ನ್ಯೂಕ್ಲಿಯರ್ ನೇಶನ್, ಇಂಡಸ್ಟ್ರಿಯಲ್ ನೇಶನ್, ಡೆವಲಪಿಂಗ್ ನೇಶನ್, ಬಿಗ್ಗೆಸ್ಟ್ ಡೆಮಾಕ್ರಸಿ ಎಂಬ ಹೆಗ್ಗಳಿಕೆಯ ಜೊತೆಯಲ್ಲಿ ಭಾರತ ದೇಶ ವಿಶ್ವದಲ್ಲೆ ಮಾದರಿ ಎನಿಸುವ ʼಸ್ಪೋರ್ಟಿಂಗ್ ನೇಶನ್ʼ ಎಂಬ ಗೌರವದತ್ತ ಮಹತ್ವದ ಹೆಜ್ಜೆ ಇರಿಸಿದೆ. ಅಂತಹ ಸಾಧನೆಯ ಅವಕಾಶವನ್ನು ಈ ಬಾರಿಯ ಜಪಾನಿನ ಟೊಕಿಯೋ-2020 ಒಲಿಂಪಿಕ್ಸ್ ಭಾರತಕ್ಕೆ ನೀಡಿದೆ.
ಹಲವು ವರ್ಷಗಳಿಂದ ಗಗನಕುಸುಮವಾಗಿದ್ದ ದೇಶದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ಪಡೆದ ಕಂಚಿನ ಪದಕ ಈ ಬಾರಿಯ ವಿಶೇಷತೆಗಳಲ್ಲೊಂದು. ಬರೋಬ್ಬರಿ ನಾಲ್ಕು ದಶಕಗಳ ನಂತರದಲ್ಲಿ ಈ ಅಪರೂಪದ ಸಾಧನೆಗೆ ಭಾರತೀಯ ಹಾಕಿ ತಂಡ ಭಾಜನವಾಗಿದೆ. ಭಾರತೀಯ ಆಟಗಾರರ ಸಾಧನೆಯನ್ನು ದೇಶವಾಸಿಗಳಾದ ಎಲ್ಲರೂ ಹಾಡಿ, ಹೊಗಳಿ, ಕೊಂಡಾಡಿ, ಗುಣಗಾನ ಮಾಡಿದ್ದಾಗಿದೆ. ಹಲವು ಮಂದಿ ಹಲವು ರೀತಿಯಲ್ಲಿ ತಮ್ಮ ಸಂತೋಷ, ಖುಷಿಯನ್ನು ಹಂಚಿಕೊಂಡದ್ದು ಆಗಿದೆ. ಹಾಕಿ ತಂಡ ಟೊಕಿಯೋ ಒಲಿಂಪಿಕ್ಸ್ನಲ್ಲಿ ಗೆದ್ದ ಒಂದು ಕಂಚಿನ ಪದಕ, ಆಟೋಟ ಸ್ಪರ್ಧೆಯಲ್ಲಿ ಗೆದ್ದ ಒಂದು ಚಿನ್ನದ ಪದಕ ಸಹಿತ ಈ ಬಾರಿಯ ಒಟ್ಟು 7 ಮಹತ್ವದ ಪದಕಗಳು ದೇಶದ ಕ್ರೀಡಾಕ್ಷೇತ್ರವನ್ನು ಧನಾತ್ಮಕವಾಗಿ ಪ್ರಭಾವಿಸಿದೆ. ಒಟ್ಟಿನಲ್ಲಿ ಭಾರತವು ಒಲಿಂಪಿಕ್ಸ್ ಇತಿಹಾಸದಲ್ಲೇ ಅತಿ ಹೆಚ್ಚಿನ ಪದಕ ಜಯಿಸುವಲ್ಲಿ ಈ ಬಾರಿ ಸಾಧ್ಯವಾಗಿದ್ದು, ಯುವ ಭಾರತಕ್ಕೆ, ಯುವ ಕ್ರೀಡಾಳುಗಳಲ್ಲಿ ಹೊಸ ಚೈತನ್ಯಶಕ್ತಿಯನ್ನು ಮೂಡಿಸಿ, ಪ್ರೇರಣೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಕಂಚಿನ ಪದಕಕ್ಕೆ ಭಾಜನರಾದ ಪಿ.