ಭಾರತೀಯ ರಕ್ಷಣಾ ಪಡೆಗೆ ಅದರಲ್ಲೂ ನೌಕಾಪಡೆಗೆ ಶಕ್ತಿ ತುಂಬಿರುವ ಸಮರನೌಕೆಗಳು ಹಲವು. ಸಮರನೌಕೆಗಳು ಜಲಾಂತರ್ಗಾಮಿಯಾಗಿ ವೈರಿಗಳ ಚಲನವಲನಗಳ ಮೇಲೆ ಕಣ್ಣಿಟ್ಟರೆ, ಮತ್ತೂ ಕೆಲ ಜಲಾಂತರ್ಗಾಮಿ ನೌಕೆಗಳು ಅರೆಕ್ಷಣದಲ್ಲಿ ದಾಳಿ ಮಾಡಿ ಶತ್ರುಗಳ ನಾವೆಯನ್ನು ಪುಡಿಗಟ್ಟಬಲ್ಲ ಸಾಮರ್ಥ್ಯ ಹೊಂದಿವೆ. ದೀರ್ಘದೂರ ಹಾರಬಲ್ಲ ಆಧುನಿಕ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಭಾರತೀಯ ಸಮರನೌಕೆಗಳು, ಯುದ್ಧ ವಿಮಾನಗಳ ರನ್ ವೇ ಯಾಗಿಯೂ ಪರಿವರ್ತಿತವಾಗಬಲ್ಲವು. ದೇಶದ ಸಾಗರ ರಕ್ಷಣೆ ಸಹಿತ ತಟರಕ್ಷಣೆಯಲ್ಲಿ ಪ್ರಧಾನ ಭೂಮಿಕೆಯನ್ನು ವಹಿಸುತ್ತಿವೆ ಐ.ಎನ್.ಎಸ್ ಶ್ರೇಣಿಯ ವಿವಿಧ ಸಮರನೌಕೆಗಳು. ನ. 25 ರಂದು ನೌಕಾಪಡೆಗೆ ಸೇರ್ಪಡೆಗೊಂಡ ಐ.ಎನ್.ಎಸ್ ವೇಲಾ ಜಲಾಂತರ್ಗಾಮಿಯೂ ಯುದ್ಧ ಜಲಾಂತರ್ಗಾಮಿ ನೌಕೆಯಾಗಿದೆ. ಎಂತಹ ನಿಖರ ಗುರಿಯನ್ನು ಕ್ಷಣಾರ್ಧದಲ್ಲಿ ಬೇಧಿಸಲಿದ್ದು, ಟಾರ್ಪೆಡೊ ಶಸ್ತ್ರವನ್ನು ಹೊತ್ತಿದೆ.
2021 ರ ನವೆಂಬರ್ ತಿಂಗಳು ಭಾರತೀಯ ನೌಕಾಪಡೆಗೆ ಬಹಳ ಸಂಭ್ರಮದ ಕ್ಷಣಗಳ ಸವಿಯನ್ನು ನೀಡಿದೆ. ಒಂದೇ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಎರಡು ಸಮರನೌಕೆಗಳು ಸೇರ್ಪಡೆಯಾಗಿವೆ. ಎರಡೂ ಯುದ್ಧನೌಕೆಗಳು ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ದೇಶದ ಸೈನಿಕ ಶಕ್ತಿಯ ಮನೋಬಲವನ್ನು ಇಮ್ಮಡಿಯಾಗಿಸಿವೆ. ಇಂದು ಭಾರತದ ನೌಕಾಪಡೆಯಲ್ಲಿ ಶತ್ರು ವಿನಾಶಕ ಐ.ಎನ್.ಎಸ್ ಅರಿಹಂತ ದಿಂದ ಹಿಡಿದು ಐ.ಎನ್.