ಬೆಳ್ತಂಗಡಿ : ವೈದ್ಯ ಪದ್ಧತಿಯ ಎಲ್ಲಾ ರೀತಿಯ ಚಿಕಿತ್ಸೆಗಳು ಒಂದೇ ಕಡೆ ಸಿಗುವಂತಹ ಕೇಂದ್ರೀಕೃತ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಕೈಗೊಂಡರೆ ದೆಹಲಿ ರಾಜ್ಯ ಸರಕಾರ ಎಲ್ಲಾ ನೆರವನ್ನು ನೀಡಲು ಸಿದ್ಧ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಅವರು ಬುಧವಾರ ಧರ್ಮಸ್ಥಳದಲ್ಲಿ ಎಸ್ಡಿಎಂ ಪ್ರಕೃತಿಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ 22ನೇ ವರ್ಷದಲ್ಲಿನ 54ವಿದ್ಯಾರ್ಥಿಗಳಿಗೆ ಪದವಿ ಹಾಗೂ 9 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಿ ಹಾಗೂ ಕಾಲೇಜಿನ ವಿದ್ಯಾರ್ಥಿನಿಯರಿಗೆ ನಿರ್ಮಿಸಲಾದ ಪ್ರಕೃತಿ ವಿದ್ಯಾರ್ಥಿನಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
ಎಲೋಪತಿ, ಹೋಮಿಯೋಪತಿ, ಆಯುರ್ವೇದ, ನ್ಯಾಚುರೋಪತಿ, ಯುನಾನಿ, ಯೋಗ ಇವೆಲ್ಲದರ ಮೂಲಕ ಒಂದೇ ಸ್ಥಳದಲ್ಲಿ ಸಮಗ್ರ ಚಿಕಿತ್ಸೆ ನೀಡುವ ಯೋಜನೆಯನ್ನು ಕೈಗೊಳ್ಳಬೇಕು. ಬಂದ ರೋಗಿಯನ್ನು ಎಲ್ಲಾ ತಜ್ಞ ವೈದ್ಯರು ಪರೀಕ್ಷಿಸಿ ಯಾವ ಚಿಕಿತ್ಸೆ ಸೂಕ್ತ ಎಂದು ನಿರ್ಧರಿಸಿ ಆಯಾ ಪದ್ಧತಿಯಲ್ಲಿ ಚಿಕಿತ್ಸೆ ನೀಡುವಂತಾಗಬೇಕು. ಇದು ಸವಾಲಿನ ಕಾರ್ಯವಾಗಿದ್ದರೂ ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ. ಇಂತಹ ವ್ಯವಸ್ಥೆಗೆ ಡಾ|ಹೆಗ್ಗಡೆಯವರು ಮುಂದಾದರೆ ನನ್ನ ಸರಕಾರ ಯಾವುದೇ ಸಹಾಯ ಮಾಡಲು ಸಿದ್ದ ಎಂದು ಕೇಜ್ರಿವಾಲ್ ಪ್ರಕಟಿಸಿದರು.