ವಿ ಸಿಂಧೂ, ಭಾರತೀಯ ಹಾಕಿ ತಂಡ, ಕುಸ್ತಿಪಟು ಭಜರಂಗ ಪೂನಿಯಾ. ಬೆಳ್ಳಿ ಪದಕವನ್ನು ಜಯಿಸಿದ ವೇಟ್ ಲಿಫ್ಟರ್ ಮೀರಾಬಾಯಿ ಚಾನು, ಕುಸ್ತಿ ಪಟು ರವಿಕುಮಾರ್ ದಹಿಯಾ, ದೇಶದ ಒಲಿಂಪಿಕ್ಸ್ ಇತಿಹಾಸದಲ್ಲೇ ಆಟೋಟ ಸ್ಪರ್ಧೆಯಲ್ಲಿ ಮಿಂಚಿನ ಸಂಚಾರ ಮೂಡಿಸಿ ಈಟಿಯನ್ನು 87 ಮೀ. ದೂರಕ್ಕೆ ಎಸೆದು ಯುವತ್ವದ ಶಕ್ತಿ, ಛಲ, ಧೀಮಂತಿಕೆಯನ್ನು ಸಾದರಪಡಿಸಿ ಚಿನ್ನದ ಪದಕಕ್ಕೆ ಭಾಜನರಾದ ನೀರಜ್ ಚೋಪ್ರಾ ಭಾರತದ ಭಾವಿ ಕ್ರೀಡಾಳುಗಳಿಗೆ ಇಮ್ಮಡಿ ಸ್ಪೂರ್ತಿ ಮತ್ತು ಪ್ರೇರಣೆಯನ್ನು ತುಂಬಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ ಆರಂಭಗೊಂಡಾಗ ಭಾರತ ಈ ಬಾರಿ ಎರಡಂಕಿಯಷ್ಟು ಪದಕ ಜಯಿಸುತ್ತದೆ ಎಂಬ ವಿಶ್ವಾಸವಿತ್ತು, ಆದರೆ ಎರಡಂಕಿಯ ಹತ್ತಿರ ತಲುಪಿದೆ ಎಂಬುದೂ ಕೂಡಾ ಖುಷಿಯ ವಿಚಾರ. ಎಲ್ಲರಿಗೂ ಗೊತ್ತಿರುವ ಹಾಗೆ ಭಾರತದ ಒಲಿಂಪಿಕ್ಸ್ ಸಾಧನೆ ಎರಡು ದಶಕಗಳ ಹಿಂದೆ ಹೇಳಿಕೊಳ್ಳುವಂತದ್ದಾಗಿರಲಿಲ್ಲ. ಹೇಳಿಕೊಂಡರು ಭಾರತೀಯ ಹಾಕಿ ತಂಡ ಗೆದ್ದ ಒಟ್ಟು 11 ಪದಕಗಳ ಪಟ್ಟಿಯನ್ನಷ್ಟೇ ಹೆಸರಿಸಬಹುದಾಗಿತ್ತು. ಆದರೆ ವರ್ತಮಾನದಲ್ಲಿ ದೇಶದ ಕ್ರೀಡಾಕ್ಷೇತ್ರ ಸಂಪೂರ್ಣ ಬದಲಾಗಿದೆ, ನಮ್ಮ ನೆಚ್ಚಿನ ಕ್ರೀಡಾಳುಗಳು ವಿಶ್ವಕ್ಕೆ ಹೇಳಬಹುದಾದ ವಿಶೇಷ ಸಾಧನೆಯನ್ನು ಮಾಡುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಕ್ರೀಡೆಯಲ್ಲಿ ತೊಡಗಿ, ಅವಿರತ ಶ್ರಮವಹಿಸಿ ಸಾಧನೆ ಮಾಡುವ ಎಲ್ಲಾ ಕ್ರೀಡಾಳುಗಳಿಗೂ ದೇಶ ವಿಶೇಷ ಗೌರವ ಸಲ್ಲಿಸುತ್ತದೆ. ಅರ್ಜುನ, ಖೇಲ್ ರತ್ನ ಪ್ರಶಸ್ತಿಗಳು ಕ್ರೀಡಾ ಸಾಧಕನಿಗೆ ಇನ್ನಷ್ಟೂ ಸಾಧನೆ ಮಾಡುವ ಪ್ರೇರಣೆ ನೀಡುತ್ತವೆ. ವಿಶೇಷ ಕ್ರೀಡಾಸಾಧಕರಿಗೆ ದೇಶದ ಜನತೆ ಅಷ್ಟೇ ಗೌರವದಿಂದ ಕಂಡು, ಅವರ ಗುಣಗಾನ ಮಾಡುತ್ತದೆ. ನಾವು,ನಮ್ಮವರು ಎಂಬ ಸಾಮೀಪ್ಯವನ್ನು ಕ್ರೀಡೆ ಮತ್ತು ಕ್ರೀಡಾಕ್ಷೇತ್ರ ಬೆಳೆಸುತ್ತದೆ. ಭಾರತೀಯ ತಂಡ, ಭಾರತೀಯ ಕ್ರೀಡಾಳುವೆಂಬ ಅಭಿಮಾನ, ಪ್ರೀತಿ, ವಿಶ್ವಾಸವನ್ನು ಹೆಚ್ಚಿಸುವ ಶಕ್ತಿ ದೇಶದ ಕ್ರೀಡಾರಂಗಕ್ಕಿದೆ. ಹೀಗೆ ಇದೇ ಭಾವವು ಯುವಕರಲ್ಲೂ ಮೂಡಿ, ವಿಶೇಷ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ. ಒಲಿಂಪಿಯನ್ ಓರ್ವ ರೋಲ್ ಮಾಡೆಲ್ ಆಗುತ್ತಾನೆ. ರೋಲ್ ಮಾಡೆಲ್ ನಂತರ ಯುವ ಕ್ರೀಡಾಳುವಿನ ಸಾಧನಾಪಥದತ್ತ ದಾರಿ ತೋರುತ್ತಾನೆ. ಇದೊಂದು ನಿರಂತರ ಪ್ರಕ್ರಿಯೆ. 2020 ರ ಸಿಡ್ನಿ ಒಲಿಂಪಿಕ್ಸ್ ನಿಂದ ಹಿಡಿದು 2020 ರ ಟೊಕಿಯೋ ಒಲಿಂಪಿಕ್ಸ್ ತನಕದ ಭಾರತದ ಕ್ರೀಡಾ ಪಯಣ ಅಭೂತಪೂರ್ವವಾದುದು. ಅಂದು ಕರ್ಣಂ ಮಲ್ಲೇಶ್ವರಿ ಮಾತ್ರವೇ ಸಾಧಕಿ, ಪ್ರೇರಣೆ ಎನಿಸಿದರೆ, ಇಪ್ಪತ್ತು ವರ್ಷದ ತರುವಾಯು ಹಲವು ಪ್ರೇರಣಾದಾಯಿ ಕ್ರೀಡಾ ಸಾಧಕ ವ್ಯಕಿತ್ವಗಳನ್ನು ಭಾರತೀಯ ಕ್ರೀಡಾಕ್ಷೇತ್ರ ಕಂಡಿದೆ. ಬಹಳ ಹಿಂದೆ ಹಾಕಿ ಕ್ರೀಡೆಯ ಮೂಲಕ ಪದಕಗಳ ಭರವಸೆಯಾಗಿದ್ದ ಭಾರತ ,ನಂತರದ ದಿನಗಳಲ್ಲಿ ಒಂದು ಪದಕವೂ ಜಯಿಸದೇ ಇದ್ದ ಒಲಿಂಪಿಕ್ಸ್ ಗಳು ಇದ್ದವೂ. ಆದರೆ ಕಳೆದ ಎರಡು ದಶಕಗಳಿಂದ ದೇಶದ ಕ್ರೀಡಾ ಜಗತ್ತು ಧನಾತ್ಮಕವಾಗಿ ಬದಲಾಗಿದೆ. ಹಲವು ಮಂದಿ ದೇಶದ ಒಲಿಂಪಿಕ್ ಆಟಗಾರರು ಭಾವಿ ಜನಾಂಗಕ್ಕೆ ಪ್ರೇರಣೆ ಎನಿಸಿದ್ದಾರೆ. ಹೆಚ್ಚಿನ ಪದಕ ಜಯಿಸುವತ್ತ ದೇಶ ದೃಷ್ಠಿ ನೆಟ್ಟಿದೆ. ದೇಶದ ಶಕ್ತಿ ಎನಿಸಿರುವ ಕುಸ್ತಿ, ಶೂಟಿಂಗ್ ಸ್ಪರ್ಧೆಗಳಲ್ಲಿ ಹೆಚ್ಚೆಚ್ಚು ಯುವ ಕ್ರೀಡಾಳುಗಳು ಆಸಕ್ತಿ ತೋರುತ್ತಿರುವುದು ಧನಾತ್ಮಕ ಅಂಶವಾಗಿದೆ. ಈ ಬಾರಿಯ ಒಲಿಂಪಿಕ್ಸ್ ದೇಶದ ಕುಸ್ತಿರಂಗದ ಪದಕ ಗೆಲ್ಲುವ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಎರಡು ಮಹತ್ತರ ಪದಕಗಳನ್ನು ಮೊತ್ತಮೊದಲ ಬಾರಿಗೆ ಭಾರತೀಯ ಕುಸ್ತಿಪಟುಗಳು ಜಯಿಸಲು ಸಫಲರಾಗಿದ್ದಾರೆ. ಈ ಸಾಧನೆಯಿಂದ ದೇಶದ ಇತರೆಡೆಗಳಲ್ಲೂ ಕುಸ್ತಿ ಅಖಾಡ, ಕುಸ್ತಿಕಣಗಳೂ ಆರಂಭಗೊಳ್ಳುವುದಂತೂ ಖಚಿತ. ರಾಜ್ಯದಲ್ಲೂ ಸಾಂಪ್ರಾದಾಯಿಕ ಕುಸ್ತಿ ಅಖಾಡಗಳ ಸಂಖ್ಯೆಯೂ ಇಮ್ಮಡಿಯಾಗುವ ಸಾಧ್ಯತೆಗಳು ಅಲ್ಲಗೆಳೆಯುವಂತಿಲ್ಲ.
ಈ ಬಾರಿಯ ಮೈಸೂರು ದಸರೆಯ ಸಂದರ್ಭ ನಡೆಯುವ ಸಾಂಪ್ರದಾಯಿಕ ಕುಸ್ತಿ ಪಂದ್ಯಾಟಗಳಿಗೂ ಹೆಚ್ಚಿನ ಯುವ ಮಂದಿ ಆಗಮಿಸಿದರೆ ಅಚ್ಚರಿಪಡಬೇಕಿಲ್ಲ. ಒಂದು ಉನ್ನತ ಮಟ್ಟದ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಳುಗಳು ಮಾಡಿದ ಸಾಧನೆ ಹಲವೆಡೆ, ಹಲವು ರೀತಿಯಲ್ಲಿ ಪ್ರತಿಫಲನಗೊಳ್ಳುತ್ತದೆ. ಕೇವಲ ಹರ್ಯಾಣ, ಪಂಜಾಬ್ ರಾಜ್ಯಗಳಿಗಷ್ಟೇ ಸೀಮಿತ ಎಂಬಂತಿದ್ದ ಕುಸ್ತಿ ಇನ್ನು ಮುಂದೆ ಪ್ಯಾನ್ ಇಂಡಿಯಾ ಅಭಿಯಾನದಂತೆ ಬೆಳೆಯಲು ಈ ಬಾರಿಯ ಒಲಿಂಪಿಕ್ಸ್ ದಾರಿ ಮಾಡಿಕೊಟ್ಟಿದೆ. ಹಾಗೆಯೇ ಈಶಾನ್ಯ ರಾಜ್ಯ ಅಸ್ಸಾಂ ಕ್ರೀಡಾಳು ಮೀರಾಬಾಯಿ ಚಾನು ಮಾಡಿದ ಸಾಧನೆಯೂ ಅಭೂತಪೂರ್ಣವಾದುದು, ಈಕೆ ನಡೆದ ಹಾದಿಯಲ್ಲಿ ಮುನ್ನಡೆಲು ಹಲವು ಮಂದಿ ಯುವತಿಯರು ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸಿದ ಪಿ.ವಿ. ಸಿಂಧೂ ಕೂಡಾ ಎಲ್ಲರಿಗೂ ಮಾದರಿಯಾಗಿರುವ ಕ್ರೀಡಾ ಸಾಧಕಿ. ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ತೊಡಗಿ ಅದರಲ್ಲಿ ಸಾಧನೆ ಮಾಡುವ ಹಂಬಲ, ಉತ್ಸುಕತೆಯನ್ನು ಹಲವು ಯುವ ಮಂದಿ ತೋರುತ್ತಿದ್ದಾರೆ ಎಂಬುದು ನಿಚ್ಚಳ. ಹೀಗೆ ಈ ಬಾರಿ ಪದಕಕ್ಕೆ ಭಾಜನವಾದ ಭಾರತೀಯ ಹಾಕಿ ತಂಡವೂ ದೇಶದ ಹಾಕಿ ಪ್ರೇಮಿಗಳಲ್ಲಿ ಹೊಸ ಉತ್ಸಾಹವನ್ನು ಮೂಡಿಸಿದೆ. ಹಲವು ದಶಕಗಳಿಂದ ಪದಕ ಗೆಲ್ಲುವುದೇ ಗಗನಕುಸುಮ ಎಂಬಂತಿದ್ದ ಕಾಲಘಟ್ಟವಿತ್ತು. ಒಂದೊಮ್ಮೆ ಭಾರತ ಒಲಿಂಪಿಕ್ಸ್ ಹಾಕಿ ಪಂದ್ಯಾಟಕ್ಕೂ ಕ್ವಾಲಿಫೈ ಆಗದೆ ಹೊರಗುಳಿದಿತ್ತು. ಈ ಬಾರಿಯ ಭಾರತೀಯ ಹಾಕಿ ತಂಡದ ಸಾಧನೆ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತೀಯ ಮಹಿಳಾ ಹಾಕಿ ತಂಡದ ಸಾಧನೆಯೂ ದೇಶದಲ್ಲಿ ಹೊಸ ಕ್ರೀಡಾ ಶಕೆಯನ್ನೇ ಸೃಷ್ಠಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮೊತ್ತ ಮೊದಲ ಬಾರಿಗೆ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ತಲುಪಿದ್ದೂ ಕೂಡಾ ಸಾಧನೆಯೇ. ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರೂ ಯುವತ್ವಕ್ಕೆ ಮಾದರಿ ಎನಿಸಿಕೊಂಡಿದ್ದಾರೆ. ಹಾಕಿ ಗೋಲ್ ಕೀಪರ್ ಶ್ರೀಜೇಶ್, ಕಪ್ತಾನ ಮನ್ಪ್ರೀತ್ ಸಿಂಗ್, ಮಹಿಳಾ ತಂಡದ ನಾಯಕಿ ರಾಣಿ ಮೊದಲಾದವರು ದೇಶದ ಕ್ರೀಡಾರಂಗದಲ್ಲಿ ಹೊಸ ಸಂಚಲನ ಸೃಷ್ಠಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹಾಕಿ ಕ್ರೀಡೆಗೆ ದೇಶದ ಕ್ರೀಡಾರಂಗವನ್ನೇ ಬದಲಿಸುವ ಶಕ್ತಿಯಿದೆ. ಹಾಕಿಯಲ್ಲಿ ಗಿಟ್ಟಿಸಿಕೊಂಡ ಒಂದು ಪದಕವು ಕ್ರೀಡಾರಂಗದ ಧನಾತ್ಮಕ ಬದಲಾವಣೆಗೆ ಕಾರಣೀಭೂತವಾಗಲಿದೆ. ಭವಿಷ್ಯತ್ತಿನಲ್ಲಿ ಹೆಚ್ಚಿನ ತರುಣರು ಕ್ರೀಡಾಕ್ಷೇತ್ರದತ್ತ ಬರಲು ಪ್ರೇರಣೆ ನೀಡುವಲ್ಲಿ ಭಾರತೀಯ ಹಾಕಿ ತಂಡ ಸಫಲವಾಗಿದೆ ಎನ್ನಬಹುದು.
