ಪ್ರ. : ಚೆನ್ನಾಗಿದ್ದೀರಾ?
ಉ. : ಚೆನ್ನಾಗಿದ್ದೀವಿ ಸರ್.
ಪ್ರ. : ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ನಿಮ್ಮ ಮನೆಯವರೆಲ್ಲರೂ ಸುರಕ್ಷಿತವಾಗಿದ್ರಿ ತಾನೇ?
ಉ. : ಹೌದು ಸರ್. ಎಲ್ಲರೂ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇವೆ.
ಪ್ರ. : ನಿಮ್ಮ ತಂದೆಯವರು ಹೇಗಿದ್ದಾರೆ?
ಉ. : ಆರೋಗ್ಯವಾಗಿದ್ದಾರೆ. (ಇಷ್ಟು ಯೋಗಕ್ಷೇಮ ವಿಚಾರಿಸಿದಾಗ ಮನಸ್ಸಿನಲ್ಲಿ ಪ್ರಸನ್ನತೆ ಮನೆ ಮಾಡಿತ್ತು)
ಪ್ರ. : ಅವರು ಇಂಥ ಉದ್ಯೋಗ ಮಾಡ್ತಾ ಇದ್ರಲ್ವಾ?
ಉ. : ಹೌದು ಸರ್.
ಪ್ರ. : ಹಾಗಿದ್ದ ಮೇಲೆ ನೀವು ಮಿಡಲ್ ಕ್ಲಾಸ್ ಫ್ಯಾಮಿಲಿ ಅಲ್ವೇ?
ಉ. : ಹೌ….ದು ಸರ್!!! (ಉತ್ತರಿಸುವಾಗ ಪ್ರಸನ್ನತೆ ಕಡಿಮೆಯಾಗಿತ್ತು, ಅಪಾಯದ ಮುನ್ಸೂಚನೆ ಸಿಕ್ಕಿತ್ತು)
ಪ್ರ. : ಈಗಲೂ ಮಿಡಲ್ ಕ್ಲಾಸ್ ಫ್ಯಾಮಿಲಿ ಅಲ್ವೇ?
ಉ. : ಹೌ……..ದು ಸರ್. (ಬೆವರಿನ ಲಕ್ಷಣ ಪ್ರಾರಂಭ)
ಪ್ರ. : ನೀವು ಭಾಜಪಾ ಸರ್ಕಾರದಲ್ಲಿ ಮಂತ್ರಿಗಳು, ಅಂದರೆ ಪೂರ್ಣ ಸಮಯ ಕೊಡುವ ಭಾಜಪಾದ ಕಾರ್ಯಕರ್ತರು, ನೀವು ಯಾವುದೇ ನೌಕರಿಯನ್ನು ಈಗ ಮಾಡ್ತಾ ಇಲ್ಲ, ಹೀಗಾಗಿ ನಿಮಗೆ ಯಾವುದೇ ಆದಾಯ ಅನ್ನೋದಿಲ್ಲ, ಮಂತ್ರಿಗಳಿಗಾಗಿ ಬರುವ ಸಂಭಾವನೆಯೇ ನಿಮ್ಮ ಆದಾಯ ಅಲ್ವೇ?
ಉ. : ಹೌ……….ದು ಸರ್.(ಬೆವರಿಳಿಯಲು ಪ್ರಾರಂಭ)
ಪ್ರ. : ಹಾಗಿದ್ದರೂನೂ ನಿಮ್ಮ ಮನೆಯಲ್ಲಿ ಇಷ್ಟು ಬೆಲೆ ಬಾಳುವ ಡೈನಿಂಗ್ ಟೇಬಲ್ ಹೇಗೆ ಬಂತು?
ಉ. : ಹಾಗೇನೂ……. ಇ…..ಲ್ಲ ಸರ್!!!!!
ಪ್ರ. : ನಿಮ್ಮ ಮನೆಯ ಡೈನಿಂಗ್ ಹಾಲ್, ಡೈನಿಂಗ್ ಟೇಬಲ್ಲಿನ ಫೋಟೋ ತೋರಿಸಲಾ?
ಉ. : ತಪ್ಪಾ….ಯ್ತು ಸರ್.
ಪ್ರ. : ನಿಮ್ಮ ಬಾತ್ ರೂಮ್ ಇಷ್ಟೊಂದು ಬೆಲೆ ಬಾಳುವ ವಸ್ತುಗಳಿಂದ ಸುಸಜ್ಜಿತ ಕೊಂಡದ್ದು ಹೇಗೆ?
