ದೇಶದಲ್ಲಿ ಕ್ರಾಂತಿಕಾರಿಗಳಿಗೆ, ಸಮಾಜೋದ್ಧಾರಕರಿಗೆ ಕೊರತೆಯಿಲ್ಲ. ಅದಮ್ಯ ಉತ್ಸಾಹದಿಂದ ದೇಶವನ್ನು ಗುಲಾಮಿ ಮನಸ್ಥಿತಿಯಿಂದ ಹೊರಬರುವಂತೆ ಮಾಡಿದ ಹಲವು ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ಇಂದಿಗೂ ಪ್ರೇರಣೆ. ಭಗತ್ಸಿಂಗ್, ಲಾಲಾ ಲಜಪತರಾಯ್, ರಾಜಗುರು, ಸುಖದೇವರಂತೆ, ಮದನಲಾಲ್ ಧಿಂಗ್ರಾ, ವೀರ ಸಾವರ್ಕರ್ರಂತಹ ಮಹಾಮಹಿಮರು ತಮ್ಮ ಜೀವನ ಮತ್ತು ಜೀವವನ್ನೇ ಒತ್ತೆಯಾಗಿಟ್ಟು ದೇಶದ ಸ್ವಾತಂತ್ರ್ಯಕ್ಕೆ ಅವಿರತ ಹೋರಾಡಿದ ಚರಿತ್ರೆ ಎಲ್ಲರಿಗೂ ಗೊತ್ತಿದೆ. ಇವರಂತೆ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಹಳೆ ಮೊಳಗಿಸಿದ್ದ ಮತ್ತೋರ್ವ ಧೀಮಂತ ಕ್ರಾಂತಿಕಾರಿ, ದೇಶ ಭಕ್ತ ಶ್ಯಾಂ ಜಿ ಕೃಷ್ಣ ವರ್ಮ.
ದೇಶ ಸ್ವಾತಂತ್ರ್ಯದ ಕ್ರಾಂತಿ ಜ್ವಾಲೆಯನ್ನು ಹಬ್ಬಿಸಿದ್ದ ಶ್ಯಾಂ ಜಿ ಓರ್ವ ಪ್ರಖರ ರಾಷ್ಟ್ರಭಕ್ತರೂ ಆಗಿದ್ದರು. ಕಾನೂನು ಪದವಿಧರರಾಗಿ, ಓರ್ವ ಪತ್ರಕರ್ತರಾಗಿ ದೇಶದ ಸ್ವಾತಂತ್ರ್ಯಕ್ಕೆ ಇವರು ನೀಡಿದ ಕೊಡುಗೆ ಅಪಾರ. ಇಂಗ್ಲೆಂಡಿನಲ್ಲಿದ್ದು ಇಂಡಿಯನ್ ಹೋಂರೂಲ್ ಸೊಸೈಟಿ, ಇಂಡಿಯಾ ಹೌಸ್, ಮತ್ತು ಇಂಡಿಯನ್ ಸೊಶಿಯಾಲಜಿಸ್ಟ್ ಸಂಸ್ಥೆಯನ್ನು ಸ್ಥಾಪಿಸಿದ ಇವರು ಅಲ್ಲಿದ್ದ ಭಾರತೀಯ ಯುವಸಮೂಹದಲ್ಲಿ ಸ್ವಾತಂತ್ರ್ಯದ ಬೀಜವನ್ನು ಬಿತ್ತಿದರು. ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಶ್ಯಾಂ ಜಿ ಮೊದಮೊದಲು ದೇಶದ ಸಣ್ಣ ರಾಜ ಸಂಸ್ಥಾನಗಳಲ್ಲೂ ದಿವಾನ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಆರ್ಯ ಸಮಾಜದ ಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರ ಸಾಂಸ್ಕೃತಿಕ ರಾಷ್ಟ್ರೀಯತೆಯಿಂದ ಬಹಳ ಪ್ರಭಾವಿತರಾಗಿದ್ದ ಶ್ಯಾಂ ಜಿ ಅದೇ ಹಾದಿಯನ್ನು ತುಳಿದು ದೇಶದ ಅವಿಚ್ಛಿನ್ನ ಧಾರ್ಮಿಕ ಪರಂಪರೆಯ ನೆಲೆಗಟ್ಟಿನಲ್ಲಿ, ಸಂಸ್ಕೃತ ವಾಜ್ಞಯಗಳಲ್ಲೂ ಆಸಕ್ತರಾಗಿ ತತ್ವ ಕಲಿಕೆಯಲ್ಲೂ ಆಸಕ್ತಿ ವಹಿಸಿದ್ದರು.
