ಬೆಂಗಳೂರು: ನೈರುತ್ಯ ರೈಲ್ವೆ ವಲಯಕ್ಕೆ ಪ್ರಸಕ್ತ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಅತಿ ಹೆಚ್ಚು ಅಂದರೆ 6,900 ಕೋಟಿ ರೂ.ಗಳ ಅನುದಾನವನ್ನು ಘೋಷಿಸಿ ಕರ್ನಾಟಕಕ್ಕೆ ಸಿಂಹಪಾಲು ನೀಡಿರುವುದರಿಂದ ನಮ್ಮ ರಾಜ್ಯದ ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಉಡುಗೊರೆ ನೀಡಿದಂತಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ಹರ್ಷ ವ್ಯಕ್ತಪಡಿಸಿದ್ದಾರೆ .
ಇಷ್ಟು ದೊಡ್ಡ ಪ್ರಮಾಣದ ಅನುದಾನ ದೊರೆತಿರುವುದು ನೈರುತ್ಯ ರೈಲ್ವೆಯ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ .ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 43ರಷ್ಟು ಹೆಚ್ಚಿನ ಅನುದಾನ ಘೋಷಣೆಯಾಗಿದ್ದು, ಈ ಬಗ್ಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ , ಕೇಂದ್ರ ರೈಲ್ವೆ ಸಚಿವರು ಹಾಗೂ ವಿಶೇಷ ಪರಿಶ್ರಮ ವಹಿಸಿರುವ ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರನ್ನು ಸಿ.ಸಿ. ಪಾಟೀಲರು ಅಭಿನಂದಿಸಿದ್ದಾರೆ.
ಈ ಹೆಚ್ಚಿನ ಅನುದಾನದಿಂದಾಗಿ ನೂತನ ರೈಲ್ವೆ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ, ರೈಲ್ವೆ ಮಾರ್ಗಗಳ ಸಾಮರ್ಥ್ಯ ವೃದ್ಧಿಗೆ, ಹೊಸ ರೈಲುಗಳ ಸಂಚಾರಕ್ಕೆ ಮತ್ತು ಮಾರ್ಗಗಳ ವಿದ್ಯುದೀಕರಣಕ್ಕೆ ಅನುಕೂಲವಾಗಲಿದೆ . ಈ ಬಾರಿ ಉತ್ತರ ಕರ್ನಾಟಕ ಭಾಗದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದು ಅವರು ಪ್ರಶಂಸಿಸಿದ್ದಾರೆ.
ಧಾರವಾಡ ಕಿತ್ತೂರು ಬೆಳಗಾವಿ ಹೊಸ ಮಾರ್ಗಕ್ಕೆ ರೂ 20 ಕೋಟಿ, ಗದಗ -ವಾಡಿ ಹೊಸ ಮಾರ್ಗಕ್ಕೆ ರೂ.187 ಕೋಟಿ, ಬಾಗಲಕೋಟೆ- ಕುಡಚಿ, ತುಮಕೂರು-ದಾವಣಗೆರೆ, ಶಿವಮೊಗ್ಗ -ರಾಣೆಬೆನ್ನೂರು ಈ 3 ಹೊಸ ಮಾರ್ಗಗಳಿಗೆ ತಲಾ 50 ಕೋಟಿ ರೂ.ಗಳನ್ನು ಹಂಚಿಕೆ ಮಾಡಿರುವುದು , ಗದಗ್- ಹೂಟಗಿ ಡಬ್ಲಿಂಗ್ ಲೈನ್ ಗಾಗಿ 200 ಕೋಟಿ ರೂ .ಹಾಗೂ ಹುಬ್ಬಳ್ಳಿ- ಚಿಕ್ಕಜಾಜೂರು ಡಬ್ಲಿಂಗ್ ಲೈನ್ ಗಾಗಿ 210 ಕೋಟಿ ರೂಪಾಯಿ ಅನುದಾನ ದೊರೆತಿರುವುದೂ ಸೇರಿದಂತೆ ಅನೇಕ ಯೋಜನೆಗಳಿಗೆ ಹಸಿರುನಿಶಾನೆ ತೋರಿಸುವ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಮೇಲಿನ ತನ್ನ ಮಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಿ.ಸಿ. ಪಾಟೀಲರು ಶ್ಲಾಘಿಸಿದ್ದಾರೆ.
ಇವಲ್ಲದೆ ದೇಶಾದ್ಯಂತ 400 ವಂದೇಭಾರತ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ಇವುಗಳಲ್ಲಿ ಒಂದು ರೈಲನ್ನು ಧಾರವಾಡ ಮತ್ತು ಬೆಂಗಳೂರು ನಡುವೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿಯವರು ಈಗಾಗಲೇ ಮನವಿ ಮಾಡಿಕೊಂಡಿದ್ದು , ಇದಕ್ಕೆ ಕೇಂದ್ರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಇದು ನಮ್ಮ ರಾಜ್ಯಕ್ಕೆ ದೊಡ್ಡ ವರದಾನವಾಗಲಿದೆ ಇಂದು ಸಿ.ಸಿ. ಪಾಟೀಲರು ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.