ಪ್ರ. : ನೀವು ಮಿಡಲ್ ಕ್ಲಾಸ್ ಫ್ಯಾಮಿಲಿ ಅಲ್ವೇ?
ಇಲ್ಲಿಗೆ ಈ ಸಂಭಾಷಣೆಯನ್ನು ನಿಲ್ಲಿಸುತ್ತೇನೆ. ಪ್ರಾಯಶಃ ಓದುಗರಿಗೆ ಇದು ಯಾರ ನಡುವೆ ನಡೆದ ಸಂಭಾಷಣೆ ಎಂಬುವುದು ಈವರೆಗೆ ಅರ್ಥವಾಗಿರಬಹುದು. ಪ್ರಧಾನ ಮಂತ್ರಿಗಳು ಮಂತ್ರಿಯೊಬ್ಬರ ಜೊತೆಗೆ ನಡೆಸಿದ ಸಂಭಾಷಣೆಯ ಸಂಕ್ಷಿಪ್ತ ಸಾರ ಇದು. ದೇಶವನ್ನಾಳುವ ಒಬ್ಬ ಮುಖ್ಯಸ್ಥನ ಗಮನ ಇಷ್ಟು ಚಿಕ್ಕ ಸಂಗತಿಗಳ ಕಡೆಗೂ ಹರಿಯುತ್ತದೆ ಎಂದಾದರೆ ಅಂತಹ ದೇಶ ಪ್ರಗತಿ ಸಾಧಿಸುವುದರಲ್ಲಿ ಯಾವ ಸಂಶಯವೂ ಇಲ್ಲ.
ಇದೇ ಸಂದರ್ಭದಲ್ಲಿ ನನಗೆ ಇನ್ನೊಂದು ಘಟನೆಯ ನೆನಪಾಗುತ್ತಿದೆ. 1948 ರಲ್ಲಿ ‘ಜೀಪ್ ಸ್ಕ್ಯಾಂಡಲ್’ ಎಂದೇ ಪ್ರಸಿದ್ಧವಾದ ಹಗರಣ. ದೇಶದ ಮೊಟ್ಟಮೊದಲ ಬೃಹತ್ ಹಗರಣವೆಂದು ಅದು ದಾಖಲಾಯಿತು. ಇದರ ಮೊದಲ ಆರೋಪಿ ವಿ.ಕೆ. ಕೃಷ್ಣ ಮೆನನ್ ಇಂಗ್ಲೆಂಡಿನಲ್ಲಿ ಭಾರತದ ರಾಯಭಾರಿಗಳಾಗಿದ್ದರು. ಕಾನೂನಿನ ಎಲ್ಲ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ವಿದೇಶಿ ಕಂಪನಿಯೊಂದರ ಜೊತೆಗೆ ಎಂಬತ್ತು ಲಕ್ಷ ರೂಪಾಯಿಗಳ ‘ಸೇನಾ ಜೀಪ್’ ಗಳ ಖರೀದಿ ಒಪ್ಪಂದವೊಂದಕ್ಕೆ ಸಹಿ ಹಾಕಿದರು. ಸ್ವಾತಂತ್ರ್ಯ ಬಂದ ತರುಣದಲ್ಲಿ ನಡೆದ ಈ ಘಟನೆ ಇಡೀ ದೇಶವನ್ನು ಅಲುಗಾಡಿಸಿಬಿಟ್ಟಿತ್ತು. ಆಗಿನ ಗೃಹ ಮಂತ್ರಿಗಳಾದ ಗೋವಿಂದವಲ್ಲಭ ಪಂತ್ ರವರು 30 ಸೆಪ್ಟೆಂಬರ್ 1955 ರಂದು ‘ಜೀಪ್ ಸ್ಕ್ಯಾಂಡಲ್’ ಹಗರಣದ ತನಿಖೆಯನ್ನು ಮುಚ್ಚಿಹಾಕಲಾಗಿದೆ ಎಂದು ಹೇಳಿಕೆಯನ್ನು ಕೊಟ್ಟರು. ತನಿಖಾ ಸಮಿತಿಯ ನೇತೃತ್ವ ವಹಿಸಿದ್ದ ಶ್ರೀ ಅನಂತಶಯನ ಅಯ್ಯಂಗಾರ್ ರವರ ಸಲಹೆಯನ್ನೂ ತಿರಸ್ಕರಿಸಲಾಯಿತು. ಗೃಹ ಮಂತ್ರಿ ಶ್ರೀ ಗೋವಿಂದ ವಲ್ಲಭ ಪಂತ್ ರವರು ಈ ಹಗರಣವನ್ನು ಇಲ್ಲಿಗೇ ಮುಗಿಸಬೇಕೆಂಬುದು ಸರ್ಕಾರದ ತೀರ್ಮಾನವಾಗಿದೆ. ವಿರೋಧ ಪಕ್ಷಗಳು ಬಯಸಿದರೆ ಇದನ್ನು ಚುನಾವಣಾ ವಿವಾದವನ್ನಾಗಿ ಮಾಡಲು ಅಡ್ಡಿ ಇಲ್ಲ ಎಂಬ ಹೇಳಿಕೆಯನ್ನು ಕೊಟ್ಟರು.
