ಧೈರ್ಯದಲ್ಲಿ ಯಾವ ಕ್ಷತ್ರಿಯರಿಗೂ ಕಡಿಮೆಯಿಲ್ಲದ ಭಗತ್ ಸಿಂಗ್ರ ಜನ್ಮದಿನ ಇಂದು. ಮಗು ಭಗತ್ ಜನಿಸಿದ್ದು ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರರ ಕುಟುಂಬದಲ್ಲಿ. ಸ್ವಾತಂತ್ರಕ್ಕಾಗಿ ಹೋರಾಡುವುದು ಎಳೆಯ ಭಗತ್ನಿಗೆ ರಕ್ತದಿಂದಲೇ ಬಂದಿತ್ತೆಂದರೆ ಸುಳ್ಳಾಗದು. ಸರ್ದಾರ್ ಕಿಶನ್ ಸಿಂಗ್ ಮತ್ತು ವಿದ್ಯಾವತಿಯವರ 3 ನೇ ಪುತ್ರನಾಗಿ ಜನಿಸಿದ ಭಗತ್ ಜನಿಸುವ ಮೊದಲೇ ಸ್ವಾತಂತ್ರ ಸೇನಾನಿಗಳಾದ ತಂದೆ ಕಿಶನ್ ಸಿಂಗ್ ಮತ್ತು ಚಿಕ್ಕಪ್ಪಂದಿರಾದ ಸ್ವರನ್ ಸಿಂಗ್ ಮತ್ತು ಅಜಿತ್ ಸಿಂಗ್ ಜೈಲು ಸೇರಿದ್ದರು.
ಬಾಲಕ ಭಗತ್ ಜನಿಸಿದ ಸಂದರ್ಭದಲ್ಲೇ ಆತನ ತಂದೆ ಮತ್ತು ಚಿಕ್ಕಪ್ಪ ಬಿಡುಗಡೆಯಾಗಿ ಹೊರಬಂದಿದ್ದರು. ಹೀಗೆ ಜನಿಸುವಾಗ ಅದೃಷ್ಟವನ್ನು ತಂದನೆಂಬ ಕಾರಣಕ್ಕೆ ಆತನ ಅಜ್ಜ ಆತನನ್ನು ಪ್ರೀತಿಯಿಂದ ಭಗವಾನ್ ವಾಲಾ ಎಂದು ಕರೆಯಲಾರಂಭಿಸಿದರು. ಬಾಲಕ ಭಗತ್ ಸಿಂಗ್ಗೆ ತಂದೆ ಪ್ರತೀದಿನ ವೀರ ಯೋಧರ ಕತೆಗಳನ್ನು ಹೇಳುತ್ತಿದ್ದ. ಒಂದು ದಿನ ಹೀಗೆ ಕಥೆಗಳನ್ನು ಹೇಳುತ್ತಾ ಮುಂದೆ ತಂದೆ ಮತ್ತು ಹಿಂದೆ ಮಗ ಗದ್ದೆಯನ್ನು ದಾಟುತ್ತಿದ್ದರು. ಮುಂದೆ ಹೋಗಿ ನೋಡುತ್ತಾರೆ ಮಗನ ಪತ್ತೆಯಿಲ್ಲ. ಹೊಡದಾರಿಯಲ್ಲೇ ವಾಪಸ್ ಬಂದು ನೋಡುವಾಗ 3 ವರ್ಷದ ಪೋರ ಗದ್ದೆಯಲ್ಲಿ ಗುಂಡಿಗಳನ್ನು ತೊಡುತ್ತಿದ್ದ.ಯಾಕೆಂದು ಪ್ರಶ್ನಿಸಿದಾಗ ‘ಅಪ್ಪಾ ಈ ಗದ್ದೆಗಳಲ್ಲೆಲ್ಲ ಬಾಂಬ್ ಬೆಳೆಯಬೇಕು, ಅದಕ್ಕೆ ಇಲ್ಲಿ ಬಾಂಬ್ ನೆಡಲು ಗುಂಡಿಗಳನ್ನು ತೊಡುತ್ತಿದ್ದೇನೆ’ ಎಂದು ಹೇಳಿದ. ಈ ಮಾತನ್ನು ಕೇಳಿ. ಬೇರೆ ಹೆತ್ತವರಾದರೆ ನಕ್ಕು ಸುಮ್ಮನಾಗುತ್ತಿದ್ದರು ಇಲ್ಲವೇ ಹೊಡೆದು ಬುದ್ದಿ ಹೇಳುತ್ತಿದ್ದರು. ಆದರೆ ಸ್ವತಃ ಸ್ವಾತಂತ್ರ ಹೋರಾಟಗಾರರಾದ ಕಿಶನ್ ಸಿಂಗ್ ಅವನಲ್ಲಿದ್ದ ಹೋರಾಟದ ಮನೋಭಾವನೆಯನ್ನು ಪ್ರೋತ್ಸಾಹಿಸಿದ್ದರು.
