1896ರ ಸೆಪ್ಟಂಬರಿನ ಒಂದು ಮುಂಜಾನೆ ಬಾಂಬೆ ಬಂದರು ಪ್ರದೇಶ ಮಾಂಡ್ವಿ ಆರೋಗ್ಯ ಕೇಂದ್ರದಲ್ಲಿ ಕುಳಿತಿದ್ದ ಡಾ| ಅಕಾಸಿಯೊ ಗ್ಯಾಬ್ರಿಯಲ್ ವೇಗಾಸ್ ಬಳಿಗೆ ಒರ್ವ ಕೂಲಿ ಕಾರ್ಮಿಕ ತೀವ್ರ ಜ್ವರ ಎಂದು ಬಂದ. ವಿಶ್ವದ ಹಲವು ದೇಶಗಳ ನಾನಾ ನಮೂನೆಯ ಜ್ವರಗಳನ್ನು ಕ್ಷಣದಲ್ಲಿ ಪತ್ತೆಹಚ್ಚಿ ಗುಣಪಡಿಸುತ್ತಿದ್ದ ವೇಗಾಸನಿಗೆ ಅದೇಕೋ ಆತನದ್ದು ಸಾಮಾನ್ಯ ಜ್ವರದಂತೆನಿಸಲಿಲ್ಲ. ಆದರೂ ತಮ್ಮ ಎಂದಿನ ಲಸಿಕೆಯನ್ನು ಕೊಟ್ಟು ಕಳುಹಿಸಿದರು. ಸಂಜೆಯ ಹೊತ್ತಿಗೆ ಆತ ಸತ್ತನೆಂಬ ಸುದ್ಧಿ ವೇಗಾಸನಿಗೆ ಮುಟ್ಟಿತು. ಮರುದಿನ ಅಂಥದ್ದೇ ಜ್ವರದಿಂದ ಮತ್ತಷ್ಟು ಜನ ಬಾಂಬೆಯಲ್ಲಿ ಸತ್ತರು. ಆಸುಪಾಸು 9 ಲಕ್ಷದಷ್ಟಿದ್ದ ಬಾಂಬೆಯಲ್ಲಿ ಅದೇ ವಾರ 1900 ಜನ ಬೀದಿ ಹೆಣಗಳಾದರು. 1898ರಲ್ಲಂತೂ 18000 ಜನ ಸತ್ತರು. ಅಷ್ಟರ ಹೊತ್ತಿಗೆ ಆ ಗೆಡ್ಡೆ ಜ್ವರವನ್ನು ಪ್ಲೇಗ್ ಎಂದು ವೈದ್ಯಲೋಕ ಗುರುತಿಸಿತ್ತು. ಆದರೆ ಸತತ ಮೂರು ವರ್ಷಗಳ ಕಾಲ ಬಾಂಬೆಯನ್ನು ಈ ಪ್ಲೇಗ್ ರುದ್ರಭೂಮಿಯನ್ನಾಗಿಸಿತ್ತು. ಸಾವಿನ ಸಂಖ್ಯೆಯನ್ನು ಕಂಡ ಸರ್ಕಾರ ಕೈಚೆಲ್ಲಿತು. ಕಡೆಯ ಪ್ರಯತ್ನವೆಂಬಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ನಿಷ್ಣಾತನಾಗಿದ್ದ ಉಕ್ರೇನಿಯನ್ ವೈದ್ಯ ವ್ಲಾಡಿಮಿರ್ ಹಾಕಿನ್ನನ್ನು ಬಾಂಬೆಗೆ ಕರೆಸಿ ಜೆಜೆ ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರವನ್ನು ಆರಂಭಿಸಿತು. ಲಸಿಕೆ ಕಂಡುಹಿಡಿಯುತ್ತಲೇ ಹಾಕಿನ್ ಸರ್ಕಾರಕ್ಕೆ ಕೆಲವು ಮಾರ್ಗದರ್ಶನಗಳನ್ನು ನೀಡಿದ. ಆದರೆ ಪ್ಲೇಗಿಗೆ ಹೆದರಿದ ಬ್ರಿಟಿಷರು ಅದರ ಅನುಷ್ಠಾನಕ್ಕೆ ಮೀನಾಮೇಷ ಎಣಿಸತೊಡಗಿದರು. ಆಗ ಹಾಕಿನ್ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಒರ್ವ ಉದ್ಯಮಿ ಮುಂದೆ ಬಂದ. ಆತನಿಗೂ ಕುಟುಂಬವಿತ್ತು, ಆತನ ಬಳಿ ಅಪಾರ ಹಣವಿತ್ತು. ಆತನಿಗೆ ಬಾಂಬೆಯಲ್ಲೇ ಎರಡು ಖಾಸಗೀ ದ್ವೀಪಗಳಿದ್ದವು. ಮನಸ್ಸು ಮಾಡಿದ್ದರೆ ಆತ ಆಯ್ಕೆ ಮಾಡಿಕೊಂಡ ದೇಶಕ್ಕೆ ತನ್ನಿಡೀ ಕುಟುಂಬವನ್ನೇ ವರ್ಗಾಯಿಸಬಹುದಿತ್ತು. ಆದರೆ ಆತ ಇಡೀ ಬಾಂಬೆಯ ಕಾರ್ಮಿಕರ ಸ್ಥಳಾಂತರಕ್ಕೆ ನಿಂತ, ಸಮಾಜದ ಸಮಸ್ಯೆಯನ್ನೇ ತನ್ನ ಸಮಸ್ಯೆ ಎಂದುಕೊಂಡ. ಬಾಂಬೆಯನ್ನು ರಕ್ಷಿಸಿದ.
ಅಷ್ಟೇ ಅಲ್ಲ. ಪ್ಲೇಗ್ ನಂತರ ಆತನ ಬಗ್ಗೆ ದೇಶ ಕೈಮುಗಿಯಲು ಮತ್ತೊಂದು ಕಾರಣವೂ ಇತ್ತು.
ಡಾ.ಹಾಕಿನ್ ಅಷ್ಟರ ಹೊತ್ತಿಗೆ ಲಸಿಕೆ ಕಂಡುಹಿಡಿದಿದ್ದ. ಆದರೆ ಲಸಿಕೆ ತೆಗೆದುಕೊಳ್ಳಲು ಯಾವ ಕಾರ್ಮಿಕನೂ ಮುಂದೆ ಬರಲಿಲ್ಲ. ಜನರ ಅಜ್ಞಾನ ಮತ್ತು ಮೂಢನಂಬಿಕೆಯನ್ನು ತೊಡೆದುಹಾಕಲು ಸರ್ಕಾರಗಳಿಗೂ ಸಾಧ್ಯವಾಗಲಿಲ್ಲ. ಆದರೆ ಈ ಮನುಷ್ಯನಿಗೆ ಕಾರ್ಮಿಕರನ್ನು ಹೇಗೆ ಕರೆತರಬೇಕೆಂದು ಗೊತ್ತಿತ್ತು. ಮೊದಲ ಲಸಿಕೆಯನ್ನು ತಾನೇ ಪಡೆದುಕೊಂಡ. ಹೆಂಡತಿ-ಮಕ್ಕಳಿಗೂ ಚುಚ್ಚಿಸಿದ. ಅಲ್ಲದೆ ಮಗನ ಮದುವೆಗೆ ಬಂದವರಿಗೆಲ್ಲಾ ಲಸಿಕೆ ಕೊಡಿಸಿದ! ಆತನ ವ್ಯಕ್ತಿತ್ವ ಅರಿತಿದ್ದ ಕಾರ್ಮಿಕರು ಒಬ್ಬೊಬ್ಬರಾಗಿ ಲಸಿಕೆ ತೆಗೆದುಕೊಂಡರು. ಬಾಂಬೆ ಉಳಿಯಿತು. ಪ್ಲೇಗ್ ತೊಲಗಿತು.
