ಹಣವನ್ನ ಎಲ್ಲಿಯೂ ಹೂಡಿಕೆ ಮಾಡದೆ ಮನೆಯ ಕಪಾಟಿನಲ್ಲಿ ಇಟ್ಟರೆ ಅದು ಸಮಯಕ್ಕೆ ತಕ್ಕಂತೆ ತನ್ನ ಮೌಲ್ಯವನ್ನ ಕಳೆದುಕೊಳ್ಳುತ್ತದೆ. ಅಂದರೆ ನಿಮ್ಮ ಬಳಿ ಎರಡು ಸಾವಿರ ಇಸವಿಯಲ್ಲಿ ಐದು ಲಕ್ಷ ರೂಪಾಯಿ ಇದ್ದು ಅದನ್ನ ನೀವು ಹೂಡಿಕೆ ಮಾಡದೆ ಕಪಾಟಿನಲ್ಲಿ ಇಟ್ಟಿದ್ದರೆ ಅದರ ಮೌಲ್ಯ ಬಹಳ ಕಡಿಮೆಯಾಗಿರುತ್ತಿತ್ತು. ಅದೇ ಹಣವನ್ನ ಬೆಂಗಳೂರಿನಲ್ಲಿ ಒಂದು ನಿವೇಶನದ ಮೇಲೆ ಹೂಡಿಕೆ ಮಾಡಿದ್ದರೆ ಅದರ ಮೌಲ್ಯ ಬಹಳ ಹೆಚ್ಚಾಗುತ್ತಿತ್ತು. ರಿಯಲ್ ಎಸ್ಟೇಟ್ ಹೂಡಿಕೆಯಲ್ಲಿ ಹಣದ ಮೌಲ್ಯ 20 ವರ್ಷದಲ್ಲಿ ಬಹಳ ವೃದ್ಧಿ ಕಂಡಿದೆ. ಹೀಗಾಗಿ ಅಲ್ಲಿನ ಉದಾಹರಣೆಯನ್ನ ನಿಖರವೆನ್ನಲು ಒಪ್ಪದಿದ್ದರೆ ನಿತ್ಯ ಉಪಯೋಗಿಸುವ ಹಲವಾರು ಪದಾರ್ಥಗಳಾದ ಅಕ್ಕಿ, ಸಕ್ಕರೆ, ಹಾಲು ಮತ್ತು ತರಕಾರಿ ಇವುಗಳ ಬೆಲೆಯನ್ನ ಹೋಲಿಕೆ ಮಾಡಿ ನೋಡಿದರೂ ಸಾಕು. ಎರಡು ದಶಕದಲ್ಲಿ ವಸ್ತುಗಳ ಬೆಲೆ ಬದಲಾಗಿರುತ್ತದೆ. ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ ಎಂದು ಹೇಳಬಹದು. ವೇಳೆ ಮತ್ತು ಹಣದುಬ್ಬರ ಇಂತಹ ಬದಲಾವಣೆಗೆ ಕಾರಣ.
ನಿತ್ಯ ಬದುಕಿಗೆ ಬೇಕಾಗುವ ಹಲವಾರು ಉತ್ಪನ್ನಗಳನ್ನ ಪಟ್ಟಿ ಮಾಡಿ ಅದಕ್ಕೆ ಬೇರೆ ಬೇರೆ ದೇಶದಲ್ಲಿ ಇರುವ ಬೆಲೆಯನ್ನ ಪಟ್ಟಿ ಮಾಡಿ ಅದರ ಆಧಾರದ ಮೇಲೆ ಹಣದ ಮೌಲ್ಯವನ್ನ ಅಳೆಯುವ ಪ್ರಕ್ರಿಯೆಗೆ ಪೆರ್ಚಸಿಂಗ್ ಪವರ್ ಪ್ಯಾರಿಟಿ ಎನ್ನುತ್ತೇವೆ. ಜಗತ್ತಿನ ಹಲವಾರು ದೇಶಗಳು ತಮ್ಮ ಜಿಡಿಪಿಯನ್ನ ನಿಖರವಾಗಿ ತಿಳಿಸಲು ಇದನ್ನ ಬಳಸುತ್ತವೆ ಕೂಡ. ಉದಾಹರಣೆ ನೋಡೋಣ .
