ಒಂದು ಸುಳ್ಳನ್ನು ನೂರುಬಾರಿ ಹೇಳಿದರೆ ಅದು ಸತ್ಯದಂತೆ ಭಾಸವಾಗುತ್ತದೆ. ಅಂತೆಯೇ ಅನೇಕರ ಪ್ರಕಾರ ಭಾರತೀಯರಿಗೆ ವಿದ್ಯಾಭ್ಯಾಸದ ಅರಿವನ್ನು ನೀಡಿದ್ದು ಬ್ರಿಟೀಷರು, ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ನೀಡಿದ್ದು ಮೊಘಲರು. ಬ್ರಿಟೀಷರು ಬಂದು ಭಾರತದಲ್ಲಿ ವಿದ್ಯಾಲಯಗಳನ್ನು ತೆರೆದರು ಎಂಬ ಸುಳ್ಳುಗಳನ್ನೇ ಸಾವಿರ ಬಾರಿ ಹೇಳುವ ಮೂಲಕ ಸತ್ಯವನ್ನಾಗಿಸಲಾಗುತ್ತಿದೆ . ಆದರೆ ಸತ್ಯ ವಿಚಾರವೆಂದರೆ ರಾಮಾಯಣದ ಕಾಲದಿಂದಲೂ ಭಾರತದಲ್ಲಿ ವಿದ್ಯೆಯ ಮತ್ತು ವಿದ್ಯಾಭ್ಯಾಸದ ಕಲ್ಪನೆ ಇದೆ. ವಿದ್ಯಾಲಯಗಳ ಬದಲಾಗಿ ಅಂದು ಗುರುಕುಲಗಳಿದ್ದವು. ಅರಸನ ಮಗ ಅಗಸನ ಮಗ ಎಂಬ ಬೇಧಗಳಿಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿಗಳೂ ಅಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದರು. ಬರೆದು ಸಂಗ್ರಹಿಸಿ ಇಡುವ ಪದ್ದತಿಯ ಬದಲಾಗಿ ಅಂದು ಅನುಭವದಿಂದ ಪರೀಕ್ಷಿಸಿ ಜ್ಞಾನವನ್ನು ಗಳಿಸುವ ಪರಿಪಾಠವಿತ್ತು. ಪಾಠಗಳನ್ನು ಸಂಕ್ಷಿಪ್ತವಾಗಿ ಶ್ಲೋಕ ಮತ್ತು ಮಂತ್ರಗಳ ರೂಪದಲ್ಲಿ ಗುರುಗಳಾದ ಮುನಿಗಳು ವಿದ್ಯಾರ್ಥಿಗಳಿಗೆ ಕಂಠಪಾಠ ಮಾಡಿಸುತ್ತಿದ್ದರು. ಇದನ್ನು ನೆನಪಿನಲ್ಲಿ ಇರಿಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿತ್ತೇ ಹೊರತು ಪುಸ್ತಕದಲ್ಲಿ ಬರೆದು ಅಟ್ಟವೇರಿಸುವ ಸಂಪ್ರದಾಯವಿರಲಿಲ್ಲ. ಆದರೆ ಕಾಲಗಳು ಬದಲಾದಂತೆ ಋಷಿಗಳು ಮತ್ತು ಪಂಡಿತರು ತಮ್ಮ ಜ್ಞಾನವನ್ನು ಪುಸ್ತಕದಲ್ಲಿ ಬರೆದು ಸಂಗ್ರಹಿಸಿ ಜೋಪಾನವಾಗಿಡುವ ಪದ್ದತಿಯು ಪ್ರಾರಂಭವಾಯಿತು. ಕಲಿಯುಗ ಅಂದರೆ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕೆಯ ಇತಿಹಾಸದಲ್ಲಿ, ಗುರುಕುಲ ಪದ್ದತಿಯ ಬದಲಾಗಿ ವಿಶ್ವ ವಿದ್ಯಾನಿಲಯಗಳು ಪ್ರಾರಂಭವಾದವು. ಒಂದೇ ಸೂರಿನಡಿಯಲ್ಲಿ ವೈವಿಧ್ಯ ಶಾಸ್ತ್ರಗಳನ್ನು ವಿದ್ಯೆಗಳನ್ನು ಕಲಿಸುವ ಪಂಡಿತರು ವಿಶ್ವ ವಿದ್ಯಾಲಯಗಳಲ್ಲಿ ವಸತಿ ಶಿಕ್ಷಣ ನೀಡಲು ಪ್ರಾರಂಭಿಸಿದರು. ಹಲವಾರು ಸಾವಿರ ವರ್ಷಗಳ ಹಿಂದಿನ ಅನೇಕ ಪುಸ್ತಕಗಳ ಪುಸ್ತಕ ಭಂಡಾರಗಳೂ ಈ ವಿದ್ಯಾಲಯಗಳಲ್ಲಿ ಲಭ್ಯವಾಗಿದ್ದವು. ನಮ್ಮ ಸಂಸ್ಕೃತಿಯನ್ನೇ ಹೊಂದಿದ್ದ ಅರಸರ ಆಳ್ವಿಕೆ ಇರುವಾಗ ಎಲ್ಲವೂ ಸಮೃದ್ದವಾಗಿಯೇ ನಡೆಯುತ್ತಿತ್ತು. ಆದರೆ ಯಾವಾಗ ಪರಕೀಯರ ಆಕ್ರಮಣ ಪ್ರಾರಂಭವಾಯಿತೋ ಅದರ ಬಳಿಕ ಆಕಾಶದಷ್ಟು ಜಾನವನ್ನು ತನ್ನೊಳಗೆ ಇರಿಸಿಕೊಂಡಿದ್ದ ವಿದ್ಯಾಲಯಗಳು ನಾಶ ಹೊಂದಲು ಪ್ರಾರಂಭವಾಯಿತು.
