ಬೆಳ್ತಂಗಡಿ : ಅಧಿಕಾರ ಎಂಬುದು ಹೂವಿನ ಹಾಸಿಗೆಯಲ್ಲ. ಜವಾಬ್ದಾರಿ, ಹೊಣೆಗಾರಿಕೆ ಎಂಬ ಮುಳ್ಳು ಕೂಡಾ ಅದರಲ್ಲಿದೆ. ಅಂಬೇಡ್ಕರ್ರವರ ಆಶಯವನ್ನು ತಿಳಿದು ಸಮಾಜಮುಖಿ ಕರ್ತವ್ಯವನ್ನು ನಿರ್ವಹಿಸಿ ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟ(ಅಂಬೇಡ್ಕರ್ವಾದ) ರಾಜ್ಯ ಸಂಚಾಲಕಿ ಇಂದಿರಾ ಕೃಷ್ಣಪ್ಪ ಹೇಳಿದರು.ಅವರು ಆದಿತ್ಯವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ತಾಲೂಕು ಶಾಖೆ ಬೆಳ್ತಂಗಡಿ ಇದರ ವತಿಯಿಂದ ನಡೆದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸದಸ್ಯರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ೭೩ನೇ ತಿದ್ದುಪಡಿಯಿಂದ ಶೋಷಿತ ವರ್ಗದವರಿಗೂ ಅಧಿಕಾರ ಹಿಡಿಯುವ ಭಾಗ್ಯ ದೊರೆತಿದೆ. ಅದರಲ್ಲೂ ಮಹಿಳೆಯರಿಗೆ ಶೇ. ೫೦ರಷ್ಟಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ಹಿಂದೆ ಮಹಿಳೆಯರೆಂದರೆ ಮೂಗು ಮುರಿಯುವವರಿದ್ದರು. ಇಂದು ಶಿಕ್ಷಿತರಾಗುತ್ತಿರುವ ಮಹಿಳೆ ಸರಕಾರದ ಯೋಜನೆಗಳನ್ನು ತಿಳಿದು ಗ್ರಾಮಗಳ ಅಭಿವೃದ್ದಿಯಲ್ಲಿ ತೊಡಗಿಕೊಳ್ಳಬೇಕು. ಮೀಸಲಾತಿಯಿಂದ ಎಲ್ಲಾ ವರ್ಗದವರಿಗೂ ಅವಕಾಶ ಸಿಕ್ಕಿದೆ. ಇದನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ಅರಿತು ಕಾರ್ಯ ನಿರ್ವಹಿಸಬೇಕು. ಶಿಕ್ಷಣವನ್ನು ಪಡೆದು ಸಾಮಾಜಿಕ ಅನಿಷ್ಠಗಳಾದ ಭ್ರೂಣ ಹತ್ಯೆ, ಮೌಢ್ಯತೆ, ಕಂದಾಚಾರಗಳನ್ನು ತೊಡೆದು ಹಾಕಬೇಕು. ಗ್ರಾಮಗಳ ಸರ್ವತೋಮುಖ ಬೆಳವಣಿಗೆಯಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಮಾಡಬೇಕು. ಮಹಿಳೆ ಸಬಲೀಕರಣಳಾದಾಗ ಅಧಿಕಾರ ಮತ್ತು ಅವಕಾಶದ ಧ್ವನಿಯನ್ನು ಕೊಡುತ್ತದೆ. ಅಧಿಕಾರವನ್ನು ನಿಭಾಯಿಸುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕಿ, ಕೌಟುಂಬಿಕ ಸಲಹೆಗಾರ್ತಿ ಬೆಂಗಳೂರಿನ ಎಸ್. ಎಂ. ಶ್ಯಾಮಲ ಮಾತನಾಡಿ, ಶೋಷಣೆಗೆ ಒಳಗಾಗಿ ತುಳಿಯಲ್ಪಟ್ಟ ವರ್ಗದ ಜನರು ಇಂದು ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದು ಗ್ರಾಮಗಳ ಅಭಿವೃದ್ದಿ ಕೆಲಸ ಮಾಡಿ ಯಶಸ್ವಿಯಾಗಬೇಕು. ಚುನಾಯಿತರಾದ ಮಹಿಳೆರು ಡಿಗ್ರಿ ಪಡೆಯದಿದ್ದರೂ ಜ್ಞಾನ ಸಂಪತ್ತನ್ನು ಪಡೆದು ಗ್ರಾಮಗಳ ಅಭಿವೃದ್ದಿಯಲ್ಲಿ ಸಾಧನೆ ಮಾಡಿ ತೋರಿಸಬೇಕು. ಹಿಂಜರಿಕೆಯನ್ನು ಬಿಟ್ಟು ಸ್ಥಾನದ ಬೆಲೆಯರಿತು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ಎಲ್ಲಾ ವರ್ಗದ ಜನರನ್ನು ಗೌರವಿಸಿ ತಮ್ಮ ಅಧಿಕಾರವಧಿಯಲ್ಲಿ ಚ್ಯುತಿ ಬಾರದಂತೆ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಿ ಎಂದರು.
ದಸಂಸ(ಅಂಬೇಡ್ಕರ್ವಾದ)ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಮಾತನಾಡಿ ಶೋಷಿತ ವರ್ಗವನ್ನು ತುಳಿಯುತ್ತಿರುವವರ ವಿರುದ್ಧ ಹೋರಾಟ ಮಾಡಿ ಸಮಾಜದಲ್ಲಿ ಬದುಕಲು ದಸಂಸ(ಅಂಬೇಡ್ಕರ್ವಾದ) ಅವಕಾಶ ಮಾಡಿಕೊಟ್ಟಿದೆ. ಅಂಬೇಡ್ಕರ್ ಅವರ ಆಶಯದಂತೆ ತಳಮಟ್ಟದಲ್ಲಿರುವ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ದರಾಗಬೇಕು ಎಂದರು.ದಸಂಸ(ಅಂಬೇಡ್ಕರ್ವಾದ) ಬೆಳ್ತಂಗಡಿ ತಾಲೂಕು ಪ್ರಧಾನ ಸಂಚಾಲಕ ರಮೇಶ್ ಆರ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದಸಂಸ(ಅಂಬೇಡ್ಕರ್ವಾದ) ಜಿಲ್ಲಾ ಮುಖಂಡ ಎಸ್. ಪಿ. ಆನಂದ ಉಪಸ್ಥಿತರಿದ್ದರು.
ಪಂಚಾಯತ್ರಾಜ್ ಕಾಯ್ದೆಯ ಸದುಪಯೋಗ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಹಾಗೂ ಚಿಂತನೆ ವಿಷಯಗಳ ಬಗ್ಗೆ ಮೈಸೂರುನಜೀರ್ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳಾದ ಮೇಘ ಪಾಲೆತ್ತಾಡಿ ಹಾಗೂ ಬಳೆಂಜ ಗ್ರಾಪಂ ಸದಸ್ಯ ಚಂದ್ರಶೇಖರ್ ಭಟ್ ವಿಚಾರವನ್ನು ಮಂಡಿಸಿದರು.ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರನ್ನು ಅಭಿನಂದಿಸಲಾಯಿತು. ಸಮಿತಿಯ ಕೋಶಾಧಿಕಾರಿ ಜಯಾನಂದ ಸ್ವಾಗತಿಸಿದರು. ತಾ| ಸಂಚಾಲಕ ನೇಮಿರಾಜ್ ಕಾರ್ಯಕ್ರಮ ನಿರ್ವಹಿಸಿದರು. ಬೆಳ್ತಂಗಡಿ ಹೋಬಳಿ ಸಮಿತಿ ಸಂಚಾಲಕ ಬಾಬಿ ಮಾಲಾಡಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.