ಪಟ್ಟಣದ ಅತ್ಯಂತ ಎತ್ತರದ ಕಟ್ಟಡದಲ್ಲಿ ವಾಸವಿರುವ ಮಗುವೊಂದು ಅಮ್ಮನ ಬಳಿ ಬಂದು ಒಂದು ಪ್ರಶ್ನೆ ಕೇಳಿತು” ಅಮ್ಮ,ನಾವು ಇಷ್ಟು ಎತ್ತರದ ಮನೆಯಲ್ಲಿದ್ದೇವೆ, ಆಕಾಶ ಕೈಗೆ ಸಿಕ್ಕಿತೋ ಎಂಬಷ್ಟು ಹತ್ತಿರ. ಆದರೆ ಹಕ್ಕಿಗಳು ಮಾತ್ರ ಕಾಣುವುದೇ ಇಲ್ಲ. ಆದರೆ ನಮ್ಮ ಅಜ್ಜಿ ಮನೆಯಲ್ಲಿ ಕೆಳಗಿನಿಂದ ನಿಂತು ಒಮ್ಮೆ ಮೇಲಕ್ಕೆ ನೋಡಿದರೆ ವಿವಿಧ ಬಣ್ಣದ ವಿಶಿಷ್ಟ ಹಕ್ಕಿಗಳು ಆಕಾಶದಲ್ಲಿ ಸಂತೋಷದಿಂದ ಹಾರುವುದನ್ನು ನೋಡಬಹುದು ಇದೇಕೆ ಹೀಗೆ”. ಅಮ್ಮ ಹೇಳಿದಳು “ಮಗು ನಮ್ಮ ತಪ್ಪಿನಿಂದ ಇವತ್ತು ಅನೇಕ ವಿಧವಾದ ಹಕ್ಕಿಗಳು ಕಣ್ಮರೆಯಾಗಿದೆ. ಅವುಗಳ ಸಂತಾನವೇ ನಾಶವಾಗಿದೆ ಮಗು”.
ಹೌದು ನಾವಿರುವ ಜಾಗದಲ್ಲಿ ಹಕ್ಕಿಗಳನ್ನು ಹುಡುಕುವುದೇ ಇಂದು ಕಷ್ಟವಾಗಿದೆ. ಎಲ್ಲೋ ಕಾಡಿನ ಮೂಲೆಯಲ್ಲಿ ಬಣ್ಣ ಬಣ್ಣದ ಹಕ್ಕಿಗಾಗಿ ಕಾದು ಕುಳಿತು ನೋಡಬೇಕಾದ ಪರಿಸ್ಥಿತಿ. ಇಡೀ ಪ್ರಪಂಚದಲ್ಲಿ ಸುಮಾರು 10,000 ಕ್ಕೂ ಹೆಚ್ಚು ಹಕ್ಕಿ ಪ್ರಭೇದಗಳಿಗೆ ಆದರೆ ಅದರಲ್ಲಿ 2,000 ಕ್ಕೂ ಕಡಿಮೆ ಪ್ರಭೇದಗಳು ಮಾತ್ರ ಪಟ್ಟಣದಲ್ಲಿದೆ. ಮನುಷ್ಯನ ಗೆಳೆಯನಂತೆ ಸದಾ ಮನೆಯ ಹಂಚಿನ ಮೇಲೆ ಅಥವಾ ಅಂಗಳದಲ್ಲಿ ಕುಳಿತು ಹಾಡುತ್ತಾ, ಅತ್ತಿಂದಿತ್ತ ಹಾರಾಡುತ್ತಾ ಇದ್ದ ಗುಬ್ಬಚ್ಚಿ ಇಂದು ಎಲ್ಲಿ ಹೋಯಿತು ಎಂಬುದೇ ಅಚ್ಚರಿ ಮೂಡಿಸುತ್ತದೆ. ಮೊದಲು ಮಾನವ ಸ್ನೇಹಿಯಾಗಿ ಹೆಗಲೆ ಮೇಲೆ ಕುಳುತಿಕೊಳ್ಳುತ್ತಿದ್ದುದ್ದನ್ನು ಹಿರಿಯರು ಹೇಳುವಾಗ ರೋಮಾಂಚನವಾಗುತ್ತದೆ.
