ಒಬ್ಬರಾಗುತ ಒಬ್ಬದೇವರು ಹುಟ್ಟಿ ಬಂದರು ಬಂದರು
ಸಾಧುಪುರುಷರು ವೀರಪುರುಷರು ಬಂದು ಹೋದರು ಹೋದರು
ಗೊಡ್ಡು ಮನದಲಿ ಅಡ್ಡಬಿದ್ದೆವು ನಮ್ಮಡಿಯ ಹಿಂದಿಟ್ಟೆವು
ಹೂವುಹಣ್ಣನು ಕೊಟ್ಟು ಅವರನು ಮುಂದೆ ಸಾಗಿಸಿ ಬಿಟ್ಟೆವು
ಒಂದೊಂದು ಸಲ ಅನ್ನಿಸುತ್ತದೆ ಬಹುಷಃ ರಕ್ತದ ಕಲೆಗಳು ಹಾಗೆ ಉಳಿಯುವಂತೆ ಇದ್ದರೆ, ಭಾರತದ ಮಣ್ಣು ಕೆಂಪಾಗಿಯೇ ಉಳಿಯುತ್ತಿತ್ತೋ ಏನೋ?! ಲಕ್ಷಾಂತರ ಪುಣ್ಯವಂತ ಭಾರತೀಯರು ಈ ಮಣ್ಣಿನ ಸ್ವಾತಂತ್ರದ ನೀರಡಿಕೆಗೆ ತಮ್ಮ ರಕುತವ ಬಸಿದು ಕೊಟ್ಟರು. ಸುಮ್ಮನೆ ಬರಲಿಲ್ಲ ನಲವತ್ತೇಳರ ಔನತ್ಯ! ಚಿನ್ನದ ಚಮಚೆಯ ರಾಜನ ಖಡ್ಗದಿಂದ ಹಿಡಿದು ಆಗಸ ಕಾಣಿಸುವ ಗುಡಿಸಲಿನ ಸಾಮಾನ್ಯನ ಕೋಲಿನ ತನಕ ಅನೇಕರು ಅವರ ಸಾಮರ್ಥ್ಯ ಮೀರಿ ಹೋರಾಡಿದರು. ನಾವೆಲ್ಲೋ ಬೆರಳೆಣಿಕೆಯ ಕೆಲವರನ್ನು ನೆನಸಿ ಪೂಜೆಗೈದು ಸಂಪನ್ನರಾದ ಭಾವ ಹೊಂದುತ್ತೇವೆ. ಅಂತಹ ಹಲವರನ್ನು ಕಿಂಚಿತ್ತಾದರೂ ನೆನೆಯುವ ಸಮಯ ಬಂದಿದೆ.
ಆಗಸ್ಟ್ 14 ರಿಂದ ದೂರದರ್ಶನ ವಾಹಿನಿಯಲ್ಲಿ ಸ್ವರಾಜ್ ಎಂಬ ಭಾರತ ವೀರರ ಮತ್ತು ವೀರ ವನಿತೆಯರ ಇತಿಹಾಸ ಹೊತ್ತ ಎಪ್ಪತ್ತೈದು ಸಂಚಿಕೆಗಳ ಧಾರವಾಹಿ ಆರಂಭಗೊಂಡಿದೆ. ಬಹಳಷ್ಟು ಸುದ್ದಿ ಮಾಡಬೇಕಿದ್ದ ಈ ಆರಂಭಕ್ಕೆ ಅಷ್ಟೇನೂ ಪ್ರಚಾರ ನೀಡಿಯೇ ಇಲ್ಲ. ಸ್ವರಾಜ್ ಮಹಾಕಾವ್ಯವು ಒಂಬತ್ತು ಸ್ಥಳೀಯ ಭಾಷೆಗಳಲ್ಲೂ ಲಭ್ಯವಿದ್ದು, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ, ಗುಜರಾತಿ, ಬೆಂಗಾಲಿ, ಒಡಿಯಾ, ಅಸ್ಸಾಮಿಗಳಲ್ಲಿ ಕೂಡ ಲಭ್ಯವಿದೆ.
