ಚಂದ್ರಾರ್ಕ ಪರಿಯಂತ ಬಾಳು ಸುಖದಲಿ
ಇಂದ್ರ ಪದವಿಯಲಿ ಓಲಾಡು ಹರುಷದಲಿ
ಚಂದ್ರಮುಖಿಯರು ಇಟ್ಟ ಓಲೆ ಸ್ಥಿರವಿರಲಿ
ಚಂದದಿಂ ಉಡುಗೊರೆಯ ತರಿಸು ಬೇಗದಲಿ
ಇಂತಹ ಹಾರೈಕೆಯನ್ನು ಹಾರೈಸುವ ದೇಶ ನನ್ನದು, ಮನುಷ್ಯನ ಸಾಮಾಜಿಕ ಬದುಕು ಎತ್ತರ ಮಟ್ಟದ್ದಾಗಿರಲು ಅವನಿಗಿರಬೇಕಾದ ಗುಣಗಳ ಬಗ್ಗೆ ಹೇಳುವ ದೇಶ ನನ್ನದು, ಕೃಷಿಯಾಧಾರಿತ ಜನಜೀವನದಲ್ಲಿ ಅನುಕಂಪವನ್ನೂ, ಹೆಮ್ಮೆಯನ್ನೂ, ಅಂಥ ಬಡತನದಲ್ಲಿ ಬೆಳೆದರೂ ಅವರೆಲ್ಲ ತಮ್ಮ ಹೃದಯದಲ್ಲಿ ತುಂಬಿಕೊಂಡಿರುವ ಸೌಜನ್ಯ, ಸರಳ ಬಂಧುಪ್ರೇಮದ ಐಶ್ವರ್ಯ ದೇವಿಯ ನಾಡು ನನ್ನದು.
ಇಂತಹ ರಾಷ್ಟ್ರವೊಂದರ ವೈಭವವನ್ನು ಪುನರಾವಲೋಕಿಸುವ ಮತ್ತು ಪುನಃಸೃಷ್ಟಿಸುವ ಮಹತ್ತರ ಧ್ಯೇಯದೊಂದಿಗೆ ಆರಂಭವಾದ ಮಂಗಳೂರು ಲಿಟ್ ಫೆಸ್ಟ್ ನ ಕಾರ್ಯ ನಿಜಕ್ಕೂ ತನ್ನ ಗುರಿಯೆಡೆಗೆ ಸಾಗುತ್ತಿರುವುದರ ನಿಖರತೆಗೆ ಸಾಕ್ಷಿಯಾಗುವ ಮತ್ತು ಭಾಗಿಯಾಗುವ ಅವಕಾಶ ಹೊತ್ತು ನಡೆದದ್ದು ಕಡಲ ತೀರದ ನಾಡು ಮಂಗಳೂರಿಗೆ.
The Idea of Bharath – ಭಾರತಕ್ಕಿದ್ದ ಇತಿಹಾಸಕ್ಕೆ ಕವಿದ ಮಂಜು ಸರಿಸಿ, ಹೊಸ ಭಾಷ್ಯ ಬರೆಯುವ ಕೆಲಸಕ್ಕೆ ನಾವೆಲ್ಲರೂ ಸಜ್ಜಾಗಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಡುತ್ತಲೇ, ಅಂತಾರಾಪ್ಟ್ರೀಯ ಮಟ್ಟದಲ್ಲಿ ಮತ್ತೆ ತನ್ನ ಸ್ಥಾನವನ್ನು ಪುನ್ಃ ಸ್ಥಾಪಿಸುವ ಕೆಲಸ ಅವಿರತವಾಗಿ ನಡೆಯುತ್ತಿದೆ ಎಂಬುದನ್ನು ಸ್ಪಷ್ಟ ಪುರಾವೆಗಳೊಂದಿಗೆ ಪ್ರಸ್ತುತಪಡಿಸಿತು ಮಂಗಳೂರು ಲಿಟ್ ಫೆಸ್ಟ್ ನ 4 ನೇ ಆವೃತ್ತಿ.
ಕಲೆಯಲ್ಲ ಎಂದದ್ದನ್ನು ಕಲೆಯಾಗಿಸಿ, ಕಲಾವಿದರೆಂದು ನೋಡದವರನ್ನು ಕಲಾವಿದರನ್ನಾಗಿಸಿ, ಸಾಧನೆಯ ಹಾದಿಯಲ್ಲಿ ಮುನ್ನಡೆದು, ಸಾಮಾಜಿಕ ಸಂಕಟಗಳಿದ್ದರೂ ಎದೆಗುಂದದೆ ಅಭಿವೃದ್ಧಿಯ ಯಾನಕ್ಕೆ ಮುನ್ನುಡಿ ಬರೆದಂತಿತ್ತು ಮಂಗಳೂರು ಲಿಟ್ ಫೆಸ್ಟ್ ನ ಎರಡೂ ಆವೃತ್ತಿಗಳು.
ಚೆಲುವಿ ಚೆಲುವಿಯಂತ ಅತಿ ಬಾಯಿ ಬಿಡಬ್ಯಾಡ
ಚೆಲುವಿದ್ದರೇನು ಗುಣವಿಲ್ಲ | ಕೊಳೆನೀರ
ತಿಳಿಯಿದ್ದರೇನು ರುಚಿಯಿಲ್ಲ ||
ರುಚಿಯಿಲ್ಲದ, ಗುಣವಿಲ್ಲದ ಚೆಲುವಿಗೆ ಮಾರುಹೋಗಿ, ದೇಶವನ್ನು ತಿಳಿಯಾಗಿ ಕಂಡ ಕೊಳೆನೀರ ಒಡೆಯರಿಗೆ ಬಿಟ್ಟು ಕೊಟ್ಟ ಸಂದರ್ಭಗಳ ಸತ್ಯಗಳನ್ನು ಬಯಲಿಗೆಳೆಯುವ ಕೆಲಸವನ್ನು ತಜ್ಞರು ಸೂಕ್ತ ನಿಖರ ಮತ್ತು ಸ್ಪಷ್ಟವಾದ ದಾಖಲೆಗಳು ಹಾಗೂ ಪುರಾವೆಗಳ ಸಮೇತ ಮಾಡಿದರು.
