ಹಿಂದೂ ಸನಾತನ ಧರ್ಮ ಜಗತ್ತಿನ ಅತ್ಯಂತ ಪುರಾತನವಾದ ಧರ್ಮ, ಹಿಂದೂ ಧರ್ಮಕ್ಕೆ ಹುಟ್ಟಿನ ದಿನಾಂಕ ಅಥವಾ ದಿನ ಇಲ್ಲ! ಭೂಮಿ ಸೃಷ್ಟಿಯಾದಗಿನಿಂದಲೂ ಕೂಡಾ ಸನಾತನ ಧರ್ಮ ಚಾಲ್ತಿಯಲ್ಲಿದೆ.
ಹಿಂದೂ ಧರ್ಮದ ಈಗಿನ ದಿನಗಳಲ್ಲಿ ಸಾಕಷ್ಟು ಆಕ್ರಮಣಗಳು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ, ಭಾರತದಲ್ಲೂ ಸಹ ಸನಾತನ ಧರ್ಮದ ಮೇಲೆ ಆಕ್ರಮಣಗಳು, ಟೀಕೆಗಳು ಆಗುತ್ತಿರುವುದು ನಿಜಕ್ಕೂ ಶೋಚನೀಯ ಹಾಗೂ ತಲೆ ತಗ್ಗಿಸುವಂತದ್ದೇ.! ಇಂತಹ ಕಾಲದಲ್ಲಿ ಭಾರತದಲ್ಲಿ ಸಂಸ್ಕೃತಿ , ಧರ್ಮದ ರಕ್ಷಣೆ ಮಾಡ ಹೊರಟರೆ ಅದಕ್ಕೆ ಅಡ್ಡ ಬರುವವರೇ ಹೆಚ್ಚು. ಇನ್ನು ರಾಜಕಾರಣಿಗಳು ಹೀಗೆ ಮಾಡಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೆಕ್ಯುಲರ್ ಹಣೆ ಪಟ್ಟಿ ಕಟ್ಟಿ ತುಚ್ಛವಾಗಿ ನೋಡುತ್ತಾರೆ.
ಇಷ್ಟೆಲ್ಲಾ ತೊಂದರೆ ಇದ್ದರೂ ಕೂಡಾ ಪ್ರಧಾನಿ ನರೇಂದ್ರ ಮೋದಿಜಿ ಧರ್ಮ, ಸಂಸ್ಕೃತಿ, ದೇವಾಲಯಗಳ ರಕ್ಷಣೆಯಲ್ಲಿ ಮೋದಿಜಿ ಹಿಂದೆ ಬೀಳಲಿಲ್ಲ.
ಸ್ವತಃ ಸನಾತನ ಧರ್ಮದ ಕಟ್ಟರ್ ಪರಿಪಾಲಕ ಪ್ರಧಾನಿ ಮೋದಿಜಿ
ತಮ್ಮ 17 ನೆಯ ವರ್ಷದಲ್ಲಿಯೇ ಪ್ರಧಾನಿ ಮೋದಿಜಿ ಹಿಮಾಲಯದಲ್ಲಿ 2 ವರ್ಷಗಳನ್ನು ಕಳೆದಿದ್ದರು. ಹಿಮಾಲಯದಲ್ಲಿ ಅವರು ತಿರುಗಾಡದ ಜಾಗವಿಲ್ಲ. ಭೇಟಿ ಕೊಡದ ಆಶ್ರಮಗಳಿಲ್ಲ. ಅವರು ಹೃಷಿಕೇಶ, ಹರಿದ್ವಾರ, ಕೇದಾರನಾಥ, ಬದರಿನಾಥ ಮುಂತಾದ ಎಲ್ಲ ಪವಿತ್ರ ಧಾಮಗಳಿಗೂ ಭೇಟಿ ಕೊಟ್ಟರು. ಇದೇ ಸಂದರ್ಭದಲ್ಲಿ ಮೋದಿ, ಹಲವಾರು ಯೋಗಿಗಳನ್ನು, ಸಂತರನ್ನು ಭೇಟಿಯಾದರು. ಅವರೆಲ್ಲರೂ ಈ ಯುವಕನಲ್ಲಿ ಮೊಳೆಯುತ್ತಿದ್ದ ಪ್ರಶ್ನೆಗಳನ್ನು ಕಂಡು