ಕೊರೋನಾ ಸಂಕಷ್ಟ, ಲಾಕ್ಡೌನ್ ಸಂದರ್ಭವನ್ನು ಸದುಪಯೋಗ ಮಾಡಿಕೊಂಡಿರುವ ಜಿಲ್ಲೆಯ ರೈತ ಕಲ್ಲಂಗಡಿ ಹಣ್ಣಿನ ಬೆಲ್ಲ ತಯಾರಿಸಿ ಸುದ್ದಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಜಯರಾಮ ಶೆಟ್ಟಿ ಅವರು ಹೊಟೇಲ್ ಉದ್ಯಮಿ ಹಾಗೂ ಕೃಷಿಕರೂ ಹೌದು. ಇವರು ತಮ್ಮ 8 ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಬೆಳೆದ ಹಣ್ಣುಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ ಹೋದಾಗ, ಕಲ್ಲಂಗಡಿ ಹಣ್ಣು ಬಳಸಿ ಅದರಿಂದ ಬೆಲ್ಲ ತಯಾರಿಸಿದ್ದಾರೆ. ಕಬ್ಬಿನಿಂದ ಬೆಲ್ಲ ತೆಗೆಯುವ ಮಾದರಿಯಲ್ಲಿಯೇ ಜಯರಾಮ ಅವರು ಕಲ್ಲಂಗಡಿ ಹಣ್ಣಿನ ಬೆಲ್ಲವನ್ನು ತಯಾರಿಸಿದ್ದಾರೆ.
ಕಳೆದ 30 ವರ್ಷಗಳಿಂದ ಮುಂಬೈನಲ್ಲಿ ಇವರು ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಆದರೆ ಕಳೆದ ಕೊರೋನಾ ಲಾಕ್ಡೌನ್ ಅವಧಿಯಲ್ಲಿ ಇವರು ತಮ್ಮ ಊರಿಗೆ ಬಂದು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ ನಿಟ್ಟೂರಿನಲ್ಲಿಯೇ ಹೊಟೇಲ್ ಒಂದನ್ನು ಸಹ ನಡೆಸುತ್ತಿದ್ದಾರೆ. ಇನ್ನು ತಮ್ಮ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣುಗಳನ್ನು ಕೊಳ್ಳುವವರಿಲ್ಲದೇ ಹೋದಾಗ, ಕೈಕಟ್ಟಿ ಕೂರದೆ, ಆ ಹಣ್ಣುಗಳನ್ನು ಬಳಸಿ ಸ್ಪೆಷಲ್ ಬೆಲ್ಲ ತಯಾರಿಸುವ.ಮೂಲಕ ಹೀಗೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಆ ಮೂಲಕ ಮನಸ್ಸದ್ದರೆ ಮಾರ್ಗವಿದೆ ಎಂಬುದಕ್ಕೆ ನಿದರ್ಶನರಾಗಿದ್ದಾರೆ.