ಮೂಢನಂಬಿಕೆ ಮತ್ತು ಕುರುಡು ಧಾರ್ಮಿಕತೆಯನ್ನು ಹೊಂದಿದ್ದ ಮತಾಂಧ ಅರಸರು ಪ್ರತಿಯೊಂದನ್ನೂ ಪರಾಮರ್ಶಿಸಿ ಜ್ಞಾನವನ್ನು ಪಸರಿಸುತ್ತಿದ್ದ ಹಿಂದೂ ಧರ್ಮವನ್ನೂ ಮತ್ತು ಪಂಡಿತರನ್ನೂ ಪಾಂಡಿತ್ಯವನ್ನೂ ನಖಶಿಖಾಂತ ದ್ವೇಷಿಸುತ್ತಿದ್ದರು. ಅವರಿಗೆ ಪಾಂಡಿತ್ಯ, ಜ್ಞಾನ, ಪಂಡಿತರು ಬೇಕಾಗಿರಲಿಲ್ಲ. ಕೇವಲ ಧರ್ಮದ ಆಧಾರದಲ್ಲಿ ತಮ್ಮ ಆಜ್ಞೆಯನ್ನು ಪಾಲಿಸುವ ಕುರಿಗಳಂತ ಪ್ರಜೆಗಳು ಮಾತ್ರ ಬೇಕಾಗಿದ್ದರು. ಇದರಿಂದ ಅವರು ಪಂಡಿತರನ್ನೂ, ಪಂಡಿತರನ್ನು ತಯಾರಿಸುವ ವಿದ್ಯಾಲಯಗಳನ್ನೂ, ಪುಸ್ತಕಗಳನ್ನೂ ನಾಶಪಡಿಸಿದರು. ವಿದ್ಯಾ ಪರಾ ದೇವತಾ ಅನ್ನುವ ಭೂಮಿಯಿಂದ ವಿದ್ಯೆಯನ್ನೇ ಮಾಯವಾಗಿಸಲು ಪ್ರಯತ್ನಿಸಿದರಾದರೂ ಅದು ಅವರಿಂದ ಸಾಧ್ಯವಾಗಲಿಲ್ಲ. ಆದರೂ ಅವರು ಅನೇಕ ಮಹಾ ವಿದ್ಯಾಲಯಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾದರು.