ಒಂದು ಗಮನಿಸಲೇಬೇಕಾದ ಮತ್ತು ಹೇಳಲೇಬೇಕಾದ ವಿಶೇಷ ಸಂಗತಿಯೆಂದರೆ ಹೆಸರೇ ಹೇಳುವಂತೆ ಇದೊಂದು ಕೇವಲ ಸಾಹಿತ್ಯ ಹಬ್ಬ- ಸಾಹಿತ್ಯವೇ, ಸಾಹಿತ್ಯಕ್ಕಾಗಿ, ಸಾಹಿತ್ಯಮಯವಾದ ಹಬ್ಬ.
ಯಾವುದೇ ’ ರಾಜಕೀಯ ’, “ ಪಂಥ “ಗಳ ಹಿನ್ನಲೆಯ ಪೂರ್ವಾಗ್ರಹಪೀಡಿತ ಮನಸ್ಥಿತಿಯಿರದ, ನಿರ್ದಿಷ್ಟ ವಿಷಯಗಳ ಕುರಿತು ದಶಕಗಳ ಕಾಲ ಸಂಶೋಧನೆ ನಡೆಸಿದ ಇತಿಹಾಸ ಸಂಶೋಧಕರು, ಆರ್ಥಿಕ ತಜ್ಞರು, ಇತಿಹಾಸ ಪ್ರಾಧ್ಯಾಪಕರು, ಪತ್ರಕರ್ತರು, ಅಕಾಡೆಮಿಗಳ ಅಧ್ಯಕ್ಷರು, ಮಿಥಿಕ್ ಸೊಸೈಟಿಯಂತಹ ಸಂಸ್ಥೆಯೊಂದಿಗೆ ಜೋಡಿಸಿಕೊಂಡವರು – ಹೀಗೆ ಹತ್ತು ಹಲವು ವೈವಿಧ್ಯತೆಗಳನ್ನೊಳಗೊಂಡ ವಿಚಾರವಂತರ ವೇದಿಕೆಯಾಗಿದೆ ಈ ಮಂಗಳೂರು ಲಿಟ್ ಫೆಸ್ಟ್.
ಹೇಗಿತ್ತು ಈ ಎರಡೂ ಆವೃತ್ತಿಗಳ ಸಾಹಿತ್ಯಿಕ, ಇತಿಹಾಸ, ಅರ್ಥಶಾಸ್ತ್ರ, ಜಾನಪದ, ಸಿನೆಮಾ, ಭಾಷೆ, ಸಾಹಿತ್ಯ ಕೃತಿಯ ಓದು, ಚರ್ಚೆ ಎಂಬುದರ ಚಿಕ್ಕ ವಿಶ್ಲೇಷಣೆಯ ಪ್ರಯತ್ನವಿದೆ ಈ ಲೇಖನದಲ್ಲಿ.
ಕೊರೊನಾದ ಹೊಡೆತದಿಂದ ತತ್ತರಿಸಿ, ಇನ್ನೇನು ಎಲ್ಲವೂ ಸರಿಹೋಗಲಿದೆ ಎಂಬ ಆಶಾಭಾವನೆಯ ಸಂಕ್ರಮಣ ಕಾಲದಲ್ಲಿ ಅತಿ ಎಚ್ಚರಿಕೆಯಿಂದ, ಎಲ್ಲಾ ಕ್ರಮಗಳನ್ನನುಸರಿಸಿ, ಒಂದೇ ದಿನ ಒಂದೇ ವೇದಿಕೆಯಲ್ಲಿ ಆಯೋಜನೆಗೊಂಡ Lit Fest ನ ಮೂರನೇ ಆವೃತ್ತಿಯು ’ ಭಾರತದ ಪರಿಕಲ್ಪನೆ’ ಬದಲಾಗುತ್ತಿದೆ ಎಂಬುದರ ಸೂಚನೆ ಕೊಟ್ಟಿತ್ತು.
Post Pandemic Narratives : Reimagining The India way ವಿಷಯದ ಗೋಷ್ಠಿಯಲ್ಲಿ ಶ್ರೀ. ಶಕ್ತಿ ಸಿನ್ಹಾ, ಶ್ರೀ. ವಿಕ್ರಂ ಸೂದ್, ಪ್ರೊ. ಮಾಧವ ನಲಪಾಡ್, ಡಾ. ದತ್ತೇಶ ಪ್ರಭು ಅವರುಗಳು ಭಾರತ ಅಂತಾರಾಪ್ಟ್ರೀಯ ಮಟ್ಟದಲ್ಲಿ ಜವಬ್ದಾರಿಯುತ ಪಾತ್ರ ನಿರ್ವಹಿಸುತ್ತಿದೆ. ನಿಜವಾಗಿಯೂ ಆತ್ಮನಿರ್ಭರವಾಗಿದೆ. ವಿಶ್ವದ ಆಗುಹೋಗುಗಳನ್ನು ತಾಳ್ಮೆಯಿಂದ ಗಮನಿಸುತ್ತಾ, ಸ್ಥಿರವಾದ ಧೋರಣೆ ತೋರುತ್ತಿದೆ. ತನ್ನ ಶ್ರೇಷ್ಠತೆ, ಉದಾತ್ತತೆಯಿಂದ ವೈಶ್ವಿಕ ಆಧಿಪತ್ಯ ಸಾಧಿಸುವಲ್ಲಿ ಮುನ್ನಡೆಯುತ್ತಿದೆ ಕಾರಣ, ಯಾವುದೇ ದೇಶವಾಗಲೀ, ಹಿರಿಮೆಯನ್ನು ಪಡೆಯುವುದು ಕೊಡುವುದರಿಂದ ಹೊರತು ಕೇವಲ ಸ್ವೀಕರಿಸುವುದರಿಂದಲ್ಲ.