‘ಯಥಾರಾಜಾ ತಥಾ ಪ್ರಜಾ’, ‘ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ’ ಎಂಬ ಉಕ್ತಿಯಂತೆ ಎರಡು ವಿಭಿನ್ನ ಸ್ವಭಾವದ ನೇತೃತ್ವದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಸ್ವರಾಜ್ಯ ಬಂದ ನಂತರ ನಮ್ಮ ದೇಶ ಏಕೆ ಹೀಗಾಯ್ತು? ಎಂಬುದಕ್ಕೆ ಪ್ರಾರಂಭದಲ್ಲಿಯೇ ಹಾದಿಗೆಟ್ಟ ‘ಆದರ್ಶಗಳ ಅಡಿಪಾಯ’ ಕಾರಣ ಎಂಬುದು ನಿಚ್ಚಳವಾಗುತ್ತದೆ.
ಮಂತ್ರಿಮಂಡಲದ ಸಭೆಯ ಸಂದರ್ಭದಲ್ಲಿ, ಸಂಸತ್ತು ನಡೆಯುವಾಗ ದ್ವಾರಗಳು ಸಮಯಕ್ಕೆ ಸರಿಯಾಗಿ ಮುಚ್ಚಲ್ಪಡುತ್ತವೆ. ಸ್ವಲ್ಪ ತಡವಾದರೂ ಸಂಬಂಧಪಟ್ಟವರು ಒಳ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಸಮಯಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು, ಭ್ರಷ್ಟಾಚಾರದ ನಿಯಂತ್ರಣಕ್ಕೆ ಪರಿಣಾಮಕಾರಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದು – ಇವೆಲ್ಲವೂ ಮೋದಿಯವರ ನೇತೃತ್ವದ ಶುದ್ಧ ಸಂಕಲ್ಪದ ಪರಿಣಾಮವಾಗಿ ಕಂಡುಬರುತ್ತಿರುವ ಸಕಾರಾತ್ಮಕ ಬದಲಾವಣೆಗಳು. ಒಂದು ರಾಜಕೀಯ ಪಕ್ಷವಾಗಿ ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಜನಪ್ರಿಯ ನಿರ್ಣಯಗಳನ್ನು ತೆಗೆದುಕೊಳ್ಳುವುದು ಆಶ್ಚರ್ಯಕರವೇನಲ್ಲ. ಆದರೆ ಜನಪ್ರಿಯವಲ್ಲದ ದೇಶದ ಹಿತವನ್ನು ಕಾಪಾಡುವ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಲು ಎಂಟೆದೆ ಬೇಕಾಗುತ್ತದೆ. ಈ ಎಂಟೆದೆ ಇದೆ ಎಂಬುದನ್ನು ಸಾರ್ಥಕವಾಗಿ ಸಾಬೀತುಪಡಿಸುತ್ತಿರುವ ಶ್ರೇಯಸ್ಸು ಮೋದಿಜೀಯವರಿಗೆ ಸಲ್ಲಬೇಕು. ಸಿ. ಎ. ಎ. ಕಾನೂನು ಜಾರಿ, 370ನೇ ವಿಧಿಯ ರದ್ದತಿ, ರಾಮಮಂದಿರದ ವಿಷಯದ ಇತ್ಯರ್ಥ, ಮಂದಿರಕ್ಕಾಗಿ ನಡೆದ ಭೂಮಿ ಪೂಜೆ, ಅಮಾನುಷ ಆಚರಣೆಯ ಸ್ವರೂಪ ಹೊಂದಿದ್ದ ಟ್ರಿಪಲ್ ತಲಾಕ್ ರದ್ದತಿ, ರೈತರನ್ನು ಸಶಕ್ತಗೊಳಿಸಲು 9 ಕೋಟಿ 50 ಲಕ್ಷ ರೈತರ ಖಾತೆಗೆ 72000 ಕೋಟಿ ರೂಪಾಯಿಗಳ ಜಮಾ, ದೇಶ ಕಟ್ಟುವಲ್ಲಿ ನಮ್ಮ ಪಾತ್ರವೂ ಇದೆ ಎಂಬ ಭಾವ ಜನತೆಯಲ್ಲಿ ಮೂಡಿಸಿದ್ದು ಇತ್ಯಾದಿ ಎಲ್ಲವೂ ಎಂಟೆದೆಯ ಪರಿಣಾಮಗಳೇ.
