ಇಂದು ಭೂಮಿ ಹುಣ್ಣಿಮೆ. ರೈತ ಬಂಧುಗಳು ಭೂತಾಯಿಯ ಪೂಜೆ ಮಾಡಿ ಸಂಭ್ರಮ ಪಡುವ ಸಮಯ. ಎಲ್ಲೆಡೆ ಹಸಿರು, ಮೊನ್ನೆ ಮೊನ್ನೆ ಮುಗಿದ ದಸರೆ, ದೀಪಾವಳಿಯ ಎದುರುಗೊಳ್ಳುವ ದಿನಗಳು. ಇನ್ನು ಮುಂದೆ ಬಿಡುವಿಲ್ಲದ ಕೆಲಸಗಳು ಆರಂಭಗೊಳ್ಳುತ್ತವೆ. ಭೂ ರಕ್ಷೆ ಕಟ್ಟಿಕೊಂಡು ತಾಯಿ ಭೂಮಿಯ ಕಾಯುವ ಹರಕೆ ಮಾಡಿಕೊಂಡು, ರುಚಿ ರುಚಿ ಅಡುಗೆಯ ಸವಿಯುವ ಅವಕಾಶ. ಇಂತಹ ಸುಸಮಯದಲ್ಲಿ ರೈತರ ಪ್ರಧಾನಿಯನ್ನು ಒಮ್ಮೆ ನೆನೆಯೋಣ ಬನ್ನಿ.
ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್ನಿಂದಲೋ, ವಿದೇಶಗಳಿಂದಲೋ ಸಾಲ ತಂದು ಮಾಡುವ ಮನ್ನಾ ಹೊರೆಯೇ ಅಲ್ಲವೇ? ಹಿಂಬಾಗಿಲಿನಿಂದ ಹೊಸದೊಂದು ಆಪತ್ತು ತಂದುಕೊಂಡಂತೆ. ಆದರೆ ಈಗ ಹಾಗಾಗುತ್ತಿಲ್ಲ. ತಮ್ಮ ಮೊದಲ ಅವಧಿಯಲ್ಲಿ ಬೇವು ಲೇಪಿತ ಗೊಬ್ಬರ ಸಕಾಲಕ್ಕೆ, ಸಬ್ಸಿಡಿ ಸಹಿತ ದೊರೆಯುವಂತೆ ಮಾಡಿದ್ದ ಮೋದಿಯವರು ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೊಳಿಸಿದ್ದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ
ಈ ಪ್ರಾಯೋಗಿಕವಾಗಿ ಯೋಜನೆ ಡಿಸೆಂಬರ್ 1, 2018 ರಂದು ಜಾರಿಯಾಗಿತ್ತು. ಸದರಿ ಯೋಜನೆಯಂತೆ ಎರಡು ಎಕರೆವರೆಗಿನ ಭೂಮಿ ಹೊಂದಿರುವ ರೈತರಿಗೆ ಮೂರು ಕಂತುಗಳಲ್ಲಿ ವಾರ್ಷಿಕ 6000 ರೂಪಾಯಿಗಳ ನೀಡಲಾಗುತ್ತಿತ್ತು. 2019-20ನೇ ಸಾಲಿನ ಮಧ್ಯಂತರ ಬಜೆಟ್ನಲ್ಲಿ 75000 ಕೋಟಿ ರೂಪಾಯಿಗಳ ಅಂದಾಜು ಮಾಡಲಾಗಿತ್ತು. ಆದರೆ ಹೊಸ ತಿದ್ದುಪಡಿಯಂತೆ ಪ್ರತಿ ರೈತರೂ ಈ ಯೋಜನೆಯ ಫಲಾನುಭವಿಗಳಾಗಿದ್ದು, 14.50 ಕೋಟಿ ಹೊಸ ರೈತರಿಗೆ ಈ ಸೌಲಭ್ಯ ಸಿಗಲಿದೆ. ಈಗಾಗಲೇ ಹಲವು ಕಂತುಗಳಲ್ಲಿ ಹಣ ಬಿಡುಗಡೆ ಆಗಿದ್ದು, 1.57 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ರೈತರ ಸೇರಿದೆ. ವಾರ್ಷಿಕ ಎರಡು ಕಂತುಗಳಲ್ಲಿ ಈ ಹಣ ರೈತರ ಖಾತೆಗೆ ಜಮಾ ಆಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆ
ಇದು ನರೇಂದ್ರ ಮೋದಿಯವರ ಯೋಜನೆಗಳಲ್ಲಿ ಒಂದು. ಈಗಾಗಲೇ ಜಾರಿಯಲ್ಲಿರುವ ಅಟಲ್ ಪಿಂಚಣಿ ಯೋಜನೆ ಮಾದರಿಯಲ್ಲಿ ಅಸುರಕ್ಷಿತ ರೈತ ವರ್ಗಕ್ಕೆ ಪಿಂಚಣಿ ಸಿಗಲಿದೆ. ಎರಡು ಎಕರೆವರೆಗಿನ ಭೂಮಿ ಹೊಂದಿರುವ ರೈತರಿಗೆ 60 ವರ್ಷ ವಯಸ್ಸಿನ ನಂತರ ಮಾಸಿಕ 3000 ರೂಪಾಯಿಗಳ ತನಕ ಪಿಂಚಣಿ ದೊರೆಯಲಿದೆ. ಹೆಚ್ಚಿನ ನಿಯಮಗಳು ಅಟಲ್ ಪಿಂಚಣಿ ಯೋಜನೆಯಂತೆ ಇದ್ದು, 18 ರಿಂದ 40 ವರ್ಷ ವಯಸ್ಸಿನವರು ಯೋಜನೆಗೆ ಅರ್ಹರು. ರೈತರು ಭರಿಸಿದಷ್ಟೇ ಹಣವನ್ನು ಸರ್ಕಾರವೂ ತುಂಬಲಿದೆ. ಪಿಂಚಣಿ ಪಡೆಯುವ ಸಂದರ್ಭದಲ್ಲಿ ಫಲಾನುಭವಿ ನಿಧನರಾದರೆ ನಾಮ ನಿರ್ದೇಶಿತರಿಗೆ ಪಿಂಚಣಿಯ 50%ರಷ್ಟು ಹಣ ದೊರೆಯಲಿದೆ. ರೈತರು ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣವನ್ನು ಈ ಪಿಂಚಣಿ ಯೋಜನೆಗೆ ಬಳಸಬಹುದಾಗಿದೆ.
ಕಾಲು-ಬಾಯಿ ರೋಗ ನಿರೋಧಕ ಚುಚ್ಚುಮದ್ದು
ಗೋವು ಪ್ರೇಮಿಗಳಿಗೆ, ಬಡ ರೈತರಿಗೆ ಇದು ಸಿಹಿ ಸುದ್ದಿ. ಹಸುಗಳು ಕಾಲು-ಬಾಯಿ ರೋಗದಿಂದ ಬಳಲುತ್ತಿರುವ ಮತ್ತು ಹಠಾತ್ತನೆ ನಿಧನ ಹೊಂದಿದ ಸುದ್ದಿ ಕೇಳುತ್ತಲೇ ಇರುತ್ತದೆ. ಆದರೆ ಕೇಂದ್ರ ಸರ್ಕಾರದ ಯೋಜನೆಯಂತೆ ಹಸು, ಎತ್ತು, ಎಮ್ಮೆ, ಕುರಿ, ಆಡು ಮತ್ತು ಹಂದಿಗಳಂತಹ ಪ್ರಾಣಿಗಳಿಗೆ ರೋಗ ನಿರೋಧಕ ಚುಚ್ಚುಮದ್ದು ದೊರೆಯಲಿದೆ. ಸುಮಾರು 50 ಕೋಟಿ ಪ್ರಾಣಿಗಳು, 13343 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲು-ಬಾಯಿ ರೋಗದಿಂದ ಮುಕ್ತಿ ಪಡೆಯಲಿವೆ.