ಕೋವಿಡ್ ಮದ್ದನ್ನು ಸಂಶಯದಿಂದ ಕಾಣುವ ದೊಡ್ಡ ಮನುಷ್ಯರೇ ತುಂಬಿರುವ ಈ ಕಾಲದಲ್ಲಿ ಪ್ಲೇಗ್ ಮದ್ದು ಪಡೆದುಕೊಂಡ ಆ ಮನುಷ್ಯ ಪ್ರಸ್ತುತವೆನಿಸುತ್ತಾನೆ. ಮುಂದೆ ಆತ ಭಾರತದ ಹಲವು ಮೊದಲುಗಳಿಗೆ ಕಾರಣನಾದ, ಭಾರತದ ಯಂತ್ರನಾಗರಿಕತೆಯ ಪಿತಾಮಹ ಎನಿಸಿಕೊಂಡ. ತನ್ನ ಹೆಸರಿನ ಸಾಮ್ರಾಜ್ಯವನ್ನೇ ಸ್ಥಾಪಿಸಿದ, ದಾನದಲ್ಲಿ ಕರ್ಣನಿಗಿಂತಲೂ ತುಸು ಹೆಚ್ಚು ಎನಿಸಿಕೊಂಡ. ಇವೆಲ್ಲವನ್ನೂ ಆತ ಸಾಧಿಸಿದ್ದು ಭಾರತೀಯ ಮೌಲ್ಯಗಳ ಅಧಾರದಲ್ಲಿ ಎಂಬ ಕಾರಣಕ್ಕೆ ಆತ ಮತ್ತಷ್ಟು ದೊಡ್ಡ ಮನುಷ್ಯನಾಗಿ ಕಾಣಿಸುತ್ತಾನೆ. ಆತ ಜಮ್ಶೆಡ್ಜಿ ನಸರ್ನಾನ್ಜಿ ಟಾಟಾ ಅಲ್ಲದೆ ಇನ್ನಾರಿದ್ದಾರು?
ಕಳೆದ ವರ್ಷದಿಂದ ತೊಡಗಿ ಇಂದಿನ ಎರಡನೆಯ ಅಲೆಯವರೆಗಿನ ಅವಧಿಯಲ್ಲಿ ಅದೇ ಟಾಟಾ ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಒಮ್ಮೆ ಅವಲೋಕಿಸಿದರೆ ಜಮ್ಶೆಡ್ಜಿ ನಸರ್ನಾನ್ಜಿ ಅವರ ಆದರ್ಶದ ಅರಿವಾಗುತ್ತವೆ. ಜೊತೆಗೆ ತಾನು ಹುಟ್ಟುಹಾಕುವ ಕಂಪನಿ ಹೇಗಿರಬೇಕೆಂಬುದರ ಬಗ್ಗೆ ಅವರಿಗೆ ಸ್ಪಷ್ಟತೆಯಿತ್ತೋ ಅದೇ ಸ್ಪಷ್ಟತೆಯನ್ನು ನೂರು ವರ್ಷಗಳ ನಂತರ ಕೂಡಾ ಅಷ್ಟೇ ತೀವ್ರವಾಗಿ ಆಂತರ್ಯದಲ್ಲಿ ಹರಿಸಿದ ಕಾರಣಕ್ಕೂ ಜಮ್ಶೆಡ್ಜಿ ಶ್ರೇಷ್ಠರಾಗುತ್ತಾರೆ. ಇಂದಿನ ಕೋವಿಡ್ ಕಾಲದ ಎಲ್ಲಾ ಸಂದಿಗ್ಧಗಳಲ್ಲೂ ಟಾಟಾ ಸರ್ಕಾರದೊಂದಿಗೆ ನಿಂತಿದೆ. ಅಂಬುಲೆನ್ಸುಗಳಿಂದ ಹಿಡಿದು ಹೊಸ ಆಸ್ಪತ್ರೆಯನ್ನೇ ಕಟ್ಟುವಷ್ಟು, ಕೋಟಿಗಟ್ಟಲೆ ದೇಣಿಗೆಯನ್ನು ನೀಡುವುದರಿಂದ ಹಿಡಿದು