ಹೃದಯವನ್ನು ಮನುಷ್ಯನ ದೇಹದ ಅತ್ಯಂತ ಮುಖ್ಯ ಎಂಜಿನ್ ಎನ್ನಬಹುದು. ಒಮ್ಮೆ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದಾದಲ್ಲಿ, ಮತ್ತೆ ಮನುಷ್ಯ ಉಸಿರಾಡುತ್ತಿಲ್ಲ. ಅವನ ಬದುಕು ಮುಗಿದಿದೆ ಎಂದೇ ಅರ್ಥ. ಹೃದಯ ದೇಹದ ಎಲ್ಲಾ ಭಾಗಗಳ ಚಲನವಲನಗಳಲ್ಲಿಯೂ ಅತೀ ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ.
ಹೃದಯ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಪಂಪ್ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿಯೂ ಹೆಚ್ಚು ಪೂರಕವಾಗಿ ಸಹಾಯ ಮಾಡುತ್ತದೆ. ಆರೋಗ್ಯಪೂರ್ಣ ಹೃದಯ ಮನುಷ್ಯನನ್ನು ಆರೋಗ್ಯಯುತನಾಗಿ ಬದುಕು ನಡೆಸುವುದಕ್ಕೂ ಸಹಾಯ ಮಾಡುತ್ತದೆ. ಆದರೆ ಇತ್ತೀಚೆಗೆ ಹಲವಾರು ಕಾರಣಗಳಿಂದ ಹೃದಯಕ್ಕೆ ಸಂಬಂಧಿಸಿದಂತೆ ಬರುವ ಖಾಯಿಲೆಗಳ ಪ್ರಮಾಣ ಏರಿಕೆಯಾಗುತ್ತಿದೆ ಎಂಬುದು ದುರಂತ. ಬಾಳಿ ಬದುಕಬೇಕಾದ ಯುವ ಪೀಳಿಗೆ ಸಹ ಹೃದ್ರೋಗದಂತಹ ಗಂಭೀರ ಸಮಸ್ಯೆಗಳಿಗೆ ಸಿಲುಕುತ್ತಿರುವುದು, ಹೃದಯದ ಬಗ್ಗೆ ನಾವು ಮತ್ತಷ್ಟು ಕಾಳಜಿ ವಹಿಸಬೇಕು ಎನ್ನುವುದಕ್ಕೆ ಪ್ರಕೃತಿ ನೀಡುತ್ತಿರುವ ಎಚ್ಚರಿಕೆ ಎಂದು ಪರಿಗಣಿಸಬೇಕಾಗಿದೆ.
ನಾವು ಸೇವಿಸುವ ಆಹಾರ, ನಮ್ಮ ದೈನಂದಿನ ಬದುಕಿನ ಒತ್ತಡ, ದೇಹಕ್ಕೆ, ಮಾನಸಿಕ ಆರೋಗ್ಯಕ್ಕೆ ಮಾರಕವಾದ ಹಲವು ವಿಚಾರಗಳಿಂದ ಹೃದಯಕ್ಕೆ ಸಂಬಂಧಿಸಿದಂತಹ ಖಾಯಿಲೆಗಳು, ಹೃದಯಾಘಾತದ ಪ್ರಮಾಣ ಏರಿಕೆಯಾಗುತ್ತಿದೆ. ರಕ್ತದೊತ್ತಡ, ಕೆಟ್ಟ ಆಹಾರ ಕ್ರಮ, ದೇಹವನ್ನು ಆರೋಗ್ಯಪೂರ್ಣ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೇ ಇರುವುದು, ಮಧ್ಯಪಾನ, ಧೂಮಪಾನ ಹೀಗೆ ಹತ್ತಾರು ಕಾಲಣಗಳಿಂದ ಹೃದಯಾಘಾತ, ಹೃದಯ ಸಂಬಂಧಿ ತೊಂದರೆಗಳಿಗೆ ನಾವು ತುತ್ತಾಗಬೇಕಾಗಿ ಬರುತ್ತದೆ.
ಸಿಗರೇಟ್ನಂತಹ ಧೂಮಪಾನಗಳು ಹೃದಯ ಸಂಬಂಧಿ ಖಾಯಿಲೆಗಳಿಗೆ 90% ಗಳಷ್ಟು ಕಾರಣವಾಗಿದೆ. ಅದನ್ನು ಬಳಕೆ ಮಾಡುವವರು, ಅದರಿಂದ ಅವರ ಆರೋಗ್ಯ ಮತ್ತು ಅವರ ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗೆಗೂ ಚಿಂತನೆ ನಡೆಸಬೇಕಿದೆ. ಧೂಮಪಾನ ತ್ಯಜಿಸುವುದರಿಂದ ಹೃದಯ ಸಂಬಂಧಿ ಖಾಯಿಲೆಗಳು ತಗುಲುವ ಪ್ರಮಾಣ ಕಡಿಮೆಯಾಗುತ್ತದೆ. ದಿನಕ್ಕೆ ಒಂದೆರಡು ಸಿಗರೇಟು ಅಥವಾ ಇನ್ಯಾವುದೇ ಧೂಮಪಾನಗಳ ಸೇವನೆ ಮಾಡುವುದರಿಂದಲೂ ಅಪಾಯ ಇದ್ದೇ ಇದೆ. ಧೂಮಪಾನದ ಚಟಕ್ಕೆ ಬಿದ್ದವರು ನೋಡಲು ಆರೋಗ್ಯವಂತರಾಗಿ ಕಂಡುಬಂದರೂ, ಅವರು ನಿಜವಾದ ದೈಹಿಕ ಕ್ಷಮತೆಯನ್ನು ಹೊಂದಿರುವುದಿಲ್ಲ.