1919 ಇಸವಿಯಲ್ಲಿ ನಡೆದ ಹತ್ಯಾಕಾಂಡ ಆತನ ಎಳೆಯ ಮನಸ್ಸಿನಲ್ಲಿ ದೊಡ್ಡದೊಂದು ಗಾಯವನ್ನು ನಿರ್ಮಿಸಿತ್ತು. ಶಾಲೆಯಿಂದ ನೇರವಾಗಿ ಜಲಿಯನ್ ವಾಲಾಭಾಗ್ಗೆ ತೆರಳಿ ತನ್ನ ಶಾಯಿಯ ಕರಡಿಗೆಯನ್ನು ಖಾಲಿ ಮಾಡಿ ಅದರಲ್ಲಿ ರಕ್ತಸಿಕ್ತವಾದ ಒಂದು ಮುಷ್ಟಿ ಮಣ್ಣನ್ನು ತುಂಬಿಕೊಂಡು ಬಂದು ಮನೆಯ ಪೂಜಾ ಕೊಠಡಿಯಲ್ಲಿಟ್ಟಿದ್ದ. 1922 ರಲ್ಲಿ ಗೋರಖ್ಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ನಡೆಸುತ್ತಿದ್ದ ಶಾಂತ ಮೆರವಣಿಗೆಯ ಅಮಾಯಕರ ಮೇಲೆ ಲಾಠಿ ಪ್ರಹಾರ ಮಾಡಿದಾಗ ರೊಚ್ಚಿಗೆದ್ದ ಜನ 22 ಪೊಲೀಸರನ್ನು ಠಾಣೆಯ ಒಳಗೆ ಕೂಡಿ ಹಾಕಿ ಸಜೀವವಾಗಿ ದಹಿಸಿ ಹಾಕಿದ್ದರು. ಇದರಿಂದ ಮನನೊಂದ ಗಾಂಧೀಜಿ ಅಸಹಕಾರ ಚಳುವಳಿಯಯನ್ನು ಕೈ ಬಿಟ್ಟಿದ್ದರು. ಈ ಘಟನೆಯು ಬಾಲಕ ಭಗತ್ ಸಿಂಗ್ರ ಮನದಲ್ಲಿ ಘರ್ಷಣೆಗೆ ಕಾರಣವಾಯಿತು. ಪೋಲೀಸರ ಹಿಂಸೆಗೆ ಪ್ರತಿಯಾಗಿ ಮಾತ್ರವೇ ಪ್ರತಿಭಟನಾಕಾರರು ಬೆಂಕಿಯನ್ನು ಹಚ್ಚಿದ್ದು. ಅಷ್ಟಕ್ಕೂ ಅಹಿಂಸೆಯೆಂಬುದು ಕೇವಲ ಕಾಂಗೆಸ್ಸ್ನ ಸ್ವತ್ತೇ? ಕರ್ತಾರ್ ಸಿಂಗ್ರನ್ನು ಗಲ್ಲಿಗೇರಿಸುವಾಗ ಅಹಿಂಸೆಯ ತತ್ವವೇಕಿರಲಿಲ್ಲ ಇತ್ಯಾದಿಗಳು. ಲಾಲಾ ಲಜಪತ್ ರಾಯ್ ಪ್ರಾರಂಭಿಸಿದ ನ್ಯಾಷನಲ್ ಕಾಲೇಜು ಸೇರಿದ ಬಳಿಕ ಭಗತ್ ಸಿಂಗ್ ಸಂಪೂರ್ಣ ಕ್ರಾಂತಿಕಾರಿಯಾಗಿ ಬದಲಾದ. ಕಾಲೇಜಿನ ವೇದಿಕೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸುವಾಗ ಆತ ಮಹಾರಾಣಾ ಪ್ರತಾಪ್ ಮತ್ತು ಚಂದ್ರಗುಪ್ತ ಮೌರ್ಯರ ಪಾತ್ರಗಳನ್ನೂ ನಿರ್ವಹಿಸುತ್ತಿದ್ದ.
