2020 ಆಗಸ್ಟ್ 15. ಕೋಟ್ಯಂತರ ಭಾರತೀಯರ ಹೃದಯ ಸಾಮ್ರಾಜ್ಯವನ್ನಾಳುವ ಪ್ರಿಯ ದೈವ ಪ್ರಭು ಶ್ರೀರಾಮಚಂದ್ರನಿಗೆ ಅವನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಪುಣ್ಯ ದಿನ. ಭಾರತೀಯರ ಪಾಲಿನ ಅತ್ಯಂತ ಸಂತಸದ ಈ ಘಟನೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಇನ್ನೇನು 2023 ರ ಅವಧಿಗೆ ಈ ಪುಣ್ಯ ಮಂದಿರ ಭಕ್ತರಿಗೂ ಮುಕ್ತವಾಗುತ್ತಿದೆ ಎಂಬುದು ಸಂತಸದ ವಿಚಾರ.
ಬಹುಕೋಟಿ ಭಾರತೀಯರ ಆರಾಧ್ಯ ದೈವ ರಾಮ. ಅವನ ಜನ್ಮಸ್ಥಾನದ ಬಗ್ಗೆ, ಅಲ್ಲಿ ಹಲವು ಶತಕಗಳ ಹಿಂದಿದ್ದ ಮಂದಿರ ಕೆಡವಿ ಅದರ ಮೇಲೆ ಅನ್ಯ ಧರ್ಮದ ಕಟ್ಟಡವನ್ನು ಕಟ್ಟಿ, ರಾಮನ ಇರುವಿಕೆಯನ್ನೇ ಪ್ರಶ್ನೆ ಮಾಡಿದ್ದವರಿಗೆ ಕಳೆದ ವರ್ಷ ಸುಪ್ರೀಂಕೋರ್ಟ್ ಅದು ರಾಮ ಲಲ್ಲಾನದ್ದೇ ಜಾಗ ಎಂದು ತೀರ್ಪು ನೀಡುವ ಮೂಲಕ ಸರಿಯಾದ ಶಾಸ್ತಿ ಮಾಡಿತ್ತು. ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬರುವ ಮೊದಲು ಆಯೋಧ್ಯೆ ವಿವಾದಕ್ಕೆ ಇಂತಹ ತೀರ್ಪು ಸಿಕ್ಕಿದ್ದರೆ, ಆಗ ಇಡೀ ದೇಶವೇ ಹೊತ್ತುರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತೋ ಏನೋ. ಆದರೆ ಪ್ರಧಾನಿ ಮೋದಿ ಅವರ ದೂರದೃಷ್ಟಿ, ಅವರ ಕಾರ್ಯ ವೈಖರಿಗಳು ರಾಮ ಲಲ್ಲಾನಿಗೆ ನ್ಯಾಯ ಒದಗಿಸುವುದರ ಜೊತೆಗೆ ದೇಶದ ಮುಸಲ್ಮಾನ ಬಂಧುಗಳಿಗೂ ಯಾವುದು ಸರಿ, ಯಾವುದು ಸತ್ಯ ಎಂಬುದರ ಅರಿವನ್ನು ಮೂಡಿಸಿತ್ತು ಎಂದರೆ ಅತಿಶಯವಾಗಲಾರದೆನೋ. ಅದರ ಪರಿಣಾಮ ಎಂಬಂತೆ ಯಾವುದೇ ರೀತಿಯ ಕೋಮು ಘರ್ಷಣೆ ಇಲ್ಲದೆ, ನ್ಯಾಯಯುತವಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ರಾಮ ಜನ್ಮಸ್ಥಳ ಮತ್ತೆ ಶ್ರೀರಾಮನಿಗೆ ಸೇರುವಂತಾಯಿತು. ಇದಕ್ಕೆ ಪೂರಕವಾಗಿ ಭಾರತೀಯರ ಕನಸಾಗಿದ್ದ ಶ್ರೀರಾಮ ಮಂದಿರ ನಿರ್ಮಾಣವೂ ನನಸಾಗು ಕಾಲ ಸನ್ನಿಹಿತವಾಯಿತು.
ಕೇವಲ ಹಿಂದೂಗಳಲ್ಲದೆ, ದೇಶದ ಎಲ್ಲ ಧರ್ಮದ ಜನರೂ ರಾಮನ ಮಂದಿರ ನಿರ್ಮಾಣವಾಗುತ್ತಿರುವುದನ್ನು ಸ್ವಾಗತಿಸಿದ್ದಾರೆ. ಅದು ಕೇವಲ ಒಂದು ಧರ್ಮದ ಧಾರ್ಮಿಕ ಶ್ರದ್ಧೆ, ಭಕ್ತಿಯಾಗಿ ಉಳಿದಿಲ್ಲ. ಬದಲಾಗಿ ಎಲ್ಲಾ ಧರ್ಮಗಳ ಜನರ ಉದಾರ ಮನಸ್ಸಿನ ಕಾರಣದಿಂದ ‘ರಾಷ್ಟ್ರ ಮಂದಿರ’ ವಾಗಿ ತಲೆ ಎತ್ತುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಈ ಮಂದಿರ ಸರ್ಕಾರ ಅಥವಾ ಯಾರೋ ಒಬ್ಬರ ಹಣದಿಂದ ನಿರ್ಮಾಣವಾಗುತ್ತಿಲ್ಲ. ಬದಲಾಗಿ ಜಾತಿ, ಧರ್ಮ, ಮತ, ಪಂಥಗಳ ಮೇರೆ ಮೀರಿ ಎಲ್ಲಾ ಭಾರತೀಯರು ಈ ಮಂದಿರ ನಿರ್ಮಾಣದ ಮಹತ್ಕಾರ್ಯಕ್ಕೆ ತಮ್ಮ ಕೈಲಾದ ಉದಾತ್ತ ನಿಧಿಯನ್ನು ಸಮರ್ಪಣೆ ಮಾಡಿದ್ದಾರೆ. ಬಡವ – ಬಲ್ಲಿದ, ಮಕ್ಕಳು – ವೃದ್ಧರು ಹೀಗೆ ಎಲ್ಲಾ ವರ್ಗದ, ಎಲ್ಲಾ ವಯೋಮಾನದ ಜನರೂ ಇದಕ್ಕೆ ತಮ್ಮ ಕೈಲಾದ ಮಟ್ಟಿಗೆ ನಿಧಿ ಸಮರ್ಪಣೆ ಮಾಡಿದ್ದಾರೆ.
ಸುಮಾರು 1000 ಕೋಟಿಗೂ ಹೆಚ್ಚು ನಿಧಿ ಶ್ರೀ ರಾಮ ಲಲ್ಲಾನಿಗೆ ಅವನ ಬಹುಕೋಟಿ ಭಕ್ತರಿಂದಲೇ ಸಮರ್ಪಣೆಯಾಗಿರುವುದು ಈ ಮಂದಿರ ಹೇಗೆ ‘ರಾಷ್ಟ್ರ ಮಂದಿರ’ವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ. ಯಾವುದೇ ಗೊಂದಲ, ಗಲಾಟೆಗಳಿಲ್ಲದೆ ಮಣ್ಣಿನಡಿಯಲ್ಲಿ ಹುದುಗಿ ಹೋಗಿದ್ದ ಅಯೋಧ್ಯೆಯ ಭವ್ಯ ಇತಿಹಾಸ ಮತ್ತೆ ಕಣ್ಣೆದುರು ವಿಜೃಂಭಣೆಯಿಂದ ಮೆರೆಯುವ ಕಾಲ ಸನ್ನಿಹಿತವಾಗಿದೆ. ಆ ಮೂಲಕ ಈ ಮಂದಿರಕ್ಕಾಗಿ ತಮ್ಮ ಬದುಕನ್ನೇ ಮುಡಿಪಿಟ್ಟ, ಬಲಿಕೊಟ್ಟ ಹಿರಿಯರ, ಕರಸೇವಕರ ಆತ್ಮಕ್ಕೆ, ಮನಸ್ಸಿಗೆ ಸಂತೋಷವನ್ನು ಒದಗಿಸಿಕೊಡುವ ಪ್ರಯತ್ನದಲ್ಲಿ ಮೋದಿ ಸರ್ಕಾರ ಪರಿಪೂರ್ಣತೆಯನ್ನು ಸಾಧಿಸಿದೆ ಎಂಬುದು ಸಂತಸದ ವಿಚಾರ.
