ಅಭೂತಪೂರ್ವವಾದ ಮಾನವ ಸಂಪನ್ಮೂಲ, ಪ್ರಾಕೃತಿಕ ಸಂಪನ್ಮೂಲ, ಜ್ಞಾನ ಭಂಡಾರ, ಸಾಂಸ್ಕೃತಿಕ ಗಣಿ, ನಾಗರಿಕತೆಗಳ ಸರಣಿ, ವಿಸ್ತಾರದ ಐತಿಹಾಸಿಕಗಾಥೆಗಳನ್ನು ಹೊಂದಿರುವ ನಮ್ಮ ರಾಷ್ಟ್ರವು ಇಷ್ಟೆಲ್ಲಾ ಸಾಮರ್ಥ್ಯತೆಗಳಿಂದ ಸಶಕ್ತವಾಗಿದ್ದರೂ ತಾನು ಪಡೆದುಕೊಳ್ಳಬೇಕಾದಷ್ಟು ಮಹೋನ್ನತ ಸ್ಥಾನವನ್ನು ಇನ್ನೂ ಪಡೆದಿಲ್ಲವೇಕೆ? ಎಂದು ಯಾವಾಗಲಾದರೂ ಯೋಚಿಸಿದ್ದೀರಾ? ವಿಶ್ವದೆಲ್ಲೆಡೆ ಪ್ರತಿಷ್ಠಿತ ಸಂಸ್ಥೆಗಳ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿಕೊಂಡು ಬರುತ್ತಿರುವ ವಿದ್ಯಾವಂತ, ಬುದ್ಧಿವಂತ ಭಾರತೀಯರು ಭಾರತದಲ್ಲಿ ಈ ಉತ್ತಮ ಸ್ಥಾನವನ್ನು ಗಳಿಸಲಿಲ್ಲವೇಕೆ ಅಥವಾ ವಿದೇಶಗಳನ್ನೇ ಅರಸುತ್ತಾ ತೆರಳಿದರೇಕೆ? ಎಂಬುದನ್ನಾದರೂ ಯೋಚಿಸಿದ್ದೀರಾ? ನಾವು ಭಾರತೀಯರಾದರೂ ನಮ್ಮ ಭಾರತದ ಇತಿಹಾಸವನ್ನು ಯಾವುದೋ ಅನ್ಯರಾಷ್ಟ್ರದ ಇತಿಹಾಸವೆಂಬಂತೆ, ಅನ್ಯರಾಷ್ಟ್ರ ಪ್ರೇಮಿ ಇತಿಹಾಸಕಾರರ ಪುಸ್ತಕಗಳ ಮೂಲಕ ಓದಬೇಕಾದ ವಿವಶತೆಯನ್ನು ಸೃಷ್ಟಿಸಲಾಗಿದೆಯೇಕೆ? ಭಾರತವು ಭಾರತವಾಗಿಯೇ ಉಳಿಯಬೇಕೆಂದು ಅದರ ಅಸ್ಮಿತೆಗಾಗಿ ಬಲಿದಾನದ ನೆತ್ತರನ್ನು ಚೆಲ್ಲಿ ರಾಜಕೀಯ ಸ್ವಾತಂತ್ರ್ಯವನ್ನು ಪಡೆದುಕೊಂಡ ಮೇಲೂ ನಾವು ನಮ್ಮ ಸಂಸ್ಕೃತಿಯ ಮೇಲೆ ಅಭಿಮಾನ ತಾಳದಂತೆ ಅಧರ್ಮದ ಶಕ್ತಿಗಳು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವುದೇಕೆ?
