ಸುಳ್ಯ: ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಿ ಜನರು ಸುಂದರ ಬದುಕು ರೂಪಿಸಲು ಸಮಾಜದಲ್ಲಿರುವ ಅಸಮಾನತೆ ತೊಲಗಬೇಕು. ನಮ್ಮ ನಡುವೆ ಇರುವ ಅಸಮಾನತೆ ದೂರವಾದರೆ ಮಾತ್ರ ಸಬಲೀಕರಣ ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಅವರು ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ, 94ಸಿ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ಮೀಸಲಾತಿ ಬಂದ ಬಳಿಕ ಮಹಿಳೆಯರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ಸಮಾನತೆಯ ಕಡೆ ಹೆಜ್ಜೆ ಹಾಕಿದರು. ಹಿಂದಿನ ಕಾಲದಲ್ಲಿ ಗ್ರಾಮ ಪಂಚಾಯತ್ಗಳಲ್ಲಿ ಎಲ್ಲಾ ವರ್ಗದವರಿಗೆ ಅಧಿಕಾರ ನಡೆಸುವ ಅವಕಾಶ ಇರಲಿಲ್ಲ. ಪಂಚಾಯತ್ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಮೀಸಲಾತಿ ನೀಡಿದಾಗ ಇಂತಹ ಅಸಮಾನತೆ ದೂರವಾಗಲು ಸಾಧ್ಯವಾಯಿತು. ಆ ಮೂಲಕ ಎಲ್ಲರೂ ಸಮಾನವಾಗಿ ಬಾಳುವಂತಾಗಿದೆ. ಇತಿಹಾಸವನ್ನು ಮೆಲುಕು ಹಾಕಿದರೆ ಸಾಮಾಜಿಕ ಬದಲಾವಣೆಗೆ ಸಹಾಯಕವಾಗುತ್ತದೆ ಎಂದು ಅವರು ಹೇಳಿದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಗಳ ಮೂಲಭೂತ ಅಭಿವೃದ್ಧಿಗೆ ಸರಕಾರಗಳು ಹೆಚ್ಚು ಒತ್ತು ನೀಡುತ್ತಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಮತ್ತು ಅನುದಾನಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಜನರ ಸಹಕಾರ ಇದ್ದರೆ ಮಾತ್ರ ನಾಡಿನ ಅಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್, ತಾಲೂಕು ಪಂಚಾಯತ್ ಸದಸ್ಯೆ ಜಯಂತಿ ತೊಡಿಕಾನ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಕೇಂದ್ರ ನಾರು ಮಂಡಳಿಯ ಮಾಜಿ ಸದಸ್ಯ ಟಿ.ಎಂ. ಶಹೀದ್, ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸಂಪಾಜೆ ವಿ.ಎಸ್.ಎಸ್.ಎನ್ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್ ಕೊಂಗಾಜೆ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭಾರತಿ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಕೆ.ಪಿ.ಜಗದೀಶ್, ಜಗದೀಶ್ ರೈ, ಮಹಮ್ಮದ್ ಕುಂಞಿ ಗೂನಡ್ಕ, ತಹಶೀಲ್ದಾರ್ ಶ್ರೀನಿವಾಸ್ ಶೆಟ್ಟಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ಜಿ. ಪಾಲಿಚಂದ್ರ, ಗ್ರಾ.ಪಂ. ಪಿ.ಡಿ.ಒ ಕಾಂತಪ್ಪ ಉಪಸ್ಥಿತರಿದ್ದರು.
ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಸ್ವಾಗತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.