(9) ದೇವನೂರರ ಹಳಹಳಿಕೆಗಳಿಗೆ ಕೊನೆಮೊದಲೇ ಇಲ್ಲ. ಗೋಲ್ವಾಲ್ಕರ್, ಪುರೋಹಿತಶಾಹಿ, ಮನುಸ್ಮೃತಿ ಎಂದು ಆಕಾಶದ ಕೆಳಗಿರುವ ಎಲ್ಲ ವಿಷಯಗಳ ಬಗ್ಗೆ ಮಾತಾಡಿದ ಬಳಿಕ ಅವರು ಎಮರ್ಜೆನ್ಸಿಗೆ ಬರುತ್ತಾರೆ. ಎಮರ್ಜೆನ್ಸಿ ಸಂದರ್ಭದಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರತ್ವ ಅಷ್ಟೇನೂ ಭೀಕರವಾಗಿರಲಿಲ್ಲವಂತೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗಗಳೆಲ್ಲವೂ ಸರಿಯಾಗೇ ಕೆಲಸ ಮಾಡುತ್ತಿದ್ದವಂತೆ! ಆದರೆ ಈಗಿನ ಮೋದಿ ಸರ್ವಾಧಿಕಾರತ್ವದಲ್ಲಿ ಮಾತ್ರ ಎಲ್ಲ ವ್ಯವಸ್ಥೆಗಳೂ ಉಸಿರುಕಟ್ಟಿದ ಅವಸ್ಥೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿವೆಯಂತೆ! ಹತ್ತು ವರ್ಷದ ಹಿಂದೆ ಜ್ಞಾನಪೀಠಿ ಅನಂತಮೂರ್ತಿಗಳಿಗೂ ಇಂಥದೇ ಒಂದು ಕಾಯಿಲೆ ಅಮರಿಕೊಂಡಿತ್ತು. ಮೋದಿ ಹೆಸರನ್ನು ಕೇಳಿದರೇನೇ ಹಾವು ಮೆಟ್ಟಿದವರಂತಾಡುತ್ತಿದ್ದ ಅನಂತಮೂರ್ತಿಗಳು ಮೋದಿ ಪ್ರಧಾನಿಯಾಗುವ ದೇಶದಲ್ಲಿ ತಾನಿರಬಯಸುವುದಿಲ್ಲ ಎಂಬ ಆಣಿಮುತ್ತನ್ನು ಉದುರಿಸಿದ್ದರು. ಇವರಿಗೆಲ್ಲ ಮೋದಿ ಅದ್ಯಾವ ಪರಿಯಲ್ಲಿ, ಯಾವ ಜನ್ಮದಲ್ಲಿ ಕಾಟ ಕೊಟ್ಟಿದ್ದರೋ ತಿಳಿಯುವುದಿಲ್ಲ! ಇಂದಿರಾಗಾಂಧಿಯವರ ಎಮರ್ಜೆನ್ಸಿ ದಿನಗಳು ಸ್ವಾತಂತ್ರ್ಯೋತ್ತರ ಭಾರತ ಅನುಭವಿಸಿದ ಅತ್ಯಂತ ಕೆಟ್ಟ ದಿನಗಳು. ಪ್ರಜಾಪ್ರಭುತ್ವವೇ ತಲೆಕೆಳಗಾಗಿ ಮಗುಚಿಬಿದ್ದ ಸನ್ನಿವೇಶವದು. ಶಾಸಕಾಂಗ, ಕಾರ್ಯಾಂಗಗಳು ಮಕಾಡೆ ಮಲಗಿದ್ದವು. ನ್ಯಾಯಾಂಗ ಕೋಮಾದಲ್ಲಿತ್ತು. ದೇಶದ ಸರ್ವೋನ್ನತ ನಾಯಕರಾದ ರಾಷ್ಟ್ರಪತಿಗಳು ʼಹಾಂಜಿ ಮೇಡಮ್, ಹೂಂಜಿ ಮೇಡಮ್ʼ ಎನ್ನುವ ಮಟ್ಟಕ್ಕೆ ಇಳಿದಿದ್ದರು. ಇಂದಿರಾಗಾಂಧಿ ತನ್ನ ಬಳಗದ ಮೂರ್ನಾಲ್ಕು ಎಂಪಿಗಳನ್ನು ಕೂರಿಸಿಕೊಂಡು ಸಂವಿಧಾನದಲ್ಲಿ ಯದ್ವಾತದ್ವಾ ಬದಲಾವಣೆಗಳನ್ನು ಮಾಡಿ ಹೊಸ ಹೊಸ ಕಾಯ್ದೆ-ಕಾನೂನುಗಳನ್ನು ತಂದಿದ್ದರು; ಅಷ್ಟೇ ಏನು, ಸಂವಿಧಾನದ ಪ್ರಸ್ಥಾವನೆಯ ಪುಟವನ್ನೇ ಹರಿದು ತನಗೆ ಬೇಕಾದಂತೆ ಬರೆದುಕೊಂಡರು! ದೇಶದ ಬಹುತೇಕ ಎಲ್ಲ ರಾಜ್ಯಸರಕಾರಗಳೂ ಅಮಾನತ್ತಿನಲ್ಲಿದ್ದವು. ದೇಶದಲ್ಲಿ ಕಂಡುಕೇಳರಿಯದ ಅರಾಜಕ ವ್ಯವಸ್ಥೆ ತಾಂಡವವಾಡಿತ್ತು. ಡಾ. ಅಂಬೇಡ್ಕರ್ ಪ್ರಣೀತ ಸಂವಿಧಾನವನ್ನು ಇಂದಿರಾಗಾಂಧಿ ಅಂದು ಅರಬ್ಬೀಸಮುದ್ರಕ್ಕೆ ಎಸೆದುಬಿಟ್ಟಿದ್ದರು! ಇಂಥ ಕಾಲಘಟ್ಟವನ್ನು ʼಅದೇನೂ ಪರವಾಯಿರಲಿಲ್ಲ. ಎಲ್ಲವೂ ಚೆನ್ನಾಗೇ ಇತ್ತುʼ ಎಂದು ದೇವನೂರ ಸರ್ಟಿಫಿಕೇಟು ಕೊಡುತ್ತಿದ್ದಾರೆಂದರೆ ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆಯೇ ದೇಶದ ಪ್ರಜೆಗಳಿಗೆ ಅನುಮಾನ ಬರುವಂತಾಗುತ್ತದೆ.
(10) ಇಷ್ಟು ಹೇಳಿ ದೇವನೂರ ನಿಲ್ಲಿಸುವುದಿಲ್ಲ. ಅನಗತ್ಯವಾಗಿ ಜಯಪ್ರಕಾಶ ನಾರಾಯಣರನ್ನು ಎಳೆದುತರುತ್ತಾರೆ. ತಮಾಷೆ ನೋಡಿ: ಆರೆಸ್ಸೆಸ್ಸಿನವರು ತನಗೆ ದ್ರೋಹ ಬಗೆದರು ಎಂದು ಜಯಪ್ರಕಾಶ ನಾರಾಯಣರು ಎಂ.ಜಿ. ದೇವಸಹಾಯಂ ಎಂಬ ಸರಕಾರೀ ಅಧಿಕಾರಿಯಲ್ಲಿ ಹೇಳಿದರೆಂಬುದನ್ನು ದೇವಸಹಾಯಂ ಬರೆದದ್ದನ್ನು ದೇವನೂರ ಉಲ್ಲೇಖಿಸುತ್ತಾರೆ. ಈ ದೇವಸಹಾಯಂ ಯಾರು ಎಂದು ನೋಡಿದರೆ, ಎಮರ್ಜೆನ್ಸಿ ಸಮಯದಲ್ಲಿ ಜಯಪ್ರಕಾಶ ನಾರಾಯಣರನ್ನು ಜೈಲಿನಲ್ಲಿ ಹದ್ದಿನ ಕಣ್ಣಿಟ್ಟು ಕಾಯಲು ಇಂದಿರಾಗಾಂಧಿ ನೇಮಿಸಿದ್ದ ಸರಕಾರೀ ಅಧಿಕಾರಿ! ಇಂದಿರಾಗಾಂಧಿಯವರ ವಿರೋಧಿಗಳ ಪಟ್ಟಿಯಲ್ಲಿ ಮತ್ತು ಸ್ವತಃ ಇಂದಿರಾಗಾಂಧಿಯವರು ತನ್ನ ಶತ್ರುಗಳು