🔷 ತಕ್ಷಶಿಲಾ ಮಹಾವಿದ್ಯಾಲಯ
ಕುರುಕುಲದ ರಾಜಕುಮಾರ ದುರ್ಯೋಧನ ತನ್ನ ತಾಯಿ ಗಾಂಧಾರಿಯ ಜನ್ಮಸ್ಥಾನದಲ್ಲಿ ತಕ್ಷಶಿಲಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ. ಮಹಾಭಾರತದಲ್ಲಿ ಹೇಳಿದಂತೆ ಗಾಂಧಾರಿಯು ಗಾಂಧಾರ ದೇಶದ ರಾಜಕುಮಾರಿ. ಹಿಂದಿನ ಗಾಂಧಾರ ದೇಶವು ಇಂದಿನ ಪಾಕಿಸ್ತಾನದ ರಾವಲಪಿಂಡಿ ಜಿಲ್ಲೆಯಲ್ಲಿದೆ. ಇತಿಹಾಸದಲ್ಲಿ ಬರುವ ಅನೇಕ ಭೌತಶಾಸ್ತ್ರಜ್ಞರು, ರಾಜನೀತಿ ತಜ್ಞರು, ವ್ಯಾಕರಣ ಪಂಡಿತರು, ಲೇಖಕರು, ರಾಜರು ತಕ್ಷಶಿಲಾ ಮಹಾವಿದ್ಯಾಲಯದಲ್ಲೇ ಅಧ್ಯಯನವನ್ನು ಮಾಡಿದ್ದರು. ಸಂಸ್ಕೃತ ವ್ಯಾಕರಣ ಪಿತಾಮಹ ಪಾಣಿನಿ, ಭೌತಶಾಸ್ತ್ರಜ್ಞರಾದ ಚರಕ, ಶಸ್ತ್ರ ಚಿಕಿತ್ಸಕರಾದ ಜೀವಕ ಕೋಮಾರಭಟ್ಟ, ಭಾರತ ಕಂಡ ಶ್ರೇಷ್ಠ ರಾಜತಂತ್ರಜ್ಞ ಚಾಣಾಕ್ಯ, ಪಂಡಿತ ವಿಷ್ಣು ಶರ್ಮ, ಮಯೂರರ ದೊರೆ ಚಂದ್ರಗುಪ್ತ ಹೀಗೆ ಅನೇಕರು ತಕ್ಷಶಿಲಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು.ವೇದವೀರ ಆರ್ಯರ ಗ್ರಂಥದ ಪ್ರಕಾರ ಮಯೂರ ವಂಶವು ಕ್ರಿಸ್ತಪೂರ್ವ 16 ನೇ ಶತಮಾನದಲ್ಲಿ ಆಡಳಿತ ನಡೆಸುತ್ತಿತ್ತು. ಕ್ರಿಸ್ತ ಪೂರ್ವ 16 ನೇ ಶತಮಾನ ಎಂದರೆ ಸುಮಾರು 3600 ವರ್ಷಗಳ ಹಿಂದೆಯೇ ಚಾಣಾಕ್ಯ ಮತ್ತು ಚಂದ್ರಗುಪ್ತ ಮೌರ್ಯರು ತಕ್ಷಶಿಲೆಯಲ್ಲೇ ಅಧ್ಯಯನ ನಡೆಸಿದ್ದರು. ಅಂದರೆ ತಕ್ಷಶಿಲಾ ವಿದ್ಯಾಲಯಕ್ಕೆ 3600 ವರ್ಷಗಳ ಇತಿಹಾಸವಿದೆ.!
ಇಲ್ಲಿ ಸುಮಾರು 60 ಕ್ಕೂ ಅಧಿಕ ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಇದು ಉನ್ನತ ಶಿಕ್ಷಣಕ್ಕಾಗಿ ಮೀಸಲಾಗಿದ್ದ ವಿದ್ಯಾಲಯವಾಗಿದ್ದು 16 ವರ್ಷ ಹೊಂದಿದ ವಿದ್ಯಾರ್ಥಿ ಇಲ್ಲಿ ಪ್ರವೇಶವನ್ನು ಪಡೆಯಬಹುದಾಗಿತ್ತು. ಇಲ್ಲಿ ಪ್ರವೇಶವನ್ನು ಪಡೆದ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಸಂಪಾದಿಸಲು ಬೃಹತ್ ಗ್ರಂಥಾಲಯವಿತ್ತು.ಇಲ್ಲಿ ವೇದ, ವೇದಾಂತ, ಆಯುರ್ವೇದ, ವ್ಯಾಕರಣ, ಶಸ್ತ್ರಚಿಕಿತ್ಸೆ, ಕೃಷಿ, ಅರ್ಥಶಾಸ್ತ್ರ, ಯುದ್ಧವಿದ್ಯೆ, ಶಸ್ತ್ರವಿದ್ಯೆ, ರಾಜನೀತಿ ಇತ್ಯಾದಿಗಳನ್ನು ಬೋಧಿಸುತ್ತಿದ್ದರು. ಭಾರತ ಮಾತ್ರವಲ್ಲದೆ ಗ್ರೀಸ್, ಅರಬ್, ಚೀನಾ ರಾಷ್ಟ್ರಗಳು ಸೇರಿದಂತೆ ಅನೇಕ ದೂರದೂರಿನ ವಿದ್ಯಾರ್ಥಿಗಳನ್ನೂ ಸೇರಿಸಿ ಸುಮಾರು 10,500 ವಿದ್ಯಾರ್ಥಿಗಳು ಮತ್ತು ಸಾವಿರಾರು ಬೋಧಕರನ್ನು ತಕ್ಷಶಿಲೆ ಹೊಂದಿತ್ತು. ಹುಮ್ ರಾಜವಂಶದ ತೋರಮಾನ ಎಂಬ ದೊರೆಯು 5 ನೇ ಶತಮಾನದಲ್ಲಿ ತಕ್ಷಶಿಲೆಯನ್ನು ನಾಶಗೊಳಿಸಿದನು.
