ಬೆಂಗಳೂರು: ಮಂಗಳೂರಿನಲ್ಲಿ ಜನಮನ್ನಣೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಅಪಾರ ಜನಸಂದಣಿಯ ಕಾರ್ಯಕ್ರಮ ಮತ್ತು ದೊಡ್ಡಬಳ್ಳಾಪುರದ ಜನಸ್ಪಂದನಕ್ಕೆ ಸ್ವಯಂಪ್ರೇರಿತ ಜನಸಾಗರವನ್ನು ಗಮನಿಸಿ ಸಿದ್ದರಾಮಯ್ಯರು ಸ್ಥಿಮಿತ ಕಳೆದುಕೊಂಡಂತಿದೆ. ಅದಕ್ಕಾಗಿಯೇ ಅವರು ತಮ್ಮ ಸುಳ್ಳಿನ ಸರಮಾಲೆ, ವ್ಯರ್ಥ ಆರೋಪಗಳ ಮೂಲಕ ನಾಟಕ ಮುಂದುವರಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕನ್ನಡನಾಡಿನ ಜನತೆ ನಿರ್ಧರಿಸಿದ್ದು, ಅಧಿಕಾರ ಗಳಿಸುವ ಕಾಂಗ್ರೆಸ್ಸಿಗರ ಕನಸು ಕೇವಲ ಹಗಲುಗನಸಾಗಿ ಉಳಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಜನರು ಸೋಲಿಸಿ ರಾಜಕೀಯವಾಗಿ ಮೂಲೆಗುಂಪಾಗುವಂತೆ ಮಾಡಲಿದ್ದಾರೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಲಿದೆ ಎಂದು ನಳಿನ್ಕುಮಾರ್ ಕಟೀಲ್ ಅವರು ದೃಢವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಎಂದರೆ ಡೋಂಗಿತನ, ಹಿಂದೂ ವಿರೋಧಿತನದ ಸಂಕೇತ. ರಾಷ್ಟ್ರವಿರೋಧಿ ಶಕ್ತಿಗಳ ಜೊತೆ ಕೈ ಜೋಡಿಸುವ ಮತ್ತು ಧರ್ಮಗಳನ್ನು ಒಡೆಯುವ ಸಿದ್ದರಾಮಯ್ಯರ ಸ್ವಾರ್ಥ ರಾಜಕಾರಣ ಜನರಿಗೆ ಸ್ಪಷ್ಟವಾಗಿ ತಿಳಿದಿದೆ. ನೀವು ಟ್ವೀಟ್ಗಳ ಮೂಲಕ ಹಾಗೂ ಹೇಳಿಕೆಗಳ ಮೂಲಕ ನಿಮ್ಮನ್ನೇ ನೀವು ಜನರ ಮುಂದಿಟ್ಟು ಅಪಹಾಸ್ಯಕ್ಕೆ ಸಿಲುಕುತ್ತಿದ್ದೀರಿ. ಬಿಜೆಪಿ ಸರಕಾರ ಜನಪರವಾಗಿದೆ. ಬಿಜೆಪಿ ಯಾವತ್ತೂ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿ ಮತ್ತು ಸಶಕ್ತೀಕರಣದ ಪ್ರಯತ್ನದಲ್ಲಿರುವುದು ಜನರಿಗೆ ತಿಳಿದಿದೆ ಎಂದು ಅವರು ತಿಳಿಸಿದ್ದಾರೆ.
ಕಾಮನ್ ಮ್ಯಾನ್ ಸಿಎಂ ಖ್ಯಾತಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರವು ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿ ಮೊತ್ತವನ್ನು ನೀಡಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಳೆದ ಹಲವು ದಶಕಗಳಲ್ಲೇ ಅತ್ಯಧಿಕ ಮಳೆ ಭಾರತದಾದ್ಯಂತ ಮತ್ತು ಬೆಂಗಳೂರಿನಲ್ಲೂ ಬಂದಿದೆ. ಮಳೆ- ಅತಿವೃಷ್ಟಿಯನ್ನು ಎದುರಿಸಲು ಬಿಜೆಪಿ ತಕ್ಷಣವೇ ಮುಂದಾಗಿದ್ದು, ಜನರ ಬದುಕನ್ನು ಕಟ್ಟಿಕೊಡಲು ಕೂಡಲೇ ಸ್ಪಂದಿಸಿದೆ. ಸರಕಾರ ಒಂದೆಡೆ ಮತ್ತು ಪಕ್ಷ ಮತ್ತೊಂದೆಡೆ ಅಗತ್ಯ ಸೇವಾ ಕಾರ್ಯಗಳನ್ನು ಕೈಗೊಂಡಿವೆ ಎಂದು ವಿವರಿಸಿದ್ದಾರೆ.
