ಮೊದಲೇ ಹೇಳಿಬಿಡುತ್ತೇನೆ, ಇಲ್ಲಿ ಯಾವುದೇ ರಾಜ್ಯದ ಅಥವಾ ಭಾಷೆಯ ವಿರುದ್ಧದ ಹೋರಾಟ ಅಲ್ಲ. ಇದು ಕೇವಲ ನಮ್ಮ ಹಕ್ಕಿನ ಪ್ರಶ್ನೆ. ನೀವೊಂದು ಸರ್ಕಾರಿ ಅಥವಾ ಖಾಸಗಿ ಕಂಪನಿಯ ಉದ್ಯೋಗಿ ಆಗಿರಬಹುದು ಅಥವಾ ನಿಮಗೆ ಸಂಬಂಧಿತರು. ಒಬ್ಬ ಶಿಕ್ಷಕ, ಬ್ಯಾಂಕರ್, ರೈಲ್ವೆ, ಅಂಚೆ, ದೂರವಾಣಿ ಹೀಗೆ ಯಾವುದೇ ಕ್ಷೇತ್ರ ಇರಲಿ, ನಿಮ್ಮ ಪಕ್ಕ ಕೂತವನು ನಿಮ್ಮ ಸಹೋದ್ಯೋಗಿ ಒಬ್ಬನಾದರೂ ಭಾರತದ ಯಾವುದೋ ಬೇರೆ ಮೂಲೆಯಿಂದ ಬಂದಿರಲೇಬೇಕು ಅಲ್ಲವೇ? ಸಂತೋಷ. ನಿಮ್ಮೊಂದಿಗೆ ಅತಿ ಹೆಚ್ಚಿನ ಅನ್ಯೋನ್ಯತೆ ಕೂಡ ಹೊಂದಿರಲೂಬಹುದು. ಗಡಿಗಳ ಮೀರಿದ ಬಾಂಧವ್ಯ ಎಂದು ನೀವು ಯಾವತ್ತೋ ಸ್ಟೇಟಸ್ ಅಪ್ಡೇಟ್ ಮಾಡಿರುವ ಸಾಧ್ಯತೆ ಕೂಡ ಇದೆ. ಏನು ಇಷ್ಟೊಂದು ಪೀಠಿಕೆ ಅಂದುಕೊಂಡ್ರಾ?! ಆಗಲಿ ಒಂದೇ ನಿಮಿಷ. ನೀವೊಬ್ಬ ಬ್ಯಾಂಕರ್ ಅಂದುಕೊಳ್ಳೋಣ. ನಿಮ್ಮ ಸಹೋದ್ಯೋಗಿ ಆಂಧ್ರ, ಕೇರಳ, ಬಿಹಾರ, ಒಡಿಸ್ಸಾ, ತಮಿಳುನಾಡು, ಜಾರ್ಖಂಡ್ ಕೂಡ ಆಗಿರಬಹುದು. ಅವನು ನಿಮ್ಮಂತೆ ಪರೀಕ್ಷೆ ಬರೆದು ಬಂದಿದ್ದು ಅದಷ್ಟೇ ಅಲ್ಲವೇ ಅವನ ಅರ್ಹತೆ. ಆದರೆ ನಿಮ್ಮದೇ ಜಿಲ್ಲೆಯ, ನಿಮ್ಮದೇ ತಾಲ್ಲೂಕಿನ ನಿಮ್ಮದೇ ಬ್ಯಾಂಕಿನ ವ್ಯಕ್ತಿ ದೂರದ ಯಾವುದೋ ಜಿಲ್ಲೆಯಲ್ಲಿ ನಿಮ್ಮ ಊರಿಗೆ ವರ್ಗಾವಣೆ ಪಡೆಯಲು ಒದ್ದಾಡುತ್ತಿದ್ದಾನೆ. ಅವರ ಪೋಷಕರ ಒಬ್ಬನೇ ಮಗ, ಯಾವುದೇ ಕಾರ್ಮಿಕ ಸಂಘಟನೆಯ ಕಣ್ಣಿಗೂ ಬೇಡವಾದ ವ್ಯಕ್ತಿ.
