ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯ್ದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿವೆ. ಮಾರ್ಚ್ ತಿಂಗಳ 21 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆಯನ್ನು ವಿರೋಧಿಸಿ ಭಾರತ್ ಬಂದ್ಗೆ ಕರೆ ಕೊಟ್ಟಿತ್ತು. ಆದರೆ ಈ ಬಂದ್ ಕರೆಗೆ ಜನರು ಅದರಲ್ಲೂ ರೈತರು ಬಹಳ ನೀರಸ ಪ್ರತಿಕ್ರಿಯೆಯನ್ನು ಕೊಟ್ಟಿರುವುದು ಕಂಡುಬಂದಿದೆ. 2020 ರ ನವೆಂಬರ್ ತಿಂಗಳಲ್ಲಿ ರೈತರ ಪ್ರತಿಭಟನೆಗಳು ಆರಂಭವಾದಾಗ ಈ ಹೋರಾಟಕ್ಕೆ ಭಾರೀ ಜನ ಬೆಂಬಲವಿತ್ತು. ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗಗದ ರೈತರಿಂದ ಬಹಳ ಬೆಂಬಲ ವ್ಯಕ್ತವಾಗಿತ್ತು. ಡಿಸೆಂಬರ್ ತಿಂಗಳಿಂದಲೇ ದೆಹಲಿಯ ಸಿಂಘು ಬಾರ್ಡರ್, ಘಾಜೀಪುರ್, ತಿಕ್ರಿ, ಔಚಾಂಡಿ, ಪಿಯಾವು ಮನಿಯಾರಿ, ಮಂಗೇಶ್ ಮೊದಲಾದ ಗಡಿಗಳಲ್ಲಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ರೈತರು ಬೀಡುಬಿಟ್ಟಿದ್ದರು. ಭಾರತೀಯ ಕಿಸಾನ್ ಯೂನಿಯನ್ ಇದರ ಮುಖ್ಯಸ್ಥ ರಾಕೇಶ್ ಟಿಕಾಯತ್ನ ಸಭೆಗಳಲ್ಲಿ ರೈತರು ತುಂಬಿ ತುಳುಕುತ್ತಿದ್ದರು. ಆದರೆ ನಂತರ ನಡೆದ ಅನಪೇಕ್ಷಿಸಿತ ಬೆಳವಣಿಗೆಗಳ ನಂತರ ರೈತರ ಹೋರಾಟಕ್ಕೆ ಜನ ಬೆಂಬಲವು ಬಹಳ ವೇಗವಾಗಿ ಇಳಿಯುತ್ತಿರುವುದು ಕಂಡುಬರುತ್ತಿದೆ. ಮಾರ್ಚ್ 21 ರ ಭಾರತ್ ಬಂದ್ ಸಂಪೂರ್ಣವಾಗಿ ವಿಫಲವಾಗಿರುವುದೂ ರೈತರ ಹೋರಾಟಕ್ಕೆ ಜನ ಬೆಂಬಲವು ಕಡಿಮೆಯಾಗುತ್ತಿರುವುದರ ಸೂಚನೆಯೇ.
