
ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ಮುಂಚೂಣಿ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ಅನುಮತಿ ನೀಡುವಂತೆ ಸಿಎಂ ಮನವಿ ಮಾಡಿಕೊಂಡಿದ್ದಾರೆ, ಈ ಸಂಬಂಧ ಇಬ್ಬರ ನಡುವೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ ಸಿಎಂ ಇಂದು ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಮತ್ತು ವಿಶೇಷವಾಗಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಕೃಷ್ಣಮಾರ್ಗ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಿಎಂ ಭೇಟಿಯಾಗಿ, ಕಾನೂನು ವಿಚಾರಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಮೂರು ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಿದ್ದು, ಸಂಸತ್ ನಲ್ಲಿ ಮಂಡಿಸಿ ಕಾಯ್ದೆಯನ್ನು ವಾಪಸ್ ಪಡೆದುಕೊಂಡಿದೆ. ಈಗ ರಾಜ್ಯವೂ ಕೂಡ ಮೂರು ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದ್ದು, ಅವುಗಳನ್ನೂ ರಾಜ್ಯದಲ್ಲಿ ವಾಪಸ್ ಪಡೆಯುವ ಕುರಿತು ಕಾನೂನು ವ್ಯಾಪ್ತಿಯ ಚೌಕಟ್ಟಿನಲ್ಲಿ ಇರಿಸಬಹುದಾದ ಹೆಜ್ಜೆಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ಇಂದು ರಾತ್ರಿ ದೆಹಲಿಯ ಕರ್ನಾಟಕ ಭವನದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಸ್ತವ್ಯ ಹೂಡಲಿದ್ದು, ನಾಳೆ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಅವಕಾಶ ಸಿಕ್ಕರೆ ಹೈಕಮಾಂಡ್ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ನವದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಸಚಿವರಾದ ಶ್ರೀ ಮನಸುಖ ಮಾಂಡವೀಯ ಅವರನ್ನು ಭೇಟಿ ಮಾತುಕತೆ ನಡೆಸಿ ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳು ಹಾಗೂ #Covid ಕುರಿತು ಮಾತುಕತೆ ನಡೆಸಲಾಯಿತು. pic.twitter.com/0udnnlb2Lw
— Basavaraj S Bommai (@BSBommai) December 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