ಇಂಡೋನೇಷಿಯಾದಲ್ಲಿ ಒಂದು ಊಟದ ಬೆಲೆ, ನಮ್ಮ ದರ್ಶಿನಿ ಮಟ್ಟದ ಹೋಟೆಲ್ ನಲ್ಲಿ 25 ಸಾವಿರ ಇಂಡೋನೇಶಿಯನ್ ರೂಪಾಯಿ! ಅಬ್ಬಾ ಎನ್ನಿಸುತ್ತೆ ಅಲ್ವಾ . ಇದನ್ನ 197 ರಿಂದ ಭಾಗಿಸಿ ನೀವು ಊಟಕ್ಕೆ ಕೊಟ್ಟ ಹಣ 127 ಭಾರತೀಯ ರೂಪಾಯಿ . ನಮ್ಮ ದರ್ಶಿನಿ ಹೋಟೆಲ್ ನಲ್ಲಿ 75 ರಿಂದ 100 ರೂಪಾಯಿಯಲ್ಲಿ ಒಂದೊಳ್ಳೆ ಊಟ ಸಿಗುತ್ತದೆ. ಆ ಲೆಕ್ಕಾಚಾರದಲ್ಲಿ ಇಂಡೋನೇಶಿಯಾ ಭಾರತಕ್ಕಿಂತ 50 ಪ್ರತಿಶತ ದುಬಾರಿ ಎನ್ನಲು ಅಡ್ಡಿಯಿಲ್ಲ. ಹಾಲು ನೀರು ಸಕ್ಕರೆ ಮನೆ ಬಾಡಿಗೆ ಹೀಗೆ ಭಾರತದಲ್ಲಿ ನಾವು ಬದುಕಲು ಎಷ್ಟು ಬೇಕು ಅದನ್ನೆಲ್ಲಾ ಲೆಕ್ಕ ಹಾಕಿ ನೋಡಿದರೆ ಇಂಡೋನೇಶಿಯಾ ಭಾರತಕ್ಕಿಂತ ದುಬಾರಿ ಎನ್ನುವುದು ವೇದ್ಯವಾಗುತ್ತದೆ. ಗಮನಿಸಿ ಸ್ನೇಹಿತರೆ ಮೊದಲ ನೋಟದಲ್ಲಿ ಇಂಡೋನೇಶಿಯಾ ಬಹಳ ಸಸ್ತಾ ಅನ್ನಿಸಿತ್ತು ಅಲ್ವಾ? ಏಕೆಂದರೆ ಒಂದು ಭಾರತೀಯ ರೂಪಾಯಿ ಕೊಟ್ಟರೆ ನಿಮಗೆ ಹತ್ತಿರತ್ತಿರ 200 ಇಂಡೋನೇಶಿಯನ್ ರೂಪಾಯಿ ಸಿಗುತ್ತಿತ್ತು . ಆದರೆ ನಿಜವಾದ ಅರ್ಥದಲ್ಲಿ ಒಂದೂವರೆ ಭಾರತೀಯ ರೂಪಾಯಿ ಕೊಟ್ಟರೆ ನಿಮಗೆ ಸಿಕ್ಕಿದ್ದು ಕೇವಲ ಒಂದು ಇಂಡೋನೇಶಿಯನ್ ರುಪಾಯಿ ಮಾತ್ರ!!
ಇದೆ ಲೆಕ್ಕಾಚಾರವನ್ನ ನಾವು ಅಮೆರಿಕಾದ ವಾಷಿಂಗ್ಟನ್ ನಗರಕ್ಕೆ ಕೂಡ ಮಾಡಬಹದು. ಸಾಮಾನ್ಯವಾಗಿ ಬೆಂಗಳೂರಿನ ನಾಲ್ಕು ಜನರಿರುವ ಒಂದು ಮಧ್ಯಮವರ್ಗ ಉತ್ತಮವಾಗಿ ಬದುಕಲು 1 ಲಕ್ಷ ರೂಪಾಯಿ ಮಾಸಿಕ ಬೇಕಾಗುತ್ತದೆ ಎಂದುಕೊಳ್ಳಿ. ಇದೆ ರೀತಿಯ ಜೀವನ ಶೈಲಿಯನ್ನ ವಾಷಿಂಗ್ಟನ್ ನಲ್ಲಿ ನೆಡೆಸಲು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಅಂದರೆ ಗಮನಿಸಿ ನೋಡಿ ನೀವು ವಿದೇಶಿ ವಿನಿಮಯದಲ್ಲಿ 70 ರೂಪಾಯಿ ಕೊಟ್ಟು ಒಂದು ಡಾಲರ್ ಪಡೆದಿರಿ. ಆದರೆ ನಿಜಾರ್ಥದಲ್ಲಿ ಒಂದು ಡಾಲರ್ ಕೊಳ್ಳಲು ನೀವು ವ್ಯಯಿಸುವುದು ಕೇವಲ ಐದು ರೂಪಾಯಿ.