ಹೆಚ್ಚುವರಿಯಾಗಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಅನ್ನು ತಯಾರಿಸುವವರೆಗೂ ಟಾಟಾದ ಬದ್ಧತೆ ಇನ್ನೂ ಜೆಮ್ಶೆಡ್ಜಿ ಕಾಲದ್ದೇ! ಅಥವಾ ಜಮ್ಜೆಡ್ಜಿ ಪರಂಪರೆ ಇನ್ನೂ ಟಾಟಾದಲ್ಲಿ ಹರಿಯುತ್ತಲೇ ಇದೆ. ಕೋವಿಡ್ ಕಾಲದಲ್ಲಿ ಟಾಟಾ ತನ್ನ ವಿಶಾಲ ಸಾಮ್ರಾಜ್ಯದಲ್ಲಿ ಒಬ್ಬನೇ ಒಬ್ಬ ಉದ್ಯೋಗಿಯನ್ನು ಸಂಬಳದ ಕಾರಣಕ್ಕೆ ಕೆಲಸದಿಂದ ಕಿತ್ತುಹಾಕಿಲ್ಲ. ದೇಶಕ್ಕೆ ಯಾವಾಗಲೆಲ್ಲಾ ಸಂಕಷ್ಟ ಎದುರಾಗಿಯೋ ಆಗೆಲ್ಲಾ ಟಾಟಾ, ಸರ್ಕಾರಕ್ಕೆ ಎಲ್ಲಾ ರೀತಿಯ ಹೆಗಲನ್ನು ಕೊಟ್ಟಿದೆ. ದೇಶದ ನೋವನ್ನು ತನ್ನ ನೋವು ಎಂದು ಭಾವಿಸಿದೆ. ಆರ್ಥಿಕ ಧಿಗ್ಭಂದನ ಹೇರಿದಾಗ, ಕಾರ್ಗಿಲ್ ಕದನ ನಡೆದಾಗ, ಪ್ರವಾಹಗಳು ಸಂಭವಿಸಿದಾಗಲೆಲ್ಲಾ ಟಾಟಾ ಆಳುವ ಸರ್ಕಾರದ ಬೆನ್ನ ಹಿಂದೆ ನಿಂತಿದೆ. ಅಷ್ಟೇ ಅಲ್ಲ, ಸರ್ಕಾರದ ಮಹತ್ವಾಕಾಂಕ್ಷೆಯ ಬಹುತೇಕ ಯೋಜನೆಗಳ ಹಿಂದೆ ಟಾಟಾ ಇರುತ್ತದೆ. ವಿದ್ಯುತ್, ರಸ್ತೆ ಮೊದಲಾದ ಮೂಲ ಸೌಕರ್ಯಗಳಿಗೆ ಇಂದು ನೂರಾರು ಬೃಹತ್ ಕಂಪನಿಗಳು ದೇಶದಲ್ಲಿರಬಹುದು. ಆದರೆ ಅವುಗಳ ನಡುವೆ ಟಾಟಾದ ಬದ್ಧತೆಯದ್ದು ಬೇರೆಯೇ ತೂಕ. ಇಂದು ಹತ್ತಾರು ಕಂಪನಿಗಳು ಕೋವಿಡ್ ತೊಲಗಿಸಲು ದೇಣಿಗೆ-ಕ್ರಮ ಕೈಗೊಳ್ಳುತ್ತಿರಬಹುದು. ಆದರೆ ಟಾಟಾ ತನ್ನ ಸ್ಥಾಪನೆಯ ಮೊದಲ ದಿನದಿಂದಲೂ ದೇಶದ ಕೆಲಸವನ್ನು ತನ್ನ ಕೆಲಸ ಎಂದು ತಪಸ್ಸಿನಂತೆ ಮಾಡುತ್ತಲೇ ಬಂದಿದೆ. ಜೆಮ್ಶೆಡ್ಜಿ ಟಾಟಾರಿಂದ ಮೊದಲುಗೊಂಡು ದೊರಾಬ್ಜಿ ಟಾಟಾ, ನವರೋಜಿ ಸಕ್ಲತ್ವಾಲ. ಜೆಆರ್ಡಿ ಟಾಟಾ, ರತನ್ ಟಾಟಾವರೆಗೂ ಅವರದ್ದು ದೇಶದ ಕಾರ್ಯವೆಂದರೆ ಕಂಪನಿ ಕಾರ್ಯವೇ. ಅಲ್ಲದೆ ಟಾಟಾದ ನಾಲ್ಕು ಟ್ರಸ್ಟ್ಗಳು ಕೂಡಾ ಸಮಾಜ ಕಾರ್ಯಕ್ಕೆ ಸದಾ ಮುಡಿಪಾಗಿರುತ್ತವೆ. ಅದೂ ಶತಮಾನದಿಂದ! ಅಂಥಾ ಟಾಟಾದ ಹೆಮ್ಮೆಯ ತಾಜ್ ಮಹಲ್ ಹೊಟೇಲಿನ ಮೇಲೆ ಉಗ್ರರ ದಾಳಿಯಾದಾಗ ಹೊಟೇಲಿನ ಉರಿದ ಮೆಟ್ಟಿಲುಗಳ ಮೇಲೆ ನಿಂತು ರತನ್ ಟಾಟಾ, ಹೊಟೇಲನ್ನು “ದೇಶದ ಹೆಮ್ಮೆ” ಎಂದರೇ ಹೊರತು ’ಕಂಪನಿಯ ಹೆಮ್ಮೆ’ ಎನ್ನಲಿಲ್ಲ! ಟಾಟಾಕ್ಕೆ ದೇಶ ಮೊದಲು ಎಂಬ ಉರಿ ಎದೆಯೊಳಗೆ ಇಲ್ಲದಿರುತ್ತಿದ್ದರೆ, ಅದೆಷ್ಟೇ ಕೋಟಿ ಕೊಟ್ಟರೂ ಪಾಕಿಸ್ಥಾನಕ್ಕೆ ತನ್ನ ಟ್ರಕ್ಗಳನ್ನು ಮಾರಲಾರೆ ಎನ್ನಲಾಗುತ್ತಿರಲಿಲ್ಲ.
ಕಳೆದ ಕೆಲವು ದಿನಗಳಿಂದ ಕಾಣುತ್ತಿರುವ ಬೃಹತ್ ಕಂಪನಿಗಳ ಕೋವಿಡ್ ಕಾಳಜಿಗಾಗಿ ಮಾತ್ರ ಟಾಟಾ ನೆನಪಾಗುವುದಲ್ಲ. ಬಹಳಷ್ಟು ಕಂಪನಿಗಳು ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಬೆನ್ನ ಹಿಂದೆ ನಿಂತಿರಬಹುದು. ಮುಂದಕ್ಕೂ ಅವು ಟಾಟಾಕ್ಕಿಂತ ನೂರುಪಟ್ಟು ಹೆಚ್ಚು ಕೊಡುಗೆಗಳನ್ನು ಕೊಟ್ಟರೂ ಟಾಟಾದ ಹೆಗಲಿಗೂ ಬರಲಾರರು. ಏಕೆಂದರೆ ದೇಶದಲ್ಲಿ ತನ್ನ ಪಾತ್ರ ಏನೆಂಬುದುದರ ಬಗ್ಗೆ ಟಾಟಾಕ್ಕಿರುವಷ್ಟು ಸ್ಪಷ್ಟತೆ ಬೇರಾವುದೇ ಕಂಪನಿಗಿಲ್ಲ. ಅದಕ್ಕೆ ಟಾಟಾದ ಇತಿಹಾಸವೇ ಸಾಕ್ಷಿ. ಅದು ಯಾವತ್ತೂ ಹಾಕಿದ ಬಂಡವಾಳದ ಲೆಕ್ಕಾಚಾರದಲ್ಲಿ ಯಾವುದನ್ನೂ ಮಾಡಿಲ್ಲ. ನಾಳೆ ಮೋದಿ ನಮ್ಮನ್ನು ನೋಡಿಕೊಳ್ಳಬಹುದು ಎಂಬ ಸಣ್ಣ ಅಪೇಕ್ಷೆಯೂ ಅದಕ್ಕಿಲ್ಲ. ಟಾಟಾದ ಸ್ವಭಾವವೇ ಹಾಗಿದೆ. ಹುಟ್ಟಿದಾರಂಭದಿಂದಲೂ ಅದು ತನ್ನನ್ನು ರೂಪಿಸಿಕೊಂಡಿದ್ದೇ ಹಾಗೆ.
