ಬೆಳಗ್ಗೆ ಆಗುತ್ತಿದ್ದಂತೆ ಎದ್ದು ಮನೆ ಮುಂದೆ ಹೋಗಿ ನೋಡಿದರೆ ವಾರ್ತಾ ಪತ್ರಿಕೆ ಬಿದ್ದಿರುತ್ತದೆ. ಸಣ್ಣ ಮಗುವಿನ ಕಣ್ಣಿಗೆ ಇದು ಎಲ್ಲಿಂದ ಬಂತು, ಯಾರು ಹಾಕಿದರು ಎಂಬ ಗಾಢವಾದ ಕುತೂಹಲ. ಮೇಲಿಂದ ಕೆಳಕ್ಕೆ ಬಿತ್ತ ಅಥವಾ ನಿನ್ನೆ ರಾತ್ರಿಯೇ ಯಾರಾದರೂ ಹಾಕಿದರ? ದೇವರೇ ಕೊಟ್ಟನ? ಇಂತಹ ನೂರಾರು ಪ್ರಶ್ನೆಗಳು ಕೆಲವೊಮ್ಮೆ ಮಗುವಿಗೆ ಹುಟ್ಟುತ್ತವೆ. ಮಾತ್ರವಲ್ಲ ಕೆಲವೊಮ್ಮೆ ದೊಡ್ಡವರಿಗೂ ಯಾರು ಪತ್ರಿಕೆ ಹಾಕುತ್ತಾರೆ ಎಂಬ ಅರಿವು ಸಹ ಇರುವುದಿಲ್ಲ.
ಆದರೆ ಎಂತಹದೇ ಕಷ್ಟದ ಪರಿಸ್ಥಿತಿ ಇದ್ದರೂ ಮಳೆ, ಚಳಿ, ಗಾಳಿ ಅವೆಲ್ಲವನ್ನೂ ಲೆಕ್ಕಿಸದೆ, ವಿವಿಧ ಪತ್ರಿಕೆಗಳನ್ನು ಚೀಲದಲ್ಲಿ ತುಂಬಿಸಿ ಸೈಕಲ್ ಅಥವಾ ಬೈಕ್, ಏನು ಇಲ್ಲದಿದ್ದರೆ ಕೊನೆಗೆ ಕಾಲ್ನಡಿಗೆಯಲ್ಲಿ ಮನೆ ಮನೆಗೆ ಬೆಳಗ್ಗೆ ಎಲ್ಲಾರೂ ಏಳುವ ಮುಂಚೆಯೇ ತನ್ನ ಕೆಲಸವನ್ನು ಪೂರ್ಣಗೊಳಿಸಲು ತವಕದಿಂದ ಓಡುತ್ತಿರುವ ಪತ್ರಿಕಾ ವಿತರಕರೆ ಈ ಲೇಖನದ ಮುಖ್ಯ ನಾಯಕರು.
ನಾವು ಮುಂಜಾನೆ ಬೇಗ ಏಳಲು ಕಷ್ಟಪಡುತ್ತ, ಕೆಲವೊಮ್ಮೆ ಎದ್ದರು ಮತ್ತೆ ಮಲಗುವ ಸಮಯದಲ್ಲಿ ಪತ್ರಿಕಾ ವಿತರಕರು ಇನ್ನೂ ಸರಿಯಾಗಿ ಬೆಳಕು ಹರಿಯದ ಹೊತ್ತಿನಲ್ಲೇ ಎದ್ದು ಚಳಿಯಂತೂ ವಿಪರಿತ ಇರುವಾಗ ಹೋಗಿ ಪತ್ರಿಕೆಗಳನ್ನು ಸಂಗ್ರಹಿಸಿ, ಹೇಗೋ ಮಾಡಿ ಮಳೆ ಇದ್ದರೂ ಒದ್ದೆಯಾಗದಂತೆ ನೋಡಿಕೊಂಡು ಕೆಲವೊಮ್ಮೆ ಮರುದಿನ ಮನೆಯ ಯಜಮಾನ ಪತ್ರಿಕೆ ಒದ್ದೆಯಾಗಿದೆ ಎಂದು ಬೈದರೂ ಅದನ್ನು ಸಹಿಸಿಕೊಂಡು, ಮತ್ತೆ ಮರುದಿನ ಅದೇ ಪ್ರೀತಿಯಿಂದ ಮನೆ ಮನೆಗೆ ಪತ್ರಿಕೆ ಹಾಕುವ ವಿಶೇಷ ವ್ಯಕ್ತಿಗಳು ಪತ್ರಿಕಾ ವಿತರಕರು. ಆಯುರ್ವೇದದ ಪ್ರಕಾರ
ಮುಂಜಾನೆ ಸೂರ್ಯೋದಯಕ್ಕಿಂತ 1 ಗಂಟೆ 36 ನಿಮಿಷಗಳ ಮುಂಚೆ ಬ್ರಹ್ಮ ಮೂಹೂರ್ತದಲ್ಲಿ ಏಳುವುದು ಆರೋಗ್ಯಕ್ಕೆ ಉತ್ತಮ. ಇದನ್ನು ಚಾಚೂ ತಪ್ಪದೇ ಪಾಲಿಸುತ್ತಿರುವವರು ಪತ್ರಿಕಾ ವಿತರಕರು.
ಹಾಗಾಗಿ ಅವರಿಗೆ ಒಳ್ಳೆಯ ಆರೋಗ್ಯವು ಕಾಪಾಡಿಕೊಳ್ಳಲು ಸಹ ಸಾಧ್ಯವಾಗಿದೆ.
ಒಂದು ದಿನ ಪತ್ರಿಕೆ ಮನೆ ಸೇರಲಿಲ್ಲ ಎಂದರೆ ಯಜಮಾನನಿಗೆ ತಳಮಳ. ಕೋಪದಿಂದ ಬೈಯಲು ಪ್ರಾರಂಭಿಸುತ್ತಾನೆ. ಆಗೆಲ್ಲ ಪತ್ರಿಕ ವಿತರಕರ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ಕೆಲವು ವ್ಯಕ್ತಿಗಳು ಸ್ವಲ್ಪ ತಡವಾದರೂ ಬೈಯುವವರಿದ್ದಾರೆ. ಇಷ್ಟೆಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡು ಮತ್ತೆ ಮರುದಿನ ತಮ್ಮ ಕಷ್ಟವನ್ನು ಹೇಳಿದೆ ಅದಷ್ಟು ಬೇಗ ಬಂದು ಪತ್ರಿಕೆ ಹಾಕುವ ಪತ್ರಿಕೆ ವಿತರಕರನ್ನು ನಾವು ಗೌರವಿಸಲೇ ಬೇಕು.
ಕೆಲವೊಮ್ಮೆ ಒಂದೊಂದು ಮನೆಯವರು ತಮ್ಮಿಷ್ಟದ ಯಾವುದೋ ಬೇರೊಂದು ಪತ್ರಿಕೆ ಹಾಕಲು ಹೇಳಿರುತ್ತಾರೆ. ಅದನ್ನೆಲ್ಲ ನೆನಪಿಟ್ಟು ಯಾವ ಮನೆ, ಯಾವ ಪತ್ರಿಕೆ ತಲುಪಬೇಕೆಂದು ತಿಳಿದು ಸರಿಯಾಗಿ ಹಾಕುತ್ತಾ ಹೋಗುವಾಗ ಅವರ ನೆನಪಿನ ಶಕ್ತಿಗೂ ಅಚ್ಚರಿ ಪಡಲೇ ಬೇಕು. ಅಷ್ಟೇ ಅಲ್ಲದೆ ಯಾವುದೇ ಪತ್ರಿಕೆಯಾಗಲಿ ವಿಷಯಗಳನ್ನು ತುಂಬಿ ಮುದ್ರಣ ಆದ ನಂತರ ಸರಿಯಾದ ಓದುಗರನ್ನು ತಲುಪದಿದ್ದರೆ ಅದರೊಳಗಿನ ವಿಷಯವೂ ವ್ಯರ್ಥವಾಗುತ್ತದೆ. ಹಾಗಾಗಿ ಸರಿಯಾಗಿ ಓದುಗರನ್ನು ತಲುಪಬೇಕಾದರೆ ಪತ್ರಿಕ ವಿತರಕರ ಶ್ರಮ ಬಹಳ ಪ್ರಮುಖವಾದದ್ದು. ಅವರು ಮನೆಗಳೊಂದಿಗೆ, ಅಂಗಡಿಗಳೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಪತ್ರದಿನ ತಪ್ಪದೇ ಕೊರೋನ ಲಾಕ್ ಡೌನ್ ಇದ್ದರೂ ಯಾವುದೇ ರಜೆ ಹಾಕದೆ ಸದಾ ಪತ್ರಿಕೆ ಹಾಕುವ ಅವರ ಕೆಲಸ ಗೌರವಯುತವಾಗಿದೆ. ಪತ್ರಿಕೆ ಕೊಂಡುಕೊಳ್ಳುವ ಅನೇಕರಿಗೆ ಪತ್ರಿಕ ವಿತರಕರ ಹೆಸರು ತಿಳಿದಿರುವುದಿಲ್ಲ.
ಇಂದು ಪತ್ರಿಕ ವಿತರಕರ ದಿನ. ಈ ದಿನದಂದು ಅವರನ್ನು ನೆನಪಿಸಿಕೊಂಡು ಒಮ್ಮೆಯಾದರೂ ಎಲ್ಲರೂ ನಮ್ಮ ನಮ್ಮ ಮನೆಗೆ ಬರುವ ಪತ್ರಿಕ ವಿತರಕರನ್ನು ಮಾತನಾಡಿಸಿ ಅವರ ಕಾಯಕವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿತ್ತ ಹರಿಸೋಣ. ಪತ್ರಿಕಾ ವಿತರಕರನ್ನು ಗೌರವದಿಂದ ಪ್ರೀತಿಯಿಂದ ಸೌಹಾರ್ದ ಭಾವದಿಂದ ಕಾಣೋಣ. ಎಲ್ಲಾ ಪತ್ರಿಕ ವಿತರಕರಿಗೆ ಪತ್ರಿಕ ವಿತರಕರ ದಿನಾಚರಣೆ ಶುಭಾಶಯಗಳು.
ಪ್ರಣವ ಭಟ್ ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.