ಎಂದು ಪರಿಗಣಿಸಿದ್ದವರ ಪಟ್ಟಿಯಲ್ಲಿ ಇದ್ದ ಮೊದಲ ಹೆಸರು ಜೆಪಿಯವರದ್ದು. ಅಂಥ ಜೆಪಿಯನ್ನು ಜೈಲಿನಲ್ಲಿ ಕಾಯಲು ಸ್ವತಃ ಇಂದಿರಾಗಾಂಧಿ ನೇಮಿಸಿದ್ದ ವ್ಯಕ್ತಿ ದೇವಸಹಾಯಂ, ಅಂದರೆ ಈತ ಅದೆಂಥಾ ಖತರ್ನಾಕ್ ವ್ಯಕ್ತಿಯಾಗಿರಬೇಕು! ಈತ ದಿ ಪ್ರಿಂಟ್ ಎಂಬ ಎಡಪತ್ರಿಕೆಯಲ್ಲಿ (1) ಸ್ಟ್ಯಾನ್ ಸ್ವಾಮಿ ಬಡವರ ಬಂಧುವಾಗಿದ್ದ (2) ಮೋದಿಯ ಆಡಳಿತ ಎಮರ್ಜೆನ್ಸಿಗಿಂತ ಭೀಕರ (3) ಮದರ್ ತೆರೆಸ ಪ್ರಾರಂಭಿಸಿದ ಮಿಷನರೀಸ್ ಆಫ್ ಚಾರಿಟಿಯನ್ನು ಮೋದಿ ಸರಕಾರ ಕತ್ತುಹಿಸುಕಿ ಕೊಲ್ಲುತ್ತಿದೆ (4) ಅಜಿತ್ ದೊವಲ್ಗೆ ಸಂವಿಧಾನದ ತಿಳಿವಳಿಕೆ ಇಲ್ಲ – ಎಂಬ ಶೀರ್ಷಿಕೆಗಳ ಲೇಖನಗಳನ್ನು ಬರೆದಿದ್ದಾರೆ. ಈತನ ಒಂದಷ್ಟು ಬರಹಗಳು, ಮಾತುಗಳನ್ನು ಜಾಲಾಡಿದರೆ ಸಾಕು, ಈತ ಯಾರ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬುದು ಎಂಥ ಮುಗ್ಧರಿಗಾದರೂ ಸ್ಪಷ್ಟವಾಗುತ್ತದೆ. ಇಂಥ ವ್ಯಕ್ತಿಯ ಬಳಿ ಜೆಪಿಯವರು, ಆರೆಸ್ಸೆಸ್ ತನಗೆ ದ್ರೋಹ ಬಗೆಯಿತು ಎಂದು ಹೇಳುತ್ತಾರಂತೆ ಮತ್ತು ಅದನ್ನು ನಾವು ನಂಬಬೇಕಂತೆ! ನಿಮಗೆ ಗೊತ್ತಿರಲಿ, “RSS is a revolutionary organization. No other organization in the country comes anywhere near it. It alone has the capacity to transform society, end casteism and wipe the tears from the eyes of the poor. I have great expectations from this revolutionary organization that has taken up the challenge of creating a new India.” – ಇದು ಸ್ವತಃ ಜೆಪಿ ಹೇಳಿದ ಮಾತು.
(11) ಪ್ರಾರಂಭದಲ್ಲಿ ಹೇಳಿದಂತೆ, ದೇವನೂರರ ಪುಸ್ತಿಕೆಗೆ ಒಂದು ಏಕಸೂತ್ರತೆ ಎಂಬುದಿಲ್ಲ. ಇಲ್ಲಿ ವಾಕ್ಯಗಳು ವಿಷಯದಿಂದ ವಿಷಯಕ್ಕೆ ಹಾರುತ್ತವೆ. ದೇವನೂರು ಆರೆಸ್ಸೆಸ್ಸನ್ನು ಒಳಗಿನಿಂದ ಬಿಡಿ, ಮೈಲಿಯಷ್ಟು ದೂರದಲ್ಲಿ ನಿಂತು ಕೂಡ ಗಮನಿಸಿಲ್ಲ ಎಂಬುದಕ್ಕೆ ಪುಟಪುಟಗಳಲ್ಲಿ ಉದಾಹರಣೆಗಳು ಸಿಗುತ್ತವೆ. ಪ್ರಮೋದ ಮುತಾಲಿಕರ ಶ್ರೀರಾಮಸೇನೆ ಸಂಘಪರಿವಾರದ ಭಾಗ – ಎಂಬ ಸಾಲನ್ನು ಓದುವಾಗಂತೂ ಈ ವ್ಯಕ್ತಿಯ ಜ್ಞಾನ ಇಷ್ಟು ತೆಳುವೇ ಎಂದು ಅಚ್ಚರಿಯಾಗುತ್ತದೆ. ಮೋದಿಯನ್ನು ಹಳಿಯುವಷ್ಟು ಹಳಿದ ಮೇಲೆ ಈ ಎಡಬಿಡಂಗಿಗಳ ಬರಹಗಳಲ್ಲಿ ಅಂಬಾನಿ, ಅದಾನಿ ಬರಲೇಬೇಕು ತಾನೆ? ನಿರಾಸೆ ಬೇಡ, ಅವರೂ ಇದ್ದಾರೆ! 2020ರಲ್ಲಿ ಅಂಬಾನಿಯ ಒಟ್ಟು ಸಂಪತ್ತು 2.86 ಲಕ್ಷ ಕೋಟಿ ಇತ್ತು, ಅದೀಗ 8.03 ಲಕ್ಷ ಕೋಟಿ ರುಪಾಯಿ ಆಗಿದೆ – ಎಂಬುದು ದೇವನೂರರ ಆರೋಪ. ವಾಸ್ತವ ಇದು: ಮುಖೇಶ್ ಅಂಬಾನಿಯ ಒಟ್ಟು ಆಸ್ತಿಮೌಲ್ಯ 2020ರಲ್ಲಿ 88.7 ಬಿಲಿಯನ್ ಡಾಲರುಗಳಷ್ಟಿದ್ದರೆ 2022ರಲ್ಲಿ ಅದು 94.9 ಬಿಲಿಯನ್ ಡಾಲರುಗಳಿಗೆ ಏರಿದೆ. ಅಂದರೆ ಈ ಎರಡು ವರ್ಷಗಳಲ್ಲಿ ಆತನ ಆಸ್ತಿಮೌಲ್ಯದ ವ್ಯತ್ಯಾಸ: 6.2 ಬಿಲಿಯನ್ ಡಾಲರುಗಳು. ಇದೇ ಮುಖೇಶ್ ಅಂಬಾನಿಯ ಆಸ್ತಿಮೌಲ್ಯ 2006ರಲ್ಲಿ 16 ಬಿಲಿಯನ್ ಡಾಲರ್ ಇದ್ದದ್ದು 2008ರಲ್ಲಿ, ಅಂದರೆ ಕೇವಲ ಎರಡು ವರ್ಷಗಳಲ್ಲಿ, ಬರೋಬ್ಬರಿ ಮೂರುಪಟ್ಟು ಹೆಚ್ಚಾಗಿ 43 ಬಿಲಿಯನ್ ಡಾಲರ್ ಆಗಿತ್ತು. ಆದರೆ ಆಗ ಇದ್ದ ಸರಕಾರ ಮೋದಿಯದ್ದಲ್ಲವಾದ್ದರಿಂದ ದೇವನೂರ ಸಾಹೇಬರು ಆ ಅಂಕಿ-ಅಂಶಗಳ ಉಸಾಬರಿಗೇ ಹೋಗಿಲ್ಲ!