ಭಾರತದಲ್ಲಿ ಕೆಲವರಿಗೆ ಒಂದು ವಿಚಿತ್ರವಾದ ಶೋಕಿಯಿದೆ. ಏನೇ ಆಗಲಿ ಬ್ರಿಟಿಷರು ಭಾರತವನ್ನು ಕೈಗಾರಿಕೀಕರಣ ಮಾಡಿದರು, ಯಂತ್ರ ತಂದರು ಎನ್ನುವ ಅರೆಜ್ಞಾನದ ಮಾತನ್ನಾಡುತ್ತಾರೆ. ರೈಲು-ಸೇತುವೆ ಮತ್ತು ಬಂದರು ಅಭಿವೃದ್ಧಿ ಮಾಡಿದವರೆನ್ನುವುದನ್ನು ಬಿಟ್ಟರೆ ಬ್ರಿಟಿಷರು ಮಣ್ಣಾಂಗಟ್ಟಿ ಏನನ್ನೂ ಮಾಡಿದವರಲ್ಲ. ಯಂತ್ರ-ಕೈಗಾರಿಕೆ, ಮುಂದಿನ ಭಾರತದ ಬಗ್ಗೆ ಕನಸ್ಸು ಕಂಡವರು ದೇಶದಲ್ಲಿ ಒಬ್ಬನೇ ಒಬ್ಬ ಟಾಟಾ ಜೆಮ್ಶೆಡ್ಜಿ. ಹಾಗಾಗಿ ಅಂದೇ ಆಗಲಿ, ಇಂದೇ ಆಗಲಿ ಟಾಟಾ ಕೈಚಾಚಿ ಏನನ್ನೇ ಕೊಟ್ಟರೂ ಅಲ್ಲಿ ದೇಶ ಮೊದಲು ಎಂಬ ಭಾವ ದಟ್ಟವಾಗಿರುತ್ತದೆ, ಭವ್ಯ ಭಾರತದ ಬಗ್ಗೆ ಕನಸಿರುತ್ತದೆ. ಉಳಿದ ಕಂಪನಿಗಳ ಕೋವಿಡ್ ದಾನದಲ್ಲಿ ಆ ಗುಣವಿಲ್ಲ.
ಈ ಎಲ್ಲಾ ಕಾರಣಗಳಿಗಾಗಿ ಟಾಟಾದ ಕೊಟ್ಟ ಕೈ ಎಲ್ಲಾ ಕಾಲಕ್ಕೂ ಮುಖ್ಯವಾಗುತ್ತದೆ. ಅದಕ್ಕೆ ತಾತ್ವಿಕ ಕಾರಣವೂ ಇದೆ.