ಒಮ್ಮೆ ನಿರುದ್ಯೋಗ ಸಮಸ್ಯೆ ಎನ್ನುವ ಸಿದ್ದರಾಮಣ್ಣ, ಮತ್ತೆ ಪ್ಲೇಟ್ ಬದಲಿಸಿ ಶೇಕಡಾ 40 ಭ್ರಷ್ಟಾಚಾರ ಎಂದು ರಾಗ ಎಳೆಯುತ್ತಾರೆ. ಅರ್ಕಾವತಿ ಹಗರಣ ಸೇರಿ ವಿವಿಧ ಭ್ರಷ್ಟಾಚಾರ ಹಗರಣಗಳನ್ನು ಬಿಜೆಪಿ ಸರಕಾರ ಬಯಲಿಗೆ ಎಳೆಯಲಿದೆ ಎಂದು ತಿಳಿಸಿದ ಬಳಿಕ ಸಿದ್ದರಾಮಣ್ಣನಿಗೆ ಚಳಿಜ್ವರ ಬಂದಂತಿದೆ; ಅದಕ್ಕಾಗಿಯೇ ಸದಾ ಪ್ರಚಾರದಲ್ಲಿರಲು ಸುಳ್ಳು ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅವರು ಸ್ಪಷ್ಟ ಮಾಹಿತಿ ಇಲ್ಲದೆ ಆರೋಪಗಳನ್ನು ಮಾಡುತ್ತಿದ್ದು, ಬಾಯಿ ಚಪಲಕ್ಕಾಗಿ ಮಾತನಾಡುತ್ತಿದ್ದಾರೆ. ಮಳೆ ಹಾನಿ ಸಂಬಂಧ ನೀವು ಮತ್ತು ನಿಮ್ಮ ಪಕ್ಷದವರು ಎಷ್ಟು ಪ್ರವಾಸ ಮಾಡಿದ್ದೀರಿ? ನಿನ್ನೆ ಕಾಟಾಚಾರಕ್ಕೆ ಬಾದಾಮಿಗೆ ಹೋಗಿ ಬಂದಿದ್ದಲ್ಲವೇ? ನಿಮ್ಮ ಅಸಲಿಯತ್ತು ನಮಗೆ ಮಾತ್ರವಲ್ಲದೆ ಜನರಿಗೂ ಗೊತ್ತಿದೆ. ನಕಲಿ ಸಮಾಜವಾದಿಗಳು, ನಕಲಿ ಬುದ್ಧಿಜೀವಿಗಳ ಜೊತೆ ಸೇರಿ ಮಾತನಾಡುವ ನಿಮ್ಮನ್ನು ಜನರು ನಂಬಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ಮ್ಮ ಸರಕಾರವು ಮಳೆಹಾನಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ಹೆಚ್ಚು ಮಾಡಿದೆ. 5 ಲಕ್ಷದಂತೆ ಪರಿಹಾರ ಕೊಟ್ಟಿದೆ. ಕಾಂಗ್ರೆಸ್ ಅವಧಿಯಲ್ಲಿ ಆದ ರಾಜಕಾಲುವೆ ಒತ್ತುವರಿ ಮತ್ತು ಆ ಸಮಸ್ಯೆ ಪರಿಹರಿಸುವ ದೃಷ್ಟಿಯಿಂದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟಿದೆ. ಇದರ ಕೆಲಸವೂ ನಡೆಯುತ್ತಿದೆ. ಕೋವಿಡ್ ಸಂದರ್ಭ ಮಾತ್ರವಲ್ಲದೆ ನೆರೆ ಪರಿಹಾರ ಕಾಮಗಾರಿಯಲ್ಲೂ ಸರಕಾರ ಹಾಗೂ ಪಕ್ಷದ ಕಾರ್ಯಕರ್ತರು ಜನರ ನೆರವಿಗೆ ಧಾವಿಸಿದ್ದಾರೆ. ನಿಮ್ಮ ಪಕ್ಷ ಕೋವಿಡ್ ಲಸಿಕೆ ವಿರುದ್ಧ ಪ್ರಚಾರ ಮಾಡಿದ್ದು ಜನರಿಗೆ ಮರೆತಿಲ್ಲ ಎಂದು ತಿಳಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ ಭಾರತವು ವಿಶ್ವದಾದ್ಯಂತ ಮೆಚ್ಚುಗೆ ಪಡೆದಿತ್ತು. ಕರ್ನಾಟಕವೂ ಅತ್ಯುತ್ತಮ ನಿರ್ವಹಣೆಗಾಗಿ ಜನರಿಂದ ಶ್ಲಾಘನೆಗೆ ಪಾತ್ರವಾಗಿದೆ. ಗರೀಬ್ ಕಲ್ಯಾಣ್ ಯೋಜನೆಯಡಿ 80 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾಗಿದೆ. ರಾಜ್ಯದ ಸುಮಾರು 7 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಡಬಲ್ ಡೋಸ್ ನೀಡಿ ರಕ್ಷಿಸುವ ಕೆಲಸ ಮಾಡಿದೆ. ಕಾಂಗ್ರೆಸ್ ಸರಕಾರ ಇದ್ದರೆ ದೇಶೀಯ ಲಸಿಕೆ ತಯಾರಿ ಕೇವಲ ಕನಸಾಗಿಯೇ ಉಳಿಯುತ್ತಿತ್ತು. ಜೊತೆಗೆ ಆರೋಗ್ಯ ಕ್ಷೇತ್ರದ ಕನಿಷ್ಠ ಸೌಲಭ್ಯಗಳಿಂದಾಗಿ ಬೀದಿ ಬೀದಿಗಳಲ್ಲಿ ಜನರು ಸಾಯುವಂತಾಗುತ್ತಿತ್ತು ಎಂಬುದು ನಿಮಗೇ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರೇ ನಿಮಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಗೌರವ ಮತ್ತು ಬದ್ಧತೆ ಇದ್ದರೆ ಜನರ ಆಶೋತ್ತರ ಮತ್ತು ಕಷ್ಟಕಾರ್ಪಣ್ಯಕ್ಕೆ ಸ್ಪಂದಿಸಬೇಕು. ಈ ಮೂಲಕ ನೀವು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಘನತೆಯನ್ನು ಎತ್ತಿ ಹಿಡಿಯಬೇಕು. ನೀವು ತಾಕತ್ತಿದ್ದರೆ ಈ ವಿಚಾರವಾಗಿ ಚರ್ಚೆಗೆ ಬಂದರೆ ನಾವೂ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸವಾಲೆಸೆದಿದ್ದಾರೆ.
ಪ್ರಧಾನಿ ಮೋದಿಜಿ ಅವರು ಮಂಗಳೂರಿನ ಭೇಟಿ ವೇಳೆ 3,800 ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದಾರೆ. ಭಾರತದ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ನಾವು ಸರಕಾರ ನಡೆಸುತ್ತಿದ್ದೇವೆ. ರಸ್ತೆಗಳ ಅಭಿವೃದ್ಧಿ, ರೈಲ್ವೆ ಸಂಪರ್ಕ, ವಾಯುಯಾನ ಮಾತ್ರವಲ್ಲದೆ ಜಲ ಸಾರಿಗೆಯನ್ನೂ ನಾವು ಅಭಿವೃದ್ಧಿ ಪಡಿಸುತ್ತಿದ್ದೇವೆ. ಜನಪರ ಅಭಿವೃದ್ಧಿ ಹಾಗೂ ಜನರ ಸಶಕ್ತೀಕರಣ ಕಾರ್ಯ ಬಿಜೆಪಿ ಸರಕಾರಗಳಿಂದ ಆಗುತ್ತಿದೆ. ಕೋವಿಡ್ ಬಳಿಕ ವಿಶ್ವದ ಹಲವು ದೇಶಗಳು ಆರ್ಥಿಕವಾಗಿ ದಿವಾಳಿಯಾಗಿವೆ. ಭಾರತದ ಆರ್ಥಿಕತೆಯ ತ್ವರಿತ ಪುನಶ್ಚೇತನ ಮತ್ತು ಸಾಧನೆಗಳನ್ನು ಅಮೇರಿಕಾ, ಬ್ರಿಟನ್ ಸೇರಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೊಂಡಾಡುತ್ತಿವೆ. ಆದರೆ, ಸಿದ್ದರಾಮಯ್ಯರ ಕಣ್ಣಿಗೆ ಪೊರೆ ಬಂದಂತಿದೆ; ಅವರು ಕಪ್ಪು ಕನ್ನಡಕ ಹಾಕಿದ್ದರಿಂದ ಅಭಿವೃದ್ಧಿ ಕಾರ್ಯಗಳನ್ನು ಕಂಡೂ ಕಾಣದಂತೆ ಜಾಣಗುರುಡರಾಗಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.