ಪ್ರಫುಲ್ಲ ಕೇತ್ಕರ್ ನೇತೃತ್ವದಲ್ಲಿ ಐದು ಜನರ ಸಮಿತಿ ಹೆಚ್ಚಿನ ಅಧ್ಯಯನ ಮತ್ತು ಅನ್ವೇಷಣೆ ಮಾಡಿ ಆಸ್ಥೆಯಿಂದ ಹೊತ್ತು ತಂದ ಕೃತಿ ಇದಾಗಲೇ ಎರಡು ಸಂಚಿಕೆಗಳ ಕಂಡಿದೆ. ಕೇತ್ಕರ್ ಅವರೇ ಹೇಳುವಂತೆ, ಪ್ರಸ್ತುತ ಬರೆದಿಟ್ಟ ಇತಿಹಾಸವು ಮೊದಲನೇ ಸ್ವತಂತ್ರ ಸಂಗ್ರಾಮದ ನಂತರದ ಘಟನೆಗಳಿಗೆ ಮಾತ್ರ ಒತ್ತು ನೀಡುತ್ತದೆ ಮತ್ತು ಈ ಹಂತದಲ್ಲಿ ಸತ್ಯಾಗ್ರಹದ ವಿಧಾನಗಳಿಗೆ ಜೋತು ಬಿದ್ದು ಬಲಿದಾನಗಳ ಸಂಖ್ಯೆಯು ಹೆಚ್ಚಾಯಿತು ಎನ್ನುತ್ತಾರೆ. ಅದಕ್ಕೂ ಹಿಂದಿನ ಅನನ್ಯ ದೇಶಭಕ್ತರ ತ್ಯಾಗಗಳಿಗೆ ಮರು ವಿವರಣೆ ನೀಡುವ ಅಗತ್ಯವಿದೆ ಹಾಗೂ ಅದನ್ನು ಸ್ವರಾಜ್ ಮಹಾಕಾವ್ಯ ಮಾಡಲಿದೆ ಎನ್ನುತ್ತಾರೆ.
ವಾಸ್ಕೋ ಡಿ ಗಾಮ ಎಂಬ ವ್ಯಾಪಾರಿಯ ವಲಸೆಯೊಂದಿಗೆ ಆರಂಭಗೊಳ್ಳುವ ಧಾರವಾಹಿ ರಾಣಿ ಅಬ್ಬಕ್ಕ, ವೇಲು ನಾಚಿಯಾರ್, ಬಕ್ಷಿ ಜಗಬಂಧು, ತಿರೋಟ್ ಸಿಂಗ್, ಸಿದ್ದು ಮುರ್ಮು, ಕನ್ಹು ಮುರ್ಮು, ಕನ್ಹೋಜಿ ಅಂಗ್ರೆ, ಶಿವಪ್ಪ ನಾಯಕ, ರಾಣಿ ಗೈಡಿನ್ಲಿಯು, ತಿಲ್ಕಾ ಮಾಜ್ಹಿ, ರಾಣಿ ಲಕ್ಷ್ಮೀಬಾಯಿ, ಛತ್ರಪತಿ ಶಿವಾಜಿ, ತಾತ್ಯಾ ಟೋಪೆ, ಮೇಡಂ ಕಾಮಾ ಸೇರಿದಂತೆ ಅನೇಕ ಮಹಾವೀರರ ಕಥೆ ಆಲಿಸಿಸುವ ಆಸಕ್ತಿ ಹೊಂದಿದೆ. ಬೇಕಾಗಿರುವುದು ವೀಕ್ಷಕರ ಮನಸ್ಸು ಅಷ್ಟೇ. ಸ್ವಾತಂತ್ರದ ಅಮೃತ ಮಹೋತ್ಸವ ಸಂದರ್ಭದಲ್ಲಿ ಗೃಹ ಮಂತ್ರಿ ಅಮಿತ್ ಶಾ ಅವರು ಸ್ವರಾಜ್ ಕಥನಕ್ಕೆ ಶ್ರೀ ಗಣೇಶ ಮಾಡಿದರು. ಸರಿ ಸುಮಾರು ಐದು ನೂರ ಐವತ್ತಕ್ಕೂ ಹೆಚ್ಚಿನ ಭಾರತಾಂಬೆಯ ಪುತ್ರ ಪುತ್ರಿಯರ ಅಮೂಲ್ಯ ಜೀವನವನ್ನು ಹೊತ್ತು ಪ್ರತಿ ಆದಿತ್ಯವಾರ ರಾತ್ರಿ ದೂರದರ್ಶನ ಬರಲಿದೆ. ಭಾಷಾಂತರ ಹೊಂದಿದ ಸಂಚಿಕೆಗಳು ಶನಿವಾರ ರಾತ್ರಿ ಬರಲಿವೆ. ತಪ್ಪದೆ ವೀಕ್ಷಿಸಿ.
ಮೂರು ಸಾಗರ ನೂರು ಮಂದಿರ ದೈವಸಾಸಿರವಿದ್ದರೆ
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿಹಿಮಾಲಯವಿದ್ದರೆ
ವೇದವಿದ್ದರೆ ಭೂಮಿಯಿದ್ದರೆ ಘನಪರಂಪರೆಯಿದ್ದರೆ
ಏನು ಸಾರ್ಥಕ ಮನೆಯ ಜನರೆ ಮಲಗಿ ನಿದ್ರಿಸುತ್ತಿದರೆ!
ಜೈ ಹಿಂದ್, ವಂದೇ ಮಾತರಂ.
✍️ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.