ಒಂದು ಸಂಜೆ ಯಲ್ಲಾಪುರದ ಮಂಚಿಕೇರಿ ಬಳಿಯ ಶಿರನಾಲಾದ ಕವಯಿತ್ರಿ ಸೀತಾ ಹೆಗಡೆಯವರು ಕರೆಮಾಡಿ ಮುಂದಿನ ವಾರ ಆಲೆಮನೆ ಪ್ರಾರಂಭವಾಗುತ್ತದೆ, ಬನ್ನಿ ಎಂದು ಆಮಂತ್ರಿಸಿದರು. ಈ ಬಾರಿ ತಾವು ಹಾಕಿದ ಕಬ್ಬಿನ ಪ್ರಮಾಣ ಕಡಮೆ, ಮೂರ್ನಾಲ್ಕು ದಿನಗಳಲ್ಲಿ ಆಲೆಮನೆ ಮುಗಿದುಹೋಗುತ್ತದೆ, ಹಾಗಾಗಿ ಆ ದಿನಗಳಲ್ಲಿ ಬಂದುಹೋಗಲು ಆಗ್ರಹಿಸಿದರು. ಸರಿ, ನೋಡೋಣ ಎಂದು ಏನನ್ನೂ ನಿರ್ದಿಷ್ಟವಾಗಿ ಹೇಳದೆ ಅವರೊಂದಿಗಿನ ಕರೆ ಸಂಭಾಷಣೆಯನ್ನು ಮುಗಿಸಿದೆ.
ಉತ್ತರ ಕನ್ನಡ ಜಿಲ್ಲೆ ಹಾಗೂ ಭಾಗಶಃ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಆಲೆಮನೆಗಳಿಗೆ ಆಗಾಗ ಭೇಟಿ ನಡೆಯುತ್ತಿತ್ತು. ಆಯೆಲ್ಲ ಸಂದರ್ಭಗಳಲ್ಲಿ ಸಹಕಾರಿಗಳ ಜತೆಗೆ ಹೋಗುವುದು, ಅಲ್ಲೊಂದಿಷ್ಟು ಹಾಲು ಕುಡಿಯುವುದು, ಕಬ್ಬು ತಿನ್ನುವುದು, ಹರಟೆಹೊಡೆಯುವುದು ಇತ್ಯಾದಿ ಆಗುತ್ತಿತ್ತು. ಆಲೆಮನೆಗೆಂದೇ ಪ್ರವಾಸ ಹೋದದ್ದಿಲ್ಲ. ಅದನ್ನೊಂದು ಅಧ್ಯಯನದ ಹಿನ್ನೆಲೆಯಲ್ಲಿ ಅನುಭವಿಸಿದ್ದಿಲ್ಲ. ಅದರಲ್ಲೀಗ ಬಲು ವೇಗದಿಂದ ಸಾಕಷ್ಟು ಸ್ಥಿತ್ಯಂತರಗಳಾಗುತ್ತಿವೆ. ಅದರಲ್ಲಿ ತೊಡಗಿಕೊಂಡ ಕೆಲವರಿಗೆ ಪಡಲಾಗದ ಕಷ್ಟಗಳು ಎದುರಾಗುತ್ತಿವೆ. ಕೆಲವೆಡೆಗಳಲ್ಲಿ ಅವು ಅವಸಾನವನ್ನು ಕಾಣುತ್ತಿವೆ. ಅವು ಕಟ್ಟಿಕೊಟ್ಟಿದ್ದ ಸಾಂಸ್ಕೃತಿಕ ಚಹರೆಗಳು ಬದಲಾಗುತ್ತಿವೆ. ಈ ಹಿನ್ನೆಲೆಯಲ್ಲಿಯೇ ಒಂದು ಆಲೆಮನೆ ಪ್ರವಾಸವನ್ನು ಮಾಡಿದರಾದೀತು ಎಂಬ ಯೋಚನೆ ಬಂತು. ಬರಿಯ ಒಂದು ಪ್ರವಾಸದಲ್ಲಿ ಇದು ಸಮಗ್ರಗೊಳ್ಳಲಾರದು ಎಂಬ ಸಂದೇಹವೂ ಜತೆಗಿದ್ದೇ ಇತ್ತು. ಸಮಯ ಸಿಕ್ಕಾಗ ಅಥವಾ ಸಮಯ ಮಾಡಿಕೊಂಡು ವಿವಿಧೆಡೆಯ ವಿಧವಿಧ ಬಗೆಯ ಒಂದಷ್ಟು ಆಲೆಮನೆಗಳಿಗೆ ಪ್ರವಾಸಗೈಯಬೇಕೆಂಬ ಇರಾದೆ ಈ ಬಾರಿಯದಿತ್ತು. ಹಾಗೆ; ಈ ಹಿನ್ನೆಲೆಯಲ್ಲಿ ಕೆಲವು ಹಂತಗಳಲ್ಲಿ ಆಲೆಮನೆಗೆಂದೇ ಕೆಲವು ಪ್ರವಾಸವನ್ನು ಕೈಗೊಂಡಿದ್ದಾಯಿತು. ಕೆಲವನ್ನು ಇನ್ನಿತರ ಕಾರ್ಯಕ್ರಮಗಳಿಗೆ ಪೂರಕವಾಗಿ ಜೋಡಿಸಿಕೊಳ್ಳಲಾಯಿತು.
ಇವಿಷ್ಟು ಪ್ರಾಸ್ತಾವಿಕ ಅಂಶಗಳ ಹಿನ್ನೆಲೆಯಲ್ಲಿ, ಬೇರೆ ಪ್ರವಾಸವನ್ನು ಸಂಕೋಚಗೊಳಿಸಿ, ಸೀತಾ ಹೆಗಡೆಯವರಿಗೆ ಮತ್ತೆ ಕರೆ ಮಾಡಿ ಆಲೆಮನೆಗಾಗಿ ಅವರಲ್ಲಿಗೆ ಹೋಗುವ ಕುರಿತಾಗಿ ದಿನಾಂಕ ಸಹಿತ ದೃಢೀಕರಣವನ್ನು ಸಾರಿಬಿಟ್ಟೆ. ತಿಂಗಳ ಹಿಂದೆ ಯಲ್ಲಾಪುರದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದ ಸಂದರ್ಭದಲ್ಲಿ, ತಮ್ಮ ಮನೆಯಲ್ಲಿ ನಡೆಯುವ ಆಲೆಮನೆಯ ಬಗೆಗೆ ಮಾಹಿತಿ ನೀಡಿ ಈ ಬಾರಿ ಬರಲೇಬೇಕೆಂದು ಒತ್ತಾಯಿಸಿದ್ದರು. ಬರುವೆನೆಂದಿದ್ದೆ ಕೂಡಾ. ಕೊಟ್ಟ ಮಾತನ್ನು ಉಳಿಸಿಕೊಳ್ಳುವ ತೃಪ್ತಿಯೊಂದಿಗೆ ಅವರ ಆಲೆಮನೆಯ ದಾರಿಯಲ್ಲಿ ಬಸ್ಸನ್ನೇರಿದ್ದೆ.
ಸಂಜೆ ಸಾಗರಕ್ಕೆ ಹೋಗಿ ಕೆಲವರನ್ನು ಭೇಟಿಯಾಗಿ ರಾತ್ರಿ ಸಿದ್ದಾಪುರದಲ್ಲಿ ಉಳಕೊಂಡು ಮರುದಿನ ಮುಂಜಾನೆ ಮಂಚಿಕೇರಿಗೆ ದೌಡಾಯಿಸುವ ಸಂಕಲ್ಪದಂತೆ ಸಾಗರದಲ್ಲಿ ಲೋಲಾಕ್ಷನಿಗೆ ಬರುವ ಸುಳಿವನ್ನು ನೀಡಿದ್ದೆ. ಅದು ಮಿತ್ರ ನವೀನ ದೊಡ್ಡೇರಿಗೆ ಗೊತ್ತಾಗಿ ತನ್ನ ಗೊತ್ತಿನ ಓರ್ವನ ಆಲೆಮನೆಗೂ ಬನ್ನಿ ಎಂದು ಒತ್ತಾಯಿಸಿ ಕರೆ ಮಾಡಿದ್ದರು. ಸರಿ, ಒಂದೇ ಪ್ರವಾಸದಲ್ಲಿ ಎರಡು ಆಲೆಮನೆ ಎಂದು ಒಪ್ಪಿಗೆ ತಿಳಿಸಿದೆ.
ನವೀನ ಸೂಚಿಸಿದ ಆಲೆಮನೆ ಇರುವುದು ಸಾಗರ ತಾಲೂಕಿನ ಗುಡ್ಡೆಕೊಪ್ಪ ಸನಿಹದ ತುಂಬಿನಕೆರೆಯಲ್ಲಿ. ತನ್ನಿಬ್ಬರು ಸ್ನೇಹಿತರನ್ನು ಕಾರಿನಲ್ಲಿ ಸೊರಬದಿಂದ ಜತೆಗೆ ಕರಕೊಂಡು ಸಾಗರದಲ್ಲಿ ನನ್ನನ್ನು ಕಾಯುತ್ತಿದ್ದರು ನವೀನ್. ಕಾರನೇರಿದೆ. ಸಂಜೆ ಆರು ದಾಟಿತ್ತು. ಹೊಸನಗರ ರಸ್ತೆಯಲ್ಲಿ ಕಾರು ತುಂಬಿನಕೆರೆಗೆ ಧಾವಿಸಿತು. ರಸ್ತೆಯುದ್ದಕ್ಕೂ ಆಲೆಮನೆಯದೇ ಸುದ್ದಿ.