ಈ ಮೇಲಿನ ಎಲ್ಲಾ ರಕ್ತ ಕುದಿಸುವ ಪ್ರಶ್ನೆಗಳಿಗೆ ಉತ್ತರ ಒಂದೇ ಅದೇ ‘ಹಳ್ಳ ಹಿಡಿದಿದ್ದ ದೇಶದ ರಾಜಕೀಯ ವ್ಯವಸ್ಥೆ’. 1947ರಲ್ಲಿ ಬ್ರಿಟಿಷ್ ದೊರೆಗಳು ತೆರಳಿದ ನಂತರ ಆಡಳಿತ ನಡೆಸಲು ಆರಂಭಿಸಿದ ನಮ್ಮ ದೊರೆಗಳೂ ಸಹ ಅವರ ಮಾರ್ಗವನ್ನೇ ಅನುಸರಿಸಿದರು. ಸಾವಿರ ವರ್ಷಗಳ ಗುಲಾಮಗಿರಿಯ ಪರಿಣಾಮ! ಅಷ್ಟು ಸುಲಭವಾಗಿ ನಮ್ಮ ಅಸ್ಮಿತೆಯನ್ನು ಕಂಡು ಕೊಳ್ಳಲಾಗುವುದಿಲ್ಲ ಎಂದು ಸ್ವಾಮಿ ವಿವೇಕಾನಂದರು ಮೊದಲೇ ಎಚ್ಚರಿಸಿದ್ದರು.
ಪ್ರಾಮಾಣಿಕವಾಗಿ ನಮ್ಮ ರಾಷ್ಟ್ರದ ಇತಿಹಾಸವನ್ನು ಅಧ್ಯಯನ ಮಾಡಿ ಅರ್ಥೈಸಿಕೊಂಡಿರುವವರು ಈ ಸತ್ಯವನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆ. ಒಂದು ರಾಷ್ಟ್ರವನ್ನು ಅತ್ಯುನ್ನತ ಸ್ಥಾನಕ್ಕೇರಿಸುವ ಹಾಗೂ ಅಧೋಗತಿಗೆ ತಂದಿಳಿಸುವ ಶಕ್ತಿಯನ್ನು ಹೊಂದಿರುವ ಪ್ರಮುಖ ಬ್ರಹ್ಮಾಸ್ತ್ರ ‘ಆ ರಾಷ್ಟ್ರದ ರಾಜಕೀಯ ವ್ಯವಸ್ಥೆ’ ಎಂಬುದನ್ನು ನಾವು ಇತ್ತೀಚಿನ ನಮ್ಮ ಕಾಲದ ಇಬ್ಬರು ಪ್ರಧಾನಿಗಳ ಆಡಳಿತದಲ್ಲಿ ಸಾಕ್ಷಿಸಮೇತ ಉದಾಹರಣೆಗಳ ಮೂಲಕ ಅರ್ಥೈಸಿಕೊಂಡಿದ್ದೇವೆ. ಒಂದು 2004ರಿಂದ ಶುರುವಾಗಿ 2014ರವರೆಗಿನ ಕಾಲದಲ್ಲಿ ನಾವು ಕಂಡ Aಯಿಂದ Zವರೆಗಿನ ಭ್ರಷ್ಟಾಚಾರ ಹಗರಣಗಳ ಬೃಹತ್ ಬಹುಮಾನ ನೀಡಿದ, ರಾಷ್ಟ್ರದ ಮುಖ್ಯ ನಗರಗಳ ಮೇಲಾದ ಭಯೋತ್ಪಾದನಾ ಪ್ರಕರಣಗಳ ಭಯಾನಕ ಅಚ್ಚರಿ ನೀಡಿದ ಅತ್ಯಂತ ದುರ್ಬಲ ಸರ್ಕಾರ( ಸೋನಿಯಾ ಗಾಂಧಿಯವರ ರಿಮೋಟ್ ಕಂಟ್ರೋಲ್ ಸರ್ಕಾರ- ಪ್ರಧಾನಿ ಮನಮೋಹನ್ ಸಿಂಗರ ಆಡಳಿತ). ಮತ್ತೊಂದು 2014ರಿಂದ ಆರಂಭವಾಗಿ ಇಂದಿಗೂ ಯಶಸ್ವಿಯಾಗಿ ಮುಂದುವರೆಯುತ್ತಿರುವ ಅಸಂಭವ ಪ್ರತೀತವಾಗಿದ್ದ ರಾಷ್ಟ್ರಕಲ್ಯಾಣಕಾರಿ ಕಾನೂನು-ಕಾಯ್ದೆಗಳನ್ನು ಜಾರಿಗೆ ತರುತ್ತಿರುವ, ಭಾರತವೇ ಮೊದಲು ಎಂಬ ಧ್ಯೇಯದಡಿ ಆಡಳಿತ ನಡೆಸುತ್ತಾ ಪ್ರಪಂಚದಾದ್ಯಂತ ಈ ನೆಲದ ಗೌರವವನ್ನು ಹೆಚ್ಚಿಸುತ್ತಿರುವ ಅತ್ಯಂತ ಶಕ್ತಿಶಾಲಿ ಸರ್ಕಾರ( ದೇಶದ ಪ್ರಜೆಗಳ ಆಶೀರ್ವಾದದೊಂದಿಗೆ ಸಂಕಷ್ಟಗಳ ಸರಮಾಲೆಯನ್ನು ಛೇದಿಸುತ್ತಿರುವ ಸರ್ಕಾರ- ದೇಶದ ಮಗ ನರೇಂದ್ರಮೋದಿಯವರ ಆಡಳಿತ).
ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿರುವ ಪ್ರಶ್ನೆಗಳ ಸಂಕ್ಷಿಪ್ತ ಭಾವಾರ್ಥವೇನೆಂದರೆ ಭಾರತೀಯರನ್ನು ಉದ್ದೇಶಪೂರ್ವಕವಾಗಿ ಅವಕಾಶವಂಚಿತರನ್ನಾಗಿ ಏಕೆ ಮಾಡಲಾಯಿತು? ಎಂದು. ಇದರ ಜೊತೆಗೆ ಮೋದಿಯವರು ಪ್ರಧಾನಿಯಾದ ಬಳಿಕ ಈ ಅವಕಾಶಗಳನ್ನೆಲ್ಲಾ ಮತ್ತೆ ಹೇಗೆ ಪುನಃ ನೀಡಲಾಗುತ್ತಿದೆ ಎಂದು. ರಾಜಕೀಯದ ಶಕ್ತಿ ಎಷ್ಟು ಘನವಾದದ್ದು, ಎಷ್ಟು ವಿಶಾಲವಾದದ್ದು ಎಂಬುದನ್ನು ಇಷ್ಟೊಂದು ಪರಿಣಾಮಕಾರಿಯಾಗಿ ಅರ್ಥೈಸಿದ್ದೇ ಮೋದಿಯವರು ಎನ್ನಬಹುದು. ಆದರೆ ಇಂದು ಎಷ್ಟು ಜನ ರಾಜಕಾರಣಿಗಳು ಮೋದಿಯವರ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ? ನಮ್ಮದು ಪ್ರಜಾಪ್ರಭುತ್ವ ಸರ್ಕಾರ, ಪ್ರಜೆಗಳಿಂದ ಆರಿಸಲ್ಪಟ್ಟ ಪ್ರಜಾಪ್ರತಿನಿಧಿಗಳೇ ಇಲ್ಲಿ ದೊರೆಗಳು. ಸರ್ಕಾರದ ಅಧಿಕಾರಿಗಳಾಗಿರಲಿ, ಎಷ್ಟೇ ದೊಡ್ಡ ವೃತ್ತಿಯಲ್ಲಿರುವ ಉದ್ಯೋಗಿಗಳಾಗಲಿ, ಪ್ರಸಿದ್ಧ ಸೆಲೆಬ್ರಿಟಿಗಳಾಗಿರಲಿ ಅವರೆಲ್ಲರ ಮೇಲೂ ಶಾಸನಬದ್ಧವಾಗಿ ಆಡಳಿತ ನಡೆಸುವವರು ರಾಜಕಾರಣಿಗಳೇ! ಆದರೆ ರಾಷ್ಟ್ರದ ಈ ಅತ್ಯುನ್ನತ ಸ್ಥಾನಕ್ಕೇರಲು ಬಹಳಷ್ಟು ಪ್ರತಿಭಾವಂತ, ವಿದ್ಯಾವಂತ, ಪ್ರಜ್ಞಾವಂತರು ಹಿಂದೇಟು ಹಾಕುತ್ತಾರೆ. ಯಾವ ಸಜ್ಜನರೂ, ಸಂಸ್ಕಾರವಂತರೂ ಆ ಕ್ಷೇತ್ರದೆಡೆಗೆ ಪ್ರವೇಶಿಸಲು ಸಾಧ್ಯವಾಗದಷ್ಟು ಅಲ್ಲಿ ವಿಷಮಯ ಸ್ಥಿತಿ ನಿರ್ಮಾಣವಾಗಿರುವುದಂತೂ ಅಕ್ಷರಶಃ ಸತ್ಯ! ನಾವು ಬಹುತೇಕರು ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಇದರ ಸಂಬಂಧಿತ ವೈರಲ್ ಆಗಿದ್ದ ಹಾಸ್ಯ ಸಂದೇಶವನ್ನು ಓದಿದ್ದೇವೆ. ಮೊದಲನೆ ಸಾಲಿನ ಬೆಂಚ್ಗಳಲ್ಲಿ ಕುಳಿತವರು ಉತ್ತಮ ಆಫೀಸರ್ ಗಳಾಗುತ್ತಾರೆ, ಮಧ್ಯದ ಸಾಲಿನ ಬೆಂಚ್ಗಳಲ್ಲಿ ಕುಳಿತವರು ಅವರಿಗೆ ಕೆಲಸ ಕೊಡುವ ಬಾಸ್ ಗಳಾಗುತ್ತಾರೆ, ಇನ್ನು ಏನನ್ನೂ ಸರಿಯಾಗಿ ಓದದೆ ಬರೆಯದೆ ಆಟವಾಡಿದ್ದುಕೊಂಡು ಕೊನೆಯ ಸಾಲಿನ ಬೆಂಚ್ಗಳಲ್ಲಿ ಕುಳಿತವರು ಮೇಲಿನವರಿಬ್ಬರನ್ನೂ ಆಳುವ ರಾಜಕಾರಣಿಗಳಾಗುತ್ತಾರೆ ಎಂದು.
ಈಗಲೂ ನಮ್ಮ ರಾಷ್ಟ್ರದಲ್ಲಿ ಬಡ ಹಾಗೂ ಮಧ್ಯಮವರ್ಗದ ಕುಟುಂಬದವರು ದೇಶದ ಪ್ರಜೆಗಳ ಸೇವೆಯನ್ನು ಮಾಡಲಿಚ್ಛಿಸುವವರು ಬಹಳ ಸಲೀಸಾಗಿ, ಪ್ರಾಮಾಣಿಕತೆಯಿಂದ ರಾಜಕಾರಣಿಯಾಗಿ ಗೆಲ್ಲಲು ಸಾಧ್ಯವೇ? ಎಂದಿಗೆ ಇದು ಸಾಧ್ಯವಾಗುವುದೋ ಅಂದು ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೂ ಪೂರ್ಣವಿರಾಮ ಬೀಳುವುದು, ಖಚಿತವಾಗಿ ಬರೆದಿಟ್ಟುಕೊಳ್ಳಿ. ಆದರೆ ಹೇಗೆ, ಜಾದುವಿನಂತೆ ಈ ಸಮಸ್ಯೆ ಬಗೆಹರಿಯುವುದೇ? ಪ್ರಾಮಾಣಿಕರು, ದಕ್ಷರೆಲ್ಲರೂ ಈ ಸಮಸ್ಯೆ ಪರಿಹಾರವಾಗುವವರೆಗೆ ನಾವು ರಾಜಕಾರಣವನ್ನು ಪ್ರವೇಶಿಸುವುದಿಲ್ಲ ಎಂದು ಶಪಥ ಮಾಡಿ ಕೂತುಬಿಟ್ಟರೆ ಸಮಸ್ಯೆ ಬಗೆಹರಿಯುವುದೇ? ಈ ರೀತಿಯ ಗೊಂದಲದಲ್ಲಿರುವವರಿಗೆ ಇಂದಿನ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗಿಂತಲೂ ಮತ್ತ್ಯಾರ ಉದಾಹರಣೆ ಬೇಕಿದೆ? ಸಾಮಾನ್ಯ ಪರಿವಾರದಿಂದ ಬಂದ ಒಬ್ಬ ಚಾಯ್ ವಾಲಾ ನಿಷ್ಕಂಳಕ ರಾಜಕೀಯ ಚರಿತ್ರೆಯೊಂದಿಗೆ ಪ್ರಧಾನಿಮಂತ್ರಿಯ ಸ್ಥಾನ ತಲುಪಿ, ಆ ಸ್ಥಾನದ ಗರಿಮೆಯನ್ನೇ ಹಿರಿದು ಮಾಡಿರುವ ಗಮನಾರ್ಹ ಸಾಧನಾ ಸಂಗತಿಯು ನಮಗೆ ಸ್ಫೂರ್ತಿಯಾಗದಿದ್ದರೆ ಬಹುಶಃ ಮತ್ತ್ಯಾವುದೂ ಆಗಲಾರದು. ಯುವನಾಯಕರು, ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರು, ಬೆಂಗಳೂರು ದಕ್ಷಿಣದ ಸಂಸದರೂ ಆಗಿರುವ ತೇಜಸ್ವಿ ಸೂರ್ಯ ಅವರೂ ಸಹ ಈ ಸಂಗತಿಯ ಕುರಿತು ತಿಳಿಸುವಾಗ ರಾಜಕೀಯದಲ್ಲಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಇಚ್ಛೆಯುಳ್ಳ ಬಡ, ಮಧ್ಯಮವರ್ಗದವರು ಮೊದಲು ಒಂದು ನಿರ್ದಿಷ್ಟ ವೃತ್ತಿಯಲ್ಲಿ ಪರಿಣಿತಿ ಹೊಂದಬೇಕು, ಇದರಿಂದ ರಾಜಕೀಯದಲ್ಲಾಗುವ ಸಹಜ ಏರುಪೇರುಗಳ ಸಮಸ್ಯೆಯನ್ನು ಎದುರಿಸಲು ಯಾವುದೇ ಭ್ರಷ್ಟ ಮಾರ್ಗಗಳನ್ನು ಆಯ್ದುಕೊಳ್ಳದೆ ಧೈರ್ಯವಾಗಿ ಪ್ರಾಮಾಣಿಕತೆಯಿಂದ ಮರಳಿ ತಮ್ಮ ಪರಿಣಿತ ವೃತ್ತಿಯಲ್ಲಿ ತೊಡಗಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು. ಈ ಒಂದು ಸೂಕ್ಷ್ಮ, ಅರ್ಥಗರ್ಭಿತ ಸಂಗತಿಯು ಒಬ್ಬ ರಾಜಕೀಯ ಪ್ರವೇಶವನ್ನು ಮಾಡಲಿಚ್ಛಿಸುವ ವ್ಯಕ್ತಿಗೆ ಕೌಟುಂಬಿಕ ರಾಜಕಾರಣದ ವಿರುದ್ಧ ಯೋಗ್ಯತೆಯ ರಾಜಕಾರಣವನ್ನು ಮಾಡಲು ಪ್ರಾಮಾಣಿಕ ಪಥವನ್ನು ಪ್ರದರ್ಶಿಸುತ್ತದೆ. ಇಂದು ತೇಜಸ್ವಿ ಸೂರ್ಯ ಅವರ ಜನ್ಮದಿನ ಇರುವ ಕಾರಣ ವಿಶೇಷವಾಗಿ ಅವರ ರಾಜಕಾರಣದ ಬಗೆಗಿನ ಸ್ಪಷ್ಟ, ಪ್ರಖರ ಚಿಂತನೆಗಳನ್ನು ಪಸರಿಸಬೇಕಾದ ಅಗತ್ಯತೆಯೇ ಈ ಲೇಖನವನ್ನು ಬರೆಯಲು ನನಗೆ ಪ್ರೇರಣೆ ನೀಡಿದೆ ಎನ್ನಬಹುದು.