ಅದಕ್ಕೇನಿಗ? ಬೇಕಾದ್ರೆ ಬರ್ಲಿ. ಇದೆಯಲ್ಲ ವಾರ್ಷಿಕ ವರ್ಗಾವಣೆ! ಬರಲಿ ಬಿಡಿ. ಹೇಗೆ ಬರುತ್ತಾನೆ ಸ್ವಾಮಿ? ನಿಮ್ಮ ಆತ್ಮೀಯ ಒಪ್ಪಿದರೆ ಅಷ್ಟೇ ಅಲ್ವಾ? ಅವನು ಬರಲು ಸಾಧ್ಯ?! ಇದೊಂದು ಉದಾಹರಣೆ ಅಷ್ಟೇ. ಯಾವ ಬ್ಯಾಂಕಿನ ಕಾರ್ಮಿಕ ಅಥವಾ ಅಧಿಕಾರಿಗಳ ಸಂಘಟನೆ ಕೂಡ ಇದರ ವಿರುದ್ಧ ದನಿ ಎತ್ತಲಾರದು. ಯಾಕೆಂದರೆ ಅನ್ಯ ರಾಜ್ಯಗಳ ಉದ್ಯೋಗಿಗಳು ಕೂಡ ಅವರ ಸದಸ್ಯರೇ ಅಲ್ಲವೇ? ನಿಮಗೆ ಗೊತ್ತಿರಲಿ ಎಷ್ಟೋ ಅಂತಹ ಸಂಘಟನೆಗಳ ಮುಖ್ಯಸ್ಥರಾಗಿ ನಿಮ್ಮ ಅನ್ಯ ರಾಜ್ಯ ಮಿತ್ರರು ಇದಾಗಲೇ ಅಧಿಕಾರ ಪಡೆದುಕೊಂಡಾಗಿದೆ. ವಾದಗಳು ಶುರು ಆಗಲಿ, ಇದು ಭಾರತ, ಅವರಿಗೂ ಬದುಕುವ ಹಕ್ಕಿದೆ, ಎಲ್ಲಾದರೂ ದುಡಿದು ತಿನ್ನುವ ಅಧಿಕಾರ ಇದೆ ಇತ್ಯಾದಿ, ಇತ್ಯಾದಿ. ಎಲ್ಲಾದರೂ ಇರಲಿ, ಆದರೆ ಕರ್ನಾಟಕವೇ ಯಾಕೆ?
ಈ ಮೊದಲೇ ಹೇಳಿದಂತೆ ಇದು ಹೋರಾಟ ಅಲ್ಲ, ಒಂದು ಮೂಲಭೂತ ಪ್ರಶ್ನೆ. ನಾಳೆ ನೀವೋ, ನಿಮ್ಮ ಪೀಳಿಗೆಯೋ ಅಥವಾ ನಿಮ್ಮ ಇಷ್ಟಪಾತ್ರರು ಈ ಗೋಳಿಗೆ ಸಿಲುಕಿ ರೋಧಿಸಬಹುದು. ಆಡಳಿತ ವರ್ಗ ಸದಾ ಸುರಕ್ಷಿತ. ಮಧ್ಯಮ ವರ್ಗದ ಒಬ್ಬ ಸಾಮಾನ್ಯ ಯುವಕ ಏನು ಮಾಡಬೇಕು? ತಂದೆ ತಾಯಿಗೆ ಒಬ್ಬನೇ ಮಗ. ಮನೆ ಕಡೆ ಏನೋ ಸ್ವಲ್ಪ ಜಮೀನು ಬಿಟ್ಟು ಹೋಗಲು ಬರುವುದಿಲ್ಲ. ಅದು ಬದುಕಿಗೂ ಸಾಲುವುದಿಲ್ಲ. ಜಾಬ್ ಸೇರೋವಾಗ ಅದೆಲ್ಲ ಗೊತ್ತಿತ್ತು. ಬೇರೆ ಎಲ್ಲೋ ಹಾಕಿದ್ರೆ ಏನ್ ಮಾಡೋಕ್ ಆಗ್ತಿತ್ತು? ಅಂತೆಲ್ಲ ಹೇಳೋದ್ ಆಯ್ತು. ಅವಕಾಶ ಇದ್ದಾಗ ಬಳಸಿಕೊಳ್ಳಬಾರದಾ?