ಭಾರತದ ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಸಾವಿರಾರು ಸಂಖ್ಯೆಯಲ್ಲಿ ರೈತರು ನವದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಬಹಳ ದಾಂಧಲೆ ನಡೆಸಿದರು. ದೆಹಲಿ ಪೋಲೀಸರು ಶಾಂತಿಯುತ ಪ್ರತಿಭಟನೆ ನಡೆಸಲು ರೈತ ಮುಖಂಡರಿಗೆ ಅನುಮತಿ ಕೊಟ್ಟಿದ್ದರು. ಆದರೆ ರೈತರು ಪೋಲೀಸರು ರಚಿಸಿದ್ದ ತಡೆಗೋಡೆಗಳಿಗೆ ಟ್ರ್ಯಾಕ್ಟರ್ಗಳನ್ನು ಢಿಕ್ಕಿ ಹೊಡೆಸಿ ತಡೆಗೋಡೆಗಳನ್ನು ಮುರಿದು ದೆಹಲಿಗೆ ನುಗ್ಗಿದರು. ದೆಹಲಿಯ ರಸ್ತೆಗಳಲ್ಲಿ ರೈತರು ಯದ್ವಾ ತದ್ವಾ ಟ್ರ್ಯಾಕ್ಟರ್ಗಳನ್ನು ಓಡಿಸಿದರು. ಪೋಲೀಸರ ಮೇಲೆಯೇ ಟ್ರ್ಯಾಕ್ಟರ್ ಹತ್ತಿಸುವ ಪ್ರಯತ್ನವನ್ನೂ ಮಾಡಲಾಯಿತು. ಕೈಗಳಲ್ಲಿ ಖಡ್ಗ, ಚಂದ್ರಾಯುಧಗಳಂತಹ ಮಾರಕಾಸ್ತ್ರಗಳನ್ನು ಹಿಡಿದಿದ್ದ ಪಂಜಾಬಿ ರೈತರು ಪೋಲೀಸರ ಮೇಲೆ ಆಕ್ರಮಣವನ್ನು ಮಾಡಿದರು. ರೈತರ ಆಕ್ರಮಣದಿಂದಾಗಿ 300 ಕ್ಕೂ ಹೆಚ್ಚಿನ ಸಂಖ್ಯೆಯ ಪೋಲೀಸರು ಗಾಯಾಳುಗಳಾಗಿ ಆಸ್ಪತ್ರೆ ಸೇರುವಂತಾಯಿತು. ಸಾರ್ವಜನಿಕ ಸಾರಿಗೆಯ ಬಸ್, ಪೋಲೀಸ್ ಬಸ್ಗಳಿಗೂ ಬಹಳ ಹಾನಿಯನ್ನು ಮಾಡಲಾಯಿತು.
ಪ್ರತೀ ವರ್ಷ ಸ್ವಾತಂತ್ರ್ಯೋತ್ಸವದಂದು ಪ್ರಧಾನಿಗಳು ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡುವ ಸ್ಥಳವಾದ ಐತಿಹಾಸಿಕೆ ಕೆಂಪುಕೋಟೆಗೂ ನುಗ್ಗಿದ ಪುಂಡ ರೈತರು ಅಲ್ಲಿದ್ದ ರಾಷ್ಟ್ರಧ್ವಜವನ್ನು ಕಿತ್ತು ತೆಗೆದು ಅಲ್ಲಿ ನಿಶಾನ್ ಸಾಹಿಬ್ ಪತಾಕೆಯನ್ನು ಹಾರಿಸಿದರು. ಕೆಂಪುಕೋಟೆಯ ಒಳಗೆ ಸಂಗ್ರಹಿಸಿಡಲಾದ ಅಮೂಲ್ಯವಸ್ತುಗಳನ್ನೂ ಇವರು ಹಾಳುಗೆಡವಿದರು. ಈ ಎಲ್ಲಾ ದೃಶ್ಯಗಳು ಬಹುತೇಕ ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿ ನೇರ ಪ್ರಸಾರವಾದವು. ಇದೊಂದು ಭಾರತದ ಇತಿಹಾಸದಲ್ಲಿ ನಡೆದ ಅತ್ಯಂತ ಹೀನ ಘಟನೆಗಳಲ್ಲಿ ಒಂದಾಗಿ ದಾಖಲಾಯಿತು. 26 ರಂದು ದೆಹಲಿಯಲ್ಲಿ ಹಾಗೂ ಕೆಂಪುಕೋಟೆಯಲ್ಲಿ ನಡೆಸಿದ ಅರಾಜಕತೆ, ಹಿಂಸಾಚಾರ ಹಾಗೂ ದುಂಡಾವರ್ತಿ ವರ್ತನೆ ರೈತರ ಪ್ರತಿಭಟನೆಯ ವಿಶ್ವಾಸಾರ್ಹತೆಗೆ ಕುಂದನ್ನುಂಟುಮಾಡಿತು.