ಪ್ರಧಾನ ಮಂತ್ರಿಯವರ ವ್ಯಾಪಾರಿ ಪಿಂಚಣಿ ಯೋಜನೆ (Pradhan Mantri Laghu Vyapari Maan-dhan Yojana) ಸಣ್ಣ ವರ್ತಕರು, ಸಗಟು ವ್ಯಾಪಾರಿಗಳು ಮತ್ತು ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಈ ಯೋಜನೆಯ ಫಲಾನುಭವಿಗಳು. ಅವರು ವಾರ್ಷಿಕವಾಗಿ ತೆರುವ ಜಿಎಸ್ಟಿ 1.5 ಕೋಟಿ ರೂಪಾಯಿಗಳಿಗಿಂತ ಕಡಿಮೆ ಇರಬೇಕು ಎನ್ನಲಾಗಿದೆ. ಅರವತ್ತು ವರ್ಷ ವಯಸ್ಸಿನ ನಂತರ ಮಾಸಿಕ 3000 ರೂಪಾಯಿಗಳ ಪಡೆಯಲಿದ್ದಾರೆ. ಇಲ್ಲೂ ಸರ್ಕಾರ ಅವರ ಹಣದಷ್ಟೇ ತನ್ನ ಪಾಲನ್ನು ನೀಡಲಿದೆ. ಆಸಕ್ತರಿಗಾಗಿ ಗ್ರಾಹಕ ಸೇವಾ ಕೇಂದ್ರಗಳನ್ನು ಭಾರತ ಸರ್ಕಾರ ಸ್ಥಾಪಿಸಿದೆ.
ಬಹು ಚರ್ಚಿತ ಕೃಷಿ ಕಾಯ್ದೆ ಕುರಿತು ನೋಡುವುದಾದರೆ,
ರೈತರಿಂದ ಬೆಲೆ ನಿಗದಿ
ಎಲ್ಲಾ ಉತ್ಪನ್ನಗಳಿಗೆ ಮೊದಲೇ ದರ ನಿಗದಿಪಡಿಸಿದಂತೆ ಬೆಳೆದ ಬೆಳೆಗೆ ತಾನೇ ಬೆಲೆ ನಿರ್ಧರಿಸುವ ಹಕ್ಕು ರೈತನದ್ದಾಗಬೇಕು. ಅಂತಹ ಒಂದು ಆಯ್ಕೆ ಈ ಕಾಯ್ದೆಯಲ್ಲಿ ಇದೆ. ಕೇಂದ್ರ ಸರ್ಕಾರದ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಕೃಷಿ ಉತ್ನನ್ನ ಮತ್ತು ಪಶುಸಂಪತ್ತು ಮಾರುಕಟ್ಟೆ(ಪ್ರಚಾರ ಮತ್ತು ಸೌಲಭ್ಯ)ಕಾಯ್ದೆ-2017 ಮಾದರಿ ಕಾಯ್ದೆಯ ಶಿಫಾರಸುಗಳನ್ವಯ ರಾಜ್ಯದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಕಲಂ 8(2) ಮತ್ತು ಕಲಂ 117ಕ್ಕೆ ತಿದ್ದುಪಡಿ ಮಾಡಲಾಗಿದೆ. ಕಲಂ 8(3)ನ್ನು ಕೈಬಿಡಲಾಗಿದೆ.
ದಂಡ ಮತ್ತು ಶಿಕ್ಷೆ ರದ್ದು
ಕಲಂ 8(2) ರಡಿ ಇದುವರೆಗೆ ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದಲ್ಲೇ ಮಾರಾಟ ಮಾಡಬೇಕೆಂಬ ನಿರ್ಬಂಧ ಈಗ ಇಲ್ಲ. ಎಪಿಎಂಸಿ ಸಮಿತಿಯ ನಿಯಂತ್ರಣವನ್ನು ಪ್ರಾಂಗಣಕ್ಕೆ ಸೀಮಿತಗೊಳಿಸಿದೆ. ಕಲಂ 8(2)ರ ಉಲ್ಲಂಘನೆಗೆ ದಂಡ ಮತ್ತು ಸಜೆ ಶಿಕ್ಷೆಯನ್ನು ವಿಧಿಸುತ್ತಿದ್ದ ಕಲಂ 117 ಕೈಬಿಡಲಾಗಿದೆ. ಈ ತಿದ್ದುಪಡಿಯಿಂದ ರೈತ ತಾನು ಬೆಳೆದ ಬೆಳೆಯನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸ್ವಾತಂತ್ರ್ಯ ದೊರಕಿದೆ.
