ಪ್ರತಿವರ್ಷ ಸೆಪ್ಟೆಂಬರ್ 11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಆಚರಣೆ ಮಾಡಲಾಗುತ್ತದೆ. ಭಾರತದ ಅರಣ್ಯಗಳು, ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಬಲಿಕೊಟ್ಟ ವೀರರ ತ್ಯಾಗವನ್ನು ಸ್ಮರಿಸುವ ಸಲುವಾಗಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. 2013ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧಿಕೃತ ಘೋಷಣೆಯ ಬಳಿಕ ಪ್ರತಿವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ಸಪ್ಟೆಂಬರ್ 11ನ್ನೇ ಯಾಕೆ ಈ ದಿನವನ್ನು ಆಚರಿಸಲು ಆಯ್ಕೆ ಮಾಡಲಾಯಿತು ಎಂಬುದಕ್ಕೂ ಒಂದು ಬಲವಾದ ಕಾರಣ ಇದೆ. 1730ರ ಸೆಪ್ಟೆಂಬರ್ 11ರಂದು ಖೆಜರ್ಲಿ ನರಮೇಧ ಸಂಭವಿಸಿತ್ತು. ರಾಜಸ್ಥಾನದ ಅಂದಿನ ರಾಜ ಮಹಾರಾಜ ಅಭಯ್ ಸಿಂಗ್ ಆದೇಶದ ಮೇರೆಗೆ ಜನರು ಖೆಜರ್ಲಿ ಮರವನ್ನು ಕಡಿಯಲು ಆರಂಭಿಸಿದರು. ರಾಜಸ್ಥಾನದ ಖೆಜರ್ಲಿ ಗ್ರಾಮದ ಬಿಷ್ಣೊಯ್ ಸಮುದಾಯದ ಜನರಿಗೆ ಈ ಮರ ಅತ್ಯಂತ ಪವಿತ್ರವಾಗಿತ್ತು.
ಜನಪದದ ಪ್ರಕಾರ ಈ ಮರಗಳ ಹತ್ಯಾಕಾಂಡವನ್ನು ವಿರೋಧಿಸಿದ ಅಮೃತಾದೇವಿ ಎಂಬ ಮಹಿಳೆಯ ತಲೆಯನ್ನು ಕಡಿಯಲಾಯಿತು, ಅಲ್ಲದೆ ಆಕೆಯ ಮಕ್ಕಳು ಸೇರಿದಂತೆ ರಾಜನ ಆದೇಶವನ್ನು ವಿರೋಧಿಸಿದ ಸುಮಾರು 350 ಜನರ ನರಮೇಧ ಮಾಡಲಾಯಿತು. ಘಟನೆ ಸಂಭವಿಸಿದ ಬಳಿಕ ರಾಜ ತನ್ನ ಜನರಿಗೆ ಹಿಂದಿರುಗುವಂತೆ ಆದೇಶ ನೀಡಿದ ಮತ್ತು ಎಸಗಿದ ತಪ್ಪಿಗಾಗಿ ಕ್ಷಮಾಪಣೆಯನ್ನು ಕೇಳಿದ.
ಈ ಕರಾಳ ಘಟನೆಯ ಸ್ಮರಣಾರ್ಥ ದೇಶದಾದ್ಯಂತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಮತ್ತು ಅರಣ್ಯ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸಲಾಗುತ್ತದೆ. ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಅರಣ್ಯ ಸಂರಕ್ಷಣೆಯಲ್ಲಿ ತೊಡಗುವಂತೆ ಮಕ್ಕಳನ್ನು ಉತ್ತೇಜಿಸಲಾಗುತ್ತದೆ. ಕೊರೋನಾ ಸಾಂಕ್ರಾಮಿಕ ಸಂಭವಿಸಿದ ಬಳಿಕ ಎಲ್ಲಾ ಕಾರ್ಯಕ್ರಮಗಳಂತೆ ಈ ಬಾರಿ ಅರಣ್ಯ ಹುತಾತ್ಮರ ದಿನಾಚರಣೆ ಕೂಡ ವರ್ಚುವಲ್ ರೂಪದಲ್ಲಿ ನಡೆಯುತ್ತಿದೆ.
ಭಾರತದಲ್ಲಿ ಈಗಲೂ ಕಾಡುಗಳ್ಳರು ಅಮೂಲ್ಯ ಮರಗಳು ಮತ್ತು ವನ್ಯಜೀವಿಗಳ ಪಾಲಿಗೆ ಯಮಕಿಂಕರರಾಗುತ್ತಿದ್ದಾರೆ. ಅರಣ್ಯಗಳ ಅಮೂಲ್ಯ ವಸ್ತುಗಳನ್ನು ಸಂರಕ್ಷಣೆ ಮಾಡುವಲ್ಲಿ ನಮ್ಮ ವ್ಯವಸ್ಥೆಗಳು ಕೂಡ ವಿಫಲವಾಗುತ್ತಿವೆ. ಮಾನವನ ಅತಿಯಾಸೆ ನಮ್ಮ ಅರಣ್ಯಗಳನ್ನು ಅವಸಾನದತ್ತ ಕೊಂಡೊಯ್ಯುತ್ತಿದೆ. ಇಂತಹ ಸಂದರ್ಭದಲ್ಲೂ ಕೆಲವರು ವನ್ಯಜೀವಿಗಳ ಮತ್ತು ಅರಣ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕರು ತಮ್ಮ ಸೇವೆಯ ಸಂದರ್ಭದಲ್ಲಿ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಅಂತಹ ವೀರರಿಗೆ ಅರಣ್ಯ ಹುತಾತ್ಮರ ದಿನಾಚರಣೆ ಗೌರವ ಸಲ್ಲಿಸುವ ದಿನವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.