ಮೂಕವಿಸ್ಮಿತರಾದರು. ಮೋದಿ ಕೆಲವು ಯೋಗಿಗಳ ಶಿಷ್ಯತ್ವವನ್ನೂ ಸ್ವೀಕರಿಸಿದರು. ಆ ಯೋಗಿಗಳು ಮೋದಿಗೆ ಯೋಗ, ಪ್ರಾಣಾಯಾಮ, ಧ್ಯಾನದ ನಾನಾ ಕ್ರಮಗಳು ಇತ್ಯಾದಿಗಳನ್ನು ಹೇಳಿಕೊಟ್ಟರು. ಕೆಲವು ಯೋಗಿಗಳು ಅವರಿಗೆ ಪವಾಡಗಳನ್ನೂ ಮಾಡಿ ತೋರಿಸಿದರು. ತರುಣ ಮೋದಿ, ಸನ್ಯಾಸಿ ನರೇಂದ್ರನಾಗಿ ಹಿಮಾಲಯದ ಗುಹೆಗಳಲ್ಲಿ ಧ್ಯಾನನಿರತರಾದರು. ಎಲ್ಲವನ್ನೂ ಮೀರಿದ, ಎಲ್ಲವನ್ನೂ ಒಳಗೊಳ್ಳಬಲ್ಲ ಅಚಿಂತ್ಯ, ಅಗಮ್ಯ ಬ್ರಹ್ಮಾಂಡ ಶಕ್ತಿಯ ಅನ್ವೇಷಣೆಯಲ್ಲಿ ಅವರು ನಿರತರಾದರು.
ಇನ್ನು ಚೈತ್ರ ಮಾಸದ ನವರಾತ್ರಿಯಲ್ಲಿ 9 ದಿನಗಳ ಉಪವಾಸ ಮಾಡುತ್ತಾರೆ, ಅವರು ನವರಾತ್ರಿಯಲ್ಲಿ 35 ವರ್ಷಗಳಿಂದ ಉಪವಾಸ ಮಾಡುತ್ತಿದ್ದಾರೆ.
ಆಶ್ವಯುಜ ನವರಾತ್ರಿಯಲ್ಲಿ 9 ದಿನಗಳ ಕಾಲ ಉಪವಾಸ ಮಾಡುತ್ತಾರೆ ಅಲ್ಲದೇ ಚಾತುರ್ಮಾಸದಲ್ಲಿ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಾರೆ ಪ್ರಧಾನಿ ನರೇಂದ್ರ ಮೋದಿಜಿ.
ಪ್ರಧಾನಿಯಾದ ನಂತರ ಅಭಿವೃದ್ಧಿ ಮಾಡಿದ ದೇಗುಲಗಳು
1. ಅಯೋಧ್ಯಾ ರಾಮ ಮಂದಿರ
ಹಿಂದೂಗಳು ನೂರಾರು ವರ್ಷಗಳಿಂದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನೋಡಬೇಕೆಂದು ಕನಸು ಕಾಣುತ್ತಾ ಇದ್ದರು. ಕೇಂದ್ರದಲ್ಲಿ 2014 ರಲ್ಲಿ ಮೋದಿಜಿ ಅಧಿಕಾರಕ್ಕೆ ಬಂದ ದಿನದಿಂದ ಕೋರ್ಟ್ ನಲ್ಲಿ ರಾಮ ಮಂದಿರದ ಚರ್ಚೆ ತಾರಕ್ಕಕೇರಿತು ಕೊನೆಗೆ ನವೆಂಬರ್ 9 2019 ರಂದು ಸುಪ್ರೀಂಕೋರ್ಟ್ ರಾಮ ಮಂದಿರ ನಿರ್ಮಾಣ ಮಾಡಲು ಹೇಳಿದ ಬೆನ್ನಲ್ಲೇ ಆಗಸ್ಟ್ 05 2020 ರಲ್ಲಿ ಭೂಮಿ ಪೂಜೆಯನ್ನು ನೆರವೇರಿಸಿದರು ಇದೀಗ ರಾಮ ಮಂದಿರದ ನಿರ್ಮಾಣ ಭರದಿಂದ ಸಾಗಿದೆ.
2. ಸೋಮನಾಥ ದೇಗುಲ
ಸೋಮನಾಥ ದೇಗುಲದ ಟ್ರಸ್ಟ್ಗೆ ಪ್ರಧಾನಿ ಮೋದಿಯವರೇ ಅಧ್ಯಕ್ಷರಾಗಿದ್ದು, ದೇವಾಲಯದ ಸರ್ವ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆಗಸ್ಟ್ 2021 ರಲ್ಲಿ ಸುಮಾರು 47 ಕೋಟಿ ರೂ ಗಳ ಯೋಜನೆಗೆ ಚಾಲನೆ ನೀಡಿದ್ದಾರೆ.
3. ಕಾಶಿ ವಿಶ್ವನಾಥ ಕಾರಿಡಾರ್
ಕಾಶಿಯು ಹಿಂದುಗಳ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಕಾಶಿ ಎಂದರೇ ಅದೊಂದು ಮುಕ್ತಿ ನೀಡುವ ಪವಿತ್ರ ಸ್ಥಳ ಎಂಬ ಪರಿಕಲ್ಪನೆ ಪುರಾತನ ಕಾಲದಿಂದಲೂ ಇದೆ. ಮೋದಿಜಿ ಪ್ರಧಾನಮಂತ್ರಿಯಾದ ಮೇಲೆ ಕಾಶಿಯ ಬಗ್ಗೆ, ಅಲ್ಲಿನ ಮೂಲಸೌಕರ್ಯ, ಸ್ವಚ್ಛತೆ ಬಗ್ಗೆ ವಿಶೇಷ ಗಮನಹರಿಸಿದರು. 2019ರ ಮಾರ್ಚ್ 8ರಂದು, ಅವರ ಕನಸಿನ, ಮಹತ್ವಾಕಾಂಕ್ಷಿ ಯೋಜನೆ ಕಾಶಿ-ವಿಶ್ವನಾಥ ಕಾರಿಡಾರ್ಗೆ ಚಾಲನೆ ನೀಡಿದರು. ಇದು ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದ ಜೀರ್ಣೋದ್ಧಾರ ಮತ್ತು ಪುನರುತ್ಥಾನಕ್ಕೆ ಸಂಬಂಧಪಟ್ಟ ವಿಶೇಷ ಯೋಜನೆಯಾಗಿದೆ. ಕಾಶಿಯ ದೇವಸ್ಥಾನದ ಆವರಣವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಕಾಶಿಯ ಕಳೆದುಹೋದ ಭವ್ಯತೆಯನ್ನು ಮರುಸ್ಥಾಪಿಸುವ ಮಹದುದ್ದೇಶವನ್ನು ಇದು ಹೊಂದಿದೆ. ಡಿ.13ರಂದು ಉದ್ಘಾಟನೆಗೆ ಸಿದ್ಧವಾಗಿರುವ ಕಾಶಿ ವಿಶ್ವನಾಥ ಕಾರಿಡಾರ್ ಕಾಮಗಾರಿಯ ಪ್ರತಿಹಂತದಲ್ಲೂ ಕೂಡ ನರೇಂದ್ರ ಮೋದಿಯವರು ಹೆಚ್ಚಿನ ಆಸ್ಥೆವಹಿಸಿ, ಮೇಲ್ವಿಚಾರಣೆ ಮಾಡಿದ್ದಾರೆ.
4. ಕೇದಾರನಾಥ ದೇಗುಲ ಅಭಿವೃದ್ಧಿ
2013ರ ಭಾರಿ ಪ್ರಮಾಣದ ಪ್ರವಾಹದಿಂದ ಶಿಥಿಲಗೊಂಡಿದ್ದ ಕೇದಾರನಾಥ ಧಾಮದ ಮರು ಅಭಿವೃದ್ಧಿ ಕಾರ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೆತ್ತಿಕೊಂಡಿತು. ಈಗಂತೂ ದೇಗುಲದ ಸಂಕೀರ್ಣವನ್ನು ಪೂರ್ತಿಯಾಗಿ ಪುನರುತ್ಥಾನ ಮಾಡಲಾಗಿದೆ. ಹಾಗೇ, ಸಂಪೂರ್ಣವಾಗಿ ಬದಲಿಸಲಾಗಿದೆ. ಇಡೀ ದೇವಾಲಯದ ವೈಭವನ್ನು ಪುನಃಸ್ಥಾಪಿಸಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಇದರ ಜೊತೆಗೆ ಮೊನ್ನೆ ಮೊನ್ನೆ ತಾನೆ ಭವ್ಯವಾದ ಶ್ರೀ ಶಂಕರರ ಮೂರ್ತಿಯನ್ನೂ ಕೂಡಾ ಪ್ರಧಾನಿ ಮೋದಿಜಿ ಸ್ಥಾಪನೆ ಮಾಡಿದ್ದಾರೆ.