ಆಲೆಮನೆ ಸಾಗುತ್ತಿರುವ ದಿಕ್ಕು
ನವೀನರಿಗೂ ಆಲೆಮನೆ ಇಷ್ಟ. ಆ ಬದಿಯ ಆಲೆಮನೆಯ ಜೋನಿಬೆಲ್ಲವೂ ಇಷ್ಟ. ಇಷ್ಟಪಟ್ಟಿದ್ದು ಒಂದಷ್ಟು ಕಷ್ಟವನ್ನೂ ಕೊಡುತ್ತದಷ್ಟೆ. ವೃತ್ತಿಯಲ್ಲಿ ಎಲೆಕ್ಟ್ರೀಷನ್ ಆಗಿರುವ ಅವರು ವೃತ್ತಿನಿಮಿತ್ತ ಊರೂರುಗಳಿಗೆ ಸಂಚರಿಸುವವರಾಗಿ ಆಮಂತ್ರಣವಿದ್ದೂ ಇಲ್ಲದೆಯೂ ಕೆಲವಾರು ಆಲೆಮನೆಗಳಿಗೆ ಹೋಗಿದ್ದಾರೆ. ಎರಡೂ ಕಡೆಯೂ ಅವರಿಗೆ ವಿಭಿನ್ನ ರೀತಿಯ ಅನುಭವಗಳಾಗಿವೆ. ಆಮಂತ್ರಣವಿಲ್ಲದೆ ಹೋದ ಕಡೆ ಆತ್ಮೀಯತೆಯಿಂದ ಕರೆದು, ಯಥೇಚ್ಛವಾಗಿ ಹಾಲು ನೀಡಿ, ಒಯ್ಯಲೂ ಕೊಟ್ಟು, ಮತ್ತೆ ಬನ್ನಿ ಎಂದು ಆಮಂತ್ರಿಸಿ ಕಳುಹಿಕೊಟ್ಟವರೂ ಇದ್ದಾರೆ. ಆಮಂತ್ರಣವಿದ್ದೆಡೆ ಹೋಗಿ, ಯಾಕಾದರೂ ಹೋದೆನಪ್ಪ ಎಂದು ಬೇಸರಿಸಿಕೊಂಡು ಬಂದ ಸಂದರ್ಭಗಳೂ ಇವೆ. ಇವೆರಡರ ನಡುವೆ ಇನ್ನೂ ಹಲವಾರು ಅನುಭವಗಳು. ನವೀನರು ಇಂಥ ಸಂದರ್ಭದಲ್ಲಿ ಎಲ್ಲಿಗೇ ಆದರೂ ಒಬ್ಬರೇ ಹೋಗುವ ಸ್ವಭಾವದವರಲ್ಲ. ಆಮಂತ್ರಿಸಿದ ಕೆಲವೆಡೆ ಅವರ ಈ ಸ್ವಭಾವವೇ ಮುಜುಗರಪಡಿಸಿದ್ದಿದೆ. ಅಷ್ಟಾದರೂ ಅವರು ಅದರಿಂದ ವಿಮುಖರಾಗುವವರಲ್ಲ. ಹಿಂದೆಲ್ಲ ಯಥೇಚ್ಛವಾಗಿ ಕಬ್ಬೂ ಬೆಳೆಯುತ್ತಿದ್ದರು, ಉದಾರವಾಗಿ ಆಲೆಮನೆಯನ್ನೂ ನಡೆಸುತ್ತಿದ್ದರು. ಹೆಚ್ಚು ಮಂದಿ ಹೋದಷ್ಟು ಅವರಿಗೆ ಹೆಚ್ಚು ಆನಂದವಾಗುತ್ತಿತ್ತು. ಈಗೀಗ ಬೆಳೆಯುವ ಕಬ್ಬೂ ಕಡಮೆ, ನಡೆಸುವ ಆಲೆಮನೆಯೂ ಒಂದೆರಡು ದಿನಗಳದು. ತಮ್ಮ ಉಪಯೋಗಕ್ಕಾಗಿ ಎಷ್ಟು ಬೇಕೋ ಅಷ್ಟೇ ಕಬ್ಬು ಬೆಳೆದು ಬೆಲ್ಲ ಮಾಡುವ ಲೆಕ್ಕಾಚಾರ ಪ್ರಾರಂಭವಾದ ಮೇಲೆ ಆಲೆಮನೆಯ ದಿನಗಳೂ ಹ್ರಸ್ವಗೊಂಡವು, ಬಂದುಹೋಗುವವರ ಸಂಖ್ಯೆಯೂ ಹ್ರಸ್ವಗೊಂಡಿತು, ಮನಸ್ಸೂ ಹ್ರಸ್ವಗೊಂಡಿತು. ಹಿಂದೆಲ್ಲ ಆಲೆಮನೆಯ ಗಾಣವನ್ನು ತಿರುಗಿಸುತ್ತಿದ್ದವು ಕೋಣಗಳು. ಈಗ ಕೋಣನ ಕಣೆ ಹುಡುಕಿದರೂ ಸಿಗುವುದಿಲ್ಲ. ಯಂತ್ರವೇ ಗಾಣವನ್ನು ತಿರುಗಿಸುತ್ತಿದೆ. ಮನಸ್ಸನ್ನೂ ಕೂಡಾ. ಕಾರನ್ನು ಚಲಾಯಿಸುತ್ತ ನವೀನ್ ಇವನ್ನೆಲ್ಲ ಅನುಭವಿಸಿ ಸಲೀಸಾಗಿ ಹೇಳುತ್ತಿದ್ದರೆ, ಇವು ನನ್ನ ಪ್ರವಾಸ ಬರಹಕ್ಕೆ ದಿಕ್ಸೂಚಿ ಮಾತಿನಂತೆ ತೋರುತ್ತಿತ್ತು.
ಕಷ್ಟಪಡದೆ ಪ್ರಕೃತಿ ಉಳಿಯದು
ಆಲೆಮನೆಗಳ ಸ್ಥಿತ್ಯಂತರದ ವೇಗದಷ್ಟೇ ವೇಗವಾಗಿ ಗುಡ್ಡೆಕೊಪ್ಪದವರೆಗೆ ಬಂದ ಕಾರು, ಬಲಕ್ಕೆ ತಿರುಗಿ ತುಂಬಿನಕೆರೆಯೆಡೆಗೆ ಸಾಗುವಾಗ ನಿಧಾನಗೊಳ್ಳಬೇಕಾಯಿತು. ಮುಂದಕ್ಕೆ ಸಿಕ್ಕಿದ್ದು ಮಣ್ಣಿನ ರಸ್ತೆ. ಮಣ್ಣಿನ ಸಹವಾಸ ಸಿಕ್ಕಾಗ ನಮ್ಮ ಧಾವಂತವೂ ಕಡಮೆಯಾಗುತ್ತದೆ, ಪ್ರಕೃತಿಯ ವಿರುದ್ಧದ ನಮ್ಮ ನಡೆಯೂ ನಿಯಂತ್ರಣಕ್ಕೆ ಬರುತ್ತದೆ. ನಮ್ಮತನದ ಕನ್ನಡಿಯಾಗುವ ಶಕ್ತಿ ಈ ಮಣ್ಣಿಗಿದೆಯೆನಿಸುತ್ತದೆ. ಆ ಕನ್ನಡಿಯನ್ನು ನಾವೆಷ್ಟು ಬಳಸಿಕೊಳ್ಳುತ್ತೇವೆನ್ನುವುದು ಮುಖ್ಯ.
ಕಾರು ತುಂಬಿನಕೆರೆ ಆಲೆಮನೆ ಮುಂದೆ ನಿಂತಿತು. ಇಳಿದೆವು. ಆಲೆಮನೆ ಹತ್ತಿರ ಹೋದೆವು. ಸುಮಾರು ಎರಡು ತಿಂಗಳ ಕಾಲ ನಡೆಯುವ ಎರಡು ಕೊಪ್ಪರಿಗೆಗಳ ಸಾಮೂಹಿಕ ಆಲೆಮನೆಯಿದು. ಅಂದರೆ ಅನೇಕರು ತಮ್ಮ ಕಬ್ಬನ್ನು ಇಲ್ಲಿ ತಂದು ಬೆಲ್ಲ ಮಾಡಿಕೊಂಡು ಹೋಗುವ ವ್ಯವಸ್ಥೆಯಿರುವ ಆಲೆಮನೆ. ಇಲ್ಲಿ ಒಂದು ಒಲೆ ಕಟ್ಟಿಗೆಯಿಂದ ಉರಿಯುತ್ತದೆ. ಮತ್ತೊಂದು ಕಬ್ಬಿನ ಸಿಪ್ಪೆಯಿಂದ. ಸುತ್ತ ಪೊದೆಗಳು ಮತ್ತು ಮಧ್ಯೆ ಮಧ್ಯೆ ಅಲ್ಲಲ್ಲಿ ಖಾಲಿ ಜಾಗ ಇದೆ. ಅಲ್ಲಿ ಕಬ್ಬಿನ ಸಿಪ್ಪೆಯನ್ನು ಒಣಹಾಕುತ್ತಾರೆ. ಆಲೆಮನೆಗಳಲ್ಲಿ ಒಲೆಗೆ ಕಟ್ಟಿಗೆ ಬಳಸಲು ನಿಷೇಧವಿದೆ. ಈ ಹಿನ್ನೆಲೆಯಲ್ಲಿ ಈಗೀಗ ಅರಣ್ಯ ಇಲಾಖೆಯವರು ಆಲೆಮನೆಗಳಿಗೆ ದಾಳಿ ನಡೆಸುವುದಿದೆ. ಕಟ್ಟಿಗೆ ಬಳಸುವುದು ಗೊತ್ತಾದರೆ ದಂಡ ವಸೂಲಿ ಮಾಡುತ್ತಾರೆ. ಉಳಿದೆಲ್ಲ ಕಾನೂನುಗಳಂತೆ ಈ ಕಾನೂನಿನ ದುರುಪಯೋಗವೂ ಆಗುತ್ತದೆನ್ನಿ. ಹಾಗಿದ್ದೂ ಈಗೀಗ ಒಲೆಗೆ ಕಬ್ಬಿನ ಸಿಪ್ಪೆ ಬಳಸುವ ಪ್ರಮಾಣ ಹೆಚ್ಚಾಗಿದೆ. ಅಷ್ಟರ ಮಟ್ಟಿಗೆ ಕಾಡಿನ ಧ್ವಂಸಕ್ರಿಯೆ ನಿಯಂತ್ರಣಗೊಂಡಿದೆಯೆನ್ನಬಹುದು. ಕಬ್ಬಿನ ಸಿಪ್ಪೆಯನ್ನು ನಿರಂತರ ಒಲೆಗೆ ಹಾಕುತ್ತ ಇರಬೇಕು. ಅಂದರೆ ಒಬ್ಬ ಅದೇ ಕೆಲಸವನ್ನು ಮಾಡುತ್ತ ಇರಬೇಕಾಗುತ್ತದೆ. ಕಟ್ಟಿಗೆ ಒಲೆಯಾದರೆ ಒಮ್ಮೆ ಹಾಕಿದರೆ ಮುಗಿಯಿತು, ಹಾಲು ಕುದ್ದು ಬೆಲ್ಲವಾಗುವತನಕ ಉರಿಯ ಕುರಿತು ಚಿಂತಿಸಬೇಕಾಗಿ ಬರುವುದಿಲ್ಲ. ಪ್ರಕೃತಿಗೆ ಹಾನಿಯೆಸಗದೆ ತೊಡಗಬೇಕಾದರೆ ತುಂಬಾ ಕಷ್ಟಪಡಬೇಕು!