ಕೋವಿಡ್ ಸಮಯದಲ್ಲಿ ಮೋದಿಜೀಯವರು ದೇಶವನ್ನು ಮುನ್ನಡೆಸಿದ್ದು, ಜಗತ್ತಿಗೆ ಮಾದರಿಯಾಗಿ, ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾಯಿತು. 80 ಕೋಟಿ ಜನ ಮೊದಲ ಡೋಸ್ ವ್ಯಾಕ್ಸಿನ್ ಪಡೆಯುವಂತಾಗಿರುವುದು ಜಗತ್ತಿನ ಮಹಾ ಅಭಿಯಾನದ ಯಶಸ್ವೀ ನಿರ್ವಹಣೆ ಎಂದೇ ಹೇಳಬಹುದು. ಕೊರೊನಾ ಮಹಾಮಾರಿಯ ವಿರುದ್ಧದ ಸೆಣಸಾಟದಲ್ಲಿ ಭಾರತ ಜಗತ್ತಿಗೆ ಮಾದರಿಯಾದಂತೆ ಆರ್ಥಿಕ ಪುನರುತ್ಥಾನದಲ್ಲಿಯೂ ಜಗತ್ತಿಗೆ ಮಾದರಿಯಾಗುವ ಲಕ್ಷಣಗಳನ್ನು ತೋರಿಸುತ್ತಿರುವುದು ಜಾಗತಿಕ ಚರ್ಚೆಯ ವಿಷಯವಾಗಿದೆ. ಈ ಕಾರಣದಿಂದಾಗಿಯೇ ಮೋದಿಜಿಯವರು ಕೊಡಮಾಡಿರುವ ‘ಆತ್ಮನಿರ್ಭರ ಭಾರತ’ ದ ಚಿಂತನೆ ದೇಶದಲ್ಲಿ ಒಂದು ಹೊಸ ಬದಲಾವಣೆಗೆ ನಾಂದಿ ಹಾಡಿದೆ.
ಎಲ್ಲ ಉತ್ತಮ ಬದಲಾವಣೆಗಳಿಗೆ ಕಳಶವಿಟ್ಟಂತೆ ಹೊರತಂದಿರುವ ‘ರಾಷ್ಟ್ರಿಯ ಶಿಕ್ಷಣ ನೀತಿ’ ಯು ಬರಲಿರುವ ದಶಕಗಳಲ್ಲಿ ಭಾರತದ ಚಿತ್ರವನ್ನು ಬದಲಾಯಿಸಲಿದೆ. ನೌಕರರನ್ನು ತಯಾರುಮಾಡುವ ಏಕಮೇವ ಉದ್ದೇಶವನ್ನು ಹೊಂದಿದ್ದ, 185 ವರ್ಷಗಳಿಂದ ಭಾರತವನ್ನು ತಪ್ಪುಹಾದಿಯಲ್ಲಿ ಬಹುದೂರದವರೆಗೆ ಕೊಂಡೊಯ್ದಿದ್ದ, ಮೆಕಾಲೆ ಶಿಕ್ಷಣ ನೀತಿಗೆ ಅಂತಿಮ ವಿದಾಯವನ್ನು ಹೇಳಲಾಗಿದೆ. ಸಂಪೂರ್ಣ ಶಿಕ್ಷಣ ವ್ಯವಸ್ಥೆಯನ್ನು ‘ಶಿಕ್ಷಕ ಕೇಂದ್ರಿತ’ ದಿಂದ ‘ವಿದ್ಯಾರ್ಥಿ ಕೇಂದ್ರಿತ’ ವನ್ನಾಗಿ ಮಾಡಲಾಗಿದೆ. ಶಿಕ್ಷಣ ಕ್ಷೇತ್ರದ ಬಹುದೊಡ್ಡ ಕ್ರಾಂತಿ ಇದು. ಭಯಮುಕ್ತ, ಸ್ಪರ್ಧಾ ರಹಿತ, ಒತ್ತಡರಹಿತ, ದ್ವೇಷ-ಮತ್ಸರಗಳಿಂದ ಮುಕ್ತ ಆನಂದದಾಯಿ ಶಿಕ್ಷಣ ವ್ಯವಸ್ಥೆಗೆ ಬೇಕಾಗಿರುವ ಎಲ್ಲವನ್ನೂ ಈ ನೀತಿಯು ತನ್ನ ಗರ್ಭದಲ್ಲಿರಿಸಿಕೊಂಡಿದೆ. ಕೌಶಲ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದಲೇ ಅಳವಡಿಸಿರುವುದರಿಂದ ಬರುವ ದಶಕಗಳಲ್ಲಿ ಭಾರತ ನಿರುದ್ಯೋಗ ಸಮಸ್ಯೆಗೆ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಳ್ಳಲಿದೆ. ಇದು GDP ಯ ಏರುಮುಖದ ಬೆಳವಣಿಗೆ ಕಾರಣವಾಗಿ ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಮೇಲೇಳಲಿದೆ. ಬರಲಿರುವ ದಶಕಗಳಲ್ಲಿ ಈ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮವಾಗಿ ಜಗತ್ತಿನ ಹತ್ತು ಹಲವು ದೇಶಗಳ ಜನ ಮನುಷ್ಯ ನಿರ್ಮಾಣದ ಶಿಕ್ಷಣಕ್ಕಾಗಿ ಭಾರತಕ್ಕೆ ಬರಲು ಧಾವಂತ ಪಡುವ ದೃಶ್ಯ ಸಾಮಾನ್ಯವಾಗಲಿದೆ. ಭಾರತದ ಅನ್ನವನ್ನೇ ತಿಂದು ಭಾರತದ್ದೇ ಗಾಳಿ ಕುಡಿದು, ಭಾರತದ ನೆಲದಲ್ಲೇ ವಾಸಿಸುತ್ತ ಭಾರತವನ್ನು ವಿರೋಧಿಸುವ, ಭಾರತವನ್ನು ಒಡೆಯಲು ಪ್ರಯತ್ನಿಸುವ ‘ಮಹಾನುಭಾವರಿಗೂ’ ಸಹ ಇದನ್ನು ವಿರೋಧಿಸಲು ಕಾರಣಗಳು ಸಿಗಲಿಲ್ಲವೆಂದಾದರೆ ಇದೆಷ್ಟು ಆಲ್ ಪ್ರೂಫ್ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಹುದು. ಇದು ಎಂಟೆದೆಯ ಪರಿಣಾಮವೇ.
ದೂರದೃಷ್ಟಿ, ಸಂಯಮ, ಕಠೋರ ಶಿಸ್ತು, ಅದ್ವಿತೀಯ ಸಂವೇದನೆ, ಅದ್ಭುತವಾದ ಮನುಷ್ಯ- ಪರಿಸ್ಥಿತಿ ನಿರ್ವಹಣಾ ಶಕ್ತಿ, ಅಪಾರ ಪರಿಶ್ರಮ, ಪಾರದರ್ಶಕತೆ ಇವೆಲ್ಲವೂ ಮೋದಿ ಜೀಯವರ ವಿಶೇಷತೆಗಳೇ. ಉದಾತ್ತ ಧ್ಯೇಯವನ್ನು ಕಣ್ಣ ಮುಂದಿಟ್ಟುಕೊಂಡು ಬದುಕಿದ್ದಾಗ ಮತ್ತು ಆ ಧ್ಯೇಯವನ್ನು ತಲುಪಲು ಸರ್ವಸ್ವನ್ನು ಆಹುತಿ ನೀಡಲು ಮುಂದಾದಾಗ ಈ ಎಲ್ಲ ಸದ್ಗುಣ ವಿಶೇಷತೆಗಳು ಒಬ್ಬನಲ್ಲಿ ದಂಡಿಯಾಗಿ ನಿರ್ಮಾಣವಾಗುತ್ತವೆ. ಮನುಷ್ಯನೆಂದಾದ ಮೇಲೆ ತಪ್ಪುಗಳು ಕಂಡುಬರಬಹುದು. ಇದರಲ್ಲಿ ಆಶ್ಚರ್ಯವೇನಲ್ಲ. ಆದರೆ ಜಾರುವ ಜಾಗದಲ್ಲಿದ್ದು ಜಾರದಂತೆ ಇರುವುದು ವಿಶೇಷವೇ.