ಪ್ರತಿಯೊಂದು ಹಕ್ಕಿಗಳು ತಾವು ಜೀವಿಸುವ ಪರಿಸರದ ಮೇಲೆ ಬಹಳಷ್ಟು ಅವಲಂಬಿಸಿರುತ್ತದೆ. ಗದ್ದೆಗಳಲ್ಲಿ, ತೆಂಗಿನ ಮರಗಳ ಗರಿಗಳಲ್ಲಿ ಅಥವಾ ಗಿಡಗಳ ನಡುವೆ ಗುಡುಕಟ್ಟಿ ಹಸಿರಿನೊಂದಿಗೆ ಉಸಿರು ಎಂಬಂತೆ ಸದಾ ಹಸಿರಿನಲ್ಲೇ ಬದುಕುವ ಹಕ್ಕಿಗಳಿಗೆ, ಒಮ್ಮಿಂದೊಮ್ಮೆಲೆ ಪರಿಸರದ ಹಸಿರು ಬದಲಾಗಿ, ಕಾಡುಗಳು ನಾಶವಾಗಿ ದೊಡ್ಡ ದೊಡ್ಡ ಕಟ್ಟಡಗಳು ದೈತ್ಯಾಕಾರದಲ್ಲಿ ಮೇಲೇಳುವಾಗ ಹಸಿರ ಪರಿಸರಕ್ಕೆ ನಗರೀಕರಣದ ಸ್ಪರ್ಶ ನೀಡಿ ಯಂತ್ರಗಳು ಮಾವನ ಸಂಪನ್ಮೂಲಗಳು ಹೆಚ್ಚಾದಾಗ ಅನೇಕ ಹಕ್ಕಿ ಪ್ರಭೇದಗಳು ನಾಶವಾಗಿದೆ. ಕೆಲವು ಪ್ರಭೇದಗಳು ಅಲ್ಪ ಸ್ವಲ್ಪ ಅಳಿವಿನಂಚಿನಲ್ಲಿದೆ. ಇಂತಹ ಹಕ್ಕಿ ಪ್ರಭೇದಗಳು ಕಡಿಮೆ ವಲಸೆ ಹೋಗುವ ಮತ್ತು ಮಾನವರಿಗೆ ಹೆದರುವ ಪ್ರಬೇಧವಾಗಿದೆ.
ಈ ರೀತಿ ಜಾಗತಿಕ ಮಟ್ಟದ ಬದಲಾವಣೆ ಮನುಷ್ಯನಿಗೆ ಸಂತೋಷವಾದರೂ ಪಕ್ಷಿ ಸಂಕುಲದ ಮೇಲೆ ಬಹಳಷ್ಟು ಪ್ರಭಾವ ಬೀರಿದೆ.
ಪಟ್ಟಣದಲ್ಲಿ ಹಕ್ಕಿಗಳಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವುಗಳಲ್ಲಿ ವಾಯುಮಾಲಿನ್ಯ, ರಾತ್ರಿ ಬೀಳುವ ಕೃತಕ ಬೆಳಕುಗಳು, ಸದಾ ಕಿವಿಗೆ ಕರ್ಕಶ ಶಬ್ದಗಳು ಎಲ್ಲವೂ ಸೇರಿ ಪಕ್ಷಿಗಳ ಮನಸ್ಸಿನಲ್ಲಿ ಒತ್ತಡ ಸೃಷ್ಟಿಯಾಗಿ ಸಮಸ್ಯೆ ಅನುಭವಿಸುವ ಹಕ್ಕಿಗಳು ಬದುಕಲು ಸಾಧ್ಯವಾಗದೇ ಪಟ್ಟಣ ಬಿಟ್ಟು ಕಾಡಿಗೆ ಹಸಿರಿಗಾಗಿ ಹುಡುಕಿಕೊಂಡು ವಲಸೆ ಹೋಗುತ್ತವೆ. ಪಕ್ಷಿಗಳ ಮೇಲಿನ ಮಾನವನ ನಡುವಳಿಕೆಗಳು ಕೂಡ ಪ್ರಮುಖವಾದದ್ದು. ಹಕ್ಕಿಗಳಲ್ಲಿ ಕೆಲವು ಪ್ರಭೇದಗಳು