ಬೆಳ್ತಂಗಡಿ : ರಾಜ್ಯದ ಪ್ರಮುಖ ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಹಾಗೂ ಹಾಸ್ಟೇಲ್ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರಕಾರವನ್ನು ಆಗ್ರಹಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಎಬಿವಿಪಿ ಕರೆ ನೀಡಿದ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕು ಎಬಿವಿಪಿ ಘಟಕದ ಕಾರ್ಯಕರ್ತರು ಮಂಗಳವಾರ ಇಲ್ಲಿನ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಮುಖ ಅಂಗಗಳಲ್ಲಿನ ಕೊರತೆಗಳು ವಿದ್ಯಾರ್ಥಿಗಳನ್ನು ಬಲಿಪಶುವನ್ನಾಗಿ ಮಾಡುತ್ತಿವೆ. ರಾಜ್ಯದಲ್ಲಿನ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಗುಣಮಟ್ಟ, ಪ್ರೋತ್ಸಾಹ, ಸೌಲಭ್ಯಗಳಿಗೆ ಸಂಪೂರ್ಣ ನಂಬಿಕೆ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಇದರ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಿರುವುದು ಖಂಡನೀಯ. ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಜಾರಿಯಲ್ಲಿ ಲೋಪ, ಎಸ್ಸಿ, ಎಸ್ಟಿ ವಿದ್ಯಾರ್ಥಿ ವೇತನ ಬಿಡುಗಡೆಯಲ್ಲಿ ವಿಳಂಬ, ಹಾಸ್ಟೇಲ್ಗಳಿಗೆ, ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ನಡೆಯನ್ನು ಖಂಡಿಸಿ, ಹಲವಾರು ಬೇಡಿಕೆಗಳನ್ನಿಟ್ಟು ಪ್ರತಿಭಟಿಸಿದರು. ಹಿಂದುಳಿದ ವಿದ್ಯಾರ್ಥಿಗಳ ಶುಲ್ಕ ವಿನಾಯತಿ ಸೌಲಭ್ಯವನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಎರಡು ವರ್ಷ ಬಾಕಿ ಇರುವ ಎಸ್ಸಿ,ಎಸ್ಟಿ ವಿದ್ಯಾರ್ಥಿ
ವೇತನವನ್ನು ಬಿಡುಗಡೆಗೊಳಿಸಬೇಕು. ರಾಜ್ಯದ ಎಲ್ಲಾ ಹಾಸ್ಟೆಲ್ಗಳನ್ನು ಸುಸಜ್ಜಿತವಾಗಿ ಪರಿವರ್ತಿಸಬೇಕು. ಅವಶ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಬೇಕು. ವಿದ್ಯಾರ್ಥಿಗಳ ಬೇಡಿಕೆಗಳನುಗುಣವಾಗಿ ವಿದ್ಯಾರ್ಥಿನಿಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಾಲೇಜುಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಖಾಲಿ ಇರುವ ಉಪನ್ಯಾಸಕ ಹುದ್ದೆಗಳನ್ನು ಭರ್ತಿಮಾಡಬೇಕು ಎಂಬ ಬೇಡಿಕೆಗಳನ್ನಿಟ್ಟು ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಬೆಳ್ತಂಗಡಿ ನಗರ ಕಾರ್ಯದರ್ಶಿ ವಿನೋದ್ ರಾಜ್, ವಿದ್ಯಾರ್ಥಿನಿ ಪ್ರಮುಖ್ ಲೋಲಾಕ್ಷಿ, ಕಾರ್ಯಕಾರಿಣಿ ಸದಸ್ಯರಾದ ಸುಷ್ಮಾ, ಪ್ರಜ್ವಲ್ ಶೆಟ್ಟಿ ನಿಡ್ಲೆ, ಅಧ್ಯಯನ ಪ್ರಮುಖ ಪ್ರಜ್ವಲ್ ಶೆಟ್ಟಿ ಗುರುವಾಯನಕರೆ, ಉಜಿರೆ ನಗರ ಕಾರ್ಯದರ್ಶಿ ವಿಜೇತ್ ಕುಮಾರ್ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.