ಉದ್ಯೋಗಿ ಪುರುಷ ಆದರೆ ಈ ಕಥೆ. ಇನ್ನು ಮಹಿಳೆಯರ ಕಥೆ ಹೇಳತೀರದು. ಅದೆಷ್ಟೇ ಪ್ರಯತ್ನ ಪಟ್ಟು ಇರುವ ಒಬ್ಬ ಮಗಳೋ/ಸೊಸೆಯೋ ಕುಟುಂಬಕ್ಕೆ ಹತ್ತಿರ ಬಂದು ಇರೋಣ ಎಂದು ಪ್ರಯತ್ನ ಮಾಡಿದರೂ ಆಗದೇ ಉಳಿದದ್ದು ಉಂಟು. ಇಲ್ಲಿ ಯಾರ ಬಗ್ಗೆಯೋ ಸಿಟ್ಟೋ, ಅಸಡ್ಡೆಯೋ ಇಲ್ಲ. ಅವರಿಗೆ ಇಲ್ಲಿ ಬಂದು ಉದ್ಯೋಗ ಮಾಡುವ ಹಕ್ಕು ಇದೆ ಮತ್ತು ಅರ್ಹತೆಯೊಂದಿಗೆ ಅವರು ಬಂದು ದುಡಿಯಲು ಮನಸ್ಸು ಹೊಂದಿದ್ದಾರೆ. ಆದರೆ ಪ್ರಾತಿನಿಧ್ಯದ ವಿಷಯ ಬಂದಾಗ ಇಲಾಖೆ ಯಾವುದೇ ಇರಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಅವರಿಗೆ ಅನುಕೂಲ ಮಾಡಿಕೊಡುವುದು ಅಲ್ಲದೆ, ಮಾನವ ಸಂಪನ್ಮೂಲ ಥಿಯರಿಯ ಆಧಾರದಲ್ಲಿ ಹೆಚ್ಚಿನ ಕೆಲಸ ತೆಗೆಯಲು ಸಾಧ್ಯ.
ಇಲ್ಲಿ ನಿಮ್ಮ ಎಡ ಬಲ, ಮೇಲೆ ಕೆಳಗೆ, ಹಿಂದುಳಿದವ ಮುಂದೆ ಬಂದವ ಇಂಥ ಎಲ್ಲಾ, ನಿಮ್ಮ ಎಲ್ಲಾ ಪಂಥಗಳ ಮೂಟೆ ಕಟ್ಟಿ ಎಸೆದು ಸ್ಥಳೀಯ ಉದ್ಯೋಗಿಗಳಿಗೆ ಪ್ರಾತಿನಿಧ್ಯ ತರುವ ಪ್ರಯತ್ನ ಮಾಡಲೇಬೇಕಿದೆ. ಕೊನೆಯಲ್ಲಿ ಒಂದು ಚಿಕ್ಕ ಎಚ್ಚರಿಕೆ, ಇದು ಮೊನ್ನೆ ನಿಮ್ಮ ಬ್ಯಾಂಕುಗಳ ಗ್ರಾಹಕರಾಗಿದ್ದವರು, ನಿನ್ನೆ ನಿಮ್ಮ ಬ್ಯಾಂಕುಗಳ ಉದ್ಯೋಗಿಗಳಾದರು. ಇಂದು ನಿಮ್ಮ ಶಾಖೆಗಳ ಮತ್ತು ಸಂಘಟನೆಗಳ ಮುಖ್ಯಸ್ಥರಾಗಿದ್ದಾರೆ. ನಾಳೆ..? ನಿಮ್ಮ ಭವಿಷ್ಯಕ್ಕೆ ನೀವೇ ಹೊಣೆಗಾರರು.
✍️ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.