ದೈನಂದಿನ ಬದುಕಿನಲ್ಲಿ ವ್ಯಾಯಾಮ ಮಾಡುವುದನ್ನು ಅಳವಡಿಸಿಕೊಂಡಾಗಲೂ ನಾವು ಆರೋಗ್ಯಯುತ ಹೃದಯದ ಜೊತೆಗೆ, ಮಾನಸಿಕ, ದೈಹಿಕ ಸದೃಢತೆಯನ್ನು ಹೊಂದುವುದು ಸಾಧ್ಯವಾಗುತ್ತದೆ. ಇದರಿಂದ ಮಾನಸಿಕ ಉಲ್ಲಾಸದ ಜೊತೆಗೆ, ಹೃದಯದ ಕಾರ್ಯಕ್ಷಮತೆ ಸಹ ಹೆಚ್ಚಾಗುತ್ತದೆ.
ಹಾಗೆಯೇ ಮಾಂಸಾಹಾರ, ಮದ್ಯಪಾನ ಮಾಡುವವರಲ್ಲಿಯೂ ಹೃದಯ ಸಂಬಂಧಿ ಸೋಂಕುಗಳು, ಹೃದಯಾಘಾತ ಸಂಭವಿಸುವ ಪ್ರಮಾಣ ಹೆಚ್ಚು ಎಂದೇ ಹೇಳಬಹುದು. ಆದ್ದರಿಂದ ಆರೋಗ್ಯಪೂರ್ಣ ಆಹಾರ ಕ್ರಮವೂ ನಮ್ಮ ಹೃದಯದ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದಕ್ಕೆ ನಮಗೆ ಸಹಾಯ ಮಾಡುತ್ತದೆ.
ಮಕ್ಕಳಲ್ಲಿಯೂ ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥೂಲಕಾಯದ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಮಕ್ಕಳ ತೂಕ ಹೆಚ್ಚಾಗಿದ್ದರೆ ಅವರ ದೇಹದಲ್ಲಿನ ಸಕ್ಕರೆಯ ಪ್ರಮಾಣ, ಕೊಲೆಸ್ಟ್ರಾಲ್ ಪ್ರಮಾಣವನ್ನು ಸಹ ಪೋಷಕರು ಪರಿಶೀಲಿಸಬೇಕಾಗುತ್ತದೆ. ಆ ಮೂಲಕ ಅವರ ಆರೋಗ್ಯದತ್ತ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.
ಹೃದಯದ ಆರೋಗ್ಯಕ್ಕೆ ನಾವು ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಹ ಅತೀ ಮುಖ್ಯ. ಅಧಿಕ ಒತ್ತಡಕ್ಕೆ ಒಳಗಾಗದೆ ಸಮಸ್ಥಿತಿಯನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮ ಹೃದಯವನ್ನು ನಾವು ಜೋಪಾನ ಮಾಡಬಹುದು. ದೇಹಕ್ಕೆ ದಣಿವಾದಷ್ಟೇ ವಿರಾಮದ ಅಗತ್ಯ ಸಹ ಇದೆ. ದೈಹಿಕವಾಗಿ ಮಾತ್ರವಲ್ಲ, ಮಾನಸಿಕ ದಣಿವು ಸಹ ನಮ್ಮ ದೇಹದ ಆರೋಗ್ಯ, ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ವಿಶ್ರಾಂತಿ ಪಡೆಯುವುದಕ್ಕೂ ಸಹ ನಾವು ಪ್ರಾಮುಖ್ಯತೆ ನೀಡುವುದು ಅತೀ ಮುಖ್ಯ.
ಹೃದಯ ಪ್ರೀತಿಯ ಸಂಕೇತ. ಈ ವಿಶ್ವ ಹೃದಯ ದಿನದಂದು ನಮ್ಮ ನಮ್ಮ ಹೃದಯಗಳನ್ನು ಪ್ರೀತಿಸುವ ಪ್ರತಿಜ್ಞೆ ಮಾಡೋಣ. ಆಗಲೇ ಆರೋಗ್ಯಪೂರ್ಣ ಬದುಕು ನಮ್ಮದಾಗಲು ಸಾಧ್ಯ. ಪ್ರೀತಿಯ ಹೃದಯದ ಕಾಳಜಿ ನಮ್ಮ ಬದ್ಧತೆಯಾಗಲಿ. ಎಲ್ಲರಿಗೂ ವಿಶ್ವ ಹೃದಯ ದಿನದ ಶುಭಾಶಯಗಳು.
✍ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.