🔷 ಮಿಥಿಲಾ ವಿಶ್ವವಿದ್ಯಾಲಯ
ಇತಿಹಾಸದಲ್ಲಿ ಇದರ ಕುರಿತಾಗಿ ಹೆಚ್ಚಿನ ಮಾಹಿತಿ ಇಲ್ಲವಾದರೂ, ಸೀತೆಯ ತಂದೆ ಜನಕ ಮಹಾರಾಜನ ಕಾಲದಿಂದಲೂ ಮಿಥಿಲಾ ರಾಜ್ಯದಲ್ಲಿ ಮಿಥಿಲಾ ವಿಶ್ವ ವಿದ್ಯಾಲಯದ ಅಸ್ಥಿತ್ವವಿತ್ತು. ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರ ಡೇಟಿಂಗ್ ತಂತ್ರಜ್ಞಾನವು ಅಷ್ಟು ಪುರಾತನತೆಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಬ್ರಾಹ್ಮಣರ ರೀತಿಯ ವಿದ್ಯಾಭ್ಯಾಸದ ವಿದ್ಯಾಲಯವಾಗಿದ್ದ ಮಿಥಿಲಾ ವಿಶ್ವ ವಿದ್ಯಾಲಯದಲ್ಲಿ ಜನಕರಾಜನು ಅನೇಕ ಸಂವಾದಗಳನ್ನು ಏರ್ಪಡಿಸುತ್ತಿದ್ದ ಮತ್ತು ಇದರಲ್ಲಿ ಅನೇಕ ಋಷಿಗಳು ಮತ್ತು ಪಂಡಿತರು ಪಾಲ್ಗೊಳ್ಳುತ್ತಿದ್ದರು. ಸಾಹಿತ್ಯ, ಸಾಂಸ್ಕೃತಿಕ ಕಲೆಗಳು, ಶಿಲ್ಪಕಲೆ ಮತ್ತು ವಿಜ್ಞಾನಗಳನ್ನು ಬೋಧಿಸುತ್ತಿದ್ದ ಈ ವಿದ್ಯಾಲಯದಲ್ಲಿ ನೃತ್ಯ, ಸಂಗೀತ ಮತ್ತು ವೇದಗಳನ್ನೂ ಬೋಧಿಸಲಾಗುತ್ತಿತ್ತು. 12 ನೇ ಶತಮಾನದಲ್ಲಿ ಭಾರತೀಯ ತತ್ವಶಾಸ್ತ್ರಜ್ಞ ಗಂಗೇಶ ಉಪಾಧ್ಯಾಯ ಅವರು ಅಲ್ಲಿ ನವ್ಯ ವಿದ್ಯಾಭ್ಯಾಸವನ್ನು ನೀಡುವ ವಿದ್ಯಾಲಯವನ್ನು ಪ್ರಶ್ರಂಭಿಸಿದರು ಮತ್ತು ಅವರು ಈಲ್ಲಿಯೇ ತತ್ವ ಚಿಂತಾಮಣಿಯನ್ನು ರಚಿಸಿದರು. ನವ್ಯ ಮತ್ತು ತರ್ಕ ಶಾಸ್ತ್ರಗಳನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಪ್ರಖ್ಯಾತಿಯನ್ನು ಹೊಂದಿತ್ತು. ಶಲಾಕ ಪರೀಕ್ಷಾ ಎಂಬ ಅತ್ಯಂತ ಕಷ್ಟಕರ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಪದವಿಯನ್ನು ನೀಡುವ ಸಂಪ್ರದಾಯವನ್ನು ಮಿಥಿಲಾ ವಿಶ್ವ ವಿದ್ಯಾಲಯ ಹೊಂದಿತ್ತು.