ಇದೆಲ್ಲದರ ಜೊತೆಗೆ ಭಾರತಕ್ಕಿರುವುದು 600 ಅಥವಾ 1000 ವರ್ಷಗಳ ಇತಿಹಾಸ ಮಾತ್ರವಲ್ಲ ಅದು 6000 ವರ್ಷಗಳಿಗೂ ಮುಂಚಿನದ್ದು. Historical Routes ನ್ನು ತಿಳಿಯುವಲ್ಲಿ ಆಗಿರುವ ಕೊರತೆ, ಮೊಗಲರು ಬ್ರಿಟಿಷರ ಆಳ್ವಿಕೆಯ ವೈಭವೀಕರಣದಿಂದ ಸನಾತನ ಸಂಸ್ಕೃತಿಯ ಮೇಲಾದ ದಾಳಿಯಿಂದಾಗುತ್ತಿರುವ ಅನಾಹುತಗಳು, ಈಗೊಂದಿಷ್ಟು ವರ್ಷಗಳಲ್ಲಿ ಇವುಗಳ ಕುರಿತು ಚರ್ಚೆ ಜಾಗೃತಿ ನಡೆಯುತ್ತಿರುವುದು, ಭಾರತ ’ ಪರಿಹಾರ’ದ ( Solution ) ಭಾಗವಾಗಿ ಹೊರಹೊಮ್ಮುತ್ತಿರುವುದರ ಕಡೆ ಗಮನ ಸೆಳೆದರು.
ಭಾರತ ಈಗ ದಕ್ಷಿಣ ಮತ್ತು ಪಶ್ಚಿಮದ ನಡುವೆ ಸೇತುವೆಯ ರೂಪದಲ್ಲಿ ಕೆಲಸ ಮಾಡುತ್ತಿದೆ. ಕೊರೊನಾ ಗೆ ಉಳಿದೆಲ್ಲಾ ದೇಶಗಳು ಪ್ರತಿಕ್ರಿಯಿಸಿದ ವಿಧಾನಕ್ಕೂ, ಭಾರತ ಸ್ಪಂದಿಸಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಭಾರತವೀಗ ಭೌಗೋಳಿಕ ಆರ್ಥಿಕ ( GeoEconomic ) ಮತ್ತು ದಿಟ್ಟವಾದ ಅಧಿಕೇಂದ್ರ ( Epicentre ) ಆಗಿದೆ ಎಂಬುದನ್ನು ತಿಳಿಸಿದರು.
’ನೆಲದ ಭಾಷೆ, ಮನದ ಮಾತು: ನವ ಭಾರತಕೆ ದೇಸಿ ಸೊಗಡು ’ ಶೀರ್ಷಿಕೆಯಡಿಯಲ್ಲಿ ಡಾ. ಆನಂದಪ್ಪ, ಶ್ರೀ. ಬಿ.ಎಚ್. ಜೋಗಿ, ಡಾ. ರೋಹಿಣಾಕ್ಷ ಶಿರ್ಲಾಲು, ಶ್ರೀ. ಸತ್ಯಬೋಧ ಜೋಶಿ, ಶ್ರೀಮತಿ. ಮಂಗಳಾ ಸಿದ್ದಿ ಅವರುಗಳು – ಅಕ್ಷರಲೋಕಕ್ಕೆ ಅಪರಿಚಿತರಾಗಿದ್ರೂ, ಸೃಷ್ಟಿಶೀಲತೆಯಿಂದ ಅತ್ಯುನ್ನತ ಜ್ಞಾನ ಪರಂಪರೆಯನ್ನು ಕಟ್ಟಿದ ಜನಪದರ ಸತ್ವವನ್ನು ತೆರೆದಿಟ್ಟರು. ಇದರೊಳಗೆ ಒಂದು ತೀವ್ರತರವಾದ ತತ್ವಜ್ಞಾನವಿದೆ, ಹಂಚಿತಿನ್ನುವ ಪದ್ಧತಿಯಿದೆ, ಧಾರ್ಮಿಕ ಆಯಾಮವಿದೆ, ಒಂದು ನಾಡಿನ ಪರಂಪರೆ ಸಂಸ್ಕೃತಿಯ ಸತ್ವ ಎಲ್ಲವೂ ಹುದುಗಿದೆ. ತಮ್ಮ ಅನುಭವದ ಮಾತಿನಿಂದ ಜೀವನವನ್ನು ರಸಪೂರ್ಣವೂ, ಜೀವಂತವೂ ಆಗಿ ಉಳಿಸಿಕೊಂಡು ಬಂದ ಶ್ರೀಮಂತಿಕೆಯಿದೆ. ಬುಡಕಟ್ಟು ಸಂಸ್ಕೃತಿ- ಜಾನಪದ ಸಂಸ್ಕೃತಿ- ನಿಸರ್ಗ ಸಂಸ್ಕೃತಿ- ಇವು ಅಕ್ಷರಪೂರ್ವ ಸಂಸ್ಕೃತಿ. ನಂತರ ಬಂದದ್ದೆಲ್ಲಾ ಅಕ್ಷರೋತ್ತರ ಸಂಸ್ಕೃತಿ. ಅದಕ್ಕೆ ಗೊತ್ತಿಲ್ಲದ ಕೆಲವು ಕಥೆಯನ್ನು ಹೇಳಬೇಕಾದ ತುರ್ತಿದೆ. ನೆಲದ ಮಾತನ್ನು ದಾಖಲಿಸುವ ಕೆಲಸವಾಗಬೇಕಿದೆ. ಹೆದ್ದಾರಿಯ ಜೊತೆಗೊಂದು ಕವಲುದಾರಿಯಿದೆ, ಶಾಸ್ತ್ರಗಳ ಜೊತೆಗೇ ಜನಪದವಿದೆ ಎಂದು ಹೇಳಿದರು.
Azaadi ke 75 Saal, Swarajya – Then and Now ಶೀರ್ಷಿಕೆಯ ಗೋಷ್ಠಿಯಲ್ಲಿ ಡ. ನಂದನ್ ಪ್ರಭು, ಶ್ರೀ ಶೇಷಾದ್ರಿ ಚಾರಿ, ವಿಕ್ರಮ್ ಸಂಪತ್ – ಅವರುಗಳು ಭಾರತಕ್ಕಿದ್ದ ಮತ್ತು ಮಧ್ಯದಲ್ಲಿ ಕಾಣೆಯಾಗಿ, ಈಗ ಮತ್ತೆ ಗೋಚರವಾಗುತ್ತಿರುವ ಆಯಾಮಗಳ ಪರಿಚಯ ಮಾಡಿಸಿದರು. ಸ್ವರಾಜ್ಯ ಎಂದರೆ 1947 ರ ಮುಂಚಿನ ಭಾರತ, 1947 ರಿಂದ ಇಂದಿನವರೆಗಿನ ಭಾರತ ಎಂದು ಎರಡು ಭಾಗಗಳಾಗಿ ನೋಡಬೇಕಾಗುತ್ತದೆ. 1947 ರಲ್ಲಿ ನಮಗೆ ಸಿಕ್ಕಿದ್ದು ಕೇವಲ ರಾಜಕೀಯ ಸ್ವಾತಂತ್ರ್ಯ. ಅದು ಬಿಟ್ಟೂ ಭಾರತಕ್ಕೆ ಬೇರ ಬೇರೆ ಮಗ್ಗಲುಗಳುಂಟು.
ಸಾಂಸ್ಕೃತಿಕ ಭಾರತ
ಸಭ್ಯ ಭಾರತ
ಅಖಂಡ ಭಾರತ
ಭೌಗೋಳಿಕ ಭಾರತ
ಆಧ್ಯಾತ್ಮಿಕ ಭಾರತ……ಹೀಗೆ.
ಭಾರತ ಈಗ ವಿಶ್ವಗುರುವಾಗಿದೆ. ಮೊದಲೆಲ್ಲಾ ಭೂಭಾಗ ದೊಡ್ಡದಿರುವ ದೇಶಕ್ಕೆ ಅಧಿಕಾರವಿತ್ತು, ನಂತರ ಅದು ಸೈನ್ಯದ ಬಲದ ಆಧಾರಕ್ಕೆ ಬಂತು, ಈಗ ಆರ್ಥಿಕ ಬಲಕ್ಕೆ ಬಂದು ನಿಂತಿದೆ.
ವಿಶ್ವ ಸಂಸ್ಕೃತಿ – ವೈಶ್ವಿಕ ಆಲೋಚನೆಯಲ್ಲಿ ಶಾಂತಿದಾಯಕ, ಕೊಡುಗೆ ನೀಡಬಲ್ಲ ತತ್ವಾಧಾರಿತ ಧೋರಣೆಯಿದೆ ಭಾರತದ್ದು. ಸ್ವಾತಂತ್ರ್ಯಾನಂತರದಿಂದ ಈ ಧೋರಣೆ ಕುರಿತು ತಪ್ಪು ವಿಶ್ಲೇಷಣೆಗಳಾಗಿದ್ದು, ಈಗೀಗ ತನ್ನ ಹಳೆಯ ವೈಭವವನ್ನು ಪಡದುಕೊಳ್ಳುತ್ತಿದೆ ಎಂಬುದನ್ನು ಚರ್ಚಿಸಿದರು.
Exploring the Indian Identity through Cinema ವಿಷಯದ ಚರ್ಚಯಲ್ಲ ಹೆಸರಾಂತ ನಿರ್ದೇಶಕರಾದ ಶ್ರೀ. ಸುಚೇಂದ್ರ ಪ್ರಸಾದ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಶ್ರೀ ಸುನಿಲ್ ಪುರಾಣಿಕ್, ಶ್ರೀ ಅಭಿಷೇಕ್ ಅಯ್ಯಂಗಾರ್ ಅವರು ಭಾರತೀಯತೆಯನ್ನು ಬಿಂಬಿಸುವ ಸಿನೆಮಾಗಳಿಗೆ ಒತ್ತು ಕೊಡಬೇಕು, ವಿಕಾರ ವಿಕೃತ ಆನಂದದ ಬದಲು ವಿಸ್ತಾರ ಮುಖ್ಯವಾಗಬೇಕು, ದಾಖಲೆಯೋಗ್ಯ ಸಂಗತಿಗಳೇ ಸಿನೆಮಾದಲ್ಲಿ ದಾಖಲಾಗಬೇಕು ಎಂದು ಹೇಳಿದರು.