ಈ ನಡುವೆ ರೈತರನ್ನು ಪ್ರಚೋದಿಸುವ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಕೆಲವು ಮಾಧ್ಯಮ ಹಾಗೂ ಪತ್ರಕರ್ತರು ಮಾಡಿದರು. ರೈತನೊಬ್ಬ ಟ್ರ್ಯಾಕ್ಟರ್ ಗಳನ್ನು ವೇಗವಾಗಿ ಓಡಿಸಿ, ವ್ಹೀಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡು ಅಲ್ಲೇ ಸಾವಿಗೀಡಾಗುತ್ತಾನೆ. ರೈತನು ಸಾವಿಗೀಡಾದುದು ಅಪಘಾತದಿಂದಲ್ಲ ಬದಲಾಗಿ ಪೋಲೀಸರ ಗುಂಡಿನಿಂದ ಎಂದು ಸುಳ್ಳು ವರದಿ ಮಾಡಿ ರೈತರನ್ನು ಇನ್ನಷ್ಟು ಹಿಂಸೆಗೆ ಪ್ರೇರೇಪಿಸುವ ಕೆಟ್ಟ ಕೆಲಸವನ್ನು ಇಂಡಿಯಾ ಟುಡೇಯ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಮಾಡಿದರು. ಇದು ಸುಳ್ಳೆಂದು ದೆಹಲಿ ಪೋಲೀಸರು ಸಾಬೀತುಪಡಿದಾಗ ಇಂಡಿಯಾ ಟುಡೇ ಟಿವಿ ವಾರ್ತಾ ಸಂಸ್ಥೆಯು ರಾಜ್ ದೀಪ್ ಸರ್ದೇಸಾಯಿಯನ್ನು ಒಂದು ತಿಂಗಳ ಮಟ್ಟಿಗೆ ಅಮಾನತು ಮಾಡಿತು.
ರೈತ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆಗೆ ಇಳಿದ ಬಹುತೇಕ ರೈತರು ಸಿಖ್ಖ್ ಹಾಗೂ ಜಾಠ್ ಸಮುದಾಯದವರು. ಇವರಲ್ಲಿ ಹೆಚ್ಚಿನವರು ಸಿಖ್ಖ್ ಸಮುದಾಯದವರೇ. ಇವರನ್ನು ರೈತ ಮಸೂದೆಯ ವಿರೋಧೀ ಪ್ರತಿಭಟನೆಯ ನೆಪದಲ್ಲಿ ಭಾರತ ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡಿದ್ದು ನಿಷೇಧಿತ ಸಿಖ್ಖ್ ಉಗ್ರವಾದೀ ಸಂಘಟನೆಯಾದ ಖಾಲಿಸ್ತಾನ್. ಆರಂಭದಿಂದಲೂ ಈ ಹೋರಾಟವನ್ನು ಸಂಘಟಿಸುವಲ್ಲಿ ಸಿಖ್ಖ್ ಉಗ್ರಗಾಮಿ ಸಂಘಟನೆಯಾದ ಖಾಲಿಸ್ತಾನಿನ ವ್ಯಾಪಕ ಸಂಚಿನ ಬಗ್ಗೆ ಗುಮಾನಿಯಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಭಟನೆಗಳ ಹಿಂದೆ ಉಗ್ರಗಾಮಿ ಸಂಘಟನೆಯಾದ ಖಾಲಿಸ್ತಾನ್ ಕೈವಾಡವಿದೆ ಎಂದು ಕೇಂದ್ರ ಸರಕಾರವು ಹೇಳಿಕೆಕೊಟ್ಟಿತ್ತು. ಖಾಲಿಸ್ತಾನ್ ಸಂಘಟನೆಯು ಈ ಹೋರಾಟಕ್ಕೆ ಆರ್ಥಿಕ ಸಹಾಯವನ್ನು ನೀಡಿದ್ದು ಸಾಬೀತಾಗಿದೆ. ನಿಷೇಧಿತ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ ಕೂಡಾ ರೈತರ ಹೋರಾಟಕ್ಕೆ ಬೆಂಲವಾಗಿ ನಿಂತಿದೆ. ಕೆನಡಾ, ಆಮೇರಿಕಾ, ಬ್ರಿಟನ್ ಮೊದಲಾದ ದೇಶಗಳಲ್ಲಿ ಖಾಲಿಸ್ತಾನ್ ಸಿಖ್ಸ್ ಫಾರ್ ಜಸ್ಟೀಸ್ ಮೊದಲಾದ ಸಂಘಟನೆಗಳು ಭಾರತದ ರೈತ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದವು. ಪಾಕಿಸ್ತಾನದ ಪ್ರಸ್ತುತ ಪ್ರಧಾನಿ ಇಮ್ರಾನ್ ಖಾನ್ನ ರಾಜಕೀಯ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷವು ಟ್ವಿಟ್ಟರ್ ಮೂಲಕ ಅಧಿಕೃತ ಹೇಳಿಕೆಯನ್ನು ಕೊಟ್ಟು ಭಾರತದ ರೈತರ ಹೋರಾಟವನ್ನು ಬೆಂಬಲಿಸಿತ್ತು. ಈ ಎಲ್ಲಾ ಮಾಹಿತಿಗಳು ಜನಸಾಮಾನ್ಯರನ್ನು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಿದಾಗ, ಜನರು ರೈತರ ಹೊರಾಟದ ಹಿಂದಿನ ಉದ್ದೇಶವನ್ನು ಸಂಶಯಿಸುವಂತಾಯಿತು.
ಭಾರತ ವಿರೋದಿ ಚಟುವಟಿಕೆಗಳಿಗೆ ಸದಾ ಬೆಂಬಲ ಹಾಗೂ ಆರ್ಥಿಕ ಸಹಾಯವನ್ನು ನೀಡುತ್ತಿರುವ ಜಾರ್ಜ್ ಸೋರೊಸ್ ನ ಓಪನ್ ಸೊಸೈಟಿ ಫೌಂಡೇಶನ್ಗೂ ರೈತರ ಹೋರಾಟಕ್ಕೂ ಸಂಬಂಧವಿದೆ. ಅಮೇರಿಕಾ ನಿವಾಸಿಯಾದ ಅಮರ್ ದೀಪ್ ಸಿಂಗ್ ಅನ್ನುವ ವ್ಯಕ್ತಿ ಸಿಖ್ಖ್ ಕೋವಲೇಶನ್ ಎಂಬ ಹೆಸರಿನ ಅಮೇರಿಕದ ಸರಕಾರೇತರ ಸಂಘಟನೆಯ ಸಹ ಸಂಸ್ಥಾಪಕ. ಆದರೆ ಅಮರ್ ದೀಪ್ ಸಿಂಗ್ ಜಾರ್ಜ್ ಸೋರೊಸ್ ನ ಓಪನ್ ಸೊಸೈಟಿ ಫೌಂಡೇಶನ್ ನ ಪ್ರೋಗ್ರಾಮ್ ಆಫೀಸರ್ ಕೂಡಾ ಹೌದು. ಸಿಖ್ಖ್ ಕೊವಲೇಶನ್ ಸಂಸ್ಥೆಯು ರೈತರ ಕಾಯಿದೆಗಳನ್ನು ವಿರೊಧಿಸಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಭಾರತದ ರೈತರ ಕಾಯಿದೆಯನ್ನು ವಿರೊಧಿಸುವಂತೆ ಅಮೇರಿಕದ ಜನಪ್ರತಿನಿಧಿಗಳು ಹಾಗೂ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಈ ಸಿಖ್ಖ್ ಕೋವಲೇಶನ್ ಸಂಸ್ಥೆಯು ಮಾಡುತ್ತಿದೆ. ಭಾರತ ಸರಕಾರವು ಶಾಂತಿಯುತ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಧಾಳಿ, ಲಾಠೀಚಾರ್ಜ್ ಮಾಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದೆ. ಸಿಖ್ಖ್ ಕೋವಲೇಶನ್ ಸಂಸ್ಥೆಯು ತನ್ನ ವೆಬ್ಸೈಟ್ ನಲ್ಲಿ ತಾನು ಓಪನ್ ಸೊಸೈಟಿ ಫೌಂಡೇಶನ್ ಬಳಿಯಿಂದ ಆರ್ಥಿಕ ಅನುದಾನಗಳನ್ನು ಪಡೆಯುತ್ತಿದ್ದೇನೆ ಎಂದು ಪ್ರಕಟಿಸಿದೆ. ಇದು ರೈತರ ಪ್ರತಿಭಟನೆಗಳಲ್ಲಿ ಜಾರ್ಜ್ ಸೊರೊಸ್ ನ ಪಾತ್ರವನ್ನು ಸಾಬೀತುಪಡಿಸುತ್ತದೆ.
ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಭಾರತದ ಬಗ್ಗೆ ಏನೇನೂ ಗೊತ್ತಿಲ್ಲದ ವಿದೇಶೀ ಸೆಲೆಬ್ರಿಟಿಗಳು ಬೆಂಬಲವನ್ನು ಸೂಚಿಸಿದ್ದು, ಪ್ರತಿಭಟನೆಯ ಉದ್ದೇಶದ ಕುರಿತಾಗಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿತು. ಬಾರ್ಬಡೊಸ್ ಮೂಲದ ಅಮೇರಿಕನ್ ಹಾಡುಗಾರ್ತಿ ರಿಹಾನ್ನಾ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿದಳು, ಹಣಕ್ಕಾಗಿ ನೀಲಿಚಿತ್ರಗಳಲ್ಲಿ ನಟಿಸುವ ಮಿಯಾ ಖಲೀಫಾ ಕೂಡಾ ಭಾರತದ ಪ್ರತಿಭಟನೆಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದಳು! ಸ್ವೀಡನ್ನ ಪರಿಸರ ಹೋರಾಟಗಾರ್ತಿ ಗ್ರೆಟ್ಟಾ ಥನ್ಬರ್ಗ್ ರೈತರ ಪ್ರತಿಭಟನೆಗಳನ್ನು ಬೆಂಬಲಿಸಿ ಪ್ರಕಟಿಸಿದ ಟ್ವೀಟ್ನಲ್ಲಿ ಭಾರತದ ದಿಶಾ ರವಿ ಕಳುಹಿಸಿದ್ದ ಟೂಲ್ ಕಿಟ್ ಅನ್ನು ಕೂಡಾ ಪ್ರಕಟಿಸಿ ರೈತರ ಪ್ರತಿಭಟನೆಯನ್ನು ಅಂತಾರಾಷ್ಟ್ರೀಯ ಸುದ್ದಿಯಾಗಿಸುವ ಹುನ್ನಾರವನ್ನು ತನಗರಿವಿಲ್ಲದಂತೆ ಜಗಜ್ಜಾಹೀರಾತು ಮಾಡಿದಳು.
ಬೆಂಗಳೂರಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಈ ಗೂಗಲ್ ಡಾಕ್ಯುಮೆಂಟ್ ಟೂಲ್ ಕಿಟ್ ಅನ್ನು ತಯಾರಿಸಿದವಳಲ್ಲಿ ಒಬ್ಬಳಾಗಿದ್ದು ಆ ಟೂಲ್ ಕಿಟ್ ರೈತರ ಪ್ರತಿಭಟನೆಯ ವಿಚಾರವಾಗಿ ಬಹಷ್ಟು ಸುಳ್ಳು ಮಾಹಿತಿಗಳನ್ನು ಹೊಂದಿತ್ತು ಹಾಗೂ ಜನವರಿ 26 ರ ಮೊದಲು ರೈತರ ಪ್ರತಿಭಟನೆಗಳ ಸಮರ್ಥನೆಯಲ್ಲಿ ಟ್ವೀಟ್ಟರ್ನಲ್ಲಿ ಹ್ಯಾಶ್ ಟ್ಯಾಗ್ಗಳನ್ನು ಸೃಷ್ಟಿಸಿ ಟ್ವಿಟ್ಟರ್ ಟ್ರೆಂಡ್ಗಳನ್ನು ನಿರ್ಮಿಸುವ ಯೋಜನೆಯೂ ಟೂಲ್ ಕಿಟ್ನಲ್ಲಿತ್ತು . ದಿಶಾ ರವಿ ಟೂಲ್ ಕಿಟ್ ಅನ್ನು ಗ್ರೆಟ್ಟಾ ಜೊತೆಗೆ ಹಂಚಿಕೊಂಡು ನಂತರ ತನಿಖೆಗಾಗಿ ಪೊಲೀಸರಿಂದ ಬಂಧಿಸಲ್ಪಟ್ಟಳು. ಟೂಲ್ ಕಿಟ್ ಪ್ರಕರಣವು ರೈತರ ಪ್ರತಿಭಟನೆಯ ಕುರಿತಾಗಿ ಪ್ರಸಿದ್ಧರ ಸಮರ್ಥನೆಯ ಹಿಂದಿನ ಹುನ್ನಾರವನ್ನು ಬಯಲು ಮಾಡಿತು.
ದೊಂಬಿಕೋರರು ದೆಹಲಿಯಲ್ಲಿ ನಡೆಸಿದ ದಾಂಧಲೆಯ ನಂತರ ಬಹಳ ರೈತ ಸಂಘಟನೆಗಳು ರೈತರ ಹೊರಾಟದಿಂದ ಹಿಂದೆ ಸರಿದವು. ಭಾರತ್ ಕಿಸಾನ್ ಯೂನಿಯನ್ ಅಧ್ಯಕ್ಷರಾದ ನರೇಶ್ ಟಿಕಾಯತ್ ಪ್ರತಿಭಟನೆಯಿಂದ ಹಿಂದೆ ಸರಿದರು. ಭಾರತೀಯ ಕಿಸಾನ್ ಯೂನಿಯನ್(ಭಾನು ತಂಡ) ಹಾಗೂ ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘಟನೆಗಳೂ ಪ್ರತಿಭಟನೆಯಿಂದ ಹಿಂದೆ ಸರಿದವು. ಕಿಸಾನ್ ಮಹಾಪಂಚಾಯತ್ ಸಂಸ್ಥೆ ಪ್ರತಿಭಟನೆಯಿಂದ ಹಿಂದೆ ಸರಿಯಿತು. ಭಾರತ್ ಕಿಸಾನ್ ಯೂನಿಯನ್(ಲೋಕ್ ಶಕ್ತಿ) ಹಾಗೂ ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ) ಸಂಘಟನೆಗಳು ಕೇಂದ್ರ ಕೃಷಿ ಮಂತ್ರಿ ನರೇಂದ್ರ ತೋಮರ್ ಅವರನ್ನು ಭೇಟಿಯಾಗಿ ತಾವಿನ್ನು ರೈತರ ಪ್ರತಿಭಟನೆಗಳಲ್ಲಿ ಮುಂದುವರಿಯುವುದಿಲ್ಲ ಎಂದು ಆಶ್ವಾಸನೆ ನೀಡಿ ಪ್ರತಿಭಟನೆಯಿಂದ ಹೊರನಡೆದವು. ಲಕ್ಷಾಂತರ ಸಂಖ್ಯಯಲ್ಲಿ ಸೇರಿದ್ದ ರೈತರು ಅವರವರ ಊರುಗಳಿಗೆ ಮರಳಿದರು. ಈ ನಡುವೆ ಹಿಂಸಾಚಾರಕ್ಕೆ ಕಾರಣರಾದವರನ್ನು ದೆಹಲಿ ಪೋಲೀಸರು ಹುಡುಕಲು ಆರಂಭಿಸಿದಾಗ ಇನ್ನಷ್ಟು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಮನೆಗಳಿಗೆ ತೆರಳಿದರು.
