ಭಾರತ ಎಂಬ ಬೃಹತ್ ನಾಗರಿಕತೆಯ ತೊಟ್ಟಿಲಲ್ಲಿ ಧರ್ಮ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಹಲವು ಮಂದಿ. ರಾಷ್ಟ್ರ ಮತ್ತು ಧರ್ಮಮೂಲ ಸಂಸ್ಕೃತಿಗೆ ಅಪಾಯವಿದೆ ಎಂಬುದರ ಅರಿವಾದಾಗ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಅದರ ರಕ್ಷಣೆಗೆ ಅಣಿಯಾದ ಮಹಾತ್ಮರು ಅನೇಕರು.
ಧರ್ಮ, ಆಧ್ಯಾತ್ಮಿಕತೆಯ ಪ್ರಭಾವದೊಂದಿಗೆ ಕ್ಷಾತ್ರ ಗುಣಸಂಪನ್ನತೆಯೂ ನಾಡಿನ ರಕ್ಷಣೆಗೆ ತನ್ನದೇ ಆದ ಕಾಣಿಕೆಯನ್ನೂ ನೀಡಿದೆ. ದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿದ ಮಧ್ವಾಚಾರ್ಯರೂ ಕೂಡಾ ಜ್ಞಾನದ ಅರಹುವಿಕೆಯೊಂದಿಗೆ ಕ್ಷಾತ್ರಕ್ಕೆ ಮೂಲವಾದ ಶರೀರ ಮಾಧ್ಯಮದ ಬಗ್ಗೆ ಹಲವು ಬಾರಿ ಉಲ್ಲೇಖಿಸಿದ್ದು ಮಾತ್ರವಲ್ಲದೆ ಶರೀರ ಬಲದ ಬಗ್ಗೆಯೂ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದಿದ್ದರು. ಸ್ವಾಮೀ ವಿವೇಕಾನಂದರೂ ಕೂಡಾ ಇಂತಹುದೇ ಸಲಹೆಯನ್ನು ನೀಡುತ್ತಾರೆ. ಮೊಘಲಶಾಹಿ ಆಡಳಿತದ ಸಂಕಷ್ಟಮಯ ಕಾಲಘಟ್ಟದಲ್ಲಿ ದೇಶ,ನಾಡು, ಧರ್ಮ, ಸಂಸ್ಕೃತಿ, ಜನರ ರಕ್ಷಣೆಗೆ ಅಣಿಯಾದ ಮೇರು ಮಹಾತ್ಮರಲ್ಲಿ ಸಿಖ್ಖ ಗುರುಗಳು ಅಗ್ರಣಿಯಾಗಿ ಕಾಣುತ್ತಾರೆ. ಪಶ್ಚಿಮದಲ್ಲಿ ಹುಟ್ಟಿ ಬೆಳೆದ ಶಿವಾಜಿ ಮಹಾರಾಜ್ ಮೊಘಲರಿಗೆ ಸಿಂಹಸ್ವಪ್ನವಾಗಿದ್ದರೆ, ನಾನಕಶಾಹಿ ಪಂಥವನ್ನು ಬೆಳಗಿದ ಮೇರು ವ್ಯಕ್ತಿತ್ವಗಳು ತಮ್ಮ ಧೈರ್ಯ ಮತ್ತು ಪರಾಕ್ರಮದಿಂದ ಮೊಘಲರ ಏಕಚಕ್ರಾಧಿಪತ್ಯಕ್ಕೆ ಸೆಡ್ಡು ಹೊಡೆದಿದ್ದರು. ಉತ್ತರ ಭಾರತದ ಉದ್ದಕ್ಕೂ ಶತಮಾನಗಳಿಂದ ನಡೆದ ಮುಸಲ್ಮಾನರ ನಿರಂತರ ಆಕ್ರಮಣ, ದಬ್ಬಾಳಿಕೆ, ಉಪಟಳವನ್ನು ಮೆಟ್ಟಿ ನಿಲ್ಲಲು ಸದೃಢವಾಗಿ ಬೆಳೆದು ನಿಂತ ಪರಂಪರೆಯೇ ಸಿಖ್ಖ ಪರಂಪರೆ. ಆಧ್ಯಾತ್ಮ, ಸಂಸ್ಕೃತಿ, ದೇಶದ ಅನೂಹ್ಯ ಆಚಾರ ವಿಚಾರಗಳೊಂದಿಗೆ ಯುವಸಮೂಹದಲ್ಲಿ ಕ್ಷಾತ್ರದ ಬೆಳಗನ್ನು ಮೂಡಿಸಿ ನೆಲ, ಧರ್ಮ, ಸಂಸ್ಕೃತಿಯ ರಕ್ಷಣೆಗಾಗಿ ಕಟಿಬದ್ಧವಾಗಿ ನಿಂತವರೇ ಸಿಖ್ಖ ಗುರುಗಳು. ಒಟ್ಟು ಹತ್ತು ಮಂದಿ ಸಿಖ್ಖ ಗುರುಗಳು ಆ ಪರಂಪರೆಯನ್ನು ಮುನ್ನೆಡೆಸಿ ಇಂದು ಆ ಸಮೂಹಕ್ಕೆ ಮಾತ್ರವಲ್ಲದೆ ಭಾರತೀಯತೆಗೆ ಮಾರ್ಗದರ್ಶಿಯೆನಿಸಿದ್ದಾರೆ. ಎಪ್ರಿಲ್ 21, ಸಿಖ್ಖರ ಒಂಭತ್ತನೆ ಧರ್ಮಗುರು ತೇಗ ಬಹಾದ್ದೂರರ ಜನ್ಮ ದಿನ. 400 ವರ್ಷಗಳ ಹಿಂದೆ ಜನಿಸಿದ್ದ ತೇಗ ಬಹಾದ್ದೂರರು ಧರ್ಮ, ಆಧ್ಯಾತ್ಮಿಕತೆಯ ರಹದಾರಿಯೊಂದಿಗೆ ಕ್ಷಾತ್ರವನ್ನು ಬಡಿದೆಬ್ಬಿಸಿದ ರೀತಿ ವಿಶೇಷವಾದುದು ಮಾತ್ರವಲ್ಲ ಮಾರ್ಗದರ್ಶಿಯೂ ಹೌದು.
1650 ರ ಅಸುಪಾಸಿನಲ್ಲಿ ನಡೆದ ಕಾಶ್ಮೀರ್ ಫೈಲ್ಸ್ ಹೇಗಿದ್ದಿರಬಹುದು ಎಂಬುದಕ್ಕೆ ಇತಿಹಾಸ ಸಮಂಜಸ ಉತ್ತರ ನೀಡಬಹುದು. ಆ ಕಾಲಘಟ್ಟದಲ್ಲಿ ದೇಶದಲ್ಲಿ ಮೊಘಲಶಾಹಿಗಳ ಆಡಳಿತವಿತ್ತು. ಜೌರಂಗಬೇಜ ಮೊಘಲಶಾಹಿಯ ಚುಕ್ಕಾಣಿ ಹಿಡಿದಿದ್ದ. ಆಡಳಿತ ತನ್ನ ತೆಕ್ಕೆಗೆ ಬಂದ ನಂತರ ಬಹುಸಂಖ್ಯಾತರ ಮೇಲೆ ದಬ್ಬಾಳಿಕೆ ನಿರಂತರವಾಗಿತ್ತು. ಕಾಶ್ಮೀರದ ಸಂಸ್ಕೃತಿ, ಜ್ಞಾನಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದ ಪಂಡಿತರನ್ನು ಇಸ್ಲಾಂಗೆ ಮೊದಲು ಮತಾಂತರಗೊಳಿಸಿ, ಇಡೀ ಹಿಂದೂ ಸಮೂಹವನ್ನೇ ಇಸ್ಲಾಮೀಕರಣಗೊಳಿಸುವ ಹುನ್ನಾರ ಈತನದ್ದು. ಹಿಂದೂಸ್ಥಾನವನ್ನು ದಾರುಲ್ ಇಸ್ಲಾಂಗೆ ಪರಿವರ್ತಿಸುವ ಈತನ ಉದ್ದೇಶ ಸಿಖ್ಖರಿಂದ ಬುಡಮೇಲಾಯಿತು ಎಂಬುದು ಇಂದಿಗೆ ಚರಿತ್ರೆ. ಜೌರಂಗಬೇಜನ ಹಿಂಸೆಯನ್ನು ಸಹಿಸಲಾಗದ ಹಿಂದೂ ಪಂಡಿತ ಸಮೂಹವು ದಕ್ಷ, ಪರಾಕ್ರಮಿ ಮತ್ತು ಮಾನವತಾವಾದಿ ಸಂತ ಗುರು ತೇಗ್ ಬಹಾದ್ದೂರ್ ಅವರನ್ನು ಭೇಟಿ ಮಾಡಿ ತಮ್ಮನ್ನು ರಕ್ಷಿಸುವಂತೆ ವಿನಂತಿಸುತ್ತಾರೆ. ಜನ ಸಮುದಾಯದ ಭಯ ಮತ್ತು ಭೀತಿಯನ್ನು ಅರಿತ ಸಿಖ್ಖ ಗುರು ತೇಗ ಬಹಾದ್ದೂರ್ ಆ ಕ್ಷಣವೇ ಒಂದು ಬಿನ್ನವಳಿಕೆಯನ್ನು ಜೌರಂಗಜೇಬನಿಗೆ ಕಳಿಸುತ್ತಾರೆ. ‘ಮೊಘಲ ಸುಲ್ತಾನನು ಗುರು ತೇಗ ಬಹಾದ್ದೂರನನ್ನು ಇಸ್ಲಾಂ ಮತಕ್ಕೆ ಮತಾಂತರಿಸಲು ಸಾಧ್ಯವಾದಲ್ಲಿ ಮಾತ್ರವೇ ಉಳಿದವರನ್ನು ಮತಾಂತರಿಸಬಹುದು’ ಎಂಬ ವಿಚಾರ ಅದರಲ್ಲಿ ಬಹಳ ಸೂಚ್ಯವಾಗಿರುತ್ತದೆ. ಇದರ ಹಿಂದೆ ಹಲವು ಯುದ್ಧಗಳಲ್ಲಿ ತಮ್ಮ ಪರಾಕ್ರಮವನ್ನು ಮೆರೆದಿದ್ದ ತೇಗ ಬಹಾದ್ದೂರ್ ಈ ಬಾರಿ ಮೊಘಲ ಸುಲ್ತಾನನ ಮನೋಬಲಕ್ಕೆ ದೊಡ್ಡ ಹೊಡೆತ ನೀಡುತ್ತಾರೆ. ಕೇವಲ ಜ್ಞಾನ, ಧ್ಯಾನಕ್ಕಷ್ಟೇ ಮೀಸಲಿರದ ತೇಗ ಬಹಾದ್ದೂರ್ ಕ್ಷಾತ್ರ, ಪರಾಕ್ರಮ ಮತ್ತು ಧೀಮಂತಿಕೆಯ ಸಂಕೇತವೂ ಹೌದು. ಹಿಂದೂ ಮತ್ತು ಸಿಖ್ಖರ ರಕ್ಷಣೆಯ ಮೂಲಕ ಧರ್ಮ ಮತ್ತು ಸಮಾಜದ ರಕ್ಷಕನಾಗಿ ಜನಕೋಟಿಯ ಹೃದಯವನ್ನು ಅದಾಗಲೇ ಗೆದ್ದಿರುತ್ತಾರೆ. ಒಂದು ನಾಡಿನ ಶ್ರೇಯೋಭಿವೃದ್ಧಿಯಲ್ಲಿ ಏನು ಬೇಕಿದೆಯೊ ಅದನ್ನು ದಯಪಾಲಿಸಿ, ಜನರ ಹಿತ ಕಾಪಾಡುವ ಉದಾತ್ತ ಗುರಿ ತೇಗ ಬಹಾದ್ದೂರ್ ಅವರಲ್ಲಿ ಬಹಳ ಹಿಂದಿನಿಂದಲೂ ಇತ್ತು.
