ಒಂದು ಯಂತ್ರವನ್ನು ಅಥವಾ ಸೇತುವೆಯನ್ನು ನಿರ್ಮಿಸುವುದಕ್ಕೆ ತಂತ್ರಜ್ಞರಿಗೆ ಅದರ ತಾಂತ್ರಿಕತೆಯ ಜ್ಞಾನವಿರುತ್ತದೆ. ನಮ್ಮ ಮನಸ್ಸು ಕೂಡ ಹಾಗೆಯೇ. ಜೀವನವನ್ನು ನಿಭಾಯಿಸುವುದಕ್ಕೆ, ನಿಯಂತ್ರಿಸುವುದಕ್ಕೆ ಮತ್ತು ನಿರ್ದೇಶಿಸುವುದಕ್ಕೆ ಮನಸ್ಸಿಗೆ ಅದರದ್ದೇ ಆದ ಒಂದು ತಾಂತ್ರಿಕತೆ ಇದೆ, ಮಾಂತ್ರಿಕತೆ ಇದೆ.
ಒಂದು ಬಹು ದೊಡ್ಡ ಸೇತುವೆ ನಿರ್ಮಾಣಕ್ಕೆ ಪ್ರಧಾನ ತಂತ್ರಜ್ಞ ಗಣಿತ ತತ್ವಗಳನ್ನು, ಅದರ ಒತ್ತಡ ಮತ್ತು ಸೆಳೆತಗಳನ್ನು ಅರಿತಿರುತ್ತಾನೆ. ನದಿಯ ಮೇಲೆ ಹಾದು ಹೋಗುವ ಸೇತುವೆಯ ಸಂಪೂರ್ಣ ಚಿತ್ರ ಆ ತಂತ್ರಜ್ಞನ ತಲೆಯೊಳಗೆ ಕುಳಿತಿರುತ್ತದೆ. ಪ್ರಮಾಣೀಕೃತ ಸಿದ್ಧಾಂತಗಳ ಪ್ರಾಯೋಗಿಕ ಅಳವಡಿಕೆಯ ಕುರಿತಾಗಿ ಸೇತುವೆ ರೂಪ ತಾಳುವವರೆಗೆ ಮತ್ತು ಅದರಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋಗುವ ತನಕ ಅದರ ಕುರಿತಾಗಿಯೇ ಚಿಂತಿಸುತ್ತಿರುತ್ತಾನೆ. ಇದೇ ರೀತಿ ಪ್ರಾರ್ಥನೆಗೆ ಉತ್ತರ ಸಿಗುವುದಕ್ಕೂ ಒಂದು ದಾರಿ ಅಥವಾ ವಿಧಾನ ಇದೆ. ಒಂದು ವೇಳೆ ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕುವುದಾದರೆ, ಉತ್ತರ ಸಿಕ್ಕುವ ಒಂದು ದಾರಿ ಇರಲೇಬೇಕು. ಇದು ಕೂಡ ವೈಜ್ಞಾನಿಕವಾದ ದಾರಿಯೇ. ಆದರೆ ಅಂತರ್ವಿಜ್ಞಾನ. ಯಾವುದೂ ಕೂಡ ಆಕಸ್ಮಿಕವಲ್ಲ. ಆದರೆ ಆಕಸ್ಮಿಕ ಎಂಬಂತೆ ಕಾಣುತ್ತದೆ, ಅಷ್ಟೇ. ಪ್ರಪಂಚವು ಕಾನೂನು ಮತ್ತು ನಿಯಮಗಳ ಸುಳಿಯಲ್ಲಿ ಬದ್ಧವಾಗಿದೆ. ನಮ್ಮ ಪ್ರಾರ್ಥನೆಗಳು ಗಾಳಿಯಲ್ಲಿ ತೇಲುವ ಬಲೂನುಗಳಂತೆ ದಿಕ್ಕಿಲ್ಲದೆ ತಿರುಗಬಾರದು. ಅವುಗಳಿಗೆ ಒಂದು ದಿಕ್ಕು, ಒಂದು ದಾರಿ ಕಲ್ಪಿಸಲೇ ಬೇಕು, ಜೀವನಕ್ಕೆ ಒಂದು ಅರ್ಥವನ್ನು ಒದಗಿಸಬೇಕು. “ಸ್ವ” ಅರ್ಥವನ್ನು ಹುಡುಕುವುದೇ ಬದುಕಿನ ಗುರಿ. ಆದರೆ” ಸ್ವ” ಎಂಬುದನ್ನು ಬಿಟ್ಟು ಬೇರೇನನ್ನೋ ಹುಡುಕುವ ಕುರಿಗಳಾಗಿ ಸಾಗುತ್ತಿದ್ದೇವೆ.
ಪ್ರಾರ್ಥನೆಯೆಂದರೆ ನಾವು ಇರಬೇಕಾದ ನಮ್ಮ ಸಹಜ ಸ್ಥಿತಿಯ ಕುರಿತಾದ ಕಲ್ಪನೆಯನ್ನು ಸಾಕಾರಗೊಳಿಸುವ ಒಂದು ಸೂತ್ರ. ಹಾಗೆ ಸಾಕಾರಗೊಳಿಸುತ್ತಲೇ, ಎಲ್ಲಾ ನಾಮರೂಪಗಳನ್ನು ಕಳೆದುಕೊಳ್ಳುವ ನಿರಾಕಾರ ಸಹಜ ಆನಂದಕ್ಕೆ ಜಗುಳುವುದು. ಪ್ರಾರ್ಥನೆಯೆಂದರೆ ಜೀವನ ಅಥವಾ ವ್ಯಕ್ತಿಯ ಪ್ರಾಮಾಣಿಕವಾದ ಅಪೇಕ್ಷೆ. ನಮ್ಮ ಹಂಬಲವೇ ನಮ್ಮ ಪ್ರಾರ್ಥನೆ. ಅಥವಾ ಪ್ರಾರ್ಥನೆಯೇ ನಮ್ಮ ಹಂಬಲವಾಗಿ ರೂಪ ತಳೆಯಬೇಕಾದ ವಿಷಯ. ನಮ್ಮ ಅಗತ್ಯದ ಮತ್ತು ಹಂಬಲದ ಆಳ ಅಗಲಗಳು ಪ್ರಾರ್ಥನೆಯ ತೀವ್ರತೆಯನ್ನು ನಿರ್ಧರಿಸುತ್ತದೆ. ಇಲ್ಲವಾದರೆ ಅದೊಂದು ಯಾಂತ್ರಿಕವಾದ ಶಿಷ್ಟಾಚಾರವಾಗಿ ತೇಲಿಕೊಂಡು ಹೋಗುತ್ತದೆ ಇಲ್ಲವೇ ಕೊಳೆತುಹೋಗುತ್ತದೆ. “ಜೀವ”ನ ಹಸಿವು ಮತ್ತು “ಜೀವನ”ದ ಹಸಿವು ಏಕೀಕೃತ ಗೊಳ್ಳಬೇಕು, ಅಲ್ಲವೇ?
ನಮ್ಮ ಮನಸ್ಸು ಪ್ರಜ್ಞಾಪೂರ್ವಕವಾಗಿ ತನ್ನ ಅಪೇಕ್ಷೆಯನ್ನು ಸುಪ್ತಪ್ರಜ್ಞೆಗೆ ವರ್ಗಾಯಿಸಿದಾಗ, ಆ ಸುಪ್ತಪ್ರಜ್ಞೆಯು ಅದನ್ನು ಸ್ವೀಕರಿಸುವುದಕ್ಕೆ ಚಿತಾವಣೆಗೊಳ್ಳುವ ಪ್ರಕ್ರಿಯೆಯನ್ನು ಪ್ರಾರ್ಥನೆಯು ಒಳಗೊಳ್ಳುತ್ತದೆ. ನಮ್ಮ ಪ್ರಜ್ಞೆಯ ಆಳದಲ್ಲಿ ಅನಂತ ಕೌಶಲ್ಯ ಮತ್ತು ಅಪರಿಮಿತ ಶಕ್ತಿಯಿದೆ. ಅದರ ಅರಿವಿಲ್ಲದೆ ನಾವು ಸೋತಿದ್ದೇವೆ, ಸೋತಿದ್ದೇವೆ ಎಂಬ ಅರಿವು ಕೂಡ ಇಲ್ಲದೆ. ನಮಗೇನು ಬೇಕು ಎಂಬುದನ್ನು ನಾವು ” ಶಾಂತವಾಗಿ” ಯೋಚಿಸಿದಾಗ ಮಾತ್ರ ಅದು ಹೊಳೆಯುವುದು. ಏನು ಬೇಕು ಎಂಬುದು ಗೊತ್ತಾಗುವುದಕ್ಕೆ ಕೂಡ ಒಂದು ಶಾಂತತೆ ಬೇಕು. ಈ ಕ್ಷಣದಿಂದ ನನಗೆ ಬೇಕಾದದ್ದು ಕೈಗೆಟಕುವಂತೆ ಮಾಡುವ ಕರುಣೆ ಕ್ರಿಯಾಶೀಲವಾಗಿದೆ ಎಂಬುದನ್ನು ಕಣ್ಮುಂದೆ ತಂದುಕೊಳ್ಳಬೇಕು. ಕೆಮ್ಮು ಮತ್ತು ಗಂಟಲು ಕೆರೆತ ಇದ್ದವನು, ” ಕೆಮ್ಮು ಮಾಯವಾಗುತ್ತದೆ, ಕೆಮ್ಮು ಮಾಯವಾಗುತ್ತದೆ” ಎಂದು ತನ್ನೊಳಗೆ ಅಂದುಕೊಳ್ಳುತ್ತಲೇ ಒಂದು ತಾಸಿನೊಳಗೆ ಕೆಮ್ಮು ಮಾಯವಾದಂತೆ. ಆದರೆ ಮನಸ್ಸು ಸರಳ ಹಾಗೂ ಮುಗ್ಧತೆಯಿಂದ ಕೂಡಿರಬೇಕು ಅಷ್ಟೇ.
ನಮ್ಮ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಬೇಕೆಂದು ಕೊಂಡಿದ್ದರೆ ಅದರ ನಕ್ಷೆ ಮೊದಲೇ ನಿರ್ಮಾಣವಾಗಬೇಕು. ಅದಕ್ಕೋಸ್ಕರ ಮರ, ಕಬ್ಬಿಣ, ಮರಳು, ಸಿಮೆಂಟು ಎಲ್ಲವನ್ನೂ ಕೂಡ ಅತ್ಯುತ್ತಮವಾದದ್ದನ್ನು ಆಯ್ಕೆ ಮಾಡುತ್ತೇವೆ. ಹಾಗಿರುವಾಗ ಮನಸ್ಸಿನ ಮನೆಯನ್ನು, ಮನಸ್ಸಿನ ನಕ್ಷೆಯನ್ನು ಆನಂದಕ್ಕೆ ಮತ್ತು ಸಂತೃಪ್ತಿಗೆ ಹೇಗೆ ಒಗ್ಗಿಸಿಕೊಳ್ಳಬೇಕು? ನಮ್ಮ ಎಲ್ಲಾ ಅನುಭವಗಳು ಮತ್ತು ನಮ್ಮ ಜೀವನದೊಳಗೆ ಪ್ರವೇಶ ಪಡೆಯುವ ಪ್ರತಿಯೊಂದು ಕೂಡ ನಮ್ಮ ಮನಸ್ಸಿನ ಮನೆಯನ್ನು ಕಟ್ಟುವುದಕ್ಕೆ ಉಪಯೋಗಿಸಿದ ಇಟ್ಟಿಗೆಗಳನ್ನು ಅವಲಂಬಿಸಿದೆ.
ಆ ನಕ್ಷೆಯು ಚಿತ್ರಿತವಾದದ್ದು ಭಯ, ಆತಂಕ, ಉದ್ವೇಗ, ಅತೃಪ್ತಿ, ಸಿನಿಕತನ, ಸಂಶಯ, ನಿರಾಸೆ, ಒತ್ತಡ, ಖಿನ್ನತೆ ಇತ್ಯಾದಿಗಳಿಂದ ಆಗಿದ್ದಲ್ಲಿ, ಅದು ಬದುಕಿನಲ್ಲಿ ಅಡ್ಡಿಗಳ, ಒತ್ತಡಗಳ ಬೃಹದಾಕಾರದ ನೇಯ್ಗೆ ಆಗಿ ಮುನ್ನೆಲೆಗೆ ಬರುತ್ತದೆ.