5. ಬದರಿನಾಥ ಅಭಿವೃದ್ಧಿ
ಕೇದಾರನಾಥ ದೇಗುಲದಂತೆ ಬದರಿನಾಥ ದೇಗುಲಕ್ಕೂ ಸಂಬಂಧಿಸಿದ ಅನೇಕ ಉಯೋಜನೆಗಳು ಈಗಾಗಲೇ ಚಾಲ್ತಿಯಲ್ಲಿದೆ, ಈಗಾಗಲೇ ಉತ್ತಮವಾದ ರಸ್ತೆ ಹಾಗೂ ರೈಲು ಸಂಪರ್ಕ ದ ಯೋಜನೆಗಳು ಹಗಲು ರಾತ್ರಿ ನಡೆಯುತ್ತಿದ್ದು 2022 ರ ಅಂತ್ಯದೊಳಗೆ ಕಾರ್ಯ ಮುಗಿಯಲಿದೆ.
6. ಕಾಶ್ಮೀರದಲ್ಲಿ ದೇಗುಲ ಜೀರ್ಣೋದ್ಧಾರ
ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸಲಾಗಿದೆ. ಅದರೊಂದಿಗೇ, ಕೇಂದ್ರ ಸರ್ಕಾರ ಕಾಶ್ಮೀರ ಮತ್ತು ಶ್ರೀನಗರದಲ್ಲಿ ಇದ್ದ ಹಲವು ಧಾರ್ಮಿಕ ಪ್ರದೇಶಗಳ ಅಭಿವೃದ್ಧಿ, ಜೀರ್ಣೋದ್ಧಾರ ಕೆಲಸವನ್ನೂ ಪ್ರಾರಂಭಿಸಿದೆ. ಒಂದು ಅಂದಾಜಿನ ಪ್ರಕಾರ ಕಾಶ್ಮೀರದಲ್ಲಿ ದೇಗುಲಗಳು, ಪವಿತ್ರ ಸ್ಥಳಗಳು, ಗುಹೆಗಳು, ಪೂಜನೀಯ ಮರಗಳು ಸೇರಿ ಒಟ್ಟು 1842 ಹಿಂದು ಧಾರ್ಮಿಕ ಸ್ಥಳಗಳು ಇವೆ. ಇದರಲ್ಲಿ 952 ದೇವಸ್ಥಾನಗಳು. 212 ಸುವ್ಯವಸ್ಥೆಯಲ್ಲಿದ್ದರೆ, ಉಳಿದ 740 ಶಿಥಿಲ ಸ್ಥಿತಿಯಲ್ಲಿವೆ. ಇದೀಗ ಕೇಂದ್ರ ಸರ್ಕಾರ ಇಲ್ಲಿನ ದೇಗುಲಗಳ ಜೀರ್ಣೋದ್ಧಾರಕ್ಕೆ ಮುಂದಾಗಿದೆ.
ನರೇಂದ್ರ ಮೋದಿಜಿ ಪ್ರಧಾನಿಯಾದಗಿನಿಂದ ಹಿಂದೂಗಳಿಗೆ, ಭಾರತೀಯರಿಗೆ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಧರ್ಮ ಉಳಿಯುತ್ತದೆ ಎಂಬ ನಂಬಿಕೆ ಹಾಗೂ ದೃಢ ವಿಶ್ವಾಸ ಬಂದಿದೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಸಹ ಮೋದಿಜಿ ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳನ್ನು ಸಾರುವ ಕೆಲಸ ಮಾಡುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯೇ ಸರಿ. ಪ್ರಧಾನಿಯೊಬ್ಬರು ದೇವಸ್ಥಾನಗಳ ಅಭಿವೃದ್ಧಿಗೆ, ಹಿಂದೂ ಧರ್ಮವನ್ನು ಸಾರುವ ಕೆಲಸಕ್ಕೆ ನಿಂತದ್ದು ಇತಿಹಾಸದಲ್ಲೇ ಇಲ್ಲ ಎಂದೆನಿಸುತ್ತದೆ. ಇಂತಹ ಸಂತ – ನ ಭೂತೋ ನ ಭವಿಷ್ಯತಿ.!
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.