ಮುಂದೆ ಸ್ಕಾಟ್ ಎಂಬ ಅಧಿಕಾರಿಯ ದೌರ್ಜನ್ಯದಿಂದಾಗಿ ವಯೋವೃದ್ಧರಾಗಿದ್ದ ಲಾಲಾ ಲಜಪತ್ ರಾಯ್ 18 ದಿನಗಳ ನರಳುವಿಕೆಯಿಂದ ಕೊನೆಯುಸಿರೆಳೆದರು. ಇದರಿಂದ ಕೋಪಗೊಂಡ ರಾಜ್ ಗುರು ಮತ್ತು ಭಗತ್ ಸಿಂಗ್ ಸ್ಯಾಂಡರ್ಸ್ ಅನ್ನು ಗುಂಡಿಕ್ಕಿ ಕೊಲೆಗೈದು ಪರಾರಿಯಾದರು. ಮುಂದೆ 1929 ರ ಏಪ್ರಿಲ್ 8 ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ಡಾಟ್ ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಿಸುತ್ತಾ ಸದನದೊಳಗೆ ಬಾಂಬ್ ಸ್ಪೋಟಿಸಿದರು. ಆಗ ನಡೆದ ಕೋಲಾಹಲದಲ್ಲಿ ಅವರಿಬ್ಬರೂ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಓಡಿ ತಪ್ಪಿಸಿಕೊಳ್ಳಲಿಲ್ಲ, ಬದಲಾಗಿ ತಮ್ಮ ಜೀವನವು ಮುಂದಿನ ಹೋರಾಟಗಾರರಿಗೆ ಪ್ರೋತ್ಸಾಹವನ್ನು ನೀಡಲಿ ಎಂದು ಕ್ರಾಂತಿಯ ಸಂದೇಶವನ್ನು ಸಾರಲು ಬಂಧಿತರಾದರು. 1930 ರ ಅಕ್ಟೋಬರ್ನಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರಿಗೆ ಗಲ್ಲು ಶಿಕ್ಷೆಯು ಪ್ರಕಟವಾಯಿತು. ಅದರಂತೆ 1931 ಮಾರ್ಚ್ 23 ರ ರಾತ್ರಿ 7 ಗಂಟೆ 33 ನಿಮಿಷಕ್ಕೆ ಮೂವರನ್ನೂ ಗಲ್ಲಿಗೇರಿಸಲಾಯಿತು. ಮುಖಕ್ಕೆ ಕಪ್ಪು ಬಟ್ಟೆಯನ್ನೂ ತೊಡದೆ ನಗುನಗುತ್ತಾ ಮೂವರೂ ಗಲ್ಲಿಗೇರಿದರು.