ನಾವು ಯಾವ ದೇಶವನ್ನ ಹೋಲಿಕೆಗೆ ತೆಗೆದುಕೊಳ್ಳುತ್ತೇವೆಯೋ, ಆ ದೇಶದಲ್ಲಿ ನಮ್ಮ ಮೂಲ ದೇಶದಲ್ಲಿ ಹೇಗೆ ಬದುಕುತ್ತಿದ್ದೇವೆ ಹಾಗೆ ಬದುಕಲು ಎಷ್ಟು ಖರ್ಚಾಗುತ್ತದೆ ಎನ್ನುವುದರ ಆಧಾರದ ಮೇಲೆ ಹಣದ ಮೌಲ್ಯವನ್ನ ಅಳೆಯುವುದು ಪೆರ್ಚಸಿಂಗ್ ಪವರ್ ಪ್ಯಾರಿಟಿ. ಅಂದರೆ ಅಮೇರಿಕಾದಲ್ಲಿ ಐದು ಲಕ್ಷ ಬೇಕು ಭಾರತದಲ್ಲಿ ಒಂದು ಲಕ್ಷ ಸಾಕು ಐದು ಲಕ್ಷವನ್ನು ಒಂದು ಲಕ್ಷದಿಂದ ಭಾಗಿಸಿದರೆ ಸಿಗುವ ಉತ್ತರ ಐದು. ಹೀಗಾಗಿ ಐದು ಭಾರತೀಯ ರೂಪಾಯಿಗೆ ಒಂದು ಡಾಲರ್ ಸಿಕ್ಕಿದ ಲೆಕ್ಕ . ಮೇಲ್ನೋಟಕ್ಕೆ ಇದು ತಿಳಿಯುವುದಿಲ್ಲ .
ಇನ್ನೊಂದು ಮುಖ್ಯ ವಿಚಾರ ಕೆಲವೊಮ್ಮೆ ಕೆಲವು ಪದಾರ್ಥಗಳ ಬೆಲೆ ಬಹಳ ಹೆಚ್ಚು ಅಥವಾ ಕಡಿಮೆಯಾಗುತ್ತದೆ ಅದು ಸಮಯಾಧಾರಿತ. ಉದಾಹರಣೆ ಭಾರತದಲ್ಲಿ ಈಗ ಈರುಳ್ಳಿ ಬೆಲೆ 25 ರೂಪಾಯಿ. ಇದು ಸದಾ ಇರುವ ಬೆಲೆಯಲ್ಲ. ಹೀಗಾಗಿ ಸಾಮಾನ್ಯವಾಗಿ ಇರುವ ಬೆಲೆಯನ್ನ ಲೆಕ್ಕಾಚಾರಕ್ಕೆ ಬಳಸಬೇಕು .
ಹಣದ ಮೌಲ್ಯ ಅದರ ಖರೀದಿಸುವ ಶಕ್ತಿಯನ್ನು ಅವಲಂಬಿಸಿದೆ. ಹೀಗಾಗಿ ಮುದ್ರಿತ ಮೌಲ್ಯ ಏನೇ ಇರಲಿ ಅವು ನಿಜವಾದ ಮೌಲ್ಯವನ್ನ ನಿರ್ಧರಿಸುವುದಿಲ್ಲ. ಬೆಂಗಳೂರಿನಲ್ಲಿ 1 ಲಕ್ಷ, ಮೈಸೂರು ಅಥವಾ ತುಮಕೂರಿನಲ್ಲಿ ಒಂದೂವರೆ ಅಥವಾ ಎರಡು ಲಕ್ಷ ಬೆಲೆ ಬಾಳಬಹದು. ನಿಮ್ಮ ಹಣದ ನಿಜವಾದ ಮೌಲ್ಯವೇಷ್ಟು?ಎನ್ನುವುದನ್ನ ತಿಳಿದುಕೊಳ್ಳುವುದು ಉತ್ತಮ.
✍️ ರಂಗಸ್ವಾಮಿ ಮೂಕನಹಳ್ಳಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.