ಎಸ್ ವೇಲಾ ತನಕ ಒಟ್ಟು 17 ಜಲಾಂತರ್ಗಾಮಿಗಳು ಸೇವೆಯಲ್ಲಿವೆ. ಅರಿಹಂತ ಎಂಬ ನಾಮವೇ ಭಾರತೀಯ ಸಾಂಸ್ಕೃತಿಕತೆಯ ಪಾರಮಾರ್ಥಿಕ ಭಾವವನ್ನು ಬಡಿದೆಬ್ಬಿಸುವ ಶಬ್ದವಾಗಿದೆ. ಅರಿಹಂತ ಎಂದರೆ ಶತ್ರು ವಿನಾಶಕ ಎಂಬ ಅರ್ಥ. ಜಿನ’ ಗೆದ್ದವ ಎಂಬ ಸಮಾನ ಅರ್ಥ ನೀಡುವ ಅರಿಹಂತದ ಶಬ್ದಮೂಲ ಭಾರತೀಯ ಶ್ರಮಣ ಪರಂಪರೆಯ ಧಾರೆಗೆ ಸೇರಿದ್ದಾಗಿದೆ. ಆಧುನಿಕ ರಕ್ಷಣಾ ತಂತ್ರಜ್ಞಾನದ ಹೆಸರಿಸುವಿಕೆಯ ಜೊತೆ ಭಾರತೀಯತೆಯ ಭಾವವೆಂಬ ಸಾಮೀಪ್ಯ ಮತ್ತು ಪರ್ಯಾಪ್ತತೆಯನ್ನು ಅರ್ಥೈಸುವುದು ಬಹಳ ಮಹತ್ವಪೂರ್ಣ ವಿಚಾರವಾಗಿದ್ದು, ತಿಳಿದುಕೊಳ್ಳುವುದು ಅತಿ ಅವಶ್ಯಕವೂ ಹೌದು. ಐ.ಎನ್.ಎಸ್ ವೇಲಾ’ ಎಂಬ ಸಮರ ನೌಕೆಯೂ ದೇಶ ಸೇವೆಗೆ ಅಣಿಯಾಗಿದ್ದು, ನೌಕಾಪಡೆಯ ಹೆಮ್ಮೆ ಎನಿಸಿದೆ. ಮೇಕ್ ಇನ್ ಇಂಡಿಯಾ ಮೂಲಕ ಅಭಿವೃದ್ಧಪಡಿಸಲಾದ ಆಧುನಿಕ ವ್ಯವಸ್ಥೆಗಳು ಈ ಸಮರನೌಕೆಯಲ್ಲಿವೆ. ಇಂದು ಭಾರತೀಯ ಸೈನಿಕ ಶಕ್ತಿಗೆ ಇಮ್ಮಡಿ ಬಲವನ್ನು, ಉತ್ಸಾಹದೊಂದಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಿರುವುದು ಆಧುನಿಕತೆ ಮತ್ತು ನೂತನ ತಂತ್ರಜ್ಞಾನ. ಇದರೊಂದಿಗೆ ಪ್ರಾಪ್ತಿಯಾಗುವಂತಾದ ಶಸ್ತ್ರಾಸ್ತ್ರಗಳು ಮತ್ತು ಭೌತಿಕತೆ. ಬಹುಶಿಸ್ತಿನ ಮತ್ತು ವಿಶ್ವದಲ್ಲೇ ಗಣನೀಯ ಆದರಗಳಿಗೆ ಭಾಜನವಾದ ಭಾರತೀಯ ರಕ್ಷಣಾ ಪಡೆ, ಆಧುನಿಕತೆಯ ಮಜಲಲ್ಲಿ ಹೊಸ ತಂತ್ರಜ್ಞಾನವನ್ನು ತನ್ನದಾಗಿಸಿಕೊಳ್ಳುತ್ತಿದೆ ಎಂಬುದು ಸಂತಸ ಮತ್ತು ಹೆಮ್ಮೆಯ ವಿಚಾರ.
ದೇಶದ ಕ್ಷಾತ್ರ ಪರಂಪರೆಯ ಧೀ- ಶಕ್ತಿ, ಪ್ರೇರಣೆಯನ್ನು ಪಡೆದು ಮುನ್ನಡೆಯುತ್ತಿರುವ ಭಾರತೀಯ ರಕ್ಷಣಾ ಪಡೆ ಇಂದು ಸ್ವ ಸಾಮರ್ಥ್ಯದಿಂದ ವೈರಿಗಳ ಯಾವುದೇ ಅತಿಕ್ರಮಣ ಆಕ್ರಮಣವನ್ನು ಹಿಮ್ಮೆಟ್ಟಿಸುವ ತಾಕತ್ತನ್ನು ಹೊಂದಿದೆ.