🔷 ತೆಲ್ಹಾರ ವಿಶ್ವವಿದ್ಯಾಲಯ
ತೇಲ್ಹಾರದಲ್ಲಿದ್ದ ಈ ವಿದ್ಯಾಕೇಂದ್ರವು ಬಿಹಾರದ ನಳಂದಾ ವಿಶ್ವವಿದ್ಯಾಲಯದಿಂದ 40 ಕಿಲೋಮೀಟರು ದೂರದಲ್ಲಿದೆ.ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯವರು ವಿದ್ಯಾಕೇಂದ್ರದ ಪಳೆಯುಳಿಕೆಯನ್ನು 2006 ರಲ್ಲಿ ಉತ್ಖಾನನ ಮಾಡಲು ಪ್ರಾರಂಭಿಸಿದರು ಮತ್ತು 2014 ರಲ್ಲಿ ಮೊದಲಬಾರಿ ಪಳೆಯುಳಿಕೆಯು ಲಭಿಸಿತು.ಚೀನಾ ಯಾತ್ರಿಕರಾದ ಹ್ಯುಎನ್ ತ್ಸಾನ್ಗ್ ಮತ್ತು ಇತ್ಸಿಂಗ್ ತಮ್ಮಪ್ರವಾಸೀ ಕಥನದಲ್ಲಿ ತೆಲ್ಹಾರ ವಿದ್ಯಾಲಯವು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನಿರ್ಮಿಸಲ್ಪಟ್ಟ ವಿದ್ಯಾಲಯವೆಂದೂ,ಜನಪ್ರಿಯತೆಯಲ್ಲಿ ನಳಂದಾ ವಿಶ್ವ ವಿದ್ಯಾಲಯಕ್ಕೆ ಸ್ಪರ್ಧೆಯನ್ನು ನೀಡುತ್ತಿತ್ತೆಂದೂ ದಾಖಲಿಸಿದ್ದಾರೆ. ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟ ಕಟ್ಟಡಗಳ ಮಣ್ಣನ್ನು ಪರೀಕ್ಷೆಗೊಳಪಡಿಸಿದಾಗ ಇದು ಕುಶಾನ ರಾಜವಂಶಸ್ಥರ ಕಾಲದಲ್ಲಿ ನಿರ್ಮಿಸಲ್ಪಟ್ಟದ್ದೆಂದು ತಿಳಿದು ಬಂದಿದೆ. ವೇದವೇರ್ ಆರ್ಯರ ಗ್ರಂಥದ ಪ್ರಕಾರ ಕುಶಾಣರು ಕ್ರಿಸ್ತಪೂರ್ವ 12 ರಿಂದ 8 ನೇ ಶತಮಾನದವರೆಗೆ ರಾಜ್ಯಭಾರ ಮಾಡಿದ್ದರು.ಇದರಂತೆ ತೆಲ್ಹಾರ ವಿದ್ಯಾನಿಲಯವು 3000 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಚೀನೀ ಯಾತ್ರಿಕನ ಪ್ರಕಾರ 1000 ಬೌದ್ಧ ಭಿಕ್ಕುಗಳು ಮತ್ತು ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಪ್ರಾರ್ಥನಾ ಮಂದಿರವನ್ನು ಹೊಂದಿದ್ದ ಈ ವಿದ್ಯಾಲಯವು ಮಹಾಯಾನ ಬೌದ್ಧ ತತ್ವವನ್ನು ಬೋಧಿಸುತಿತ್ತು. ಉತ್ಖನನ ಸಮಯದಲ್ಲಿ ದೊರೆತ ಒಂದೂವರೆ ಅಡಿಯಷ್ಟು ದಪ್ಪ ಬೂದಿಯನ್ನು ನೋಡಿದ ಪ್ರಾಚ್ಯವಸ್ತು ಸಂಶೋಧಕರ ಪ್ರಕಾರ ತೆಲ್ಹಾರ ವಿದ್ಯಾಲಯವನ್ನು ನಾಶಪಡಿಸಿ ಸುಟ್ಟುಹಾಕಲಾಗಿತ್ತು. ನಳಂದ ವಿದ್ಯಾಲಯವನ್ನು ನಾಶಪಡಿಸುವ ಸಂದರ್ಭದಲ್ಲಿ ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ 3 ಪ್ರಾಚೀನ ವಿಶ್ವ ವಿದ್ಯಾಲಯಗಳಲ್ಲಿ ಇದೂ ಒಂದು.ಸುಮಾರು 1193 ನೇ ಇಸವಿಯಲ್ಲಿ ಇದನ್ನು ನಾಶಪಡಿಸಿ ಸುಟ್ಟು ಹಾಕಲಾಯಿತು.