ಆಲೆಮನೆಯ ಮುಖ್ಯ ಕೆಲಸ
ಒಂದು ಕೊಪ್ಪರಿಗೆಯಲ್ಲಿ ಬೆಲ್ಲ ಬೇಯುತ್ತಿತ್ತು. ಮತ್ತೊಂದರದು ಇಳಿಸಿಯಾಗಿತ್ತು. ಕಬ್ಬನ್ನು ಗಾಣಕ್ಕೆ ಕೊಡುವ ಕಾರ್ಯ ಒಂದು ಹಂತಕ್ಕೆ ನಿಂತಿತ್ತು. ಶೇಖರಣೆಯಾದ ಹಾಲನ್ನು ಕೊಪ್ಪರಿಗೆಗೆ ಸುರಿದ ಮೇಲಷ್ಟೆ ಮತ್ತೊಮ್ಮೆ ಕಬ್ಬನ್ನು ಗಾಣಕ್ಕೊಡ್ಡುವುದು. ಬೆಲ್ಲವನ್ನು ಕೊಪ್ಪರಿಗೆಯಿಂದ ಒಮ್ಮೆ ಇಳಿಸಿಬಿಟ್ಟರೆ ಅದು ಕೆಲಸ ಮಾಡುವವರಿಗೆ ಉಸ್ಸಪ್ಪಾ ಎನ್ನುವ ಹಂತ. ಆ ಹಂತದಲ್ಲಿದ್ದರು ಅಲ್ಲಿಯ ಕಾರ್ಮಿಕರು, ನಾವು ಆಲೆಮನೆ ಪ್ರವೇಶಿಸುವ ವೇಳೆಗೆ. ಈ ಹಂತದ ಬಳಿಕ ಕೊಪ್ಪರಿಗೆಯನ್ನು ಒಮ್ಮೆ ತೊಳೆದು ಮತ್ತೆ ಒಲೆಯ ಮೇಲೇರಿಸಿ ಹಾಲನ್ನು ಸೋಸಿ ಸುರಿಯಬೇಕು. ಇವಿಷ್ಟಾದರೆ ಎರಡನೆಯ ಬಾರಿ ಉಸ್ಸಪ್ಪಾ ಎನ್ನಲಡ್ಡಿಯಿಲ್ಲ. ಮತ್ತೆ ಯಥಾಪ್ರಕಾರ ಒಬ್ಬಾತನಿಗೆ ಬೆಂಕಿಗೆ ಸಿಪ್ಪೆ ಹಾಕುವ ಕೆಲಸ. ಹಾಲು ತೆಗೆಯುವವರಿಗೆ ಗಾಣಕ್ಕೆ ಕಬ್ಬು ನೀಡುವ ಕೆಲಸ.
ನಾವು ಹೋದಾಗ ನವೀನ್ ಸ್ನೇಹಿತ ಅಲ್ಲಿದ್ದುದರಿಂದ ಬೇಗಬೇಗನೆ ನಮ್ಮ ಕೆಲಸಗಳಾದುವು. ಮುಖ್ಯವಾಗಿ ಹಾಲು ಕುಡಿಯುವುದು ಮತ್ತು ನೊರೆ ಬೆಲ್ಲವನ್ನು ತಿನ್ನುವುದು. ಇಷ್ಟಾಗುವಾಗ ಬೈಕಿನಲ್ಲಿ ಸಾಗರದಿಂದ ಲೋಲಾಕ್ಷ ಮತ್ತವನ ಸ್ನೇಹಿತ ಇಬ್ಬರೂ ನಮ್ಮನ್ನು ಸೇರಿಕೊಂಡರು. ರಾತ್ರಿ 8.15ಕ್ಕೆ ಸಾಗರದಿಂದ ಸಿದ್ದಾಪುರಕ್ಕೆ ಕೊನೆಯ ಬಸ್. ಅದನ್ನೇರಿ ಸಿದ್ದಾಪುರ ಮಂಜುನಾಥರ ಮನೆಸೇರಿಕೊಳ್ಳಲು ಲಗುಬುಗನೆ ಅಲ್ಲಿಂದ ಜಾಗ ಖಾಲಿಮಾಡಿದೆವು.
ಮರುದಿನ ಬೆಳಿಗ್ಗೆ ಮಂಜು ಮನೆಯಲ್ಲಿ ಉಪಾಹಾರ ಸೇವಿಸಿ ಸಿದ್ದಾಪುರ ಬಿಟ್ಟು ಮಧ್ಯಾಹ್ನ ವೇಳೆಗೆ ಮಂಚಿಕೇರಿ ತಲಪಿ ಮಂಜುನಾಥ ಹೆಗಡೆಯವರ ಹಿಂದೆ ಬೈಕಲ್ಲಿ ಕುಳಿತು ಶಿರನಾಲ ತಲುಪಿದೆ. ಹಿಂದಿನ ದಿನವಷ್ಟೆ ಅವರ ಆಲೆಮನೆ ಪ್ರಾರಂಭವಾದುದು. ಮಂಜುನಾಥ ಹೆಗಡೆಯವರದು ಒಂದು ಪುಟ್ಟ ಕೂಡುಕುಟುಂಬ. ಅವರ ಅಣ್ಣ ನಾಗೇಶ ಹೆಗಡೆಯವರದು ಮನೆ ಯಜಮಾನಿಕೆ. ಅವರ ಪತ್ನಿ ಸೀತಾ ಹೆಗಡೆ ಓರ್ವ ಕವಯಿತ್ರಿ. ಕತೆಗಾತಿ ಕೂಡಾ. ಅವರ ಈ ಸಾಹಿತ್ಯದ ಕೃಷಿಯ ಕಾರಣಕ್ಕಾಗಿ ಆ ಮನೆಯ ಸಂಪರ್ಕ, ಆತ್ಮೀಯತೆ ಲಭ್ಯವಾಯಿತು. ಅಣ್ಣ ತಮ್ಮ ಇಬ್ಬರೂ ಗಟ್ಟಿ ಕೆಲಸಗಾರರೇ. ಮನೆಯೊಳಗಿನ ಅಷ್ಟನ್ನೂ ಸೊಸೆಯರಿಬ್ಬರು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ.
ಮನೆ ಸದಸ್ಯರಿಂದಲೇ ನಿರ್ವಹಣೆ
ಊಟ ವಿಶ್ರಾಂತಿಯ ಬಳಿಕ ಮನೆಗೆ ಅನತಿ ದೂರದಲ್ಲೇ ಇರುವ ಆಲೆಮನೆಯತ್ತ ಹೆಜ್ಜೆ ಹಾಕಿದೆ. ಮಂಜುನಾಥ ಹೆಗಡೆಯವರು ಗಾಣಕ್ಕೆ ಕಬ್ಬು ಕೊಡುತ್ತಿದ್ದರು. ಹೊರಬರುವ ಸಿಪ್ಪೆಯನ್ನು ಸೀತಕ್ಕ ತೆಗೆತೆಗೆದು ಹಾಕುತ್ತಿದ್ದರು. ನಾಗೇಶ ಹೆಗಡೆಯವರು ಕಬ್ಬಿನ ಗದ್ದೆಯಲ್ಲಿ ಕೆಲಸ ನೋಡಿಕೊಳ್ಳುತ್ತಿದ್ದರು. ಮನೆ ಕಡೆಗೆ ಹಿರಿಸೊಸೆ. ಹೀಗೆ ಇಲ್ಲಿ ಇಡಿಯ ಕುಟುಂಬ ಆಲೆಮನೆಯನ್ನು ನಿರ್ವಹಿಸುತ್ತಿದೆ. ಕಬ್ಬು ಕಡಿಯಲು ನಾಲ್ಕೈದು ಮಂದಿ ಸಹಾಯಕರು ಇದ್ದಾರೆ. ಅವರೇ ಕೊಪ್ಪರಿಗೆ ಇಳಿಸಲು ಸಹಾಯಕ್ಕೆ ಬರುತ್ತಾರೆ. ಇನ್ನು ಆ ಮನೆಯ ಕುಟುಂಬ ಸದಸ್ಯರಂತೆ ಇರುವ ವಾಲ್ಯಾ ಸಿದ್ದಿ ಹಗಲು ವೇಳೆಯೂ ಕೆಲಸಕ್ಕೆ ಬಂದು ರಾತ್ರಿ ವೇಳೆ ಆಲೆಮನೆ ಕಾವಲಿಗೆ ನಾಗೇಶ ಹೆಗಡೆಯವರೊಂದಿಗೆ ಜತೆಗೂಡುತ್ತಾರೆ. ವಾಲ್ಯಾ ಬಾಲ್ಯದಾರಭ್ಯ ಆ ಮನೆಯ ನಿತ್ಯದ ಕೃಷಿ ಮತ್ತಿತರ ಕೆಲಸಗಳ ಸಹಾಯಕರು. ಅವರ ಮನೆಯ ಎಲ್ಲ ಆಗುಹೋಗುಗಳ ಆರ್ಥಿಕ ಭಾರವನ್ನು ನಾಗೇಶರು ನಿಭಾಯಿಸುತ್ತಾರೆ. ಇದನ್ನೆಲ್ಲ ವಾಲ್ಯಾ ಖುದ್ದಾಗಿ ವಿವರಿಸುವಾಗ ಆ ಮನೆಯ ಕುರಿತಾದ ಅವರ ಪ್ರೀತಿ ಗೌರವಗಳೂ ಅಭಿವ್ಯಕ್ತಗೊಳ್ಳುತ್ತವೆ. ಇಲ್ಲಿ ಆಲೆಮನೆ ಕೆಲಸಕ್ಕೆ ಉಳಿದೆಡೆಯಂತೆ ಜನ ಸಿಗುತ್ತಿಲ್ಲ ಎಂಬ ಸನ್ನಿವೇಶ ಒದಗಿಲ್ಲ. ಬದಲಾಗಿ ಕೆಲಸದ ಮಂದಿ ಚೆನ್ನಾಗಿ ಲಭ್ಯರಿರಲಾಗಿ ಇಲ್ಲಿ ಆಲೆಮನೆಯ ಅವಧಿಯನ್ನು ವಿಸ್ತರಿಸಲಾಗಿದೆ. ಅಂದರೆ ನಾಲ್ಕೇ ದಿನಗಳಲ್ಲಿ ಮುಗಿಯಬೇಕಾಗಿದ್ದ ಆಲೆಮನೆ ಎಂಟು ದಿನಗಳ ಕಾಲ ನಡೆಯುತ್ತದೆ. ಹೇಗೆಂದರೆ, ಇಲ್ಲಿ ಉದ್ದಿಶ್ಯಪೂರ್ವಕವಾಗಿ ದಿನವೊಂದಕ್ಕೆ ಎರಡು ಕೊಪ್ಪರಿಗೆ ಬೆಲ್ಲ ಬೇಯಿಸುವ ಬದಲು ಒಂದು ಕೊಪ್ಪರಿಗೆಯನ್ನಷ್ಟೆ ಬೇಯಿಸುತ್ತಾರೆ. ಹೀಗೆ ಬೇಯಿಸುವಾಗ ಉರಿ ಒಂದು ಹದವಾದ ಮಿತಿಯಲ್ಲಿರುತ್ತದೆ. ಬೆಂಕಿಯ ಸದುಪಯೋಗದ ಪ್ರಮಾಣ ಅಧಿಕವಿರುತ್ತದೆ. ಹೀಗಾದಾಗ ಆಲೆಮನೆ ಕೆಲಸ ಮಾಡುವವರ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆದರೆ ಇವರು ಆಲೆಮನೆ ದಿನಗಳನ್ನು ವಿಸ್ತರಿಸಿದ ಉದ್ದೇಶ ಬೇರೆಯೇ ಇದೆ. ಅದೆಂದರೆ, ಆಲೆಮನೆಗೆ ಬಂದುಹೋಗುವವರ ಪ್ರಮಾಣ ಹೆಚ್ಚಾಗಲಿ ಎಂದು. ಆಲೆಮನೆ ನಡೆಯುವ ಎಂಟು ದಿನಗಳಲ್ಲಿ ಒಂದು ಶನಿವಾರ ಮತ್ತು ಭಾನುವಾರ ಲಭ್ಯವಾಗುತ್ತದೆ. ಇದರಿಂದಾಗಿ ಹೆಚ್ಚು ಜನ ಬಂದುಹೋಗಲು ಅವಕಾಶವಾಗುತ್ತದೆ. ಆಲೆಮನೆಯಲ್ಲಿ ಕೆಲಸದ ಒತ್ತಡ ಕಡಮೆ ಇರುವುದರಿಂದ ಬಂದುಹೋಗುವ ಬಂಧುಬಳಗದ ಉಪಚಾರಕ್ಕೆ ಸಮಯಾವಕಾಶ ಹೆಚ್ಚು ಸಿಗುತ್ತದೆ.