ನೌಕಾಪಡೆಯ ಶಕ್ತಿ ಮತ್ತು ಸಾಮರ್ಥ್ಯ ಹಿಂದಿಗಿಂತಲೂ ಇಂದು ವರ್ಧಿಸಿದೆ, ವಾಯುಪಡೆ, ಭೂಸೇನೆಯ ಸಾಮರ್ಥ್ಯವೂ ಗಣನೀಯವಾಗಿ ಹೆಚ್ಚಾಗಿದೆ. ಡಿ.ಆರ್.ಡಿ.ಒ ಸಂಸ್ಥೆಯಲ್ಲಿ ಮೂಡಿಬಂದ ತಂತ್ರಜ್ಞಾನ, ಆಧುನಿಕ ಶಸ್ತ್ರಗಳ ತಯಾರಿ ಇದಕ್ಕೆ ಪುಷ್ಠಿ ನೀಡುತ್ತದೆ. ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡ ರಾಫೆಲ್ ಯುದ್ಧವಿಮಾನಗಳು ದೇಶದ ಆಡಳಿತ ವ್ಯವಸ್ಥೆ ಮತ್ತು ಕೇಂದ್ರ ಸರಕಾರದ ಧೀಮಂತಿಕೆಗೆ ಸಾಕ್ಷಿಯಾಗಿವೆ. ದೇಶದ ವಿವಿಧ ಸೈನಿಕ ರೆಜಿಮೆಂಟ್ ಗಳಲ್ಲೂ ಸೈನಿಕ ಶಕ್ತಿಯ ತಂತ್ರಜ್ಞಾನ ಮತ್ತು ನಾವೀನ್ಯತೆಯ ಪ್ರತಿಫಲನವಾಗುತ್ತಿದೆ. ಹೀಗೆ ನೂತನ ತಂತ್ರಜ್ಞಾನ ಮತ್ತು ಶಸ್ತಾಸ್ತ್ರಗಳು ಸೈನಿಕರ ಆತ್ಮಸ್ಥೈರ್ಯವನ್ನು ಹೆಚ್ಚಿಸಿವೆ ಎಂದರೆ ತಪ್ಪಾಗಲಾರದು. ಅಣ್ವಸ್ತ್ರ ದೇಶ ಎಂಬ ಹೆಗ್ಗಳಿಕೆಯ ಜೊತೆಯಲ್ಲಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಕೊರತೆಯೂ ಇಂದಿಗೆ ನೀಗಿದೆ. ದೇಶದ ಗಡಿ ರಕ್ಷಣೆ, ಹಿಮಾಚ್ಛಾದಿತ ಪರ್ವತ ಶ್ರೇಣಿಗಳಲ್ಲಿ ಸೈನಿಕ ಪಹರೆ, ಅಡವಿ, ಗಿರಿ, ಕಣಿವೆಗಳಲ್ಲಿನ ಸೂಕ್ಷ್ಮ ಚಲನವಲನಗಳ ಮೇಲಿನ ನಿಗಾ, ಸಾಮುದ್ರಿಕ ಮಾರ್ಗಗಳ ಮೇಲಿನ ಕಣ್ಗಾವಲು, ಆಂತರಿಕ ಆಪತ್ತಿನ ಸಂದರ್ಭದಲ್ಲಿನ ಎಚ್ಚರ ಮತ್ತು ನಿಗಾ ವಹಿಸಲು ಸೈನಿಕರಿಗೆ ನೀಡಲ್ಪಟ್ಟ ಆಧುನಿಕ ತಂತ್ರಜ್ಞಾನ ಬಹು ಉಪಯೋಗಿಯು ಆಗಿದೆ. ದೇಶ ರಕ್ಷಣೆಯೆಂಬ ದಣಿವರಿಯದ ಕಾಯಕದಲ್ಲಿ ನೂತನ ತಂತ್ರಜ್ಞಾನ ವರದಾನವೂ ಹೌದು. ಕಳೆದ ಒಂದು ದಶಕದಲ್ಲಿ ದೇಶದ ರಕ್ಷಣಾ ವ್ಯವಸ್ಥೆ ಎಂಬ ಸಾಂಸ್ಥಿಕತೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ ಮಾತ್ರವಲ್ಲ ಆಗುತ್ತಲಿವೆ. ಎಲ್ಲಾ ಬದಲಾವಣೆಗಳು ಹೊಸತನದೊಂದಿಗೆ ಆಧುನಿಕ ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡು ಮುನ್ನಡೆಯಲು ಸಹಕಾರಿಯಾಗಿದೆ.
