ಸುಳ್ಯ: ಭೂತಾರಾಧನೆ ತುಳು ನಾಡಿನ ಅಪೂರ್ವ ಮತ್ತು ವೈಶಿಷ್ಟ್ಯಪೂರ್ಣ ಆರಾಧನೆ. ಇಲ್ಲಿ ಕಂಡು ಬರುವ ಆಕರ್ಷಕ ಮತ್ತು ಅಪೂರ್ವ ಶೈಲಿಯ ಪ್ರತಿಯೊಂದು ಭೂತವೂ ಒಂದಲ್ಲಾ ಒಂದು ರೀತಿಯಲ್ಲಿ ಭಿನ್ನವಾಗಿ ಮತ್ತು ವೈಶಿಷ್ಟ್ಯತೆಯಿಂದ ಕೂಡಿರುತ್ತದೆ. ಅದರಲ್ಲೂ ಭೂತ ಕೋಲಗಳ ವಸ್ತ್ರಾಲಂಕಾರಗಳು ಅತ್ಯಂತ ಹೆಚ್ಚು ಆಕರ್ಷಕವಾಗಿರುತ್ತದೆ. ಭೂತ ಕೋಲಗಳಿಗೆ ಆಕರ್ಷಕವಾಗಿ ವಸ್ತ್ರಗಳನ್ನು ವಿನ್ಯಾಸಗೊಳಿಸುವ ಮೂಲಕ ಗಮನ ಸೆಳೆಯುತ್ತಾರೆ ಸುಳ್ಯದ ಶ್ರೀ ಮಲ್ಲಿಕಾ ಟೈಲರಿಂಗ್ನ ವಿ.ಆರ್.ರಮೇಶ್ ಎಂಬ ಯುವಕ.
ಚಿತ್ತಾಕರ್ಷಕ ಮತ್ತು ನವೀನ ಮಾದರಿಯಲ್ಲಿ ಭೂತ ಕೋಲಗಳಿಗೆ ವಸ್ತ್ರಗಳನ್ನು ಸಿದ್ಧಪಡಿಸುವ ಅಪರೂಪದ ಕೈಚಳಕ ಇವರದ್ದು. ಕಳೆದ 20 ವರ್ಷಗಳಿಂದ ಸುಳ್ಯದಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿರುವ ರಮೇಶ ಸುಮಾರು 12 ವರ್ಷಗಳಿಂದ ಭೂತಗಳ ವಸ್ತ್ರಗಳನ್ನು ವಿನ್ಯಾಸಗೊಳಿಸುವುದರಲ್ಲಿಯೂ ಸೈ ಎನಿಸಿದ್ದಾರೆ. ಭೂತ ಕೋಲಗಳ ವಸ್ತ್ರಗಳಿಗಾಗಿ ರಮೇಶರನ್ನು ಅರಸಿಕೊಂಡು ಕೇರಳ ಮತ್ತು ಕರ್ನಾಟಕ ರಾಜ್ಯದ ವಿವಿಧೆಡೆಗಳಿಂದ ಹಲವಾರು ಮಂದಿ ಬರುತ್ತಾರೆ. ಭೂತಾರಾಧನೆಯ ಸೀಸನ್ನಲ್ಲಿ ದೈವಗಳ ಬಟ್ಟೆ ತಯಾರಿಸುವುದರಲ್ಲಿ ಇವರು ಸದಾ ಬಿಝಿ.
ಪ್ರತಿ ಭೂತಗಳಿಗೂ ಬೇರೆ ಬೇರೆ ರೀತಿಯ ಮತ್ತು ಭಿನ್ನ ವಿನ್ಯಾಸಗಳ ವಸ್ತ್ರಗಳನ್ನು ತಯಾರಿಸಬೇಕಾಗುತ್ತದೆ. ಬಟ್ಟೆಗಳನ್ನು ಕತ್ತರಿಸಿ ಬಟ್ಟೆಗಳ ಮೇಲೆ ಪಡಮೂಡಿಸುವ ವಿವಿಧ ರೀತಿಯ ಕಲಾಕೃತಿಗಳು ಮತ್ತು ವಿನ್ಯಾಸಗಳು ಇವರು ತಯಾರಿಸುವ ವಸ್ತ್ರಗಳಲ್ಲಿ ವೈವಿಧ್ಯತೆಯನ್ನು ಸಾರುತ್ತದೆ. ವಸ್ತ್ರಗಳ ಮೇಲೆ ನಾಗರಹಾವು, ಸೂರ್ಯ ಚಂದ್ರ, ಪ್ರಭಾವಳಿ, ನಕ್ಷತ್ರಗಳು ಮತ್ತಿತರ ಚಿಹ್ನೆಗಳನ್ನು ಚಿತ್ರಿಸುತ್ತಾರೆ.