ಗುಜರಾತಿನ ಕಛ್ತೀರದ ಮಾಂಡ್ವಿ ಎಂಬಲ್ಲಿ 1857 ಅಕ್ಟೋಬರ್ 4 ರಂದು ಶ್ಯಾಂ ಜಿ ಕೃಷ್ಣ ವರ್ಮ ಜನಿಸಿದರು. 1905 ರ ನಂತರದ ಇಂಗ್ಲೆಂಡಿನ ಅಧ್ಯಯನಾವಧಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿ ಇಂಡಿಯಾ ಹೌಸ್ ಸ್ಥಾಪನೆ ಮಾಡಿ, ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಡಿಯನ್ನು ಹಚ್ಚಿದ ಕೀರ್ತಿ ಶ್ಯಾಂ ಜಿ ಅವರಿಗೆ ಸಲ್ಲುತ್ತದೆ. ದೇಶದ ಒಳಗೂ, ಹೊರಗೂ ಕ್ರಾಂತಿಕಾರಿಗಳನ್ನು ಸಂಘಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸುಭಾಷ್ಚಂದ್ರ ಬೋಸ್ ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಹೇಗೆ ಐ.ಎನ್.ಎ ಸಂಘಟಿಸಿದ್ದರೋ ಅದೇ ರೀತಿಯಲ್ಲಿ ಕ್ರಾಂತಿಕಾರಿಗಳನ್ನು ಸಂಘಟಿಸಿದ್ದ ಶ್ಯಾಂ ಜಿ ಅವರ ಮೇಲೆ ಬ್ರಿಟಿಷ್ ಸರಕಾರದ ಕೆಂಗಣ್ಣಿಗೂ ಒಳಗಾದರು. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿಗಳನ್ನು ಒಗ್ಗೂಡಿಸುತ್ತಿದ್ದಾರೆ ಎಂಬ ಆರೋಪದಡಿ ಬಂಧನಕ್ಕೂ ಬ್ರಿಟಿಷ್ಸರಕಾರ ಮುಂದಾಯಿತು. ಈ ಸಂದರ್ಭ 1907 ರಲ್ಲಿ ಪ್ಯಾರಿಸ್ಗೆ ಶ್ಯಾಂ ಜಿ ಗೌಪ್ಯವಾಗಿ ಯಾರಿಗೂ ತಿಳಿಯದಂತೆ ಪಲಾಯನಗೈದರು.
