ಭಾರತೀಯ ಸಂಸ್ಕೃತಿಯ ಮೂಲವನ್ನು ಹುಡುಕುತ್ತಾ ಹೋದರೆ ನಾವು ಸಾವಿರಾರು ವರ್ಷಗಳ ಹಿಂದಕ್ಕೆ ಸಾಗುತ್ತೇವೆ. ಇಂದಿಗೂ ನಮ್ಮ ಸಂಸ್ಕೃತಿಯ ಮೂಲವು ನೆಲೆಸಿರುವುದು ನಮ್ಮ ಆಚರಣೆಗಳಲ್ಲಿ ಮತ್ತು ನಮ್ಮ ಸಂಪ್ರದಾಯಗಳಲ್ಲಿ. ಭಾರತೀಯರ ಜೀವನ ಅವಿಭಾಜ್ಯ ಅಂಗವೆಂದರೆ ಹಬ್ಬಗಳು ಮತ್ತು ಆಚರಣೆಗಳು. ಪ್ರತಿಯೊಂದು ಹಬ್ಬಗಳಿಗೂ ತಮ್ಮದೇ ಆದ ಇತಿಹಾಸವೂ ಪ್ರಾಮುಖ್ಯತೆಯೂ ಇರುವುದು ವಿಶೇಷವಾದರೂ ಸತ್ಯವಾದ ವಿಚಾರ. ಸನಾತನ ಧರ್ಮದ ಅನುಯಾಯಿಗಳು ಅನೇಕ ದೇವ ದೇವತೆಯರನ್ನು ಪೂಜಿಸುತ್ತೇವೆ. ಶಿವ, ವಿಷ್ಣು ಮತ್ತು ದೇವಿಯನ್ನು ನಾವು ವಿವಿಧ ಅವತಾರಗಳಲ್ಲಿ, ವಿಭಿನ್ನ ರೂಪಗಳಲ್ಲಿ ಪೂಜಿಸುತ್ತೇವೆ. ವಿಷ್ಣುವಿನ ರಾಮ ಮತ್ತು ಕೃಷ್ಣನ ಅವತಾರಗಳನ್ನು ಪೂಜಿಸುತ್ತೇವೆ. ದೇವಿಯ ಒಂಭತ್ತು ರೂಪಗಳನ್ನು ಪೂಜಿಸುತ್ತೇವೆ. ಶಿವನನ್ನು ಆದಿಯೋಗಿ, ನಟರಾಜ , ಭೋಲೇನಾಥ ಹೀಗೆ ಹಲವಾರು ರೂಪಗಳಲ್ಲಿ ಪೂಜಿಸುತ್ತೇವೆ.
ಶಿಶಿರ ಋತುವಿನ, ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲ್ಪಡುವ ಪ್ರಮುಖ ಹಬ್ಬವೇ “ಮಹಾ ಶಿವರಾತ್ರಿ”. ದಿನವಿಡೀ ಉಪವಾಸದ ವೃತವನ್ನು ಕೈಗೊಂಡು ಮಾರನೆಯ ದಿನ ಸಿಹಿತಿಂಡಿಯೊಂದಿಗೆ ಆಹಾರವನ್ನು ಸ್ವೀಕರಿಸುವುದು ಈ ಹಬ್ಬದ ಸಂಪ್ರದಾಯ. ಶಿವರಾತ್ರಿಯ ಆಚರಣೆಯ ಬಗ್ಗೆ ಹಲವಾರು ಕಥೆಗಳು ಬೆಸೆದಿವೆ.