ರಾಜ್ಯ/ಅಂತಾರಾಜ್ಯದಲ್ಲೂ ಮಾರಾಟಕ್ಕೆ ಅವಕಾಶ
ಹೊಸ ಕಾಯ್ದೆ ಅನ್ವಯ ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಅಂತರ್ ಜಿಲ್ಲೆ ಮತ್ತು ರಾಜ್ಯಗಳಲ್ಲಿ ರೈತರು ತಾವೇ ನಿರ್ಧರಿಸಿದ ಬೆಲೆಗೆ ಮಾರಾಟ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ.
ಮಧ್ಯವರ್ತಿ ರಹಿತ ಮಾರುಕಟ್ಟೆ
ರೈತರು ಈ ಹಿಂದೆ ತಮ್ಮ ಉತ್ಪನ್ನಗಳನ್ನು ಅನ್ಯ ಸ್ಥಳಗಳಿಗೆ ಒಯ್ದು ಮಾರಾಟ ಮಾಡಲು ಅಧಿಕೃತ ದಾಖಲೆಗಳಾದ ಪಹಣಿ ಅಥವಾ ಸ್ಥಳೀಯ ರೆವಿನ್ಯೂ ಅಧಿಕಾರಿಗಳು ನೀಡುವ ದೃಢೀಕರಣದೊಂದಿಗೆ ಆವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ತಿದ್ದುಪಡಿಯಿಂಧಾಗಿ ಯಾವುದೇ ದಾಖಲಾತಿಗಳಿಲ್ಲದೆ ತಮ್ಮ ಉತ್ಪನ್ನಗಳನ್ನು ಸಾಗಾಟ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಸ್ಥಳೀಯ ದಲ್ಲಾಳಿಗಳ ಗೋಗರೆಯುವ ಸ್ಥಿತಿ ಇತ್ತು. ಈಗ ರೈತ ಸ್ವತಂತ್ರ, ದಾಖಲೆ ರಹಿತವಾಗಿ ಮಾರುಕಟ್ಟೆ ಆಯ್ಕೆ ಆತನ ಮುಂದಿದೆ.
🔷 ಎಪಿಎಂಸಿಗಳು ಹಾಗೆಯೇ ಇರಲಿವೆ
🔷 ನೂತನ ಎಪಿಎಂಸಿ ಕಾಯ್ದೆಯಿಂದ ಯಾವುದೇ ಎಪಿಎಂಸಿಗಳನ್ನು ಮುಚ್ಚುವ ಅಂಶ ಇಲ್ಲ.
🔷 ಕನಿಷ್ಠ ಬೆಂಬಲ ಬೆಲೆ ಮುಂದುವರಿಕೆ
ಕಾಯ್ದೆಯನ್ನು ಓದದೇ, ಅರಿಯದೇ ದಿಕ್ಕು ತಪ್ಪಿಸುವ ಸಲುವಾಗಿ ಮುಂದಾದವರೆ ಹೆಚ್ಚು. ಈ ಕಾಯ್ದೆಯಲ್ಲಿ ಯಾವುದೇ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಉಂಟಾದಾಗ ಎಂದಿನಂತೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ನಡೆಯುತ್ತದೆ. ಈ ಹಿಂದಿನಂತೆ ಕನಿಷ್ಟ ಬೆಂಬಲ ಬೆಲೆ ಹಾಗೆಯೇ ಇರಲಿದೆ.
ರೈತಸ್ನೇಹಿ
ಎಪಿಎಂಸಿ ಪ್ರಾಂಗಣದಲ್ಲಿ ವ್ಯಾಪಾರ ಮಾಡುವ ಜೊತೆಯಲ್ಲಿಯೇ 2007ರಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಎಪಿಎಂಸಿ ಪ್ರಾಂಗಣದ ಹೊರಗೆ ರೈತರಿಂದ ನೇರ ಖರೀದಿಗೆ ಅವಕಾಶ ಕಲ್ಪಿಸಿ ನೇರ ಖರೀದಿ ಕೇಂದ್ರಗಳಿಗೆ ಲೈಸೆನ್ಸ್ ನೀಡಲಾಗಿದೆ. ಇದಾಗಲೇ ಹಲವು ಕಂಪನಿಗಳು ನೇರ ಖರೀದಿ ಲೈಸೆನ್ಸ್ ಪಡೆದು ಕಾರ್ಯನಿರ್ವಹಿಸುತ್ತಿವೆ. 2014ರಿಂದ ಆನ್ಲೈನ್ ಟ್ರೇಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇದ್ದಲ್ಲಿಗೇ ಬಂದು ಖರೀದಿ
ರೈತರು ನೇರ ವ್ಯಾಪಾರಿಗಳಿಗೆ, ಯಾವುದೇ ಮಾರುಕಟ್ಟೆಗಳಲ್ಲಿ, ಬೇರೆ ರಾಜ್ಯಗಳಿಗೂ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. ಇಲ್ಲವೇ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಇಲ್ಲವೇ ಹೊಲಗಳಿಗೇ ಬಂದು ಬೆಳೆಗಳನ್ನು ಖರೀದಿ ಮಾಡಬಹುದು.