ನಮ್ಮ ಎಚ್ಚರದ ಗಳಿಗೆಗಳಲ್ಲಿ ಮನಸ್ಸು ತೊಡಗಿಕೊಂಡ ಚಟುವಟಿಕೆಗಳು ಮೂಲಭೂತವಾಗಿ ದೀರ್ಘಾವಧಿ ಬಾಳಿಕೆ ಉಳ್ಳವು. ಹೊರಗಿನಿಂದ ಮಾತನಾಡದೆ ಇದ್ದಾಗಲೂ ಒಳಗೊಳಗೆ ನಡೆಯುವ ಮನಸ್ಸಿನ ಮಾತು, ಮೌನದ ಮಾತು ಕಣ್ಣಿಗೆ ಕಾಣದಿದ್ದರೂ, ಕೊನೆಗೆ ವಾಸ್ತವದಲ್ಲಿ ನೆಲೆ ನಿಲ್ಲುವುದು ಅದುವೇ ಆಗಿದೆ. ಕ್ಷಣಕ್ಷಣಕ್ಕೆ ನಾವು ಅಳಿಯದ ಆರೋಗ್ಯವನ್ನು, ಯಶಸ್ಸನ್ನು ಮತ್ತು ಆನಂದವನ್ನು ನಾವು ಯೋಚಿಸುವ ಯೋಚನೆಗಳಿಂದ ಮತ್ತು ಹಾಕಿಕೊಳ್ಳುವ ಯೋಜನೆಗಳಿಂದ, ಸ್ವೀಕರಿಸುವ ನಂಬಿಕೆಗಳಿಂದ, ನಮ್ಮ ಮನಸ್ಸಿನೊಳಗಿನ ರಂಗಸ್ಥಳದಲ್ಲಿ ನಡೆಸುವ ತಾಲೀಮುಗಳಿಂದ ರೂಪಿಸಿಕೊಳ್ಳಬಹುದು.
ವಿಜ್ಞಾನವೆಂದರೆ ಪೂರಕವಾದ, ವ್ಯವಸ್ಥಿತವಾದ, ಪರಸ್ಪರ ಕಾರ್ಯ-ಕಾರಣ ವಿವರಣೆಗಳನ್ನು ಕೊಟ್ಟುಕೊಳ್ಳುವ ಜ್ಞಾನ ಸರಣಿ. ಹಾಗಾದರೆ ನಿಜವಾದ ಪ್ರಾರ್ಥನೆಯ ವಿಜ್ಞಾನದ ಕುರಿತು ಒಮ್ಮೆ ಯೋಚಿಸೋಣ. ಏಕೆಂದರೆ ಅದು ಜೀವನದ ಮೂಲಭೂತ ತತ್ವಗಳ ಹಾಗೂ ಕೌಶಲ್ಯಗಳ, ವಿಧಾನಗಳ, ಪ್ರತಿಯೊಬ್ಬ ಮಾನವನ ವಿಶ್ವಾಸ ಪೂರ್ಣವಾದ ಒಂದು ಪ್ರಸ್ತುತಿ. ಮನಸ್ಸಿನ ಚಿತ್ರಣ ಅಥವಾ ಯೋಚನೆಗೆ ಸೃಜನಶೀಲ ಮನಸ್ಸಿನ ನಿರ್ದಿಷ್ಟ ಮತ್ತು ನಿಖರವಾದ ಸ್ಪಂದನ, ಅದನ್ನು ಸಾಧಿಸುವ ಕಲೆಯನ್ನು ಪ್ರಾರ್ಥನೆಯ ವಿಧಾನವು ಒಳಗೊಂಡಿದೆ.