ಒಂದು ಬಾರಿ ದೇವಲೋಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಚಾರದ ಕುರಿತಾಗಿ ವಾಗ್ವಾದವು ಪ್ರಾರಂಭವಾಯಿತು. ಈ ವಾಗ್ವಾದವನ್ನು ಪರಿಹರಿಸುವಂತೆ ದೇವತೆಗಳು ಶಿವನ ಮೊರೆ ಹೋದರು. ಇದಕ್ಕಾಗಿ ಶಿವನು ಬ್ರಹ್ಮ ಮತ್ತು ವಿಷ್ಣುವಿನ ಮಧ್ಯದಲ್ಲಿ ಅಗ್ನಿ ಕಂಭದ ಅವತಾರವನ್ನು ತಾಳುತ್ತಾನೆ ಮತ್ತು ತನ್ನ ಮೂಲವನ್ನು ಕಂಡುಹಿಡಿಯುವಂತೆ ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮ ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವಿಷ್ಣು ವರಾಹವತಾರ ತಾಳಿ ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ. ಅನಂತವಾದ ಶಿವನ ಶಕ್ತಿಯ ಅರಿವು ಬ್ರಹ್ಮ ಮತ್ತು ವಿಷ್ಣುವಿಗೆ ತಿಳಿಯುತ್ತದೆ. ಆದರೆ ಶಿವನ ಜಟೆಯಿಂದ ಬೀಳುತ್ತಿದ್ದ ಕೇತಕಿ ಪುಷ್ಪವನ್ನು ಹಿಡಿದ ಬ್ರಹ್ಮನು ಶಿವನ ಬಳಿ ಹೋಗಿ ತಾನು ಅಗ್ನಿ ಕಂಭದ ಶಿರಾ ಭಾಗವನ್ನು ನೋಡಿದ್ದಾಗಿ ತಿಳಿಸುತ್ತಾನೆ. ಸುಳ್ಳು ನುಡಿದ ಬ್ರಹ್ಮನ ಮೇಲೆ ಕೋಪಗೊಂಡ ಶಿವನು “ಬ್ರಹ್ಮನಿಗೆ ಯಾವುದೇ ಪೂಜೆಯು ಸಲ್ಲದಿರಲಿ” ಎಂಬುದಾಗಿ ಶಾಪವನ್ನು ನೀಡಿ ಲಿಂಗದ ರೂಪವನ್ನು ತಾಳುತ್ತಾನೆ. ಶಿವನು ಲಿಂಗ ರೂಪವನ್ನು ತಾಳಿದ ಶಿಶಿರ ಋತುವಿನ, ಮಾಘ ಮಾಸದ ಬಹುಳ ಚತುರ್ದಶಿಯನ್ನು ಶಿವರಾತ್ರಿಯನ್ನಾಗಿ ಆಚರಿಸಲಾಗುತ್ತದೆ.
ಹಿಮವಂತನ ಪುತ್ರಿಯಾದ ಪಾರ್ವತಿ ದೇವಿಯು ಶಿವರಾತ್ರಿಯಂದು ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನ ಮೆಚ್ಚುಗೆಗೆ ಪಾತ್ರಳಾಗಿ ಶಿವನನ್ನು ವಿವಾಹವಾದಳೆಂಬ ಕಥೆಯೂ ಶಿವರಾತ್ರೆಯೊಂದಿಗೆ ಬೆಸೆದಿದೆ. ಇದೇ ಕಾರಣಕ್ಕಾಗಿ ದೇಶದ ಹಲವಾರು ಪ್ರದೇಶಗಳಲ್ಲಿ ಶಿವ ಮತ್ತು ಪಾರ್ವತಿಯರ ವಿವಾಹ ಮಹೋತ್ಸವವಾಗಿ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಸಮುದ್ರ ಮಥನದ ಸಂದರ್ಭದಲ್ಲಿ ಉದ್ಭವಿಸಿದ ಹಾಲಾಹಲವನ್ನು ಕುಡಿದ ಶಿವನ ಗಂಟಲೊಳಗೆ ವಿಷವು ಇಳಿಯದಂತೆ ರಾತ್ರೆಯಿಡೀ ಪಾರ್ವತಿಯು ತಡೆದ ರಾತ್ರಿಯೂ ಶಿವರಾತ್ರಿ ಎಂದು ಕಥೆಗಳು ಹೇಳುತ್ತವೆ. ಇನ್ನು ಹಲವು ಗ್ರಂಥಗಳ ಪ್ರಕಾರ ಶಿವನು ಶಿವರಾತ್ರಿಯಂದೇ ತಾಂಡವ ನೃತ್ಯವನ್ನೂ ಮಾಡಿರುವ ಉಲ್ಲೇಖಗಳಿವೆ.