ಅಲ್ಲದೆ ವಿವಿಧ ರೀತಿಯ ಪಟ್ಟಿಗಳು, ಝರಿಗಳನ್ನೂ ಅಳವಡಿಸುವ ಮೂಲಕ ಭೂತ ಕೋಲಗಳಲ್ಲಿ ತೊಡುವ ವಸ್ತ್ರಗಳು ಆಕರ್ಷಕವಾಗಿ ಮೂಡಿ ಬರುತ್ತದೆ. ಮಂಗಳೂರು ಮತ್ತು ಬೆಂಗಳೂರುಗಳಿಂದ ಇದಕ್ಕೆ ಬೇಕಾದ ಬಟ್ಟೆಗಳನ್ನು ಮತ್ತು ವಿನ್ಯಾಸದ ಬಟ್ಟೆಗಳನ್ನು ತಂದು ಬೇಡಿಕೆಗನುಸಾರವಾಗಿ ಸಿದ್ಧಪಡಿಸಿ ಕೊಡುತ್ತಾರೆ. ಪಾಷಾಣಮೂರ್ತಿ, ಉಳ್ಳಾಕುಲು, ಪಂಜುರ್ಲಿ, ರುದ್ರಚಾಮುಂಡಿ, ರಕ್ತೇಶ್ವರಿ, ಭಗವತಿ, ವಯನಾಟ್ ಕುಲವನ್, ವಿಷ್ಣುಮೂರ್ತಿ ಹೀಗೆ ಎಲ್ಲಾ ಭೂತಗಳಿಗೂ ಬೇಕಾದ ವಸ್ತ್ರಗಳನ್ನು ಇವರು ತಯಾರಿಸಿ ಕೊಡ ಬಲ್ಲರು. ಒಂದು ಭೂತದ ಬಟ್ಟೆಯನ್ನು ಸಿದ್ಧಪಡಿಸಲು ಕನಿಷ್ಟ ಮೂರು ದಿನ ಬೇಕಾಗುತ್ತದೆ. ಅತ್ಯಂತ ತಾಳ್ಮೆ ಮತ್ತು ನಾಜೂಕಾಗಿ ಇವುಗಳನ್ನು ಸಿದ್ಧಪಡಿಸಬೇಕಾಗುತ್ತದೆ.
ಸಾಮಾನ್ಯವಾಗಿ ಜನರ ಬಟ್ಟೆ ಸಿದ್ಧಪಡಿಸುವುದಕ್ಕಿಂತ ಭಿನ್ನವಾಗಿ ಕೌಶಲ್ಯ ಮತ್ತು ನಾಜೂಕುತನ ಭೂತಗಳ ವಸ್ತ್ರಾಲಂಕಾರಕ್ಕೆ ಅತೀ ಅಗತ್ಯವಾಗಿ ಬೇಕಾಗುತ್ತದೆ. ಭೂತಗಳ ವಸ್ತ್ರ ಸಿದ್ಧಪಡಿಸಲು ಯಾವುದೇ ತರಬೇತಿಯನ್ನೂ ಪಡೆದಿಲ್ಲ ಎನ್ನುತ್ತಾರೆ ರಮೇಶ. ಚಿಕ್ಕಂದಿನಿಂದಲೇ ತಾನು ನೋಡುತ್ತಿರುವ ಭೂತಗಳು ತೊಡುವ ವಸ್ತ್ರಗಳು ಮನಸ್ಸಿನಲ್ಲಿ ಅಚ್ಚು ಒತ್ತಿದೆ. ಅದನ್ನು ತನ್ನ ಕೈಚಳಕದ ಮೂಲಕ ಬಟ್ಟೆಯ ಮೇಲೆ ಅಚ್ಚೊತ್ತಿ ವಸ್ತ್ರಗಳನ್ನು ಸಿದ್ಧಪಡಿಸುತ್ತಾರೆ.
ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭೂತಗಳ ವಸ್ತ್ರಗಳಿಗಾಗಿ ರಮೇಶರನ್ನು ಅರಸಿ ಬರುತ್ತಾರೆ. ಪ್ರತಿ ವರ್ಷ ಇಪತ್ತೈದಕ್ಕೂ ಹೆಚ್ಚು ಭೂತಗಳ ವಸ್ತ್ರಗಳನ್ನು ಇವರು ಸಿದ್ಧಪಡಿಸಿ ನೀಡುತ್ತಾರೆ. ಆಧುನಿಕ ಮಾದರಿಯ ಟೈಲರಿಂಗ್ ಮೆಷಿನ್ಗಳು ಬಟ್ಟೆ ಸಿದ್ಧಪಡಿಸಲು ಇವರಿಗೆ ಸಹಾಯಕವಾಗಿದೆ. ಚೆಂಡೆ ಮತ್ತು ಮದ್ದಳೆಗಳಿಗೆ ಆಕರ್ಷಕ ಹೊದಿಕೆಗಳನ್ನೂ ಇವರು ಸಿದ್ಧಪಡಿಸುತ್ತಾರೆ.