1931 ಮಾರ್ಚ್ 5 ರಂದು ಇರ್ವಿನ್ರೊಂದಿಗೆ ಅಸಹಕಾರ ಚಳುವಳಿಯನ್ನು ಕೈಬಿಡುವ ಕುರಿತಾದ ಒಪ್ಪಂದಕ್ಕೆ ಸಹಿಹಾಕಲು ಗಾಂಧೀಜಿ ಇಂಗ್ಲೆಂಡ್ಗೆ ತೆರಳಿದ್ದರು. ಭಗತ್ ಸಿಂಗ್ರನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡುವ ಎಲ್ಲಾ ಅವಕಾಶಗಳಿದ್ದರೂ ಗಾಂಧೀಜಿ ಅಂತಹಾ ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂಬುದು ಸತ್ಯ. ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ ಜೈಲಿನಲ್ಲಿ ತಮ್ಮನ್ನು ರಾಜಕೀಯ ಕೈದಿಗಳನ್ನಾಗಿ ಗೌರವದಿಂದ ನಡೆಸಿಕೊಳ್ಳಬೇಕೆಂಬ ಆಗ್ರಹವನ್ನು ಹೊಂದಿದ್ದರು. ಸಾಮಾನ್ಯ ಅಪರಾಧಿಗಳು, ರಾಜಕೀಯ ಕೈದಿಗಳನ್ನು ನೋಡಿ, ಅವರಿಗೂ ಅಂತಹುದೇ ಆಹಾರವನ್ನು ನೀಡಲಾಗುತ್ತದೆ ಎಂಬ ಕಾರಣಕ್ಕಾಗಿ ಪ್ರತಿಭಟಿಸಿದ್ದ ಭಗತ್ ಸಿಂಗ್ ಸತತ 112 ದಿನಗಳ ಕಾಲ ಉಪವಾಸವನ್ನು ಹೂಡಿದ್ದರು. ಆದರೂ ಅವರ ಚಟುವಟಿಕೆಗಳಲ್ಲಿ ಯಾವುದೇ ವ್ಯತ್ಯಾಸಗಳಿರಲಿಲ್ಲ. ತನ್ನನ್ನು ನೋಡಲು ಬಂದ ತಾಯಿಯೊಂದಿಗೆ ದೊಡ್ಡದಾಗಿ ನಗುತ್ತಾ ಮಾತನಾಡುತ್ತಿದ್ದ ಭಗತ್ ಸಿಂಗ್ ಅವರ ಗುಂಡಿಗೆಯನ್ನು ನೋಡಿ ಆಂಗ್ಲ ಪೊಲೀಸ್ ಕಾವಲುಗಾರರೂ ಅಚ್ಚರಿಯಿಂದ ಅದುರಿ ಹೋಗಿದ್ದರು.
ಸಾಮಾನ್ಯ ಅಪರಾಧಿಯಂತೆ ನೇಣು ಕುಣಿಕೆಯನ್ನೇರುವ ಮರಣದಂಡನೆಯ ಬಗ್ಗೆ ಅಸಮಾಧಾನವನ್ನು ಹೊಂದಿದ್ದ ಭಗತ್ ಸಿಂಗ್, ಹೋರಾಟಗಾರನಾದ ತಮ್ಮನ್ನು ಗುಂಡಿಟ್ಟು ಸಾಯಿಸುವಂತೆ ಮನವಿಯನ್ನೂ ಮಾಡಿದ್ದರು. ಬ್ರಿಟೀಷರು ಅದನ್ನು ಕೂಡಾ ತಿರಸ್ಕರಿಸಿದ್ದರು. 62 ವರ್ಷ ವಯಸ್ಸಿನ ತನಗಿಂತ ಜನಪ್ರಿಯನಾದ 23 ರ ಬಾಲಕನ ಮೇಲಿನ ಅಸೂಯೆಯಿಂದ ಅವನ ಗಲ್ಲುಶಿಕ್ಷೆಯನ್ನು ತಪ್ಪಿಸದಿದ್ದರೂ, ಕೊನೆಯ ಪಕ್ಷ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಬಾಲಕನೆಂಬ ಅಭಿಮಾನದೊಂದಿಗೆ ಭಗತ್ ಸಿಂಗ್ಗೆ ರಾಜಕೀಯ ಕೈದಿಯ ಅಧಿಕಾರವನ್ನಾದರೂ ಗಾಂಧೀಜಿ ದೊರಕಿಸಿಕೊಡಬಹುದಿತ್ತು. ಸಾವು ನಿಶ್ಚಯವಾಗಿದ್ದಿರುವಾಗ ಕನಿಷ್ಠ ಅವನು ಬಯಸಿದ ರೀತಿ ವೀರ ಮರಣವನ್ನಪ್ಪುವ ಒಂದು ಕೊನೆಯ ಅವಕಾಶವನ್ನು ನೀಡುವುದಕ್ಕಾದರೂ ಗಾಂಧೀಜಿ ಪ್ರಯತಿಸಬಹುದಾಗಿತ್ತು.