(12) ಇನ್ನು ದೇವನೂರರು ಆರೆಸ್ಸೆಸ್ಸಿಗೆ ಬಯ್ಯುವುದೆಂದು ಶುರುಮಾಡಿ ನಂತರ ಪಠ್ಯಪುಸ್ತಕಗಳ ವಿಚಾರಕ್ಕೂ ಬಂದಿದ್ದಾರೆ. ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಅನೇಕ ಯುದ್ಧಗಳನ್ನು ನಡೆಸಿದನು, ಬ್ರಿಟಿಷರನ್ನು ದೇಶದಿಂದ ಹೊರಹಾಕಲು ಪ್ರಯತ್ನಿಸಿದನು – ಎಂಬ ಸಾಲನ್ನು ಪಠ್ಯಪುಸ್ತಕದಿಂದ ತೆಗೆದಿದ್ದೇವಂತೆ. ಆರೆಸ್ಸೆಸ್ಸಿನ ಆಳ-ಅಗಲ ಅರ್ಥವಾಗದಿದ್ದರೆ ಹೋಗಲಿ, ಆರನೇ ತರಗತಿಯ ಪಠ್ಯಪುಸ್ತಕಗಳ ಹೂರಣವಾದರೂ ಈ ಮಹನೀಯರಿಗೆ ಅರ್ಥವಾಗಬೇಕಿತ್ತಲ್ಲ? ಮಕ್ಕಳ ಪಠ್ಯಪುಸ್ತಕವನ್ನೇ ಓದದವರು ಗೋಲ್ವಾಲ್ಕರರ ಚಿಂತನ ಗಂಗಾವನ್ನಾಗಲೀ ವಿವೇಕಾನಂದರ ಸಮಗ್ರ ಕೃತಿ ಶ್ರೇಣಿಯನ್ನಾಗಲೀ ಓದಿರುವುದು ಅನುಮಾನವೇ. ಎಲ್ಲಕ್ಕಿಂತ ಹಾಸ್ಯಾಸ್ಪದ ವಿಷಯವೆಂದರೆ, “ಇತ್ತೀಚಿನ ರಾಖಿಗಡಿಯಲ್ಲಿ ನಡೆದ ಡಿಎನ್ಎ ಅಧ್ಯಯನದಲ್ಲಿ ಹರಪ್ಪ ನಾಗರಿಕತೆಯ ಪ್ರಾಚೀನ ಪಳೆಯುಳಿಕೆಯ ಡಿಎನ್ಎ ಪ್ರಕಾರ – ಸಿಂಧೂ ನಾಗರಿಕತೆಯ ಜನರ ವಂಶಾವಳಿಗಳ ಒಳಗೆ ಆರ್ಯ ಅಥವಾ ವೈದಿಕ ವಂಶಾವಳಿ ಇಲ್ಲ ಎಂಬುದು ಜಗಜ್ಜಾಹೀರಾಗಿದೆ” ಎಂದು ದೇವನೂರ ಬರೆಯುತ್ತಾರೆ. ವಾಕ್ಯವೋ ಗೋಜಲು ಗೋಜಲು, ಅರ್ಥ ಅಸ್ಪಷ್ಟ. ಸಿಂಧೂ ನಾಗರಿಕತೆಯ ಜನರದ್ದು ಆರ್ಯ ಡಿಎನ್ಎ ಅಲ್ಲ ಎಂದು ಹೇಳಿದವರು ಯಾರು? ಆರ್ಯ ಡಿಎನ್ಎ ಎಂಬುದೊಂದು ಇದೆಯೆ? ಎಂಬುದಕ್ಕೆ ದೇವನೂರರೇ ಉತ್ತರ ಕೊಡಬೇಕು. ಇನ್ನೂ ತಮಾಷೆ ಎಂದರೆ ರಾಖಿಗಡಿಯಲ್ಲಿ ಸಂಶೋಧನೆ ನಡೆದ ಮೇಲೆ ಆರೆಸ್ಸೆಸ್ ಬೆಚ್ಚಿ “ಸಿಂಧೂ ನಾಗರಿಕತೆ”ಯನ್ನು “ಸರಸ್ವತಿ ನಾಗರಿಕತೆ” ಎಂದು ಹೇಳತೊಡಗಿದೆಯಂತೆ! ಸರಸ್ವತಿಯ ಹೆಸರು ಇಂದು ನಿನ್ನೆಯಲ್ಲ, ಸ್ವತಃ ವೇದಗಳಲ್ಲೇ ಹತ್ತು ಹಲವು ಸಲ ಬಂದಿದೆ. ಸರಸ್ವತಿ ನದಿ ಬತ್ತಿ ಹೋದದ್ದರ ಬಗ್ಗೆ ನಮ್ಮ ದೇಶದವರಲ್ಲ, ಸ್ವತಃ ಅಮೆರಿಕದ ನಾಸಾ ಉಪಗ್ರಹಗಳು ಪುರಾವೆಯನ್ನು ಒದಗಿಸಿವೆ. ಭಾರತದಲ್ಲಿ ಹೊರಗಿನಿಂದ ಬಂದು ಸೇರಿದ ಡಿಎನ್ಎ ಎಂಬುದೇನೂ ಇಲ್ಲ; ಇಲ್ಲಿರುವ ಆ ಸೇತು ಹಿಮಾಚಲ ನೆಲದಲ್ಲಿ ಇರುವ ಎಲ್ಲರ ಡಿಎನ್ಎ ಕೂಡ ಒಂದೇ ಒಂದು ಈಗಿನ ವೈಜ್ಞಾನಿಕ ಅಧ್ಯಯನಗಳು ಹೇಳುತ್ತಿವೆ; ಇವೇ ಮಾತುಗಳನ್ನು ಇವರೆಲ್ಲರಿಗಿಂತ ಎಪ್ಪತ್ತು ವರ್ಷ ಮೊದಲೇ ಡಾ. ಅಂಬೇಡ್ಕರ್ ಕೂಡ ಹೇಳಿಬಿಟ್ಟಿದ್ದಾರೆ! ಆರೆಸ್ಸೆಸ್ಸನ್ನು ಬಯ್ಯಲಿಕ್ಕೆಂದು ದೇವನೂರ ಮಹಾದೇವ ಡಾ. ಅಂಬೇಡ್ಕರರನ್ನೂ ನಿರಾಕರಿಸಿ ದೂರತಳ್ಳಿರುವುದನ್ನು ನೋಡಿದರೆ ಇವರ ವ್ಯಾಧಿ ಅದೆಷ್ಟು ಭೀಕರವಾಗಿದೆ ಎಂದು ಭಯವಾಗುತ್ತದೆ.