ಆತಿಥ್ಯದ ಆಲೆಮನೆ
ಶಿರಸಿ ಬದಿ ಆತಿಥ್ಯವೆನ್ನುವುದು ಒಂದು ಧರ್ಮದ ರೂಪವನ್ನು ಪಡೆದಿರುವಂಥದ್ದು. ಮನೆಮಂದಿ ಎಲ್ಲರೂ ತಾವು ಯಾವುದೇ ಕೆಲಸದಲ್ಲಿ ತೊಡಗಿಕೊಂಡಿದ್ದರೂ ಅವನ್ನೆಲ್ಲ ಒಮ್ಮೆಗೆ ಅಲ್ಲಲ್ಲಿಯೇ ಬಿಟ್ಟುಬಂದು, ಮನೆಗೆ ಬಂದ ಅತಿಥಿಗಳನ್ನು, ಅವರು ಹಳಬರು ಇರಬಹುದು, ಹೊಸಬರೇ ಇರಬಹುದು; ಅವರನ್ನು ಮಾತಾಡಿಸಿಕೊಂಡು ಹೋಗುವ ವಿಶಿಷ್ಟ ಪದ್ಧತಿಯಿದೆ. ಅತಿಥಿ ದೇವೋಭವ ಎಂಬ ಉಪನಿಷದ್ವಾಕ್ಯ ಇಲ್ಲಿ ಚೆನ್ನಾಗಿ ಸಾಕಾರಗೊಂಡಿರುವುದನ್ನು ನಾವು ಅನುಭವದಿಂದ ಕಂಡುಕೊಳ್ಳಲು ಸಾಧ್ಯ. ಅಂಥ ಇಲ್ಲಿ ಆಲೆಮನೆ ನಡೆಯುವಾಗ; ಒಮ್ಮೆ ಅವಶ್ಯ ಬಂದುಹೋಗಬೇಕೆಂದು ತಮ್ಮ ಬಂಧುಬಳಗವನ್ನೆಲ್ಲ ಆಮಂತ್ರಿಸುವ ವಿಶಿಷ್ಟ ಪದ್ಧತಿ ಇದೆ. ಆಮಂತ್ರಣವಿಲ್ಲದೆ ಬರುವ ಯಾರನ್ನೇ ಆಗಲಿ ಆಲೆಮನೆಯಲ್ಲಿ ಅತಿಥಿಗಳಂತೆ ಉಪಚರಿಸುವ ಉದಾತ್ತ ಸಂಸ್ಕೃತಿ ಇದೆ. ನಿಜಕ್ಕೂ ಇಲ್ಲಿಯ ಆಲೆಮನೆಗಳು ಆಲೆ’ಮನೆ’ಗಳೇ ಹೌದು; ಬೆಲ್ಲದ ಕಾರ್ಖಾನೆಗಳಂತೂ ಖಂಡಿತಾ ಅಲ್ಲ.
ಮನೆಯೆಂದ ಮೇಲೆ ಅಲ್ಲಿ ಕಟ್ಟಡದಂಥ ರಚನೆ ಇರಬೇಕು, ನೆಲ ಸ್ವಚ್ಛವಾಗಿರಬೇಕು, ಬಂದವರಿಗೆ ಕುಳಿತುಕೊಳ್ಳಲು ಚಾಪೆ ಇತ್ಯಾದಿ ಇರಬೇಕು, ಕುಡಿಯುವ ನೀರಿನ ಜತೆಗೆ ಹಾಲಿನೊಂದಿಗೆ ಮೆಲ್ಲಲು ಏನಾದರೂ ಇರಬೇಕು… ಆಲೆಮನೆ ಅಕ್ಷರಶಃ ಹೀಗೇ ಇರೋದು. ಚೆನ್ನಾಗಿ ಸೆಗಣಿ ಬಳಿದ ನೆಲವಿರುವ ನಾಗೇಶ ಹೆಗಡೆಯವರ ಆಲೆಮನೆ ನೋಡಿದರೆ ಅಲ್ಲಿ ಚಾಪೆ ಇಲ್ಲದೆಯೇ ಕುಳಿತುಕೊಳ್ಳಬಹುದು, ಅದು ಅಷ್ಟರ ಮಟ್ಟಿಗೆ ಸ್ವಚ್ಛವಾಗಿಯೂ ಅಚ್ಚುಕಟ್ಟಾಗಿಯೂ ಇದೆ. ಬೆಳಿಗ್ಗೆ ಎದ್ದ ಕೂಡಲೇ ವಾಲ್ಯಾರ ಕರ್ತವ್ಯಗಳಲ್ಲಿ ಆಲೆಮನೆಯ ಸ್ವಚ್ಛತೆಯ ಜತೆಗೆ ಗಾಣಯಂತ್ರದ ಸ್ವಚ್ಛತೆಯೂ ಸೇರಿಕೊಂಡಿದೆ. ಅವರು ನೀರು ಹಾಕಿ ತೊಳೆದ ಬಳಿಕ ಗಾಣದೆಡೆ ದೃಷ್ಟಿ ಹಾಯಿಸಿದರೆ ಅದು ಫಳಫಳನೆ ಹೊಳೆಯುತ್ತಿರುತ್ತದೆ. ಅಲ್ಲಿ ಕಾರ್ಖಾನೆಯ ಕಾರ್ಯವಿದೆ. ಮನೆಯ ವಾತಾವರಣವಿದೆ. ಕಾರ್ಖಾನೆ ಹೇಗಿರಬೇಕೆಂಬುದಕ್ಕೂ ಇದು ಮಾದರಿಯಂತಿದೆ. ಮನೆ ಹೇಗಿರಬೇಕೆಂಬುದಕ್ಕೂ ಇದು ಮಾದರಿಯಂತಿದೆ. ನಾನೂ ಸ್ವಲ್ಪ ಸಿಪ್ಪೆ ಸರಿಸಿಹಾಕಲು ಸೇರಿಕೊಳ್ಳಲೇ ಎಂದು ಸೀತಕ್ಕನ ಬಳಿ ಕೇಳಿದೆ. ಹಾಗೆ ಕೇಳಿದ್ದೇ ದೊಡ್ಡ ಅಪರಾಧವಾಯಿತೆಂಬಂತೆ ಸ್ಪಂದಿಸಿದ ಅವರು ಅತಿಥಿಗಳು ಈ ಮನೆಯಲ್ಲಿ ಯಾವುದೇ ಕೆಲಸ ಮಾಡುವಂತಿಲ್ಲ ಎಂದು ನಿರಾಕರಿಸಿದರು.