ಇಂದು ಕಮ್ಯುನಿಸ್ಟರು ಭಗತ್ ಸಿಂಗ್ ಕಮ್ಯುನಿಸ್ಟನಾಗಿದ್ದ. ಅವನು ಧರ್ಮದ ವಿರುದ್ಧವಾಗಿ ಗಡ್ಡ ಮತ್ತು ಕೂದಲುಗಳನ್ನು ಕತ್ತರಿಸಿದ್ದ ಎಂದು ವಾದಿಸುತ್ತಾರೆ. ಅಸಲಿಗೆ ಭಗತ್ ಸಿಂಗ್ ಮತ್ತವರ ಕುಟುಂಬವು ಮೊದಲಿನಿಂದಲೇ ಆರ್ಯ ಧರ್ಮದ ಅನುಯಾಯಿಗಳಾಗಿದ್ದರು. ಅವರೆಂದಿಗೂ ತಮ್ಮ ಧರ್ಮವನ್ನು ನಿರಾಕರಿಸಿರಲಿಲ್ಲ. ಲಾಹೋರ್ನಲ್ಲಿ ಸ್ಯಾಂಡರ್ಸ್ನನ್ನ ಗುಂಡಿಕ್ಕಿದ ಭಗತ್ ಸಿಂಗ್ ಅಲ್ಲಿಂದ ಪರಾರಿಯಾಗಿ ದೆಹಲಿಗೆ ಬರುವ ಉದ್ದೇಶದಿಂದ, ತನ್ನ ಗುರುತನ್ನು ಮರೆಮಾಚುವ ಉದ್ದೇಶದಿಂದ ತನ್ನ ಗಡ್ಡ ಮತ್ತು ಕೂದಲುಗಳನ್ನು ಕತ್ತರಿಸಿದ್ದನೇ ಹೊರತು, ತನ್ನ ಧರ್ಮವನ್ನು ಪ್ರತಿಭಟಿಸಲಲ್ಲ. ಭಗತ್ ಸಿಂಗ್ ಶುದ್ಧ ರಾಷ್ಟ್ರೀಯವಾದಿಯಾಗಿದ್ದ ಹಾಗೂ ಆತ ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ನ ಸ್ಥಾಪಕರಾದ ಸಚೀಂದ್ರನಾಥರಿಂದ ತನ್ನ ಪ್ರಥಮ ರಾಜಕೀಯ ಪಾಠಗಳನ್ನು ಪಡೆದುಕೊಂಡಿದ್ದನು. ರಾಷ್ಟ್ರೀಯ ನಿಯತಕಾಲಿಕೆಯೊಂದರ ಸಮೀಕ್ಷೆಯ ಪ್ರಕಾರ ಜನಪ್ರಿಯ ಸ್ವಾತಂತ್ರ ಹೋರಾಟಗಾರರ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಭಗತ್ ಸಿಂಗ್ ಮತ್ತು ಸುಭಾಷ್ ಚಂದ್ರ ಬೋಸ್ ಇದ್ದಾರೆ. ಗಾಂಧೀಜಿ 6 ನೇ ಸ್ಥಾನದಲ್ಲಿದ್ದರು. ಆದರೂ ನಮ್ಮದೇಶದ ದುರಾದೃಷ್ಟವೆಂದರೆ ಗಾಂಧೀಜಿ ಮತ್ತು ನೆಹರೂ ಇತಿಹಾಸದ ಪಠ್ಯಪುಸ್ತಕವನ್ನಾಳಿದರೆ, ಭಗತ್ ಸಿಂಗ್ ಕೇವಲ 1 ಪ್ಯಾರಾಗ್ರಾಫ್ಗೆ ಸೀಮಿತವಾಗಿದ್ದಾರೆ. ರಾಜ್ಯವೊಂದನ್ನಾಳುತ್ತಿದ್ದ ಕಾಂಗ್ರೆಸ್ ಸರ್ಕಾರವಂತೂ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಭಗತ್ ಸಿಂಗ್ ಒಬ್ಬ ತೀವ್ರಗಾಮಿ ಎಂದು ಪಠ್ಯಪುಸ್ತಕದಲ್ಲೇ ಪ್ರಕಟಿಸಿ ಬಿಟ್ಟಿತ್ತು. ನೂರಾರು ಕ್ರಾಂತಿಕಾರಿಗಳಿಗೆ ಆದರ್ಶವಾದ ಭಗತ್ ಸಿಂಗ್ ಇಂದಿಗೂ ನಮ್ಮೆಲ್ಲರ ಮನಸ್ಸಿನಲ್ಲೂ ಇದ್ದಾರೆ.
✍ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.