ಬೆಂಗಳೂರು: ಕೊರೋನಾ ಸೋಂಕು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದು, ಬೆಂಗಳೂರಂತೂ ಕೊರೋನಾ ನಾಗಾಲೋಟಕ್ಕೆ ಸಿಲುಕಿ ತತ್ತರಿಸಿ ಹೋಗಿದೆ. ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾಗಿದೆ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.
ಆರೋಗ್ಯ ತುರ್ತಿನ ಇಂತಹ ಕಠಿಣ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರ್ದೇಶನದಂತೆ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಮುಖ್ಯಸ್ಥರ ಬಳಿ ಅಗತ್ಯ ಚರ್ಚೆಗಳನ್ನು ಸರ್ಕಾರ ನಡೆಸಲಿದೆ ಎಂಬುದಾಗಿಯೂ ಸಚಿವರು ಹೇಳಿದ್ದಾರೆ.
ಸಾಂಕ್ರಾಮಿಕ ರೋಗ ನಿಯಂತ್ರಣ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳಡಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಬೆಂಗಳೂರಿನ್ಲಿರುವ 13 ವೈದ್ಯಕೀಯ ವಿಜ್ಞಾನ ಕಾಲೇಜುಗಳ ಹಾಸಿಗೆಗಳನ್ನು ಸರ್ಕಾರದ ಸುಪರ್ಧಿಗೆ ಪಡೆದುಕೊಂಡು ಮೀಸಲಿರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ಇಂತಹ ಕಾಲೇಜುಗಳ ಡಯಾಲಿಸಿಸ್, ತುರ್ತು ಆರೋಗ್ಯ ಪರಿಸ್ಥಿತಿ, ತಾಯಿ – ಮಗುವಿನ ಹಾಸಿಗೆ ಹೊರತು ಪಡಿಸಿದಂತೆ ಉಳಿದ 7500 ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುವುದಾಗಿ ಸುಧಾಕರ್ ತಿಳಿಸಿದ್ದಾರೆ.
ಹಾಗೆಯೇ ಕೊರೋನೇತರ ರೋಗಿಗಳ ಚಿಕಿತ್ಸೆಗಾಗಿ ರಾಜಧಾನಿಯ 30 ಹಾಸಿಗೆಗಳನ್ನು ಒಳಗೊಂಡಿರುವ ನರ್ಸಿಂಗ್ ಹೋಂಗಳನ್ನು ಬಳಕೆ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚು ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆಗಳ ಒಟ್ಟು 80% ಹಾಸಿಗೆಗಳನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಡುವಂತೆಯೂ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಹಾಗೆಯೇ ಸಾಮಾನ್ಯ, ಐಸಿಯು, ವೆಂಟಿಲೇಟರ್, ಆಕ್ಸಿಜನೇಟೆಡ್ ಮೊದಲಾದವುಗಳನ್ನು ಒಳಗೊಂಡಂತೆ ಎಲ್ಲಾ ಹಾಸಿಗೆಗಳು ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡುವಂತೆಯೂ ಅವರು ಸೂಚಿಸಿದ್ದಾರೆ. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸುಧಾಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.