ಈ ದಿನ ನಾನು ನಿಮ್ಮಲ್ಲೊಂದು ಭಿನ್ನಹವನ್ನಿಡಲು ಬಂದಿದ್ದೇನೆ. ಇತಿಹಾಸದಿಂದ ಅರಿಯಲೇ ಬೇಕಾದ ಪಾಠವನ್ನು ನನಗೆ ಸಾಧ್ಯವಾಗುವ ಮಟ್ಟಿನಲ್ಲಿ ನಿಮಗೆ ಅರ್ಥೈಸಲು ಬಂದಿದ್ದೇನೆ. ದಯವಿಟ್ಟು ಓದಿ. ಗಮನವಿಟ್ಟು ಓದಿ.
ಅನೇಕರಿಗೆ ಇಂದಿಗೂ ನಾವು ಕಳೆದುಕೊಂಡ ಸ್ವಾತಂತ್ರ್ಯಕ್ಕೆ ಕಾರಣ ಮೊಘಲರು ಮತ್ತು ಬ್ರಿಟೀಷರೆಂಬ ತಪ್ಪು ಕಲ್ಪನೆ ಅಚ್ಚೊತ್ತಿಬಿಟ್ಟಿದೆ. ಅವರೊಂದಿಗಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆಂದು ಮೂಢ ನಂಬಿಕೆಯಿದೆ. ಆದರೆ ನಿಜವಾಗಿಯೂ ಸ್ವಾತಂತ್ರ್ಯ ಕಳೆದೆಕೊಳ್ಳಲು ಏನು ಕಾರಣ? ಬಂದ ಕೆಲವೇ ಕೆಲವು ಜನರು ಒಂದು ಸಾವಿರ ವರ್ಷಗಳ ಕಾಲ ಆಳಿ ನಮ್ಮನ್ನು ಗುಲಾಮಗಿರಿಗೆ ನೂಕಲು ಏನು ಕಾರಣ. ಆ ಲೆಕ್ಕ ನೋಡಿದರೆ ಬಂದು ಆಳ್ವಿಕೆ ನಡೆಸಿದವರಿಗಿಂತ ಲಕ್ಷಪಟ್ಟು ಹೆಚ್ಚು ಜನಸಂಖ್ಯೆ ಹೊಂದಿದ್ದ ದೇಶ ನಮ್ಮದು.ಅಂತಹಾ ದೇಶ ದಾಸ್ಯಕ್ಕೊಳಪಟ್ಟಿತೆಂದರೆ ಇಲ್ಲೇನೋ ಕಾರಣವಿರಬೇಕಲ್ಲವೇ. ಏನೋ ಕುಂದು ಕೊರತೆಗಳು ನಮ್ಮಲ್ಲಿಯೇ ಇರಬೇಕಲ್ಲವೇ. ಇದನ್ನು ಪ್ರತಿ ಕ್ಷಣವೂ ಯೋಚಿಸಿ ಸರಿಪಡಿಸಬೇಕಾದ ಕಾರ್ಯ ನಮ್ಮದಾಗಬೇಕಲ್ಲವೇ. ಅದೇ ದೃಷ್ಟಿಯಿಂದ ಈ ಲೇಖನ. ಗಣತಂತ್ರದಿನದ ಈ ಶುಭದಿನದಲ್ಲಿ ಪುಟ್ಟದೊಂದು ಅವಲೋಕನದ ಲೇಖನ.
ಹೌದು ನಮ್ಮ ದೇಶವನ್ನು ಬಂದವರಾರೂ ಪೌರುಷದಿಂದ ಆಳಲಿಲ್ಲ ಬದಲಾಗಿ ಕುತಂತ್ರದಿಂದ ಆಳಿದರು. ನಮ್ಮೊಳಗಿದ್ದ ಕುಂದು ಕೊರತೆಗಳನ್ನು ಬಳಸಿಕೊಂಡು ಮೋಸದ ಬಾಣ ಹೂಡಿದರು. ಅದಕ್ಕೇ ನಾವು ಬಲಿಯಾದದ್ದು. ಆ ಸಂದರ್ಭದಲ್ಲಿ ಭಾರತದಲ್ಲಿ ರಾಜರುಗಳ ಆಳ್ವಿಕೆ ಇದ್ದಿತ್ತು. ಸಂಪೂರ್ಣ ಭಾರತಕ್ಕೊಬ್ಬ ರಾಜನಲ್ಲ. ಬದಲಾಗಿ ಪ್ರತಿ ಸಣ್ಣ ಪ್ರಾಂತಗಳೂ ರಾಜ್ಯಗಳಾಗಿ ಆ ರಾಜ್ಯಕ್ಕೆ ಒಬ್ಬ ರಾಜನಿರುತ್ತಿದ್ದ. ಒಬ್ಬ ರಾಜನಡಿಯಲ್ಲಿ ಅನೇಕ ಸಾಮಂತ ರಾಜರೂ ಇರುತ್ತಿದ್ದರು. ಹೀಗೆ ಭಾರತ ನಡೆಯುತ್ತಿತ್ತು. ಆಗಾಗರಾಜ್ಯಗಳ ನಡುವೆ ರಾಜ್ಯ ವಿಸ್ತರಣೆಯ ದೃಷ್ಟಿಯಿಂದ ಯುದ್ಧಗಳು ನಡೆಯುತ್ತಿದ್ದವು.
ಈ ರೀತಿ ಇದ್ದಂತಹ ವ್ಯವಸ್ಥೆಯನ್ನು ಮನಗಂಡ ಮೊಘಲರು ಮತ್ತು ಬ್ರಿಟೀಷರು ಭಾರತವನ್ನಾಳಲು ಕುತಂತ್ರ ನಡೆಸಿದರು. ಭಾರತದೊಳಗೆ ಬಂದವರೇ ಒಬ್ಬರನ್ನೊಬ್ಬರ ಮೇಲೆ ಎತ್ತಿಕಟ್ಟಿದ್ದರು. ರಾಜರುಗಳೋ ರಾಜ್ಯವಿಸ್ತರಣೆಯ ಆಸೆಗೆ ಮರುಳಾಗಿ ಪರದೇಶಿಗಳಿಗೆ ಸಹಾಯ ಮಾಡಿದರು. ಪರದೇಶಿಗಳು ಯಾವುದಾದರೊಂದು ರಾಜ್ಯದ ಮೇಲೆ ಯುದ್ಧಕ್ಕೆ ಹೋಗಲು ಉಪಾಯ ಹೂಡಿದಾಗ, ಮತ್ತೊಂದು ರಾಜ್ಯದ ರಾಜನ ಬಳಿ ಬಂದು ನಿಮಗೆ ನಾವು ಆ ರಾಜ್ಯವನ್ನು ಗೆದ್ದು ಕೊಡುತ್ತೇವೆ ಆದರೆ ನಿಮ್ಮ ಸೈನ್ಯವನ್ನು ಬಳಸುತ್ತೇವೆ ಎಂದು ನಮ್ಮದೇಶದ ಸೈನಿಕರನ್ನೇ ಬಳಸಿ ನಮ್ಮ ದೇಶವನ್ನೇ ದಾಸ್ಯಕ್ಕೆ ತಳ್ಳಿದರು. ಯಾವುದೇ ರಾಜನ್ನು ತನ್ನ ಉಪಯೋಗವಾಗುವಲ್ಲಿಯವರೆಗೆ ಬಳಸಿ ನಂತರ ಆತನನ್ನೇ ಮುಗಿಸಿಬಿಡುತ್ತಿದ್ದರು. ಹೀಗೆ ಸಂಪೂರ್ಣ ರಾಷ್ಟ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರು.