ಧ್ವಜ ಸಿದ್ಧಪಡಿಸುವುದರಲ್ಲೂ ನಿಸ್ಸೀಮ:
ದೇವಸ್ಥಾನಗಳ ಜಾತ್ರೆ ಮತ್ತಿತರ ಸಂದರ್ಭದಲ್ಲಿ ದೇವಾಲಯದ ಕೊಡಿ ಮರಕ್ಕೆ ಏರಿಸುವ ಧ್ವಜಗಳನ್ನು ಸಿದ್ಧಪಡಿಸುವುದರಲ್ಲೂ ರಮೇಶರದ್ದು ಎತ್ತಿದ ಕೈ. ಪ್ರತಿ ದೇವಸ್ಥಾನಕ್ಕೆ ಭಿನ್ನ ಅಳತೆಯ ಮತ್ತು ಭಿನ್ನ ವಿನ್ಯಾಸದ ಧ್ವಜಗಳನ್ನು ಸಿದ್ಧಪಡಿಸಬೇಕಾಗುತ್ತದೆ. ದೇವಸ್ಥಾನದವರು ನೀಡಿದ ಅಳತೆ ಮತ್ತು ವಿನ್ಯಾಸದಂತೆ ಇವರು ಧ್ವಜಗಳನ್ನು ಸಿದ್ಧಪಡಿಸಿ ಕೊಡುತ್ತಾರೆ. ಸಿಂಹಧ್ವಜ, ಗರುಢ ಧ್ವಜ, ನಂದಿ ಧ್ವಜ, ಕುಕ್ಕುಟ ಧ್ವಜ, ಹೀಗೆ ವಿವಿಧ ರೀತಿಯ ಧ್ವಜಗಳನ್ನು ತಯಾರಿಸಬೇಕಾಗುತ್ತದೆ.
ಧ್ವಜಗಳನ್ನು ತಯಾರಿಸುವಾಗ ಅತ್ಯಂತ ಶ್ರದ್ಧೆ ಸೂಕ್ಷ್ಮತೆ ಬೇಕಾಗುತ್ತದೆ. ಕೇರಳದ ಮತ್ತು ಕರ್ನಾಟಕದ ಹಲವು ದೇವಸ್ಥಾನಗಳಿಂದ ಕೊಡಿ ಮರದ ಧ್ವಜ ತಯಾರಿಸಲು ತಮ್ಮಲ್ಲಿಗೆ ಬರುತ್ತಾರೆ ಎನ್ನುತ್ತಾರೆ ರಮೇಶ್.
ಚೆಂಡೆಯಲ್ಲೂ ಪ್ರವೀಣರು:
ಸುಮಾರು 60 ವರ್ಷಗಳ ಹಿಂದೆ ಕೇರಳದ ನೀಲೇಶ್ವರದಿಂದ ಸುಳ್ಯ ತಾಲೂಕಿನ ತೊಡಿಕಾನಕ್ಕೆ ಬಂದು ನೆಲೆಸಿದವರು ಇವರ ಕುಟುಂಬ. ಟೈಲರಿಂಗ್ ವೃತ್ತಿಯ ಜೊತೆ ಚೆಂಡೆಯಲ್ಲೂ ಪ್ರವೀಣರು ಈ ರಮೇಶ. ಇವರ ಹಿರಿಯ ಸಹೋದರ ವಿ.ಆರ್.ಶ್ರೀಧರರ ಜೊತೆಗೂಡಿ ವಿವಿಧ ದೇವಸ್ಥಾನಗಳಲ್ಲಿ ಚೆಂಡೆ ಬಾರಿಸಲು ಇವರು ಹೋಗುತ್ತಾರೆ. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಹಲವು ದೇವಸ್ಥಾನಗಳ ಜಾತ್ರೋತ್ಸವ ಹಾಗು ಬ್ರಹ್ಮಕಲಶ ಸಂದರ್ಭದಲ್ಲಿ ಈ ಸಹೋದರರ ಚೆಂಡೆ ವಾದನ ಪ್ರಮುಖ ಆಕರ್ಷಣೆಯಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.