ಆದರ್ಶ ರಾಜ್ಯವೊಂದು ಹುಟ್ಟಲು ಏನೇನು ಕಾರಣಗಳಿರಬೇಕೋ ಅವುಗಳಲ್ಲಿ ಮುಖ್ಯವಾಗಿ ಇರಲೇಬೇಕಾದುದು ಉತ್ತಮ ಸಂಸ್ಥೆಗಳು. ಯಾವ ಸಮಾಜದಲ್ಲಿ ಶ್ರೇಷ್ಠ ಮೌಲ್ಯಗಳ ಸಂಸ್ಥೆಗಳಿರುತ್ತದೋ ಆ ಸಮಾಜ ಗಟ್ಟಿಯಾಗಿರುತ್ತವೆ. ಆದರೆ ಊಳಿಗಮಾನ್ಯತೆಯನ್ನು ನಂಬುವ ಬ್ರಿಟಿಷರು ತಮ್ಮ ಯಾವ ವಸಹಾತುಗಳಲ್ಲೂ ಅದಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ. ಆ ಮೂಲಕ ರಾಷ್ಟ್ರೀಯ ಆರ್ಥಿಕತೆ ಅಭಿವೃದ್ಧಿಯಾಗುವುದೆಂಬ ಭಯ ಅವರಿಗಿದ್ದೇ ಇತ್ತು. ಇನ್ನೊಂದೆಡೆ ಕಮ್ಯುನಿಸ್ಟರಿಗೂ ಸಂಸ್ಥೆಗಳನ್ನು ಕಟ್ಟುವ ಹಂಬಲ ಹೆಚ್ಚಿತ್ತು. ಆದ್ದರಿಂದ ಕಮ್ಯುನಿಸಂ ವಕ್ಕರಿಸಿದಲ್ಲೆಲ್ಲಾ ಹಳೆಯ ಸಂಸ್ಥೆಗಳನ್ನು ನಾಶಪಡಿಸುವ ಜಾಯಮಾನವನ್ನು ಅವರು ಹೊಂದಿದ್ದರು. ಉದಾಹರಣೆಗೆ ಟಿಬೇಟನ್ನು ಆಕ್ರಮಿಸಿಕೊಂಡ ಕಮ್ಯುನಿಸಂ ಅಲ್ಲಿದ್ದ ಎಲ್ಲಾ ಸಂಸ್ಥೆಗಳನ್ನು ನಾಶ ಮಾಡಿತು. ಹೊಸ ದಲೈಲಾಮಾ ಬಂದ, ಹೊಸ ಬೋಧಿ ಮರ ಬಂತು, ಹೊಸ ಶ್ಲೋಕಗಳು ಸೃಷ್ಟಿಯಾದವು. ಏಕೆಂದರೆ ಚೀನಾಕ್ಕೆ ಟಿಬೇಟನ್ನು ಹೊಸದಾಗಿ ಆಳಲು ಇವೆಲ್ಲವೂ ಬೇಕಿತ್ತು. ಬಂಡವಾಳಶಾಹಿಗಳದ್ದು, ಕ್ರಿಶ್ಚಿಯನ್ ಮಿಷನರಿಗಳದ್ದು ಮತ್ತು ಎಕನಾಮಿಕ್ ಹಿಟ್ಮನ್ಗಳದ್ದೆಲ್ಲಾ ಇದೇ ಕಥೆ. ಹೊಸದನ್ನು ಕಟ್ಟಲು ಹಳೆಯದರ ನಾಶ. ಇವೆಲ್ಲವೂ ಗೊತ್ತಿತ್ತೋ ಎಂಬಂತೆ ಟಾಟಾ ತನ್ನ ಕಂಪನಿಯನ್ನು ಕಟ್ಟಲಾರಂಭಿಸಿತು. ಆ ಮೂಲಕ ದೇಶ ಕಟ್ಟಿತು. ಹಾಗಾಗಿ ಅಂದಿನ ಟಾಟಾದ ಎಲ್ಲಾ ಬೆಳವಣಿಗೆಯನ್ನು ಸಾಕ್ಷಾತ್ ವಿವೇಕಾನಂದರು, ಸುಭಾಷ್ಚಂದ್ರ ಬೋಸರು ಮತ್ತು ಗಾಂಧಿಜಿ ಮನಪೂರ್ವಕವಾಗಿ ಬೆಂಬಲಿಸಿದರು. ಮುಂದಿನ ನೂರು ವರ್ಷಗಳುದ್ದಕ್ಕೂ ಅದರ ಫಲವನ್ನು ದೇಶ ಉಣ್ಣುತ್ತಿದೆ. ಬಹುಶ ಟಾಟಾರಿಗೆ ಇನ್ನೊಂದು ಸಂಗತಿಯೂ ತಿಳಿದಿರಲೇಬೇಕು. ಯೂರೋಪಿನ ದೇಶಗಳು ಹೇಗೆ ಹದಿನೈದನೆ ಶತಮಾನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾಭಿವೃದ್ಧಿಯಿಂದ ಬೆಳೆದವೋ ಹಾಗೆಯೇ ಸಮಸ್ಯೆಗಳ ಆಗರಗಳೂ ಆದವು ಎಂಬುದು. ಆ ಕಲಹ ಕುಟುಂಬದೊಳಗೂ ನುಸುಳಲು ಹೆಚ್ಚು ಕಾಲ ಬೇಕಾಗಿಲ್ಲ ಎಂಬ ಸತ್ಯವೂ ಜೆಮ್ಶೆಡ್ಜಿಯವರಿಗೆ ಗೊತ್ತಿದ್ದಿರಬೇಕು! ಅದಕ್ಕೆ ಟಾಟಾ ಕಂಡುಕೊಂಡ ಏಕೈಕ ಉಪಾಯಸೂತ್ರ ಭಾರತೀಯತೆಯ ಆಂತರ್ಯದಲ್ಲಿರುವ ವೈರಾಗ್ಯ ಮತ್ತು ವಿಶ್ವಮಾನತ್ವ. ದೇಶ ಮೊದಲು ಎಂಬ ಮಹಾ ಆದರ್ಶ. ಈ ಆದರ್ಶ ಟಾಟಾವನ್ನೂ ಕೈಹಿಡಿಯಿತು ಜೊತೆಗೆ ದೇಶದ ಕೈಯನ್ನೂ ಹಿಡಿಯಿತು.
ಟಾಟಾದ ಕಥನ ಇಂದು ಕೇವಲ ಕೈಮುಗಿಯುವ-ತಲೆಬಾಗುವ ಮೌಲ್ಯಕ್ಕೆ ಸೀಮಿತವಾಗಿದೆಯೇನೋ ಅನಿಸುತ್ತಿದೆ. ಏಕೆಂದರೆ ಇದು ಸ್ಟಾರ್ಟ್ಅಪ್ಗಳ ಯುಗ. ಇಂದು ಬಹಳಷ್ಟು ಯುವಕರಿಗೆ ಉದ್ಯಮಿಗಳಾಗುವ ಹಂಬಲವೇನೋ ಇದೆ. ಅವರಲ್ಲಿ ನಿಷ್ಠೆಯಿಂದ ತೆರಿಗೆ ಪಾವತಿಸಿ, ಅನೈತಿಕತೆಯೆಡೆಗೆ ಮುಖಮಾಡದೆ ಉದ್ದಿಮೆ ಆರಂಭಿಸಬೇಕೆಂಬ ಕನಸಿದೆ. ಕೆಲವರು ಆ ದಾರಿಯಲ್ಲಿ ನಡೆಯುತ್ತಲೂ ಇದ್ದಾರೆ. ಆದರೆ ಸಮಾಜದ ನೋವನ್ನೂ ತನ್ನದೇ ನೋವು ಎಂದುಕೊಳ್ಳುವ ನವೋದ್ಯಮಗಳೆಷ್ಟಿವೆ? ಹಾಗಾಗಿ ಟಾಟಾ ಶ್ರೇಷ್ಠವೆನಿಸುತ್ತದೆ. ಅದರ ಕೋವಿಡ್ ವಿರುದ್ಧದ ಸಮರ ಮುಖ್ಯವಾಗುತ್ತದೆ. ಟಾಟಾ ಜಗದಗಲ ಬಾಳಿದಷ್ಟೂ ಭಾರತಕ್ಕೆ ಒಳ್ಳೆಯದು. ಏಕೆಂದರೆ ಟಾಟಾ ಬೆಳೆದಷ್ಟೂ ಆದರ್ಶಗಳೂ ಬೆಳೆಯುತ್ತವೆ, ಟಾಟಾ ಬಾಳಿದಷ್ಟೂ ಭಾರತದ ಬೇರುಗಳು ಗಟ್ಟಿಯಾಗುತ್ತವೆ. ಟಾಟಾ ಬಾಳುತ್ತಲೇ ಇರಲಿ.
✍️ ಸಂತೋಷ್ ತಮ್ಮಯ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.