ಕಛ್ ಪ್ರಾಂತ್ಯದ ಕಾರ್ಮಿಕ ಕುಟುಂಬದಲ್ಲಿ ಜನಿಸಿದ್ದ ಶ್ಯಾಂ ಜಿ ಚಿಕ್ಕ ವಯಸ್ಸಿನಲ್ಲೇ ತನ್ನ ತಾಯಿಯನ್ನು ಕಳೆದುಕೊಂಡು ತನ್ನ ಅಜ್ಜಿಯ ತೆಕ್ಕೆಯಲ್ಲಿ ಬೆಳೆಯುತ್ತಾರೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಭುಜ್ನಲ್ಲಿ ಪೂರೈಸಿದ ಶ್ಯಾಂಜಿ ನಂತರ ಮುಂಬೈಯ ವಿಲ್ಸನ್ ಹೈಸ್ಕೂಲಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆದರು. ಮುಂಬೈನಲ್ಲಿದ್ದ ಸಂದರ್ಭ ಸಂಸ್ಕೃತ ಕಲಿಕೆಯೂ ಅವಕಾಶ ದೊರೆಯಿತು. ಈ ಸಂದರ್ಭ ದಯಾನಂದ ಸರಸ್ವತಿ ಅವರ ಪ್ರಭಾವಕ್ಕೊಳಗಾಗಿ ತತ್ವಶಾಸ್ತ್ರ, ಉಪನಿಷತ್ತು ಪಾಠಗಳನ್ನು ಕಲಿಯುವಂತಾಯಿತು. 1877 ರಲ್ಲಿ ಕಾಶಿಯಿಂದ ಪಂಡಿತ ಬಿರುದು ಪಡೆದ ಇವರು ನಂತರ ಆಕ್ಸ್ಫರ್ಡ್ ವಿ.ವಿ. ಯ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಇವರು ಸ್ಥಾಪಿಸಿದ ಇಂಡಿಯಾ ಹೌಸ್ ಮೂಲಕ ಕ್ರಾಂತಿಕಾರಿಗಳಾದ ಮೇಡಂ ಕಾಮಾ, ವೀರ ಸಾವರ್ಕರ್, ಮದನ್ಲಾಲ್ ಧಿಂಗ್ರಾ ಪ್ರೇರಣೆ ಪಡೆದರು. ಇವರ ಇಂಡಿಯನ್ ಸೋಶಿಯಾಲಜಿಸ್ಟ್ ಪತ್ರಿಕೆ ಭಾರತದ ರಾಜಕೀಯ, ಸಾಮಾಜಿಕ ಕ್ಷೇತ್ರಗಳ ಬದಲಾವಣೆಗೆ ಕಾರಣವಾಯಿತು ಮಾತ್ರವಲ್ಲದೆ ಕ್ರಾಂತಿಕಾರಿಗಳಿಗೂ ಮಾರ್ಗದರ್ಶಿಯಾಯಿತು. 1989 ರಲ್ಲಿ ಭಾರತ ಸರಕಾರ ಇವರ ನೆನಪಿನಲ್ಲಿ ಅಂಚೆ ಚೀಟಿ ಹೊರಡಿಸಿ ಗೌರವಿಸಿದೆ. ಶ್ಯಾಂ ಜಿ ಸ್ಮರಣಾರ್ಥ ಕಛ್ಛಿನಲ್ಲಿ ಕ್ರಾಂತಿ ತೀರ್ಥ ಸ್ಮಾರಕ ಸ್ಥಾಪಿಸಲಾಗಿದೆ. ಇದು ಸುಮಾರು 52 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಸ್ವಾತಂತ್ರ್ಯವೀರನ ಕ್ರಾಂತಿಕಾರಿ ಹೆಜ್ಜೆಗಳನ್ನು ನೆನಪಿಸುತ್ತದೆ. ಕಛ್ಛಿನ ವಿಶ್ವವಿದ್ಯಾನಿಲಯವಿರುವ ಮಾಢ್ವಿ ನಗರಕ್ಕೆ ಶ್ಯಾಂ ಜಿ ಕೃಷ್ಣ ನಗರ ಎಂದು ಹೆಸರಿಟ್ಟು ಗೌರವಿಸಲಾಗಿದೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಹಳೆ ಮೊಳಗಿಸಿದ್ದ ಮತ್ತೋರ್ವ ಧೀಮಂತ ಕ್ರಾಂತಿಕಾರಿ, ದೇಶ ಭಕ್ತ ಶ್ಯಾಂ ಜಿ ಕೃಷ್ಣ ವರ್ಮ. ಕಾನೂನು ಪದವಿಧರರಾಗಿ, ಓರ್ವ ಪತ್ರಕರ್ತರಾಗಿ ದೇಶದ ಸ್ವಾತಂತ್ರ್ಯಕ್ಕೆ ಇವರು ನೀಡಿದ ಕೊಡುಗೆ ಅಪಾರ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.