ದೆಹಲಿ ಹಿಂಸಾಚಾರದ ನಂತರ ಸಾರ್ವಜನಿಕ ಆಕ್ರೋಶವನ್ನು ಎದುರಿಸಿದ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. 95% ರೈತರು ತಮ್ಮ ಮನೆಗಳಿಗೆ ಹಿಂತಿರುಗಿಯಾಗಿತ್ತು. ಜನವರಿ 26 ರಂದು ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರ ರಾಕೇಶ್ ಟಿಕಾಯತ್ ಪತ್ರಿಕಾ ಗೋಷ್ಟಿಯಲ್ಲಿ ಕಣ್ಣೀರು ಹಾಕಿ ರೈತರ ಹೋರಾಟವನ್ನು ನಿಲ್ಲಿಸಬಾರದು ಎಂದು ರೈತರನ್ನು ಮನವಿ ಮಾಡಿದರು. ಪತ್ರಿಕಾಗೋಷ್ಠಿಯ ಮೊದಲು ಖಾಲಿಸ್ತಾನ್ ಉಗ್ರ ಸಂಘಟನೆಯ ಕೆಲವು ವ್ಯಕ್ತಿಗಳು ಪ್ರತಿಭಟನೆಯನ್ನು ಹಿಂತೆಗೆಯಲು ಉದ್ದೇಶಿಸಿದ್ದ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಿ ಟಿಕಾಯತ್ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳದಂತೆ ಮಾಡಿದ್ದರು ಎಂದು ಓಪ್ಇಂಡಿಯಾ ಆನ್ಲೈನ್ ಪತ್ರಿಕೆಯು ವರದಿ ಮಾಡಿದೆ. ಈ ನಡುವೆ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಕಮ್ಯುನಿಸ್ಟ್ ನ ನಾಯಕರುಗಳು ಟ್ವೀಟರ್ ಸಂದೇಶಗಳ ಮೂಲಕ ರೈತರ ಪ್ರತಿಭಟನೆಯನ್ನು ಮುಂದುವರಿಸುವುದಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು. ಹರಿಯಾಣದಿಂದ ಒಂದಷ್ಟು ಜಾಠರು ಹಾಗೂ ರಾಜಕೀಯ ಪಕ್ಷಗಳ ಸದಸ್ಯರು ಪುನಃ ಪ್ರತಿಭಟನೆಗೆ ಸೇರಿದರೂ ದಿನಕಳೆದಂತೆ ಪ್ರತಿಭಟನೆ ಕಳೆಗುಂದಿತು. ಪ್ರಧಾನಿಯಿಂದ ಆಂದೋಲನ ಜೀವಿಗಳು ಎಂದು ಕರೆಯಿಸಲ್ಪಟ್ಟ ಯೋಗೇಂದ್ರ ಯಾದವ್ ಅಂತವರಿಗೂ ಪ್ರತಿಭಟನೆಯ ಕಾವನ್ನು ಉಳಿಸಿಕೊಳ್ಳಲಾಗಲಿಲ್ಲ.