ಪ್ರಕೃತಿನಿಷ್ಠ ಉತ್ಪಾದನೆ
ಇಲ್ಲಿ ಪೂರ್ವಾಹ್ಣ ಸುಮಾರು 10ರ ವೇಳೆಗೆ ಕೊಪ್ಪರಿಗೆ ಇಳಿಸುತ್ತಾರೆ. ಸಂಜೆ ಸುಮಾರು 5ರ ಹೊತ್ತಿಗೆ ಕೊಪ್ಪರಿಗೆಗೆ ಹಾಲಿಳಿಸುತ್ತಾರೆ. ಅದಕ್ಕೆ ಬೇಕಾದ ಸಹಾಯಕರೂ ಆಗ ಲಭ್ಯರಿರುತ್ತಾರೆ. ನಡುನಡುವೆ ಬರುವ ಅತಿಥಿಗಳಿಗೆ ಹಾಲು ಮತ್ತು ತಿಂಡಿಯ ಆತಿಥ್ಯ ನಡೆಯುತ್ತಿರುತ್ತದೆ. ಆ ಕುಟುಂಬಮಂದಿ ಒಟ್ಟಿಗೆ ಕುಳಿತುಕೊಂಡು ಹಾಲು ಕುಡಿಯುವುದು ಸಂಜೆ 6ರ ಹೊತ್ತಿಗೆ. ಅಂದರೆ ಉಳಿದೆಲ್ಲರಿಗೂ ಹಾಲು ಕುಡಿಸಿ, ತಿಂಡಿ ತಿನ್ನಿಸಿ. ಹಾಗೆ ಹಾಲು ಕುಡಿದು ಹೆಗಡೆಯವರು ಒಂದು ಕವಳ ಹಾಕಿದರೆಂದರೆ ಅಂದಿನ ಹಗಲಿನ ಕೆಲಸಗಳೆಲ್ಲ ಮುಕ್ತಾಯವಾದಂತೆ; ಬೆಂಕಿ ಹಾಕುವುದು, ಕಾವಲು ಕಾಯುವುದು ಇತ್ಯಾದಿ ಕನಿಷ್ಠಶ್ರಮದ ರಾತ್ರಿ ಪಾಳಿಯ ಕೆಲಸಕ್ಕೆ ಸಿದ್ಧರಾದಂತೆ.
ಕೊಪ್ಪರಿಗೆ ಇಳಿಸುವುದು ಮತ್ತು ಹಾಲನ್ನು ಸೋಸಿ ಕೊಪ್ಪರಿಗೆ ಹೊಯ್ಯುವುದು – ಆಲೆಮನೆ ಕೆಲಸದ ಇವೆರಡು ಪ್ರಮುಖ ಘಟ್ಟಗಳಿಗೆ ಪೂರಕವಾದ ದೀರ್ಘ ಸಮಯ ಮತ್ತು ಶ್ರಮವನ್ನು ಬೇಡುವ ಇನ್ನೆರಡು ಕೆಲಸಗಳೆಂದರೆ; ಕಬ್ಬಿನ ಕಟಾವು ಮತ್ತು ಗಾಣದ ಕಾರ್ಯ. ಹಿಂದೆಲ್ಲ ಕೋಣನ ಕಣೆ ಇದ್ದಾಗ ಗಾಣವನ್ನು ಕೋಣಗಳು ತಿರುಗಿಸುತ್ತಿದ್ದವು. ಅದರಲ್ಲಿ ಕೋಣಗಳಿಗೂ ಕೆಲಸವಿತ್ತು. ಕೋಣಗಳನ್ನು ಅಟ್ಟುವವನಿಗೂ ಕೆಲಸವಿತ್ತು. ಈಗ ಬಹುತೇಕ ಎಲ್ಲ ಕಡೆ ಯಂತ್ರಚಾಲಿತ ಗಾಣಗಳೇ ಬಳಕೆಯಲ್ಲಿರುವುದು. ಅವು ಇಂಧನವನ್ನು ಬೇಡುತ್ತವೆ. ಅದನ್ನು ತಿಂದು ಹೊಗೆಯನ್ನು ಉಗುಳುತ್ತವೆ. ಈ ಎರಡೂ ಕ್ರಿಯೆಗಳು ಪರಿಸರಕ್ಕೆ ಹಾನಿಕಾರಕವೇ. ಕೋಣಗಳು ಹುಲ್ಲು ತಿನ್ನುತ್ತವೆ. ಅದನ್ನು ತಿಂದು ಸೆಗಣಿ ಹಾಕುತ್ತವೆ. ಪರಿಸರವನ್ನು ಸ್ವಚ್ಛವೂ ಸಮೃದ್ಧವೂ ಆಗಿ ಇಡಬಲ್ಲ ಸಂಗತಿಗಳಿವು. ಕಬ್ಬಿನ ಗದ್ದೆಯಿಂದ ಕಟಾವು ಮಾಡಿದ ಕಬ್ಬನ್ನು ಮೊದಲೆಲ್ಲ ಹೊತ್ತುಕೊಂಡೇ ತರುತ್ತಿದ್ದರು. ಈಗೀಗ ದೂರದ ಗದ್ದೆಗಳಿಂದ ಕಬ್ಬು ತರಲು ಟಿಲ್ಲರ್/ಟ್ರ್ಯಾಕ್ಟರ್/ಇನ್ನಿತರ ವಾಹನಗಳಿವೆ. ಅವೂ ಇಂಧನ ತಿಂದು ಪರಿಸರಮಾರಕ ಹೊಗೆಯನ್ನುಗುಳುತ್ತವೆ. ಒಂದೆಡೆ ಪರಿಸರಮಾರಕ ಯಂತ್ರಗಳಿಂದ ಗರಿಷ್ಠ ಕೆಲಸ. ಇನ್ನೊಂದೆಡೆ ಪರಿಸರಪೂರಕ ಜೀವಜಾತದಿಂದ ಕನಿಷ್ಠ ಕೆಲಸ. ಯಾವುದೇ ಉತ್ಪಾದನೆಯಲ್ಲಿ ದುಡಿಯುವ ಜೀವಜಾತದ ಪ್ರಮಾಣ ಗರಿಷ್ಠವಿದ್ದಷ್ಟು ಅದು ಪ್ರಕೃತಿನಿಷ್ಠ ಉತ್ಪಾದನೆಯಾಗುತ್ತದೆ. ಯಂತ್ರಗಳ ಪಾತ್ರ ಹೆಚ್ಚಾದಷ್ಟೂ ಅದು ಅಪ್ರಾಕೃತಿಕವಾಗುತ್ತ ಹೋಗುತ್ತದೆ, ಹಾನಿಕಾರಕವಾಗುತ್ತ ಹೋಗುತ್ತದೆ. ಈ ದಿಕ್ಕಿನಲ್ಲಿ ಉಳಿದ ಕೃಷಿ ಚಟುವಟಿಕೆಗಳೊಂದಿಗೆ ಇಂದಿನ ಆಲೆಮನೆಗಳೂ ದಾಂಗುಡಿಯಿಡುತ್ತಿವೆ. ಈ ನಿಟ್ಟಿನಲ್ಲಿ ನಾಗೇಶ ಹೆಗಡೆಯವರ ಆಲೆಮನೆ ಒಂದಷ್ಟು ಹೆಜ್ಜೆ ಹಿಂದಿದೆಯೆನ್ನಬಹುದು. ಅವರು ಕಬ್ಬು ಬೆಳೆಯಲು ಯಾವುದೇ ರಾಸಾಯನಿಕ ಗೊಬ್ಬರವನ್ನು ಹಾಕುವುದಿಲ್ಲ. ಕೀಟನಾಶಕಗಳನ್ನು ಬಳಸುವುದಿಲ್ಲ. ಬೆಲ್ಲಕ್ಕೆ ಬಣ್ಣ ಬರಲೆಂದೋ ಮತ್ತಾವುದೋ ಕಾರಣಕ್ಕೋ ಯಾವುದೇ ಕೃತಕ ವಸ್ತುಗಳನ್ನು ಬಳಸುವುದಿಲ್ಲ. ಕೋಣನ ಕಣೆ ಅಲ್ಲ ಎನ್ನುವುದನ್ನು ಬಿಟ್ಟರೆ ಅವರದು ಹೆಚ್ಚು ಕೈಗಳು ಭಾಗಿಯಾಗುವ ತೌಲನಿಕವಾಗಿ ಹೆಚ್ಚು ಪ್ರಾಕೃತಿಕ ಎನ್ನಬಹುದಾದ ಆಲೆಮನೆ. ಅವರ ಬೆಲ್ಲ ಪೂರ್ಣಪ್ರಮಾಣದ ಸಾವಯವ ಬೆಲ್ಲ.
ಎರಡು ದಿನಗಳ ಕಾಲ ಈ ಅಚ್ಚುಕಟ್ಟಾದ ಪ್ರಕೃತಿನಿಷ್ಠ ಆಲೆಮನೆಯನ್ನು ಚೆನ್ನಾಗಿ ಅನುಭವಿಸಿ, ಆ ಮನೆಯ ಆತ್ಮೀಯತೆಯನ್ನು ಉಂಡು ಭಾರವಾದ ಹೆಜ್ಜೆಗಳಿಂದ ವಾಪಸಾದೆ.
ಸಣ್ಣದು ಸುಂದರ
ಸ್ವಲ್ಪವೇ ಸಮಯದಲ್ಲಿ ಯಲ್ಲಾಪುರ ಬದಿಗೇ ಇನ್ನೊಂದು ಆಲೆಮನೆ ಪ್ರವಾಸ ಇಟ್ಟುಕೊಳ್ಳಬಹುದಾದ ಸಂದರ್ಭ ಎದುರಾಯಿತು. ಇಲ್ಲಿಯೂ ಒಂದೇ ಪ್ರವಾಸದಲ್ಲಿ ಎರಡು ಆಲೆಮನೆಗಳ ಭೇಟಿಯ ಅವಕಾಶ.
ಸಾಹಿತ್ಯಕಾರ್ಯದಲ್ಲಿ ಜತೆಗಾರರಾದ ರಘುನಂದನ ಭಟ್ಟರ ಜತೆ ಯಲ್ಲಾಪುರದ ನಮ್ಮ ಸಹಕಾರಿಗಳಾದ ಗಣಪತಿ ಬೋಳಗುಡ್ಡ ಅವರ ಕಾರಲ್ಲಿ ಗಣಪತಿ ಮಾನಿಗದ್ದೆ ಅವರ ಮನೆಗೆ ಹೋಗಿ ಅಲ್ಲಿಂದ ಅವರನ್ನು ಕೂಡಿಕೊಂಡು ದೇಹಳ್ಳಿ ಆಲೆಮನೆಗೆ ಸಂಜೆ ನಾಲ್ಕರ ಹೊತ್ತಿಗೆ ಧಾವಿಸಿದೆವು. ನಾವು ನೋಡಿದ ಆಲೆಮನೆಗಳಲ್ಲೇ ಅತ್ಯಂತ ಪುಟ್ಟದಾದ ಆಲೆಮನೆ ಇದು. ಸಣ್ಣದು ಸುಂದರ ಎಂದಿದ್ದನಲ್ಲವೇ ಬುದ್ಧನಿಂದ ಪ್ರೇರಣೆ ಪಡೆದ ಷುಮಾಕರ್. ಈ ಆಲೆಮನೆಯನ್ನು ನೋಡಿದಾಕ್ಷಣ ಆತನ ನೆನಪಾಯಿತು. ಜತೆಗೆ ಆಲೆಮನೆಯ ಈಶ್ವರದಾಸರನ್ನು ನೋಡಿ ಬುದ್ಧನ ನೆನಪೂ ಕೂಡ. ಅಡಕೆ ತೋಟದ ನಡುವೆ ಈ ಆಲೆಮನೆಯಿದೆ. ಮೆಟ್ಟಿಲು ಮೆಟ್ಟಿಲಾದ ತೋಟಗಳು. ಹಾಗಾಗಿಯೋ ಎಂಬಂತೆ ಗಾಣದ ಯಂತ್ರವೊಂದನ್ನು ಬಿಟ್ಟು ಅನ್ಯ ಯಂತ್ರಗಳ ಹಾವಳಿ ಇಲ್ಲಿಲ್ಲ. ರಸ್ತೆ ಕೆಟ್ಟುಹೋಗಿರುವ ಹಳ್ಳಿಯ ಮೂಲೆಯಲ್ಲಿರುವ ಈ ಪುಟ್ಟ ಆಲೆಮನೆಗೆ ಬರುವವರ ಸಂಖ್ಯೆಯೇನೂ ಕಡಮೆಯದಲ್ಲ, ಈಶ್ವರದಾಸರ ಆತಿಥ್ಯದಲ್ಲಿ ತುಂಬಿರುವ ಪ್ರೀತಿಯೂ ಕಡಮೆಯದಲ್ಲ.
