ಇದು ಕೊಡೈಕೆನಾಲ್ನ ಒಂದು ಹತಾಶ ಕಥೆ. ಗಿರಿಧಾಮಗಳ ರಾಜಕುಮಾರಿ ಎಂದೇ ಬಿಂಬಿತವಾಗಿರುವ ಈ ಪ್ರದೇಶವು ಯೂನಿಲಿವರ್ ಕಂಪೆನಿ ಸ್ಥಾಪನೆಯಿಂದಾಗಿ ಭೂಮಾಲಿನ್ಯಕ್ಕೆ ಕಾರಣವಾಗಿದೆ. ತಮಿಳುನಾಡಿನ ಕೊಡೈಕೆನಾಲ್ನಲ್ಲಿ ಹಿಂದೂಸ್ಥಾನ್ ಯೂನಿಲಿವರ್ ಲಿಮಿಟೆಡ್ ಕಾರ್ಖಾನೆಯಿಂದ ಪಾದರಸ (ಮರ್ಕ್ಯೂರಿ) ವಿಷ ಬಿಡಲಾಗುತ್ತಿದೆ. ಚೆನ್ನೈನ ಸಂಗೀತ ಕಲಾವಿದೆ ಸೋಫಿಯಾ ಅಶ್ರಫ್ ’ಕೊಡೈಕೆನಾಲ್ ವೋಂಟ್’ ವೀಡಿಯೋವೊಂದರ ಮೂಲಕ ಇದನ್ನು ಆಕ್ಷೇಪಿಸಿದ್ದಾರೆ. ಇದರ ವಿರುದ್ಧ ಹೋರಾಡಲು ಕೈ ಜೋಡಿಸುವಂತೆ ಕರೆ ನೀಡಿದ್ದಾರೆ. ’ಕೊಡೈಕೆನಾಲ್ ವೋಂಟ್’ ಎಂಬ ವೀಡಿಯೋವನ್ನು ಎನ್ಜಿಒ ಬಿಡುಗಡೆಗೊಳಿಸಿದೆ.
’ಈ ಸಮಸ್ಯೆಗೆ ಪರಿಹಾರ ದೊರೆಯುವವರೆಗೂ ಕೊಡೈಕೆನಾಲ್ ಜಗ್ಗುವುದಿಲ್ಲ’ ಎಂದು ಸೋಫಿಯಾ ಯೂನಿಲಿವರ್ಗೆ ತೀವ್ರವಾಗಿ ಎಚ್ಚರಿಸಿದ್ದಾರೆ. ಸೋಫಿಯಾ ಅಶ್ರಫ್ ತನ್ನ ಸಾಮಾಜಿಕ ಕಳಕಳಿಯ ಸಂಗೀತಗಳಿಗೆ ಹೆಸರುವಾಸಿ.
2001ರಲ್ಲಿ ಹಿಂದೂಸ್ಥಾನ್ ಯೂನಿಲಿವರ್ನ ಥರ್ಮಾಮೀಟರ್ ಕಾರ್ಖಾನೆ ಮುಚ್ಚಲ್ಪಟ್ಟರೂ ಇದರ ವಿರುದ್ಧದ ಪ್ರಚಾರ ಅಭಿಯಾನ ನಡೆಯುತ್ತಲಿದೆ. ಈ ಸಂಸ್ಥೆಯಿಂದ ಪಾದರಸ ಕಲುಷಿತ ಗಾಜುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದ್ದುದು ಸಾಬೀತಾಗಿದೆ. ಕಾರ್ಖಾನೆಯು ತನ್ನದೇ ನಿಯಮ ಉಲ್ಲಂಘಿಸಿ ಇದನ್ನು ವಿತರಕರಿಗೆ ಮಾರುತ್ತಿದ್ದು, ಪರಿಸರ ಮಾಲಿನ್ಯ ಉಂಟಾಗಿದೆ.
ಮೊದಲಿಗೆ 1980ರಲ್ಲಿ ಪಾಂಡ್ಸ್ ಈ ಕಂಪೆನಿಯನ್ನು ಅಮೇರಿಕದಿಂದ ಭಾರತಕ್ಕೆ ತಂದಿದ್ದು, 1987ರಲ್ಲಿ ಪಾಂಡ್ಸ್ ಇಂಡಿಯಾ ಹಾಗೂ ಥರ್ಮಾಮೀಟರ್ ಕಾರ್ಖಾನೆಯನ್ನು ಹಿಂದೂಸ್ಥಾನ್ ಯೂನಿಲಿವರ್ ಸ್ವಾಧೀನಪಡಿಸಿಕೊಂಡಿತು. 2000ರಲ್ಲಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಲವಾರು ನೌಕರರು ಅನಾರೋಗ್ಯ ಸಮಸ್ಯೆ ಬಗ್ಗೆ ದೂರು ನೀಡಿದ್ದರು. ಕೆಲವು ಸಾರ್ವಜನಿಕ ಹಿತಾಸಕ್ತಿ ಗುಂಪುಗಳು ಯೂನಿಲಿವರ್ ಸರಿಯಾದ ರೀತಿಯಲ್ಲಿ ಪಾದರಸ ನಿಭಾಯಿಸುತ್ತಿಲ್ಲ. ಇದರಿಂದಾಗಿ ನೌಕರರು ಮತ್ತು ಸುತ್ತಲಿನ ಜನರು ಪ್ರತಿಕೂಲ ಮತ್ತು ಅಪರಿವರ್ತಿತ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಹೇಳಿವೆ.
ಕಾರ್ಖಾನೆಯಲ್ಲಿ 900 ಕೆಜಿ ಪಾದರಸ ಬಳಸಿ ವಾರ್ಷಿಕ 163 ಮಿಲಿಯನ್ ಥರ್ಮಾಮೀಟರ್ಗಳನ್ನು ಉತ್ಪಾದಿಸಲಾಗುತ್ತಿತ್ತು. ಇವುಗಳು ಅಮೇರಿಕ ಹಾಗೂ ಯೂರೋಪ್ಗಳಿಗೆ ರಫ್ತಾಗುತ್ತಿದ್ದವು. ಆದರೆ ಇವುಗಳ ತ್ಯಾಜ್ಯಗಳನ್ನು ಸಮೀಪವೇ ಬಿಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕಾರ್ಖಾನೆಯಿಂದ ವರ್ಷಗಳ ಕಾಲ ಬಿಡಲಾದ ತ್ಯಾಜ್ಯಗಳನ್ನು ಕೊಡೈಕೆನಾಲ್ನಲ್ಲಿ ಶೇಖರಿಸಲಾಗುತ್ತಿದ್ದು, ಪರಿಸರ ಮತ್ತು ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರಿದೆ. ನೌಕರರು ಪರಿಹಾರ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದರೂ, ಯೂನಿಲಿವರ್ ಮಾತ್ರ ನೌಕರರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸಮರ್ಥಿಸುತ್ತದೆ. ಆದರೆ ಯೂನಿಲಿವರ್ ಕಳೆದ 14 ವರ್ಷಗಳಿಂದ ಮಲೀನಗೊಂಡ ಸ್ಥಳವನ್ನು ಸ್ವಚ್ಛಗೊಳಿಸುವ ಅಲ್ಲದೇ ನೌಕರರು ಮತ್ತು ಸುತ್ತಲಿನ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
ಚೆನ್ನೈ ಮೂಲದ ಎನ್ಜಿಒ ನಡೆಸಿದ ಅಧ್ಯಯನ ಕಮ್ಯೂನಿಟಿ ಎನ್ವೈರ್ನಮೆಂಟಲ್ ಮಾನಿಟರಿಂಗ್ ಪ್ರಕಾರ ಸ್ಥಗಿತಗೊಳಿಸಲಾಗಿರುವ ಈ ಕಾರ್ಖಾನೆ ಇಂದಿಗೂ ಪಾದರಸ ಸೋರಿಕೆ ಮಾಡುತ್ತಿದೆ.
ಈ ವೀಡಿಯೋ ಕುರಿತು ಪ್ರತಿಕ್ರಿಯಿಸಿರುವ ಯುನಿಲಿವರ್, ತನ್ನ ನೌಕರರ ಸುರಕ್ಷತೆಯು ಅದರ ಪ್ರಥಮ ಆದ್ಯತೆಯಾಗಿದೆ. ಕಂಪೆನಿಯ ನೌಕರರ ಆರೋಗ್ಯ ಮತ್ತು ಈ ಪರಿಸರದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಯಾವುದೇ ಹಾನಿ ಸಂಭವಿಸಿರುವ ಪುರಾವೆಗಳು ಕಂಡುಬಂದಿಲ್ಲ. ಜೊತೆಗೆ 2000-2001ರಲ್ಲಿ ಸುಮಾರು 7.4 ಟನ್ಗಳಷ್ಟು ಪಾದರಸ ಕಲುಷಿತ ಗಾಜುಗಳ ವಿಲೇವಾರಿ ಮಾಡಲಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಕಂಪೆಯು ೨೦೦೯ರಲ್ಲಿ ಪೂರ್ವ ಪರಿಹಾರಗಳನ್ನು ಆರಂಭಗೊಳಿಸಿತ್ತು. ಆದರೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (TNPCB) ಮಾನದಂಡದಿಂದಾಗಿ ಈ ಪ್ರಯತ್ನಗಳನ್ನು ಎನ್ಜಿಓ ತಳ್ಳಿಹಾಕಿತು. ಆದ್ದರಿಂದ ಈ ಕಾರ್ಯ ಸ್ಥಗಿತಿಗೊಂಡಿದೆ ಎಂದು ಹೇಳಿದೆ.
ಮದ್ರಾಸ್ ಹೈಕೋರ್ಟ್ ಸಲಹೆಯಂತೆ ನ್ಯಾಯಯುತ ಮತ್ತು ತೃಪ್ತಿದಾಯಕ ವಿಶ್ಲೇಷಣೆ ಪಡೆಯುವಲ್ಲಿ ಶ್ರಮಿಸುತ್ತಿದ್ದೇವೆ ಎಂದಿದೆ. ಉನಿಲಿವರ್ ತನ್ನ ಮಾಜಿ ನೌಕರ ಪ್ರತಿನಿಧಿಗಳೊಂದಿಗೆ 2014ರಿಂದ ಈಚೆಗೆ ಹಲವು ಚರ್ಚೆಗಳನ್ನೂ ನಡೆಸಿವೆ ಎಂದು ತಿಳಿಸಿದೆ. ಕಂಪೆನಿಯು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಒಪ್ಪಿಗೆ ಪಡೆದ ಬಳಿಕ ಕಾರ್ಖಾನೆ ಸುತ್ತಲಿನ ಪ್ರದೇಶದ ಮಣ್ಣು ಸ್ವಚ್ಛಗೊಳಿಸುವ ಯೋಜನೆ ರೂಪಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.