ಒಗ್ಗಟ್ಟಿನಲ್ಲಿ ಬಲವಿದೆ, ಸಂಘೇ ಶಕ್ತಿಃ ಕಲೌ ಯುಗೇ, ಎಂಬಿತ್ಯಾದಿಗಳು ಕೆಲವೇ ಕೆಲವರಿಗೆ ಅರಿವಾಗಿದ್ದವು. ಮತ್ತುಳಿದವರು ಹಣದ ಮೋಹಕ್ಕೋ ಅಧಿಕಾರದ ದಾಹಕ್ಕೋ ಬಲಿಯಾಗಿ ತಮ್ಮವರಮೇಲೆಯೇ ತಿರುಗಿಬಿದ್ದು, ತಮ್ಮವರನ್ನೇ ಕೊಂದರು. ಸ್ವಾಭಿಮಾನ ರಾಷ್ಟ್ರಾಭಿಮಾನ ಎಲ್ಲವನ್ನೂ ಮರೆತು ಪರದೇಶಿಗಳಿಗೆ ಇನ್ನೂ ಸುಲಭವಾಗುವಂತೆ ಮಾಡಿದರು. ನಮ್ಮಲ್ಲಿದ್ದ ಜಾತಿ ಬೇಧಗಳೂ ಇದಕ್ಕೊಂದು ಕಾರಣವೆನ್ನಬಹುದು. ಮೇಲು ಕೀಳು ಅಸ್ಪೃಶ್ಯ ಎಂಬಿತ್ಯಾದಿಗಳು ದೇಶವನ್ನೇ ಬಲಿಕೊಟ್ಟವು. ಭಾಷೆ ಭಾಷೆಗಳ ಮಡುವೆ ಜಟಾಪಟಿಯಿತ್ತು. ಜಾತಿ ಜಾತಿಗಳ ನಡುವೆ ದ್ವೇಶವಿತ್ತು. ಕೆಲವು ಕಡೆಗಳಲ್ಲಿ ಊರೂರ ನಡುವೆ ಯಾವುದೋ ಕಾರಣಕ್ಕೆ ಹೊತ್ತಿದ್ದ ದ್ವೇಶದ ಕಿಚ್ಚಿತ್ತು. ಇವೆಲ್ಲವೂ ದೇಶದ ಅಡಿಪಾಯವನ್ನು ಅತ್ಯಂತ ಸಡಿಲಗೊಳಿಸಿದವು. ಜಟಿಲವಾದ ಸಮಸ್ಯೆಗಳಾಗಿ ಕಾಡತೊಡಗಿದವು.
ನಮ್ಮವರು ನಮ್ಮ ಮೇಲೇಯೇ ತಿರುಗಿಬಿದ್ದ ಉದಾಹರಣೆಗಳು ಸಾಕಷ್ಟಿವೆ, ಮೊಘಲರ ಪರವಾಗಿ ಶಿವಾಜಿಯಮೇಲೆ ದಂಡೆತ್ತಿ ಬಂದಿದ್ದ ನಮ್ಮದೇ ದೇಶದ ರಾಜ. ಚಂದ್ರಶೇಖರ್ ಆಝಾದ್ ಅವರಿದ್ದ ಸ್ಥಳ ತಿಳಿಸಿದವನೂ ನಮ್ಮವನೇ. ಚಾಪೇಕರ್ ಸಹೋದರರ ಹೋರಾಟಕ್ಕೆ ನೀರೆರಚಿದ್ದೂ ನಮ್ಮವರೇ. ಜಲಿಯನ್ ವಾಲಾಭಾಗ್ ನಲ್ಲಿ ನಮ್ಮವರಮೇಲೆ ಗುಂಡು ಹಾರಿಸಿದ್ದೂ ನಮ್ಮವರೇ. ಮಹಾರಾಣಾಪ್ರಾತಾಪ ಪೃಥ್ವಿರಾಜ ಚೌಹಾಣ ಎಲ್ಲರ ಸಾವಿಗೂ ಕಾರಣ ನಮ್ಮವರೇ. ಆಂದಿನ ದಿನಒಗ್ಗಟ್ಟೆಂಬುದೊಂದು ಇದ್ದಿದ್ದರೆ ಇಂದು ಭಾರತ ಪರಮವೈಭವವನ್ನು ಅನುಭವಿಸುತ್ತಲಿರುತ್ತಿತ್ತು. ಆದರೆ ಹಾಗಾಗಲಿಲ್ಲ ಇದರ ಮೂಲ ತಿಳಿಯಲೇ ಇಲ್ಲ.