ಶಿವರಾತ್ರಿಯನ್ನು ಹಲವಾರು ಪ್ರದೇಶಗಳಲ್ಲಿ ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ. ಶಿವರಾತ್ರಿಯಂದು ಶಿವನನ್ನು ಭಕ್ತಿಯಿಂದ ಪೂಜಿಸಿದರೆ, ತಾವು ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಅವಿವಾಹಿತ ಹೆಣ್ಣುಮಕ್ಕಳು ಶಿವ ಗುಣರೂಪಿಯಾದ ಅನುರೂಪ ಪತಿಗಾಗಿ ಪ್ರಾರ್ಥಿಸಿದರೆ, ಮುತ್ತೈದೆಯರು ಪತಿಯ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸುವುದು ಶಿವರಾತ್ರಿಯ ಆಚರಣೆಯ ಭಾಗವಾಗಿದೆ. ಸಂಪೂರ್ಣ ಹಗಲು ಉಪವಾಸವಿದ್ದು ರಾತ್ರೆ ಜಾಗರಣೆಯನ್ನು ಮಾಡುವ ಸಂಪ್ರದಾಯವು ಸಂಪೂರ್ಣ ಭಾರತದಲ್ಲಿದೆ. ಭಸ್ಮದಿಂದಲೇ ಸಂಪ್ರೀತನಾಗುವ ಶಿವನು ಅತ್ಯಂತ ಸರಳತೆ ಮತ್ತು ಪ್ರಾಮಾಣಿಕತೆಯ ಪ್ರತೀಕ. ಯಾವುದೇ ಆಡಂಬರಗಳಿಲ್ಲದೆ ನಿಷ್ಕಲ್ಮಶ ಹೃದಯದಿಂದ ಪ್ರಾರ್ಥಿಸಿದ ಭಕ್ತರ ಕಯ್ಯನ್ನು ಶಿವನೆಂದಿಗೂ ಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಿಗಿದೆ. ಅದಕ್ಕಾಗಿಯೇ “ಶಿವ ಭಕ್ತರಿಗೆ ನರಕವಿಲ್ಲ” ಎನ್ನಲಾಗುತ್ತದೆ.
ಆಡಂಬರದ ಪೂಜೆಯನ್ನು ಬಯಸದ ಮಹಾಕಾಳನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ. ಶಿವರಾತ್ರಿಯು ಚಳಿಗಾಲವು ಕೊನೆಗೊಂಡು ಬೇಸಿಗೆ ಕಾಲವು ಪ್ರಾರಂಭವಾಗುವ ಸಂಧಿಕಾಲದಲ್ಲಿ ಆಚರಿಸಲ್ಪಡುತ್ತದೆ. ವಾತಾವರಣದಲ್ಲಾಗುವ ಬದಲಾವಣೆಗೆ ದೇಹವು ಹೊಂದಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ಶಿವರಾತ್ರಿಯಲ್ಲಿ ಮಾಡಲಾಗುವ ಉಪವಾಸವು ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ. ಶಿವರಾತ್ರಿಯಂದು ದೇಶದ ಶಿವಾಲಯಗಳಲ್ಲಿ ಸಂಭ್ರಮದಿಂದಲೂ ಭಕ್ತಿಯಿಂದಲೂ ಹಬ್ಬವನ್ನು ಆಚರಿಸಲಾಗುತ್ತದೆ. ಕಾಶಿ ವಿಶ್ವನಾಥ, ಗೋಕರ್ಣದ ಮಹಾಬಲೇಶ್ವರ, ರಾಮೇಶ್ವರದ ರಾಮೇಶ್ವರ ಸೇರಿದಂತೆ ರಾಜ್ಯ, ದೇಶ, ವಿದೇಶಗಳ ಶಿವದೇವಾಲಯಗಳಲ್ಲಿ ಅಂದು ವಿಶೇಷ ಪೂಜೆ ನಡೆಯುತ್ತದೆ. ಬಿಲ್ವಾರ್ಚನೆ, ರುದ್ರಾಭಿಷೇಕ, ಶಿವನಾಮ ಧ್ಯಾನಗಳ ಮೂಲಕ ಶಿವನನ್ನು ಆರಾಧಿಸಲಾಗುತ್ತದೆ. ಇಡೀ ರಾತ್ರಿ ಪ್ರಮುಖ ಜ್ಯೋತಿರ್ಲಿಂಗ ಕ್ಷೇತ್ರಗಳು, ಶಿವ ದೇವಾಲಯಗಳಲ್ಲಿ ರುದ್ರ ಪಠಣದ ಜೊತೆ ಜಾಗರಣೆ ನಡೆಯುತ್ತದೆ.
ಗುಜರಾತಿನ ಸೋಮನಾಥ ಮಂದಿರ ಮಾತ್ರವಲ್ಲದೆ ನೇಪಾಳದ ಪಶುಪತಿ ನಾಥ ದೇವಾಲಯದಲ್ಲೂ ಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.