ಗುರು ತೇಗ ಬಹಾದ್ದೂರ್ ಜನಿಸಿದ್ದು (ಎಪ್ರಿಲ್ 21, 1921) ಪಂಜಾಬಿನ ಅಮೃತಸರದಲ್ಲಿ. ಸಿಖ್ಖರ ಆರನೇ ಧರ್ಮ ಗುರು ಹರಗೋವಿಂದರ ಕೊನೆಯ ಪುತ್ರರತ್ನ ತೇಗ ಬಹಾದ್ದೂರ್. ಬಾಲ್ಯದಲ್ಲಿ ತ್ಯಾಗ ಮಲ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಬಾಲಕ ಎಲ್ಲ ಯುದ್ಧವಿದ್ಯೆಗಳನ್ನು ಕಲಿತಿದ್ದ, ಕುದುರೆ ಸವಾರಿಯಲ್ಲಿಯೂ ನಿಷ್ಣಾತ. ಮಲ್ಲವಿದ್ಯೆಯೊಂದಿಗೆ ಬಿಲ್ಲುಗಾರಿಕೆಯಲ್ಲೂ ಪಳಗಿದ್ದ ತ್ಯಾಗನಿಗೆ ಭಾರತೀಯ ಪುರಾಣ ಕಥೆಗಳು ಕರಗತ ಮಾತ್ರವಲ್ಲ ವೇದಾಧ್ಯಯನವೂ ಆಗಿತ್ತು. ಉಪನಿಷತ್ತು, ಪುರಾಣಗಳ ಬಗ್ಗೆಯೂ ಶಿಕ್ಷಣ ಪಡೆದಿದ್ದ ಬಾಲಕ ತನ್ನ ಎಳವೆಯಲ್ಲಿ ಹಲವು ಬಾರಿ ಏಕಾಂತಕ್ಕೆ ಮತ್ತು ಧ್ಯಾನಕ್ಕೆ ಜಾರುತ್ತಿದ್ದ. ಸಿಖ್ಖರ ಪವಿತ್ರ ಗ್ರಂಥ ಶ್ರೀ ಗುರು ಗ್ರಂಥ ಸಾಹಿಬ್ ನಲ್ಲೂ ಗುರು ತೇಗರ ಗುರುವಾಣಿಯ ಉಲ್ಲೇಖವಿದೆ. ಒಟ್ಟು 115 ಸ್ತ್ರೋತ್ರಗಳನ್ನು ರಚಿಸಿದ್ದ ತೇಗ ಬಹಾದ್ದೂರ್ ಮೊಘಲರಿಂದ ಭಾರತೀಯತೆಯ ರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ಮಹನೀಯರು.
ಬಾಲಕ ತ್ಯಾಗ ಮಲ್ ತೇಗ ಬಹಾದ್ದೂರ್ (ಖಡ್ಗದಂತೆ ಮೊಚನಾದ- ಪರಾಕ್ರಮಿ) ಎಂಬ ಬಿರುದು ಪಡೆಯಲು ಕಾರಣವೂ ಇದೆ. ಹಲವು ಬಾರಿ ಮೊಘಲರ ವಿರುದ್ಧ ಸೆಣಸಾಡಿ ವಿಜಯ ಸಾಧಿಸಿದ್ದ ಬಾಲಕ, ಮೊಘಲರ ಸೇನೆಯ ವಿರುದ್ಧ ಹೋರಾಡಲು ಯಾವುದೇ ಅಂಜಿಕೆ ತೋರುತ್ತಿರಲಿಲ್ಲ. ಸಣ್ಣ ಸಣ್ಣ ಸೇನಾ ತುಕಡಿಗಳ ವಿರುದ್ಧ ಹೋರಾಡಿ ಅದಾಗಲೇ ಜಯವನ್ನು ಸಾಧಿಸಿದ್ದ. ಕಾಶ್ಮೀರಿ ಪಂಡಿತ ಸಮೂಹವನ್ನು ಮೊಘಲರ ಅತಿಕ್ರಮಣದಿಂದ ರಕ್ಷಿಸಿದ ಕೀರ್ತಿಯೂ ತೇಗ ಬಹಾದ್ದೂರರಿಗೆ ಸಲ್ಲುತ್ತದೆ. ಅನಂದಪುರ ಸಾಹೀಬ್ ಎಂಬ ನಗರದ ನಿರ್ಮಾತೃವೂ ಹೌದು. ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಸಂಚರಿಸಿ ಪಾಟ್ನಾ, ಬಂಗಾಳದ ಜನಸಾಮಾನ್ಯರಲ್ಲಿ ಧಾರ್ಮಿಕ ಶ್ರದ್ಧೆಯೊಂದಿಗೆ ಕ್ಷಾತ್ರ ಗುಣವನ್ನು ಬಡಿದೆಬ್ಬಿಸಿದ ಕೀರ್ತಿಯೂ ಇವರದ್ದು. ಹಲವು ಗುರುದ್ವಾರಗಳ ನಿರ್ಮಾಣ ಸಹಿತ ದೇಗುಲಗಳ ಪುನರ್ ನಿರ್ಮಾಣದಂತಹ ಕಾರ್ಯಗಳಲ್ಲಿ ತೊಡಗಿದ್ದ ಗುರು ತೇಗ ಬಹಾದ್ದೂರರು, ಧಾರ್ಮಿಕ ಸ್ವಾತಂತ್ರ್ಯ ಸಹಿತ ಹಿಂದೂ ಮತ್ತು ಸಿಖ್ಖರು ತಂತಮ್ಮ ಆಚಾರ ಅನುಷ್ಠಾನಗಳಲ್ಲಿ ನಿರ್ಭೀತಿಯಿಲ್ಲದೆ ಹೆಚ್ಚೆಚ್ಚು ತೊಡಗಿಕೊಳ್ಳುವಂತೆ ಪ್ರೇರೇಪಿಸಿದ್ದರು. ಪವಿತ್ರ ತಿಲಕ, ಜನಿವಾರ, ಸಿಖ್ಖರ ಪಗಡಿಯನ್ನು ರಕ್ಷಿಸಿದಾತ ಎಂಬ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಗುರು ತೇಗ ಬಹಾದ್ದೂರ್ ಜೌರಂಗಬೇಜನಿಗೆ ಕಳುಹಿಸಿದ ಸಂದೇಶವು ಆತನನ್ನು ಇನ್ನಷ್ಟು ಕುಪಿತನನ್ನಾಗಿಸುತ್ತದೆ. ಆ ಕೂಡಲೇ ತೇಗ ಬಹಾದ್ದೂರರನ್ನು ಬಂಧಿಸುವ ಫರ್ಮಾನು ವಿಧಿಸುತ್ತಾನೆ. ಕೆಲ ದಿನಗಳ ನಂತರ ಗುರು ಮತ್ತು ಸಹಚರರಾದ ಭಾಯಿ ಮತಿದಾಸ್, ಭಾಯಿ ದಯಾಲ್ ದಾಸ, ಭಾಯಿ ಸತಿದಾಸರ ಬಂಧನವಾಗುತ್ತದೆ. ಮೂವರು ಸಹಚರರಿಗೆ ಹಲವು ರೀತಿಯಲ್ಲಿ ಚಿತ್ರಹಿಂಸೆ ನೀಡಿ ಇಸ್ಲಾಂಗೆ ಮತಾಂತರವಾಗುವಂತೆ ಬಲಾತ್ಕರಿಸಲಾಗುತ್ತದೆ. ಆದರೆ ಇವರ್ಯಾರು ಕೂಡಾ ಯಾವುದೇ ಶಿಕ್ಷೆಗೂ ಬಗ್ಗುವುದಿಲ್ಲ, ಜಗ್ಗುವುದೂ ಇಲ್ಲ. ಈ ಸಂದರ್ಭ ಗುರು ತೇಗ ಬಹಾದ್ದೂರರು ತಮ್ಮ ದೈವಿಕ ಶಕ್ತಿಯನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ಇಸ್ಲಾಂ ಅನ್ನು ಒಪ್ಪಬೇಕು ಎಂಬ ಒತ್ತಡವನ್ನು ಹಾಕಲಾಗುತ್ತದೆ. ಹಲವು ದಿನಗಳ ಕಾಲ ಹಲವು ರೀತಿಯಲ್ಲಿ ಶಿಕ್ಷೆಗೊಳಪಡಿಸಿದರೂ ಗುರು ಸಹಿತ ಶಿಷ್ಯರು ಯಾವುದಕ್ಕೂ ಬಗ್ಗುವುದಿಲ್ಲ. ಇದರಿಂದ ಬೇಸತ್ತ ಜೌರಂಗಜೇಬ ನಾಲ್ವರಿಗೂ ಮರಣದಂಡನೆಯನ್ನು ವಿಧಿಸುತ್ತಾನೆ. ಮತಿದಾಸನ ದೇಹವನ್ನು ಎಲ್ಲರ ಸಮ್ಮುಖದಲ್ಲಿ ಎರಡು ಭಾಗಗಳಾಗಿ ಜೀವಂತ ಸೀಳಲಾಗುತ್ತದೆ. ದಯಾಲ್ ದಾಸನನ್ನು ಕುದಿಯುತ್ತಿದ್ದ ನೀರಿನ ಹಂಡೆಗೆ ಹಾಕಲಾಗುತ್ತದೆ. ಭಾಯಿ ಸತಿದಾಸನನ್ನು ಕಟ್ಟಿ ಹಾಕಿ ಹತ್ತಿ ತುಂಬಿದ ಗೋಣಿಚೀಲಗಳಿಗೆ ಬೆಂಕಿ ನೀಡಿ ಸಾಯಿಸಲಾಗುತ್ತದೆ. ವೀರತ್ವಕ್ಕೆ ಸಾಕ್ಷಿಯಾಗಿ, ಜೌರಂಗಬೇಜನಿಗೆ ಸೆಡ್ಡು ಹೊಡೆದ ಗುರು ತೇಗ ಬಹಾದ್ದೂರರನ್ನು ನ. 24, 1675 ರಲ್ಲಿ ಅಮಾನುಷವಾಗಿ ಶಿರಚ್ಛೇಧ ಮಾಡಲಾಗುತ್ತದೆ. ಕೆಂಪುಕೋಟೆಯ ಎದುರುಭಾಗದಲ್ಲಿರುವ ಚಾಂದನಿ ಚೌಕ ಸ್ಥಳದಲ್ಲಿ ಈ ಕೃತ್ಯ ಎಸಗಲಾಗುತ್ತದೆ. ಘಟನೆಯ ನಂತರ ಸಿಖ್ಖರು ಮತ್ತಷ್ಟೂ ಶಕ್ತಿಯುತ ಮತ್ತು ಬಲಿಷ್ಠರಾಗುತ್ತಾರೆ. ಪ್ರಾಣಾರ್ಪಣೆಗೈದ ಗುರುಗಳ ನೆನಪಲ್ಲಿ ಗುರುದ್ವಾರ ಸಿಸ್ ಗಂಜ್ ಸಾಹಿಬ್ ನಿರ್ಮಾಣವಾಗುತ್ತದೆ. ಗುರುಗಳ ಶಿರದೊಂದಿಗೆ ಸಿಖ್ಖ ಅನುಯಾಯಿಗಳು ಪಂಜಾಬಿಗೆ ಪಯಣಿಸಿ ಅಲ್ಲಿ ಮಗದೊಂದು ದೇಗುಲವನ್ನು ನಿರ್ಮಿಸುತ್ತಾರೆ. ತೇಗ ಬಹದ್ದೂರ್ ನಿರ್ವಾಣದ ನಂತರ ಗುರು ಗೋವಿಂದ ಸಿಂಗರು ಸಿಖ್ಖರ ಗುರುವಾಗಿ ಸ್ವೀಕೃತವಾಗುತ್ತಾರೆ. ಈ ಕಾಲಘಟ್ಟದಲ್ಲಿ ಸ್ವಯಂರಕ್ಷಣೆ, ಪರಾಕ್ರಮಕ್ಕೆ ಹೆಸರುವಾಸಿಯಾದ ಖಾಲ್ಸಾ’ ಮತ್ತು ಆತ್ಮರಕ್ಷಣೆಯ ವಿಧಾನವಾದ ಸಿಖ್ಖರ ಘಾತ್ಕಾ ಯುದ್ಧತಂತ್ರ ಹುಟ್ಟಿಕೊಳ್ಳುತ್ತದೆ.
ಪವಿತ್ರ ಗುರು ತೇಗ ಬಹಾದ್ದೂರ್ ಅವರ ಜೀವನಾದರ್ಶ, ಉದಾತ್ತ ಭಾರತೀಯ ಚಿಂತನೆ, ಸ್ವಾಭಿಮಾನ, ಧರ್ಮ ಸಂಸ್ಕೃತಿ ಬಗ್ಗೆ ತೇಗ ಬಹಾದ್ದೂರ್ ಅವರಿಗಿದ್ದ ಹೆಮ್ಮೆ, ಅಸಾಧಾರಣ ಪ್ರೀತಿ, ಗೌರವ ಮತ್ತು ತ್ಯಾಗವನ್ನು ಸ್ಮರಿಸೋಣ.
‘ಬೋಲೆ ಸೋ ನಿಹಾಲ್ ಸತ್ ಶ್ರೀ ಅಕಾಲ್’
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.