ಆರೋಗ್ಯಕರ ಸ್ಪರ್ಧೆ, ಬೆಲೆ
ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಬೆಳೆಯನ್ನು ಮಾರಾಟ ಮಾಡುವ ಹಕ್ಕನ್ನು ರೈತರಿಗೆ ನೀಡಿರುವ ಪರಿಣಾಮ ರೈತನಿಗೆ ಹೆಚ್ಚಿನ ಅವಕಾಶಗಳು ಸಿಗುವುದರೊಂದಿಗೆ ವ್ಯಾಪಾರಿಗಳ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೇ ಮಾರಾಟ ಮಾಡಬೇಕೆಂಬ ನಿಬಂಧನೆಗಳಿಲ್ಲದೆ, ಹೆಚ್ಚು ಬೆಲೆ ಕೊಟ್ಟು ಕೊಂಡುಕೊಳ್ಳುವವರಿಗೆ ಮಾರಾಟ ಮಾಡಿ ರೈತರು ಅಧಿಕ ಲಾಭವನ್ನು ಗಳಿಸಬಹುದು.
ಮುಕ್ತ ಮಾರುಕಟ್ಟೆ ಅವಕಾಶ
ರೈತ-ಮಾರಾಟಗಾರರಿಗೆ ಈಗಾಗಲೇ ಇರುವ ವಿವಿಧ ಮಾರುಕಟ್ಟೆಚಾನಲ್ಗಳಾದ ಮಾರುಕಟ್ಟೆಪ್ರಾಂಗಣ, ನೇರ ಖರೀದಿ ಕೇಂದ್ರ, ಖಾಸಗಿ ಮಾರುಕಟ್ಟೆಪ್ರಾಂಗಣ, ರೈತ-ಗ್ರಾಹಕ ಮಾರುಕಟ್ಟೆಪ್ರಾಂಗಣ ವೇರ್ಹೌಸ್ ಇತ್ಯಾದಿಗಳೊಂದಿಗೆ ಈಗ ಮತ್ತೊಂದು ಉತ್ತಮ ಬದಲಿ ಸೌಕರ್ಯ ಲಭ್ಯವಿರುವಂತಾಗಿದ್ದು, ಮುಕ್ತ ಮಾರುಕಟ್ಟೆ ದೊರೆತಂತಾಗಿದೆ.
ನರೇಂದ್ರ ಮೋದಿಯವರು ತಮ್ಮ ಪ್ರಣಾಳಿಕೆಯ ಪ್ರತಿ ಭರವಸೆಯನ್ನು ಜಾರಿ ಮಾಡುವ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಒಬ್ಬ ಸಣ್ಣ ರೈತ, ಚಿಕ್ಕ ವರ್ತಕ ಅಷ್ಟೇ ಏಕೆ ರೈತನ ಬಡ ಹಸುವನ್ನು ಮರೆಯದ ಮೋದಿಯವರ ಸರ್ಕಾರದ ಯೋಜನೆಗಳು ನಿಜಕ್ಕೂ ಶ್ಲಾಘನೀಯ. ಕೊನೆಯದಾಗಿ ಎಲ್ಲರಿಗೂ ಭೂಮಿ ಹುಣ್ಣಿಮೆ ಹಬ್ಬದ ಶುಭಾಶಯಗಳು.
✍️ ಸಚಿನ್ ಪಾರ್ಶ್ವನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.