಧ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.
ಅಕ್ರಮ ಗೋಸಾಗಾಟ ತಡೆಗೆ ಪರಿಹಾರ ಮಾರ್ಗ : ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದ್ದು ಈ ಬಗ್ಗೆ ಈಗಾಗಲೇ ವಿವಿದೆಡೆ ಹಲವಾರು ಅಹಿತಕರ ಘಟನೆ ನಡೆದಿದೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಇದಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಟುಕರಿಗೆ ಹೋರಿಯನ್ನು,ಗೋವುಗಳನ್ನು ನೀಡದಂತೆ ಕ್ರಮ ಕೈಗೊಳ್ಳಲು ಯುವಕಮಂಡಲದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಸೂಚಿಸಿದರು.ಇದಕ್ಕಾಗಿ ಗ್ರಾಮದಲ್ಲಿನ ಅಂತಹ ಗೋವುಗಳ ಕುರಿತು ಪಂಚಾಯತ್ಗೆ ಕೃಷಿಕರು ಮನವಿ ನೀಡುವುದು ಹಾಗೂ ಲಾರಿಯಲ್ಲಿ ಕಾನೂನು ಪ್ರಕಾರವಾಗಿ ಸಾಗಾಟ ಮಾಡುವಷ್ಟು ಸಂಖ್ಯೆ ಬಂದ ಬಳಿಕ ಸಾಗಾಟ ವೆಚ್ಚವನ್ನು ಕೃಷಿಕರಿಂದಲೇ ಭರಿಸಿ ಪಂಚಾಯತ್ಗೆ ಹೊರೆಯಾಗದಂತೆ ಸಂಘಸಂಸ್ಥೆಗಳ ಸಹಕಾರಗಳೊಂದಿಗೆ ಗೋಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಬಹುದು ಎಂದು ಸಲಹೆ ನೀಡಿದರು, ಇದಕ್ಕಾಗಿ ನಿರ್ಣಯವಾಗಲಿ ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು ಹಾಗೂ ಸದಸ್ಯ ವೆಂಕಟ್ ವಳಲಂಬೆ ಮಾತನಾಡಿ, ಇಂತಹ ಪ್ರಯತ್ನ ಅಗತ್ಯವಾಗಿದೆ,ಇದಕ್ಕಾಗಿ ಸಂಘಸಂಸ್ಥೆಗಳ ಸಹಕಾರದಿಂದ ಯೋಜನೆ ರೂಪಿಸಬಹುದಾಗಿದೆ ಎಂದರು.ಬಳಿಕ ಪಂಚಾಯತ್ ನೇತೃತ್ವದಲ್ಲಿ ಅರ್ಜಿ ಸ್ವೀಕಾರ ಮಾಡುವ ಹಾಗೂ ವ್ಯವಸ್ಥೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಕೃಷಿಕರ ಸಾಲಮನ್ನಾಕ್ಕೆ ನಿರ್ಣಯ : ಜಿಲ್ಲೆಯ ಕೃಷಿಕರು ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದು ಸಾಲಮರುಪಾವತಿ ಕಷ್ಟವಾಗುತ್ತಿದೆ, ಹೀಗಾಗಿ ಸಾಲಮನ್ನಾ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳುವಂತೆ ತಾಪಂ ಸದಸ್ಯ ಮುಳಿಯ ಕೇಶವ ಭಟ್ ಒತ್ತಾಯಿಸಿದರು.ಸಹಕಾರಿ ಸಂಘಗಳು ಕೃಷಿಕರ ಏಳಿಗೆಗೆ ಶ್ರಮಿಸುತ್ತಿದ್ದಾರೆ, ಮುಂದೆಯೂ ಈ ಬಗ್ಗೆ ಒತ್ತಾಯ ಅಗತ್ಯ ಎಂದರು.
ಸಭೆ ಸಮಯಕ್ಕೆ ಸರಿಯಾಗಿ ಆರಂಭವಾಗಲಿ : ಗ್ರಾಮಸಭೆ ಸಮಯಕ್ಕೆ ಸರಿಯಾಗಿ ಆರಂಭವಾಗಲಿ ಎಂದು ಗ್ರಾಮಸ್ಥ ಸುಬ್ರಹ್ಮಣ್ಯ ಒತ್ತಾಯಿಸಿದರು. ಸಭೆಗೆ ಬಂದಿರುವ ಕೃಷಿಕರು ಹಾಗೂ ಇತರರಿಗೂ ಕಲಸ ಇದೆ. ಹೀಗಾಗಿ ಸಭೆ ಸಮಯಕ್ಕೆ ಸರಿಯಾಗಿ ಆರಂಭವಾಗಲಿ, ತಡ ಮಾಡುವುದು ಸರಿಯಲ್ಲ ಎಂದರು. ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ನಡೆಸುವುದಾಗಿ ಅಧ್ಯಕ್ಷರು ಹೇಳಿದರು. ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಗ್ರಾಮಸ್ಥರುಗಳು ಚರ್ಚಿಸಿದರು. ಸಭೆಯಲ್ಲಿ ಮಾತನಾಡಿದ ನೋಡಲ್ ಅಧಿಕಾರಿ ನಾಗರಾಜ್, ಗ್ರಾಮಸ್ಥರ ಸಹಕಾರ , ಸಹಭಾಗಿತ್ವ ಇದ್ದರೆ ಮಾತ್ರವೇ ಅಭಿವೃದ್ಧಿ ಸಾದ್ಯ.ಇದಕ್ಕಾಗಿ ಗ್ರಾಮದ ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷ ಅಚ್ಚುತ ಗುತ್ತಿಗಾರು, ತಾಪಂ ಸದಸ್ಯ ಮುಳಿಯ ಕೇಶವ ಭಟ್, ಗ್ರಾಪಂ ಉಪಾದ್ಯಕ್ಷೆ ಸವಿತಾ ಕುಳ್ಳಂಪಾಡಿ, ಸದಸ್ಯರುಗಳಾದ ಜಯಪ್ರಕಾಶ್ ಮೊಗ್ರ, ವಿಜಯಕುಮಾರ್ ಚಾರ್ಮತ,ವೆಂಕಟ್ ವಳಲಂಬೆ, ಬಿಕೆ ಶ್ರೀಧರ್,ರಘುವೀರ್ ಎಂಆರ್ ಹಾಗೂ ಸದಸ್ಯರು, ಪಿಡಿಒ ಶ್ಯಾಮ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಸ್ವಾಗತಿಸಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.