ಹಳ್ಳಿಯ ತಂತ್ರಜ್ಞಾನ
ನಾವು ಹೋದಾಗ ಈಶ್ವರದಾಸರೇ ಗಾಣಕ್ಕೆ ಕಬ್ಬು ಕೊಡುತ್ತಿದ್ದರು. ಅವರ ಮಗ ಉಳಿದೆಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರೇ ಕಬ್ಬು ಕೊಡುತ್ತಿದ್ದ ದೃಶ್ಯ ನಮ್ಮ ಮನಸ್ಸಿನಲ್ಲಿ ಬೇರೆಯದೇ ಒಂದು ವಿಚಾರವನ್ನು ಸ್ಫುರಿಸಿಬಿಟ್ಟಿತು. ನೋಡಿ, ಗಾಣಕ್ಕೆ ಒಮ್ಮೆ ಕಬ್ಬನ್ನು ಕೊಟ್ಟರೆ ಮತ್ತೆ ಅದನ್ನು ಯಾವುದೇ ಕಾರಣಕ್ಕೂ ವಾಪಸ್ ಎಳೆದು ತರಲು ಆಗುವುದಿಲ್ಲ. ಮರುಕ್ಷಣವೇ ಇನ್ನೊಂದು ಬದಿಯಲ್ಲಿ ತನ್ನಿಂತಾನೇ ಬರುವ ಅದರ ಸಿಪ್ಪೆಯಲ್ಲಿ ಒಂದು ತೊಟ್ಟು ಹಾಲೂ ಉಳಿದಿರುವುದಿಲ್ಲ. ಕೆಲವರು, ಸಮಾಜಕಾರ್ಯದಲ್ಲಿ ತೊಡಗಿದವರನ್ನು ಹೀಗೆ ಕಬ್ಬಿನ ಗಾಣಕ್ಕೆ ಹೋಲಿಸುವುದಿದೆ. ಸಮಾಜದ ಕೆಲಸ ಮಾಡುತ್ತ ಮಾಡುತ್ತ ಸ್ವಂತದ ಚಿಂತೆಗಳ ಕುರಿತು ಯೋಚಿಸಲು ಅವಕಾಶವೇ ಇಲ್ಲದಂತಾಗುತ್ತದೆ. ದಾಸರ ಬದುಕು ಸ್ವಲ್ಪಮಟ್ಟಿಗೆ ಹಾಗೇ ಇದೆ. ಅವರ ಪುಟ್ಟ ಆಲೆಮನೆಯೂ ಅದನ್ನೇ ಹೇಳುತ್ತಿದೆಯೇನೋ ಎನ್ನುವಂತಿದೆ.
ಸೋಸು ಬಟ್ಟೆಗೆ ಬಿದ್ದು ಹಾಲು ಪಾತ್ರವನ್ನು ಸೇರುತ್ತದೆ. ಆ ಸೋಸುಬಟ್ಟೆಯ ಮೇಲೆ ಒಂದಷ್ಟು ಕಸದಂತಿರುವ ಕಬ್ಬಿನ ಸಿಪ್ಪೆಯನ್ನು ಹಾಕಿಡಲಾಗಿತ್ತು. ಅದೇಕೆಂದು ಕೇಳಿದಾಗ, ಅದೂ ಸೋಸುವ ಕೆಲಸವನ್ನು ಮಾಡುತ್ತದೆ ಎಂಬ ಉತ್ತರ ಬಂತು. ದೊಡ್ಡ ದೊಡ್ಡ ಕಸಗಳೆಲ್ಲ ಅಲ್ಲೇ ಉಳಿದು ಬಟ್ಟೆಯನ್ನು ಪ್ರವೇಶಿಸುವಾಗ ಸಣ್ಣ ಪುಟ್ಟ ಕಸಗಳಷ್ಟೆ ಸೋಸುವಿಕೆಗೊಳಗಾಗುತ್ತವೆ. ಇದು ಶುದ್ಧ ಗ್ರಾಮೀಣ ತಂತ್ರಜ್ಞಾನ. ತಂತ್ರಜ್ಞಾನದ ಇಂಥ ನೂರಾರು ಬಗೆಯವನ್ನು ಹಳ್ಳಿಯ ಕೃಷಿ ಚಟುವಟಿಕೆಗಳಲ್ಲಿ ನಾವು ಕಾಣಬಹುದು. ಹಳ್ಳಿಗೆ ಕೃಷಿಭೂಮಿಗೆ ನಡೆಯುವ ಕಾಲುಗಳಿರಬೇಕು, ಇಂಥ ಕೃಷಿ ತಂತ್ರಜ್ಞಾನವನ್ನು ನೋಡುವ ಕಣ್ಣುಗಳಿರಬೇಕು ಅಷ್ಟೆ.
ಸಣ್ಣದು, ಆದರೂ ದೊಡ್ಡದು
ಒಂದು ಹಂತಕ್ಕೆ ಗಾಣದ ಕಾರ್ಯವನ್ನು ಮಗನಿಗೆ ವಹಿಸಿ, ಉತ್ತಮ ಕಬ್ಬನ್ನೊಂದಷ್ಟು ಆರಿಸಿ ಅದನ್ನು ಗಾಣಕ್ಕೆ ಕೊಟ್ಟು ಅದರ ಹಾಲನ್ನು ಪ್ರತ್ಯೇಕವಾಗಿ ಹಿಡಿದು ಈಶ್ವರದಾಸರು ನಮ್ಮ ಆತಿಥ್ಯಕ್ಕೆ ತೊಡಗಿದರು. ಬಗೆಬಗೆಯ ಖಾರ ತಿಂಡಿಗಳ ಜತೆಗೆ ಹಾಲನ್ನೂ ಒತ್ತಾಯಪೂರ್ವಕವಾಗಿ ಕುಡಿಸಿದರು. ಜತೆಗೆ ಲೋಕಾಭಿರಾಮದ ಮಾತು. ಆ ಆಲೆಮನೆಯ ಜಾಗ ಸಣ್ಣದು. ಆದರೆ ಅದು ಅತ್ಯಂತ ಸ್ವಚ್ಛ. ಜತೆಗೆ ಅವರೆಲ್ಲರ ಮನಸ್ಸುಗಳು ಕೂಡ. ಕಬ್ಬಿನ ಹಾಲು ಸ್ವಲ್ಪವೇ ಕುಡಿದರೂ ಹೊಟ್ಟೆ ತುಂಬುತ್ತದೆ. ಉಂಡೂ ಹೋದ ಕೊಂಡೂ ಹೋದ ಎಂಬಂತೆ ಇಲ್ಲಿ ಹಾಲು ಕುಡಿಯಬಂದವರು ತಮ್ಮ ಮನೆಮಂದಿಗಾಗಿ ಹಾಲು ಒಯ್ಯಲು ಬಾಟಲಿಗಳನ್ನು ಜತೆಗೆ ತಂದಿರುತ್ತಾರೆ. ಅಂಥವರ ಆತಿಥ್ಯವೂ ಈ ಪುಟ್ಟ ಆಲೆಮನೆಗೆ ಅತ್ಯಂತ ಖುಷಿಯ ವಿಷಯವೇ. ಈ ಪುಟ್ಟ ಆಲೆಮನೆ ಎಲ್ಲ ದೃಷ್ಟಿಯಿಂದಲೂ ಸಾವಯವ ಆಲೆಮನೆ ಎಂದು ಬೇರೆ ಹೇಳಬೇಕಿಲ್ಲವಷ್ಟೆ. ಉಭಯಕುಶಲೋಪರಿಯೊಂದಿಗೆ ನಮ್ಮ ಸಮಾರಾಧನೆ ನಡೆಯುತ್ತಿರುವಾಗ ಜನ ಬರುತ್ತಲೇ ಇದ್ದರು. ನಾವು ಆದಷ್ಟು ಬೇಗ ಜಾಗ ಖಾಲಿಮಾಡಿದರೆ ಬಂದವರಿಗೂ ಒಳ್ಳೆಯದು ಎಂದು ಭಾವಿಸಿ ದಾಸರಿಗೆ ಹೇಳಿ ಅವರಿಂದ ಆತ್ಮೀಯವಾಗಿ ಬೀಳ್ಕೊಡಲ್ಪಟ್ಟು, ಕಾರು ನಿಲ್ಲಿಸಿದ್ದ ಅವರ ಮನೆಯ ಬಳಿಗೆ ಬಂದು ಅಮ್ಮನಿಗೂ ಹೇಳಿ ಅಲ್ಲಿಂದ ಹೊರಟೆವು. ಎಲ್ಲೇ ಇರಲಿ, ಹೇಗೇ ಇರಲಿ…
ನಮ್ಮ ಮುಂದಿನ ಲಕ್ಷ್ಯ ನಂದಗಾರ. ಮಾನಿಗದ್ದೆಯಲ್ಲಿ ಗಣಪತಿಯವರನ್ನು ಬೀಳ್ಕೊಟ್ಟು ಮುಂದುವರಿದೆವು. ಯಲ್ಲಾಪುರ ಮಂಚಿಕೇರಿ ದಾಟಿ ಮುಂದೆ ಹೋದಾಗ ನಂದಗಾರಕ್ಕೆ ಹೋಗುವ ತಿರುವಿನಲ್ಲಿ ಮಹೇಶರು ತಮ್ಮ ಇನ್ನೊಂದಷ್ಟು ಬಳಗದೊಂದಿಗೆ ನಿಂತಿದ್ದರು. ಅವರ ಎರಡು ಕಾರು, ನಮ್ಮದೊಂದು, ಜತೆಗೆ ಮಹೇಶರ ಮಗ ಮನೋಜನ ಬೈಕ್ ಇವಿಷ್ಟು ನಾಲ್ಕು ಕಿಮೀ ಉದ್ದದ ಮಣ್ಣಿನ ರಸ್ತೆಯಲ್ಲಿ ಧೂಳೆಬ್ಬಿಸುತ್ತ, ಅಲ್ಲಲ್ಲಿ ದಾರಿ ತಪ್ಪಿಸಿಕೊಂಡು, ಸರಿದಾರಿ ಸೇರಿಕೊಂಡು ಕೊನೆಗೂ ನಂದಗಾರ ಶ್ರೀನಿವಾಸರ ಆಲೆಮನೆ ಮುಂದೆ ಬಂದು ನಿಂತವು. ರಾತ್ರಿ ವೇಳೆ, ಕಾಡೋ ಕಾಡು, ಸುತ್ತಮುತ್ತ ಏನಿದೆ ಏನಿಲ್ಲ ಗೊತ್ತಾಗುತ್ತಿಲ್ಲ. ಆಲೆಮನೆ ಬಿಟ್ಟು ಬೇರೇನೂ ಕಾಣಿಸದ ಅರ್ಜುನನ ಸ್ಥಿತಿ ನಮ್ಮದು. ಆಲೆಮನೆ ನೋಡಹೋದ ನಾವು ಇಲ್ಲಿ ಅದೊಂದನ್ನು ಬಿಟ್ಟು ಬೇರೇನೂ ನೋಡಲಿಲ್ಲ ಎಂದರೆ ತಪ್ಪಿಲ್ಲ.