ತಮ್ಮ ನಾಲ್ಕು ಎಕರೆ ಜಮೀನು ಬಳಸಿ ಕಲ್ಲಂಗಡಿ ಕೃಷಿ ಮಾಡಿದರೂ, ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಅವುಗಳನ್ನು ಕೊಳ್ಳುವವರಿಲ್ಲದೇ ಹಾಕಿದ ಬಂಡವಾಳವೂ ದೊರೆಯಲಿಲ್ಲ. ಕೇರಳದ ಕೆಲವು ವ್ಯಾಪಾರಿಗಳು ಕೆಜಿ ಗೆ 4 ರೂ. ಗಳಂತೆ ಹಣ್ಣುಗಳನ್ನು ಖರೀದಿ ಮಾಡಿದರು. ಆದರೂ ಆದಾಯ ದೊರೆಯಲಿಲ್ಲ. ಈ ಸಂದರ್ಭದಲ್ಲಿ ಹೊಟೇಲ್ ಸಿಬ್ಬಂದಿಗಳ ಜೊತೆ ಚರ್ಚಿಸಿ ಕಲ್ಲಂಗಡಿ ಹಣ್ಣಿನ ಬೆಲ್ಲ ತಯಾರಿಸಲು ಸಿದ್ಧರಾದರು. ಆ ಬಳಿಕ ಬೆಲ್ಲ ತಯಾರಿಸಿ, ಅದನ್ನು ಬೇರೆ ಬೇರೆ ತಿನಿಸುಗಳ ಜೊತೆ ನೀಡತೊಡಗಿದೆವು. ಈ ಕಲ್ಲಂಗಡಿ ಬೆಲ್ಲ ರುಚಿಯಲ್ಲೂ ಅದ್ಭುತ ಎಂದು ಶೆಟ್ಟರು ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಈ ವರ್ಷ ತಮ್ಮ 4 ಎಕರೆಯ ಜೊತೆಗೆ ತಮ್ಮ ಸ್ನೇಹಿತನ 4 ಎಕರೆ ಪ್ರದೇಶದಲ್ಲಿಯೂ ಕಲ್ಲಂಗಡಿ ಹಣ್ಣು ಬೆಳೆಯಲಾಗಿದೆ. ಈ ಬಾರಿಯೂ ಹಣ್ಣಿಗೆ ಬೇಡಿಕೆ ಇಲ್ಲ. ಹಾಗಾಗಿ ಕಳೆದ ಬಾರಿಯಂತೆ ಈ ಸಲವೂ ಬೆಲ್ಲ ತಯಾರಿಸುವುದಾಗಿ ಹೇಳಿದ್ದಾರೆ.ಕಲ್ಲಂಗಡಿ ಹಣ್ಣಿನ ರಸ ತೆಗೆದು, ಅದನ್ನು ಎರಡೆರಡು ಬಾರಿ ಫಿಲ್ಟರ್ ಮಾಡಿ, ಅದನ್ನು 4 ಗಂಟೆಗಳ ಕಾಲ ಕುದಿಸಲಾಗುತ್ತದೆ. ಸುಮಾರು 1 ಟನ್ ಕಲ್ಲಂಗಡಿ ಹಣ್ಣಿನಿಂದ 75 ಕೆಜಿ ಬೆಲ್ಲ ತೆಗೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಈ ಬೆಲ್ಲವನ್ನು ಎಷ್ಟು ಸಮಯ ಉಳಿಸಿಕೊಳ್ಳಬಹುದು ಎಂಬುದಕ್ಕೆ ಖಾತ್ರಿ ಇಲ್ಲ. ಐದು ದಿನಗಳ ವರೆಗೂ ಈ ಬೆಲ್ಲ ಉತ್ತಮ ರುಚಿ ಇದೆ. ಹೆಚ್ಚು ಬಾಳಿಕೆಗೆ ರೆಫ್ರಿಜರೇಟರ್ಗಳಲ್ಲಿ ಇದನ್ನು ಸಂಗ್ರಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ಲಾಕ್ಡೌನ್ ನಡುವೆ ಬೆಳೆದ ಬೆಳೆಗೆ ಮಾರುಕಟ್ಟೆ ಸಿಗದೆ ತಲೆ ಮೇಲೆ ಕೈಹೊತ್ತ ಅದೆಷ್ಟೋ ಜನರ ನಡುವೆ, ಈ ಅವಧಿಯನ್ನೇ ತಮ್ಮ ಸಂಶೋಧನೆಗೆ ಬಳಸಿ ಬೆಲ್ಲ ತಯಾರಿಸಿದ ಜಯರಾಮ ಶೆಟ್ಟರಿಗೆ ಅಭಿನಂದನೆ ಹೇಳಲೇ ಬೇಕು. ಇವರ ಈ ಕಾರ್ಯ ಮತ್ತಷ್ಟು ಜನರಿಗೆ, ಮತ್ತಷ್ಟು ಹೊಸ ಸಂಶೋಧನೆಗೆ ಮಾದರಿಯಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.