ಟೋಕಿಯೊ ಒಲಿಂಪಿಕ್ಸ್ 2021 ರ ದಿನಗಣನೆ ಪ್ರಾರಂಭವಾಗಿದೆ. 100 ಕ್ಕೂ ಹೆಚ್ಚು ಭಾರತೀಯ ಕ್ರೀಡಾಪಟುಗಳು ಟೋಕಿಯೊ ಕ್ರೀಡಾಂಗಣದಲ್ಲಿ ತಮ್ಮ ಜಾಗವನ್ನು ಕಾಯ್ದಿರಿಸಿದ್ದಾರೆ. ಇಂದಿನಿಂದ ಕೆಲವೇ ವಾರಗಳಲ್ಲಿ ಪದಕಗಳ ವಿಷಯದಲ್ಲಿ ಭಾರತದ ಸಾಧನೆ ಸ್ಪಷ್ಟವಾಗಿ ಗೋಚರಿಸಲಿದೆ. ಕ್ರೀಡಾಳುಗಳು ಅತ್ಯಧಿಕ ಸಂಖ್ಯೆಯಲ್ಲಿ ಪದಕಗಳನ್ನು ಗೆದ್ದು ತ್ರಿವರ್ಣ ಧ್ವಜವನ್ನು ಮುಗಿಲೆತ್ತರಕ್ಕೆ ಹಾರಿಸಲಿ ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯವೂ ಆಗಿದೆ.
ಈ ನಡುವೆ ಟೋಕಿಯೋ ಒಲಿಂಪಿಕ್ ಸನ್ನಿಹಿತವಾಗುತ್ತಿದ್ದಂತೆ ಭಾರತೀಯ ಕ್ರೀಡಾ ಸಚಿವಾಲಯ ಮಹತ್ವಪೂರ್ಣ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಒಲಿಂಪಿಕ್ ಕ್ರೀಡಾ ನಿಯೋಗದ ಭಾಗವಾಗಿ ತನ್ನ ಯಾವುದೇ ಅಧಿಕಾರಿಗಳನ್ನು ಕಳುಹಿಸದಿರಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಫಿಸಿಯೋಥೆರಪಿಸ್ಟ್, ತರಬೇತುದಾರರು ಮತ್ತು ವೈದ್ಯರಂತಹ ಹೆಚ್ಚಿನ ಸಹಾಯಕ ಸಿಬ್ಬಂದಿಯನ್ನು ಕಳುಹಿಸುವ ಮೂಲಕ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವುದು ಈ ನಿರ್ಧಾರದ ಹಿಂದಿನ ತಾತ್ಪರ್ಯವಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವಿಟರ್ ಮೂಲಕ ತಿಳಿಸಿದ್ದಾರೆ.
ಕಿರಣ್ ರಿಜಿಜು ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಪ್ರೋಟೋಕಾಲ್ ಅಗತ್ಯಗಳನ್ನು ಹೊರತುಪಡಿಸಿ ಟೋಕಿಯೊ ಒಲಿಂಪಿಕ್ಸ್ಗೆ ನಿಯೋಗದ ಭಾಗವಾಗಿ ಕ್ರೀಡಾ ಸಚಿವಾಲಯದಿಂದ ಯಾವುದೇ ಅಧಿಕಾರಿಯನ್ನು ಕಳುಹಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿಸಲು ತರಬೇತುದಾರರು, ಫಿಸಿಯೋಥೆರಪಿಸ್ಟ್, ವೈದ್ಯರಂತಹ ಹೆಚ್ಚಿನ ಸಿಬ್ಬಂದಿಯನ್ನು ಕಳುಹಿಸಲು ನಾವು ಬಯಸುತ್ತೇವೆ. ನಮ್ಮ ನಿರ್ಧಾರದ ಉದ್ದೇಶವು ಕ್ರೀಡಾ ಆಡಳಿತದ ವಿಷಯದಲ್ಲಿ ದೇಶಕ್ಕೆ ಬೃಹತ್ ಪರಿವರ್ತಕ ಹೆಜ್ಜೆಯಾಗಬಹುದು” ಎಂದಿದ್ದಾರೆ.
ಒಲಿಂಪಿಕ್ ಕ್ರೀಡಾ ನಿಯೋಗದ ಭಾಗವಾಗಿ ತೆರಳಲು ಹಲವು ಅಧಿಕಾರಿಗಳು ಲಾಬಿ ನಡೆಸುತ್ತಾರೆ. ಅವರಿಗಾಗಿ ಸರ್ಕಾರ ಬಹಳಷ್ಟು ಹಣವನ್ನು ವ್ಯಹಿಸಬೇಕಾಗುತ್ತದೆ. ಕ್ರೀಡಾಳುಗಳಿಗೆ ಇವರಿಂದ ಅಂತಹ ಯಾವುದೇ ಪ್ರಯೋಜನ ಕೂಡ ಆಗುವುದಿಲ್ಲ. ಹೀಗಾಗಿ ಈ ಬಾರಿ ಯಾವುದೇ ಅಧಿಕಾರಿಗಳನ್ನು ಕಳುಹಿಸದೇ ಇರಲು ಕ್ರೀಡಾ ಸಚಿವಾಲಯ ನಿರ್ಧರಿಸಿದ್ದು ನಿಜಕ್ಕೂ ಮಹತ್ವಪೂರ್ಣ ಹೆಜ್ಜೆಯಾಗಿದೆ. ಅಧಿಕಾರಿಗಳ ಬದಲು ಹೆಚ್ಚಿನ ಸಂಖ್ಯೆಯ ವೈದ್ಯರನ್ನು, ತರಬೇತುದಾರರನ್ನು ಕಳುಹಿಸಲು ನಿರ್ಧರಿಸಿದ್ದು ಕ್ರೀಡಾಳುಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಕ್ರೀಡಾ ಸಚಿವರು ಭಾರತೀಯ ಕ್ರೀಡಾಪಟುಗಳಿಗೆ ಅವರ ಪ್ರದರ್ಶನವನ್ನು ಸುಧಾರಿಸಲು ಬೇಕಾದ ಎಲ್ಲ ಅವಕಾಶಗಳನ್ನು ನೀಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತೀಯರು ಉತ್ತಮ ಸಾಧನೆಯನ್ನು ತೋರಿಸಿದರೆ ಅದು ಭಾರತದ ಕ್ರೀಡಾ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ. ಒಲಿಂಪಿಕ್ಸ್ಗೆ ಲಗ್ಗೆ ಇಡುವ ಕನಸು ಹಲವು ಭಾರತೀಯರಲ್ಲಿ ಚಿಗುರೊಡೆಯಲು ಇದು ದಾರಿ ಮಾಡಿ ಕೊಡುತ್ತದೆ.
ಬೃಹತ್ ಯುವ ಜನಸಂಖ್ಯೆಯನ್ನು ಹೊಂದಿರುವ 130 ಕೋಟಿ ಪ್ರಬಲ ಜನರ ದೇಶವನ್ನು ವಿಶ್ವದ ಪ್ರಬಲ ಕ್ರೀಡಾ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ಈಗಾಗಲೇ ಕ್ರೀಡಾಳುಗಳಿಗೆ ಪೂರಕವಾದ ಹಲವು ಯೋಜನೆಗಳನ್ನು ತರಲಾಗಿದೆ, ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಒಲಿಂಪಿಕ್ಸ್ನಲ್ಲಿ ಅಮೆರಿಕಾ, ಚೀನಾದಂತಹ ದೇಶಗಳಿಗೆ ಸೆಡ್ಡು ನೀಡಲು ನಮ್ಮ ದೇಶದ ಕ್ರೀಡಾ ಆಡಳಿತದಲ್ಲಿ ಪರಿವರ್ತಕ ಬದಲಾವಣೆಗಳನ್ನು ತರುವುದು ಅತ್ಯಂತ ಅವಶ್ಯಕವೂ ಆಗಿದೆ. ನಿಧಾನವಾಗಿಯಾದರೂ ಉತ್ತಮ ಬೆಳವಣಿಗೆ ನಡೆಯುತ್ತಿದೆ ಎಂಬುದು ಆಶಾದಾಯಕ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.