ಪದವಿಯನ್ನು ಪಡೆಯುವುದು ಭಾವನಾತ್ಮಕ ಮತ್ತು ವಿಶೇಷ ದಿನವಾಗಿದೆ. ವಿದ್ಯಾರ್ಥಿಗಳು ಇಂದಿನಿಂದ ಹೊಸ ಜೀವನಕ್ಕೆ ಹೆಜ್ಜೆ ಇಡಬೇಕಾಗಿದೆ. ಮುಂದಿನ ಪಯಣ ಸವಾಲಿನಿಂದ ಕೂಡಿದ್ದು ಅದಕ್ಕೆ ತಕ್ಕಂತೆ ಎಲ್ಲಾ ತಯಾರಿ ಅಗತ್ಯವಾಗಿದೆ. ಜೀವನದಲ್ಲಿ ತೃಪ್ತಿ, ಸಮಾಧಾನ, ಸುಖ ಸಿಗಬೇಕಾದರೆ ಹಣಕ್ಕಾಗಿ ತನ್ನತನವನ್ನು ಮಾರಬೇಡಿ. ಎಲ್ಲಿಯೂ ಜಾರದಂತೆ ಪ್ರಾಮಾಣಿಕವಾಗಿ ಮುಂದುವರಿಯಿರಿ. ನಾವು ಮಾಡುವ ಸಂಪಾದನೆ ಕುಟುಂಬ ಪೋಷಣೆಗೆಂದು ಇದ್ದರೂ ನಮ್ಮ ಸಂಪಾದನೆಯ ಒಂದು ಅಂಶವನ್ನು ಸಮಾಜಕ್ಕೆ ಅರ್ಪಿಸಬೇಕು. ಇದರಿಂದ ತೃಪ್ತಿ ಸಿಗುತ್ತದೆಯಲ್ಲದೆ ನಮ್ಮ ಅಹಂ ಕಡಿಮೆಯಾಗುತ್ತದೆ. ಜೊತೆಗೆ ಪ್ರಜಾಪ್ರಭುತ್ವದ ಉಳಿವಿಗಾಗಿ ಸಮಯದ ದಾನವೂ ಅಗತ್ಯವಾಗಿದೆ. ರೋಗಿಯು ಗುಣಮುಖವಾಗುವುದು ಶೇ.50ರಷ್ಟು ಔಷಧಿಯಿಂದಾದರೆ ಇನ್ನುಳಿದದ್ದು ವೈದ್ಯರ ಸಮಾಧಾನದಿಂದ ಎಂದು ಅವರು ವೈದ್ಯರ ಸನ್ನಡತೆ, ಸುಸ್ವಭಾವವೇ ವೃತ್ತಿಯಲ್ಲಿ ಮುಖ್ಯವಾಗುತ್ತದೆ ಎಂದು ವೈದ್ಯ ಪದವಿ ಪಡೆದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಪ್ರಕೃತಿಚಿಕಿತ್ಸೆಯ ಸ್ವಾನುಭವವನ್ನು ಹಂಚಿಕೊಂಡ ಕೇಜ್ರಿವಾಲ್, ದಿಲ್ಲಿ ಚುನಾವಣೆ ಸಂದರ್ಭ ತೀವ್ರ ಒತ್ತಡ, ದಿನವೀಡಿಯ ಪ್ರಚಾರದಿಂದಾಗಿ ವಿಪರೀತ ಕೆಮ್ಮು, ಶುಗರ್ ಪ್ರಾರಂಭವಾಗಿತ್ತು. ಇದರ ಚಿಕಿತ್ಸೆಗಾಗಿ ಅನೇಕ ವೈದ್ಯರ ಬಳಿ ಹೋಗಿದ್ದೆ. ಕೊನೆಗೆ ಬೆಂಗಳೂರಿನ ಜಿಂದಾಲ್ನಲ್ಲಿ ಪ್ರಕೃತಿ ಚಿಕಿತ್ಸೆಯನ್ನು 10 ದಿನಗಳ ಕಾಲ ಪಡೆದುಕೊಂಡ ಮೇಲೆ ಇದುವರೆಗೆ ಯಾವುದೇ ಸಮಸ್ಯೆ ಬಂದಿಲ್ಲ. ಅಂದು ನನಗೆ ಚಿಕಿತ್ಸೆ ನೀಡಿದ ವಿದ್ಯಾರ್ಥಿನಿಯು ಇಲ್ಲಿನ ಹಳೆವಿದ್ಯಾರ್ಥಿಯೆಂದು ತಿಳಿಯಿತು. ಈ ಸಂಬಂಧ ಇಂದು ಧರ್ಮಸ್ಥಳಕ್ಕೆ ನನ್ನನ್ನು ಬರುವಂತೆ ಮಾಡಿದೆ. ಅನಾರೋಗ್ಯದಿಂದ ತಾನು ನಾಶವಾಗುವ ಮೊದಲು ಪ್ರಕೃತಿ ಚಿಕಿತ್ಸೆಯ ಮೂಲಕ ರಕ್ಷಣೆಮಾಡಿಕೊಳ್ಳುವುದೇ ಮುಖ್ಯ ಎಂದ ದೆಹಲಿ ಮುಖ್ಯಮಂತ್ರಿ ಧರ್ಮಸ್ಥಳವು ಪ್ರಕೃತಿ ಚಿಕಿತ್ಸೆಯ ಬೃಹತ್ ಕೇಂದ್ರವಾಗಿ ರೂಪುಗೊಳ್ಳುವುದಕ್ಕೆ ಸಾಕಷ್ಟು ಅವಕಾಶಗಳಿರುವುದನ್ನು ವಿಶ್ಲೇಷಿಸಿದರು.
ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ ಪದವಿ ಪಡೆದ ವೈದ್ಯವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಿ, ಶಿಕ್ಷಣ ಎಷ್ಟೇ ಪಡಕೊಂಡರೂ ಭಾವನಾತ್ಮಕ ಸಂಬಂಧ ಮುಖ್ಯವಾಗುತ್ತದೆ. ಹೊರದೇಶಗಳಲ್ಲಿಯೂ ಇಂದು ಪ್ರಕೃತಿ ಚಿಕಿತ್ಸೆಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ. ಕೊನೆಗೊಂದು ದಿನ ಈ ಚಿಕಿತ್ಸೆಯೇ ಅಂತಿಮವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ ಅವರು ರಾಜ್ಯ ಸರಕಾರ ವೈದ್ಯಪದ್ದತಿಯ ಎಲ್ಲಾ ಚಿಕಿತ್ಸೆಗಳು ಒಂದೆಡೆ ಸಿಗುವಂತೆ ಪ್ರಯತ್ನಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರು ಮುಖ್ಯಮಂತ್ರಿ ಕೇಜ್ರಿವಾಲ್ರ ಸಲಹೆಯಂತೆ ವಿವಿಧ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ನೀಡುವ ಸೇವಾ ಕೇಂದ್ರವನ್ನು ಧರ್ಮಸ್ಥಳದ ವತಿಯಿಂದ ದೆಹಲಿಯಲ್ಲಿ ಸದ್ಯದಲ್ಲಿಯೇ ಪ್ರಾರಂಭಿಸಲಾಗುವುದು ಎಂದು ತಿಳಿಸಿ ಈ ಬಗ್ಗೆ ಮುಖ್ಯಮಂತ್ರಿಯವರ ಪೂರ್ಣ ಸಹಕಾರವನ್ನು ಕೋರಿದರು. ಕೇಜ್ರಿವಾಲ್ರ ಎಲ್ಲಾ ಕನಸು ನನಸಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿರುವುದಾಗಿ ಹೇಳಿದ ಹೆಗ್ಗಡೆಯವರು ಅವರಿಗೆ ಸರ್ವ ರೀತಿಯ ಯಶಸ್ಸನ್ನು ಹಾರೈಸಿದರು.
ಪ್ರಕೃತಿ ಚಿಕಿತ್ಸಾ ಪದ್ಧತಿಯು ಔಷಧಿ ರಹಿತ ಶುಶ್ರೂಷೆಯಾಗಿದ್ದು ನಮ್ಮ ಆಹಾರ ಸೇವನೆ ಮತ್ತು ವರ್ತನೆಯಲ್ಲಿ ಪರಿವರ್ತನೆ ಆದರೆ ಆರೋಗ್ಯಪೂರ್ಣ ಜೀವನ ನಡೆಸಬಹುದು. ಯಾವುದೇ ದುಶ್ಚಟಕ್ಕೆ ಬಲಿಯಾಗದೆ ಶುಚಿ-ರುಚಿಯಾದ, ಹಿತ-ಮಿತವಾದ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಷೇಂದ್ರ ಕುಮಾರ್, ಉಪಾಧ್ಯಕ್ಷ ಪ್ರೊ.ಪ್ರಭಾಕರ್, ಕಾಲೇಜಿನ ಪ್ರಾಚಾರ್ಯ ಡಾ|ಪ್ರಸಾಂತ ಶೆಟ್ಟಿ, ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ|ಬಿ.ಯಶೋವರ್ಮ ಸ್ವಾಗತಿಸಿದರು. ಕಾಲೇಜಿನ ಯೋಗ ಥೆರಪಿಯ ಡೀನ್ ಡಾ|ಶಿವಪ್ರಸಾದ್ ಶೆಟ್ಟಿ ವಂದಿಸಿದರು. ಡಾ|ರೀಟಾ ಮರಿಟಾ ಡಿಸೋಜ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.