ಮಾನವನ ಸ್ನೇಹ ಬಯಸಲು ಸದಾ ಮುಂದೆ ಬರುತ್ತವೆ. ಹಿಂದೆ ಹಕ್ಕಿಗಳು ಮಾನವನ ಹೆಗಲಿನಲ್ಲಿ ಅಥವಾ ಕೈಯಲ್ಲಿ ಹೀಗೆ ಕುಳಿತು ಮಾತನಾಡುವ ಅಥವಾ ಕೊಟ್ಟ ಆಹಾರ ಪ್ರೀತಿಯಿಂದ ತಿನ್ನುವ ಆ ಕಾಲವನ್ನು ಹಿರಿಯರು ಇಂದು ನೆನಪಿಸಿಕೊಳ್ಳುತ್ತಾರೆ. ಆದರೆ ಬದಲಾದ ಪರಿಸ್ಥಿತಿಯಿಂದ ಮಾನವನ ನಗರೀಕರಣದಿಂದ ಪಕ್ಷಿಗಳು ಮಾನವನನ್ನೂ ಕಂಡರೆ ಭಯ ಪಡಲು ಪ್ರಾರಂಭಿಸಿವೆ. ವಿವಿಧ ಪ್ರಭೇದಗಳ ಹಕ್ಕಿಗಳು ಕಾಡಿನತ್ತ ನಿರ್ಜನ ಪ್ರದೇಶಕ್ಕೆ ವಲಸೆ ಹೋಗಿ ಅಲ್ಲಿ ವಾಸಿಸುತ್ತಿವೆ.
ಪಕ್ಷಿ ಪ್ರೇಮಿಗಳು ಅಲ್ಲಲ್ಲಿ ತಾವು ಹಕ್ಕಿಗಳ ಉಳಿವಿಗಾಗಿ ಪಟ್ಟಣದಲ್ಲೇ ಆಹಾರ ನೀಡುವ ಗೂಡು ನಿರ್ಮಿಸುವ ಪಕ್ಷಿ ಪ್ರಭೇದಗಳನ್ನು ಸಂರಕ್ಷಿಸುವ ಕಾರ್ಯ ಸದ್ದಿಲ್ಲದೇ ಮಾಡುತ್ತಿದ್ದಾರೆ. ಹಾಗಾಗಿ ಇಂದು ಅಲ್ಲವಾದರೂ ಹಕ್ಕಿಗಳನ್ನು ಕಾಣಬಹುದು. ಹಕ್ಕಿಗಳ ಇಂಪಾದ ಕಲರವ ಕೇಳಲೇ ಸೊಗಸು ಮತ್ತು ಅದನ್ನೇ ಹುಡುಕುತ್ತಾ ಹೋಗಿ ಯಾವದೋ ಒಂದು ಮರದ ಮೇಲೆ ಎಲೆಗಳ ನಡುವೆ ಬಣ್ಣ ಬಣ್ಣದ ಹಕ್ಕಿಯನ್ನು ಅಚ್ಚರಿಯಿಂದ ನೋಡಿ ಇದು ಯಾವ ಹಕ್ಕಿ ಎಂಬುದನ್ನು ಯೋಚಿಸುತ್ತಾ, ಕೊನೆಗೆ ಅಂತು ಇಂತು ಹುಡುಕಿ ಮನೆಗೆ ಬರುವ ದಿನಗಳೇ ಅದ್ಭುತ ಎಂಬುದು ನಮ್ಮ ಹಿರಿಯರು ಹೇಳುವಾಗ ಮನೆಯಿಂದ ಹೊರ ಬಂದು ಹುಡುಕಿ ಹೊರಟರೆ ಒಂದು ಹಕ್ಕಿಯೂ ಕಾಣದೆ ಅಥವಾ ಒಂದೆರಡು ಹಕ್ಕಿ ನೋಡಿ ಬರುವುದು ಈಗಿನ ಪರಿಸ್ಥಿತಿ. ಎಲ್ಲಿ ಹೋದವು ಬಣ್ಣ ಬಣ್ಣದ ಹಕ್ಕಿಗಳು ವಿವಿಧ ಪ್ರಭೇದಗಳ ಹಕ್ಕಿಗಳು ಎಂಬುದನ್ನು ನಾವು ಆಲೋಚನೆ ಮಾಡಬೇಕಾಗಿದೆ.