🔷 ಶಾರದಾ ಪೀಠ ದೇವಾಲಯದ ವಿಶ್ವ ವಿದ್ಯಾಲಯ
“ನಮಸ್ತೆ ಶಾರದಾ ದೇವಿ ಕಾಶ್ಮೀರ ಪುರವಾಸಿನಿ” ಸಂಸ್ಕೃತ ಶ್ಲೋಕವೊಂದರ ಸಾಲುಗಳಿವು…ಕಾಶ್ಮೀರ ವಾಸಿಯಾದ ಶಾರದೆಗೆ ನಮಸ್ಕಾರ ಎಂದು ಭಕ್ತಿಯಿಂದ ಹೇಳುವ ಸಾಲುಗಳು.ಶಾರದೆ ವಿದ್ಯಾ ದೇವತೆ. ಆಕೆ ಕಾಶ್ಮೀರದಲ್ಲಿ ನೆಲೆಸಿದ್ದಾಳೆ ಎಂಬುದು ಇದರ ಅರ್ಥ. ಪ್ರಾಚೀನ ಭಾರತದ ಅತ್ಯಂತ ಪ್ರಸಿದ್ಧ ವಿದ್ಯಾಕೇಂದ್ರ ಕಾಶ್ಮೀರದ ಶಾರದಾ ಪೀಠವಾಗಿತ್ತು. ಕಾಶ್ಮೀರವನ್ನು ಶಾರದಾ ದೇಶ ಎಂಬುದಾಗಿಯೂ ಕರೆಯಲಾಗುತ್ತಿತ್ತು. ಶಾರದಾ ಲಿಪಿಯು ಶಾರದಾ ವಿದ್ಯಾಪೀಠದಿಂದಾಗಿ ಬಹಳ ಪ್ರಸಿದ್ದಿಯನ್ನು ಪಡೆದಿತ್ತು. ಇಂದು ಶಾರದಾ ಪೀಠವು ಅತ್ಯಂತ ಜೀರ್ಣಾವಸ್ಥೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ. ಭಾರತ ಮತ್ತು ಅನೇಕ ಇತರ ದೇಶಗಳಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗಾಗಿ ಇಲ್ಲಿ ಬರುತ್ತಿದ್ದರು. ಇತಿಹಾಸದ ಕುರಿತಾಗಿ ಸಂಸ್ಕೃತದಲ್ಲಿ ರಾಜತರಂಗಿಣಿ ಕೃತಿಯನ್ನು ರಚಿಸಿದ ಕಲ್ಹಣ, ಅದ್ವೈತ ವೇದಾಂತವನ್ನು ಜಗತ್ತಿಗೆ ಸಾರಿದ ಶಂಕರಾಚಾರ್ಯ, ಟಿಬೆಟ್ ನ ವೈರೋತ್ಸನ, ಟಿಬೆಟಿಯನ್ ಲಿಪಿಯನ್ನು ಕಂಡುಹಿಡಿದ ಬೌದ್ಧ ಪಂಡಿತ ತೊಂಮಿ ಸಂಭೂತ ಹೀಗೆ ಅನೇಕ ಪಂಡಿತರು ಶಾರದಾ ಪೀಠದಲ್ಲಿ ಅಭ್ಯಸಿಸಿದವರೇ ಆಗಿದ್ದಾರೆ.
ವಿದ್ಯಾಪೀಠವನ್ನು ಯಾರು ಯಾವಾಗ ಸ್ಥಾಪಿಸಿದರು ಎಂದು ಖಚಿತವಾಗಿ ತಿಳಿದಿಲ್ಲದಿದ್ದರೂ, ಇಲ್ಲಿ ವಿದ್ಯಾಭ್ಯಾಸ ಮಾಡಿದ ಪಂಡಿತರ ಕಾಲವನ್ನು ಗಣನೆಗೆ ತೆಗೆದುಕೊಂಡರೆ ಆದಿಶಂಕರಾಚಾರ್ಯರು ಕ್ರಿಸ್ತಪೂರ್ವ 6 ನೇ ಶತಮಾನದಲ್ಲಿ ವಿದ್ಯಾಪೀಠದ ವಿದ್ಯಾರ್ಥಿಯಾಗಿದ್ದರು. ಇದನ್ನು ನೋಡಿದರೆ ಶಾರದಾ ಪೀಠವು ಸುಮಾರು 2500 ವರ್ಷದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಆದರೆ ಶಾರದಾ ವಿದ್ಯಾಪೀಠದ ಕುರಿತು ಮಹಾಭಾರತದಲ್ಲೂ ಉಲ್ಲೇಖವಿರುವುದರಿಂದ ಈ ವಿದ್ಯಾಪೀಠವು ಇನ್ನೂ ಹಲವು ಸಾವಿರ ವರ್ಷಗಳಷ್ಟು ಹಳೆಯದೆಂದು ತಿಳಿದುಬರುತ್ತದೆ. 14 ನೇ ಶತಮಾನದಲ್ಲಿ ಮೊದಲನೇ ಬಾರಿ ಮುಸ್ಲಿಂ ದೊರೆಗಳಿಂದ ಆಕ್ರಮಣಕ್ಕೊಳಗಾದ ವಿದ್ಯಾಪೀಠವು ಇಂದು ಸಂಪೂರ್ಣವಾಗಿ ಜೀರ್ಣವಾದ ಸ್ಥಿತಿಯಲ್ಲಿದೆ.