ಅಗ್ರತಃ ಚತುರೋ ವೇದಃ
ಪೃಷ್ಠತಃ ಸಶರಂ ಧನುಃ
ಇದಂ ಬ್ರಹ್ಮಂ ಇದಂ ಕ್ಷಾತ್ರಂ
ಶಾಪಾದಪಿ ಶರಾದಪಿ
ಎಂಬ ಪರಶುರಾಮರ ಬಗೆಗಿನ ಶ್ಲೋಕದಂತೆ ಬ್ರಹ್ಮ ಬಲ, ಕ್ಷಾತ್ರಬಲಗಳೆರಡನ್ನೂ ಹೊಂದಿರುವ ಪ್ರಬುದ್ಧ ರಾಜಕಾರಣಿಗಳು ಇಂದು ನಮ್ಮ ದೇಶಕ್ಕೆ ಬೇಕಾಗಿದ್ದಾರೆ. ಈ ಒಂದು ಆದರ್ಶಕ್ಕೆ ಯುವ ರಾಜಕಾರಣಿ ಸೂರ್ಯ ಅವರನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಬೌದ್ಧಿಕತೆಯ ಬ್ರಹ್ಮಬಲವು ಅವರ ಪಾಂಡಿತ್ಯಪೂರ್ಣ ಭಾಷಣಗಳಲ್ಲಿ, ಸುದ್ದಿವಾಹಿನಿಯ ಚರ್ಚೆಗಳಲ್ಲಿ, ಹರಿತವಾದ ಬರವಣಿಗೆಗಳಲ್ಲಿ ವ್ಯಕ್ತವಾಗುತ್ತದೆ ಮತ್ತು ಸಾಹಸದ ಕ್ಷಾತ್ರಬಲವು ಪಕ್ಷ, ರಾಷ್ಟ್ರ, ಧರ್ಮಗಳ ಅಭ್ಯುದಯದ ಸಿದ್ಧಾಂತಕ್ಕೆ ಕಟಿಬದ್ಧವಾಗಿರುವ ಮನೋಸ್ಥೈರ್ಯದಲ್ಲಿ, ತೆಗಳಿಕೆ-ಮಿಥ್ಯಾರೋಪಗಳಂತಹ ನಕಾರಾತ್ಮಕತೆಯ ದಾಳಿಯನ್ನು ಸಕ್ಷಮವಾಗಿ ಎದುರಿಸಲು ಎದೆಗಾರಿಕೆಯಲ್ಲಿ, ಕಠಿಣಾತಿ ಕಠಿಣ ಪರಿಸ್ಥಿತಿಗಳಲ್ಲೂ ಕಾರ್ಯಕರ್ತರ ಜೊತೆಗಿದ್ದು ಅವರ ವಿಶ್ವಾಸವನ್ನು ಉಳಿಸಿಕೊಳ್ಳುವ ಗುಣಪ್ರವೃತ್ತಿಯಲ್ಲಿ ಕಾಣಸಿಗುತ್ತದೆ. ವಿದ್ಯಾರ್ಥಿಯಾಗಿದ್ದಾಗ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತನಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಶುರುವಾದ ನಾಯಕನಾಗುವ ಇವರ ಕನಸು ಅರೈಸ್ ಇಂಡಿಯಾ, ನಮೋಬ್ರಿಗೇಡ್, ಯುವಮೋರ್ಚಾ ಸಂಘಟನೆಗಳಲ್ಲಿ ಅವಿರತ ಪರಿಶ್ರಮದ ಮೂಲಕ ಮುಂದೆ ಸಾಗಿ ಭಾರತೀಯ ಜನತಾ ಪಕ್ಷದಿಂದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸಂಸದನಾಗುವ ಮೂಲಕ ನೆರವೇರಿತು. ಸಂಸತ್ತಿನ ಧ್ವನಿಯಾಗುವ ಹಾಗೂ ಯುವಮೋರ್ಚಾದ ನಾಯಕನಾಗಿ ಪಕ್ಷಸಂವರ್ಧನೆಗೆ ಧ್ವನಿಯಾಗುವ ಜೊತೆಗೆ ಇವರು ನಡೆಸಿಕೊಂಡು ಬಂದಿರುವ ವಿನೂತನ ಕಾರ್ಯಕ್ರಮಗಳಾದ ಯೂತ್ ಕ್ಯಾನ್ ಲೀಡ್, ಕೊರೊನಾ ಹಾವಳಿಯ ಪರಿಸ್ಥಿತಿಯಲ್ಲಿ ಮಾಡಿದ ಮನೆ-ಮನೆಗೆ ಆಕ್ಸಿಜನ್ ಸಿಲಿಂಡರ್, ಫೋನಿನ ಮೂಲಕವೇ ಉಚಿತವಾಗಿ ಮಾಡಬಹುದಾಗಿದ್ದ ವೈದ್ಯರ ಸುಲಭ ಸಂಪರ್ಕ, ಬೆಡ್ ಬ್ಲಾಕಿಂಗ್ ದಂಧೆಯ ವಿರುದ್ಧ ಕೈಗೊಂಡ ನಿರ್ಭೀತ ಕ್ರಮ, ಯುವಸಂವಾದಗಳು, ಫುಟ್ಬಾಲ್ ಮ್ಯಾರಥಾನ್ ಮುಂತಾದ ಪಂದ್ಯಾವಳಿಗಳು, ವಿಶೇಷ ದಿನಗಳಲ್ಲಿ ಮಾಡುವ ಆಚರಣೆಗಳು ಒಬ್ಬ ಸಮರ್ಥ ಯುವಕನು ರಾಜಕಾರಣಿಯಾದರೆ ಯಾವ ತೆರನಾದ ಮಾದರಿಯ ಆಡಳಿತವನ್ನು ನೀಡಬಹುದು ಎಂಬುದಕ್ಕೆ ಸ್ಪಷ್ಟ ಚಿತ್ರಣವಾಗಿದೆ. ಸಂಸದರಾಗಿ ಒಂದು ವರ್ಷವಾದ ನಂತರದಲ್ಲೇ ಭಾಜಪಾದ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಇವರನ್ನು ನೇಮಕವಾಗಿದ್ದು ಅವರ ಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ.
ದೇಶಭಕ್ತಿ, ಸಮಾಜಸೇವೆ ಮನೋವೃತ್ತಿ, ಸಂಸ್ಕೃತಿ ವಿಚಾರದಲ್ಲಿ ಆಸಕ್ತಿ ಹೊಂದಿರುವ ಅನೇಕರು ರಾಜಕಾರಣದೊಂದಿಗೆ ಗುರುತಿಸಿಕೊಳ್ಳಲು ಅಥವಾ ರಾಜಕಾರಣದಲ್ಲಿ ತಮ್ಮ ಬೆಂಬಲ, ನಿಲುವುಗಳನ್ನು ಸ್ಪಷ್ಟಪಡಿಸಲು ನಿರಾಕರಿಸುತ್ತಾರೆ. ಈ ಜಗತ್ತು ದುರ್ಜನರ ದುಷ್ಟಕ್ರಿಯೆಗಳಿಂದಲ್ಲ, ಸಜ್ಜನರ ನಿಷ್ಕ್ರಿಯೆಯಿಂದ ಹೆಚ್ಚು ನರಳುವುದು ಎಂದು ನಾವೆಲ್ಲಾ ಕೇಳಿದ್ದೇವೆ. ನಾವೆಲ್ಲರೂ ಚೌಕಿದಾರರಾಗಿ ಭ್ರಷ್ಟರಿಂದ ಈ ದೇಶವನ್ನು ಕಾಪಾಡಬೇಕಿದೆ. ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ, ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯ ಮುಂತಾದ ಅರರು ಹಿಂದೂ ಸಂಸ್ಥಾನಗಳನ್ನು ಬೆಳೆಸಿ ಈ ಮಾತೃಭೂಮಿಯನ್ನು ರಕ್ಷಿಸಿದೆ, ಈ ರಾಜಕೀಯವೆಲ್ಲಾ ಏಕೆ ನಮ್ಮ ಪಾಡಿಗೆ ನಾವು ದೇವಸ್ಥಾನಕ್ಕೆ ಹೋಗಿ ದೇವರ ಜಪ ಮಾಡುತ್ತಾ ಸೌಮ್ಯವಾಗಿದ್ದುಬಿಡೋಣ ಎಂದು ತೀರ್ಮಾನಿಸಿದ್ದರೆ ನಮ್ಮ ಅಸ್ತಿತ್ವ ಉಳಿಯುತ್ತಿತ್ತೆ? ದೇಶಭಕ್ತರು ರಾಜಕಾರಣಿಯಾದರೆ ಅಧಿಕಾರದ ಸದುಪಯೋಗಪಡಿಸಿಕೊಂಡು ಅನ್ಯ ಸಾಮಾನ್ಯ ರಾಜಕಾರಣಿಗಳಿಗಿಂತ ಹೆಚ್ಚಿನ ಉಪಯುಕ್ತ ಕಾರ್ಯವನ್ನು ಮಾಡಬಹುದು.
ರಾಜಕಾರಣವನ್ನು ಮಾಡಲು ರಾಜಕಾರಣಿಗಳೇ ಆಗಬೇಕೆಂದೇನಿಲ್ಲವಲ್ಲ! ನಮ್ಮ ನಮ್ಮ ವೃತ್ತಿಗಳನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಲೇ ನಮ್ಮ ಸ್ಪಷ್ಟವಾದ ರಾಜಕೀಯ ನಿಲುವುಗಳನ್ನು ವ್ಯಕ್ತಪಡಿಸಿದರಾಯ್ತು. ಲೋಕಸಭೆ, ವಿಧಾನಸಭೆಯಂತಹ ದೊಡ್ಡ ದೊಡ್ಡ ಚುನಾವಣೆಗಳಲ್ಲೇ ಎಲ್ಲಾ ಇಚ್ಛುಕರು ಭಾಗವಹಿಸಲು ಅಸಾಧ್ಯ. ಆದರೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಲ್ಲಿ ವಿಜಯಿಯಾಗುವ ಮೂಲಕ ಪ್ರಧಾನಿಗಳ ಸ್ಥಾನದವರಿಗಿರುವಂತೆಯೇ ಈ ಸ್ಥಾನದಲ್ಲೂ ದೊರೆಯುವ ಜನಸೇವೆಯ ಮಹಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ರಾಷ್ಟ್ರದ ಆಡಳಿತದ ಚುಕ್ಕಾಣಿಯು ಸದಾ ಸುಭದ್ರವಾದ ಕೈಗಳಲ್ಲೇ ಇರುವಂತೆ ನಾವು ನೋಡಿಕೊಳ್ಳುವ ಹಾಗೂ ಯಾರು ಈ ನೆಲದ ಸಂಸ್ಕೃತಿಯ ಬಗ್ಗೆ ಶ್ರದ್ಧೆ, ಗೌರವ, ಆದರಗಳನ್ನು ಹೊಂದಿ ಅದರ ಪ್ರಾಮುಖ್ಯತೆಯನ್ನು ಮನಗಂಡಿರುತ್ತಾರೋ ಅಂತಹವರ ಕೈಗಳಿಗೆ ನಾವು ಅಧಿಕಾರ ಕೊಡುವ ಸಂಕಲ್ಪವನ್ನು ಇಂದು ಮಾಡೋಣ.
✍️ಸಿಂಚನ ಎಂ.ಕೆ ಮಂಡ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.