ಅದು ಒಂದು ಸಾಮೂಹಿಕ ರೀತಿಯ ಆಲೆಮನೆ. ಎಂದರೆ, ಆಲೆಮನೆ ಒಬ್ಬರಿಗೇ ಸೇರಿದ್ದು. ಸುತ್ತಮುತ್ತಲಿನ ಅನೇಕರು ಅಲ್ಲಿ ತಮ್ಮ ತಮ್ಮ ಕಬ್ಬನ್ನು ತಂದು ಬೆಲ್ಲ ಮಾಡಿಕೊಂಡು ಹೋಗುತ್ತಾರೆ. ಅಂದು ನಮ್ಮ ಪರಿಚಿತರಾದ ರಾಜೇಶರ ಆಲೆಮನೆ ನಡೆಯುತ್ತಿತ್ತು. ಅವರ ಆಮಂತ್ರಣದ ನಿಮಿತ್ತ ಮಹೇಶರು ಈ ಪ್ರವಾಸವನ್ನು ಜೋಡಿಸಿದ್ದರು. ಅಂದರೆ; ತಮ್ಮದೇ ಆದ ಆಲೆಮನೆ ಇಲ್ಲದಿದ್ದರೂ, ಬೇರೆಡೆ ಮಾಡಬೇಕಾಗಿ ಬಂದಾಗಲೂ ಆಲೆಮನೆ ಆತಿಥ್ಯಕ್ಕೆ ಚ್ಯುತಿ ಬಂದಿಲ್ಲ. ಭರವಸೆ ಪಡಬೇಕಾದ ಅಂಶವಿದು. ರಾಜೇಶರು ನಮ್ಮನ್ನೆಲ್ಲ ಕರೆದು ಸಾಲಾಗಿ ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟರು. ಎಲ್ಲರಿಗೂ ಒಂದೊಂದು ಲೋಟ ನೀಡಿದರು. ಮತ್ತೊಬ್ಬರು ಲೋಟಕ್ಕೆ ಹಾಲು ಹಾಕುತ್ತ ಬಂದರು. ಮತ್ತೆ ಹಾಲಿನ ವಿಚಾರಣೆ. ಮತ್ತೊಬ್ಬರು ಖಾರತಿಂಡಿ ನೀಡುತ್ತ ಬಂದರು. ಅದು ಮತ್ತೆ ಮತ್ತೆ ಸಾಗಿತು. ಇಲ್ಲಿ ಆಲೆಮನೆಯೂ ಸಾರ್ವಜನಿಕ, ನಮ್ಮ ಅಧಿಕ ಸಂಖ್ಯೆಯಿಂದಾಗಿ ಹಾಲು ಕುಡಿಯಬೇಕಾದ ನಮ್ಮ ವ್ಯವಸ್ಥೆಯೂ ಸಾರ್ವಜನಿಕ ರೂಪ ಪಡೆಯಿತು. ಆದರೂ ಆತಿಥ್ಯ ಆತಿಥ್ಯವೇ. ಮದುವೆ ಮನೆ ಭೋಜನದಂತೆ. ನಾವು ಮೂರು ಮಂದಿ ಕುಡಿದ ಹಾಲಿನ ಪ್ರಮಾಣ ನೋಡಿ ಅವರಿಗೆ ಸಂದೇಹ ಬಂತು! ನೀವು ಬೇರೊಂದು ಆಲೆಮನೆ ಮುಗಿಸಿಕೊಂಡೇ ಬಂದಿರಬೇಕೆನ್ನಬೇಕೆ! ಆತಿಥ್ಯದಲ್ಲಿ ಸೂಕ್ಷ್ಮತೆ ಉದಾರತೆ ಉದಾತ್ತತೆಗಳಿದ್ದಾಗ ಇವೆಲ್ಲ ತಿಳಿಯಲು ಸಾಧ್ಯವೇನೋ!
ಇದು ಒಂದು ರೀತಿಯಲ್ಲಿ ಸಾರ್ವಜನಿಕ ರೂಪದ ಆಲೆಮನೆಯಾದ ಕಾರಣ ಉಳಿದೆಡೆಗಳ ಸ್ವಚ್ಛತೆಯನ್ನು ಇಲ್ಲಿ ನಿರೀಕ್ಷಿಸಲಾಗದು. ಸಾಮಾನ್ಯವಾಗಿ ಕೊಪ್ಪರಿಗೆ ವೃತ್ತಾಕಾರದಲ್ಲಿರುತ್ತದೆ. ಇಲ್ಲಿಯದು ಅಷ್ಟಭುಜಾಕೃತಿಯದು. ಕೊಪ್ಪರಿಗೆಯನ್ನು ಎತ್ತುವ ಇಳಿಸುವ ಕೆಲಸಗಳೆಲ್ಲ ಇಲ್ಲಿಲ್ಲ. ಬೆಲ್ಲ ಬೀಳಬೇಕಾದಲ್ಲಿಗೆ ಕೊಪ್ಪರಿಗೆ ಹಳಿಯಲ್ಲಿ ಚಲಿಸುತ್ತದೆ. ಅದಕ್ಕಾಗಿ ಎಳೆದರಾಯಿತು. ಕೊಪ್ಪರಿಗೆ ತಳದಲ್ಲಿರುವ ನಳ್ಳಿಯನ್ನು ತೆರೆದರಾಯಿತು, ಬೆಲ್ಲದ ಪಾತ್ರಕ್ಕೆ ಬೆಲ್ಲ ಬೀಳುತ್ತದೆ. ಯಾಂತ್ರಿಕತೆ ಅಧಿಕವಿರುವಲ್ಲಿ ಸ್ವಚ್ಛತೆ ಕಡಮೆ ಇದ್ದರೂ ಸಾಕಾಗುತ್ತದೆ ಎಂದೋ ಏನೋ, ಸ್ವಚ್ಛತೆ ಕಡಮೆ ಇರುತ್ತದೆ. ಈ ಆಲೆಮನೆ ಪ್ರಾರಂಭವಾಗಿ ಎರಡು ತಿಂಗಳು ಕಳೆದಿವೆ. ಇನ್ನು 15 ದಿನಗಳ ಕಾಲ ನಡೆಯಲಿದೆ ಎಂಬ ಮಾಹಿತಿ ನಾವಲ್ಲಿಂದ ಹೊರಡುವ ಮುನ್ನ ಸಿಕ್ಕಿತು.
ಎರಡು ಬಗೆ
ಇನ್ನು ಭೇಟಿ ನೀಡಿದ ಎರಡು ಆಲೆಮನೆಗಳನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಿ ಈ ಆಲೆಮನೆ ಪ್ರವಾಸ ನೋಟಕ್ಕೆ ಒಂದು ಮುಗಿತಾಯ ಸೂಚಿಸೋಣವಂತೆ. ಅವುಗಳಲ್ಲಿ ಒಂದು ಹೊಸನಗರ ತಾಲೂಕಿನ ಹುಂಚ ಬಳಿಯ ಹಿರೇಬೈಲು ಗುರಪ್ಪ ಗೌಡರ ಆಲೆಮನೆ. ಇನ್ನೊಂದು, ಮಂಡ್ಯ ಬಳಿಯ ಸಾತನೂರಿನ ನವೀನ ಗೌಡರ ಆಲೆಮನೆ. ಮೇಲೆ ಉಲ್ಲೇಖಿಸಿದ ಉಳಿದೆಲ್ಲ ಆಲೆಮನೆಗಳಂತೆ ಗುರಪ್ಪ ಗೌಡರದೂ ಜೋನಿಬೆಲ್ಲದ ಆಲೆಮನೆ. ನವೀನ ಗೌಡರದು ಗಟ್ಟಿ ಬೆಲ್ಲ ತಯಾರಿಸುವ ಆಲೆಮನೆ. ಅಲ್ಪಸ್ವಲ್ಪ ಕರಾವಳಿ ಭಾಗದಲ್ಲಿ ಮತ್ತು ಮಲೆನಾಡಿನ ಶಿರಸಿ,ಸಾಗರ, ಶಿಕಾರಿಪುರ ಭಾಗಗಳಲ್ಲಿ ಅಂದರೆ ಉ.ಕ. ಮತ್ತು ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಜೋನಿಬೆಲ್ಲ ತಯಾರಿಸುವ ಆಲೆಮನೆಗಳೇ ಇರುವುದು. ಇವುಗಳಲ್ಲಿ ಹೆಚ್ಚಿನವು ತಮ್ಮ ತಮ್ಮ ಕಬ್ಬನ್ನು ಬೆಲ್ಲವಾಗಿಸುವ ಎರಡರಿಂದ ಹತ್ತದ್ನೈದು ದಿನಗಳ ಕಾಲವಷ್ಟೆ ನಡೆಯುವ ವ್ಯಕ್ತಿಗತ ಆಲೆಮನೆಗಳು. ಕೆಲವು ಎರಡರಿಂದ ಮೂರು ತಿಂಗಳ ಕಾಲ ನಡೆಯುವ ಸಾಮೂಹಿಕ ಸ್ವರೂಪದವು. ಭದ್ರಾವತಿ ತಾಲೂಕು, ಮಂಡ್ಯ, ಮೈಸೂರು, ಬಳ್ಳಾರಿ ಮುಂತಾದೆಡೆಗಳಲ್ಲಿ ಇರುವ ಆಲೆಮನೆಗಳೆಲ್ಲ ಗಟ್ಟಿಬೆಲ್ಲ ತಯಾರಿಕೆಯ ಬಹುತೇಕ ವರ್ಷಪೂರ್ತಿ ನಡೆಯುವಂಥವು.