ಆದರೆ ಅನೇಕ ಚತುರರು, ವೀರರು ಇದನ್ನು ಮನಗಂಡು ರಾಷ್ಟ್ರ ಸಂಘಟನೆಯ ಮಹತ್ಕಾರ್ಯಕ್ಕೆ ಧುಮುಕಿದರು. ಇಲ್ಲಿ ಯಾರ ಹೆಸರನ್ನೂ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಕಾರಣ ಇಷ್ಟೇ ಹೆಸರುಗಳು ತಿಳಿದಿಲ್ಲವೆಂದಲ್ಲ ಒಂದು ಹೆಸರನ್ನು ಹೇಳಿ ಮತ್ತೊಂದನ್ನ ಮಾನವ ಸಹಜ ವಿಸ್ಮರಣಾಗುಣದಿಂದ ಬಿಟ್ಟರೆಂಬ ಭಯವಷ್ಟೆ. ಆ ಸಂಘಟಿತ ಹೋರಾಟದ ಫಲವೇ ಸ್ವಾತಂತ್ರ್ಯ. ಯಾರೋ ಒಬ್ಬರ ಹೋರಾಟವಲ್ಲ ಇದು ಸಂಘಟಿತ ಹೋರಾಟ. ಬರಿಯ ಅಹಿಂಸೆಯಿಂದಲ್ಲ ನೆತ್ತರ ತರ್ಪಣದಿಂದ ಬಂದ ಸ್ವಾತಂತ್ರ್ಯವಿದು. ಅದೆಷ್ಟೋ ಕರಿನೀರ ಶಿಕ್ಷಗಳನ್ನು ಈ ದೇಶ ವೀರರು ಕಂಡಿದ್ದರು. ಅದೆಲ್ಲದರ ಪರಿಣಾಮ ಈ ಸ್ವಾತಂತ್ರ್ಯ.
ಆದರೆ ಇಂದೇನಾಗಿದೆ? ಮತ್ತೆ ನಮ್ಮೊಳಗೆ ಬಡಿದಾಟಗಳು ಆರಂಭವಾಗಿದೆ. ರಾಜ್ಯ ರಾಜ್ಯಗಳನಡುವೆ ಬಡಿದಾಟ. ನೆಲಕ್ಕಾಗಿ , ಜಲಕ್ಕಾಗಿ, ಭಾಷೆಗಾಗಿ, ಆಸೆಗಾಗಿ. ನಮ್ಮ ನಮ್ಮಲೇ ಬಡಿದಾಟ ಮುಗಿಲು ಮುಟ್ಟಿದೆ. ಈಗ ಯೋಚಿಸುವ. ಯಾರಾದರೂ ಪರದೇಶಿ ನಮ್ಮ ದೇಶಕ್ಕೆ ಬಂದು ಇದಕ್ಕೆ ಕುಮ್ಮಕ್ಕು ನೀಡಿ ನಮ್ಮ ರಾಜ್ಯಗಳ ನಡುವೆ ಎತ್ತಿಕಟ್ಟಲು ಎಷ್ಟು ಸಮಯ ಬೇಕಾಗಬಹುದು? ನಿಮ್ಮ ಜಲಕ್ಕಾಗಿ ನೀವು ಹೋರಾಡಿ ಬಡಿದಾಡಿ ಎಂದು ಶಸ್ತ್ರವನ್ನು ನಮ್ಮ ಕೈಗಿಟ್ಟರೆ ನಾವೇ ಬಡಿದಾಡಿ ಸಾಯಲು ಎಷ್ಟು ಸಮಯ ಬೇಕಾಗಬಹುದು? ಹೋಗಿ ನಮ್ಮ ಭಾಷೆ ಮಾತನಾಡದವರನ್ನು ಕೊಂದು ಬಿಡಿ ಎಂದು ಕಿವಿಯೂದಿದರೆ ನಮ್ಮ ದುರಾಭಿಮಾನ ನಮ್ಮೊಳಗಿನ ದ್ವೇಷವನ್ನು ಬಡಿದೆಬ್ಬಿಸಿದರೆ ನಗರ ನಗರಗಳೇ ಮಸಣವಾಗಲು ಎಷ್ಟು ಸಮಯ ಬೇಕಾಗಬಹುದು? ನಮಗಿದರ ಅರಿವಿದೆಯೇ? ನಕ್ಸಲರು ನಮ್ಮದೇ ಸೈನಿಕರನ್ನು ಕೊಂದಾಗ ಬರಿಯ ನಕ್ಸಲರಲ್ಲ ಹೊರಗಿನ ದೇಶದ ಅನೇಕರ ಜೊತೆಕುಳಿತು ನಮ್ಮ ದೇಶದೊಳಿಹ ಕಮ್ಮಿನಿಷ್ಠರೂ ನಗುತ್ತಾರೆ, ಆನಂದಿಸುತ್ತಾರೆ. ನಮ್ಮಲ್ಲಿ ರಾಷ್ಟ್ರಾಭಿಮಾನದ ಕೊರತೆ ಇನ್ನೂ ಕಾಡುತ್ತಿದೆ.