“ಕೇಳು, ಅದು ನಿನಗೆ ಕೊಡಲ್ಪಡುತ್ತದೆ. ಹುಡುಕು, ಅದು ನಿನಗೆ ಸಿಗುತ್ತದೆ” ಎಂಬುದು ಪವಿತ್ರ ಗ್ರಂಥದಲ್ಲಿರುವ ವಾಕ್ಯ. ಆದರೆ ಹುಡುಕುವ ತೀವ್ರತೆ ಎಷ್ಟು ಇದೆ? ಮನಸ್ಸಿನ ಆಳದ ಹಂಬಲ ಎಷ್ಟರ ಮಟ್ಟಿಗೆ ಇದೆ? ಎನ್ನುವುದರ ಮೇಲೆ ಇದೆಲ್ಲವೂ ಅವಲಂಬಿಸಿರುವುದು.
ಮಹಾತ್ಮರು ಮತ್ತು ಆಧ್ಯಾತ್ಮಿಕ ಮಾರ್ಗದರ್ಶಿಗಳಾಗಿದ್ದ, ಇಂದ್ರಿಯಾತೀತ ಲೋಕೋತ್ತರವಾದ ಅನುಭವಕ್ಕೆ ಅಥವಾ ” ಅನುಭವ” ಅಲ್ಲದ ಅನುಭವಕ್ಕೆ ಸಾಕ್ಷಿಯಾಗಿದ್ದ ನಮ್ಮ” ಪುತ್ತೂರು ಅಜ್ಜ”ನವರು ಹೇಳುತ್ತಿದ್ದರು-” ಯಾರು ಏನನ್ನು ಹುಡುಕುತ್ತಾರೋ, ಅದು ಅವರಿಗೆ ಸಿಕ್ಕಿಯೇ ಸಿಕ್ಕುತ್ತದೆ. ಆದರೆ, ಸ್ವಲ್ಪ ಕಾಯಬೇಕು, ಅಷ್ಟೇ. “. ಈ ಮಾತು, ಬಹುಶಃ ಈ ಕಾಯುವಿಕೆ ಇದ್ದರೆ ಮಾತ್ರ ಅದು ನಿಜವಾದ ಹುಡುಕುವಿಕೆ ಅಥವಾ ಶೋಧನೆ ಆಗುತ್ತದೆ ಎಂದು ಪರೋಕ್ಷವಾಗಿ ಹೇಳಿದಂತೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಜವಾದ ಹುಡುಕುವಿಕೆಗೆ ಮಾತ್ರ ಕಾಯುವಿಕೆ ಸಾಧ್ಯವಾಗುತ್ತದೆ. ಶಬರಿ ಕಾದಳು. ಹುಡುಕಿದ ನಂತರ ಸಿಕ್ಕುವ ಅನುಭವವೇ, ಅವಳ ಹುಡುಕಾಟದ ಕ್ಷಣಕ್ಷಣದ ಅನುಭವ ಮತ್ತು ಆನಂದ ಆಗಿತ್ತು. ಅದು ಅವಳಿಗೆ ಕಾಯುವಿಕೆಯನ್ನು ಸಾಧ್ಯವಾಗಿಸಿತು. ಡಬ್ಬಕ್ಕೆ ಕಾಣಿಕೆ ಹಾಕಿ, ಮರುದಿನವೇ ಅದು ತುಂಬಿದೆಯೇ ಎಂದು ಮುಚ್ಚಳ ತೆಗೆದು ಇಣುಕುವ ನಮ್ಮ ಮನಸ್ಥಿತಿ ನೋಡಿ, ಶಬರಿಯ ಮನಸ್ಥಿತಿ ನೋಡಿ. ಏನನ್ನು ಹುಡುಕುತ್ತೇವೆಯೋ, ಅದು ಸಿಕ್ಕಿದಾಗ ಅದನ್ನು ಸ್ವೀಕರಿಸುವುದಕ್ಕೆ ಸಾಧ್ಯವಾಗುವುದು ಇಂತಹ ಮನಸ್ಥಿತಿಯಲ್ಲಿ.
ಡಾ. ಆರ್. ಪಿ. ಬಂಗಾರಡ್ಕ. M. S. (Ayu)
ವೈದ್ಯಕೀಯ ನಿರ್ದೇಶಕರು ಹಾಗೂ ಆಯುರ್ವೇದ ತಜ್ಞ ವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು. ದ.ಕ.-574202
www.prasadini.com
mail id: prasadinicare@gmail.com
rpbangaradka@gmail.com
mob:9740545979
9019273522
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.