(13) ಈ ಪುಸ್ತಕದಲ್ಲಿ ಅದೆಷ್ಟು ಸುಳ್ಳುಗಳನ್ನು ಅದೆಷ್ಟು ನಾಜೂಕಿನಿಂದ ಪೋಣಿಸಿಕೊಂಡು ಹೋಗಿದ್ದಾರೆಂಬುದಕ್ಕೆ ಈ ಉದಾಹರಣೆ ನೋಡಿ: “ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ)ಯ ದತ್ತಾಂಶಗಳಂತೆ 2017 ಮತ್ತು 2022ರ ನಡುವೆ ಸುಮಾರು 2 ಕೋಟಿಗೂ ಹೆಚ್ಚು ಮಹಿಳೆಯರು ಕಾರ್ಮಿಕ ಪಡೆಯಿಂದ ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಸಹಜವೊ, ಆಕಸ್ಮಿಕವೊ ಅಥವಾ ಆರೆಸ್ಸೆಸ್ ಹಿಡನ್ ಅಜೆಂಡಾ – ʼಮಹಿಳೆಯರು ಮನೆಯಲ್ಲಿರಬೇಕುʼ ಎಂಬ ಕಾರ್ಯತಂತ್ರದ ಭಾಗವೋ?” – ಇದು ದೇವನೂರು ಬರೆದಿರುವ ಸಾಲುಗಳು. ಇದನ್ನು ಓದಿದಾಗ “ಅಯ್ಯೋ ನಿಜವೇ? ನಿಜಕ್ಕೂ ಎರಡು ಕೋಟಿ ಮಹಿಳೆಯರು ನಿರುದ್ಯೋಗಿಗಳಾಗಿಬಿಟ್ಟಿದ್ದಾರಾ?” ಎಂಬ ಶ್ರೀಸಾಮಾನ್ಯನ ಹೃದಯದಲ್ಲಿ ಆತಂಕವೇಳುವುದೇನೋ ನಿಜ, ಅಲ್ಲವೆ? ಆದರೆ ಸಿಎಂಐಇ ಒಂದು ಖಾಸಗಿ ಸಂಸ್ಥೆ. ಇದೊಂದು ಪ್ರೈವೇಟ್ ಲಿಮಿಟೆಡ್ ಕಂಪೆನಿ. ಇಲ್ಲಿ ಕೆಲಸ ಮಾಡುವವರು ನಾಲ್ಕು ಮತ್ತೊಂದು ಮಂದಿ ಅಷ್ಟೆ ಎಂಬುದು ನಿಮಗೆ ಗೊತ್ತೆ? ಇದಕ್ಕೂ ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ಯಾವುದೇ ಸಂಬಂಧ ಇಲ್ಲ. ಇದು ತನ್ನ ಸೀಮಿತ ಪರಿಧಿಯಲ್ಲಿ ಒಂದಷ್ಟು ಜನರನ್ನು ಮಾತಾಡಿಸಿ ಸರ್ವೇಗಳನ್ನು ತಯಾರಿಸುತ್ತದೆ ಮತ್ತು ಅವು ಇಡೀ ದೇಶದ ಪರಿಸ್ಥಿತಿಯನ್ನು ಬಿಂಬಿಸುತ್ತವೆ ಎಂದು ನಂಬಿಸುತ್ತದೆ. ಈ ಸಂಸ್ಥೆಯು ಮೇಲೆ ದೇವನೂರು ಉಲ್ಲೇಖಿಸಿದ ವರದಿಯನ್ನು