ಈ ಬಾರಿಯ ದೇಶದ ಒಲಿಂಪಿಕ್ಸ್ ಸಾಧನೆ ಕ್ರೀಡಾಕ್ಷೇತ್ರದಲ್ಲಿ ಹಲವು ಧನಾತ್ಮಕ ಬದಲಾವಣೆಗೂ ನಾಂದಿ ಹಾಡಿದೆ. ರಾಷ್ಟ್ರಮಟ್ಟದಲ್ಲಿ ಆರಂಭಗೊಂಡ ಖೇಲೋ ಇಂಡಿಯಾ ಅಭಿಯಾನ, ದೇಶದ ಸೈನಿಕ ಸಂಘಟನೆ ಮೂಲಕ ನಡೆದ ಯುವ ಕ್ರೀಡಾಳುಗಳ ಹುಡುಕಾಟ, ಸೂಕ್ತ ತರಬೇತಿ ಕಾರ್ಯಕ್ರಮಗಳಿಗೆ ಇನ್ನಷ್ಟೂ ಪುಷ್ಠಿ ಸಿಗಲಿದೆ. ಭಾರತದ ಈ ಬಾರಿಯ ಸಾಧನೆಯಿಂದ ಹೆಚ್ಚಿನ ಯುವ ಕ್ರೀಡಾಸಕ್ತರು ಸ್ಪೂರ್ತಿ ಪಡೆದು, ನಿರಂತರ ಪರಿಶ್ರಮದಲ್ಲಿ ತೊಡಗುತ್ತಾರೆ ಎಂಬುದು ಖಚಿತ. ಇದರ ಹೊರತಾಗಿ ಭಾರತದ ಸಮೀಪವರ್ತಿ ರಾಷ್ಟ್ರಗಳು ಕೂಡಾ ನಮ್ಮ ಕ್ರೀಡಾಪಟುಗಳಿಂದ ಪ್ರಭಾವಿಸಲ್ಪಟ್ಟಿದ್ದಾರೆ. ಭಾರತದ ಹಾದಿಯನ್ನು ದಕ್ಷಿಣಾ ಏಷ್ಯಾದ ಹಲವು ರಾಷ್ಟ್ರಗಳು ಅನುಸರಿಸುತ್ತವೆ. ಅದರಲ್ಲಿ ಪ್ರಮುಖವಾದುವು-ಶ್ರೀಲಂಕಾ, ಮಾಲ್ಡ್ವೀವ್ಸ್, ನೇಪಾಳ, ಭೂತಾನ್, ಮಯನ್ಮಾರ್. ಪಾಕಿಸ್ಥಾನವೂ ಇದರಿಂದ ಹೊರತಲ್ಲ, ಈಟಿ ಎಸೆತದ ಫೈನಲ್ಸ್ ಪ್ರವೇಶಿಸಿದ್ದ ಪಾಕಿಸ್ಥಾನದ ನದೀಂ ಕೂಡಾ ನನಗೆ ಸ್ಪೂರ್ತಿ ನೀರಜ್ ಚೋಪ್ರಾ ಅಂದಿದ್ದು ಓರ್ವ ಆಟಗಾರ ಹೇಗೆ ಪ್ರೇರಣೆಯಾಗಬಲ್ಲ ಎಂಬುದಕ್ಕೆ ಉದಾಹರಣೆ. ಇಷ್ಟು ಮಾತ್ರವಲ್ಲ ನದೀಂ- ಪಾಕಿಸ್ಥಾನ ನನ್ನನ್ನು ಕ್ಷಮಿಸಿಬಿಡು ಎಂದು ಟ್ವೀಟ್ ಕೂಡಾ ಮಾಡಿದ್ದರು!!
ಈ ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳೊಂದಿಗೆ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಭಾರತೀಯ ಆಟಗಾರ, ಆಟಗಾರ್ತಿರೂ ಕೂಡಾ ಮಾದರಿಯೆನಿಸುತ್ತಾರೆ. ಕರ್ನಾಟಕ ಮೂಲದ ಗಾಲ್ಫರ್ ಅದಿತಿ ಅಶೋಕ್ ನಾಲ್ಕನೆ ಸ್ಥಾನಕ್ಕೇರಿರುವುದು ಒಂದು ವಿಶೇಷ ಸಾಧನೆ, ಉಳಿದಂತೆ ಕುಸ್ತಿಯಲ್ಲಿ ಭರವಸೆ ಮೂಡಿಸಿದ್ದ ವಿನಿಶಾ ಪೋಗಾಟ್, ಆರ್ಚರಿಯಲ್ಲಿ ಹಲವು ಸುತ್ತುಗಳನ್ನು ಜಯಿಸಿದ ದೀಪಿಕಾ ಕುಮಾರಿ ಮತ್ತು ಅತನುದಾಸ್, ಸೆಮಿಫೈನಲ್ ಹಂತಕ್ಕೆ ತಲುಪಿದ್ದ ಕುಸ್ತಿಪಟು ದೀಪಕ್ ಪೂನಿಯಾ ಹೀಗೆ ಭಾರತೀಯ ಶೂಟರ್ ಗಳು, ಏಷ್ಯಾದ ರೆಕಾರ್ಡ್ ಬೇಧಿಸಿದ ಭಾರತೀಯ ರಿಲೇ ತಂಡ ಹೀಗೆ ಎಲ್ಲಾ ಭಾರತೀಯ ಒಲಿಂಪಿಯನ್ ಆಟಗಾರ, ಆಟಗಾರ್ತಿಯರ ಸಾಧನೆ ಪ್ರದರ್ಶನವೂ ಗಮನಾರ್ಹ ಮತ್ತು ಸ್ಮರಣೀಯವೇ ಆಗಿದೆ.