ಬಹುತೇಕ ರೈತರು ಹೊಸ ರೈತರ ಮಸುದೆಯಿಂದಾಗಿ ತಮಗೆ ಲಾಭವೇ ಹೆಚ್ಚು ಹಾಗೂ ಇದರಿಂದಾಗಿ ಮಂಡಿಯಲ್ಲಿನ ಏಜಂಟ್ ಗಳಿಗೆ ಕಮಿಷನ್ ಕೊಡುವುದು ತಪ್ಪುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಂಡರು. ಹೊಸ ಮಸೂದೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಗೆ ಯಾವುದೇ ತೊಂದರೆ ಆಗದು ಎಂಬುದೂ ರೈತರಿಗೆ ಖಾತ್ರಿಯಾಯಿತು. ಈ ನಡುವೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು(ಎಂ ಎಸ್ ಪಿ) ರೈತರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿತು. ಇದನ್ನು ಪಂಜಾಬ್ ಸರಕಾರವು ವಿರೋಧಿಸಿದೆ. ಪಂಜಾಬ್ ಸರಕಾರವು ಎಂ ಎಸ್ ಪಿ ಯನ್ನು ಬ್ಯಾಂಕ ಖಾತೆಗೆ ನೇರ ವರ್ಗಾವಣೆ ಮಾಡದೆ ಅರ್ಥಿಯಾಗಳ( ಮಂಡಿ ಏಜೆಂಟ್ ಗಳು) ಮೂಲಕ ಪಾವತಿ ಮಾಡಬೇಕು ಎಂದಿರುವುದರ ಉದ್ದೇಶ ಏನೆಂಬುದು ಇದೀಗ ರೈತರಿಗೂ ಅರ್ಥವಾಗುತ್ತಿದೆ. ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿರುವುದು ರೈತರಲ್ಲ, ತಮ್ಮ ಕಮಿಷನ್ ಅನ್ನು ಕಳೆದುಕೊಳ್ಳುವ ಮಂಡಿ ಏಜೆಂಟ್ ಗಳು ಎನ್ನುವುದು ಎಲ್ಲರಿಗೂ ಅರ್ಥವಾಗಿದೆ.
ಇದಿಗ ರಾಕೇಶ್ ಟಿಕಾಯತ್ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡುಗಳಲ್ಲಿ ಬಿಜೆಪಿ ವಿರುದ್ಧ ಚುನಾವಣಾ ಪ್ರಚಾರಕ್ಕೆ ಹೊರಟಿದ್ದಾರೆ. ಟಿಕಾಯತ್ ಗೆ ಒಂದು ರಾಜಕೀಯ ನೆಲೆ ಬೇಕಾಗಿದೆ, ಜಾರ್ಜ್ ಸೋರೋಸ್ ನಂತವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹಿನ್ನೆಡೆಯಾಗಬೇಕಿದೆ, ಖಾಲಿಸ್ತಾನಿಗಳಿಗೆ ಭಾರತದಲ್ಲಿ ತಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳಬೇಕಿದೆ, ಕೇಂದ್ರ ಸರಕಾರವನ್ನು ಮಟ್ಟಹಾಕಲು ವಿರೋಧಪಕ್ಷಗಳಿಗೆ ಒಂದು ಬಲವಾದ ಅಸ್ತ್ರ ಬೇಕಿದೆ, ಮಂಡಿಗಳ ಕಮಿಷನ್ ಏಜೆಂಟ್ ಗಳಿಗೆ ತಮ್ಮ ಕಮಿಷನ್ ಅನ್ನು ಉಳಿಸಿಕೊಳ್ಳಬೇಕಿದೆ. ಹಾಗಾಗಿ ಇವರೆಲ್ಲ ರೈತರನ್ನು ತಮ್ಮ ಹೋರಾಟದ ಗುರಾಣಿಯನ್ನಾಗಿ ಮಾಡಿಕೊಂಡಿದ್ದಾರೆ ಅಷ್ಟೇ! ಈ ವಿಷಯ ಜನರಿಗೂ ಅರಿವಾಗಿದೆ, ರೈತರಿಗೂ ಅರ್ಥವಾಗಿದೆ. ರೈತರ ಪ್ರತಿಭಟನೆ ದಿನೇ ದಿನೇ ತನ್ನ ಕಾವನ್ನು ಕಳೆದುಕೊಳ್ಳುತ್ತಿದೆ.
.https://m.facebook.com/story.php?story_fbid=3844121425679706&id=100002456601850&sfnsn=wiwspwa
✍️ ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.