ಗುರಪ್ಪ ಗೌಡರದು ಯಂತ್ರೀಕೃತ ಆಲೆಮನೆ. ಒಂದೇ ಸಲಕ್ಕೆ ನಾಲ್ಕೈದು ಜನರ ಕಬ್ಬಿನ ಮೂಟೆಮೂಟೆಗಳು ಅಲ್ಲಿ ಬಂದು ಬೀಳುತ್ತವೆ. ಅಲ್ಲಿರುವ ಎಲ್ಲ ವಿಭಾಗಗಳಿಗೂ ಬಿಡುವಿಲ್ಲದೆ ಕೆಲಸ ಇರುತ್ತದೆ. ಬಹುತೇಕ ಕಬ್ಬು ಅರೆಬರೆ ಕಟಾವು ಆಗಿ ಗದ್ದೆಯಿಂದ ನೇರ ಅಲ್ಲಿಗೆ ಬಂದಿರುತ್ತದೆ. ಅದರಲ್ಲಿ ಗಂಟಲ್ಲಿರುವ ಬೇರು, ಬುಡದ ಮಣ್ಣು ಇತ್ಯಾದಿ ಹಾಗ್ಹಾಗೇ ಇರುತ್ತವೆ. ಅವನ್ನೆಲ್ಲ ತೆಗೆದರಷ್ಟೆ ಹಾಲು ಒಂದಷ್ಟು ಕುಡಿಯಲು ಯೋಗ್ಯವಾಗಿರುವಂತೆ ಕಾಣುತ್ತದೆ. ಇಲ್ಲದಿರೆ ಆ ಹಾಲನ್ನು ನೋಡುವುದೂ ಕಣ್ಣಿಗೆ ತ್ರಾಸಾಗಿ ಬಿಡುತ್ತದೆ. ಈ ಆಲೆಮನೆಯ ಎರಡು ಕೊಪ್ಪರಿಗೆಗಳು ಸ್ವಲ್ಪ ದೊಡ್ಡ ಗಾತ್ರದವು. ಇದಕ್ಕೆ ಪಕ್ಕಾ ಕಾರ್ಖಾನೆಯದೇ ಸ್ವರೂಪವಿರುವುದರಿಂದ ಕಾರ್ಖಾನೆ ಸಂಸ್ಕೃತಿ ಎದ್ದು ಕಾಣುತ್ತದೆ. ಅಂದರೆ; ಇಲ್ಲಿ ಕೆಲಸ ಮಾಡುವವರೆಲ್ಲ ಕಾರ್ಮಿಕರು, ಮಾಲಿಕರು ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತಾರೆ, ಚಪ್ಪಲಿ ಹಾಕಿಕೊಂಡು ಇಡಿಯ ಆಲೆಮನೆಯಲ್ಲಿ ಎಲ್ಲೆಡೆ ಹೋಗಬಹುದು, ಒಳಗೆ ಬೀಡಿ ಇತ್ಯಾದಿ ಸೇವಿಸುವ ಅವಕಾಶವೂ ಇದೆ. ಈಯೆಲ್ಲ ಕಾರಣದಿಂದಾಗಿ ಒಳಗೆ ಧೂಳು ಅಧಿಕ.
ರಾಸಾಯನಿಕವೇಕೋ!
ಇಲ್ಲಿಗೆ ರಾಸಾಯನಿಕ ಹಾಕಿ ಬೆಳೆದ ಕಬ್ಬೂ ಬರುತ್ತದೆ, ಸಾವಯವ ಕಬ್ಬೂ ಬರುತ್ತದೆ. ಅಲ್ಲಿಗೆ ಹಾಗೆ ಬಂದು ಬೆಲ್ಲವಾಗಿದ್ದ ಎರಡೂ ಬಗೆಯ ಬೆಲ್ಲದ ವ್ಯತ್ಯಾಸವನ್ನು ಒಬ್ಬರು ವಿವರಿಸಿ ತೋರಿಸಿದರು. ರಾಸಾಯನಿಕ ಕಬ್ಬಿನ ಬಣ್ಣ ಕಂದು, ಸಾವಯವ ಕಬ್ಬಿನ ಬಣ್ಣ ಹಳದಿ ಇತ್ತು. ತಳಿ, ಮಣ್ಣು ಇತ್ಯಾದಿ ಕಾರಣಕ್ಕಾಗಿ ಬಣ್ಣದಲ್ಲಿ ಕೆಲವೊಮ್ಮೆ ವ್ಯತ್ಯಾಸ ಬಂದೀತು. ಆದರೆ ರುಚಿಯಲ್ಲಲ್ಲ ಎನ್ನುತ್ತ ಎರಡೂ ಬೆಲ್ಲದ ರುಚಿಯನ್ನು ನೋಡಲು ಕೊಟ್ಟರು. ಅರೆ! ಹೌದಲ್ಲ, ಸಾವಯವ ಬೆಲ್ಲ ಸಿಹಿಸಿಹಿಯಾಗಿದ್ದರೆ ರಾಸಾಯನಿಕ ಬೆಲ್ಲ ಹುಳಿ ಬೆರೆಸಿದ ರೀತಿಯ ಸಿಹಿಯನ್ನು ಹೊಂದಿತ್ತು. ಇವುಗಳ ಆಯುಷ್ಯವೂ ಅಷ್ಟೇ; ಸಾವಯವ ಬೆಲ್ಲ ವರ್ಷ ಕಳೆದರೂ ಏನೂ ಆಗುವುದಿಲ್ಲ, ರಾಸಾಯನಿಕ ಬೆಲ್ಲವನ್ನು ಮೂರ್ನಾಲ್ಕು ತಿಂಗಳುಗಳಲ್ಲಿ ತಿಂದು ಮುಗಿಸದಿದ್ದರೆ ಮತ್ತೆ ಅದನ್ನು ತಿನ್ನುವುದೇ ಕಷ್ಟ! ಅಷ್ಟರ ಮಟ್ಟಿಗೆ ಅದು ಹುಳಿಯೇರಿರುತ್ತದೆ. ಈಗ ರಾಸಾಯನಿಕ ಬೆಲ್ಲದ ಮೌಲ್ಯ ಡಬ್ಬಕ್ಕೆ 1500 ರೂಪಾಯಿ ಇದ್ದರೆ ಸಾವಯವ ಬೆಲ್ಲಕ್ಕೆ 2000 ರೂಪಾಯಿ. ರೈತರು ಯಾಕಾದರೂ ರಾಸಾಯನಿಕ ಕಬ್ಬನ್ನು ಬೆಳೆಯುತ್ತಾರೋ! ಯಾಕಾದರೂ ರಾಸಾಯನಿಕ ಕೃಷಿಯನ್ನು ಮಾಡುತ್ತಾರೋ! ಬಿಡಿ; ಸಾವಯವ ಎಂದರೆ ಸಾಕು, ವಿಜ್ಞಾನಿಗಳು ದೊಣ್ಣೆ ಹಿಡಕೊಂಡೇ ಬರುತ್ತಾರೆ. ಅದು ಬೇರೆಯದೇ ಚರ್ಚೆಯ ವಿಷಯ.
ಮುಚ್ಚಿದ ಗಾಣಗಳು
ಸಾತನೂರಿನ ಗಾಣದ ಪ್ರಕ್ರಿಯೆಗಳನ್ನೆಲ್ಲ ನೋಡುತ್ತಿರುವಾಗಲೇ ನವೀನ ಗೌಡರು ಬಂದರು. ಉಭಯಕುಶಲೋಪರಿ ಮಾತಾಡುತ್ತಾ ಅವರು ಹೇಳಿದ್ದಿಷ್ಟು: ಮಂಡ್ಯ ಜಿಲ್ಲೆಯಲ್ಲಿ ಹಿಂದೆ 23 ಸಾವಿರ ಗಾಣಗಳಿದ್ದುವು. ಈಗ 13 ಸಾವಿರ ಉಳಕೊಂಡಿವೆ. ಪಕ್ಕದ ಕೊಮ್ಮೇರಹಳ್ಳಿಯಲ್ಲಿದ್ದ 22 ಗಾಣಗಳೂ ಮುಚ್ಚಿವೆ. ಕಾರ್ಮಿಕರು ಪೇಟೆ ಸೇರಿಕೊಂಡಿದ್ದಾರೆ. ಇಲ್ಲಿಗೀಗ ಅಸ್ಸಾಂ, ಬಿಹಾರ, ಉತ್ತರಪ್ರದೇಶಗಳ ಕಾರ್ಮಿಕರು ಬರುತ್ತಿದ್ದಾರೆ. ಮುಂದಿನ ಭವಿಷ್ಯ ಭೀಕರವೆನಿಸುತ್ತಿದೆ.
ಮನುಷ್ಯ ಯಂತ್ರದೆಡೆ ಧಾವಿಸುವುದೆಂದರೆ, ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪಾದನಾ ಸ್ಥಾನ ಯಂತ್ರೀಕರಣಗೊಳ್ಳುವುದೆಂದರೆ ಅದು ವಿನಾಶದೆಡೆಗಿನ ಪಯಣವೇ ಅಲ್ಲವೇ!
✍️ ನಾರಾಯಣ ಶೆವಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.