ಪ್ರಸಿದ್ಧಿಯ ತುತ್ತ ತುದಿಗೆ ಏರಿದರೂ ಸಹ ಬರೋಡಾದ ಒಬ್ಬ ತನ್ನ ಹಿಂದಿನ ಒಡನಾಡಿ ಧಾರವಾಡದ ಶಿವಾನಂದ ದೇಸಾಯಿಯವರನ್ನು ಹಿಂದಿನ ಅದೇ ಆತ್ಮೀಯತೆಯಿಂದ ಸ್ವಾಗತಿಸಿ ಅರ್ಧ ಗಂಟೆಯವರೆಗೂ ಫೋನ್ ಬಳಸದೆ, ಮನೆ-ಮನಸ್ಸಿನ ವಿಷಯಗಳನ್ನೆಲ್ಲ ಮಾತನಾಡಿಸಿದ್ದು, ತನ್ನ ಕಚೇರಿಯ ಮತ್ತು ಹೊರಗಿನ ಸಾವಿರಾರು ಅಧಿಕಾರಿ, ಕಾರ್ಯಕರ್ತರ ಕಾಳಜಿ ವಹಿಸುವುದು, ಬರುವ ಇಪ್ಪತ್ತೈದು ವರ್ಷಗಳಲ್ಲಿ ಆಡಳಿತದ ಸುಧಾರಣೆ ಹೇಗಾಗಬೇಕು ಮತ್ತು ಹೊಸ ನೇತೃತ್ವದ ನಿರ್ಮಾಣ, ವಿಕಾಸ ಇತ್ಯಾದಿಗಳ ಕುರಿತು ಹತ್ತಾರು ಗಂಟೆಗಳ ಕಾಲ ಸಣ್ಣ ತಂಡದೊಂದಿಗೆ ನಿರಂತರ ಚರ್ಚೆ,ಯೋಜನೆ ಮತ್ತು ಅದರ ಕ್ರಿಯಾನ್ವಯನ, ದಿನದಲ್ಲಿ 4-5 ಗಂಟೆಗಳಷ್ಟೇ ಮಲಗಿ 68 ನೇ ವಯಸ್ಸಿನಲ್ಲಿ ಯುವಕರನ್ನು ನಾಚಿಸುವಂತೆ ಕ್ರಿಯಾಶೀಲರಾಗಿರುವುದು ಮತ್ತು ಇಷ್ಟೆಲ್ಲ ಮಾಡಿಯೂ ಕಳೆದ ಆರು ವರ್ಷಗಳಿಂದ ಸಣ್ಣ ನೆಗಡಿ,ಕೆಮ್ಮು, ಜ್ವರ ಮಾತ್ರವಲ್ಲ ಕೊರೊನಾ ದಿಂದಲೂ ಸುರಕ್ಷಿತವಾಗಿರುವುದು ಎಲ್ಲವೂ ಸಾಧನೆಗಳೇ ಅಲ್ಲವೇ!!!
ಡೈನಿಂಗ್ ಟೇಬಲ್ ಹೇಗಿದೆ ಎಂಬುದನ್ನೂ ಗಮನಿಸುತ್ತ, ಕಟುತೆ ಇಲ್ಲದ ಎಚ್ಚರಿಕೆ ನೀಡುತ್ತ, ಅಗತ್ಯ ಎನಿಸಿದರೆ ಕಠೋರ ನಿರ್ಣಯಕ್ಕೂ ಹೇಸದ ಛಾತಿಯಲ್ಲೂ ಎಂಟೆದೆಯನ್ನು ಕಾಣಬಹುದು. ಭಾರತದ ಹಿತವನ್ನು ಕಾಪಾಡಿಕೊಳ್ಳುತ್ತ, ಹತ್ತು ಹಲವು ದೇಶಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳುವುದು, ಸ್ನೇಹದ ಜೊತೆಗೆ ಸಮರಕ್ಕೂ ಸಿದ್ಧವಾಗಿರುವುದು, ಶತ್ರು ದೇಶದೊಳಗೂ ನುಗ್ಗಿ ಆಕ್ರಮಣ ಮಾಡಿ ಅದನ್ನು ದಕ್ಕಿಸಿಕೊಳ್ಳುವುದು, ಇದಂ ಬ್ರಾಹ್ಮಮ್, ಇದಂ ಕ್ಷಾತ್ರಮ್ ನ ಸ್ಪಷ್ಟ ಲಕ್ಷಣಗಳೇ ಆಗಿವೆ.