ಒಂದು ಮರ ಕಡಿಯುವ ಮೊದಲು ಅದರಲ್ಲಿ ಹಕ್ಕಿಯ ಗೂಡಿದೆಯೆ, ಪುಟ್ಟ ಮರಿಗಳಿದೆಯೇ ಎಂದು ನೋಡದೆ ನೇರವಾಗಿ ಪಕ್ಷಿಗಳ ಆಶ್ರಯ ತಾಣವಾದ ಮರಗಳನ್ನು ನಾಶಮಾಡಿ ಕಟ್ಟಡ ಕಟ್ಟಿದರೆ ಅವುಗಳು ಬದುಕುವುದು ಅಸಾಧ್ಯ. ಹಾಗಾಗಿ ಪಟ್ಟಣದಲ್ಲಿ ಹಕ್ಕಿಗಳೇ ಕಾಣುವುದಿಲ್ಲ ಎಂಬ ಪರಿಸ್ಥಿತಿ ಜಗತ್ತಿನಲ್ಲಿ ನೂರಾರು ಪಕ್ಷಿ ಪ್ರಭೇದಗಳು ಕೆಂಪು ಪಟ್ಟಿಯಲ್ಲಿದೆ. ಈಗಲೇ ಎಚ್ಚೆತ್ತು ಅವುಗಳನ್ನು ಸಂರಕ್ಷಣೆ ಮಾಡದಿದ್ದರೆ ಮುಂದೆ ಹಕ್ಕಿಗಳನ್ನು ನೋಡಲು ಮಕ್ಕಳು ಮೃಗಾಲಯ ಅಥವಾ ಚಿತ್ರಗಳನ್ನೇ ನೋಡುವ ಪರಿಸ್ಥಿತಿ ನಿರ್ಮಾಣವಾದರೂ ಆಶ್ಚರ್ಯವಿಲ್ಲ. ಆದರೆ ಹಕ್ಕಿಗಳ ಬಗ್ಗೆ ಅನುಕಂಪ ತೋರಬೇಕಿದೆ. ಪಟ್ಟಣದಲ್ಲೂ ಗಿಡಗಳನ್ನು ನೆಟ್ಟು ಮರವಾಗಿಸಿ ಪಕ್ಷಿಗಳಿಗೆ ಸ್ವಚ್ಛಂದವಾಗಿ ಬದುಕಲು ಆಶ್ರಯ ತಾಣ ಮಾಡಬೇಕಿದೆ.
ಪ್ರಕೃತಿಯ ಸಮತೋಲನಕ್ಕೆ ಉಳಿದ ಜೀವಿಗಳು ಮಾನವನಷ್ಟೇ ಅಗತ್ಯ ಎಂಬುದು ಮರೆಯುವಂತಿಲ್ಲ. ಪಕ್ಷಿಗಳನ್ನು ಸಂರಕ್ಷಿಸಿ ಕೆಂಪು ಪಟ್ಟಿಯಲ್ಲಿರುವ ಪ್ರಭೇದಗಳನ್ನು ಉಳಿಸೋಣ. ಪಕ್ಷಿಗಳ ಬಗ್ಗೆ ಸದಾ ತಿಳಿದುಕೊಳ್ಳುತ್ತಾ ತಿಳಿಸುತ್ತಾ ರಕ್ಷಣೆ ಮಾಡಿ ಪಟ್ಟಣದಲ್ಲೂ ಹಕ್ಕಿಗಳ ಹಾರಾಟ ನೋಡುವಂತೆ ಮಾಡೋಣ. ಹಕ್ಕಿಗಳು ಕೂಡ ನಮ್ಮಂತೆ ಸ್ವಚ್ಚಂದವಾದ ಪರಿಸರದಲ್ಲಿ ಹಸಿರಿನ ಮನೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕಾದ ಕರ್ತವ್ಯ ನಮ್ಮದು.
✍ ಪ್ರಣವ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.