ಮಾಡಿದ ಬಗ್ಗೆ ಕೇಂದ್ರ ಸರಕಾರ ತನ್ನ ಆಕ್ಷೇಪವನ್ನು ಅತ್ಯಂತ ತೀಕ್ಷ್ಣವಾಗಿಯೇ ದಾಖಲಿಸಿತ್ತು ಮತ್ತು ಕೇಂದ್ರ ಸರಕಾರ, ಈ ಖಾಸಗಿ ಸಂಸ್ಥೆ ಎಷ್ಟೆಲ್ಲ ರೀತಿಯಲ್ಲಿ ಸರ್ವೇಯನ್ನು ತಪ್ಪುತಪ್ಪಾಗಿ ಮಾಡಿದೆ ಎಂಬುದರ ಬಗ್ಗೆ ಒಂದು ಸುದೀರ್ಘ ವರದಿಯನ್ನೇ ತಯಾರಿಸಿತ್ತು. ಇದೆಲ್ಲ ನಿಮಗೆ ಗೊತ್ತಿತ್ತೆ? ಇನ್ನೂ ತಮಾಷೆ ನೋಡಿ: ಸಿಎಂಐಇ ಸಂಸ್ಥೆ, ಕಳೆದ ಹಲವು ವರ್ಷಗಳಿಂದ ದೇಶ ಹಾಳಾಗುತ್ತಿದೆ, ಹಳ್ಳ ಹಿಡಿಯುತ್ತಿದೆ, ಜನ ಬೀದಿಗೆ ಬಿದ್ದಿದ್ದಾರೆ, ಹಸಿವಿನಿಂದ ತತ್ತರಿಸಿದ್ದಾರೆ, ಆರ್ಥಿಕತೆ ಕುಸಿದು ರಸಾತಳ ತಲುಪಿದೆ ಎಂದು ಮೇಲಿಂದ ಮೇಲೆ ವರದಿಗಳನ್ನು ತಯಾರಿಸಿ ಹಂಚುತ್ತಲೇ ಇದೆ. ಕಾರಣ ಏನು ಗೊತ್ತೆ? ಈ ಸಂಸ್ಥೆಯ ಸಿಇಓ ಮತ್ತು ಕಾರ್ಯನಿರ್ವಾಹಕ ನಿರ್ದೇಶಕನ ಸ್ಥಾನದಲ್ಲಿ ಕೂತಿರುವ ಮಹೇಶ್ ವ್ಯಾಸ್, ಓರ್ವ ಕಾಂಗ್ರೆಸ್ ಕಾರ್ಯಕರ್ತ! ವಿಷಯ ಸ್ಪಷ್ಟ ಆಯ್ತು ತಾನೆ?
ಈಗ ಹೇಳಿ, ದೇವನೂರು ಮಹಾದೇವ ಬರೆದ ʼಆರೆಸ್ಸೆಸ್ ಆಳ ಅಗಲʼ ಕೃತಿಯಲ್ಲಿ ಕಾಣಿಸುತ್ತಿರುವುದು ಆರೆಸ್ಸೆಸ್ಸಿನ ಆಳ-ಅಗಲಗಳೋ ಅಥವಾ ಸ್ವತಃ ಈ ಮಹಾದೇವರ ಬುದ್ಧಿದಾರಿದ್ರ್ಯದ ಆಳ-ಅಗಲಗಳೋ? ಎಡಪಂಥೀಯ ಎಡಬಿಡಂಗಿಗಳ ಸೇನಾಧಿಪತಿಯ ಬುದ್ಧಿಯೇ ಈ ಮಟ್ಟದ್ದಾದರೆ ಇನ್ನು ಆ ಪಾಳೆಯದ ಉಳಿದ ಚಿಲ್ಲರೆಪಲ್ಲರೆ ಚಿಂತಕರ ಬುದ್ಧಿವಂತಿಕೆ ಯಾವ ಮಟ್ಟದ್ದಾಗಿರಬಹುದು?. (ಮುಗಿಯಿತು)
✍️ರೋಹಿತ್ ಚಕ್ರತೀರ್ಥ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.