🔷 ನಲಂದಾ ವಿಶ್ವ ವಿದ್ಯಾಲಯ
ಉನ್ನತ ಶಿಕ್ಷಣಕ್ಕಾಗಿ ದೇಶ ಹೊರದೇಶಗಳಲ್ಲೂ ಪ್ರಸಿದ್ಧವಾಗಿದ್ದ ನಲಂದಾ ವಿದ್ಯಾಲಯವು ಅಂದಿನ ಮಗಧ ರಾಜ್ಯದಲ್ಲಿತ್ತು. ಇಂದು ಬಿಹಾರ ರಾಜ್ಯದಲ್ಲಿರುವ ಈ ವಿದ್ಯಾಲಯವು ಭಾರತದ ಅತ್ಯಂತ ಪುರಾತನ ವಿದ್ಯಾಲಯಗಳಲ್ಲಿ ಒಂದಾಗಿದೆ. ಭಾರತವನ್ನಾಳಿದ ಗುಪ್ತ ರಾಜವಂಶದ ಒಂದನೆಯ ಕುಮಾರಗುಪ್ತ ನಲಂದಾ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿದರು ಎನ್ನಲಾಗುತ್ತದೆ.ಕ್ರಿಸ್ತಶಕ 1 ನೇ ಶತಮಾನದ ಆದಿಯಲ್ಲಿ ನಲಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿತ್ತೆಂದು ಹೇಳಲಾಗುತ್ತದೆ. ಅಂದರೆ ನಲಂದಾ ವಿಶ್ವ ವಿದ್ಯಾಲಯವು 2000 ವರ್ಷಗಳ ಇತಿಹಾಸವನ್ನು ಹೊಂದಿದೆ! ಟಿಬೆಟ್, ಚೈನಾ, ಗ್ರೀಕ್ ಮತ್ತು ಪರ್ಷಿಯಾ ದೇಶಗಳಿಂದಲೂ ವಿದ್ಯಾರ್ಥಿಗಳು ನಲಂದಾ ವಿದ್ಯಾಕೇಂದ್ರದಲ್ಲಿ ಅಧ್ಯಯನಕ್ಕಾಗಿ ಆಗಮಿಸುತ್ತಿದ್ದರು. 1193 ರ ಸುಮಾರಿಗೆ ತುರ್ಕರ ಆಕ್ರಮಣ ನಡೆಯುವ ವರೆಗೂ ವಿದ್ಯಾಲಯವು ಸಮೃದ್ಧವಾಗಿ ನಡೆಯುತ್ತಿತ್ತು.
ನಲಂದಾ ವಿಶ್ವ ವಿದ್ಯಾಲಯದಲ್ಲಿ ಪ್ರಾಚೀನ ವೈದಿಕ ಶಿಕ್ಷಣದೊಂದಿಗೆ ಬೌದ್ಧ ಶಿಕ್ಷಣವನ್ನು ನೀಡಲಾಗುತ್ತಿತ್ತು. ಊರ ಮತ್ತು ದೂರದೂರಿನ ಬೌದ್ಧ ವಿದ್ಯಾರ್ಥಿಗಳು ನಲಂದಾದೆಡೆಗೆ ಬಹಳಷ್ಟು ಆಕರ್ಷಿತರಾಗುತ್ತಿದ್ದರು. ಯಾಕೆಂದರೆ ಗೌತಮ ಬುದ್ಧನ ಪ್ರಿಯ ಅನುಯಾಯಿಯಾದ ಸಾರಿಪುತ್ತನ ಜನ್ಮಸ್ಥಾನವು ನಲಂದವಾಗಿತ್ತು. ಇದರಿಂದಾಗಿ ನಲಂದಾದ ಸುತ್ತಮುತ್ತ ಅನೇಕ ಬೌದ್ಧ ವಿಹಾರಗಳ ನಿರ್ಮಾಣಗೊಂಡು ಈ ಸ್ಥಳವು ಮಹಾಯಾನ ಬೌದ್ಧ ಧರ್ಮದ ಕೇಂದ್ರ ಸ್ಥಳವಾಗಿ ಮಾರ್ಪಾಡು ಹೊಂದಿತು.ಭಾರತದ ರಾಜರು ಮಾತ್ರವಲ್ಲದೆ ವಿದೇಶದ ರಾಜರುಗಳು ಕೂಡಾ ವಿದ್ಯಾಕೇಂದ್ರದ ಕಟ್ಟಡ ನಿರ್ಮಾಣಗಳಿಗೆ ದೇಣಿಗೆಯನ್ನು ನೀಡುತ್ತಿದ್ದರು. ಪುರಾತತ್ವ ಇಲಾಖೆಯವರಿಗೆ ದೊರೆತ ದಾಖಲೆಯ ಪ್ರಕಾರ ಇಂಡೋನೇಷ್ಯಾದ ರಾಜ ಶೈಲೇಂದ್ರ ವಿದ್ಯಾಕೇಂದ್ರದಲ್ಲಿ ಕಟ್ಟಡವೊಂದನ್ನು ನಿರ್ಮಿಸಿದ್ದಾನೆ. ವಿದ್ಯಾಲಯದಲ್ಲಿ ಪ್ರವೇಶ ಪ್ರಕ್ರಿಯೆಯು ತುಂಬಾ ಕಠಿಣವಾಗಿತ್ತು. ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಚೈನೀ ಪ್ರವಾಸಿಗನ ಪ್ರಕಾರ ಪ್ರವೇಶ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಕೇವಲ 20 ಶೇಕಡಾ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಯನ್ನು ಯಶಸ್ವಿಯಾಗಿ ಮುಗಿಸುತ್ತಿದ್ದರು. ವಿದ್ಯಾಕೇಂದ್ರಕ್ಕೆ ದಾಖಲಾಗಲು ಕನಿಷ್ಠ 20 ವರ್ಷ ವಯಸ್ಸಾಗಿರಬೇಕು. ವಿದ್ಯಾಭ್ಯಾಸ ಉಚಿತವಾಗಿ ಪಡೆಯಬಹುದಾಗಿತ್ತು. ನೂರಕ್ಕೂ ಮಿಕ್ಕಿ ತರಗತಿಗಳು ನಿತ್ಯವೂ ನಡೆಯುತ್ತಿದ್ದು ಮತ್ತು ವಿದ್ಯಾರ್ಥಿಗಳು ತರಗತಿಯಲ್ಲಿರುವುದು ಕಡ್ಡಾಯವಾಗಿತ್ತು.
ವಿದ್ಯಾಕೇಂದ್ರದಲ್ಲಿ 10 ದೇವಾಲಯಗಳು, ಧ್ಯಾನ ಕೇಂದ್ರ, ತರಗತಿಗಳು, ವಸತಿ ಕೇಂದ್ರಗಳು ಮತ್ತು ಕೆರೆಗಳಿದ್ದವು. ವಿದ್ಯಾಕೇಂದ್ರದಲ್ಲಿ 10,000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು 2000 ಶಿಕ್ಷಕರಿದ್ದರು. ಬೌದ್ಧ ತತ್ವಗಳು, ವೇದ, ಸಂಸ್ಕೃತ ವ್ಯಾಕರಣ, ವೈದ್ಯಕೀಯ ಮತ್ತಿತರ ಅನೇಕ ವಿಷಯಗಳನ್ನು ಕಲಿಸುತ್ತಿದ್ದರು. ಟಿಬೆಟ್ ನ ಧಾರ್ಮಿಕ ಪುಸ್ತಕಗಳ ಪ್ರಕಾರ ಮೂರು ಮಾಳಿಗೆಯ ದೊಡ್ಡ ಕಟ್ಟಡವೊಂದರಲ್ಲಿ ತುಂಬಾ ಪುಸ್ತಗಳನ್ನು ಹೊಂದಿದ್ದ ಸುಸಜ್ಜಿತ ಗ್ರಂಥಾಲಯವಿತ್ತು. ಇಂತಹಾ ಮೂರು ಗ್ರಂಥಾಲಯಗಳಿದ್ದು ಒಂದು ಗ್ರಂಥಾಲಯವು ಮನುಸ್ಮೃತಿಗಳನ್ನು ಹೊಂದಿತ್ತು. ನಲಂದಾ ವಿಶ್ವವಿದ್ಯಾಲಯವು 1193 ರಲ್ಲಿ ತುರ್ಕ ಮುಸಲ್ಮಾನ ಕ್ರೂರ ದೊರೆಯಾದ ಭಕ್ತಿಯಾರ್ ಖಿಲ್ಜಿಯ ಆಕ್ರಮಣಕ್ಕೆ ಒಳಗಾಗಿ ಸಂಪೂರ್ಣ ನಾಶವಾಯಿತು. ವಿದ್ಯಾಕೇಂದ್ರದ ಗುರುಗಳನ್ನು ಕೊಂದು ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ನಾಶಪಡಿಸಿದ್ದ. ಸತತವಾಗಿ ಮೂರು ವರ್ಷಗಳ ಕಾಲ ಗ್ರಂಥಾಲಯವು ಉರಿಯುತ್ತಿತ್ತು. ನಲಂದಾ ಗ್ರಂಥಾಲಯದಲ್ಲಿ ಇದ್ದ ಮನುಸ್ಮೃತಿಯ ಮೂರು ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು ಸುಟ್ಟುಬೂದಿಯಾಗಿತ್ತು.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.