ಹಾಗೆಯೇ ಓಟ್ ಬ್ಯಾಂಕ್ ರಾಜಕೀಯದ ಹಿನ್ನೆಲೆಯಲ್ಲಿ ಶ್ರೀರಾಮನನ್ನು ಅವಗಣನೆ ಮಾಡಿದ್ದ ವಿರೋಧ ಪಕ್ಷಗಳಿಗೂ ಪ್ರಧಾನಿ ಮೋದಿ ಸರ್ಕಾರ ಸರಿಯಾದ ಉತ್ತರ ನೀಡಿದೆ. ರಾಮ ಓಟಿಗಾಗಿ ಸುದ್ದಿಯಲ್ಲಿರಬೇಕಾದ ವಿಷಯವಲ್ಲ. ಬದಲಾಗಿ ಅವನು ರಾಷ್ಟ್ರದ ಅಭಿಮಾನ, ರಾಷ್ಟ್ರದ ಮರ್ಯಾದೆ. ಬಿಜೆಪಿ ಸರ್ಕಾರಕ್ಕೆ ರಾಮ ಕೇವಲ ಇತಿಹಾಸವಲ್ಲ, ಆತ ದೇಶದ ಉಸಿರು. ಆ ಉಸಿರನ್ನು ಮುಂದಿನ ಶತ ಶತಮಾನಗಳಿಗೆ ಜೀವಂತವಾಗಿರಿಸುವ, ಮುಂದಿನ ಜನಾಂಗಕ್ಕೂ ರಾಮನ ಕೀರ್ತಿಯನ್ನು, ಅವನ ಆದರ್ಶಗಳನ್ನು ಉಳಿಸಿ ಕೊಡುವ, ಅದನ್ನು ಬಿತ್ತುವ ನಿಟ್ಟಿನಲ್ಲಿ ಮೋದಿ ಸರ್ಕಾರ ಪ್ರಯತ್ನ ನಡೆಸಿದೆ. ಆ ಪ್ರಯತ್ನಕ್ಕೆ ಯಶಸ್ಸು ಸಹ ದೊರೆತಿದೆ.
ಇಡೀ ರಾಷ್ಟ್ರವೇ ಒಂದಾಗಿ ಅಯೋಧ್ಯೆಯಲಿ ಶ್ರೀರಾಮ ಮತ್ತೆ ಸೀತೆಯೊಡಗೂಡಿ, ಲಕ್ಷ್ಮಣ, ಆಂಜನೇಯನ ಜೊತೆ ನೆಲೆಯಾಗುವ ರಸಗಳಿಗೆಯನ್ನು, ಭಾವುಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದೆ. ತನಗೆ ಇಷ್ಟು ಬೇಗ ನ್ಯಾಯ ದೊರೆಯುವುದು ಎಂಬ ನಂಬಿಕೆ ಸ್ವತಃ ರಾಮನಿಗೇ ಇತ್ತೋ ಇಲ್ಲವೋ, ಆದರೆ ಆ ನಂಬಿಕೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಯಾಗಿ ನೀಡಿದ ಮೋದಿ ನೇತೃತ್ವದ ಬಿಜೆಪಿ ಉಳಿಸಿಕೊಂಡಿದೆ. ಯಾವುದೇ ರಾಜಕೀಯ ದುರುದ್ದೇಶ ಇಲ್ಲದೆ ಪ್ರಾಮಾಣಿಕವಾಗಿ ಅಯೋಧ್ಯೆಯಲ್ಲಿಯೇ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಸಹ ನಡೆಸುತ್ತಿದೆ.
ಪ್ರಧಾನಿ ಮೋದಿ ಅವರ ದೂರದರ್ಶಿತ್ವ, ದಕ್ಷ ಆಡಳಿತದ ಕಾರಣದಿಂದ ‘ರಾಷ್ಟ್ರ ಮಂದಿರ’ ಇನ್ನೇನು ಬೆರಳೆಣಿಕೆಯ ವರ್ಷದಲ್ಲಿ ಭಾರತದ ಭವ್ಯ ಗತ ವೈಭವ, ಪರಂಪರೆಗಳನ್ನು ವಿಶ್ವದೆತ್ತರಕ್ಕೆ ಎತ್ತಿ ಹಿಡಿಯಲಿದೆ. ಯಾರಿಗೂ ದೊರೆಯದ ಮಹಾ ಅನುಭೂತಿಯೊಂದಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಇದಕ್ಕಿಂತ ಪರಮಾನಂದ ಬೇರಿರಲು ಸಾಧ್ಯವೇ?.. ಕೋಟಿ ಕೋಟಿ ಭಾರತೀಯ ಹೃದಯದ ಭಾವನೆಗಳಿಗೆ ಈ ಮಂದಿರದ ಮೂಲಕ ಜೀವ ನೀಡುತ್ತಿರುವ ಪ್ರಧಾನಿ ಮೋದಿ ಅವರಿಗೆ ನಮ್ಮೆಲ್ಲರ ಬೆಂಬಲ ಇರಲಿ. ಭಾರತ ಮತ್ತಷ್ಟು ಮೇಳೈಸಲು ಪೂರಕವಾಗುವಂತೆ ಅವರಿಂದ ಮತ್ತಷ್ಟು ಮಹತ್ವದ ಕಾರ್ಯಗಳಾಗಲಿ ಎಂಬ ಆಶಯದ ಜೊತೆಗೆ..
ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.