‘Untold Sagas, Unsung Heroes : Reimagining Bharath through Ithihas and its Retelling ‘ ಗೋಷ್ಠಿಯಲ್ಲಿ ಅರವಿಂದ ನೀಲಕಂಠನ್, ಸಾಯಿ ಸ್ವರೂಪ ಅಯ್ಯರ್, ವಸುಂಧರ ದೇಸಾಯಿಯವರು ಮಹಾಭರತದ ಕೆಲವು ಅಪರಿಚಿತ ಪಾತ್ರಗಳ ಪರಿಚಯ-ಮಹತ್ವ ಹೇಳುತ್ತ 1607 ರಲ್ಲಿ ವಿಜಯನಗರದ ಹೂವಿನ ಹಡಗಲಿಯಲ್ಲಿ ಹುಟ್ಟಿದ ಕಲಾವಿದ ಬಿಷ್ಟಪಯ್ಯ ಅವರನ್ನ ನೆನಪಿಸಿದರು. ಅದು ಅಳಿದ ಹಂಪಿ ಅಲ್ಲ ಉಳಿದ ಹಂಪಿ ಎಂದು ಸಾರಿದರು.
’ವಿಷಮತೆಯ ಮಥನದಲ್ಲಿ ಮೂಡಿದ ಸಾಹಿತ್ಯ ಸುಧೆ : ಕನ್ನಡದ ಮುಂದಿನ ಹಾದಿ ’ ಗೋಷ್ಠಿಯಲ್ಲಿ ಶ್ರೀ ರೋಹಿತ್ ಚಕ್ರತೀರ್ಥ, ಡಾ. ಬಿ.ವಿ ವಸಂತ ಕುಮಾರ್, ಡಾ. ಗಿರೀಶ್ ಭಟ್, ಶ್ರೀ ಲಕ್ಷ್ಮೀನಾರಾಯಣ ಕಜಗದ್ದೆ – ಇವರು ಭಾರತೀಯ ಮನೋಧರ್ಮ, ಪಾಶ್ಚಾತ್ಯ ಮನೋಧರ್ಮ, ಬಡತನದ ವೈಭವೀಕರಣ, ದುರಂತ-ಸುಖಾಂತ್ಯ ಎಂಬ ವಿಚಾರಗಳನ್ನು ಕೆಲವು ಕಾದಂಬರಿಗಳು, ನಾಟಕಗಳು, ಕೃತಿಗಳಲ್ಲಿ ಬರುವ ಮುಖ್ಯ ಸಂಗತಿಗಳ ಹಿನ್ನಲೆಯಲ್ಲಿ ಚರ್ಚಿಸಿದರು.
ಜ್ಯೋತಿಯ ಮುಟ್ಟಿದ ಬತ್ತಿ ಎಲ್ಲಾ ಜ್ಯೋತಿಯಪ್ಪವಯ್ಯಾ,
ಸಾಗರವ ಸೇರಿದ ನದಗಳೆಲ್ಲಾ ಸಾಗರವಪ್ಪವಯ್ಯಾ,
ಪ್ರಸಾದವ ಮುಟ್ಟಿದ ಪದಾರ್ಥವೆಲ್ಲಾ ಪ್ರಸಾದವಪ್ಪವಯ್ಯಾ,
ಎಂಬ ವಚನದಂತೆ, ಈ ಸಾಹಿತ್ಯ ಹಬ್ಬದ ಸ್ಪರ್ಶ ಮಾತ್ರದಿಂದಲೇ ಒಂದಿಷ್ಟು ವೈಚಾರಿಕ, ತಾರ್ಕಿಕ, ಆಧ್ಯಾತ್ಮಿಕ ಅನುಭೂತಿಗೆ ಒಳಗಾಗುವುದರಲ್ಲಿ ಸಂಶಯವೇ ಇಲ್ಲ. ಕಾರಣ, ಭಾರತದ ಮೂಲ ಸತ್ವವಾದ ಜೀವಪರ ನಿಲುವು, ಔದಾರ್ಯ, ಸಮಾಜ ಮತ್ತು ಕುತುಂಬ ಜೀವನವನ್ನು ಸಹ್ಯಗೊಳಿಸಿವೆ, ದ್ವೇಷ, ಅಸೂಯೆಗಳನ್ನು ದೂರ ಮಾಡಿವೆ. ಹೀಗೆ ಭಾರತೀಯ ಸಂಸ್ಕೃತಿಯ ಸಾರವನ್ನು ಸಾರಲು ಈ ವರ್ಷದ ಅಂದರೆ 4 ನೇ ಆವೃತ್ತಿಯ ಲಿಟ್ ಫೆಸ್ಟ್ ಎರಡು ದಿನಗಳ ಕಾಲ ಆಯೋಜಿತವಾಗಿತ್ತು.