ದೇಶ ಉನ್ನತ ಮಟ್ಟದ ಕ್ರೀಡಾಕೂಟದಲ್ಲಿ ಮಾಡಿದ ಸಾಧನೆ ಸಮೀಪವರ್ತಿ ದೇಶಗಳನ್ನೂ ಧನಾತ್ಮಕವಾಗಿ ಪ್ರಭಾವಿಸುತ್ತದೆ ಎಂಬುದಕ್ಕೆ ಉದಾಹರಣೆಗಳೂ ಹಲವಿದೆ. ಕಬಡ್ಡಿ, ಕ್ರಿಕೆಟ್ ಪ್ರೇಮಿಗಳೇ ಹೆಚ್ಚಿರುವ ಸಮೀಪವರ್ತಿ ರಾಷ್ಟ್ರಗಳಿಗೂ ಭಾರತದ ಸಾಧನೆಯೂ ಒಂದು ಮಾದರಿ. ಕ್ರೀಡಾಕ್ಷೇತ್ರದಲ್ಲಿ ಐರೋಪ್ಯರಿಗೆ ಜರ್ಮನಿ, ಬ್ರಿಟನ್ ಮಾದರಿ ಮತ್ತು ಸ್ಪೂರ್ತಿ ಎನಿಸಿದರೆ, ಅಮೇರಿಕಾದ ಹಲವು ರಾಷ್ಟ್ರಗಳಿಗೆ ಯು.ಎಸ್ ಒಂದು ಕ್ರೀಡಾ ಮಾದರಿ ರಾಷ್ಟ್ರ, ಆಫ್ರಿಕನ್ ಖಂಡ ರಾಷ್ಟ್ರಗಳಿಗೆ ಕೀನ್ಯಾ, ಜಮೈಕಾದ ಸಾಧನೆಯೂ ಮಾದರಿಯಾಗಬಲ್ಲದು, ಮಂಗೋಲಿಯಾ, ತೈವಾನ್, ಹಾಂಗ್ ಕಾಂಗ್ ಮೊದಲಾದವುಗಳಿಗೆ ಚೀನಾ ಒಂದು ಕ್ರೀಡಾ ಮಾದರಿ, ಒಶಿಯಾನಿಯಾ ರಾಷ್ಟ್ರಗಳಿಗೆ ಆಸ್ಟ್ರೇಲಿಯಾ ಮಾದರಿಯಾದಂತೆ ಭಾರತವೂ ದಕ್ಷಿಣಾ ಏಷ್ಯಾ ರಾಷ್ಟ್ರಗಳಿಗೆ ಕ್ರೀಡಾ ಮಾದರಿ ರಾಷ್ಟ್ರ ಎನಿಸುವ ದಿನಗಳು ದೂರವಿಲ್ಲ. ಭಾರತ ಉಪಖಂಡವನ್ನೇ ತೆಗೆದುಕೊಂಡರೆ ಶ್ರೀಲಂಕಾ ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೇವಲ ಏಳು ಮಂದಿಯನ್ನಷ್ಟೆ ಕಳುಹಿಸಿದೆ. ಈ ತನಕ ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ಕೇವಲ ಒಂದು ಪದಕ ಜಯಿಸಿದೆಯಂತೆ ಈ ಪುಟ್ಟ ರಾಷ್ಟ್ರ, ಇನ್ನು ಪಾಕಿಸ್ಥಾನ ಈ ಬಾರಿ ಕೇವಲ ಹತ್ತು ಮಂದಿಯನ್ನು ಟೊಕಿಯೋ ಒಲಿಂಪಿಕ್ಸ್ ಗೆ ಕಳಿಸಿದೆ. ಇನ್ನು ನೇಪಾಳ, ಭೂತಾನ, ಮಯನ್ಮಾರ್ ನಿಂದ ಸ್ಪರ್ಧಿಗಳೇ ಇಲ್ಲ ಎನ್ನಬಹುದೇನೋ!! ಭಾರತದ ಸಾಧನೆ ಇಂತಹ ಸಮೀಪವರ್ತಿ ರಾಷ್ಟ್ರಗಳಿಗೂ ಪ್ರೇರಣೆಯಾಗಬಲ್ಲದು. ಈ ಬಾರಿಯ ಒಲಿಂಪಿಕ್ ಸಾಧನೆಯಿಂದ ಹಲವು ಮಹತ್ತರ ಬದಲಾವಣೆಗಳು ದೇಶದ ಮೂಲೆ ಮೂಲೆಯಲ್ಲಾಗಲಿದೆ. ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸುವ ಕಾರ್ಯವೂ ನಡೆಯಲಿದೆ. ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಒತ್ತು ಸಿಗಲಿದೆ. ದೇಶದ ಪ್ರಧಾನ ನಗರಗಳಲ್ಲಿ ಬಾಕ್ಸಿಂಗ್ ಕಣಗಳು, ಶಟಲ್ ಬ್ಯಾಡ್ಮಿಂಟನ್ ಅಂಗಣಗಳು, ಕುಸ್ತಿ ಅಖಾಡಗಳು, ಬಾಕ್ಸಿಂಗ್ ರಿಂಗ್ ಗಳ ನಿರ್ಮಾಣ, ಆರಂಭಗೊಳ್ಳಲಿವೆ. ಈ ಮಧ್ಯೆ ಹೆಚ್ಚಿನ ಮಂದಿ ಕ್ರೀಡಾಕ್ಷೇತ್ರದತ್ತ ಆಸಕ್ತಿ ತೋರುವುದರಿಂದ ಸುಸಜ್ಜಿತ ಕ್ರೀಡಾಂಗಣಗಳ ನಿರ್ಮಾಣದ ಆದ್ಯತೆಯೂ ಕೇಂದ್ರ ಮತ್ತು ರಾಜ್ಯ ಸರಕಾರದ್ದಾಗಬಹುದು.
ರಾಜ್ಯದ ಕೊಡಗು ಜಿಲ್ಲೆ ಸಹಿತ ಸಮೀಪವರ್ತಿ ಪ್ರದೇಶಗಳಲ್ಲಿ ಹಾಕಿ ಕ್ರೀಡೆಗೆ ಮತ್ತಷ್ಟೂ ಒತ್ತು ಸಿಗಬಹುದು. ಸ್ಥಳೀಯ ಸಂಘ ಸಂಸ್ಥೆಗಳ ಮೂಲಕ ನಡೆಯುವ ಕ್ರೀಡಾಕೂಟಗಳ ಸಂಖ್ಯೆಯೂ ಇಮ್ಮಡಿಯಾಗಬಹುದು.
ಹೀಗೆ ಹತ್ತು ಹಲವು ರೀತಿಯಲ್ಲಿ ಧನಾತ್ಮಕ ಪ್ರೇರಣೆಯನ್ನು ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಿಂದ ನೀಡಿದೆ. ದೇಶದ ಕ್ರೀಡಾರಂಗದತ್ತ ಯುವ ಮಂದಿಯನ್ನು ಆಕರ್ಷಿಸುವಲ್ಲಿ, ತೊಡಗುವಲ್ಲಿ ಈ ಬಾರಿಯ ಒಲಿಂಪಿಕ್ಸ್ ಉತ್ತೇಜಿಸಿದೆ ಎಂಬುದಂತೂ ನಿಜ. ಎರಡು ದಶಕದ ಹಿಂದೆ ಒಂದು ಪದಕವನ್ನು ಜಯಿಸಿದರೆ ಸಾಕು ಎಂಬಂತಿದ್ದ ಭಾರತದ ಕ್ರೀಡಾಳುಗಳು ಇಂದು ಹೆಚ್ಚೆಚ್ಚು ಪದಕ ಗೆಲ್ಲುವತ್ತ ಹೆಜ್ಜೆ ಇರಿಸಿದ್ದಾರೆ. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ ಭಾರತದ ಪಾಲಿಕೆ ಮತ್ತಷ್ಟೂ ಸಾಧನೆ ಮಾಡುವ ಅವಕಾಶ ನೀಡಲಿ. ಪದಕಗಳು ಎರಡಂಕಿಯಾಗಲಿ, ಪದಕ ಪಟ್ಟಿಯಲ್ಲಿ ಟಾಪ್ ಟೆನ್ ಹಂತಕ್ಕೆ ಭಾರತ ತಲುಪಲಿ ಎಂಬ ಹಾರೈಕೆ ನಮ್ಮದು. ನಮ್ಮ ಸುತ್ತಮುತ್ತಲು ಇರುವ ಯುವ ಕ್ರೀಡಾಸಾಧಕ, ಸಾಮರ್ಥ್ಯಗಳನ್ನು ಗುರುತಿಸೋಣ, ಪ್ರೋತ್ಸಾಹಿಸೋಣ, ಬೆಂಬಲಿಸೋಣ.
ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.