ಇಂದು ದೇಶದಲ್ಲಿ ಹಲವು ಶ್ರೇಣಿಯ ಜಲಾಂತರ್ಗಾಮಿ ನೌಕೆಗಳಿವೆ. ಅರಿಹಂತ್ ಶ್ರೇಣಿಯ ಸಮರನೌಕೆಗಳು ಅಣ್ವಸ್ತ್ರ ಶಕ್ತಿ ಮೂಲಕ ಚಲಿಸುತ್ತವೆ. ಇತ್ತೀಚಿನ ಐ.ಎನ್.ಎಸ್ ವಿಶಾಖಪಟ್ಟಣಂ ಮತ್ತು ಐ.ಎನ್.ಎಸ್ ವೇಲಾ ನೌಕೆಗಳು ಡೀಸೆಲ್ ಮತ್ತು ಎಲೆಕ್ಟ್ರಿಕ್ ಶಕ್ತಿಯ ಮೂಲಕ ಚಲಿಸುವಂತಹುವು. ಐ.ಎನ್.ಎಸ್ ವಿಶಾಖಪಟ್ಟಣಂ ನೌಕೆಯು 7400 ಟನ್ ತೂಕ ಹೊಂದಿದೆ. 160 ಮೀ. ಉದ್ದವಿರುವ ನೌಕೆಯು 17 ಮೀ ಅಗಲವಿದೆ. ಒಟ್ಟು 315 ಮಂದಿ ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ನೌಕೆಗಿದ್ದು, ನಿರ್ದೇಶಿತ ಕರ್ತವ್ಯ ನಿಭಾಯಿಸಬಹುದಾಗಿದೆ. ಹಿಂದೂ ಮಹಾಸಾಗರದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ಈ ಸಮರ ನೌಕೆ ಚೀನಾದ ಯಾವುದೇ ಅತಿಕ್ರಮಣವನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ, ಚಾಕಚಕ್ಯತೆ ಹೊಂದಿದೆ. ಬ್ರಹ್ಮೋಸ್ ಕ್ಷಿಪಣಿಗಳನ್ನು ಹೊತ್ತೊಯ್ಯುವ, ಉಡಾಯಿಸುವ ಸಾಮರ್ಥ್ಯ ಹೊಂದಿರುವ ಐ.ಎನ್.ಎಸ್ ವಿಶಾಖಪಟ್ಟಣಂನಲ್ಲಿ ವಿರೋಧಿ ವಿಮಾನ, ಕ್ಷಿಪಣಿಗಳ ಇರುವಿಕೆ ಗುರುತಿಸುವ ತಂತ್ರಜ್ಞಾನವೂ ಇದೆ. ಸೋನಾರ್ ಪ್ರತಿಫಲನವನ್ನು ಗುರುತಿಸುವ ಹೆಲಿಕಾಪ್ಟರ್ಗಳು ಈ ಸಮರನೌಕೆಯ ವಿಶೇಷತೆಗಳಲ್ಲೊಂದು. ಗಾಲ್ವಾನ್ ನಲ್ಲಿ ಚೀನಾದ ಅತಿಕ್ರಮಣದ ಸಹಿತ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾದ ಏಕಸ್ವಾಮ್ಯ ಇಲ್ಲವಾಗಿಸಲು ಈ ಸಮರನೌಕೆ ಪ್ರಧಾನ ಭೂಮಿಕೆ ವಹಿಸಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ ಹತ್ತು ವರ್ಷಗಳೊಳಗೆ ಒಟ್ಟು ೧೦ ಸಮರನೌಕೆಗಳು ನೌಕಾಪಡೆಗೆ ಸೇರಲಿದ್ದು, ದೇಶದ ಸಮುದ್ರ ಮತ್ತು ತಟ ರಕ್ಷಣೆಗೆ ಅಗತ್ಯವಾಗಿರುವ ನಿಗದಿತ ಜಲಾಂತರ್ಗಾಮಿಗಳ ಅವಶ್ಯಕತೆ ಪೂರೈಕೆಯಾಗಲಿದೆ.
ದಿನಗಳ ಹಿಂದೆ ನೌಕಾಪಡೆಗೆ ಸೇರ್ಪಡೆಯಾದ ಐ.ಎನ್.ಎಸ್ ವೇಲಾ ಕಲ್ವಾರಿ ಶ್ರೇಣಿಯ ಸಮರನೌಕೆಯಾಗಿದೆ. ಇದು 63 ಮೀ. ಉದ್ದವಿದ್ದು. ಟೊರ್ಪೆಡೊ ಅಸ್ತ್ರವನ್ನು ಹೊತ್ತಿದೆ. ನಿಖರ ಮತ್ತು ಕರಾರುವಾಕ್ ಗುರಿಯನ್ನು ಬೇಧಿಸುವ ಸಾಮರ್ಥ್ಯ ಹೊಂದಿರುವ ವೇಲಾ ವೇಗ ಮತ್ತು ನಿಖರತೆಗೆ ಸಾಕ್ಷಿ. ಭಾರತದ ಸಮುದ್ರದಲ್ಲಿ ಕಾಣಿಸಿಗುವ ಸೂಕ್ಷ್ಮತೆ ಮತ್ತು ವೇಗದ ದಾಳಿಗೆ ಹೆಸರಾದ ಪಿರಾನಾ ವರ್ಗದ ಮೀನಿನ ಹೆಸರು ವೇಲಾ ಎಂಬುದಾಗಿದ್ದು, ಇದರ ಹೆಸರನ್ನೇ ಈ ನೌಕೆಗೂ ಇರಿಸಲಾಗಿದೆ. ವೇಲಾ ಲಾಂಛನವನ್ನು ಸಮರನೌಕೆ ಹೊಂದಿದೆ. ಸಿಂಧೂಘೋಷ್ ಶ್ರೇಣಿಯ ಸಮರನೌಕೆಗಳು ಸೇರಿದಂತೆ ಅಣ್ವಸ್ತ್ರ ಚಾಲಿತ ಅರಿಹಂತ್ ಶ್ರೇಣಿಯ ಸಮರ ನೌಕೆ ಮುಂದಿನ ದಿನದಲ್ಲಿ ನೌಕಾಪಡೆಯನ್ನು ಸೇರಲಿವೆ. ನಿರ್ಮಾಣ ಹಂತದಲ್ಲಿರುವ ಅರಿಘಾತ್ ಭಾರತದ ಹೆಮ್ಮೆಯ ಸಂಕೇತವಾಗಲಿವೆ. ಈಗಾಗಲೇ ಹಳೆ ವಿನ್ಯಾಸದ ಹಲವು ಸಮರ ನೌಕೆಗಳು ಭಾರತದಲ್ಲಿ ಹೊಸ ನಾವೀನ್ಯವನ್ನು ಕಂಡಿವೆ. ಪ್ರಸ್ತುತ ದೇಶದಲ್ಲಿ ಮೇಕ್ ಇಂಡಿಯಾ ಮತ್ತು ಆತ್ಮನಿರ್ಭರ ಯೋಜನೆ ಮೂಲಕ ಸ್ವದೇಶಿ ಸಮರನೌಕೆಗಳ ನಿರ್ಮಾಣವು ಭಾರತದ ಗೌರವವನ್ನು ಹೆಚ್ಚಿಸಿದೆ. ಮಯನ್ಮಾರ್ ದೇಶಕ್ಕೂ ಸಿಂಧೂವೀರ್ ಎಂಬ ಸಮರನೌಕೆಯನ್ನು ಭಾರತ ಇತ್ತೀಚೆಗೆ ಕೊಡುಗೆಯಾಗಿ ನೀಡಿದ್ದು ಹಿಂದೂ ಮಹಾಸಾಗರದಲ್ಲಿ ಸಮರನೌಕೆಗಳ ಪ್ರಾಶಸ್ತ್ಯಕ್ಕೆ ಮತ್ತು ಪ್ರಾಮುಖ್ಯತೆಯನ್ನು ತಿಳಿ ಹೇಳುತ್ತದೆ. ಹೊಸ ಕಾಲಘಟ್ಟದಲ್ಲಿ ತಂತ್ರಜ್ಞಾನಾಧಾರಿತ (ಎಲೆಕ್ಟ್ರಾನಿಕ್ ವಾರ್ ಫೇರ್) ಯುದ್ಧ ತಂತ್ರಗಳಲ್ಲೂ ದೇಶ ಸನ್ನದ್ಧವಾಗಿದೆ ಮಾತ್ರವಲ್ಲ ಎಂತಹ ಸನ್ನಿವೇಶವನ್ನು ಹಿಮ್ಮೆಟ್ಟಿಸಬಲ್ಲ ತಾಂತ್ರಿಕತೆಯನ್ನು ತನ್ನದಾಗಿಸಿದೆ. ಮಂದಿನ ದಿನಗಳಲ್ಲಿ ಸ್ವದೇಶಿ ತಂತ್ರಜ್ಞಾನ ಮತ್ತು ನಾವೀನ್ಯತೆಯಿಂದ ಜಗತ್ತು ಭಾರತವನ್ನು ಗುರುತಿಸುವಂತಾಗಲಿ ಎಂದು ಹಾರೈಸೋಣ. ಜೈ ಹಿಂದ್
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.