ಭೂಮಿಯಿಂದ ಬೆಳೆ ತೆಗೆಯಲು ಮಳೆ ಅವಶ್ಯಕ ಎಂಬ ರೈತನ ತಿಳಿವಳಿಕೆಯೇ ಆಗಿರಬಹುದು – ಕಾಯಕ, ಶ್ರದ್ಧೆಯನ್ನೇ ಭಾಗವಾಗಿರಿಸಿಕೊಂಡ, ಅಗೋಚರವಾದದ್ದನ್ನೆಲ್ಲಾ ಗ್ರಹಿಸಿಕೊಂಡು ಅದಕ್ಕೊಂದು ಆಕಾರ ನೀಡಿ ಮಾನವೀಕರಣಗೊಳಿಸುವ ತಾತ್ವಿಕತೆಯೇ ಆಗಿರಬಹುದು ಅಥವಾ ವಿಶ್ವವ್ಯಾಪಿ ಗುಣವೇ ಆಗಿರಬಹುದು, ಭಾರತವೆಂದರೆ ಜೀವಂತಿಕೆ, ಜನವಾಣಿ-ಕವಿವಾಣಿಯ ಸಮ್ಮಿಲನ, ಸತ್ವ ನೀಡುವ ಮೌಲಿಕತೆ, ಸಾಮೂಹಿಕ ಸೃಷ್ಟಿ, ಜೀವಜಾಲದ ವ್ಯಾಪಕತೆ – ಎಲ್ಲವನ್ನೊಳಗೊಂಡ ಸಾರ್ವಭೌತ್ವದ ಸಂಕೇತ ಎಂಬುದನ್ನು ತಮ್ಮ ತರ್ಕಶುದ್ಧವಾದ ಚಿಂತನೆ- ಶಾಸ್ತ್ರಶುದ್ಧವಾದ ಚಿಂತನೆಗಳ ಮೂಲಕ ತಿಳಿಸಿಕೊಟ್ಟ ಡಾ. ರಾ. ಗಣೇಶ ಶತಾವಧಾನಿ ಅವರು ಭಾಗವಹಿಸದ ಉದ್ಘಾಟನಾ ಗೋಷ್ಠಿ ತೆರೆದಿಟ್ಟದ್ದು ಭಾವ ಸಮೃದ್ಧ ಭಾರತದ ಚಿತ್ರಣವನ್ನು.
ಕಾರ್ಯ-ಕಾರಣ ಸಂಬಂಧ, ’ರಸ’ ಎಂದರೆ ಮೈ ಮರೆವು ಅಲ್ಲ, ಮೈ ಅರಿವು, ಅರಿವೇ ಆನಂದ, ಉಪ್ಪಿನಕಾಯಿಗೆ ಎಷ್ಟು ಉಪ್ಪು ಹಾಕ್ತೀವೋ ಅಷ್ಟು ಸಾರಿಗೆ ಹಾಕಲ್ಲ. ಹಾಗಾಗಿ ರಸದ ಕುರಿತು ತಲಸ್ಪರ್ಶಿ ಅಧ್ಯಯನ ಆಗಬೇಕಿದೆ ಎಂದು ಹೇಳಿದರು.
ಈ ಬಾರಿಯ ಗೋಷ್ಠಿಯ ವಿಚಾರಗಳೆಲ್ಲವೂ ಪೂರ್ಣತಃ ಮೀಸಲಿದ್ದದ್ದು ದೇಶೀಯತೆ, ರಾಷ್ಟ್ರೀಯತೆ, ದೇಶ-ಕಾಲ-ಕಲೆ-ಸಂಸ್ಕೃತಿಯ ಕುರಿತು, ರಷ್ಯಾ-ಉಕ್ರೇನ್ ಸಮಸ್ಯೆ- ಭಾರತದ ದೃಷ್ಟಿಕೋನ, ಭಾಷೆ ಮತ್ತು ತಂತ್ರಜ್ನಾನ, 75 ವರ್ಷಕ್ಕೆ 75 ನೆನಪುಗಳು, ಕಶೀರ-ಕಾಶ್ಮೀರದ ಕಥೆಗಳು, ಪಠ್ಯ ವಿಮರ್ಶೆ, ಕನ್ನಡಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ, ಕನ್ನಡದ ರಾಜಮನೆತನಗಳು, Kashmir files- Reel and Real ಎಂಬ ಶೀರ್ಷಕೆಯಲ್ಲಿ ಎಲ್ಲೂ ರಾಜಕೀಯ ಅಥವಾ ’ಪಂಥ’ದ ಸುಳಿವೂ ಇಲ್ಲ. ಕೇವಲ ಶುದ್ಧ ದೇಶಭಕ್ತಿಯ ಚಿಂತನ ಮಂಥನ ಮಾತ್ರ ಕಾಣುತ್ತದೆ.
ಕನ್ನಡವನ್ನು ಗಣಕಯಂತ್ರಕ್ಕೆ ಅಳವಡಿಸಿದ ನಾಡೋಜ ಕೆ.ಪಿ.ರಾವ್, ಶ್ರೀಮತಿ ಸಹನಾ ವಿಜಯಕುಮಾರ್, ರೋಹಿತ್ ಚಕ್ರತೀರ್ಥ, ಅರವಿಂದ ಚೊಕ್ಕಾಡಿ, ಡಾ. ಜಿ. ಬಿ. ಹರೀಶ್, ಬೇಳೂರು ಸುದರ್ಶನ, ಡಾ. ಅನುರಾಧಾ ವಿ, ಡಾ. ಸೋಂದಾ ಲಕ್ಷ್ಮೀಶ ಹೆಗಡೆ, ಪ್ರಕಾಶ್ ಬೆಳವಾಡಿ ಅವರಂತಹ ನಟರು, ಸಂಶೋಧಕರು, ಪ್ರಾಧ್ಯಾಪಕರು, ಚಿಂತಕರು, ಇತಿಹಾಸ ತಜ್ಞರು ಭಾಗವಹಿಸಿದ ಈ ಸಾಹಿತ್ಯ ಹಬ್ಬ ನಿಜಕ್ಕೂ ಸಾಹಿತ್ಯಪ್ರೇಮಿಗಳು, ದೇಶಭಕ್ತರಿಗೆ ಉಣಬಡಿಸಿದ ಮೃಷ್ಟಾನ್ನ ಭೋಜನವೇ ಆಗಿತ್ತು.