ಗೀತೆಯಲ್ಲಿ ಕೃಷ್ಣನ ನಾಲ್ಕನೇ ಅಧ್ಯಾಯದ ಮೊದಲೆರಡು ಶ್ಲೋಕಗಳ ಕುರಿತ ಭಾಷ್ಯದಲ್ಲಿ ತುಂಬಾ ಜನ ಮಹಿಮರು ಹೇಳಿರುವ ಸಂಗತಿ ಎಂದರೆ ಹಿಂದೆ ಭಾರತದಲ್ಲಿ ರಾಜರಾಗುವವರು ಕರ್ಮಯೋಗವನ್ನು ಪಾಲಿಸುವವರಾಗಿರಬೇಕು ಎಂಬುದೇ ನಿಯಮವಾಗಿತ್ತು. ಅಥವಾ ಕರ್ಮಯೋಗ ಪಾಲಿಸುವವರು ಮಾತ್ರ ರಾಜರಾಗಬಹುದಿತ್ತು. ರಾಜನಾದವನು ತನ್ನ ಉಪಜೀವನಕ್ಕಾಗಿ ಯಾವುದಾದರೂ ಹೆಚ್ಚು ಸಮಯ ಅಗತ್ಯವಿರದ ಒಂದು ಉದ್ಯೋಗವನ್ನು ಮಾಡಿಕೊಂಡಿರಬೇಕು. ‘ರಾಜಧನ’ದ ಬಳಕೆಯನ್ನು ಸ್ವಂತಕ್ಕೆ ಮಾಡಿಕೊಳ್ಳಬಾರದು ಎಂಬ ಕಟ್ಟುನಿಟ್ಟಿನ ನಿಯಮವನ್ನು ಪಾಲಿಸಬೇಕಾಗಿತ್ತು.
ಈಗ ಹಾಗೆ ಕಾಣುತ್ತಿಲ್ಲವೇ!!! ‘ಬಲವಾದ ಆಧ್ಯಾತ್ಮಿಕ ತಳಹದಿ’, ‘ಕಣ್ಣ ಮುಂದೆ ಒಂದು ಉದಾತ್ತ ಧ್ಯೇಯ-ಉನ್ನತ ಆದರ್ಶ’, ‘ಆದರ್ಶದ ಪಾಲನೆಗೆ ಕಠೋರ ತಪ’ ಈ ಮೂರರ ತ್ರಿವೇಣಿ ಸಂಗಮದಿಂದ ಮಾತ್ರ ಇಂಥ ಸ್ಥಾನಕ್ಕೆ ಮತ್ತು ಈ ಎತ್ತರಕ್ಕೆ ಏರಬಹುದು.
ಶ್ರೀ ನರೇಂದ್ರ ದಾಮೋದರದಾಸ್ ಮೋದಿಯವರಿಗೆ ದೇವರು ಇನ್ನಷ್ಟು ಆಯುಷ್ಯ, ಆರೋಗ್ಯಗಳನ್ನು ಕೊಡಲಿ ಮತ್ತು ಅವರ ನೇತೃತ್ವದಲ್ಲಿ ನಮ್ಮೆಲ್ಲರ ವಿವೇಕ ಮತ್ತು ಪುರುಷಾರ್ಥದಿಂದ ಭಾರತ ಪೂರ್ಣ ಪ್ರಮಾಣದಲ್ಲಿ ವಿಶ್ವಗುರುವಾಗುವುದನ್ನು ಸಾರ್ಥಕಗೊಳಿಸೋಣ.
ಭಾರತ್ ಮಾತಾ ಕಿ ಜಯ್.
✍️ ಶಂಕರಾನಂದ
ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ
ಭಾರತೀಯ ಶಿಕ್ಷಣ ಮಂಡಲ, ನವದೆಹಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.