ನೋಡಿಸ್ವಾಮಿ ಈ ರಾಷ್ಟ್ರವಿದ್ದರಷ್ಟೇ ನಮ್ಮ ನಾಡು ನುಡಿ ಎಲ್ಲ. ಇದೇ ಇಲ್ಲವಾದರೆ? ಮತ್ತೆ ನಾವು ಗುಲಾಮರಾದರೆ? ಅಲ್ಲ ನಿಮ್ಮನ್ನು ಎತ್ತಿಕಟ್ಟುವವರೇ ಅಲ್ಲಿಯೂ ಮತ್ತೊಬ್ಬರನ್ನು ಎತ್ತಿಕಟ್ಟದಿರುವರೆ? ಅವರಿಗೆ ಬೇಕಿರುವುದು ಅಶಾಂತಿ. ಅವರಿಗೆ ಬೇಕಿರುವುದು ಮತ್ತೆ ದೇಶವನ್ನು ವಶಪಡಿಸಿಕೊಳ್ಳುವುದು. ಅವರಿಗೆ ಬೇಕಿರುವುದು ಗುಲಾಮರು. ಅವರ ಮಾತಿಗೆ ಮರುಳಾಗಿ ನಮ್ಮವರನ್ನೇ ಕೊಲ್ಲುತ್ತಾ, ನಮ್ಮ ದೇಶದ ವೀರರನ್ನೇ ಹೀಗಳೆಯುತ್ತಾ ನಡೆದರೆ ನಮ್ಮ ಚಿತೆಗೆ ನಾವೇ ಕಟ್ಟಿಗೆ ಜೋಡಿಸಿ ಬೆಂಕಿ ಇಟ್ಟಂತೆ. ಮೊದಲು ರಾಷ್ಟ್ರವನ್ನು ಪ್ರೀತಿಸುವ. ನಾಡು ಮೊದಲೋ ರಾಷ್ಟ್ರ ಮೊದಲೋ ಎಂಬ ಹುಚ್ಚು ಪ್ರಶ್ನೆಯನ್ನು ಬದಿಗಿಟ್ಟು. ರಾಷ್ಟ್ರಮೊದಲೆಂದರಷ್ಟೇ ರಾಷ್ಟ್ರದೊಳಗಿಹ ನಾಡಿಗೂ ಮರ್ಯಾದೆ ಎಂದು ಅರಿಯುವ. ಮಸಣವನ್ನು ಸೃಷ್ಟಿಸಲು ಮುಂದಾಗದೇ, ಭಾರತಾಂಬೆಗೆ ಸುಂದರ ಮಂಟಪವನ್ನು ಎಲ್ಲರೂ ಒಂದಾಗಿ ನಿರ್ಮಿಸುವ. ಮತ್ತೆ ಹಿಂದಿನ ತಪ್ಪಗಳನ್ನು ಮರುಕಳಿಸುವುದಿಲ್ಲವೆಂದು ಶಪಥಿಸುವ. “ವಂದೇ ಮಾತರಂ” “ಭಾರತ್ ಮಾತಾಕಿ ಜೈ” ಎಂದು ಗಗನಕೆ ಮುಟ್ಟುವಂತೆ, ಸಪ್ತ ಸಾಗರಗಳನ್ನೂ ದಾಟುವಂತೆ, ರಾಷ್ಟ್ರ ಭಕ್ತಿಯ ಸುನಾಮಿಯನ್ನೇ ಎಬ್ಬಿಸುವಂತೆ ಒಕ್ಕೊರಳಿನಲ್ಲಿ ಚೀರುವ.
✍️ ಚಿನ್ಮಯ ಕಶ್ಯಪ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.