ಪಠ್ಯ ರಚನೆ-ಕಲಿಕಾ ಪ್ರಕ್ರಿಯೆ-ಮೌಲ್ಯಮಾಪನ ಈ ಮೂರರ ನಡುವೆ ಸಂಪರ್ಕವಿರಬೇಕು, ಇತಿಹಾಸ ಓದುವ ವಿದ್ಯಾರ್ಥಿಗೆ ಇತಿಹಾಸದಿಂದ ನಾನೇನು ಕಲಿಯಬಲ್ಲೆ ಎಂಬುದು ಸ್ಪಷ್ಟವಾಗಬೇಕು, ಕಡಿಮೆ ಪಠ್ಯದ ಮೂಲಕ ಹೆಚ್ಚು ಚಿಂತನಾ ಸಾಮರ್ಥ್ಯ ಬೆಳೆಸಬೇಕು, ವಿಶಾಲವಾದ ಜೀವನ ದೃಷ್ಟಿ ಬೆಳೆಸಿಕೊಳ್ಳಬೇಕು, ವ್ಯಕ್ತಿ-ಇಸವಿಗಳ ಹಿಂದೆ ಬೀಳದೆ ಅವರು ಕೊಟ್ಟ ಕೊಡುಗೆಗಳ ಬಗ್ಗೆ ತಿಳಿಯಬೇಕು, ಭಾರತೀಯ ಕ್ರಮದಲ್ಲೇ ಪಠ್ಯ ಪುಸ್ತಕದ ರಚನೆಯಾಗಬೇಕು, ಚರಿತ್ರೆ ನಿರೂಪಣಾ ಪದ್ಧತಿಗೆ ಹಿಂತಿರುಗಬೇಕು, ಶಿಕ್ಷಕರು ಜ್ಞಾನದ ರಚನೆ ಮಾಡುವವರಾಗಬೇಕೇ ಹೊರತು ಕೇವಲ ಜ್ಞಾನದ ವರ್ಗಾವಣೆ ಮಾಡುವವರಲ್ಲ, ಕಾರಣ ಭಾರತದ ಪದ್ಧತಿ ಶುದ್ಧ ಕ್ರಿಯಾಜ್ಞಾನ ಪದ್ಧತಿ ಎಂಬ ವಿಚಾರಗಳು ಮಂಡನೆಯದವು.
ಕನ್ನಡದ ರಾಜಮನೆತನಗಳು ತಮ್ಮಲ್ಲಿ ಎಂತಹ ನಿಖರವಾದ ವೈಜ್ನಆನಿಕ ಮನೋಭಾವ ಹೊಂದಿದ್ದರು ಎಂಬುದಕ್ಕೆ ಸಂಪನ್ಮೂಲಗಳ ರಕ್ಷಣೆಗೆ ಅವರು ಅವುಗಳನ್ನು ಪುಣ್ಯಕ್ಷೇತ್ರಗಳಾಗಿ ಮಾಡಿದ ಉದಾಹರಣೆಯೇ ಸಾಕು. ಹಿಂದೆ ಅವರು ಮಾಡಿದ ಸೃಷ್ಟಿಯನ್ನು ನಾವು ನೋಡುವ ದೃಷ್ಟಿ ಬದಲಾಗಬೇಕಿದೆ. ಈಗ ದುಬೈ ಕಡೆಗೆ ಕಣ್ಣರಳಿಸಿ ನೋಡುವ ನಾವು, ಶಾತವಾಹನರ ಕಾಲದಲ್ಲಿ ಅದೇ ಅರಬರನ್ನು ನಮ್ಮ ಬಂದರುಗಳಲ್ಲಿ ಕೂಲಿ ಕೆಲಸಕ್ಕೆ ಇಟ್ಟುಕೊಂಡಿದ್ದ ದಾಖಲೆಗಳನ್ನೇಕೆ ಮರೆತಿದ್ದೇವೆ? ಕನ್ನಡ ನಾಡಿನ ಸ್ವಾತಂತ್ರ್ಯಕ್ಕೆ ಹಿಡಿದ ಗ್ರಹಣವನ್ನು ಬಿಡಿಸಿದ ಖ್ಯಾತಿಗೆ ಪಾತ್ರವಾದ ಕದಂಬರ ಕೊಡುಗೆಗಳೇಕೆ ನಮಗೆ ತಿಳಿದಿಲ್ಲ? ದೇವಾಲಯಗಳನ್ನು ಶ್ರೀ ಭಂಡಾರಗಳೆಂದು ಕರೆಯಲಾಗುತ್ತಿದ್ದು, ಈಗಿನ ಬ್ಯಾಂಕುಗಳಂತೆ ಅವು ಕಾರ್ಯನಿರ್ವಹಿಸುತ್ತಿದ್ದವು, ಆರ್ಥಿಕ ವ್ಯವಸ್ಥೆಯ ಕೇಂದ್ರ ಬಿಂದುಗಳಾಗಿದ್ದವು – ಹೀಗೆ ಐತಿಹಾಸಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದರು.
ನಾಲ್ಕನೇ ಆವೃತ್ತಿಯ ಲಿಟ್ ಫೆಸ್ಟ್ ನ ಕೇಂದ್ರ ಕಾಶ್ಮೀರದ ಬಗ್ಗೆಯೇ ಆದರೂ ನನಗೆ ಹೆಚ್ಚು ಕಾಡಿದ, ಇವತ್ತಿಗೂ ಚುಚ್ಚುತ್ತಿರುವ ಭಾಗವೆಂದರೆ ‘ bose- the untold story ‘ ಎಂಬ ಗೋಷ್ಠಿ. ಲೇಖಕರಾಡಿದ ಮಾತುಗಳು, ಪ್ರಸ್ತುತ ಪಡಿಸಿದ ದಾಖಲೆಗಳು, ಎದುರಿಸಿದ ಬೆದರಿಕೆಗಳು, ಕಾಯುತ್ತಲೇ ಕಳೆದ ವರ್ಷಗಳು ಎಲ್ಲವೂ ಒಮ್ಮೆಯಾದ್ರೂ ನಮ್ಮನ್ನು ವಿಚಲಿತಗೊಳಿಸದೇ ಇರದು. ಪುಸ್ತಕದ ಕರ್ತೃ ಅನುಜ್ ಧರ್ ಮತ್ತು ಚಂದ್ರಾಚೂಡ ಘೋಶ್ ಅವರು ಭೋಸ್ ಅವರ ಜೀವನದ ನಾವು ಕಂಡೇ ಇರದ, ಕೇಳೇ ಇರದ ಕಟು ಸತ್ಯಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋದ ಹಾಗೆ ಮೈ ಉರಿಯದೇ ಇರದು. ಆಗಿನ ಸರ್ಕಾರ, ಗೋಮುಖವ್ಯಾಘ್ರ ನಾಯಕರ ನಡೆವಳಿಕೆಗಳ ಕುರಿತು ಹಾಗೂ ನೇತಾಜಿ ಅವರ ಬಗ್ಗೆ ಇಲ್ಲಿಯವರೆಗೂ 202 ದಾಖಲೆಗಳನ್ನು ತೆಗೆಸಿದ್ದಾರೆ. ಅವರ ಮರಣದ ಕುರಿತು ಇರುವ ಊಹೆಗಳಿಗೆ ತೆರೆ ಎಳೆದಿದ್ದಾರೆ. Science ಗೂ ಮೀರಿದ ಕೆಲಸಗಳನ್ನು ಹಿಂದೆ ಮಾಡಿದೆ, ಈಗ ಮಾಡುತ್ತಲೇ ಇದೆ, ಮುಂದೆಯೂ ಮಾಡುತ್ತಲೇ ಇರಲಿದೆ Political Science ಎಂಬ ಮಾತಿನಲ್ಲಿರುವ ವ್ಯಂಗ್ಯಾರ್ಥ ಧ್ವನ್ಯಾರ್ಥಗಳು ಅರ್ಥೈಸಿಕೊಳ್ಳುವವರಿಗೇ ಗೊತ್ತು.
ಇಂತಹ ಸಂಗತಿಗಳನ್ನು ಕೇಳಿದ ಮೇಲೂ ನಮ್ಮಲ್ಲಿ ಕೂದಲೆಳೆಯಷ್ಟಾದರೂ ಕಿಚ್ಚು ಹತ್ತದಿದ್ದರೆ ನಾವು ಬದುಕಿದ್ದೂ ಸತ್ತಂತೆ.
ಹಾಗಿದ್ದರೆ ನಮ್ಮ ಜವಬ್ದಾರಿ ಏನು?
- ನೀತಿ ಸೂಕ್ಷ್ಮದ ಮಾರ್ಗ ಎಷ್ಟು ಗಹನವಾದದ್ದು ಎಂಬುದನ್ನು ತಿಳಿಸುವ ಮಹಾಕಾವ್ಯಗಳ ಓದು ಆಗಬೇಕಿದೆ.
- ಇತಿಹಾಸ ತಿಳಿಯದ ಶುದ್ಧ ನಿರ್ಬುದ್ಧರಾಗುವ ಬದಲು ಸತ್ಯದ ದೀಪ ಬೆಳಗಬೇಕಿದೆ.
- ಯಾರು ತಮಗಾಗಿ ಬದುಕುತ್ತಾರೋ ಅವರನ್ನು ಪ್ರಪಂಚ ನಿರ್ದಾಕ್ಷಿಣ್ಯವಾಗಿ ಮರೆತುಬಿಡುತ್ತದೆ, ಮತ್ತೊಬ್ಬರಿಗಾಗಿ ಮಡಿದ ಉಪಕಾರ ಮರೆಯಲಾಗದು, ನಮಗಾಗಿ ಮಡಿದ ಕೆಲ್ಸ್ ಮೃತ್ಯುವಿನ ಕಡೆ ಒಯ್ದರೆ, ಬೇರೆಯವರಿಗಾಗಿ ಮಾಡಿದ್ದು ಅಮರತ್ವದ ಕಡೆಗೆ ಒಯ್ಯುತ್ತದೆ ಎಂಬ ಅರಿವು ಮೂಡಿಸಿಕೊಳ್ಳಬೇಕಿದೆ.
ದೀಪವೊಂದಿರಲಿ ಬೆಳಗುವ ಕಣ್ಣಿಗೆ,
ಹುಸಿಯಾಗದಿರಲಿ ಬದುಕು ಅದಕು ಇದಕು ಎದಕೂ
ಎಂಬ ಕವಿವಾಣಿಯಂತೆ ಪ್ರತಿ ಬಾರಿಯ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ನನ್ನ ದೀಪದ ಎಣ್ಣೆಯನ್ನು ತುಂಬಿಸಿಕೊಳ್ಳುವ, ಪಾಲ್ಗೊಳ್ಳುವ ದೃಢ ನಿಶ್ಚಯವಿದೆ. ಬನ್ನಿ ಹಾಗಿದ್ರೆ, ಮುಂದಿನ ಆವೃತ್ತಿಯ ಸಾಹಿತ್ಯ ಹಬ್ಬದಲ್ಲಿ ಭೇಟಿಯಾಗೋಣ.
ಜೈ ಭಾರತ್
✍️ ಅರ್ಚನಾ ಆರ್ಯ
ಮರೆತೇನೆಂದರೂ ಮರೆಯಲಾಗದ ಸವಿಯುಲಿ)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.